ನಿರಂತರ ಪ್ರಕಾಶನದ ಹೊಸ ಪುಸ್ತಕ ಹಾಗೂ ಸೀಡಿ ‘ಹಾರೋಣ ಬಾ’ ಕುರಿತು

ನಿರಂತರ ಪ್ರಕಾಶನ 

ಮೈಸೂರಿನ ನಿರಂತರ ಪ್ರಕಾಶನ ಕಳೆದ 20 ವರ್ಷಗಳಿಂದ ರಂಗಭೂಮಿ,ಸಾಹಿತ್ಯ, ಜಾನಪದ ಕ್ಷೇತ್ರಗಳಲ್ಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಎಚ್ಚರದ, ಕನಸಿನ ಸಮಯಗಳಲ್ಲಿ ಚಳುವಳಿಗಳಷ್ಟೇ ಪ್ರಮುಖವಾಗಿ ಪುಸ್ತಕಗಳೂ ಆವರಿಸಿವೆ. ಕಲಿಸಿವೆ ಓದುಗನೊಬ್ಬ ಸಮಾಜದ ಜತೆಗೆ  ನೇರವಾಗಿ ಮುಖಾಮುಖಿಯಾಗುವ ಇಂಥ ಸನ್ನಿವೇಶ ಸೃಷ್ಟಿಸುವÀÀ ಹೊಣೆ  ನಮ್ಮೆಲ್ಲರದ್ದು. ಪುಸ್ತಕ ಪ್ರಕಟಣೆ ಎನ್ನುವುದು ನಮ್ಮ ಇಂಥಹ ಚಟುವಟಿಕೆಗಳ ವಿಸ್ತರಣೆ ಎಂಬುದು ನಮ್ಮ ನಂಬಿಕೆ. ಜನ ಸಾಂಸ್ಕøತಿಕ ಪರಂಪರೆಯ ಕುರಿತ ಉತ್ತಮ, ಚಿಂತನಶೀಲ ಪುಸ್ತಕಗಳ ಪ್ರಕಟಣೆ ನಮ್ಮ ಆಶಯ. ಈ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ನಿರಂತರ ಪ್ರಕಾಶನ ಇದುವರೆಗೆ ಮೌಲಿಕ ಪುಸ್ತಕಗಳನ್ನು ಪ್ರಕಟಿಸುತ್ತಾ ಬಂದಿದೆ. ಸಂಖ್ಯೆಯ ದೃಷ್ಟಿಯಿಂದ ದೊಡ್ಡದಲ್ಲದಿದ್ದರೂ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಿದೆ. 

ಈವರೆಗಿನ ಪ್ರಕಟಣೆಗಳು
    ಬೀದಿ                       ಸಂ: ಪ್ರಸಾದ್ ಕುಂದೂರು
    ಶರೀಫ                     ಮಂಜುನಾಥ ಬೆಳಕೆರೆ
    ಬಹುರೂಪಿ                ಮೂಡ್ನಾಕೂಡು ಚಿನ್ನಸ್ವಾಮಿ
    ಹಿಂದಣಅನಂತ           ಲಿಂಗದೇವರುಹಳೆಮನೆ
    ರಂಗರೂಪಕ              ಲಿಂಗದೇವರುಹಳೆಮನೆ
    ನವಸಾಕ್ಷರಮಾಲೆ-1     ಸಂ: ಪ್ರಸಾದ್‍ಕುಂದೂರು, ಹರಿಪ್ರಸಾದ್ ಕೆ.ಆರ್.
    ನವಸಾಕ್ಷರಮಾಲೆ-2    ಸಂ: ಪ್ರಸಾದ್‍ಕುಂದೂರು, ಹರಿಪ್ರಸಾದ್ ಕೆ.ಆರ್.
    ರಾಮಂದ್ರ                 ಹರಿಪ್ರಸಾದ್ ಕೆ.ಆರ್.

