ನಿರಾಳ ಭಾವ: ವಸುಂಧರಾ ಕದಲೂರು

ಇಪ್ಪತ್ತಾರರ ಟಿಕೇಟಿಗೆ ನಾನು ಐದುನೂರು ರೂಪಾಯಿ ನೋಟು ಕೊಟ್ಟೆ. ಕಂಡಕ್ಟರ್ ‘ಚಿಲ್ಲರೆ ಇಲ್ವೇನ್ರಿ?’ ಗೊಣಗಾಡುತ್ತಲೇ ಚೀಟಿ ಹಿಂದೆ ನಾನೂರಎಪ್ಪತ್ನಾಲ್ಕು ಎಂಬ ಅಂಕಿಗಳನ್ನು ಗೀಚಿ ‘ಸರಿಯಾಗಿ ಚಿಲ್ಲರೆ ತರಕಾಗಲ್ವೇನ್ರೀ’ ಎನ್ನುತ್ತಾ ಟಿಕೇಟಿಕೆ ಕೈ ಚಾಚಿದ ನನ್ನ ಅಂಗೈಗೆ ತುಸು ಬಿರುಸಿನಿಂದಲೇ ತುರುಕಿ ಮುಂದೆ ಹೋದರು.

ಬಸ್ಸಿನೊಳಗಿದ್ದವರ ಮುಂದೆ ಕಂಡಕ್ಟರ್ ಹೀಗೆ ಮಾಡಿದಕ್ಕೆ ಪಿಚ್ ಎನಿಸಿದರೂ ನನ್ನದೇ ತಪ್ಪೆನಿಸಿದ್ದರಿಂದ ಸುಮ್ಮನಾದೆ. ಆದರೆ ಬೆಳಿಗ್ಗೆ ಮನೆಯಿಂದ ಹೊರಟಾಗ ಬಸ್ಸಿನಲ್ಲಿ ಹೊರಡಬೇಕಾಗುತ್ತೆ ಎಂದುಕೊಂಡಿರಲಿಲ್ಲ. ಸಮಯಕ್ಕೆ ಸರಿಯಾಗಿ ಸ್ಕೂಟರ್ ಸ್ಟಾರ್ಟೇ ಆಗಲಿಲ್ಲ. ಕ್ಯಾಬ್ ಗೆ ಬುಕ್ ಮಾಡಲು ಲಹ ಯತ್ನಿಸಿದೆ. ಅವು ನನ್ನ ಏರಿಯಾ ತಲುಪಲು ಇಪ್ಪತ್ತು ನಿಮಿಷಕ್ಕೂ ಹೆಚ್ಚಿನ ಅವಧಿ ತಗಲುವುದಾಗಿ ತೋರಿದ್ದರಿಂದ ಸುಮ್ಮನೆ ಕಾಯುವುದು ಬೇಡ ತಡವಾಗುತ್ತದೆ ಎನಿಸಿ ಆಟೋ ಹಿಡಿಯೋಣ ಎಂದು ರಸ್ತೆಗೆ ಬಂದೆ. ಹಾಗೆ ರಸ್ತೆಗೆ ಬರುವುದಕ್ಕೂ ನಾನು ಹೋಗಬೇಕಾದ ಕಡೆಗೇ ಹೋಗುವ ಬಸ್ ಬರುವುದಕ್ಕೂ ಒಂದೇ ಆಯ್ತು. ಎಷ್ಟೋ ಸಲ ಗಂಟೆಗಟ್ಟಲೆ ಕಾಯುತ್ತಿದ್ದರೂ ಬರಬೇಕಾದ ಬಸ್ಸು ಬರದೇ ವಿಧಿಯಿಲ್ಲದೇ ಆಟೋಗೆ ದಂಡತ್ತೆದ್ದದ್ದು ಇದೆ.

