ರುಕ್ಮಿಣಿ ಎನ್ ಅಂಕಣ

ನಿರ್ಮಲ: ರುಕ್ಮಿಣಿ ಎನ್.

ಬಡತನ, ಅಸಮಾನತೆ, ಅತ್ಯಾಚಾರ, ಜಾತೀಯತೆ, ರಾಜಕೀಯ ಅರಾಜಕತೆಯಿಂದ ತುಂಬಿ ತುಳುಕುತ್ತಿದ್ದ ಕೆಸರಿನಲ್ಲಿ ಬಿರಿಯಿತೊಂದು ನೈದಿಲೆ ನಿರ್ಮಲ. ನಿರ್ಮಲ ತಾಯಿಗೆ ಒಬ್ಬಳೇ ಮಗಳು. ವರದಕ್ಷಿಣೆಯ ಕಿರುಕುಳದಿಂದ ಗಂಡನಿಂದ ಬೇರೆಯಾದ ನಿರ್ಮಲಳ ತಾಯಿ ಶಾರದೆಗೆ ತಾಯಿಯ ಮನೆಯಲ್ಲಿ ಆಶ್ರಯ ಕೂಡ ಸಿಕ್ಕಲಿಲ್ಲ. ಎಷ್ಟಾದರೂ ಹೆತ್ತ ಹೆಣ್ಣು ಕುಲಕ್ಕೆ ಹೊರಗೆ ಅನ್ನೋ ಕಾಲ ಅದು. ಕಣ್ಮರೆಯಲ್ಲಿ ಇದ್ದರೆ ಗಾಳಿಮಾತುಗಳನ್ನು ಸೃಷ್ಟಿಸುವರು ಎಂದರಿತ ಶಾರದೆ ಜನರ ಮಾತುಗಳಿಗೆ ಗ್ರಾಸವಾಗಕೂಡದು ಎಂದು ಹುಟ್ಟೂರಲ್ಲೇ ಬಾಡಿಗೆಯ ಮನೆಯೊಂದನ್ನ ಮಾಡಿಕೊಂಡು ಜೀವನ ಎಂಬ ರಣರಂಗದಲ್ಲಿ ಇಳಿದುಬಿಟ್ಟಳು. ಆ ಶಟಿ ದೇವಿಗೆ ಶಾರದೆ ಮೇಲೆ ಅದ್ಯಾವ ವಿಷಯದಲ್ಲಿ ಮನಸ್ತಾಪವಿತ್ತೋ ಏನೋ ಶಾರದೆ ಹಣೆಬರಹದಲ್ಲಿ ಎಳ್ಳಷ್ಟೂ ಸುಖ ಬರೆದಿರಲಿಲ್ಲ. ಶಾರದೆ ಅಂತ ಹೆಸರು ಮಾತ್ರ, ಈಕೆ ಶಾಲೆಯ ಮುಂದಾಗಲಿ ಹಿಂದಾಗಲಿ ಹೋದವಳೆ ಅಲ್ಲ. ಅಕ್ಷರ ಜ್ಞಾನವಿಲ್ಲದಿದ್ದರೂ ಜೀವನ ಹೇಳಿಕೊಟ್ಟ ಪಾಠವನ್ನು ಚೆನ್ನಾಗಿ ಕಲಿತವಳು ಹಳ್ಳಿಯ ಗರತಿ ಶಾರದೆ.

