‘ನಿರ್ಧಾರ’: ರಮೇಶ್ ನೆಲ್ಲಿಸರ


'ನಂಗೊತ್ತಿತ್ತು ಒಂದ್ ದಿನ ನೀನು ಬಂದೇ ಬರ್ತೀಯ ಅಂತ'

ಎಲ್ಲ ಸಂಬಂಧಗಳ ಬಂಧನವನ್ನು ಕಳಚಿ ಬಹುದೂರ ಸಾಗಿಬಂದ ಜಾಹ್ನವಿ,ರಾಘವ್ ತನ್ನನ್ನು ಏಂದಾದರೂ ಹುಡುಕಿಕೊಂಡು ಬಂದೇಬರುವನೆಂಬ ಆಸೆಯನ್ನು ಮನದ ಗರ್ಭದಲಿ ಸುಪ್ತ ಶಿಲಾಪಾಕದಂತೆ ಕಾಯ್ದಿಟ್ಟುಕೊಂಡಿದ್ದಳು.

ಕಳೆದ ಹತ್ತು ವರ್ಷಗಳಿಂದ ಅನಾಥ ಮಕ್ಕಳ ಸೇವಾಸಂಸ್ಥೆ ನಡೆಸುತ್ತಿ‌ದ ಜಾಹ್ನವಿ ಮೊದಲ ಬಾರಿಗೆ ತನಗಾಗಿ ಇಷ್ಟೊಂದು ಖುಷಿಪಟ್ಟಿದ್ದಳು.

ರಾಘವ್ ನ ಮುಖವನ್ನು ಕಣ್ತುಂಬಿಕೊಳ್ಳುತ್ತಿರುವಾಗಲೇ,ಹಿಂದೆ ಎಂದೋ ಕೀಲಿಹಾಕಿ ಭದ್ರಪಡಿಸಿ‌ದ್ದ ನೆನಪಿನ ಬಾಗಿಲು ತಂತಾನೆ ತೆರೆದುಕೊಂಡಿತು.

““““““““`
ರಾಘವ್ ಹಾಗೂ ಜಾಹ್ನವಿ ಒಂದೇ ಕಾಲೇಜಿನಲ್ಲಿ ಕಲಿತದ್ದು,ರಾಘವ್ ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾದರೆ ,ಜಾಹ್ನವಿ ಕಂಪ್ಯೂಟರ್ ಸೈನ್ಸ್.

ರಾಘವ್ ಹಾಗೂ ಜಾಹ್ನವಿ ಮೊದಲ ಬಾರಿಗೆ ಭೇಟಿಯಾದದ್ದು ಕಾಲೇಜಿನ ಸಾಂಸ್ಕೃತಿಕ ಪ್ರತಿನಿಧಿಗಳ ಸಭೆಯಲ್ಲಿ

'ಐ ಯಾಮ್ ರಾಘವ್,ಫೈನಲ್ ಬಿ.ಎ'

'ಗ್ಲಾಡ್ ಟು ಮೀಟ್ ಯು,ಐ ಯಾಮ್ ಜಾಹ್ನವಿ,ಫಸ್ಟ್ ಇಯರ್ ಬಿ.ಎಸ್ಸಿ,ಕಂಪ್ಯೂಟರ್ ಸೈನ್ಸ್'

ಬರೀ ಹೆಸರು ತಿಳಿಯುವುದರಲ್ಲೇ ಅಂದಿನ ಭೇಟಿ ಮುಕ್ತಾಯವಾಗಿತ್ತು.

ರಾಘವ್ ಗೆ ಕತೆ ಕವನಗಳೆಂದರೆ ಅಚ್ಚುಮೆಚ್ಚು ,ಈಗಾಗಲೇ ಕಾಲೇಜಿನ ಪ್ರಕಟಣಾ ಫಲಕದಲ್ಲಿ,ವಾರ್ಷಿಕ ಸಂಚಿಕೆಗಳಲ್ಲಿ ಕೆಲವು ಪ್ರಕಟವಾಗಿದ್ದವೂ ಕೂಡ,ಇದೇ ಆಧಾರದ ಮೇಲೆ ಅವನು ನಿರಂತರ ಮೂರು ವರ್ಷಗಳಿಂದ ಸಾಂಸ್ಕೃತಿಕ ತಂಡದಲ್ಲಿ ಸ್ಥಾನ ಪಡೆದಿದ್ದ.ಆದರೆ ಜಾಹ್ನವಿದು ಬೇರೆ ಕತೆ,ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಹಿರಿಯ ವಿದ್ಯಾರ್ಥಿಗಳೇ ಸಾಂಸ್ಕ್ರತಿಕ ತಂಡಕ್ಕೆ ಸೇರ್ಪಡೆಯಾಗಲು ನಿರಾಕರಿಸಿ‌ದ್ದರಿಂದ ,ಸಾಹಿತ್ಯವೆಂದರೆ ಹಾಡು,ಮನಮುಟ್ಟುವ ಸಾಲುಗಳೆಂದು ತಿಳಿದಿದ್ದ ಜಾಹ್ನವಿಗೆ ಸ್ನೇಹಿತೆಯರು ಒತ್ತಾಯ ಮಾಡಿ ಸೇರಿಸಿದ್ದರು'

