ನಿರ್ಧಾರ!: ಎಸ್.ಜಿ.ಶಿವಶಂಕರ್

Shivashankar SG

ಕೊನೆಗೂ ಸದಾನಂದರು  ನಿರ್ಧಾರ ತೆಗೆದುಕೊಂಡುಬಿಟ್ಟಿದ್ದರು.

ಯಾವುದಕ್ಕಾಗಿ ಮೂವತ್ತು ವರ್ಷಗಳಿಂದ ಹಿಂಜರಿಯುತ್ತಿದ್ದರೋ ಅದನ್ನಿಂದು ಹತ್ತಿಕ್ಕಿದ್ದರು!

ಜೀವನದಲ್ಲಿ ಎಂದೂ ತೆಗೆದುಕೊಳ್ಳದ ಮಹತ್ವದ ನಿರ್ಧಾರವನ್ನು ಸದಾನಂದರು ತೆಗೆದುಕೊಂಡಿದ್ದರು. ಅವರ ನಿರ್ಧಾರ ಯಾವ ಸ್ವರೂಪದ್ದು ಎಂಬುದರ ಕಲ್ಪನೆ ಮನೆಯವರಿಗೆ ಇರಲಿಲ್ಲ;  ಶ್ಯಾಮಲೆಗೂ  ಇರಲಿಲ್ಲ. ಹಾಗೇನಾದರೂ ಗೊತ್ತಾಗಿಬಿಟ್ಟಿದ್ದರೆ ಅವರ ಕಣ್ಣಿನಲ್ಲಿ ಸದಾನಂದರು ಏಕದಂ ವಿಲನ್ ಅಗಿಬಿಡುತ್ತಿದ್ದರು. ಎಲ್ಲರೂ ಹಿಡಿಹಿಡಿ ಶಾಪ ಹಾಕುತ್ತಿದ್ದುದರಲ್ಲಿ ಸಂದೇಹವೇ ಇರಲಿಲ್ಲ. ಇವೆಲ್ಲಾ ಸದಾನಂದರಿಗೆ ಗೊತ್ತಿತ್ತು. ಅದಕ್ಕೇ ಇಷ್ಟು ವರ್ಷ ಅದನ್ನೆಲ್ಲ ಒಳಗೇ ಹಿಡಿದಿಟ್ಟಿದ್ದರು. ಮೂವತ್ತು ವರ್ಷಗಳಿಂದ ಯಾವುದಕ್ಕೆ ಹಿಂದೇಟು ಹಾಕುತ್ತ ಬಂದಿದ್ದರೋ ಅದನ್ನಿಂದು ಎದುರಿಸಲು ಹೊರಟಿದ್ದರು.

ನಿತ್ಯದ ಕೆಲಸಗಳನ್ನು ಯಾಂತ್ರಿಕವಾಗಿ ಮಾಡುತ್ತಿದ್ದರೂ ಕ್ರಿಯೆಗಳ ಹಿಂದಿನ ಭಾವ ಬತ್ತಿ ಹೋಗಿತ್ತು. ಸೋಂಕು ರೋಗ ಬಡಿದ ಗಿಡದ ಎಲೆಗಳಂತೆ ಮನಸ್ಸು ಮುರುಟಿ  ಹೋಗಿತ್ತು.

ನೆನ್ನೆ ರಾತ್ರಿಯ ಶ್ಯಾಮಲೆಯ ಫೋನು ಅವರ ಇಂದಿನ ಸಿದ್ಧತೆಗೆ ಕಾರಣವಾಗಿತ್ತು. ಆಕೆಯ ಎರಡು ವಾಕ್ಯಗಳು ಅವರನ್ನಿಂದು ಈ ಸ್ಥಿತಿಗೆ ತಂದಿದ್ದವು. ಆ ಮಾತುಗಳು ಕಳೆದ ರಾತ್ರಿಯಿಂದಲೂ ಕಿವಿಯಲ್ಲೇ ರಿಂಗಣಿಸುತ್ತಿದ್ದವು.

`ನಾಳೆ ಹತ್ತು ಗಂಟೆಗೆ ಫೋನು ಮಾಡುತ್ತೇನೆ. ನಾನು ಹೇಳಿದ ಕಡೆ ಬರಬೇಕು’

ಶ್ಯಾಮಲೆಯ ಮಾತುಗಳು ಮತ್ತೆ ಮಾರ್ದನಿಸಿದವು!

ಸ್ನಾನ ಮುಗಿಸಿ ದೇವರ ಪೂಜೆಯಲ್ಲಿ ತೊಡಗಿಸಿಕೊಂಡಿದ್ದರೂ ಸದಾನಂದರಿಗೆ ಆಸಕ್ತಿ ಇರಲಿಲ್ಲ. ಯಾಂತ್ರಿಕವಾಗಿ ಪೂಜೆ  ನಡೆಯುತ್ತಿತ್ತು.  ಪೂಜೆಯ ಭೌತಿಕ ಕ್ರಿಯೆಗಳನ್ನು ಮುಗಿಸಿ ಮನಸ್ಸಿನಲ್ಲಿ ದೇವರನ್ನು ಸ್ಮರಿಸಲು ಕಣ್ಣು ಮುಚ್ಚಿದಾಗ ಅಡಿಗೆ ಮನೆಯಲ್ಲಿ ಅತ್ಯಂತ ಕರ್ಕಷ ಶಬ್ದ ಮಾಡಿತ್ತು ಮಿಕ್ಸರ್.  ಇಷ್ಟು ಸಾಲದೆಂಬಂತೆ ಹಾಲಿನಲ್ಲಿ ಫೋನು ರಿಂಗಾಯಿತು. ಯಾರೋ ಹೋಗಿ ಫೋನೆತ್ತಿದರು.

“ತಾತ ಫೋನು ಬೇಗ ಬನ್ನಿ”

 ಮಿಕ್ಸರಿನ ಶಬ್ದವನ್ನು ಮೀರಿ ಫೋನು ಬಂದಿರುವ ವಿಷಯ ತಾತನನ್ನು ತಲುಪಲೆಂದು ಮೊಮ್ಮಗ ಪ್ರಶಾಂತ ತಾರಕ ಸ್ವರದಲ್ಲಿ ಕೂಗಿದ. ಸದಾನಂದರು ಮನದ ಮಡುವಿನಲ್ಲಿ ಮೂಡಿದ್ದ ವಿಪ್ಲವದ ಅಲೆಗಳನ್ನು ಅಡಗಿಸುವ ಪ್ರಯತ್ನ ಮಾಡುತ್ತಿದ್ದಾಗಲೇ ದೊಡ್ಡ  ಬಂಡೆಯೊಂದನ್ನು ಯಾರೊ ಉರುಳಿಸಿದಂತಯಿತು.

ವ್ಯಘ್ರರಾಗಿ ದೇವರ ಕೋಣೆಯಿಂದೆದ್ದು ಈಚೆ ಬಂದರು ರಾಯರು.  ಪ್ರಶಾಂತನಾಗಲೇ ಟೀಪಾಯಿ ಮೇಲೆ ಫೋನಿಟ್ಟು ಅಂತರ್ಧಾನನಾಗಿದ್ದ. ಸದಾನಂದರಾಯರು ರಿಸೀವರನ್ನು ಕಿವಿಗಿಟ್ಟಾಗ ಇನ್ನೊಂದು ತುದಿಯಲ್ಲಿದ್ದವರು ಫೋನಿಟ್ಟಿರುವುದರ ಅರಿವಾಯಿತು.

ಉಕ್ಕಿಬಂದ ಕೋಪವನ್ನು ಅದುಮಿಡುವ ಸಾಹಸ ಮಾಡುತ್ತಾ ಸದಾನಂದರಾಯರು ಮೊಮ್ಮಗನನ್ನು ಕರೆದು, ಫೋನು ಯಾರದೆಂದು ಕೇಳಿದರು.`ಯಾರದೋ ಗೊತ್ತಿಲ್ಲ' ಎಂದು ಹೇಳಿ, ತಾತನನ್ನು ತಾನೆಂತ ಗೊಂದಲಕ್ಕೆ ಈಡುಮಾಡಿರುವೆನೆಂಬ ಕಲ್ಪನೆಯೂ ಇಲ್ಲದೆ ಆಚೆ ಓಡಿದ. ಅವನನ್ನು ಕರೆದು ಪುಸಲಾಯಿಸಿ, `ಫೋನು ಮಾಡಿದವರು ಯಾರು ? ಗಂಡಸರೋ ? ಹೆಂಗಸರೋ?' ಎಂದು ಕೇಳುವ ಸಮಯಕ್ಕೆ ಸರಿಯಾಗಿ ಮಿಕ್ಸರಿನ ಶಬ್ದ ನಿಂತಿತ್ತು.