ಒಂಟಿ ಹೆಣ್ಣಿಗೆ ತಲೆಗೊಂದು ಮಾತು ನಮ್ಮ ದೇಶದಲ್ಲಿ, ಅವರನ್ನ ಅವರ ಪಾಡಿಗೆ ಬಿಟ್ಟರೆ ಇವರಿಗೆ ಆಡ್ಕೊಳ್ಳೋಕೆ  ಬೇರೆ ವಿಷಯವಾದರೂ ಎಲ್ಲಿಂದ ಬಂದೀತು. ಗಂಡ ಇದ್ದ ಹೆಂಗಸಿಗೆ ಸಲ್ಲದ ಮಾತು ಹೇಳಿದ್ರೆ ಬಂದು ಸೊಂಟ ಮುರಿದು ಬಿಟ್ಟಾರು ಅನ್ನೋ ಭಯ ಜನಕ್ಕೆ, ಅಬಲೆಯರ ಮೇಲೆ ಶೋಷಣೆ ಮಾಡಿದಲ್ಲಿ ಮಾತ್ರ ತಿಂದ ಹೊಟ್ಟೆ ತಣ್ಣಗಿರುತ್ತೇನೋ. ಇಂತಹ ಗೊಡ್ಡು ಗಾಳಿಮತುಗಳಿಗೆ ಶಾರದೆ ಬೆದರಲಿಲ್ಲ, ಬೆಚ್ಚಲಿಲ್ಲ ಗಂಡೆದೆಯ ಗುಂಡಿಗೆ ಅಕೆಯದು ಎಂದು ಹೇಳಬಹುದು. ಎಲ್ಲವನ್ನೂ ಸವಾಲಾಗಿ ತೆಗೆದುಕೊಂಡ ಶಾರದೆಗೆ ಒಂದೇ ಒಂದು ಗುರಿ, ತಾನೆಷ್ಟು ಕಷ್ಟ ಪಟ್ಟರೂ ಸರಿ, ತನ್ನ ಮಗಳಿಗೆ ಒಳ್ಳೆಯ ವಿದ್ಯೆ ಕೊಡಿಸಿ, ಓದಿಸಿ, ಒಂದೊಳ್ಳೆಯ ಹಂತಕ್ಕೆ ತರಬೇಕು ಎಂದು. ತಂದೆಯಿಲ್ಲದ ಕೊರಗು ಆಕೆಗೆ ಯಾವ ಸಂದರ್ಭದಲ್ಲೂ ಬರಕೂಡದು ಎಂದು ಕಂಡ-ಕಂಡವರ ಹೊಲದಲ್ಲಿ ಕಳೆ ತೆಗೆದು, ರಾಶಿ ಮಾಡಿ, ಕಟ್ಟಡ ಕೆಲಸಗಲ್ಲಿ  ಗಂಡಾಳಿಗೆ ಸರಿ ಸಮ ಕೆಲಸ ಮಾಡಿ, ಮದುವೆಯ ಕಾರ್ಯಗಳಲ್ಲಿ ಸೋಬಾನೆ ಪದ ಹಾಡಿ ಮಗಳ ಉಜ್ವಲ ಭವಿಷಯಕ್ಕಾಗಿ ದುಡ್ಡು ಕೂಡಿಡುತ್ತಿದ್ದಳು ಶಾರದೆ.

ನಿರ್ಮಲ, ಕೆಸರಿನ ಕೊಳದಲ್ಲಿ ಬಿರಿದ ನೈದಿಲೆಯಷ್ಟೇ ನಿರ್ಮಲ ಆಕೆಯ ಮನಸ್ಸು. ನೋಡಲು ಸಾಧಾರಣವಾಗಿಯೇ ಕಂಡರೂ, ನಕ್ಷತ್ರದಂತೆ ಮಿನುಗುವ ಆಕೆಯ ಕಣ್ಣುಗಳಲ್ಲಿ ಅದ್ಯಾವುದೋ ಅದ್ಭುತ ಶಕ್ತಿ ಆ ನಯನಗಳಲ್ಲಿ ಎದ್ದು ತೋರುತ್ತಿತ್ತು. ಬೊಗಸೆಯಷ್ಟು ನಗು ಬೀರಿದರೆ ಸಾಕು ಸಂತಸದ ಹೊನಲು ತನ್ನ ವಿಳಾಸವ  ಮರೆತು ಇವಳ ಕಾಲಡಿ ಬಿದ್ದು ಹೊರಳಾಡುತ್ತಿತ್ತು. ಸದಾ ನಗುತ್ತಿರುವ ನಿರ್ಮಲಳನ್ನು ಕಂಡರೆ ಎಲ್ಲರಿಗೂ ಪ್ರೀತಿ ಅಕ್ಕರೆ, ಆಕೆಯ ಮುಗುಳು ನಗೆಯಲ್ಲಿ ಅಡಗಿದ್ದ ಅವಳ ಮನದ ನಿರ್ಮಲತೆ ಮತ್ತು ಮುಗ್ಧತೆ ಕಾರಣವಿರಬಹುದೇನೋ.