ಜಾಹ್ನವಿ ಹಾಗೂ ರಾಘವ್ ತಿಂಗಳಿಗೊಮ್ಮೆ ನಡೆಯುವ 'ಸಾಂಸ್ಕೃತಿಕ ಸಭೆಯಲ್ಲಿ ಸೇರುತ್ತಿದ್ದರು,ಸಾಹಿತ್ಯದ ಕುರಿತು ನಡೆಯುವ ಚರ್ಚೆಗಳಲ್ಲಿ ಇವಳು ಮೂಕಪ್ರೇಕ್ಷಕಿಯಂತೆ ಉಪನ್ಯಾಸಕರ ಮುಖವನ್ನೊಮ್ಮೆ ,ರಾಘವ್ ನ ಮುಖವನ್ನೊಮ್ಮೆ ನೋಡುತ್ತಾ ಕೂರುತ್ತಿದ್ದಳು.

'ಶಿಲ್ಪ ನಾನು ಸಾಂಸ್ಕೃತಿಕ ಸಂಘದಿಂದ ಹೊರಬರುತ್ತೇನೆ ಕಣೆ,ನನ್ನಂಥವರಿಗೆ ಇದೆಲ್ಲ ಅಲ್ಲ'

'ಕಮಾನ್ ,ಜಾನು .ಡೋಂಟ್ ಬಿ ಪ್ಯಾನಿಕ್.ನಿಂಗೆ ಒಳ್ಳೆ ಅವಕಾಶ ಸಿಕ್ಕಿದೆ,ಯ್ಯೂಸ್ ಮಾಡ್ಕೋ,ನಿನ್ನ ಪ್ರಾಬ್ಲಂ ಆದ್ರೂ ಏನು'

'ನಂಗೆ ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲ,ಐ ಫೆಲ್ಟ್ ಲೋನ್ಲಿ ಎಟ್ ಮೀಟಿಂಗ್'

ಹೋ,ಕಮಾನ್ ಜಾನು,ರಾಘವ್ ಹತ್ರ ಕೇಳಿದ್ರೆ ಅವರೇ ಎಲ್ಲಾ ಹೇಳ್ತಾರೆ,ಹೇಗೂ ಅವರು ಲಿಟ್ರೇಚರ್ ಸ್ಟುಡೆಂಟ್,ಉಪಯೋಗವಾಗುವಂಥ ಬುಕ್ಸು ಸಿಗ್ತಾವೆ ,ಮೇಕ್ ಹಿಮ್ ಫ್ರೆಂಡ್….

'ಏಯ್ ಹೋಗೆ,ಅವ್ನು ಫುಲ್ ಸೀರಿಯಸ್ಸು ಮುಖ ನೋಡೂ ಮಾತಾಡಲ್ಲ,ಅವ್ನ ಜೊತೆ ಫ್ರೆಂಡ್ ಶಿಪ್ಪಾ? ,ನೋ ಛಾನ್ಸ್…

'ಜಾನು,ಈ ಸೈಲೆಂಟಾಗಿರೋರು ಒಂಥರಾ ಜ್ವಾಲಾಮುಖಿಯಿದ್ದ ಹಾಗೆ,ಒಮ್ಮೆ ಅವರಿಗೆ ಕಂಫರ್ಟ್ ಅನ್ಸಿದ್ರೆ ಫ್ರೀಯಾಗಿ ಬಿಹೇವ್ ಮಾಡ್ತಾರೆ,ಸೋ ಯು ಶುಡ್ ಮೂವ್,ಆಮೇಲೆ ನೀನೆ ಮಾತಾಡೋದು ನಿಲ್ಸಿ ಅಂತೀಯಾ ಅಷ್ಟೆ…'

'ಏನೋ ಶಿಲ್ಪ,ಜ್ವಾಲಾಮುಖಿ ಗೀಲಾಮುಖಿ ಅಂತ ಹದ್ರಿಸ್ಬೇಡ ಮಾರಾಯ್ತಿ'

ಶಿಲ್ಪ ಮುಂದಿಟ್ಟದ್ದ ಪ್ರಸ್ಥಾಪ ಕಷ್ಟದ್ದೇನೂ ಆಗಿರಲಿಲ್ಲ,ಆದರೆ ರಾಘವ್ ನ ಮಾತನಾಡಿಸೋದೇ ಕಷ್ಟವೆನಿಸಿತ್ತು ಜಾಹ್ನವಿಗೆ.

