“ನಾನು ಹೊರಟಿದ್ದೇನೆ” ಅಂತ ಅವಳ ಮೆಸೆಜ್ ಬಂದೊಡನೆ ತರಾತುರಿಯಲ್ಲಿ ಟವಲ್ಲು, ಅಂಡರಿವೆಯನ್ನ ಹಿಡಿದುಕೊಂಡೋಗಿ ಬಚ್ಚಲ ಬಾಗಿಲು ಜಡಿದುಕೊಂಡ. ಗಡ್ಡ ಬಿಟ್ಟುಕೊಂಡು ಹೋಗುವುದೋ, ಟ್ರಿಮ್ ಮಾಡಿಕೊಂಡು ಹೋಗುವುದೋ ಎಂಬ ಮೂರು ದಿನಗಳ ಜಿಜ್ಞಾಸೆಗೆ ಕತ್ತರಿ ಬಿದ್ದು ಅವನ ಹರಕಲು ಗಡ್ಡು ನೂರು ತುಕುಡಾಗಳಾಗಿ ಉದುರಿಕೊಂಡಿತ್ತು. ಏಳು ವರ್ಷಗಳ ನಂತರ ಅವಳು ಸಿಗುತ್ತಿರುವುದು. ಅಂದು ಹನಿಮಳೆಯೊಳಗೆ ಕಣ್ಣು ತೀಡುತ್ತಾ ಹೋದವಳ ಬೆನ್ನು ನೋಡುತ್ತಾ ನಿಂತವನು ಅಲ್ಲಿಯೇ ಸ್ತಬ್ಧವಾಗಿದ್ದ. ಕಣ್ಣೀರಿಡುತ್ತಾ ಅವಳು ಸೊರಗುಟ್ಟಿದ ಸದ್ದು ಇನ್ನೂ ಕಿವಿಯ ಗೋಡೆಗಳಿಗೆ ಗುದ್ದಿಕೊಳ್ಳುತ್ತಾ ಹೊರಬರಲಾಗದೇ ಒಳಗೆ ಉಳಿದಿತ್ತು.
ಸ್ನಾನ ಮಾಡಿ ನೆಟ್ಟಗೆ ಕನ್ನಡಿ ಮುಂದೆ ಬಂದವನಿಗೆ ಮೊದಲು ಕಾಣಿಸಿದ್ದು ಕಿವಿಯೊಳಗಿದ್ದ ಸೋಪಿನ ನೊರೆ. “ಥತ್…” ಎಂದು ಸುತ್ತಿಕೊಂಡಿದ್ದ ಟವಲ್ಲಿನಲ್ಲೇ ಸೀಟಿದ. ಅವನ ಮೈಯ್ಯಿಂದ ಹೊರಡುತ್ತಿದ್ದ ಬಿಸಿನೀರ ಹಬೆಗೆ ಕನ್ನಡಿ ಬೆವೆತಿತ್ತು. ಏಳು ವರ್ಷ ಮುಗಿದಿದ್ದವು. ಮಾತಿಲ್ಲ ಕಥೆಯಿಲ್ಲ. ದೂರ ಹೋಗುವ ಮುಂಚೆ ಜಗಳವು ಇಲ್ಲ. ಇಂದು ಸಿಕ್ತಾಳೆ. ಅದ್ರೆ ಗಡ್ಡ ಬಿಟ್ಕೊಂಡು ತೀರಾ ಮಾಮೂಲಾಗೆ ಹೋದ್ರೆ, ‘ಕರುಣೆ, ಕನಿಕರ ಗಿಟ್ಟಿಸೋಕೆ ಹೀಗೆ ಬಂದಿದಾನೆ ಅಂದ್ಕೊಂಡ್ರೆ..? ಕಳೆ ಕೊಳೆ ತೊಳ್ಕೊಂಡು ನೀಟಾಗಿ ಹೋದ್ರೆ ನನ್ನ ಮರತೆ ಬಿಟ್ನ,’ ಅಂದ್ಕೊತಾಳೆ. ತೂ ಈ ಹುಡ್ಗಿರಿಗೆ ಹೆಂಗೆ ಇದ್ರು ಕಷ್ಟ. ಹೀಗೆಂದುಕೊಂಡೆ ಮೂರು ದಿನ ಕಳೆದು ಹರುಕು ಗಡ್ಡಕ್ಕೆ ಗತಿ ಕಾಣಿಸಿದ್ದ. ಮುಂದಿನದ್ದು ಬಟ್ಟೆ. ಯಾವ ಬಟ್ಟೆ ಹಾಕೊಂಡೋಗ್ಲಿ ಅಂತ ಅಂದ್ಕೋಳಕು ಮುಂಚೆನೆ ಉತ್ತರ ರೆಡಿ ಇತ್ತು. ಒಗೆದಿರೋದು ಒಂದೇ ಜೊತೆ ಬಟ್ಟೆ. ಉಳಿದವೆಲ್ಲ ಗೋಡೆಯ ಗೂಟಕ್ಕೆ ನೇತು ಬಿದ್ದು ಬಾಯಿ ಕಿಸಿದು ನಗುತ್ತಿದ್ದವು. ಬೇರೆ ಆಯ್ಕೆಗಳಿಲ್ಲದಿದ್ದರಿಂದ ನೆಮ್ಮದಿಯಿಂದ ಪ್ಯಾಂಟಿನೊಳಗಿಳಿದು, ಶರ್ಟಿನೊಳಗೆ ತೂರಿಕೊಂಡ.