ಬಾಲ್ಯದಿಂದ ಜ್ಞಾನಿಗಳ ಜೀವನ ಚರಿತ್ರೆಗಳನ್ನೆಲ್ಲ ಓದಿ, ಅದರಿಂದ ಪ್ರಭಾವಿತಗೊಂಡು, ಅವರು ಹಾಕಿ ಕೊಟ್ಟ ಚೌಕಟ್ಟಿನಲ್ಲಿ ನಡೆಯುವುದನ್ನು ರೂಢಿಸಿಕೊಂಡ ನಿರ್ಮಲಳಿಗೆ ಯಾವುದೋ ದಿವ್ಯ ಚೇತನವೊಂದು ಕೈಬೀಸಿ ಕರೆಯುತ್ತಿದ್ದಂತೆ ಕಾಣಿಸಿತ್ತು. Teacher is future ಎನ್ನುವ ಮಾತಲ್ಲಿ ಗಾಢವಾದ ನಂಬಿಕೆ ಹೊಂದಿದ್ದ ನಿರ್ಮಲ ತಾನು ಕೂಡ ಶಿಕ್ಷಕಿಯಾಗಿ, ತನ್ನೂರಿನ ಮಕ್ಕಳಿಗೆ ಮೌಲ್ಯಗಳಿಂದ ತುಂಬಿದ ಶಿಕ್ಷಣ ಕೊಟ್ಟು ದೇಶಕ್ಕೆ ಉತ್ತಮ ಪ್ರಜೆಗಳನ್ನು ಕೊಡುವ ರೂಪದಲ್ಲಿ, ಅಲ್ಲದೇ ತನ್ನ ತಾಯಿಯಂತೆ ಒಂಟಿಯಾಗಿರುವ ಅಬಲೆ ಸಶಕ್ತೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡು ತನ್ನ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಬೇಕೆಂದು ಕನಸು ಕಂಡವಳು ಆಕೆ. ದೇಶಕ್ಕಾಗಿ ತಾನು ತನ್ನ ಕೈಲಾದಷ್ಟು ಅಳಿಲು ಸೇವೆ ಮಾಡುವುದೇ ಈಶ ಕಾರ್ಯ ಎಂದು ತಿಳಿದು ಭವ್ಯ ಕನಸಿನ ಮೂಟೆಯೊಂದನ್ನು ಹೆಗಲಿಗೆ ಹೊತ್ತು ಅದನ್ನು ನನಸಾಗಿಸುವ ಅತ್ಯಾಕಾಂಕ್ಷೆಯಲ್ಲಿ ಡಿ.ಎಡ್ ಮಾಡಲು ಶಹರೊಂದಕೆ ಕಾಲಿಟ್ಟಳು.

ಅಂದುಕೊಂಡಂತೆಯೇ ಹಗಲಿರುಳು ಅತೀವ ಶ್ರಮದಿಂದ ಅಭ್ಯಾಸದಲ್ಲಿ ನಿರತಳಾಗಿದ್ದಳು. ಅಚಾನಕಾಗಿ ಕೂಡ ಆಕೆಗೆ ಆಯಾಸವಾದರೂ ಕೂಲಿ ಮಾಡಿ ಬೆಳೆಸಿದ ಆಕೆಯ ತಾಯಿಯ ಮುಖ, ಆಕೆ ಪಟ್ಟ ಪರಿಶ್ರಮ, ಜನರ ಚುಚ್ಚು ಮಾತುಗಳು ಆಕೆಯ ಕಣ್ಣ ಮುಂದೆ ಬಂದು ಅದೇ ನೆನಪಲ್ಲಿ ಒಂದೆರಡು ಕಂಬನಿ ಮಿಡಿದು ಮತ್ತೆ ತನ್ನ ಓದಿನಲ್ಲಿ ತನ್ನನ್ನು ತೊಡಗಿಸಿಕೊಂಡು ಡಿಸ್ಟಿಂಕ್ಶನ್ ನಲ್ಲಿ ಪಾಸಾಗಿ ಕನಸು ಸಕಾರಗೊಳ್ಳುವ ನಿಟ್ಟಿನಲ್ಲೇ ಸಾಗುತ್ತಾ ಇದ್ದೇನೆ ಎಂದು ನಿಟ್ಟುಸಿರು ಬಿಟ್ಟು ಸಂತಸಗೊಂಡಿದ್ದಳು ನಿರ್ಮಲ.