ಮಾರನೇದಿನ ರಾಘವ್ ಗ್ರಂಥಾಲಯಕ್ಕೆ ಹೋಗುವುದನ್ನು ಗಮನಿಸಿದ ಆಕೆ ತಾನೂ ಮುಂದುವರಿದಳು,ಲೈಬ್ರರಿ 
ಬಾಗಿಲ ಬಳಿ  'ರಾಘವ್ ನಿಮ್ಮತ್ರ ಸ್ವಲ್ಪ ಮಾತನಾಡಬೇಕಿತ್ತು,ಕ್ಯಾನ್ ಐ?

'ಅಫ್ಕೋರ್ಸ್,ಹೇಳಿ'

'ಇಲ್ಲಿ ಬೇಡ ,ನಿಮಗೆ ಅಭ್ಯಂತರ ಏನೂ ಇಲ್ಲ ಅಂದ್ರೆ,ಮೇ ಐ ಹ್ಯಾವ್ ಯುವರ್ ಫೋನ್ ನಂಬರ್ ಪ್ಲೀಸ್?

'ಅವಶ್ಯಕವಾಗಿ ನೋಟ್ ಮಾಡ್ಕೋಳಿ 'ರಾಘವ್  ತನ್ನ ಮೊಬೈಲ್ ಸಂಖ್ಯೆಯನ್ನು ಸಂಕೋಚದಿಂದಲೇ ಹೇಳಿದ.

'ಥ್ಯಾಂಕ್ಸ್ ಎ ಲಾಟ್' 

ರಾಘವ್ ನ ಉತ್ತಮ ನಿಷ್ಕಲ್ಮಷ ನಡುವಳಿಕೆಯಿಂದ ಜಾಹ್ನವಿಗೆ ಆತನ ಮೇಲೆ ಉತ್ತಮ ಭಾವನೆ ಮೂಡಿತು,ಮನೆಗೆ ತಲುಪಿದ ನಂತರ ಸಂಜೆ ರಾಘವ್ ಗೆ ಫೋನ್ ಮಾಡಿದಳು.

'ಹಲೋ,ರಾಘವ್ ಸರ್'

'ಯಾ,ಜಾಹ್ನವಿ ಅಲ್ವಾ?ಹೇಳಿ ಏನೋ ಮಾತಾಡ್ಬೇಕು ಅಂದಿದ್ರಿ?

'ಸರ್ ನನಗೆ ಸಾಹಿತ್ಯದ ಬಗ್ಗೆ ಸ್ವಲ್ಪ ನೀವು ವಿವರಿಸಬೇಕು,ನೀವು ಬರೆದ ಕವನಗಳನ್ನ ಕೊಡಬೇಕು,ಮತ್ತೆ ನೀವ್ ನನ್ನ ಫ್ರೆಂಡ್ ಆಗ್ಬೇಕು'
ಅರಳು ಹುರಿದಂತೆ ಜಾಹ್ನವಿ ಒಂದೇ ಸಮನೆ ಹೇಳಬೇಕಾಗಿದ್ದರ ಜೊತೆ ಫ್ರೆಂಡ್ ಆಗಬೇಕೆನ್ನುವುದೂ ಸೇರಿಸಿಬಿಟ್ಟಿದ್ದಳು'

'ಸರಿ ಜಾಹ್ನವಿ,ನನಗೆ ತಿಳಿದಷ್ಟು ಹೇಳುವೆ,ಹೇಳೋದಿಕ್ಕಿಂತ ಚರ್ಚಿಸೋಣ,ನೀವು ಫ್ರೆಂಡ್ ಆಗಬಹುದು ಆದರೆ ನನ್ನ ಸರ್ ಅನ್ಬೇಡಿ,ರಾಘವ್ ಅನ್ನಿ'

ರಾಘವ್ ಹಾಗೂ ಜಾನಕಿ ಸಾಹಿತ್ಯದ ಪ್ರಪಂಚದೊಳಗೆ ಇಳಿದು ಪಂಪ,ರನ್ನ,ಕುವೆಂಪು,ಷೇಕ್ಸ್ ಪಿಯರ್,ಕೀಟ್ಸ್,ಮಾರ್ಕ್ವೇಜ್,ಅನಂತಮೂರ್ತಿ ಮುಂತಾದವರ ಪಾತ್ರಗಳೊಳಗೆ ಇಳಿದು ,ತಾವೇ ಪಾತ್ರಗಳಾಗಿ ಕೊನೆಗೆ ಕಂಡುಕೊಂಡದ್ದು ತಮ್ಮನ್ನೇ,ಕೊನೆ ಕೊನೆಗೆ ಸಾಹಿತ್ಯ ನೆಪವಾಗಿ ರಾಘವ್ ಬರೆದದ್ದೇ ಜಾಹ್ನವಿಗೆ ಶ್ರೇಷ್ಟವೆನಿಸಲು ಶುರುವಾಯಿತು,ತಾಯಿ,ಸಾಹಿತ್ಯ ಹೊರತುಪಡಿಸಿ ಜಾಹ್ನವಿಯೇ ಹೊಸ ಜಗತ್ತಾಗಿ ರಾಘವ್ ಗೆ ಕಂಡದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ…'

'ಜಾನೂ,ನೀನು ನನ್ನ ಜೊತೆ ಹೀಗೆ ಕೊನೆಯವರೆಗೂ ಇರುವೆಯಾ?'