`ಹೆಂಗಸು' ಎಂಬ ಪ್ರಶಾಂತನ ಉತ್ತರ ಮನೆಯಲ್ಲೆಲ್ಲಾ ರಿಂಗಣಗೊಂಡಂತೆ ಸದಾನಂದರಿಗನ್ನಿಸಿತು. ಈ ಮಾತು ಅಡಿಗೆ ಮನೆಯಲ್ಲಿರುವ ಸೊಸೆ ಕೇಳಿಸಿಕೊಂಡಿರುತ್ತಾಳೆ. ಅವಳಿಗೆ ಅದೆಂತ ಅರ್ಥ ಕೊಟ್ಟೀತು ಎಂಬ ವಿಷಯ ರಾಯರಲ್ಲಿ ಆತಂಕ, ಮುಜುಗರಗಳನ್ನುಂಟುಮಾಡಿತು. ಪ್ರಶ್ನೆ ಕೇಳಿದ್ದಕ್ಕೆ ಪಶ್ಚಾತ್ತಾಪ ಪಟ್ಟುಕೊಂಡು ತಮ್ಮ ರೂಮಿನತ್ತ ನಡೆದರು. ಬೇಗನೆ ಬಟ್ಟೆ ಬದಲಾಯಿಸಿ ಮತ್ತೆ ಫೋನಿನ ಬಳಿ ಧಾವಿಸಿದರು. ಕೆಲ ನಿಮಿಷಗಳ ಹಿಂದೆ ಬಂದ ಫೋನಿನ ಕರೆ ಮತ್ತೆ ಬರಬಹುದು ಎಂಬ ನಿರೀಕ್ಷೆಯಿತ್ತು.

ಆ ಫೋನು ಖಂಡಿತ ಶ್ಯಾಮಲೆಯದೆ. ಇನ್ನೊಂದು ನಿಮಿಷ ಕಾಯದಾದಳೆ ? ಹಾಗೇಕೆ ಮಾಡಿದಳು ? ಸದಾನಂದರಾಯರನ್ನು ಚಿಂತೆಗಳು ಕಸಕಿದವು. ಸೋತವರಂತೆ ಹಾಲಿನ ಸೋಫಾದಲ್ಲಿ ಕುಸಿದು ಕೂತರು.

`ಎಷ್ಟು ಹೊತ್ತಿಗೆ ಹೊರಡೋದು…’

ಸೊಸೆ ಕಾಫಿಯ ಕಪ್ಪನ್ನು ಟೀಪಾಯ್ ಮೇಲಿರಿಸುತ್ತಾ ಕೇಳಿದಳು.

`ಹತ್ತು ಗಂಟೆಗೆ’

`ನೇಪಾಳದಲ್ಲಿ ರುದ್ರಾಕ್ಷಿ ತರೋದನ್ನ ಮರೀಬೇಡಿ. ಅತ್ತೆಯವರೂ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು.  ಒಂದು ವರ್ಷದ ಹಿಂದೆ ನೀವು  ಹೊರಟಿದ್ದರೆ ಅವರೂ ಬರಬಹುದಿತ್ತು. ಈಗ ಅವರು ಅಮೆರಿಕಾದಲ್ಲಿ ನೀವು ತೀರ್ಥ ಯಾತ್ರೆಯಲ್ಲಿ…’

ಹೆಂಡತಿ  ಇದ್ದಿದ್ದರೆ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೆನೆ..? ಸದಾನಂದರು ತಮ್ಮಲ್ಲೇ ಯೋಚಿಸಿದರು. `ಯಾವ ಊರಿಗೆ ಹೋದರು ಅಲ್ಲಿಂದ ಒಂದು ಫೋನು ಮಾಡಿ. ಇನ್ನು ಹತ್ತು ನಿಮಿಷದಲ್ಲಿ ತಿಂಡಿ ರೆಡಿಯಾಗಿರುತ್ತೆ. ನಿಮಗೆ ಡ್ರಾಪ್ ಕೊಡಲಿ ಅಂತ ಕಾರನ್ನೂ ಇವರು ಬಿಟ್ಟು ಹೋಗಿದ್ದಾರೆ’

`ನಿನಗೆ ಯಾಕಮ್ಮಾ ಈ ತಾಪತ್ರಯ..? ರೈಲ್ವೇಸ್ಟೇಷನ್ ಹತ್ರ ವಿಪರೀತ ಟ್ರಾಫಿಕ್ಕು..ನಾನು ಆಟೋದಲ್ಲಿ ಹೋಗ್ತೀನಿ.. ಅವನು ಹೇಳಿದಾಂತ ನೀನೂ ಹಾಗೆ ಆಡ್ತಿದ್ದೀಯ..ಅಕಸ್ಮಾತ್ ಅವನೇನಾದ್ರೂ ಕೇಳಿದರೆ ಡ್ರಾಪ್ ಮಾಡಿದೆ ಅಂತ ಹೇಳಿಬಿಡು’

ಸೊಸೆ ಅದಕ್ಕೆ ಒಪ್ಪಿದಂತೆ ಕಂಡಿತು. ಆಕೆ ಒಳಗೆ ತೆರಳಿದಳು.

ಸದಾನಂದರು ಕಾಫಿ ಗುಟುಕರಿಸುತ್ತಾ ವೃತ್ತ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದರೂ ಮನಸ್ಸು ಫೋನಿನ ಕಡೆಗೇ ಇತ್ತು. ಆಗ ಬಂದ ಫೋನು ಶ್ಯಾಮಲೆಯದೇ! ಎಷ್ಟು ವರ್ಷ… ? ಮೂವತ್ತು ವರ್ಷ! ಹೌದು ಮೂ..ವ…ತ್ತು ವರ್ಷಗಳು.  ಮೂವತ್ತು ವರ್ಷಗಳ ಅವಧಿಯಲ್ಲಿ ಅಗಾಗ ಉಕ್ಕಿ ಹರಿಯುವ ನದಿಯಂತೆ ತನ್ನ ಬದುಕಿನಲ್ಲಿ ಒಳಬಂದು, ಹೊರಗೆ  ಹೋಗುತ್ತಿದ್ಡವಳು ಈಗ ಮತ್ತೆ ಸಿಕ್ಕಿದ್ದಾಳೆ. ಬಹುಶಃ ಇದು ಕೊನೆಯ ಭೇಟಿ ಇದ್ದೀತು! ಅದು ಆಕೆಯದೇ ಫೋನು. ಬೇರೆ ಇನ್ಯಾರೂ ಆಗಿರಲು ಸಾಧ್ಯವೇ ಇಲ್ಲ. ಆಕೆಯ ಸ್ವಭಾವ ತನಗೆ ಗೊತ್ತಿಲ್ಲವೆ ? ಗಟ್ಟಿ ನಿಲುವಿನ ಶ್ಯಾಮಲೆ ಬದಲಾಗಲು ಸಾಧ್ಯವೇ ಇಲ್ಲ.

ಇನ್ನು ಹತ್ತು ಹದಿನೈದು ನಿಮಿಷಗಳಲ್ಲಿ ಸೊಸೆ ತಿಂಡಿ ತಂದು ಕೊಡುತ್ತಾಳೆ. ಅದನ್ನು ಮುಗಿಸಿದ ನಂತರ ತನ್ನ ನಾವೆ ಸಮುದ್ರದ ತೀರಾ ವಿರುಧ್ದವಾದ ದಿಕ್ಕಿನಲ್ಲಿ ಪಯಣಿಸುತ್ತದೆ. ಈವರೆಗೆ ಹಿಡಿಯದ ದಿಕ್ಕು ಅದು. ಶ್ಯಾಮಲೆಯ ಒಂದು ಮಾತು ಅವರನ್ನು ಈ ವಿಪರೀತವಾದ ನಿರ್ಧಾರಕ್ಕೆ ತಂದು ನಿಲ್ಲಿಸಿತ್ತು.

ಚಿತ್ತ ಭಿತ್ತಿಯಲ್ಲಿ ಚಿತ್ರಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದವು ಹಳೆಯ ನೆನಪುಗಳು ಇನ್ನೂ ಸ್ಪಷ್ಟತೆಯನ್ನು ಕಳೆದುಕೊಳ್ಳದಿರುವ ಬಗೆಗೆ ಸದಾನಂದರಿಗೆ ಅಚ್ಚರಿಯಾಯಿತು. ಮೂವತ್ತು ವರ್ಷಗಳು ಕಳೆದಿದ್ದರೂ ಈ ನೆನೆಪುಗಳು ಒಂದಿಷ್ಟೂ ಮಾಸಿಲ್ಲ! ಇದಕ್ಕೆ ಕಾರಣ ಶ್ಯಾಮಲೆಯೋ ? ಇಲ್ಲಾ ತನ್ನ ನೆನಪಿನ ಶಕ್ತಿಯೋ ? ಹಸಿರಾಗಿ ಉಳಿದಿರುವ ಈ ನೆನಪಿಗೆ ಶ್ಯಾಮಲೆಯೂ ಕಾರಣವಲ್ಲ, ತನ್ನ ನೆನೆಪಿನ ಶಕ್ತಿಯೂ ಕಾರಣವಲ್ಲ  ಬದಲಿಗೆ ತನ್ನ ಮತ್ತು ಶ್ಯಾಮಲೆಯ ನಡುವಣ ಗಾಢವಾಗಿದ್ದ ಸಂಬಂಧ ಎನಿಸಿತು ಸದಾನಂದರಿಗೆ. ಅದಕ್ಕಾಗಿಯೇ ತನಗೆ ಶ್ಯಾಮಲೆಯ ನೆನಪು … ! ಶ್ಯಾಮಲೆಗೆ ತನ್ನ ನೆನಪು!