ತಾಯಿ ಮಗಳಿಗೆ ಹತ್ತಿರವಾದ ಜೀವವೆಂದರೆ ಅವರದೇ ಹಳ್ಳಿಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಗುರು. ನಿರ್ಮಲಳ ಜೀವನ ಕಂಡು ಮರುಕಪಟ್ಟು ಆರ್ಥಿಕ ನೆರವು ನೀಡಲು ಮುಂದಾದ ಗುರು. ಬಡವಾಳಾದರೂ ಏನಂತೆ ಶಾರದೆಯ ಸ್ವಾಭಿಮಾನ ಅದಕ್ಕೆ ಒಪ್ಪಲಿಲ್ಲ. ತುಂಬಾ ಅಡಚಣೆ ಕಂಡು ಬಂದಾಗಿ ಸಾಲದ ರೂಪದಲ್ಲಿ ಗುರುವಿನ ಹತ್ತಿರ ಹಣ ತೆಗೆದುಕೊಂಡಿದ್ದಳು. ಅಕ್ಕ ಅಕ್ಕ ಎಂದು ಶಾರದೆಗೆ ತಮ್ಮನಾಗಿಬಿಟ್ಟಿದ್ದ ಗುರು ಅಲ್ಲದೇ ಅವರ ಹಳ್ಳಿಯ ಶಾಲೆಗೆ ಅವನೊಬ್ಬ ಆದರ್ಶ ಶಿಕ್ಷಕನಾಗಿದ್ದ. ಶಹರಿನಲ್ಲಿ ಓದುತ್ತಿದ್ದ ನಿರ್ಮಲಳಿಗೆ ವಾರಕ್ಕೊಮ್ಮೆ ಕಾಲ್ ಮಾಡಿ ಮಾತಾಡುತ್ತಿದ್ದ ಗುರು ನಿರ್ಮಲಳಿಗೆ ಒಬ್ಬ ಒಳ್ಳೆಯ ಸ್ನೇಹಿತ ಹಾಗೂ ಶಿಕ್ಷಕ ಕೂಡ ಆಗಿಬಿಟ್ಟಿದ್ದ.

ಇತ್ತ ಓದು ಮುಗಿಸಿ ಮನೆಗೆ ಬಂದ ನಿರ್ಮಲಳನ್ನು ಕಾಣಲು ಫ್ಯಾಮಿಲಿ ಸ್ನೇಹಿತ ಗುರು ಮನೆಗೆ ಬಂದರು. ಗುರು ಜೊತೆ ಮಾತನಾಡುತ್ತಾ ಅವರಿಗಿಷ್ಟವಾದ ಭಜ್ಜಿ ಮತ್ತು ಚಹಾ ಮಾಡಿಕೊಡಲು ನಿರ್ಮಲ ಅಡುಗೆ ಮನೆಗೆ ನುಗ್ಗಿ ತಯಾರಿ ನಡೆಸಿದಳು. ಶಹರಿನ ಅನುಭವಗಳನ್ನು ಕೇಳುತ್ತ ಗುರು ಕೂಡ ಅವಳ ಹಿಂದಿಂದೆ ಅಡುಗೆ ಕೋಣೆಗೆ ನಡೆದ. ಮಾತುಕತೆಗಳ ಭರದಲ್ಲಿ ನಿರ್ಮಲಳ ಕೆಲಸವೂ ಸಾಗುತ್ತಲೇ ಇತ್ತು. ಭಜ್ಜಿ ತಿನ್ನಲು ಕೊಟ್ಟು ಚಹಾ ಒಲೆಯ ಮೇಲಿಡುವಷ್ಟರಲ್ಲಿ ಹಿಂದಿನಿಂದ ಗಟ್ಟಿಯಾಗಿ ಗುರು ಅವಳನ್ನು ತಬ್ಬಿ ನಿಂತಿದ್ದ. ನಿರಾತಂಕವಾಗಿ ಮಾತಿನ ಭರದಲ್ಲಿದ್ದ ನಿರ್ಮಲಳ ಎದೆ ಒಡೆದಂತಾಯಿತು ಇದೆಂಥ ಅವಘಡ ಎಂದು ಅವನ ಕೈಗಳನ್ನು ಬಿಸುಡಿ ಸರಕ್ಕನೆ ಜೆರೆದು ದೂರದಲ್ಲಿ ನಿಂತುಕೊಂಡು, ಏನಿದು ಎಂದು ಏರು ದನಿಯಲ್ಲಿ ಕೇಳಿದಳು.