ಅತ್ತ ಅವಳದ್ದು ಉಯ್ಯಾಲೆ ಮೇಲೆ ಕುಳಿತ ಮನಸ್ಸು. ಹಳೆಯ ದಿನಗಳು. ಮಸುಕಾದ ಕಣ್ಣಲ್ಲಿ ನೋಡಿದ ಅವನ ಕೊನೆಯ ಬಿಂಬ. ಏಳು ವರ್ಷಗಳಲ್ಲಿ ಅವನು ಏರಿದ ಮೆಟ್ಟಿಲುಗಳು, ಅವನಲ್ಲಾಗಿದ್ದ ಬದಲಾವಣೆಗಳನ್ನು ಊಹಿಸುತ್ತಾ ಅದೇನೋ ತೆರನಾದ ಹೆಮ್ಮೆ. ನಿಜ, ಅವನು ತುಂಬಾನೇ ಬದಲಾಗಿದ್ದ. ಮಾತುಗಳು ಮೃದುವಾಗಿದ್ದವು. ಅಷ್ಟು ಒರಟನಿದ್ದ. ಈಗ ಮೆಚ್ಚುಗೆ ಪಡೆದ ಬರಹಗಾರನಂತೆ, ಅವನು ಪುಸ್ತಕ ಹಿಡಿದಿದಂತು ನೋಡಿಯೇ ಇರಲಿಲ್ಲ. ಹೇಗೆ ಈಗಾದ. “ಅವನೊಬ್ಬ ಸ್ಲಂ ಕಣೆ” ಅಂತ ಅವಳಣ್ಣನೇ ಹೇಳಿದ್ದ ಮಾತು ಕಿವಿಯಲ್ಲಿ ಹಾದು ಹೋಗಿತ್ತು. ಯಾಕೋ ಕಣ್ಣಲ್ಲಿ ಮತ್ತೆ ನೀರು ತುಂಬಿಕೊಂಡಿತು. ಅವನನ್ನು ನೋಡಿದರೇ ನಾನು ನಾನಾಗಿಯೇ ಉಳಿಯಬಲ್ಲನೇ ಎಂಬ ಅನುಮಾನ. ಭಯ. ಮೊದಲೇ ಅತಿಭಾವುಕತೆಯ ಹುಡುಗ. ಅತ್ತು ಕರೆದು ಕಣ್ಣೀರಾದರೇ ಕರಗದೇ ಇರುವುದೇ ಮನಸ್ಸು. ಸಿಗು ಅಂತ ಕೇಳಿ ತಪ್ಪು ಮಾಡಿದೆ ಅನ್ನೋ ಲೆಕ್ಕಚಾರ. ಕಡೆಗೊಂದು ಮೊಂಡು ಧೈರ್ಯ. ಕೈಯ್ಯಲಿದ್ದ ಬ್ಯಾಗನ್ನು ಎದೆಗೊತ್ತಿಕೊಂಡಳು.