ಆ ದಿನ ..! ತನ್ನ ಅಧ್ಯಾಪಕ ವೃತ್ತಿಯ ಮೊದಲನೆಯ ದಿನ ! ಬಡತನದೊಂದಿಗೆ ಹೋರಾಟದ ಕೊನೆಯ ದಿನ!  ಬಡತನವೇ ವಿಜೃಂಭಿಸಿದ್ದ ಜೀವನಕ್ಕೆ ವಿದಾಯ ಹೇಳಿದ  ದಿನ! ತನ್ನ ಓದಿಗೆ ಹಣ ನೀಡಲಿಚ್ಛಿಸದ ಅಣ್ಣ-ಅತ್ತಿಗೆಯರ ಮೇಲೆ ಸಮರ ಸಾರಿ, ಕಂಡವರ ಬೇಡಿ ಉಚಿತ ವಿಧ್ಯಾರ್ಥಿನಿಲಯಗಳಲ್ಲಿ ಹಸಿವು ತಣಿಸಿಕೊಂಡು ಎಂ.ಎ ಪದವಿಯ ಗರಿಯನ್ನು ತಲೆಗೆ ಸಿಕ್ಕಿಸಿಕೊಂಡು, ಸಾರ್ಥಕತೆಯ ನಿಟ್ಟುಸಿರಿಟ್ಟಿದ್ದೆ! ಮುಂದೊಮ್ಮೆ ಕಾಲೇಜು ಅಧ್ಯಾಪಕನ ಕೆಲಸದ ಆರ್ಡರು! ಸಿಕ್ಕಾಗ ಚಂದ್ರನ ಮೇಲೆ ಮೊದಲ ಹೆಜ್ಜೆ ಇಟ್ಟ ನೀಲ್ ಆರ್ಮ್‍ಸ್ಟ್ರಾಂಗ್‍ಗೆ ಆದಂತ ಹೆಮ್ಮೆ! ಯಶಸ್ಸಿನ ಪುಲಕ!

ತಾನು ಅಧ್ಯಾಪಕ ವೃತ್ತಿ ಆರಂಬಿಸಿದ ಮೊದಲ ದಿನದ, ಮೊದಲ ಕ್ಲಾಸಿನ ಬಿ.ಎ ವಿಧ್ಯಾರ್ಥಿನಿ ಶ್ಯಾಮಲೆ.

ಫೋನು ರಿಂಗಾದಾಗ ಸದಾನಂದರು ಕುಳಿತಲ್ಲೇ ಮೆಟ್ಟಿಬಿದ್ದರು! ನಾಗಾಲೋಟದಲ್ಲಿ ಓಡುತ್ತಿದ್ದ ನೆನೆಪಿನ ಕುದುರೆಗಳ ಜೀನು ಎಳೆದು ನಿಲ್ಲಿಸಿದಂತಾಯಿತು. ಆತುರದಿಂದ ಫೋನಿನತ್ತ ಧಾವಿಸಿ ರಿಸೀವರ್ ಎತ್ತಿದರು. ಕಿವಿಗಿಟ್ಟು ಕ್ಕೊಳ್ಳುತ್ತಿದ್ದಂತೆಯೇ ಅದು ಸ್ಥಬ್ದವಾಯಿತು!

ನೆನಪಿನ ಗುಂಗಿನಲ್ಲಿಯೇ ಇದ್ಡ ಸದಾನಂದರು ಸ್ವಸ್ಥಾನಕ್ಕೆ ಮರಳಿದರು. ನವೆಯನ್ನುಂಟುಮಾಡುವ ಗಾಯವನ್ನು ತುರಿಸುವಂತೆ ಹಳೆಯ ನೆನಪುಗಳನ್ನು ತುರಿಸತೊಡಗಿದರು.

ಮೊದಲು ತನ್ನೆಡೆಗೆ ಆಕರ್ಷಿತಳಾದವಳು ಶ್ಯಾಮಲೆ. ನಂತರವೇ ತಾನು ಅವಳನ್ನು ಗಮನಿಸಿದ್ದು! ಬದುಕಿನ ಯುದ್ಧದಲ್ಲಿ ಅನವರತ ಹೋರಾಡಿ ಜರ್ಝರಿತನಾಗಿದ್ದ ತನಗೆ ಪ್ರೀತಿ ಪ್ರೇಮಗಳ ಸೆಳೆತದ ಕಾಟವಿರಲಿಲ್ಲ!

ಉಂಬುವುದು, ಉಡುವುದೇ ಚಿಂತೆಯಾಗಿರುವಷ್ಟು ಕಾಲ ಇಂತ ಬಾಧೆಗಳು ತನ್ನನ್ನು ಕಾಡಿರಲಿಲ್ಲ. ಕೆಲಸದ ತಂಗಾಳಿ ಬೇಸತೊಡಗಿದಾಗಲೇ ಸುತ್ತಲಿನ ಜಗತ್ತು ಅರಿವಾದದ್ದು. ಹರೆಯದಲ್ಲಿ ತಾನು ಲಕ್ಷಣವಾಗಿರುವೆ ಎಂದು ತನ್ನ ರೂಪಿನ ಬಗೆಗೆ ಅಸ್ಪಷ್ಟ ಅರಿವಿತ್ತು. ತಾನು ಚೆಲುವ ಎಂಬುದು ತಿಳಿದಿರಲಿಲ್ಲ. ತನ್ನೊಡನೆ ಓದುವ ಹುಡುಗರಲ್ಲೆಲ್ಲಾ ತಾನು ಚೆನ್ನಾಗಿರುವೆ ಎಂಬುದು ಮಾತ್ರ ತಿಳಿದಿತ್ತು.

ಅಧ್ಯಾಪಕನ ವೃತ್ತಿ ಜೀವನ ಶುರುವಾದಾಗ ವಿಧ್ಯಾರ್ಥಿ ಸಮೂಹ `ಆಹಾ’ ಎಂದು ಉದ್ಗರಿಸುವಷ್ಟು ಚೆನ್ನಾಗಿರುವೆ ಎಂಬುದರ ಅರಿವಾಗಿತ್ತು. ಮನಃಪೂರ್ವಕವಾಗಿಯೇ ಇದನ್ನು ಹೆಚ್ಚು ಚಿಂತಿಸದೆ ತನ್ನ ಕರ್ತವ್ಯದಲ್ಲಿ ನಿರತನಾಗಿದ್ದೆ. ಊರಿನಲ್ಲಿ ಬೆಳೆದು ನಿಂತಿರುವ ತಂಗಿಯರ ಕರ್ತವ್ಯವನ್ನು ಅಣ್ಣನ ಪತ್ರಗಳು ಸದಾ ಎಚ್ಚರಿಸುತ್ತಲೇ ಇದ್ದವು. ಹಿಮಾಲಯದಂತೆ ಅಗಾಧವಾಗಿ ನಿಂತ ಕರ್ತವ್ಯದ ನಡುವೆ, ತನ್ನ ರೂಪು ತನಗೆಂದೂ ಹೆಮ್ಮೆಯನ್ನುಂಟು ಮಾಡಿರಲಿಲ್ಲ.