ನಿರ್ಮಲಳನ್ನು ಕಂಡರೆ ತನಗೆ ಪ್ರೇಮವೆಂದು ಹೇಳುತ್ತ ಮತ್ತೆ ಅವಳ ಸನಿಹ ಬಯಸಿ ನಡೆದು ಏನು ಆಗಲ್ಲ ತನ್ನೊಡನೆ ಕೋ-ಆಪರೇಟ್ ಮಾಡುತ್ತ ತನ್ನ ಜೊತೆ ಯಾವತ್ತೂ ಹೀಗೆಯೇ ಇರು ಎನ್ನುತ್ತ ಹೆಜ್ಜೆಯನ್ಣ ಮತ್ತೆ ನಿರ್ಮಲಳತ್ತ ಇಟ್ಟ. ಮೊದಲೇ ಅವನ ವಿಕೃತ ಕೃತ್ಯದಿಂದ ನಿರ್ಮಲಳ ಕೋಪ ನೆತ್ತಿಗೇರಿತ್ತು. ವಿವಾಹಿತರು ಪರ ಸ್ತ್ರೀ ಸಹವಾಸ ಮಾಡಿದರೆ ಅದನ್ನು ಪ್ರೇಮವಲ್ಲ ವ್ಯಭಿಚಾರ ಎನ್ನುತ್ತಾರೆ,  ತನ್ನ ಬಾಳ ಸಂಗಾತಿಯ ಬಗೆಗೆ ಅವನಿಗಿರುವ ನಿಷ್ಠೆ ಇಷ್ಟೇನ ಎಂದು ಕೇಳುತ್ತಾ ಗುರು ಮೇಲಿದ್ದ ಎಲ್ಲ ಗೌರವವೂ ಇಂದು ನೆಲಸಮವಾಯಿತು ಎಂದು ಖಡಖಡನೆ ನುಡಿದು ಬಿಟ್ಟಳು ನಿರ್ಮಲ. ಮತ್ತೇನೋ ಹೇಳಲಿಕ್ಕೆ ಎಂದು ಗುರು ಒಂದು ಹೆಜ್ಜೆ ಮುಂದೆ ಇಡುವಷ್ಟರಲ್ಲಿ ಜ್ವಾಲೆಯಂತೆ ಧಗಧಗಿಸುತ್ತಿದ್ದ ನಿರ್ಮಲ, ತಾವಿನ್ನು ಒಂದು ಹೆಜ್ಜೆ ಮುಂದಿಟ್ಟರೂ ತಾನು ರಂಪ ಮಾಡಿ ಊರ ಜನರನ್ನು ಸೇರಿಸುವುದಾಗಿ ಹೇಳಿದಳು. ಇಷ್ಟು ದಿನ ತನಗೆ ತೋರಿದ ಕಾಳಜಿ ತನ್ನನ್ನು ಕಟ್ಟಿ ಹಾಕುತ್ತಿರುವುದರಿಂದ ಅಲ್ಲಿಂದ ತಕ್ಷಣ ನಡೆದು ಬಿಡುವಂತೆ, ಮತ್ತೆ ಯಾವತ್ತೂ ಅವರ ಮನೆಯ ಹೊಸ್ತಿಲು ತುಳಿಯದಂತೆ ತಾಕೀತು ಮಾಡಿ ಭಾರವಾದ ಹೃದಯದಿಂದ ಕಂಬನಿ ಮಿಡಿಯುತ್ತಾ ನಿರ್ಮಲ ನೆಲಕ್ಕೆ ಕುಸಿದು ಬಿದ್ದಳು.