ಹೊಸ ಪುಸ್ತಕ ಹಾಗೂ ಸೀಡಿ ‘ಹಾರೋಣ ಬಾ’ ಕುರಿತು

ಹಾಡು, ಕುಣಿ, ನಲಿ … ಈ ಸೂತ್ರಗಳು ಬೆಳೆವ ಮಕ್ಕಳ ಪಾಲಿಗೆ ಹಿಂದೆ ಎಷ್ಟು ನಿಜವೋ, ಇಂದು ಅಷ್ಟೇ ನಿಜ, ಮುಂದೂ ಅಷ್ಟೇ ನಿಜ.ಆದರೆ ಹಾಡುವ, ಕುಣಿವ, ನಲಿವ ಮಾಧ್ಯಮಗಳು ಕಾಲಕಾಲಕ್ಕೆ ಹೊಸದಾಗುತ್ತ ಹೋಗುತ್ತವೆ. ಈ ದಿಸೆಯಲ್ಲಿ ಮಕ್ಕಳ ಉಲ್ಲಾಸಕ್ಕಾಗಿ, ಅವರ ಕುತೂಹಲ ತಣಿಸುವುದಕ್ಕಾಗಿ ಕನ್ನಡದ ಸಾಂಸ್ಕøತಿಕ ಮನಸ್ಸುಗಳು ಕಾಲ ಕಾಲಕ್ಕೆ ಅವಿರತ ಪ್ರಯತ್ನವನ್ನು ಮಾಡುತ್ತಲೇ ಬಂದಿವೆ. ಜಿ.ಪಿ.ರಾಜರತ್ನಂರ ಪದ್ಯಗಳು, ಕಾರಂತರ ಬಾಲವನದ ಪ್ರಯೋಗದಿಂದ ಹಿಡಿದು,ಮಕ್ಕಳ ನಾಟಕಗಳು, ಬೋಳುವಾರು ಕುಂಞ ಸಂಪಾದಕತ್ವದ ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಹಾಗೆಯೇ ಅನೇಕ ಮಕ್ಕಳ ಪತ್ರಿಕೆಗಳು, ಇತ್ತಿಚೆಗೆ ಹೆಚ್ಚುತ್ತಿರುವ ಮಕ್ಕಳ ಶಿಬಿರಗಳು, ಜೊತೆಗೆ ಸರ್ಕಾರ ಕೂಡ ಕಲಿ-ನಲಿಯಂಥ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಅಳವಡಿಸುವ ಪ್ರಯತ್ನ ಮಾಡುತ್ತಿದೆ. ಈ ಎಲ್ಲ ಭಿನ್ನ ಭಾವದಾರಿಗಳ ಆಶಯ ಮಕ್ಕಳ ಮನಸ್ಸನ್ನು ಅರಳಿಸುವುದು ಬೆಳೆಸುವುದೇ ಆಗಿದೆ.

ಈ ಪರಂಪರೆಯ ಮುಂದುವರಿಕೆಯ ಭಾಗವಾಗಿ ನಿರಂತರ ‘ಹಾರೋಣ ಬಾ’ ಎಂಬ ಹೊಸ ಕನಸಿನೊಂದಿಗೆ ಮಕ್ಕಳ ಲೋಕಕ್ಕೆ ಹೊರಟಿದೆ. ಈ ಪುಸ್ತಕದಲ್ಲಿರುವ ಹಕ್ಕಿ ಪಕ್ಷಿಗಳು ನಮ್ಮೆಲ್ಲರ ಬಾಲ್ಯದ ಭಾಗವೇ ಆಗಿದ್ದವು. ಈಗಿನ ಮಕ್ಕಳಿಗೂ ಅವು ಸಿಗಲಿ. ಅವರ ಬಾಲ್ಯದ ಸಡಗರಕ್ಕಾಗಿಯೇ ಈ ಸಚಿತ್ರ ಪುಸ್ತಕ. ಜೊತೆಗೂಂದು  ಸೀಡಿ.  