ಕಳೆದಿಷ್ಟು ವರ್ಷದಲ್ಲಿ ಅವಳಿಲ್ಲದೇ ಅವನು ಅನುಭವಿಸಿದ ಸಂಕಟ ಹೇಳಕೊಳ್ಳಬೇಕೆಂಬ ಲೆಕ್ಕಚಾರ ಹಾಕಿಕೊಳ್ಳುತ್ತಿದ್ದ. ನೆತ್ತಿ ಮೇಲೆ ಒದೆಬಿದ್ದು ಹೊಲಿಗೆ ಹಾಕಿದ ಗಾಯದ ಗಲೆ ತೋರಿಸಿ ತಲೆ ಸವರಿಸಿಕೊಳ್ಳಬೇಕೆಂದು, ಎಡುವಿ ಬಿದ್ದ ಮಗು ಅಮ್ಮನಿಗೆ ದಾರಿ ಮೇಲೆ ದೂರು ಹೇಳುವಂತೆ ಬಿಕ್ಕಳಿಸಿ ಅವಳ ತೊಡೆಗಳ ಮೇಲೆಯೇ ಮಲಗಿಬಿಡಬೇಕೆಂದು ಎನಿಸುತ್ತಿತ್ತು. ನಾನಿಲ್ಲದೇ ನೀ ಹೇಗೆ ಇದ್ದೆ ಎಂದು ಕೇಳಬೇಕಿಸಿತ್ತು. ಆದರೆ ಈ ಪ್ರಶ್ನೆಗಳಿಗೆಲ್ಲ ಅರ್ಥವಿದೆಯೇ..? ದಾರಿಯುದ್ದಕ್ಕೂ ಇಂತದ್ದೇ ಆಲೋಚನೆ. ಆಗಲೇ ಅವಳು ಹೇಳಿದ್ದ ಸಮಯವಾಗೇಬಿಟ್ಟಿತ್ತು. ಬಸ್ಸಿಳಿದವನು ಸರಸರ ಹೆಜ್ಜೆ ಹಾಕಿ ಅವಳು ಇಳಿದುಕೊಳ್ಳುವ ಫ್ಲಾಟ್ ಫಾರಂ ಕಡೆ ನುಸುಳಿಕೊಂಡ. ಅವಳು ಕಾಯುವವಳಲ್ಲ. ಹಾಗೆಂದು ಹಾಗೇ ಹೋಗುವವಳು ಅಲ್ಲ. ಮುನಿಸಿಕೊಂಡರೇ ಮುಗಿಸಿಯೇ ಬಿಡುವಷ್ಟು ಬಜಾರಿ. ಆದರೆ ಈಗ ಕಾಲ ಬದಲಾಗಿದೆ. ಅವಳ ಮುನಿಸಿಗೆ ಬೆಲೆಯಿಲ್ಲ. ಇವನ ಪೂಸಿ ಮಾತುಗಳಿಗು ಅರ್ಥವಿಲ್ಲ. ಸಂಬಂಧಗಳೇ ಮುರಿದುಬಿದ್ದ ಮೇಲೆ ನೆನಪುಗಳು ಸಾಮ್ರಾಜ್ಯ ಕಟ್ಟಿಕೊಂಡು ಮೆರೆಯಲಾರಂಭಿಸಿದ್ದವು. ಆ ಅನಧಿಕೃತ ಸಾಮ್ರಾಜ್ಯಕ್ಕೆ ಮತ್ತವರು ಒಗ್ಗೂಡುವ ಅವಶ್ಯಕತೆಗಳು ಇರಲಿಲ್ಲ.
ಬಂದು ನಿಂತವನಿಗೆ ಉಸಿರುಯ್ದುಕೊಳ್ಳಲು ಅವಕಾಶ ನೀಡದವಳು, ಬಸ್ಸಿನ ಕಿಟಕಿಯಲ್ಲಿ ಕಂಡಳು. ಎದೆ ಧಗ್ ಎಂದಿತ್ತು. ಸವರಿಕೊಂಡು ಸಾವರಿಸಿಕೊಳ್ಳತೊಡಗಿದ. ಅವಳಿಗೂ ಅಳುಕು. ಕಳ್ಳನೋಟ ನೋಡಿ ತಲೆ ತಗ್ಗಿಸಿಕೊಂಡೇ ಬಂದಳು. ಮೇಲಿಂದ ಕೆಳಗಿನವರೆಗೂ ದೃಷ್ಟಿ ಹಾಯಿಸಿದವನ ಕಣ್ಣುಗಳು ಅವಳ ಹೈ ಹೀಲ್ಡ್ ಚಪ್ಪಲಿಗಳ ಮೇಲೆ ನಿಂತವು. ತನ್ನ ಎತ್ತರ ಸಮರ್ಥಿಸಿಕೊಳ್ಳಲು ಅವಳ ಮಾಡುತ್ತಿದ್ದ ಕಸರತ್ತುಗಳು, ಮೊಂಡು ವಾದಗಳು ನೆನಪಾಗಿ ಪಕ್ಕನೇ ನಕ್ಕನು. ಆ ಕ್ಷಣಕ್ಕೆ ಅವನ ಮುಖ ನೋಡಿದವಳು ಸುಮ್ಮನೆ ನಗತ್ತಲೇ “ಯಾಕೋ ಲೂಜು ನಗ್ತೀಯಾ?” ಅಂದ್ಲು. “ಒಂದಿಂಚೂ ಬೆಳಿಲಿಲ್ವಲ್ಲೇ, ಕುಳ್ಳಿ” ಎಂದು ಮತ್ತೆ ನಕ್ಕನು. “ನೀನೇನ್ ಬಾರಿ ಉದ್ದ ಆಗ್ಬಿಟ್ಟಿದಿಯ”. ಕುಳಿತರು. ಕುಶಲೋಪರಿ ನಡೆದವು. ಇಬ್ಬರೂ ಕೊಂಚ ಮಾಗಿದ್ದರು. ಅವರಲ್ಲಿದ್ದ ತರಲೆಗಳು ಬಣ್ಣ ಕಳೆದುಕೊಂಡಿದ್ದವು.