ಮುಖಭಂಗ ಮಾಡಿಸಿಕೊಂಡ ಗುರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಜನರ ಮುಂದೆ ಮೂರು ಕಾಸಿಗೆ ಹರಾಜಾಗುವ ಮಾನ ತನ್ನಲ್ಲೇ ಉಳಿದು ಪುನರ್ಜನ್ಮ ಬಂತು ಎಂಬಂತೆ ಗುರು ಹೊರ ನಡೆದ. ಅವರ ಮೇಲೆ ಇಟ್ಟಿದ್ದ ನಂಬಿಕೆ ವಿಶ್ವಾಸ ಚೂರುಚೂರಾಗಿ ಅವನ ವಿಕೃತ ನಡುವಳಿಕೆಗೆ ತಾನು ಬಲಿಪಶುವಾಗಿ ಬಿಡುತ್ತಿದ್ದೇನಲ್ಲ ಎಂದು ಬಿಕ್ಕಳಿಸಿ ಅಳತೊಡಗಿದಳು. ಅವಳ ನಂಬಿಕೆ ಮತ್ತು ವಿಶ್ವಾಸ ಒಲೆ ಮೇಲೆ ಇಟ್ಟಿದ್ದ ಚಹಾ ಹೆಚ್ಚಳ ಬೆಂಕಿಯಿಂದಾಗಿ ಸೀದಿಹೋದಂತೆ, ಗುರು ಮಾಡ ಹೊರಟಿದ್ದ ನೀಚ ಕೃತ್ಯಕ್ಕೆ ನಿರ್ಮಲಳ ನಂಬಿಕೆ ಕಮರಿ ಹೋಗಿತ್ತು.

ಅತ್ತ ಮನೆಗೆ ಬಂದ ಮಗಳಿಗೆ ಇಷ್ಟವಾದ ತಿನಿಸು ಮಾಡಿಕೊಡಬೇಕೆಂದು ದಿನಸಿ ಅಂಗಡಿದೆ ಹೋದ ಶಾರದೆಗೆ ಹಬ್ಬದ ಸಡಗರ ಎಂಬಂತೆ ಖುಷಿ ಆಗಿತ್ತು. ಅದೇ ಸಡಗರದಲ್ಲಿ ಮನೆಗೆ ತೆರಳಿದ ಅಮ್ಮನಿಗೆ ನಡೆದ ವಿಷಯ ಹೇಳಿದಾಗ ದಂಗು ಬಡಿದವರಂತೆ ಮಾತೇ ಆಡಲಿಲ್ಲ. ಅಕ್ಕ ಅಕ್ಕ ಎಂದು ತಿರುಗುತ್ತಿದ್ದ ಗುರುವನ್ನು ಮಗನ ರೂಪದಲ್ಲಿ ನೋಡಿದ್ದ ಶಾರದೆ ಅವನು ಇಂತಹ ಕೆಲಸ ಮಾಡಿಬಿಟ್ಟನೇ ಎಂದು ಅಶ್ರುಧಾರೆ ಹರಿಸಿದಳು. ಸಂತಸದ ಹೊನಲೇ ತುಂಬಿ ತುಳುಕುತ್ತಿದ್ದ ಮನೆಯಲ್ಲಿ ಆ ದಿನ ಕರಾಳ ಅಮಾವಾಸ್ಯೆಯ ಕತ್ತಲು ಆವರಿಸಿದರೆ ಮೌನ ಅವರ ಮಾತುಗಳನ್ನೇ ಕಸಿದುಕೊಂಡಿತ್ತು. ಆ ದಿನ ರಾತ್ರಿ ಶಾರದೆ ಮತ್ತು ನಿರ್ಮಲ ನಂಬಿಕೆ ದ್ರೋಹದ ಪಾಠವನುಂಡು, ಕಣ್ಣೀರಲ್ಲಿ ಕೈ ತೊಳೆದು, ಮೌನವೆಂಬ ನಿದ್ರೆಯಲ್ಲಿ ಜಾರಿ ಹೋಗಿದ್ದರು.