‘ಹಾರೋಣ ಬಾ’ ಮಕ್ಕಳಿಗಾಗಿ ಅರಸೀಕೆರೆ ಯೋಗಾನಂದ ಬರೆದ ಹಾಡುಗಳ ಸಂಗ್ರಹ ಇದೊಂದು ವಿಶಿಷ್ಡ ಪ್ರಯತ್ನವೂ ಹೌದು. ಮಕ್ಕಳಿಗೆ ಕಾಡು,ಬೆಟ್ಟ, ನದಿ,ಹಕ್ಕಿ ಪಕ್ಷಿಗಳ ಸಂಬಂಧ ದೂರಾಗುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ತಮ್ಮ ಸುತ್ತಲಿನ ಹಕ್ಕಿಗಳ ಬಗ್ಗೆ, ಕೂಗು, ಚಹರೆ, ಅವು ಕಟ್ಟುವ ಗೂಡು ಮುಂತಾದವನ್ನು ಸರಳವಾಗಿ ಹಾಡಿನ ಮೂಲಕ ಪರಿಚಯಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ. ಬಹುಶಃ ಇಂಥ ಪ್ರಯತ್ನ ಕನ್ನಡದಲ್ಲಿ ಮೊದಲನೆಯದು ಎಂಬ ಹೆಮ್ಮೆ ನಿರಂತರ ಪ್ರಕಾಶನದ್ದು.

ಪುಸ್ತಕ ಕುರಿತು ಹಿರಿಯ ಕವಿಗಳಾದ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರು ‘’ ಈ ಕೃತಿಗೆ ಒಂದು ಖಚಿತವಾದ ಉದ್ದೇಶವಿದೆ. ನಾನಾ ಬಗೆಯ ಹಕ್ಕಿಗಳ ಪರಿಚಯ ಮಾಡಿಕೊಡುವುದು. ಅವುಗಳಲ್ಲಿ ಪ್ರೀತಿ ಹುಟ್ಟಿಸುವುದು. ಮಕ್ಕಳಿಗೆ ಹಕ್ಕಿಗಳನ್ನು ಪರಿಚಯಿಸುತ್ತಲೇ ಎಚ್ಚರ ಮೂಡಿಸುವುದು. ಈ ಪರಿಚಯದ ಕೆಲಸ ಎರಡು ನೆಲೆಯಲ್ಲಿ ನಡೆದಿದೆ. ಒಂದು ಭಾಷೆಯ ಮೂಲಕ, ಇನ್ನೊಂದು ಚಿತ್ರಗಳ ಮೂಲಕ. ಅಂದರೆ ಮಕ್ಕಳ ಕಣ್ಣು ಮತ್ತು ಕಿವಿಗಳ ಮೂಲಕ, ಪಕ್ಷಿಜಗತ್ತನ್ನು ಅವರಿಗೆ ಆಪ್ತಗೊಳಿಸುವ ಸೊಗಸಾಧ, ಸಾರ್ಥಕವೆನ್ನಿಸುವ ಪ್ರಯತ್ನವನ್ನು ಈ ಪುಸ್ತಕ ಮಾಡುತ್ತದೆ’’ ಎಂದು ಮುನ್ನುಡಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಹಾಗೆಯೆ ಹಿರಿಯ ಲೇಖಕಿ ವೈದೇಹಿ ‘’ ಎಷ್ಟೊಂದು ಹಕ್ಕಿಗಳು ಈ ಸಂಕಲನದಲ್ಲಿ. ಎಲ್ಲ ತಂತಮ್ಮ ಹೆಸರು, ಚಿತ್ರ, ಸ್ಥೂಲ ಲಕ್ಷಣಗಳೊಂದಿಗೆ ಹಾಡಿಕೊಂಡಿವೆ. ಮಗು ಒಮ್ಮೆ ಪುಟ ತೆರೆದರೆ ಸಾಕು.ತಾನೂ ದನಿಗೂಡುವಂತೆ ಸುಂದರವಾಗಿವೆ. ವಿವರಗಳು ಚಿತ್ರಗಳೊಂದಿಗೆ ಅದರ ಮನದಲ್ಲಿ ನೆಟ್ಟು ಹೋಗುವಂತಿವೆ. ಹಿರಿಯರ ಸಹಾಯವಿಲ್ಲದೆ ವಿಸ್ಮಯ ಪಕ್ಷಿಲೋಕದೊಳಗೆ ಮಗು ಪ್ರವೇಶ ಪಡೆಯುವಂತೆ ರಚನೆಗೊಂಡ ಪದ್ಯಗಳಿವು, ಫಲಿತಾಂಶದಲ್ಲಿ ದೊಡ್ಡವರಿಗೂ ಉಪಯುಕ್ತವಾಗಿವೆ. ಲೇಖಕ ಅರಸೀಕೆರೆ ಯೋಗಾನಂದ ಮತ್ತು ನಿರಂತರ ಪ್ರಕಾಶನ ಸರ್ವದಾ ಅಭಿನಂದನೀಯ. ಈ ಪ್ರಯೋಗ ಯಶಸ್ವಿಯಾಗಲಿ’’ ಎಂದು ಬೆನ್ನುಡಿಯಲ್ಲಿ ಹಾರೈಸಿದ್ದಾರೆ.