ಈಗ ನಿರೀಕ್ಷೆ ಇಲ್ಲದಿದ್ದರೂ ಬಸ್ ಬಂದದ್ದು ನೋಡಿ ಆಶ್ಚರ್ಯದ ಜೊತೆಗೆ ಆನಂದವೂ ಆಯ್ತು. ಆದರೆ, ಎಲ್ಲಾ ಸ್ಟಾಪ್ ಗಳಲ್ಲೂ ನಿಲ್ಲಿಸುತ್ತಾ ಹೋಗುವುದರಿಂದ ಮತ್ತೆ ನನಗೆ ಲೇಟಾಗುತ್ತೇನೋ ಎನಿಸಿ ಹತ್ತಲೋ ಬೇಡವೋ ಎಂದೂ ಅನುಮಾನಿಸುತ್ತಿದ್ದೆ. ಆದರೆ ನನ್ನ ಹತ್ತಿರವೇ ಬಸ್ ನಿಲ್ಲಿಸಿದ ಡ್ರೈವರ್ ‘ಎಲ್ಲಿಗೆ ಮೇಡಂ? ಹತ್ಕೊಳ್ಳಿ, ಬಸ್ ಖಾಲಿಯಿದೆ. ನಿಮ್ ಬೆಂಗಳೂರಲ್ಲಿ ಖಾಲಿ ಬಸ್ ಹತ್ತೋಕೂ ಕೇಳ್ಕೊಂಡು ಬಂದಿರಬೇಕು’ ಎಂದು ತಮಾಷೆ ಮಾಡಿದರು. ನಾನೂ ನಗುತ್ತಲೇ ಬಸ್ ಹತ್ತಿದ್ದೆ.

ಒಳಗೆ ಎಂಜಿನ್ ಶಬ್ದ ಬಹಳವೇ ಜೋರಾಗಿತ್ತು. ಹಾಗೇ ಹೊರಗಿನಿಂದಲೇ ಬಸ್ಸಿನೊಳಗೆ ನೋಡಿದರೆ ಡ್ರೈವರ್ ಹೇಳಿದಂತೆ ಬೆರಳೆಣಿಕೆ ಜನರಿದ್ದರು. ಮಹಿಳಾ ಸೀಟುಗಳಲ್ಲಿ ಒಂದಿಬ್ಬರು ಹುಡುಗಿಯರೂ ಒಬ್ಬ ಅಜ್ಜಿಯೂ ಕಂಡರು. ‘ಲೇಟ್ ಮಾಡ್ತೀರಾ ಸರ್? ಸ್ವಲ್ಪ ಅರ್ಜೆಂಟ್ ಕೆಲಸವಿದೆ. ಬೇಗ ಹೋಗಬೇಕು’ ಎಂದು ಹೇಳುತ್ತಲೇ ಮೆಟ್ಟಿಲು ಹತ್ತಿ ಒಳಗೆ ಕುಳಿತೆ. ‘ರಶ್ಶೇ ಇಲ್ಲ ಹತ್ತಿ ಮೇಡಂ. ಬೇಗ ಹೋಗ್ತೀನಿ’ ಡ್ರೈವರ್ ಎನ್ನುತ್ತಿದ್ದಂತೇ ಗೇರ್ ಬದಲಾವಣೆಯ ಆಣತಿಗೆ ಕಾಯುತ್ತಿದ್ದಂತಿದ್ದ ಬಸ್ ಗೇರು ಬದಲಿಸಿಕೊಂಡು ಮುಂದೆ ಚಲಿಸಿತು.