ಈ ಸಂದರ್ಭದಲ್ಲೇ ಶ್ಯಾಮಲೆಯ ಮೊದಲ ಪ್ರೇಮ ಪತ್ರ ಬಂದಿದ್ದು! ಆ ಪತ್ರ ಅವನ ಕೋಪ ಉಕ್ಕೇರಿಸಿದ್ದರ ಜೊತೆಗೇ ಭಾವನೆಗಳನ್ನು ಮೀರಿ ಸುಖ ಕೊಟ್ಟಿದ್ದವು. ಸಾಕಷ್ಟು ಸಿರಿವಂತ ಮನೆತನದ ಹುಡುಗಿ ಶ್ಯಾಮಲೆ, ಚೆಲುವ ಸದಾನಂದರ ಪ್ರೇಮ ಯಾಚಿಸಿದ್ದು ಅತ್ಯಂತ ಸಹಜವಾದ ವಿಷಯವಾಗಿತ್ತು.  ವಿವೇಕ ಬೇಡವೆನ್ನುತ್ತಿದ್ದರೂ ಒಲುಮೆಗಾಗಿ ತುಡಿಯುತ್ತಿದ್ದ ಮನಸ್ಸು ಶ್ಯಾಮಲೆಯ ಪ್ರೇಮದ ಇನಿದನಿಗೆ ವಸಂತದ ಕೋಗಿಲೆಯಾಗಿ ಹಾಡಿತ್ತು. ಹಾಗೆ ನೋಡಿದರೆ ಸದಾನಂದರಿಗೆ ರೂಪಿನಲ್ಲಿ ಹೊಂದುವ ಹುಡುಗಿಯೇನಲ್ಲ ಶ್ಯಾಮಲೆ. ಸದಾನಂದ ಸ್ಫುರದ್ರೂಪಿಯಾದರೆ, ಎಣ್ಣೆಗೆಂಪಿನ ತ್ವಚೆಯ ಶ್ಯಾಮಲೆ ಸಾದಾರಣ ರೂಪಿನ ಹೆಣ್ಣು. ಸದಾನಂದನನ್ನು ಆಕರ್ಷಿಸಿದ ಅಂಶಗಳೆಂದರೆ ಶ್ಯಾಮಲೆಯ ಉಕ್ಕುವ ಯೌವನ, ತುಂಟತನ ಚೆಲ್ಲುವ ಮೋಹಕ ನಗು, ಕುಶಲ ಅಕ್ಕಸಾಲಿಯೊಬ್ಬ ಹಾರಕ್ಕೆ ಮುತ್ತುಗಳನ್ನು ಜೋಡಿಸದಂತ ಅವಳ ದಂತಪಂಕ್ತಿ! ಅವಳು ಮನದುಂಬಿ ನಕ್ಕರೆ ತುಟಿಗಳು ಗುಲಾಬಿಯ ಪಕಳೆಗಳಂತೆ ಅರಳುತ್ತಿದ್ದವು! ಇದಕ್ಕೆ ಪೂರಕವಾಗಿದ್ದವು ಅವಳ ಸ್ವಚ್ಛ ಬಟ್ಟಲು ಕಂಗಳು.

ಮರಳುಗಾಡಿನಲ್ಲಿ ನೀರಿಗಾಗಿ ಹಾತೊರೆಯುತ್ತಿದ್ದವನತ್ತ ಉಕ್ಕಿ ಹರಿವ ನದಿಯಂತೆ ಭರದ ಯೌವನದ ಶ್ಯಾಮಲೆ ಬಂದಿದ್ಡಳು! ಶ್ಯಾಮಲೆ ನೆರೆ ಬಂದ ನದಿಯಂತೆ ಹರಿದು ಸದಾನಂದನನ್ನು ಪ್ರೇಮ ಜಲದಲ್ಲಿ ಮುಳುಗಿಸಿಬಿಟ್ಟಿದ್ದಳು.

ಮುಂದೆ ಸಹಜವಾಗಿ ಮದುವೆಯ ಮಾತು ಬಂದಿತ್ತು. ಕಾಲೇಜಿನ ಆವರಣದ ಎಲ್ಲ ವಸ್ತುಗಳು ಅವರಿಬ್ಬರ ಪ್ರೇಮವನ್ನು ಸಾರಿ ಹೇಳುತ್ತಿದ್ದವು. ಊರಿನವರೆಲ್ಲರ ಬಾಯಿಯಲ್ಲಿ ಇವರಿಬ್ಬರ ಹೆಸರುಗಳು ಹರಿಯುತ್ತಿದ್ದವು.

ಶ್ಯಾಮಲೆಯ ಮನೆಯವರಿಗೆ ಈ ವಿಷಯ ತಿಳಿದಿರುವಂತಿತ್ತು.  ಹಲವಾರು ಸಲ ಸದಾನಂದರು ಶ್ಯಾಮಲೆಯ ಮನೆಗೆ ಹೋಗಿದ್ಡ ಸಂಧರ್ಭದಲ್ಲಿ ಅವರ ಮನೆಯವರು ಈ ವಿಷಯ ಗೊತ್ತಿದ್ದೂ ಗೊತ್ತಿಲ್ಲದವರಂತೆ ಇದ್ದರು. ಶ್ಯಾಮಲೆ ಕಿರಿಯ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ಡಳು. ಅವಳ ಅಣ್ಣನೊಬ್ಬ ದೂರದ ದುಬೈನಲ್ಲಿ ಉನ್ನತ ಹುದ್ದೆಯಲ್ಲಿದ್ದ. ಊರಿನಲ್ಲಿ ತಾಯಿ ಮತ್ತು ತಂಗಿಯರ ಬಗೆಗೆ ಕಾಳಜಿ ವಹಿಸಿದ್ದರಿಂದ ಅವರ ಮನೆಯಲ್ಲಿ ಸುಭಿಕ್ಷತೆ ತಾಂಡವವಾಡುತ್ತಿತ್ತು. ಮೊದಲೇ ಸಾಕಷ್ಟು ಶ್ರೀಮಂತರ ಮನೆಯಲ್ಲಿ ಇನ್ನಷ್ಟು ಶ್ರೀಮಂತಿಕೆ ಸೇರಿದಂತಾಗಿತ್ತು.

ಶ್ಯಾಮಲೆ ಮದುವೆಯ ಮಾತು ಪ್ರಸ್ತಾಪಿಸಿದಾಗ ಸದಾನಂದ ತನ್ನ ತಂಗಿಯರ ಮದುವೆಯ ಸಮಸ್ಯೆಯ ಹಚ್ಚಡವನ್ನು ಬಿಚ್ಚಿಡುತ್ತಿದ್ದ. ಮೂವರು ತಂಗಿಯರ ಮದುವೆ ಮಾಡುವಲ್ಲಿ ಆರು ವರ್ಷಗಳ ಕಾಲ ಗತಿಸಿತ್ತು. ಇಷ್ಟರಲ್ಲಿ ಶ್ಯಾಮಲೆ ಡಿಗ್ರಿ ಮುಗಿಸಿ ಸ್ನಾತಕೋತ್ತರ ಪದವಿಯನ್ನು ಸಹ ಮುಗಿಸಿ ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲವು ವರ್ಷಗಳು ಶ್ಯಾಮಲೆ ಮತ್ತು ಸದಾನಂದ ದೂರವಿರಬೇಕಾದದ್ದು ಅನಿವಾರ್ಯವಾಗಿತ್ತು.

ಪ್ರೇಮದ ಕಾವು ಇಳಿದಿತ್ತು.  ಯೌವನದ ಉತ್ಸಾಹದ ಚಿಲುಮೆಯೀಗ ಮೊದಲಿನ ವೇಗದಲ್ಲಿ ಉಕ್ಕುತ್ತಿರಲಿಲ್ಲ. ದಭದಭೆ ಕ್ರಮೇಣ ಮೌನ ನದಿಯಾಗಿ ಹರಿದಿತ್ತು. ಕತ್ರ್ವವ್ಯದ ಗಾಣದ ನೊಗ ಹೊತ್ತಿದ್ದ ಸದಾನಂದನಿಗೆ ಪ್ರೇಮದ ಉತ್ಸಾಹ ಬತ್ತತೊಡಗಿತು. ಅವನಿಗೀಗ ಅವಳಲ್ಲಿ ಹಲವಾರು ಲೋಪ, ದೋಶಗಳು ಕಂಡಿದ್ಡವು. ಹಿಡಿದಿದ್ದನ್ನು ಬಿಡದ ಛಲಗಾತಿ ಶ್ಯಾಮಲೆ. ಅವಳ ಹಠದ ಪ್ರವೃತ್ತಿ ಸದಾನಂದನಿಗೆ ಸಹ್ಯವಾಗುತ್ತಿರಲಿಲ್ಲ. ರೂಪಿನಲ್ಲಿಯಂತೂ ಆಕೆ ಯಾವ ರೀತಿಯಲ್ಲಿಯೂ ತನಗೆ ಸಾಮ್ಯಳಲ್ಲ ಎಂಬ ಅಂಶ ಅವನಿಗೆ ಪ್ರಧಾನವಾಗಿ ಕಾಣತೊಡಗಿತ್ತು. ತಾನು ಹೇಗೆ ಇವಳಲ್ಲಿ ಅನುರಕ್ತನಾದೆ ಎಂದು ಆಶ್ಚರ್ಯಪಡತೊಡಗಿದ್ದ.  ಅದರೆ ಈ ಸಮಯಕ್ಕಾಗಲೇ ಶ್ಯಾಮಲೆ ಸದಾನಂದನಿಗೆ ತೀರಾ ಅನಿವಾರ್ಯವಾದ ಅವಶ್ಯಕತೆಯಾಗಿದ್ದಳು. ಒಳ್ಳೆಯ ಕೆಲಸ, ಕೈತುಂಬಾ ಸಂಬಳ, ಖರ್ಚು ಕಡಿಮೆಯ ಶ್ಯಾಮಲೆ ಸದಾನಂದನ ತಂಗಿಯರ ಮದುವೆಗೆಂದು ಧಾರಾಳವಾಗಿ ಹಣ ಸಹಾಯ ಮಾಡಿದ್ಡಳು. ಅವಳಿಂದ ದೂರ ಸರಿಯಬೇಕೆಂದು ಸದಾನಂದನಿಗೆ ಅನ್ನಿಸಿದಾಗಲೆಲ್ಲಾ ಹಣದ ಅನಿವಾರ್ಯತೆ ಬಂದು ಮತ್ತೆ ಶ್ಯಾಮಲೆ ಹತ್ತಿರ ಹೋಗಲೇಬೇಕಾಗುತ್ತಿತ್ತು!