ಈ ಪುಸ್ತಕದಲ್ಲಿರುವ ಗುಬ್ಬಿ. ಗೂಬೆ, ಕಾಗೆ, ಜೇನುಕುಟುರ… ಇತ್ಯಾದಿಗಳ ಕುರಿತಾದ ಪದ್ಯಗಳೇ ಇಲ್ಲಿ ಹಾಡುಗÀಳಾಗಿವೆ. ಆ ಹಾಡುಗಳ ಮುಖಾಂತರವೂ ಒಂದು ಕಿನ್ನರಲೋಕವನ್ನು ಸೃಷ್ಟಿಸಲಾಗಿದೆ. ಇದು ಕನ್ನಡದ ಎಲ್ಲ ಮಕ್ಕಳ ಕಿಸೆಯಲ್ಲಿರಲಿ ಎಂಬುವುದು ನಮ್ಮ ಆಶಯ. ಈ ಹಾಡುಗಳನ್ನು ಕೇಳುತ್ತಲೇ, ಈ ಸಚಿತ್ರ ಪುಸ್ತಕ ನೋಡುತ್ತಲೇ ಇಲ್ಲಿನ ಹಕ್ಕಿ-ಪಕ್ಷಿಗಳ,ಕೆರೆ-ತೊರೆಗಳ, ಬೆಟ್ಟ-ಗುಡ್ಡಗಳ, ಮರ-ಗಿಡಗಳ ಬಗೆಗೆ ಅವರ ಕುತೂಹಲ ಬೆಳೆಯಲಿ.ಆ ಕುತೂಹಲ ಮುಂದೆ ಈ ನಾಡನ್ನು ಪೊರೆಯುವ ಒಂದು ಸಣ್ಣ ಬೀಜವಾಗಲಿ ಎಂಬುದು ನಮ್ಮ ಹಂಬಲವಾಗಿದೆ.