“ನನ್ನ ಅಮ್ಮನ ಮೇಲೆ ಇನ್ನೂ ಕೋಪನಾ..?” ಕೇಳಿದಳು ಅವಳು. “ಕೋಪ ಏನಿಲ್ಲ, ಬೇಜಾರು ಅಷ್ಟೇ” ಇವನೆಂದ. ಮತ್ತೆ ಇಬ್ಬರೂ ಮೌನ. ಇಬ್ಬರೂ ಭಾವುಕರಾಗುತ್ತಿದ್ದಾರೇನೋ ಅನ್ನೋ ಅನುಮಾನ. ಮೌನವನ್ನ ಮುರಿದವಳು “ನನ್ ಮದ್ವೆಗೆ ಬರ್ತಿಯಾ” “ಅಯ್ಯೋ ಬೇಡಪ್ಪ, ನಿಮ್ ಮನೆಯವ್ರು ಹಿಡ್ಕೊಂಡು ನನ್ನ ಕಣ್ಣು ಕೀಳಿಸಿದ್ರೆ ಕಷ್ಟ” ಮತ್ತೆ ನಗಲಾರಂಭಿಸಿದನು. ಅವಳು ನಕ್ಕಂತೆ ಮಾಡಿದಳು. ಮತ್ತೆ ಮೌನ. ಅವರಿಗಿದ್ದ ಅರ್ಧಗಂಟೆ ಮುಗಿದುಹೋಗಿತ್ತು. ಅವಳಿಗೆಂದೇ ತಂದಿದ್ದ ಮಾತುಗಳನ್ನು ಒಳಗಿಂದ ತೆಗೆಯಲು ಅವನಲ್ಲಿ ಶಕ್ತಿಯಿಲ್ಲದಾಗಿತ್ತು. ಅದು ಅವರ ಬದುಕಿನ ಕೊನೆಯ ಬೇಟಿ ಎಂಬುದು ಅವನ ಮನಸ್ಸಿನ ತುದಿಬಾಗಿಲ್ಲಲೇ ಕುಳಿತ್ತಿತ್ತು. ಒಳಗೆ ಎಷ್ಟೇ ಗಲಿಬಿಲಿಗಳಿದ್ದರೂ ಬಾಗಿಲು ಭದ್ರವಾಗಿ ಮುಚ್ಚಿಕೊಂಡಿತ್ತು. ಇಬ್ಬರೂ ಹೊರಡಲೇಬೇಕಿತ್ತು. ಒಬ್ಬರಿಗೊಬ್ಬರು ಒಮ್ಮೆಯೂ ಮುಖತಃ ನೋಡಿಕೊಳ್ಳಲೇ ಇಲ್ಲ. “ಸರಿ ನೀನ್ ಹೊರಡು” ಎಂದಳು. “ಹೂ” ಎಂದು ಹೊರಟು ನಿಂತ. ಒಂದೆರಡು ಹೆಜ್ಜೆ ಮುಂದಿಟ್ಟ. ಹೆಜ್ಜೆ ತಡವರಿಸಲೇ ಇಲ್ಲ. ಹೆಜ್ಜೆಗಳು ಹತ್ತಾದವು, ತಿರುಗಿ ನೋಡಬೇಕೆನಿಸಲಿಲ್ಲ. ಅವನು ತಿರುಗುತ್ತಾನೆಂದು ಆಕೆ ಕಾಯುತ್ತಿದ್ದಳಾ? ಅದೂ ಅವನಿಗೇ ತಿಳಿಯಲೇ ಇಲ್ಲ. ಅವಳ ನೆನಪುಗಳು ಅವನನ್ನು ರಚ್ಚೆ ಹಿಡಿಸಿ ಅಳಿಸುತ್ತಿದ್ದವು. ಆದರೆ ಅವಳು ಹಾಗೇ ಮಾಡಲಿಲ್ಲ. ಅವಳೋದ ಮೇಲೆ ಜಗತ್ತಿನ ಕರಾಳ ಮುಖಗಳು ಕಾಣಿಸಿತೊಡಗಿದ್ದವು. ಅವುಗಳ ಮೇಲೆಲ್ಲ ಗುಡುಗುತ್ತಲೇ ಬದುಕಿದ್ದ. ಜಗತ್ತಿನ ಸಮಸ್ಯೆಗಳಲ್ಲ ಅವನದೇ ಆಗಿದ್ದವೋ, ಅಥವಾ ಅವನಿದ್ದ ಸಮಸ್ಯೆಗಳೇ ಜಗತ್ತಿಗಿದ್ದವೋ. ಒಟ್ಟಿನಲ್ಲಿ ಅವನ ಮಾತುಗಳು ಜಗತ್ತಿಗೇ ಅನ್ವಹಿಸುತ್ತಿದ್ದವು.