'ಈ ಪ್ರಶ್ನೆಯನ್ನೂ ಎಂದೋ ನಿರೀಕ್ಷಿಸಿದ್ದ ಜಾಹ್ನವಿಗೆ ಅಚ್ಚರಿಯೇನೂ ಆಗಲಿಲ್ಲ,ಒಂದೊಮ್ಮೆ ತಾನೇ ಹೇಳಿಬಿಡಬೇಕೆಂದು ಅಂದು ಕೊಂಡಿದ್ದಳೂ ಕೂಡ'

'ಐ ಲವ್ ಯೂ ಟೂ ,ರಾಘವ್',

ರಾಘವ್ ಹಾಗೂ ಜಾಹ್ನವಿಗೆ ಪ್ರೀತಿ ಎನ್ನುವುದು ಹಿಂದಿನ ಸಂಬಂಧದ ಹೊಸ ಆಯಾಮವಾಗಿತ್ತೇ ವಿನಃ  ಮತ್ತೇನಿಲ್ಲ ,ಏಕೆಂದರೆ ಅವರು ಈಗಾಗಲೇ ಬಿಟ್ಟಿರಲಾರದಷ್ಟು ಮುಂದುವರೆದಿದ್ದರು ಅಲ್ಲಿಂದ ಮುಂದೆ ಒಂದು ಹೊಸ ಸಂಬಂಧ ಆರಂಭಿಸುವುದು ಅಥವಾ ಇರುವ ಸಂಬಂಧವನ್ನು ಕಡಿದುಕೊಳ್ಳುವುದಷ್ಟೇ ಉಳಿದದ್ದು,ಅವರು ಮೊದಲನೆಯದನ್ನು ಆಯ್ದುಕೊಂಡಿದ್ದರು.ಸಮಯ. ಹೇಗೆ ತಾನೇ ನಿಂತೀತು,ಅದೂ ಮುಂದುವರೆದಿತ್ತು.

'ರಾಘವ್ ,ನನಗೆ ಮನೆಯಲ್ಲಿ ಗಂಡು ಹುಡುಕುತ್ತಿದ್ದಾರೆ,ನಮ್ಮ ಮದುವೆಯ ವಿಷಯ ನಿಮ್ಮ ಮನೆಯವರಿಗೆ ಹೇಳಿರುವೆ ತಾನೆ?, ಸ್ವಲ್ಪ ದುಗುಡದಿಂದಲೇ ಜಾಹ್ನವಿ ರಾಘವ್ ನ ಎದೆಯ ತಲೆಯಾನಿಸಿ ಹೇಳಿದಳು.

'ಇಲ್ಲ ಜಾನು,ಆದರೆ ನಾಳೇನೆ ಊರಿಗೆ ಹೋಗಿ ಇರುವ ವಿಷಯವನ್ನೆಲ್ಲ ಹೇಳಿಬಿಡ್ತೀನಿ,ನೀನೇನು ಭಯಪಡಬೇಡ ನಾನಿದೀನಿ'

'ನೀ ನನ್ನ ಕೈಬಿಡಲ್ಲ ತಾನೇ?

'ನನ್ನ ಮೇಲೆ ನಂಬಿಕೆ ಇಲ್ವಾ ಜಾನು'.

'ನನಗಿಂತ ಜಾಸ್ತಿಯಿದೆ, ರಾಘವ್'

'ಹಾಗಾದ್ರೆ,ಯೋಚನೆ ಮಾಡಬೇಡ'

ಆದರೆ ಮನೆಯವರನ್ನು ಒಪ್ಪಿಸುವುದು ರಾಘವ್ ಹೇಳಿದಷ್ಟು ಸುಲಭವಾಗಿರಲಿಲ್ಲ,ಹೇಳಿ ಕೇಳಿ ರಾಘವ್ ರವರದು ಬ್ರಾಹ್ಮಣ ಕುಟುಂಬ.
ತೀರ್ಥಹಳ್ಳಿ ಮನೆ, ಶಿವಮೊಗ್ಗದ ಸಹ್ಯಾದ್ರಿ ಹಾಸ್ಟೆಲ್ ನಲ್ಲಿದ್ದುಕೊಂಡು  ಅದೇ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ.ಜಾಹ್ನವಿ ಉತ್ತರ ಭಾರತದ ಪಂಜಾಬ್ ಮೂಲದವಳು,ಅವರ ತಂದೆ ಗುರ್ವಿಂದರ್ ಸಿಂಗ್ 'ನಗರದ ಸ್ಟೇಟ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