ಅರಸೀಕೆರೆ ಯೋಗಾನಂದ : 
ಯೋಗಾನಂದ್ ಮೈಸೂರಿನ ರಂಗಾಸಕ್ತರಿಗೆಲ್ಲ ಸುಪರಿಚಿತರು. ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಸದಾ ಚಟುವಟಿಕೆಗಳಲ್ಲಿ ಮುಳುಗಿರುವ ಯೋಗಾನಂದ್ ನಾಟಕ ಬರೆಯಬಲ್ಲರು, ನಾಟಕ ಆಡಬಲ್ಲರು, ನಾಟಕ ಆಡಿಸಬಲ್ಲರು, ಹಾಡಬಲ್ಲರು, ಹಾಡು ಕಟ್ಟಬಲ್ಲರು, ರಾಗ ಹಾಕಬಲ್ಲರು…. ಹೀಗೆ ಬಹುಮುಖಿ ಪ್ರತಿಭೆಯ ಯೋಗಾನಂದ್ ಇದುವರೆಗೆ ಅನೇಕ ಬೀದಿನಾಟಕಗಳ, ಮಕ್ಕಳ ಶಿಬಿರಗಳ, ರಂಗಕಮ್ಮಟಗಳ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈವರೆಗೆ ‘ಈ ಬಾನು, ಈ ಚುಕ್ಕಿ’, ಎಂಬ ಮಕ್ಕಳ ಸಚಿತ್ರ ಕಾವ್ಯ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಈ ಪುಸ್ತಕದ ಗೀತೆಗಳನ್ನು ಬರೆದು, ಹಾರೋಣ ಬಾ ಸೀಡಿಗೆ ರಾಗ ಸಂಯೋಜನೆ ಮಾಡಿದ್ದಾರೆ.
    
ಪೂರ್ಣಚಂದ್ರ ತೇಜಸ್ವಿ :
ಇಂಜಿನಿಯರಿಂಗ್ ವಿದ್ಯಾಭ್ಯಾಸದ ದೆಸೆಯಿಂದಲೇ ರಂಗಭೂಮಿ, ಸಂಗೀತ, ಬರವಣಿಗೆಯ ಹುಚ್ಚು ಹತ್ತಿಸಿಕೊಂಡ ಪೂರ್ಣಚಂದ್ರ ತೇಜಸ್ವಿ, ‘ತಿನ್‍ಬೇಡ ಕಮ್ಮಿ’ ಎನ್ನುತ್ತ ಚಿತ್ರಸಂಗೀತಕ್ಕೆ ಕಾಲಿಟ್ಟವರು. ಕನ್ನಡ ಚಲನಚಿತ್ರ ರಂಗದ ಪ್ರತಿಭಾವಂತ ಯುವ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ಪೂರ್ಣಚಂದ್ರ ತೇಜಸ್ವಿ ಅನೇಕ ಚಲನಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ತಮ್ಮ ಮೊದಲ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಪಡೆದಿರುವ ಇವರು ನಿರಂತರದ ಅನೇಕ ಕಾರ್ಯಕ್ರಮಗಳ ಸಂಘಟಕರಾಗಿ, ರೂವಾರಿಯಾಗಿ, ನಟನಾಗಿ ಕೆಲಸ ಮಾಡಿದ್ದಾರೆ. ಈಚೆಗೆ ಇವರು ಸಂಗೀತ ನೀಡಿರುವ ಕುವೆಂಪುರವರ ‘ಬಾರಿಸು ಕನ್ನಡ ಡಿಂಡಿಮವ’ ವಿಶ್ವದೆಲ್ಲೆಡೆ ಡಿಂಡಿಮ ಬಾರಿಸುತ್ತಿದೆ. “ಹಾರೋಣ ಬಾ” ನಿರ್ಮಾಣಕ್ಕಾಗಿ ತೇಜಸ್ವಿ ದುಡಿದಿದ್ದಾರೆ.
    