ಮತ್ತೆಲ್ಲಿ ಚಂಚಲಳಾಗುತ್ತೇನೋ ಎಂದು ಹೆದರಿದ್ದವಳು ನಿರಾಳವಾದಳು. ನಿಟ್ಟುಸಿರಾದಳು. ಮದುವೆಗೆ ಬಾ ಎನ್ನಲು ಧ್ವನಿ ಇಲ್ಲದವಳಾಗಿದ್ದಳು. ಸುಮ್ಮನೆ ಬಿಟ್ಟ ಕಣ್ಣು ಬಿಟ್ಟುಕೊಂಡು ಮೂಕಳಾಗಿ ಬಸ್ಸಿನ ಕಿಟಕಿಗೊರಗಿ ಕುಳಿತಳು. ಬ್ಯಾಗಿನೊಳಗಿದ್ದ ಲಗ್ನ ಪತ್ರಿಕೆ ಅವನ ಕಣ್ಣೀರ ಕುಡಿಯುವ ದಾಹವನ್ನು ತನ್ನೊಳಗೆ ಇಟ್ಟುಕೊಂಡು ತೆಪ್ಪಗೆ ಕುಳಿತಿತ್ತು.
ಇತ್ತ ಅವನು ನಡೆಯುತ್ತಲೇಯಿದ್ದಾನೆ. ವೇಗದ ಕಾಲುಗಳು ನಿಧಾನವಾಗತೊಡಗಿದವು. ವರುಷಗಳಿಂದ ಹೊತ್ತಿ ಉರಿಯುತ್ತಿದ್ದವನು ತಣ್ಣಗಾದ. ಜಗದ ಉಳುಕುಗಳು ಅಲ್ಲಿಂದ ಅವನಿಗೆ ಕಾಣಿಸಲೇ ಇಲ್ಲ. ಮುಖದಲ್ಲಿ ಮಂದಸ್ಮಿತ. ಗೀಳಿಡುತ್ತಿದ್ದ ಅವನೊಳಗಿನ ಸಮುದ್ರ ಕೂಡ ಈಗ ಮೌನ. ಮತ್ತೆಂದು ಅವನು ಸಿಡಿಯಲೇ ಇಲ್ಲ. ನಿರ್ಲಿಪ್ತನಾದ, ನಿರುತ್ತರನಾದ, ಮತ್ತೆ ಮನುಷ್ಯನಾದ. ಎಲ್ಲರೊಳಗೊಂದಾದ. ಮರೆಯಾದ.
*****
ಇಷ್ಟವಾಯಿತು …. ಶರತ್ ಜೀ ….
Hudugara lifena kathe vyathe ullidu hoda thumulagallu chenagidhe maga hinge bareyuthiru
tumba chendavada kalpane vastavakke tumba hattira vadantaha uuhe
dhanyavadagalu,
bhaski
ಸ್ಪೆಲ್ಲಿ೦ಗ್ ಮಿಸ್ಟೆಕ್ ಜಾಸ್ತಿ!!!
Super Sharath!!
Super sharath 🙂
ಚೆನ್ನಾಗಿದೆ..
Super 🙂