'ಏನೂ ಬೇರೆ ಜಾತಿಯ ಹುಡುಗಿಯೇ,ಅದೂ ಉತ್ತರ ಭಾರತದವಳಾ?,ನಿನಗೇನು ನಾವು ಬದುಕಿರೋದು ನಿಂಗೆ ಇಷ್ಟ ಇಲ್ವಾ ?,ನಿನ್ನ ತಂದೆ ಪಾರ್ಶ್ವವಾಯು ಪೀಡಿತರಾಗಿ ಮನೇಲಿ ಬಿದ್ದಿದ್ದಾರೆ,ಇರೋ ಎರಡು ಎಕರೆ ಅಡಿಕೆ ತೋಟದ ಚೇಣಿ ಹಣದಿಂದ ನಾವು ಬದುಕ್ತಿರೋದು ಮತ್ತೆ ನೀನೂ ಓದ್ತಿರೋದು,ಅರ್ಥ ಆಯ್ತಾ?

ಹೀಗೊಂದು ಉತ್ತರ ಬರಬಹುದೆಂದು ರಾಘವ್ ಎಣಿಸಿರಲಿಲ್ಲ,
'ಅಮ್ಮ ಅವರೂ ಶಾಖಹಾರಿಗಳಮ್ಮ ಸಿಖ್ ಮನೆತನದವರು,ಅಮ್ಮ ದಯವಿಟ್ಟು ಒಪ್ಕೊಳಮ್ಮ,ಮನೇನಾ ನಾನು ನಡೆಸ್ತೀನಿ'

ನನ್ನ ಉತ್ತರ ಹೇಳಿಯಾಗಿದೆ ರಾಘವ್,ನಿಮ್ಮ ತಂದೆಗೆ ಬಾಯಿ ಬರುತ್ತಿದ್ದರೆ ಅವರೂ ಇದೇ ಹೇಳಿರೋರು,ನೋಡು ಅವರ ಕಣ್ಣೀರು,ಕೈಸನ್ನೆ…

ರಾಘವ್ ಗೆ ಹೇಳಲು ಏನೂ ಉಳಿದಿರಲಿಲ್ಲ ರಾತ್ರಿಯೇ ಶಿವಮೊಗ್ಗಕ್ಕೆ ಹೊರಟುನಿಂತ.ಬಂದವನು ಊಟವನ್ನೂ ಮಾಡದೆ ಯಾರಿಗೂ ಮಾತಿಗೆ ಸಿಗದೆ ಮಲಗಿದ,ಅಂದು ರಾತ್ರಿಯಿಡೀ ಅವನ ಮೆದಳು ನಿಜದ ಕುರುಕ್ಷೇತ್ರವಾಗಿತ್ತು,ಒಂದು ಕಡೆ ಜಾಹ್ನವಿಯ ನಿಷ್ಕಲ್ಮಷ ಪ್ರೀತಿ ಇನ್ನೊಂದು ಕಡೆ ತಂದೆ-ತಾಯಿ,ಉಹೂಂ ಎಷ್ಟೇ ಯೋಚಿಸಿದರೂ ಆಯ್ಕೆಗೆ ಅವಕಾಶವೇ ಇರಲಿಲ್ಲ.ಯಾವುದೇ ನಿರ್ಧಾರವಿಲ್ಲದೆ ಬೆಳಕಾಯಿತು.

ರಾಘವ್ ಕಾಲೇಜಿಗೆ ಬರದಿದ್ದನ್ನು,ಪೋನ್ ರಿಸೀವ್ ಮಾಡದಿರುವುದನ್ನು ಕಂಡು ಜಾಹ್ನವಿಯೇ ಹಾಸ್ಟೆಲ್ ಗೆ ಬಂದಳು,ವಾಚ್ ಮೆನ್ ರಾಘವ್ ನನ್ನು ಹೊರಗಡೆ ಕರೆದುಕೊಂಡು ಬಂದಿದ್ದ.

'ರಾಘವ್ ,ಐ ವಾಂಟ್ ಟು ಟಾಕ್ ವಿಥ್ ಯು.'

'ಸ್ವಾರಿ ಜಾನು,ಐ ಕಾಂಟ್'

'ಆಟೋ ಇದೆ ಬಾ 'ಎಂದವಳೇ ರಾಘವ್ ಗೆ ಕಾಯದೆ ಆಟೋ ಹತ್ತಿದಳು,ರಾಘವ್ ಅನುಸರಿಸಿದ
'ಗಾಂಧೀ ಪಾರ್ಕ್ ಗೆ ನಡೀರಿ'
ಆಟೋ ಡ್ರೈವರ್ ಮುಂದುವರೆದ.