ಆ ಜಾಗದಲ್ಲಿ ನಾನೊಬ್ಬಳೇ ಹತ್ತಿದ್ದರಿಂದ, ಹಿಂದೆ ಇದ್ದ ಕಂಡಕ್ಟರ್ ಟಿಕೇಟ್ ಕೊಡಲು ಅವಸರ ತೋರಲಿಲ್ಲ. ಮುಂದಿನ ನಿಲ್ದಾಣದಲ್ಲಿ ಬೇರೆ ಒಬ್ಬ ತಾಯಿ ಮತ್ತು ಮಗು ಹತ್ತಿಕೊಂಡ ಮೇಲೆ ‘ಎಲ್ಲಿಗೆ?’ ಎಂದು ಕೇಳುತ್ತಾ ಟಿಕೇಟ್ ಮೆಷಿನ್ ಕೈಗೆತ್ತಿಕೊಂಡರು. ‘ಲಾಲ್ ಬಾಗ್ ಮೆಟ್ರೋ ಸ್ಚಾಪ್’ ಎಂದು ಹೇಳಿ ನನ್ನ ಬಳಿಯಿದ್ದ ಐದುನೂರು ರೂಪಾಯಿ ಚಾಚಿ ಹಿಡಿದೆ. ‘ ರೀ ಮೇಡಂ, ಮೆಟ್ರೋ ಟಿಕೇಟೂ ಸೇರಿಸಿ ಕೊಡ್ಬೇಕಾ? ಅಥವಾ ಲಾಲ್ ಬಾಗ್ ಎಂಟ್ರಿ ಟಿಕೇಟ್ ನೂ ಸೇರಿಸಿ ಕೊಡ್ಬೇಕಾ? ಇಪ್ಪತ್ತಾರು ರೂಪಾಯಿ ಚಿಲ್ಲರೆ ಕೊಡ್ರಿ’ ಎಂದು ಗದರುವ ದನಿಯಲ್ಲಿ ರೇಗಿದರು. ನಂಗೆ ಬೇಜಾರಾಯ್ತು. ನನ್ನ ಹತ್ತಿರ ಐದುನೂರರ ನಾಕಾರು ನೋಟು, ಎರಡುಸಾವಿರದ ಒಂದು ನೋಟು ಬಿಟ್ಟರೆ ಬೇರೆ ಚಿಲ್ಲರೆಯೇ ಇರಲಿಲ್ಲ.

‘ಸ್ಸಾರಿ, ಚಿಲ್ಲರೆ ಇಲ್ಲ.’ ಎಂದೆ ಮೆಲುವಾಗಿ. ‘ಚಿಲ್ರೆ ಇಲ್ಲಾಂದ್ರೆ ಯಾಕ್ರೀ ಬಸ್ ಹತ್ತುತ್ತೀರಾ?’ ಮತ್ತೂ ಗಟ್ಟಿಯಾಗಿ ಜೋರು ಮಾಡಿದರು. ತಪ್ಪು ನನ್ನದೇ ಆಗಿದ್ದರಿಂದ ತೆಪ್ಪಗೆ ಐದುನೂರು ನೋಟು ಹಿಡಿದು ಕುಳಿತೆೆ. ಮುಂದೆ ಹೋಗಿ ಆಗತಾನೆ ಬಸ್ಸಿನೊಳಗೆ ಹತ್ತಿದ ಹೆಂಗಸಿಗೆ ಟಿಕೇಟು ಕೊಟ್ಟು ಪುನಃ ನನ್ನ ಬಳಿಗೆ ಬಂದು ಏನೋ ಗೊಣಗೊಣ ಎನ್ನುತ್ತಾ, ಟಿಕೇಟು ಹರಿದು ಅದರ ಹಿಂದೆ ವಾಪಸ್ಸು ಮಾಡಬೇಕಾದ ಚಿಲ್ಲರೆಯ ಲೆಕ್ಕ ಬರೆದು ಕೈಗೆ ತುರುಕುತ್ತಾ ‘ಇಳಿಯುವಾಗ ಚಿಲ್ರೆ ಕೇಳಿ’ ಎಂದು ಹಿಂದೆ ಹೊರಟುಹೋದರು.