ಕಾಯ-ವಾಚಾ-ಮನಸಾ ಪರಿಶುದ್ದಳಿದ್ದ ನಿರ್ಮಲಳ ಕಣ್ಣೀರು ಸಮಾಜವನ್ನು ಪ್ರಶ್ನಿಸುತ್ತಿದ್ದವು: "ನಾವು ಅಬಲೆಯರೆಂದ ಮಾತ್ರಕ್ಕೆ ನೀವು ನಮ್ಮನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಹುದೇ?  ಸಹಾಯ ಮಾಡುವ ಕುಂಟು ನೆಪ ಹೂಡಿ ಸಮಾಜದಲ್ಲಿನ ನಮ್ಮನ್ನು ಭೋಗದ ವಸ್ತುವೆಂದು ತಿಳಿಯುವುದು ಸರಿಯೇ? ಮನೆಗೆ ನೆರಳಾಗಿ ನಿಲ್ಲುವ ಗಂಡಿನ ಆಶ್ರಯ ಇಲ್ಲವೆಂದ ಮಾತ್ರಕ್ಕೆ ಸಲ್ಲದ ಮಾತುಗಳನ್ನು ನಾವು ಸಹಿಸಿಕೊಳ್ಳಬೇಕೆ ? ಸ್ನೇಹ ಬಯಸಿದ ಮಾತ್ರಕ್ಕೆ ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುವುದೇಕೆ ?

ಹೌದು ಸ್ನೇಹಿತರೆ, ಇದು ಕೇವಲ ಒಬ್ಬ ನಿರ್ಮಲಳ ಕಥೆಯಲ್ಲ. ಇಂತಹ ಎಷ್ಟೋ ನಿರ್ಮಲ ಮನಸುಗಳ ನಿರ್ಮಲರು ಕಾಮಿಗಳ ಬಲೆಗೆ ಬಲಿಯಾದ ನಿದರ್ಶನಗಳು ಕೂಡ ಹಲವುಂಟು. ಒಂಟಿ ಹೆಣ್ಣು, ವಿಧವೆ, ವಿಚ್ಛೇದನಗೊಂಡವಳು, ವೃದ್ಧೆ ಹಲವರು ಇಂತಹ ಕಿರುಕುಳಕ್ಕೆ ಒಳಗಾಗಿದ್ದಾರೆ. ಅವರೆಡೆಗೆ ಇರುವ ನಮ್ಮ ಮನೋಭಾವನೆಯನ್ನು ಬದಲಿಸಿಕೊಂಡು ಅವರನ್ನು ಸಾಮಾನ್ಯರಂತೆ ಕಂಡು ಗೌರವಿಸಿದರೆ ಅಬಲೆಯರ ಹೃದಯದಲ್ಲಿ ನಮಗೆ ಗೌರವ ಇಮ್ಮಡಿಯಾಗುತ್ತೆ. ಬನ್ನಿ ಎಲ್ಲರೂ ಸೇರಿ ಅಬಲೆಯರ ಮುಖದಲ್ಲಿ ಸಂತಸದ ಹೊನಲು ಕಾಣಲು ಇಷ್ಟ ಪಡೋಣ.

ನಿಮ್ಮ ಮನೆ ಮಗಳು

ರುಕ್ಮಿಣಿ ಎನ್.

ಕನ್ನಡದ ಬರಹಗಳನ್ನು ಹಂಚಿ ಹರಡಿ

18 thoughts on “ನಿರ್ಮಲ: ರುಕ್ಮಿಣಿ ಎನ್.