ಕೊನೆಯ ತಂಗಿಯ ಮದುವೆ ಸದಾನಂದನಿಗೆ ಒಂದು ಸಮಸ್ಯೆಯೇ ಅಗಿಬಿಟ್ಟಿತ್ತು. ರೂಪಿನಲ್ಲಿ ಯಾರನ್ನೂ ಮೆಚ್ಚಿಸಲಾರದ ತಂಗಿಗೆ ಕೊನೆಗೂ ಒಂದು ಗಂಡು ಸಿಕ್ಕಾಗ ಒಂದು ಪಂಥಾಹ್ವಾನವನ್ನು ಕೂಡ ಎದುರಿಸಬೇಕಾಯಿತು.  ಕೊಟ್ಟು ತೆಗೆದುಕೊಳ್ಳುವ ಸಂಬಂಧ! ತನ್ನ ತಂಗಿಯನ್ನು ವರಿಸುವ ಹುಡುಗನ ತಂಗಿಯನ್ನು ತಾನು ಮದುವೆಯಾಗಬೇಕಿತ್ತು. ಶ್ಯಾಮಲೆಯನ್ನು ದೂರ ಮಾಡಲು ಬಯಸುತ್ತಿದ್ದ ಮನಸ್ಸು ಈ ನೆಪವನ್ನು ಬಳಸಿಕೊಂಡು ಮದುವೆ ಒಪ್ಪಿಗೆಯನ್ನು ನೀಡುವಂತೆ ಮಾಡಿತ್ತು! ವಿಷಯ ತಿಳಿದಾಗ ಶ್ಯಾಮಲೆ ಅಗ್ನಿಪರ್ವತವಾಗುವಳೆಂದು ನಿರೀಕ್ಷಿಸಿದ್ದ ಸದಾನಂದ ! ಚಂಡಮಾರುತವಾಗಿ ಅಪ್ಪಳಿಸಬಹುದೆಂದಿದ್ದರು! ಆದರೆಶ್ಚರ್ಯವೆಂಬಂತೆ ಶ್ಯಾಮಲೆ ತುಟಿ ಬಿಗಿದು, ಭುಗಿಲೆದ್ದ ಭಾವನೆಗಳಿಗೆ ನಗುವಿನ ಲೇಪ ಹಚ್ಚಿ ಸದಾನಂದನಿಗೆ ಮತ್ತು ಅವನ ಪತ್ನಿಗೆ ಭಾರೀ ಉಡುಗೊರೆಯನ್ನು  ಕೊಟ್ಟು ಶುಭ ಕೋರಿದ್ದಳು.

ಸದಾನಂದರು ದೊಡ್ಡ ನಿಟ್ಟುಸಿರಿಟ್ಟಿದ್ದರು! ಇಲ್ಲಿಗೆ ತನ್ನ ಮತ್ತು ಶ್ಯಾಮಲೆಯ ಸಂಬಂಧದಲ್ಲಿನ ಕೊನೆಯ ಕೊಂಡಿ ಕಳಚಿತೆಂದುಕೊಂಡಿದ್ದರು. ಹೆಂಡತಿ, ಹೊಸ ಸಂಸಾರ, ಮುಂದೆ ಪುತ್ರೋತ್ಸವ ಮುಂತಾದುವುಗಳಲ್ಲಿ ಕೆಲ ಕಾಲ ಸದಾನಂದರಿಗೆ ಶ್ಯಾಮಲೆಯ ನೆನಪು ಮಾಸಿತ್ತು. ಅಂಥಾ ಸಂದರ್ಭದಲ್ಲಿ ಶ್ಯಾಮಲೆಗೆ ಸದಾನಂದರಿದ್ದ ಊರಿಗೆ ವರ್ಗವಾಗಿತ್ತು! ಬದುಕಿನ ಘಟನೆಗಳು ನಿಯಂತ್ರಣಕ್ಕೆ ಸಿಕ್ಕದಿದುಕ್ಕೆ ಸದಾನಂದರಿಗೆ ನೋವಾಗಿತ್ತು. ಯಾರು ತನ್ನ ಬದುಕಿನ ಹಗ್ಗವನ್ನು ಜಗ್ಗುತ್ತಿರುವವರು ? ಇವೆಲ್ಲಕ್ಕೂ ಏನು ಕಾರಣ ? ಬಹುಶಃ ಶ್ಯಾಮಲೆಯನ್ನು ತಾವು ಪ್ರೀತಿಸದೆ ಇದ್ದರೆ ಇಂದು ತಾನಿಂತ ಸ್ಥಿತಿಯಲ್ಲಿ ಇರುತ್ತಿದ್ದೆನೆ? ಮನದ ಮೂಲೆಯಲ್ಲಿನೆ ಅಳುಕು…ಎಲ್ಲವೂ ಸಹಜವಾಗಿಲ್ಲವೆಂಬ ಕೊರಗು! ನಿಂತ ಕಾಲಡಿಯಲ್ಲೇ ಇರುವಂತೆ ಭಾಸವಾಗುವ ದೊಗರು! ಹಾಗಾದರೆ ತಾನು ತಪ್ಪು ಮಾಡಿದೆನೆ ? ಪ್ರೀತಿಯಿಲ್ಲದೆ ಸೊರಗಿದ ತಾನು ಶ್ಯಾಮಲೆಯ ಪ್ರೇಮದ ಸೆಳೆತಕ್ಕೆ ಸಿಕ್ಕಿದ್ದು ತೀರಾ ಸಹಜವಲ್ಲವೆ? ಹಾಗಾದರೆ ಇಲ್ಲಿ ತಪ್ಪು ಏನಿದೆ? ಪ್ರೀತಿಸಿದ್ದು ತಪ್ಪಲ್ಲ! ಆದರೆ ಆಕೆಯನ್ನು ಮದುವೆಯಾಗದಿರಲು ಹೂಡಿದ ಆಟ…ತಪ್ಪು! ಅವರ ಮನಸ್ಸು ಚುಚ್ಚಿತು! ಇಂತ ಚಿಂತನೆ ನಡೆಯುತ್ತಿರುವುದು ಇದೇನು ಮೊದಲ ಸಲವಾಗಿರಲಿಲ್ಲ! `ಆದರೆ ತನ್ನ ತಂಗಿಯ ಮದುವೆಯಾಗಬೇಕಾದರೆ…ತಾನು ಶ್ಯಾಮಲೆಯನ್ನು ತೊರೆಯಲೇಬೇಕಾಗಿತ್ತು! ಹೌದೆ…ಇದಕ್ಕೆ ಬೇರೆ ಪರಿಹಾರ ಇರಲಿಲ್ಲವೆ ? ಮನಸ್ಸಿನಲ್ಲಿ ಮಿಕ್ಸರು ವೇಗದಲ್ಲಿ ಮಥಿಸಿತು!

                `ತಾತ ತಿಂಡಿಗೆ ಬರಬೇಕಂತೆ’

                ಬುರ್ರೆಂದು ಶಬ್ದ ಮಾಡುತ್ತಾ ಕಾರು ಡ್ರೈವ್ ಮಾಡುವಂತೆ ಬಂದು ಹೇಳಿ ಬಂದಂತೆ ಓಡಿ ಹೋದ ಮೊಮ್ಮಗನನ್ನೇ ನೋಡುತ್ತಾ ತುಂಡಾದ ನೆನಪಿನ ಎಳೆಯನ್ನು ಹಿಡಿಯುವ ಸಾಹಸ ಮಾಡಿದರು ಸದಾನಂದರು. ಕರೆದೊಡನೆ ಹೋಗದಿದ್ದರೆ ಇನ್ನೊಂದು ಕರೆ ಬಂದೀತೆಂಬ ಹೆದರಿಕೆ ಅವರನ್ನು ಡೈನಿಂಗ್ ಟೇಬಲ್ ಮುಂದೆ ಕೂgಸಿತ್ತು.