ಟಿಕೇಟು ನೋಡಿದೆ. ಇಪ್ಪತ್ತಾರು ರೂಪಾಯಿ.! ಬರೋಬ್ಬರಿ ನಾಕುನೂರ ಎಪ್ಪತ್ತ ನಾಕು ರೂಪಾಯಿ ವಾಪಸ್ಸು ಪಡೆಯಬೇಕು. ಮರೆತರೆ..?! ಅಯ್ಯೋ. ಚಿಲ್ಲರೆ ತರಬೇಕಿತ್ತು. ಕಡೇಪಕ್ಷ ಐವತ್ತರ ನೋಟು ಕೊಟ್ಟಿದ್ದರೆ ಚಿಲ್ಲರೆ ಮರೆತರೂ ಅಷ್ಟು ಬಾಧಿಸುತ್ತಿರಲಿಲ್ಲ ಎಂದು ಪೇಚಾಡಿಕೊಂಡೆ. ಮರೆಯದಿರಲು ಟಿಕೇಟನ್ನು ಸಣ್ಣಗೆ ಮಡಚಿ ಉಂಗುರಕ್ಕೆ ಸಿಕ್ಕಿಸಿಕೊಂಡೆ.

ಇನ್ನೇನು ಇಲ್ಲಿಂದ ಆರನೇ ಸ್ಟಾಪಿನಲ್ಲೇ ನಾನು ಇಳಿಯಬೇಕು. ಒಂದೆರಡು ಬಾರಿ ಹಿಂದೆ ತಿರುಗಿ ನೋಡಿದೆ. ಕಂಡಕ್ಟರ್ ನನಗೆ ಕೊಡಬೇಕಾದ ಚಿಲ್ಲರೆ ಎಣಿಸುತ್ತಿರುವರೇನೋ ಎಂದು. ಮನುಷ್ಯ ಕಣ್ಣುಮುಚ್ಚಿಕೊಂಡು ತಲೆತಗ್ಗಿಸಿದ್ದಾರೆ. ಬಸ್ಸಿನ ಓಲಾಟಕ್ಕೆ ಸಂವಾದಿಯಾಗಿ ಅವರ ತಲೆ ಮೈ ಕುಲುಕುತ್ತಿದೆ. ನನಗೆ ಎದೆ ಧಸ್ ಎಂದಿತು. ನಿದ್ರೆಯ ನಾಟಕವಾಡುತ್ತಾ ಈತ ಚಿಲ್ಲರೆ ಕೊಡುವುದನ್ನು ಮರೆತರೆ? ಎಂದು ಊಯವಾದರೂ, ನನ್ನ ಹಕ್ಕಿನ ಟಿಕೇಟ್ ಪಡೆದಿದ್ದೇನೆ. ಉಳಿದ ಚಿಲ್ಲರೆ ಅವರೇ ಕೊಡಬೇಕು. ಇದು ಅವರ ಕರ್ತವ್ಯ. ಅವರು ಮರೆತರೂ ನಾನು ಕೇಳದೇ ಬಿಡಬಾರದು. ಬಸ್ಸು ನಿಲ್ಲುವ ಕೊನೆಯ ನಿಲ್ದಾಣಕ್ಕೆ ಹೋಗಿಯಾದರೂ ನನ್ನ ಚಿಲ್ಲರೆ ವಾಪಸ್ಸು ಪಡೆಯಬೇಕು ಎಂದು ಗಟ್ಟಿಯಾಗಿ ನಿರ್ಧರಿಸಿಕೊಂಡು ಕುಳಿತೆ.