'ಜಾಹ್ನವಿಯೇ ಟಿಕೇಟ್ ಕೊಂಡು ಒಳನಡೆದಳು ,ಮಕ್ಕಳ ರೈಲ್ವೇ ಟ್ರ್ಯಾಕಿನ ಒಳಗಿರುವ ಮಾಮೂಲಿ ಮರದ ಬಳಿ ಇಬ್ಬರೂ ನಿಂತರು.

'ಏಕೆ ಕಾಲೇಜಿಗೆ ಬರ್ತಿಲ್ಲ,ಅಟ್ಲೀಸ್ಟ್ ಫೋನ್ ರಿಸೀವ್ ಮಾಡೋದು ತಾನೆ?'

'ಸ್ವಾರಿ ಜಾನು ಹುಷಾರಿರ್ಲಿಲ್ಲ'

'ನಂಗೊತ್ತು ರಾಘವ್ ನಿಮ್ಮ ಮನೆಯವರು ಮದುವೆಗೆ ಒಪ್ಪಿಲ್ಲ ತಾನೆ? ನಿಜ ಹೇಳು'

'ಅಮ್ಮ,ಅಮ್ಮ……ನಾನು ಒಪ್ಪಿಸ್ತೇನೆ ಜಾನು'

'ಹೋ,ಕಮಾನ್ ರಾಘವ್,ನೀವು ಲಿಟ್ರೇಚರ್ ಓದಿರೋರು ಒಂಥರಾ ಎಮೋಷನಲ್ ಫೂಲ್ಸ್ ರೀತಿ ಬಿಹೇವ್ ಮಾಡ್ತೀರಾ,ಪ್ರಪಂಚದಲ್ಲಿ ನಿಮಗೆ ಇಷ್ಟ ಆಗೋ ವ್ಯಕ್ತಿತ್ವನಾ ಮಾತ್ರ ಹುಡುಕ್ತೀರಾ,ಅದು ಸಿಗದೆ ಇದ್ರೆ ಬೇರೆಯವರಲ್ಲಿ ಅದನ್ನ ಇನ್ಸಿಸ್ಟ್ ಮಾಡೋಕೆ ಟ್ರೈ ಮಾಡ್ತೀರಾ ,ಅಲ್ವಾ?
ನಿಮ್ಮ ತಂದೆ ತಾಯಿ ಅಭಿಪ್ರಾಯಾನೂ ನೀನೂ ಗೌರವಿಸಬೇಕು ರಾಘವ್ ,ಆದರೆ ನಿರ್ಧಾರ ನಿನ್ನದಾಗಿರಬೇಕು.

'ಜಾನು,ನನಗೆ ತಂದೆ ತಾಯೀನಾ ಬಿಟ್ಟಿರೋಕೆ ಸಾಧ್ಯವಿಲ್ಲ,ನಿನ್ನನ್ನೂ ಕೂಡ'

'ರಾಘವ್ ಇದೇ ಬೇಡ ಅನ್ನೋದು,ನೀನೊಂದು ಫರ್ಮ್ ಡಿಸಿಷನ್ ತಗೋಬೇಕು,
ನಿಮ್ಮ ತಂದೆ-ತಾಯಿ ಬಗ್ಗೆ,ಅವರ ಅಭಿಪ್ರಾಯದ ಬಗ್ಗೆ ಗೌರವವಿದೆ.ನೀನೂ ನನ್ನ ಬಗ್ಗೆ ಯೋಚಿಸಬೇಡ,ನೀನು ಮೋಸ ಮಾಡ್ದೆ ಅಂಥಾ ನಾನು ಕೊರಗಲ್ಲ.ನೀನು ನನ್ನಿಂದ ಎಷ್ಟು ಪ್ರೀತಿ ಪಡ್ದಿದಿಯೋ ನಾನು ಅಷ್ಟೇ ಪಡ್ದಿದಿನಿ.

'ಬಟ್ ಜಾನು ಐ ಯಾಮ್ ಲವಿಂಗ್ ಯು,ನೀನಿರದ ಪ್ರಪಂಚನಾ ನಾನು ಕಲ್ಪಿಸೋದಿಕ್ಕೂ ಆಗೊಲ್ಲ'ರಾಘವ್ ಗೆ ತಿಳಿಯದೆ ಕಣ್ಣಂಚಲಿ ನೀರು ಜಿನುಗುತ್ತಲೇ ಇತ್ತು.