ಮಲ್ಟಿನ್ಯಾಷನಲ್ ಕಂಪೆನಿಯೊಂದರಲ್ಲಿ ಜನರಲ್ ಮ್ಯಾನೇಜರ್ ಹುದ್ದೆಯಲ್ಲಿರುವ ಮಗ ವಿನಯ ಕೆಲಸಕ್ಕೆ ಆಗಲೇ ಕೆಲಸಕ್ಕೆ ತೆರಳಿದ್ದು ಒಂದು ರೀತಿಯಲ್ಲಿ ಒಳ್ಳೆಯದೆ ಆಗಿತ್ತು. ಇಲ್ಲವೇ ಅವನೂ ಸೊಸೆ ಇಬ್ಬರೂ ರೈಲು ಹತ್ತಿಸುತ್ತೇವೆಂದು ಬಂದಿದ್ದರೆ ಲೆಕ್ಕಾಚಾರವೆಲ್ಲಾ ತಪ್ಪಾಗುತ್ತಿತ್ತು.         

                ಫೋನು ರಿಂಗಾಯಿತು. ಸದಾನಂದರು ಮೆಟ್ಟಿಬಿದ್ದರು!

                `ನಾನು ಫೋನು ನೋಡ್ತೀನಿ..’ಎಂದು ಅವಸರದಲ್ಲಿ ಮೇಲೆದ್ದರು.

                `ನಾನು ನೋಡ್ತೀನಿ..ನೀವ್ಯಾಕೆ ಹೋಗ್ತೀರಿ..ತಿಂಡಿ ತಿನ್ನೋದನ್ನ ಬಿಟ್ಟು?’

ಸೊಸೆ ಫೋನಿನತ್ತ ಧಾವಿಸಿದಾಗ ಸದಾನಂದರ ಎದೆ ತಿದಿಯಾಗಿತ್ತು! ಅದು ಶ್ಯಾಮಲ ಆಗಿದ್ದರೆ? ಸೊಸೆ ನಗುತ್ತಾ ಫೋನಿನಲ್ಲಿ ಮಾತಾಡುವುದು ಕೇಳಿದಾಗ ಅವರಿಗೆ ನೆಮ್ಮದಿಯಾಗಿತ್ತು. ಅದು ಶ್ಯಾಮಲ ಅಲ್ಲ! ಅದು ಶ್ಯಾಮಲಳಾಗಿದ್ದರೆ ವಿಮಲ ಹೀಗೆ ನಗುತ್ತಾ ಮಾತಾಡ್ತಿರಲಿಲ್ಲ!

                `ಮಾವಯ್ಯಾ, ನಿಮ್ಮ ಮಗಳು ರಚನಾ ಅಮೆರಿಕದಿಂದ..’

                ಸೊಸೆ ಫೋನು ಕೈಗೆ ಕೊಟ್ಟಳು.

ಮಗಳು ಮತ್ತು ಹೆಂಡತಿ ಸುಖ ಪ್ರಯಾಣ ಕೋರಿದರು. ಅಲ್ಲಿ ತೆಗೆದುಕ್ಕೊಳ್ಳಬೇಕಾದ ಎಚ್ಚರಿಕೆಯ ಕ್ರಮಗಳನ್ನು ಮತ್ತೆ ತಿಳಿಸಿದರು. ಜೊತೆಗೆ ಆಗಾಗ್ಗೆ ಫೋನು ಮಾಡಬೇಕೆಂದು ನೆನೆಪಿಸಿದರು. ಎಲ್ಲದಕ್ಕು ಹೂಗುಟ್ಟಿದರು ಸದಾನಂದರು.

ರಚನಾಳ ಮದುವೆಯಲ್ಲಿ ಶ್ಯಾಮಲಾ ಮಾಡಿದ ಖರ್ಚಿಗೆ ಸದಾನಂದರಿಗೆ ದಿಗಿಲಾಗಿತ್ತು! ಯಾಕಾದರೂ ಈ ಹೆಣ್ಣು ಹೀಗೆ ತ್ಯಾಗ ಮಾಡುತ್ತಿದ್ದಾಳೋ..? ಎಂದು ಹಲವು ಸಲ ಮನಸ್ಸಿಗೆ ನೋವಾಗಿತ್ತು. ಅವಳ ಈ ಎಲ್ಲ ತ್ಯಾಗದ ಹಿಂದೆ ತನ್ನ ಸ್ವಾರ್ಥವಿತ್ತು ಜೊತೆಗೆ ಅಸಹಾಯಕತೆಯೂ ಇತ್ತು. ತನ್ನೊಬ್ಬನಿಂದಲೇ ಇದೆಲ್ಲವೂ ಸಾಧ್ಯವಾಗಿದ್ದರೂ ಆ ಪ್ರಮಾಣದಲ್ಲಿ ಆಗುತ್ತಿರಲಿಲ್ಲ. ಎಲ್ಲ ಭಲೇ ಎನ್ನುವಂತೆ ಮದುವೆ ಮುಗಿದಿತ್ತು. ನಂತರ ವಿದೇಶದಲ್ಲಿ ಉನ್ನತ ವ್ಯಾಸಂಗದ ಪ್ರಸಂಗ! ಆಗಲೂ ಶ್ಯಾಮಲ! ಎಲ್ಲಾ ಹಂತದಲ್ಲೂ ಶ್ಯಾಮಲಾ. ಆದರೆ ತಾನು ಶ್ಯಾಮಲಳನ್ನು ತೀರಾ ಹತ್ತಿರ ಬರದಂತೆ ದೂರವಿಟ್ಟಿದ್ದೆ. ಹರೆಯದ ಸಂಬಂಧ ಹರೆಯಕ್ಕಷ್ಟೇ ಉಳಿದು, ಈಗಿನದು ಬರಿಯ ಭಾವನಾತ್ಮಕ ಸಂಬಂಧ! ಹೌದೆ..? ಅಂತ ಭಾವನೆ ನಿನ್ನಲ್ಲಿ ಉಳಿದಿದೆಯೆ..? ಒಳ ಮನಸ್ಸು ಚುಚ್ಚಿತು. ಸದಾನಂದ ತಮ್ಮನ್ನು ತಾವು ವಂಚಿಸುವುದು ಸಾಧ್ಯವಿರಲಿಲ್ಲ. ನಿಜಕ್ಕೂ ಅವರಲ್ಲಿ ಶ್ಯಾಮಲಾ ಬಗ್ಗೆ ಅಂತ ಭಾವನೆಗಳೇನೂ ಉಳಿದಿರಲಿಲ್ಲ. ಬದಲಿಗೆ ಸ್ವಾರ್ಥವಿತ್ತು! ಆಕೆ ತಾನಾಗೇ ತನ್ನ ಎಲ್ಲ ಕಷ್ಟಗಳಿಗೂ ನೆರವು ನೀಡಲು ಬಂದಿರುವಾಗ ಬೇಡ ಎನ್ನದೆ ನೆರವು ಪಡೆದಿದ್ದ ಸ್ವಾರ್ಥವಿತ್ತು. ಜೊತೆಗೆ ಇದಕ್ಕೆ ತನ್ನ ಮಡದಿಯ ಸಮ್ಮತಿಯೂ ಇತ್ತು. ಅವಳದೂ ಸ್ವಾರ್ಥವೇ! ಇಲ್ಲಿ ನಿಸ್ವಾರ್ಥದ ಸೇವೆ ಶ್ಯಾಮಲಾಳದು ಮಾತ್ರ!

ಮದುವೆಗೆ ಮುನ್ನ ತಾನು ಲಕ್ಷ್ಮಿಗೆ ಎಲ್ಲವನ್ನೂ ಹೇಳಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿತ್ತು. ಇಲ್ಲದೆ ಇದ್ದರೆ ತನ್ನ ಸಂಪರ್ಕೆಕ್ಕೆ ಬರುತ್ತಿದ್ದ ಶ್ಯಾಮಲಾಳನ್ನು ಯಾರೆಂದು ಹೇಳಲು ಸಾಧ್ಯವಿತ್ತು? ಒಂದು ವೇಳೆ ಗುಟ್ಟಿನಲ್ಲಿಟ್ಟಿದ್ದರೆ, ಸಂಬಂಧದ ಸ್ವರೂಪ ಕೇಳಿದ್ದರೆ ಏನೆಂದು ಹೇಳಲು ಸಾಧ್ಯವಿತ್ತು? ಅಷ್ಟಂತೂ ನೆಟ್ಟಗಿನ ಕೆಲಸವಾಗಿತ್ತು. ಆದರೂ ತನ್ನಲ್ಲಿ ಅಪರಾಧಿ ಪ್ರಜ್ಞೆ ಘನೀಕರಿಸುತ್ತಿತ್ತು. ಶ್ಯಾಮಲ ದೂರವಾದ ದಿನದಿಂದಲೂ ಆ ಅಪರಾಧಿತನ ಸ್ವಲ್ಪಸ್ವಲ್ಪವಾಗಿ ಹೊಗೆಯಾಡಿ ನಂತರ ಘನಪದಾರ್ಥವಾಗಿತ್ತು! ಶ್ಯಾಮಲಾಳ ಪ್ರತಿಯೊಂದು ಸಹಾಯದ ಋಣದ ಜೊತೆಜೊತೆಗೇ ಅಪರಾಧಿತನ ಮತ್ತಷ್ಟು ಬೆಳೆಯುತ್ತಾ ಹೋಗಿತ್ತು.