ನನ್ನ ಸ್ಟಾಪ್ ಬರುವುದಕ್ಕೂ ಕಂಡಕ್ಟರ್ ‘ಚೀಟಿ ಕೊಡ್ರಿ’ ಎಂದು ಹಿಂದಿನಿಂದ ಗಡುಸಾಗಿ ಹೇಳುವುದಕ್ಕೂ ಸರಿಹೋಯ್ತು. ಉಂಗುರಕ್ಕೆ ಸಿಕ್ಕಿಸಿಕೊಂಡಿದ್ದ ಟಿಕೇಟನ್ನು ತೆಗೆದು ಅಗಲ ಮಾಡಿ, ಕಂಡಕ್ಟರ್ ಕೈಗೆ ಇಡುತ್ತಾ, ‘ನಾನೂರಎಪ್ಪತ್ನಾಕು’ ಎಂದೆ. ಆತ ಏನೂ ಮಾತನಾಡದೆ ನೂರರ ನಾಲ್ಕು, ಐವತ್ತರ ಒಂದು, ಹತ್ತರ ಎರಡು ನೋಟುಗಳು ಹಾಗೂ ಎರಡು ರೂ ಮುಖ ಬೆಲೆಯ ಎರಡು ನಾಣ್ಯಗಳನ್ನು ಅದರ ಮೇಲಿಟ್ಟು ನನ್ನತ್ತ ಚಾಚಿದರು. ಸುಮ್ಮಗೆ ಕೈಗೆ ತೆಗೆದುಕೊಂಡವಳೇ ‘ಥ್ಯಾಂಕ್ಸ್’ ಎಂದು ನನ್ನ ಕಿವಿಗೇ ಕೇಳದ ದನಿಯಲ್ಲಿ ಉಸುರಿ ಬಸ್ಸಿನಿಂದ ಇಳಿದೆ. ಆತ ಮೋಸ ಮಾಡಬಹುದು ಎಂದು ನಾನೇ ಏನೇನೋ ಯೋಚಿಸಿದ್ದಕ್ಕೆ ನಾಚಿಕೆ ಎನಿಸಿತು.

ಆಫೀಸಿಗೆ ಹೋಗಿ ನನ್ನ ಜಾಗದಲ್ಲಿ ಕುಳಿತೆ. ಕಂಡಕ್ಟರ್ ಎಣಿಸಿಯೇ ಕೊಟ್ಟ ಚಿಲ್ಲರೆ ಸರಿಯಾಗಿದೆಯೇ ಎಂದು ಆಗಲೇ ಅವರ ಮುಂದೆಯೇ ಪುನಃ ಎಣಿಸಲು ಧೈರ್ಯ ಸಾಲದೆ, ಈಗ ಮತ್ತೊಮ್ಮೆ ಎಣಿಸತೊಡಗಿದೆ. ಸರಿಯಾಗಿತ್ತು. ಆದರೆ ಹೊಸ ನೂರರ ಮೂರು ನೋಟುಗಳ ನಡುವಲ್ಲಿ ಸೇರಿದ್ದ ಹಳೆಯ ಒಂದು ನೋಟು ವಿಶೇಷವಾಗಿ ಕಂಡಿತು. ಹಾಗೆಂದು ಅದೇನು ಖೋಟಾನೋಟು ಆಗಿರಲಿಲ್ಲ. ಬಿಳಿ ಭಾಗದಲ್ಲಿ ನೀಲಿ ಪೆನ್ನಿನಲ್ಲಿ ‘ಮರೆಯಲಾರೆ. ಕಾಯುವೆ’ ಎಂದು ಸಣ್ಣಗಿನ ಆದರೂ ದುಂಡಗಿನ ಅಕ್ಷರಗಳಲ್ಲಿ ಬರೆದಿತ್ತು. ಕೆಳಗೆ ಪಿ ಆರ್. ಎಂಬ ಇಂಗ್ಲೀಶಿನ ಇನ್ಷಿಯೆಲ್ಲು!! ‘ಅರೆ! ಇದು ಕಂಡಕ್ಟರ್ ನನಗೆ ಬರೆದಿರೋದಾ?’ ಆಶ್ಚರ್ಯದ ಜೊತೆಗೆ ಭಯವೂ ಆಯ್ತು. ಇರಲಾರದು. ಕಂಡಕ್ಟರ್ಗೂ ನನಗೂ ಪರಿಚಯವೇ ಇಲ್ಲ. ಅಲ್ಲದೆ ಇಂತಹ ಚಿಲ್ಲರೆ ಪ್ರಕರಣಗಳನ್ನು ಆತ ತನ್ನ ಸರ್ವೀಸಿನಲ್ಲಿ ಅದೆಷ್ಟು ನೋಡಿರಲ್ಲ? ಎಂದು ಸಮಾಧಾನ ಹೇಳಿಕೊಂಡೆ.