'ರಾಘವ್ ಪ್ಲೀಸ್,ಸಂಬಂಧ ಯಾವಾಗ್ಲು ಒಂದು ಅಂತ್ಯ ಅಂಥಾ ಕಾಣ್ಬೇಕು,ಅರ್ಥವಿರದೇ ಅದನ್ನ ಮುಂದುವರೆಸೋದ್ರಲ್ಲಿ ಉಪಯೋಗವಿಲ್ಲ,ನಿನ್ನ ತಂದೆ ತಾಯಿಯನ್ನು ಖುಷಿಯಾಗಿಡೋದೂ ನಿನ್ನದೇ ಕರ್ತವ್ಯ,'ದ್ವಂಧ್ವ' ಯಾವಾಗ್ಲೂ ಸಮಸ್ಯೆಗೆ ಪರಿಹಾರವಲ್ಲ,ಥಿಂಕ್ ಆನ್ ಇಟ್.ನಾನು ಹೊರಡಬೇಕು,ಬೈ ರಾಘವ್ ,ಅಂದ ಹಾಗೆ ನಿನ್ನ ಅಭಿಪ್ರಾಯಾನಾ ಗೌರವಿಸ್ತೀನಿ….

ಜಾಹ್ನವಿಯ ಕೂಲಿಂಗ್ ಗ್ಲಾಸಿನೊಳಗೆ  ಕಣ್ಣೀರು ಮಡುಗಟ್ಟಿತ್ತು,ಭಾರವಾದ ಹೆಜ್ಜೆಗಳನಿಡುತ್ತ ಮನೆ ಸೇರಿದವಳೆ ರೂಮಿನ ಒಳಗೆ ಸೇರಿ ಬಾಗಿಲು ಎಳೆದುಕೊಂಡಳು.
ತಂದೆ,ತಾಯಿ ಯಾರೇ ಕರೆದರೂ ಮಾತನಾಡಲಿಲ್ಲ.ರಾತ್ರಿಯಡೀ ರಾಘವ್ ನ ನೆನಸಿಕೊಂಡು ಅತ್ತು ಅತ್ತು ಕೊನೆಗೂ ಈ ಜನ್ಮದಲ್ಲಿ ತಾವು ಒಂದಾಗುವುದು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಳು.

ಬೆಳಕು ಹರಿಯುತ್ತಿದ್ದಂತೆಯೇ ಜಾಹ್ನವಿ ತಾನು ಮುಂದಿನ ವಿದ್ಯಾಭ್ಯಾಸವನ್ನು ತನ್ನ ದೊಡ್ಡಪ್ಪನ ಮನೆಯಲ್ಲಿ ಅಂದರೆ ಪಂಜಾಬ್ ನಲ್ಲಿ ಮುಂದುವರಿಸುವ ನಿರ್ಧಾರ ಪ್ರಕಟಿಸಿದಳು.

ಮಗಳ ಪ್ರೇಮ ವಿಚಾರವನ್ನು ಮೊದಲೇ ತಿಳಿದಿದ್ದ ತಂದೆ,ತಾಯಿ  ಮಗಳನ್ನು ತಡೆದು ನಿಲ್ಲಿಸುವ ಪ್ರಯತ್ನ ಮಾಡಿದರೂ,ಕೊನೆಗೆ ಹರಸಿ ಕಳುಹಿಸಿಕೊಟ್ಟರು

““““`
ಜಾನು…ಜಾನು..ನೆನಪಿನ ಆಳದಿಂದ ಜಾಹ್ನವಿಗೆ ಬಡಿದು ಎಬ್ಬಿಸಿದ ಹಾಗೆ ಆಯಿತು.

'ಹೇಗಿದಿಯಾ ರಾಘವ್ ? ನನ್ನ ವಿಳಾಸ ಯಾರ ಕೊಟ್ರು?
ಈಗ ಏನ್ ಮಾಡ್ತಿದೀಯಾ?

'ಚನ್ನಾಗಿದೀನಿ,ಜಾನು.ನೀನು ಹೋದ ಮೇಲೆ ನಿನ್ನನ್ನು ಹುಡುಕಿ ನಿನ್ನ ಮನೆಗೂ ಹೋಗಿದ್ದೆ,ಆದರೆ ಅವರೂ ನಿನ್ನಿಷ್ಟದಂತೆ ವಿಳಾಸ ಹೇಳಿಲ್ಲ,ನಿನ್ನ ಸ್ನೇಹಿತೆ ಶಿಲ್ಪ ಕೂಡ,ಎಲ್ಲವೂ ನೀನೆಣಿಸಿದಂತೆಯೇ ಆಯಿತು.ನಾನೀಗ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಫ್ರೋಫೆಸರ್,ಅಮ್ಮನ ಆಸೆಯಂತೆ ಮದುವೆಯಾದೆ,ಒಬ್ಬಳು ಮಗಳಿದ್ದಾಳೆ.ಅಮೃತಸರದಲ್ಲಿ ಭಾರತೀಯ ಭಾಷಾ ಸಮ್ಮೇಳನಕ್ಕೆ ಬಂದಿದ್ದೆ,ಅಲ್ಲಿ ನೀನು ನಡೆಸುವ ಆಶ್ರಮದ ಪ್ಲೆಕ್ಸ್ ಹಾಕಿದ್ರು,ನಿನ್ನ ಫೋಟೋ ನೋಡಿ, ವಿಳಾಸ ವಿಚಾರಿಸಿಕೊಂಡು ಬಂದೆ.'

'ತುಂಬಾ ಹ್ಯಾಪಿ ಕಣೋ ರಾಘವ್ ನಾನೀಗ,ನನ್ನ ನಿರ್ಧಾರ ಸರಿಯಾಗೇ ಇತ್ತು…ಓ ಗಾಡ್ ಐ ಯಾಮ್ ರಿಲ್ಯಾಕ್ಸ್ ಡ್'

'ಜಾನೂ ,ಮದುವೆ ಯಾಕಾಗಿಲ್ಲ ಅಂಥ ಕೇಳಬಹುದಾ?

'ಕಮಾನ್ ರಾಘವ್ ನೀನೂ ಹಾಗೇ ಯೋಚಿಸ್ತಿಯಾ?,ನೋಡು ಇಲ್ಲಿರುವ ನೂರು ಮಕ್ಕಳೂ ನನ್ನವ್ರೇ,ಇದು ನನ್ನ ಮನೆ.ಮತ್ತೇ ನನಗೀಗ ಮೂವತ್ತು ವರ್ಷ ಅಷ್ಟೆ,ನಿನ್ ಥರಾ ಹುಡ್ಗ ಸಿಕ್ರೆ ಮದ್ವೆನೂ ಆಗ್ತಿನಿ ಖುಷಿನಾ?

'ಗಿಲ್ಟ್ ಫೀಲ್ ಆಗ್ತಿದೆ ಜಾನು,ನನ್ನನ್ನ ಕ್ಷಮಿಸಿಬಿಡು'

'ರಾಘವ್ ಈ ಪ್ರೀತಿ ಕರುಣೆಯಾಗಿ ಬದಲಾಗಬಾರದು,ನೀನ್ಯಾಕೆ ಫೀಲ್ ಆಗ್ತಿಯಾ?
ಲೀವ್ ಇಟ್…
ನೋಡು ನಾನು ಓದಿದ್ದು ಕಂಪ್ಯೂಟರ್ ಸೈನ್ಸ್ ,ಆದರೆ ಈಗ ಅನಾಥಾಶ್ರಮ ನಡೆಸ್ತಿದೀನಿ,ಹ್ಯಾಪಿಯಾಗಿರೋದು ಮುಖ್ಯ ಅಲ್ವ?

'ನಿನ್ನನ್ನ ಮಾತಿನಲ್ಲಿ ಸೋಲಿಸೋಕಾಗುತ್ತಾ ಜಾನು?,ಸರಿ ನಾನಿನ್ನು ಹೊರಡುತ್ತೇನೆ.' ಸಂಜೆ ಫ್ಲೈಟ್ ಗೆ ವಾಪಾಸ್ ಹೊರಡಬೇಕು.

'ಸರಿ,ರಾಘವ್.ನಾ ನಿನ್ನ ತಡೆಯಲಾರೆ.'
ಬಂದ ದಾರಿಯಲಿ ಹಿಂದಿರುಗಿದ ರಾಘವ್ ಕಣ್ಣೀರು ಒರೆಸುತ್ತಲೇ ಗೇಟನು ದಾಟಿ ಮರೆಯಾದ.
ಜಾಹ್ನವಿ ಅಳು ತಡೆಯುವ ಸಾಹಸಕ್ಕೆ ಕೈಹಾಕಲಿಲ್ಲ.
ಅವಳ ಹೃದಯದ ಒಂದು ಕಡೆ ಅನಾಥ ಮಕ್ಕಳ ತುಂಬು ಪ್ರೀತಿ ತುಂಬಿಕೊಂಡಿದ್ದರೆ ಇನ್ನೊಂದು ಕಡೆ ಎಂದೆಂದಿಗೂ ತುಂಬಲಾರದ ಖಾಲಿತನವೊಂದು
ಉಳಿದು ಹೋಯಿತು..

–  ರಮೇಶ್ ನೆಲ್ಲಿಸರ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
chaithra
chaithra
8 years ago

Tumba chennagide !!

shrikant
shrikant
8 years ago

ಕತೆ ಚೆನ್ನಾಗಿದೆ, ರಾಘವ್ ಮತ್ತು ಜಾಹ್ನವಿಯ ಕೊನೆಯ ಭೇಟಿಯ ಸಂದರ್ಭದಮೇಲೆ ಇನ್ನಷ್ಟು ಲಕ್ಷ್ಯ ಕೊಡಬಹುದಿತ್ತು.

2
0
Would love your thoughts, please comment.x
()
x