ವರ್ಷದ ಹಿಂದೆ..ರಚನಾಳ ಮದುವೆಯ ಸಂದರ್ಭದಲ್ಲಿ ಶ್ಯಾಮಲಾ ಅಚಾನಕ್ ಒಂದು ಮಾತು ಕೇಳಿದ್ದಳು. ಆ ಮಾತಿಗೆ ಸದಾನಂದನ ಜಂಘಾಬಲ ಉಡುಗಿಹೋಗಿತ್ತು! ಬಹಳ ಸರಳವಾಗಿ ಕೇಳಿದ್ದಳು ಶ್ಯಾಮಲಾ.

ಮದುವೆ ಮುಗಿದಿತ್ತು. ಸದಾನಂದರಿಗೆ ಬಹಳ ತೃಪ್ತಿಯಾಗಿತ್ತು. ನೆಂಟರಿಷ್ಟರೆಲ್ಲಾ ಬೀಳ್ಕೊಂಡು ಹೊರಡುತ್ತಿದ್ದರು. ಕಲ್ಯಾಣಮಂಟಪದ ದ್ವಾರದಲ್ಲಿ ನಿಂತದ್ದರು ಸದಾನಂದ. ಊರಿಗೆ ಹೊರಟು ನಿಂತ ಶ್ಯಾಮಲಾ ಬಂದಿದ್ದಳು.

                `ನಿನ್ನ ಋಣ ನಾನು ಹೇಗೆ ತೀರಿಸಲಿ..?’ ಸದಾನಂದ ಕಣ್ಣಲ್ಲಿ ಕೃತಜ್ಞತೆಯ ಕಣ್ಣೀರು ತುಂಬಿಕೊಂಡು ಕೇಳಿದ್ದರು.

                `ಆ ಮನಸ್ಸು ಇದೆಯೆ..?’ ಶ್ಯಾಮಲಾ ಕೇಳಿದ್ದಳು.

                `ಇದೆಂತಾ ಮಾತು..? ಖಂಡಿತಾ ನಿನ್ನ ಋಣ ಸಂದಾಯ ಮಾಡುವ ಮನಸ್ಸಿದೆ..’

                `ಹಾಗಾದರೆ ಈ ಕೊರಳಿಗೊಂದು ತಾಳಿ ಕಟ್ಟಿ. ಇನ್ನೊಂದು ವರ್ಷ ನಿನಗಾಗಿ ಕಾಯುತ್ತೇನೆ ಸದಾ..ಇಷ್ಟು ವರ್ಷ ಸಮಾಜದಲ್ಲಿ ಘನತೆಯಿಲ್ಲದ ಹೆಣ್ಣಿನಂತೆ ಬದುಕಿದೆ. ಈ ಬದುಕಿಗೆ ನೀನು ಘನತೆ ತಂದುಕೊಡಬೇಕು. ಇದು ನಿನ್ನ ಕರ್ತವ್ಯ ಕೂಡ..ಆದರೆ ಇದಕ್ಕಿ ನಿನ್ನನ್ನು ನಾನು ಬಲವಂತ ಮಾಡುವುದಿಲ್ಲ. ಈ ಸಲಹೆ ನನ್ನದು ಅಷ್ಟೆ ನಿನಗೆ ಒಪ್ಪಿಗೆಯಾಗದಿದ್ದರೆ ಉಳಿದ ಬದುಕನ್ನೂ ಹೀಗೇ ಕಳೆದುಬಿಡುವೆ..ಇನ್ನೆಷ್ಟು ವರ್ಷ..?’

ಮುಖ ತಿರುಗಿಸಿಕೊಂಡು ಶ್ಯಾಮಲ ಕಣ್ಣಲ್ಲಿ ನೀರು ಒರೆಸಿಕೊಂಡು ಹೊರಟಿದ್ದಳು. ಆ ಕ್ಷಣದಿಂದ ಸದಾನಂದರು ಬದಲಾಗಿ ಹೋಗಿದ್ದರು. ಶ್ಯಾಮಲೆಯ ಇಡೀ ಸಂಪಾದನೆಯನ್ನೇ ತನ್ನ ಸ್ವಾರ್ಥಕ್ಕೆ ಬಳಸಿಕೊಂಡೆನಲ್ಲ.. ಅದಕ್ಕೆ ಪ್ರತಿಫಲವಾಗಿ ತಾನು ಆಕೆಗೆ ಏನು ಕೊಟ್ಟೆ..? ಇದು ಸ್ವಾರ್ಥದ ಪರಮಾವಧಿ ಎನ್ನಿಸಿ ಕೊನೆಗೆ ಆಕೆಯ ಒಂದೇ ಒಂದು ಕೋರಿಕೆಯನ್ನು ನೆರವೇರಿಸಲು ಸಿದ್ಧವಾದರು. ಆ ಕೆಲಸಕ್ಕೆಂದೇ ಈ ಸಿದ್ಧತೆ!

ಸದಾನಂದರು ತಮ್ಮ ಸೇವೆಯಿಂದ ರಿಟೈರ್ ಆದ ಒಂದು ವರ್ಷದ ನಂತರ ಎರಡನೆಯ ಮದುವೆಗೆ ಸಿದ್ಧರಾಗಿದ್ದರು. ತನ್ನ ಇಡೀ ಬದುಕನ್ನು ಚಂದನದೋಪಾದಿಯಲ್ಲಿ ತನಗಾಗಿ ತೇಯ್ದುಕೊಂಡ ಹೆಣ್ಣಿಗೆ ಸಮಾಜದಲ್ಲಿ ಘನತೆ, ಗೌರವ ಕೊಡಲು ಸಿದ್ಧರಾಗಿದ್ದರು. ಈ ಕ್ರಿಯೆಯಿಂದ ತನ್ನ ಪರಿಸ್ಥಿತಿ ಏನಾಗಬದುದೆಂಬುದರ ಅರಿವು ಅವರಿಗೆ ಸ್ಪಷ್ಟವಾಗಿತ್ತು. ತನ್ನ ಮನೆಯವರ ದೃಷ್ಟಿಯಲ್ಲಿ ತಾನು ಅತ್ಯಂತ ಕೀಳಾದ ವ್ಯಕ್ತಿಯಾಗುತ್ತೇನೆ. ಇಳಿವಯದಲ್ಲಿ ಮದುವೆ..ಅದೂ ಎರಡನೆಯದು, ಹೆಂಡತಿ ಜೀವಂತ ಇರುವಾಗಲೇ ಮದುವೆಯಾದುದಕ್ಕೆ ಬಗ್ಗೆ ಸಮಾಜ ಕೆಟ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು! ಹೀನಾಯವಾಗಿ ಕಾಣಬಹುದು! ಇಷ್ಟೆಲ್ಲಾ ಆಗಬಹುದಾದರೂ ಅದಃನ್ನು ಎದುರಿಸಲು ಈಗ ಸದಾನಂದರು ಸಿದ್ಧರಾಗಿದ್ದರು! ಇದುವರೆಗೂ  ಸ್ವಾರ್ಥದ ದೃಷ್ಟಿಯಲ್ಲೇ ಮಾಡಿದ ಎಲ್ಲಕ್ಕೂ ಈಗ ಸರಿತೂಗಿಸುವಂತ ಕೆಲಸಕ್ಕೆ ಸಿದ್ಧರಾಗಿದ್ದಾರೆ. ಈಗ ಬರಬೇಕಾಗಿದ್ದು ಒಂದು ಫೋನ್ ಕಾಲ್ ಅಷ್ಟೆ! ಅದೂ ಶ್ಯಾಮಲೆಯಿಂದ! ಅವಳು ಹೇಳುವ ಜಾಗಕ್ಕೆ ತಮ್ಮ ಗಂಟು ಮೂಟೆಯೊಂದಿಗೆ ಹೊರಡಲು ಸಿದ್ಧರಾಗಿ ಕಾಯುತ್ತಿದ್ದಾರೆ!

                ಹಿಂದೆ ಬಂದ ಎರಡು ಫೋನುಗಳು ಆಕೆಯದೇ ಇರಬೇಕು! ಸ್ವಲ್ಪದರಲ್ಲಿ ಅದನ್ನು ತೆಗೆದುಕ್ಕೊಳ್ಳಲಾಗಲಿಲ್ಲ! ಶ್ಯಾಮಲ  ತಡವನ್ನೇಕೆ ಮಾಡುತ್ತಿದ್ದಾಳೆ..?

                ತಿಂಡಿ ಮುಗಿದಿತ್ತು. ಸೊಸೆ ಮತ್ತೊಮ್ಮೆ ಕಾಫಿ ತಂದಿತ್ತಳು. ಮಾವ ಏನಾದರೂ ಹೇಳಬಹುದೆಂದು ಕಾದು ನಿಂತಳು.