ಎಷ್ಟೇ ಸಮಾಧಾನ ಹೇಳಿಕೊಂಡರೂ ಮನಸ್ಸು ಆ ನೂರರ ನೋಟನ್ನೇ ಧ್ಯಾನಿಸುತ್ತಿತ್ತು. ಒಂದೆರಡು ಬಾರಿ ತೆಗೆದೂ ನೋಡಿದೆ. ಯಾರದ್ದಿರಬಹುದು? ಯಾರಾದರೂ ಹುಡುಗನೋ ಅಥವಾ ಹುಡುಗಿಯೋ ತನ್ನ ಪ್ರೀತಿಪಾತ್ರರಿಗೆ ಕೊಟ್ಟಿರಬಹುದೆ? ಅಥವಾ ಯಾರಾದೂ ತುಂಬಾ ಬೇಕಾದವರೇ ಕೊಟ್ಟದ್ದಾಗಿರಬಹುದಾದ ಈ ನೋಟನ್ನು ಜೋಪಾನ ಮಾಡಲು ಹೀಗೆ ಬರೆದುಕೊಂಡಿರಬಹುದಾ? ಅಥವಾ ಯಾರೋ ತಮಗೆ ಮಾಡಿದ ಸಹಾಯವನ್ನು ಮರೆಯಲಾರೆ, ಪುನಃ ಅದನ್ನು ಅವರಿಗೆ ಹಿಂದಿರುಗಿಸಲು ಕಾಯುವೆ ಎಂದು ಬರೆದುಕೊಂಡಿರಬಹುದಾ? ಮರೆಯಲಾರೆ ಎಂಬ ಭಾವ ಯಾವ ಬಗೆಯದು? ಮೋಹವೋ? ಸೇಡೋ? ಒಲವೋ? ದ್ವೇಷವೋ? ಕೃತಜ್ಞತೆಯೋ? ಅನುಕಂಪವೋ?

ಸುಮ್ಮನೆ ಕಿರಿಕಿರಿ ಅನ್ನಿಸಿತು. ಬೆಳಿಗ್ಗಿನಿಂದ ಇದೇ ರೀತಿ ಆಗುತ್ತಿದೆ. ಈ ದಿನವೇ ಸರಿಯಿಲ್ಲ. ನನ್ನ ಸ್ಕೂಟರ್ ಸ್ಟಾರ್ಟ್ ಆಗದಿರೋದು ಮೊದಲ ಕಿರಿಕಿರಿ. ನಾನು ಕ್ಯಾಬ್ ಗಾಗಿಯೂ ಕಾಯದೇ ಆಟೋವನ್ನೂ ಹಿಡಿಯದೆ, ಬಸ್ ಹತ್ತಿದ್ದು, ಸರಿಯಾದ ಚಿಲ್ಲರೆ ಇಲ್ಲದೆ ಕಂಡಕ್ಟರ್ ಬಳಿ ಬೇಡದ ಮಾತು ಕೇಳಿದ್ದು ಎರಡನೇ ಕಿರಿಕಿರಿ. ಈಗ ಯಾರದೋ ದುಡ್ಡು ನನ್ನ ಹತ್ತಿರ ಸೇರಿಕೊಂಡು ಕಿರಿಕಿರಿ ಮಾಡ್ತಿರೋದು ಮೂರನೇ ತಲೆನೋವು ಎನಿಸಿತು.

ಅರೆ, ಇದು ಯಾರದ್ದೋ ದುಡ್ಡು ಹೇಗಾಗುತ್ತೆ? ನನ್ನದೇ ತಾನೆ? ನನಗೆ ಸಿಗಬೇಕಾದ ಉಳಿದ ಚಿಲ್ಲರೆ ಹಣ ಎಂದು ಹೇಳಿಕೊಂಡು ಮನಸ್ಸನ್ನು ಸಮಾಧಾನ ಪಡಿಸಲು ಯತ್ನಿಸಿದೆ.