“ಹಾರೋಣ ಬಾ” ರಂಗ ಪ್ರಯೋಗ
ಕವಿ ಅರಸೀಕೆರೆ ಯೋಗಾನಂದ್ ರಚಿಸಿರುವ “ಹಾರೋಣ ಬಾ” ಎಂಬ ಮಕ್ಕಳ ಗೀತೆಗಳನ್ನಾಧರಿಸಿ ಹೊಸ ರಂಗ ಪ್ರಯೋಗವೊಂದನ್ನು ಕಟ್ಟಿದ್ದೇವೆ. ಮಕ್ಕಳು ತಮ್ಮ ಸಹಜ ಬಾಲ್ಯವನ್ನು ಸವಿಯುವ ಅವಕಾಶವನ್ನು ಕಳೆದು ಕೊಳ್ಳುತ್ತಿದ್ದಾರೆ. ಜೊತೆಗೆ ಪದಾರ್ಥಲೋಕಗಳ ಮೂಲಕವೂ ಮಕ್ಕಳ ಮನಸ್ಸನ್ನು ವಿಚಲಿತಗೊಳಿಸುವ ವಿದ್ಯಮಾನಗಳು ನಮ್ಮ ಸುತ್ತ ಮುತ್ತ ಜರುಗುತ್ತಲೇ ಇದೆ. ಇವೆಲ್ಲವುಗಳಿಂದಾಗಿ ಗಿಡ, ಮರ, ಪ್ರಾಣಿ-ಪಕ್ಷಿ, ಸೂರ್ಯ-ಚಂದ್ರ ಇಂದು ಮಕ್ಕಳ ಪಾಲಿಗೆ ಇದ್ದೂ ಇಲ್ಲದಂತಾಗುತ್ತಿದೆ. ಈ ಇದ್ದೂ ಇಲ್ಲದಂತಾಗಿರುವ ನಮ್ಮ ಬದುಕಿನ ಸಹಜ ಬೇರುಗಳತ್ತ ಮಕ್ಕಳಲ್ಲಿ ಆಸಕ್ತಿ ಮೂಡಿಸುವುದು ತನ್ಮೂಲಕ ಮಕ್ಕಳ ಬದುಕು ಸಹಜಲಯಕ್ಕೆ ಒಗ್ಗುವಂತೆ ಮಾಡುವುದು ಇಂದಿನ ತುರ್ತಾಗಿದೆ.
 
ಸುಗುಣ ಎಂ ಎಂ :  
 
ರಂಗಭೂಮಿ ಎಂದರೆ ಸದಾ ತಾ ಮುಂದು ಎಂದೆನ್ನುವ ಸುಗುಣ ನಟನಾಗಿ, ನಿರ್ದೇಶಕನಾಗಿ, ರಂಗಸಂಘಟಕನಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಶಿವರಾತ್ರಿ, ಕೂಡಲಸಂಗಮ, ಥ್ಯಾಂಕ್ಯೂ ಮಿ. ಗ್ಲಾಡ್, ಬಿಂಬ, ಶರೀಫ, ಮಾರೀಚನ ಬಂಧುಗಳು, ಕುಸುಮಬಾಲೆ, ಶವದಮನೆ, ಮಾಯಾಮೃಗ, ಕೆರೆಗೆಹಾರ, ಕಲ್ಕಿ, ಜಸ್ಮಾ ಓಡೆನ್, ಸತ್ತವರ ಸುತ್ತಾಮುತ್ತಾ ಮುಂತಾದ ನಾಟಕಗಳಲ್ಲಿ ನಟಿಸಿರುವ ಇವರು ಸಾಕ್ಷರತ ಆಂದೋಲನದಲ್ಲಿ ಸಂಘಟಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ್ದಾರೆ.    ನಿರಂತರದ ಸಹಜರಂಗ ರಂಗತರಬೇತಿ ಶಿಬಿರದ ನಿರ್ದೇಶಕರಾಗಿ ಯುವಮನಸ್ಸುಗಳ ಜೊತೆ ಮಿಡಿಯುವ ಇವರು ಶಾಂತಿಯ ಬಯಸಿ, ಮಿಠಾಯಿಸಾಬಿ, ಕೂಡಲಸಂಗಮ, ಜುಂಜಪ್ಪ, ಸ್ತ್ರೀ ಭಾರತಂ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x