                `ಮಾವಯ್ಯ ನಿಮ್ಮ ಮಾತ್ರೆ ಡಬ್ಬಾ ಎಲ್ಲಾ ತಗೊಂಡಿದ್ದೀರ ತಾನೆ..? ಮುಗಿದ ಹಾಗೆ ಮತ್ತೆ ತಗೊಳ್ಳೋದು ಮರಿಬೇಡಿ..’

                ಸದಾನಂದ ತಲೆಯಾಡಿಸಿದರು.

                ಫೋನು ರಿಂಗಾಯಿತು. ಸೊಸೆ ಫೋನೆತ್ತಿದಳು.

                `ಯಾರೋ…ಹೆಂಗಸು ನಿಮ್ಮನ್ನೇ ಕೇಳ್ತಿದ್ದಾಳೆ’

                `ಟೂರಿಸ್ಟ್ ಆಫೀಸು ಹುಡುಗಿ ಇರಬೇಕು’ ಹೊಡೆದುಕ್ಕೊಳ್ಳುವೆ ಎದೆಯನ್ನು ಸ್ಥಿಮಿತಕ್ಕೆ ತಂದುಕ್ಕೊಳ್ಳುತ್ತಾ ಸದಾನಂದರು ಫೋನಿಗೆ ಕಿವಿ ಹಚ್ಚಿದರು.

                ಹೌದು, ಅದು ಶ್ಯಾಮಲೆಯದೇ ಫೋನು!  ಆಕೆಯ ಮಾತನ್ನು ಎಚ್ಚರಿಕೆಯಿಂದ ಕೇಳುತ್ತಾ ಪ್ರತಿ ಮಾತಿಗೂ `ಸರಿ’ ಎನ್ನುತ್ತಾ ಸದಾನಂದರು ಫೋನು ಕೆಳಗಿಟ್ಟರು.

                `ನಾನಿನ್ನು ಹೊರಡ್ತೀನಮ್ಮಾ..ಕರೆ ಬಂದಿದೆ..’

             *****

                `ಇದೀಗ ನೀವು ಕುಡಿದದ್ದು ಏನು ಗೊತ್ತಾ…’

                ಹೊಟೆಲಿನ ರೂಮಿನಲ್ಲಿ ಶ್ಯಾಮಲೆ ಕೇಳಿದಳು.

                `ಏನಾದರಾಗಲೀ..ಇಡೀ ಜೀವನ ನಿನ್ನಿಂದ ಉಪಕೃತನಾಗಿದ್ದೇನೆ. ನನ್ನ  ಎಲ್ಲ ಕರ್ತವ್ಯಗಳನ್ನೂ ನೀನಿಲ್ಲದೆ ನಾನು ಸಮರ್ಥನಾಗಿ ಭರಿಸಲು ಸಾಧ್ಯವೇ ಇರಲಿಲ್ಲ.. ನೀನು ಏನು ಕೊಟ್ಟರೂ ಅದು ನನ್ನ ಹಿತಕ್ಕಾಗಿಯೇ..’

                ಶ್ಯಾಮಲೆ ನಕ್ಕಳು. ನಗುವಿನಲ್ಲಿ ಸಹಜತೆ ಇರಲಿಲ್ಲ.

                `ನಾವಿಬ್ಬರೂ ಈಗ ಕುಡಿದ ಹಣ್ಣಿನ ರಸದಲ್ಲಿ ವಿಷ ಸೇರಿಸಿದ್ದೆ! ನನಗೆ ಬೇರೆ ದಾರಿ ಇಲ್ಲ. ನೀವೆಂದೂ ನನ್ನನ್ನು ವಿಧಿವತ್ತಾಗಿ ಮದುವೆಯಾಗಲಾರಿರಿ! ಇಡೀ ಜೀವನ ಕಾದು ನೋಡಿದೆನಲ್ಲ..? ಅದಕ್ಕೆ ಈಗಿರೋದೊಂದೇ ದಾರಿ…ಆತ್ಮಹತ್ಯೆ! ಈ ತಾಳಿಯೊಂದು ಕಟ್ಟಿಬಿಡಿ..ಆಮೇಲೆ ನಾವು ಈ ಲೋಕದಲ್ಲೇ ಇರೋದಿಲ್ಲ..’

                ಶ್ಯಾಮಲೆ ಬಾವುಕಳಾಗಿದ್ದಳು, ಆವೇಶದಿಂದ ಮಾತಾಡುತ್ತಿದ್ದಳು.

                ಸದಾನಂದರಿಗೆ ದಿಗ್ಭ್ರಮೆಯಾಗಲಿಲ್ಲ! ಸಾವಿನ ಭೀತಿಯಾಗಲಿಲ್ಲ! ಹೆದರಿ ಚಿಟ್ಟನೆ ಚೀರಲಿಲ್ಲ! ಅವರು ಯಾವುದಕ್ಕಾದರೂ ಸಿದ್ಧರಾಗಿದ್ದರು.

                `ಯಾಕೆ ಹೆದ್ರಿಕೆಯಾಗಲಿಲ್ಲವೆ..? ಡಾಕ್ಟರಿಗೆ ಫೋನು ಮಾಡೋದಿಲ್ಲವೆ…? ಸಾವು ನಿಮಗೇನೂ ಅನ್ನಿಸುತ್ತಾ ಇಲ್ಲವೆ..?’

                ಶ್ಯಾಮಲೆ ಬೆರಗಾಗಿ ಕೇಳಿದಳು! ಸದಾನಂದರ ನಿರ್ಲಿಪ್ತತೆ ಅವಳಿಗೆ ಅಚ್ಚರಿಯಾಗಿತ್ತು!

                `ಇಲ್ಲ…ಎಲ್ಲ ಅನೂಹ್ಯ ಪ್ರೇಮಗಳೂ ಹೀಗೆ ಕೊನೆಯಾಗುವುದರಲ್ಲಿ ಅಚ್ಚರಿಯೇನಿಲ್ಲ! ಸಾವಿನ ಬಗ್ಗೆ ನನಗೆಂದೂ ಭಯ ಇರಲೇ ಇಲ್ಲ. ಜೊತೆಗೆ ರಚನಾಳ ಮದೆವೆಯಲ್ಲಿ ನೀನಾಡಿದ ಮಾತಿಗೆ ನಾನು ಸಿದ್ಧನಾಗಿದ್ದೆ!’

                `ಅಂದರೆ…?’

                `ಎಲ್ಲರನ್ನೂ ಎದುರಿಸಿ ಮದುವೆಯಾಗಲು ಸಿದ್ಧನಾಗಿ ಬಂದಿದ್ದೇನೆ..’

                `ಅಂದರೆ..? ವಿಧಿವತ್ತಾಗಿ ಮದುವೆಯಾಗಿ ನನ್ನೊಂದಿಗೆ ಬದುಕಲು ಸಿದ್ಧರಿದ್ದೀರಾ..? ಅಯ್ಯೋ ದೇವರೇ…ಮೊದಲೇ ಹೇಳ ಬಾರದಿತ್ತೆ…? ಮದುವೆಯಾಗಲು ನೀವು ಒಪ್ಪುವುದಿಲ್ಲವೆಂದು ನಾನು ಇದಕ್ಕೆ ಕೈಹಾಕಿದೆ.. ಓ ಗಾಡ್..! ನಾನು ಬದುಕಬೇಕು..ಸದಾನಂದ್..ಸದೂ… ಎಲ್ಲಾ ಮುಗಿಯುವ ಮುಂಚೆ ಏನಾದ್ರೂ ಮಾಡಿ..ಪ್ಲೀಸ್..ನಾವು ಬದುಕೋಣ..’

                ಶ್ಯಾಮಲೆ ಗಾಬರಿಯಿಂದ ತೊದಲಲು ಶುರು ಮಾಡಿದಳು.

                ಸದಾನಂದರು ಫೋನಿನತ್ತ ಧಾವಿಸಿದರು!


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ತಿರುಪತಿ ಭಂಗಿ
ತಿರುಪತಿ ಭಂಗಿ
6 years ago

ಕತೆ ಹಿಡಿಸಿತು ಸರ್ 

shreemanth
shreemanth
6 years ago

Good story sir.

Rajendra B. Shetty
Rajendra B. Shetty
6 years ago

ಕಥೆ ಚೆನ್ನಾಗಿದ್ದರೂ, ಎಲ್ಲೋ ಎಡವಿದೆ ಅನಿಸಿತು. ಎಲ್ಲಿ ಎಂದು ನನಗೆ ಗೊತ್ತಾಗುತ್ತಿಲ್ಲ. ಉತ್ತಮ ಕಥೆ. ಕೊನೆ ಬದಲಿಸ ಬಹುದಿತ್ತು. ಒಬ್ಬ ಮನುಷ್ಯ ಅಷ್ಟು ಸ್ವಾರ್ಥಿ ಮತ್ತು ನಿರ್ಲಿಪ್ತನಾಗಬಲ್ಲನೆ?

3
0
Would love your thoughts, please comment.x
()
x