ಬೇರೆ ಏನಾದ್ರು ಮಾತಾಡಿ ಸ್ವಲ್ಪ ಮೈಂಡ್ ಡೈವರ್ಟ್ ಮಾಡಿಕೊಳ್ಳಲಾ ಅಂದ್ಕೊಂಡ್ರೆ ಅವತ್ತು ಆಫೀಸಿನ ಗೆಳತಿ ರಾಧಾ ಕೂಡ ರಜೆಯ ಮೇಲಿದ್ಲು. ಕರೋನಾ ಭಯದಿಂದ ಹೆಚ್ಚು ಸಿಬ್ಬಂದಿಗಳೂ ಬಂದಿಲ್ಲ. ಕ್ಯಾಂಟಿನ್ ಕೂಡ ಮುಚ್ಚಿದೆ. ಏನಾದ್ರು ಬೇಕಿದ್ರೆ ದೂರದ ಪೊಲೀಸ್ ಕ್ಯಾಂಟೀನಿನಿಂದ ತರಿಸಬೇಕು. ಛೇ.., ಸ್ಕೂಟರ್ ಸ್ಟಾರ್ಟ್ ಆಗದಿದ್ದಾಗಲೇ ಮ್ಯಾನೇಜರರಿಗೆ ಫೋನ್ ಮಾಡಬೇಕಿತ್ತು. ತಲೆನೋವಿನ ನೆಪ ಹೇಳಿ ರಜೆ ಹಾಕಬೇಕಿತ್ತು ಎಂದು ಯೋಚಿಸಿ ಕಂಪ್ಯೂಟರ್ ಆನ್ ಮಾಡುತ್ತಿದ್ದೆ.

ಆಗಲೇ ಸೆಕ್ಯೂರಿಟಿ ಹುಡುಗ ರಾಮು ಬಂದು ‘‘ಮೇಡಂ ಅಕೌಂಟ್ ಸೆಕ್ಷನ್ನವರಿಗೆ ಕಾಫಿ- ಚಾಯ್ ತರಕ್ಕೋಯ್ತಿವ್ನಿ. ನಾಕೇ ಜನ ಬಂದವ್ರೆ. ನಿಮ್ಗೆ ಏನ್ ತರ್ಲಿ?’’ ಎಂದು ಕೇಳಿದ. ಕೈಗಳಲ್ಲಿ ಎರಡು ಮಿಲ್ಟನ್ ನ ಸ್ಟೀಲ್ ಫ್ಲಾಸ್ಕ್ ಹಿಡಿದು ನಿಂತಿದ್ದ ರಾಮುವಿನ ಹದಿಹರಯದ ಚುರುಕುಗಣ್ಣು, ಮಾಸದ ತುಂಟ ನಗೆಯ ಕಳೆಕಳೆಯಾದ ಮುಖ ನೋಡಿ ನನಗೆ ಸ್ವಲ್ಪ ಸಮಾಧಾನ ಎನಿಸಿತು. ‘ನಂಗೆ ಕಾಫಿ ತಗೊಂಬಾ ರಾಮು’ ಎಂದವಳೇ ‘ಏ ರಾಮು ಸ್ವಲ್ಪ ಇರು’ ಎನ್ನುತ್ತಾ ಪರ್ಸ್ ತೆಗೆದು ‘ಬಿಸಿಬಿಸಿ ಸ್ಟ್ರಾಂಗ್ ಕಾಫಿ ಜೊತೆಗೆ ಸ್ವೀಟ್ ಅಂಡ್ ಸಾಲ್ಟ್ ಬಿಸ್ಕೆಟ್ ತಂಗೊಂಬಾ, ಎಲ್ಲರ್ಗೂ ಸೇರ್ಸಿ ಇವತ್ತು ನನ್ ಕಡೆಯಿಂದ ಟ್ರೀಟ್ ಆಯ್ತಾ’ ಎಂದು ನಗುತ್ತಾ ಹೇಳಿ ‘ಉಳಿದ ಚಿಲ್ಲರೆ ನಿನಗೇ..’ ಎಂದು ಆ ‘ಮರೆಯಲಾರೆ. ಕಾಯುವೆ’ ನೋಟನ್ನು ಅವನತ್ತ ಚಾಚಿ ನಿರಾಳವಾದೆ.

-ವಸುಂಧರಾ ಕದಲೂರು.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x