 1. ಇದು ಕೇವಲ ಒಬ್ಬ ನಿರ್ಮಲಳ ಕಥೆಯಲ್ಲ. ಇಂತಹ ಎಷ್ಟೋ ನಿರ್ಮಲ ಮನಸುಗಳ ನಿರ್ಮಲರು ಕಾಮಿಗಳ ಬಲೆಗೆ ಬಲಿಯಾದ ನಿದರ್ಶನಗಳು ಸಾವಿರಾರು ಆದರೂ ಪ್ರಸ್ತುತ ಕಾಲಘಟ್ಟದಲ್ಲಿ ಹೆಣ್ಣು ಅಬಲೆಯಲ್ಲ ಸಬಲೆ, ಮಹಿಳಾ ಮೀಸಲಾತಿ ಎನ್ನುತ್ತಾ ಎಸ್ಟೇ ಮಹಿಳಾ ಸಬಲೀಕರಣದ ಕಾರ್ಯಗಳು ನಡೆಯುತ್ತಿದರು ಸಹ ಇಂತಹ ಘಟನೆಗಳೂ ಸರ್ವೇ ಸಾಮಾನ್ಯವಾಗಿ ಸಾವಿರಾರು ಸಂಖ್ಯೆಯಲ್ಲಿ ಕಾಣಸಿಗುವುದಂತು ನಗ್ನಸತ್ಯ, ಕಡೆಯಲ್ಲಿ ಹೇಳಿದಂತೆ ಅವರೆಡೆಗೆ ಇರುವ ನಮ್ಮ "ಮನೋಭಾವನೆಯನ್ನು ಬದಲಿಸಿಕೊಂಡು" ಅವರನ್ನು ಸಾಮಾನ್ಯರಂತೆ ಕಂಡು ಗೌರವಿಸಿದರೆ ಮಾತ್ರ ಅಬಲೆಯರ ಮುಖದಲ್ಲಿ ಸಂತಸದ ಹೊನಲು ಕಾಣಲು ಸಾಧ್ಯ .

 2.  
  ವಿಚಾರವನ್ನು ಆಳವಾಗಿ ನೋಡುವಾ ಆ ನಿಮ್ಮ ಲೇಖಕಿಯ ನೋಟ ಹಿಡಿಸಿತು ..
  ಶುಭವಾಗಲಿ ಗೆಳತಿ …………

 3. "ನುಡಿಯಲ್ಲಿರುವ ಬದಲಾವಣೆಯ ಮಾತುಗಳು ನಡೆಯಲ್ಲಿ ಬರುವಂತಾಗಲಿ" ಎಂದು ಆಶಿಸೋಣ.
  ಒಳ್ಳೆ ಲೇಖನ ರುಕ್ಮಿಣಿ
  ಧನ್ಯವಾದಗಳು.

 4. ದುಷ್ಟ ಭಾವನೆಗಳ ವಿರುದ್ಧ ಒಳ್ಳೆಯ ಲೇಖನ ಮೂಡಿ ಬಂದಿದೆ… ಧನ್ಯವಾದಗಳು..

 5. ಹಿಂದೆ ಸಹಾಯ ಮಾಡಿದ ಗುರುವಿನ ನಡುವಳಿಕೆ, ಒಂದು ಕ್ಷಣದ ಮನಸ್ಸಿನ ದುರಾಸೆಗೆ ಸೋತ ಹಾಗಿದೆ. ಅಂತಹ "ವೀಕ್" ಕ್ಷಣವನ್ನು ಆತ ಗೆದ್ದು ಬಿಟ್ಟಿದ್ದರೆ ಆತ ಮಹಾನ್ ವ್ಯಕ್ತಿ ಆಗುತ್ತಿದ್ದ.
  ನಿಮ್ಮ ಕೊನೆಯ ಪಾರಾಕ್ಕೆ ನನ್ನ ಸಹಮತವಿದೆ

 6. Kevala sahaya maduva mukavada mathravala preethiya mukavada hakikondu hennina asahayakatheyanu upayogisikondu hennige mosa madthare hagagiye ollethanakke bele ela
  Nimma lekana chenagidhe rukku shubhavagali

Leave a Reply

Your email address will not be published. Required fields are marked *