ಕೆಲವೇ ಕ್ಷಣದಲ್ಲಿ ಸೂರ್ಯ ಪ್ರತಿ ದಿನದ ಮುಕ್ತಾಯಕ್ಕೆ ಪೂರ್ಣ ವಿರಾಮ ತೆಗೆದುಕೊಳ್ಳುವ ಸಮಯ. ಬೆಳಕು ತನ್ನ ಅಸ್ತಿತ್ವ ಕಳೆದುಕೊಂಡು ಕತ್ತಲೆಯಲ್ಲಿ ಮರೆಯಾಗುವ ವೇಳೆಗೆ, ಮನಸಿನ ಮೂಲೆಯಲ್ಲಿ ಕುಳಿತ ಅನಾಮಿಕನ ಪ್ರಶ್ನೆಯೊಂದು ನೆನಪಾಯಿತು! ಪ್ರಶ್ನೆಗೆ ಉತ್ತರ ಸಿಗುವುದೋ ಇಲ್ಲವೋ? ಇಲ್ಲ ಶಾಶ್ವತವಾಗಿ ಕಾಲದ ಅನಂತತೆಯ ಪಥದಲ್ಲಿ ಎಲ್ಲವೂ ಬದಲಾಗುವುದೋ ಇಲ್ಲವೋ ತಿಳಿಯದು. ಯಾವುದಕ್ಕೂ ಇಲ್ಲಿ ಉತ್ತರ ಪ್ರಶ್ನೆಗಳಿಲ್ಲ.
ಅಂದ ಹಾಗೆ ನನ್ನನ್ನು ಪರಿಚಯ ಮಾಡಿಕೊಳ್ಳುವ ವಿಷಯವೇ ಮರೆಯಿತು ನೋಡಿ, ಮಹಾನಗರದ ಒಂದು ಉದ್ಯಾನದಲ್ಲಿ ನಾನೊಂದು ಕುರ್ಚಿ.
ಏನಪ್ಪಾ ಕುರ್ಚಿಯದೇನು ಸಮಸ್ಯೆ? ಇಲ್ಲಿ ಅದರ ಮಾತೇನು? ಎಂದೆಲ್ಲಾ ಪ್ರಶ್ನೆ ಮೂಡಿದರೆ, ಇಂತಹ ಯಾವುದೇ ಪ್ರಶ್ನೆಗೂ ಉತ್ತರವಿಲ್ಲ. ಏಕೆಂದರೆ ನಾನೊಂದು ಕುರ್ಚಿ, ಪ್ರಪಂಚದ ಒಡನಾಟಕ್ಕೆ ಜೀವಾಂಶ ಇಲ್ಲದೇ ಇರುವ ಒಂದು ನಿರ್ಜಿವ ವಸ್ತು.
ನಿಮ್ಮೆಲ್ಲರ ಹಾಗೆ ನನ್ನ ದಿನ ನಿತ್ಯದ ಸಮಯ ಕ್ರಿಯಾಶೀಲತೆ ಮತ್ತು ಕೌಶಲ್ಯತೆಗಳಲ್ಲಿ ಮುಕ್ತಾಯವಾಗುವುದಿಲ್ಲ, ನನ್ನದು ಶಾಶ್ವತವಾದ ಜಡತ್ವ. ಮಳೆ, ಗಾಳಿ, ಬಿಸಿಲಲ್ಲಿ ಬೆರೆತು, ಕಾಲದ ನಿರಂತತೆಯಲ್ಲಿ ಸದಾ ಜಡತ್ವವನ್ನು ಸಾರುವ ನಿರ್ಜೀವ ವಸ್ತು. ದಣಿದು ಬಂದ ಕೆಲವರಿಗೆ ಕುಳಿತುಕೊಳ್ಳುವ ಜಾಗ, ಹರಟೆ ಹೊಡೆಯುವವರಿಗೆ ಮೆಚ್ಚಿನ ಜಾಗ, ಇನ್ನು ಕೆಲವರಿಗೆ ಮಲಗುವ ಸ್ಥಳ, ಜೋಡಿ ಪ್ರೇಮಿಗಳಿಗೆ ರೊಮಾನ್ಸ್ ಮಾಡುವ ಸ್ಥಳ, ಏಕಾಂಗಿ ಜೀವಗಳಿಗೆ ನೆನಪನ್ನು ಮೆಲಕು ಹಾಕುವ ಸ್ಥಳ, ಮುದಿ ಜೀವಗಳಿಗೆ ನಿತ್ಯ ಸಮಾಚಾರ ಪತ್ರಿಕೆ ಓದುವ ಸ್ಥಳ. ಹಲವರು ನನ್ನ ಮೇಲೆ ಕುಳಿತು ಜೀವನದ ಕಷ್ಟಗಳನು ಮಾತನಾಡುತ್ತಾರೆ, ಮತ್ತೆ ಇನ್ನಷ್ಟು ಜನ ವ್ಯಾವಹಾರಿಕ ಚಿಂತನೆಗಳನ್ನು ಮಾಡುತ್ತಾರೆ. ಮನೆ ಬಿಟ್ಟು ಬಂದ ಕೆಲವು ಪೋಲಿಗಳಿಗೆ, ರಾತ್ರಿ ಸಮಯ ಪೊಲೀಸರ ಬೂಟಿನ ಏಟು ತಪ್ಪಿಸಿಕೊಂಡು ಅಡಗಿ ಕೂರುವ ವಾಸಸ್ಥಳ ನಾನು. ಕತ್ತಲೆಯ ಕಣ್ಣಾ ಮುಚ್ಚಾಲೆಯಲ್ಲಿ ಹೆಣ್ಣು ಮಕ್ಕಳ ಸೆರಗಿನ ಜೊತೆ ರಂಗನೆರಿಸುವ ನೀಚ ಮನುಷ್ಯರಿಗೆ ರೂಮ್ ಆಗಿರುವೆ ನಾನು. ಇನ್ನು ಮುಂತಾದ ಅನೇಕ ಚಟುವಟಿಕೆಗಳಿಗೆ ನನ್ನೊಂದು seasonal reason ಎಂದರೆ ತಪ್ಪಾಗಲಾರದು.
ದಿನ ನನ್ನ ನೋಡಲು, ನನ್ನ ಜೊತೆ ಯಾವುದೋ ಅರಿಯದ ಬಾಷೆಯಲ್ಲಿ ಮಾತನಾಡಲು, ಹುಚ್ಚು ಹಿಡಿದ ಒಂದು ಹುಡುಗಿ ಬರುತ್ತಿದಳು, ಮನುಷ್ಯ ಜಾತಿಗೆ ಸೇರಿದ ಅವಳ ಮಾನಸಿಕ ಪರಿಸ್ಥಿತಿಯನ್ನು ಕಂಡು ಕೆಲವರು ಪಾಪ ಎಂದು ಮುಂದೆ ನಡೆದು ಹೋಗುತ್ತಿದರು. ಅವಳ ಹರಿದ ಬಟ್ಟೆಯಲ್ಲಿ ಕಾಣುವ ಅಂಗಗಳನ್ನು ನೋಡುವ ವಿಕೃತ ಮನಸಿನ ಮನುಷ್ಯ ಜೀವಿಗಳ ಹೀಯಾಳಿಕೆಗೆ ಬೆದರಿ ನನ್ನ ಹಿಂದೆ ಅವಿತು ಕುಳಿತಿರುತ್ತಿದ್ದಳು. ಎಷ್ಟೋ ರಾತ್ರಿಗಳು ಖಾಕಿ-ಖಾವಿಗಳ ಕೆಟ್ಟ ಕಣ್ಣಿಗೆ ಸಿಕ್ಕಿ ಬಲಿಯಾಗುತ್ತಿದಳು, ಆ ನೋವಿನ ಬೆಂಕಿಯಲ್ಲಿ ಬೆಂದು ನನ್ನ ತಬ್ಬಿ ಕಣ್ಣೀರು ಇಟ್ಟಾಗ, ಅವಳ ಅರಿಯದ ಮೂಕ ಧ್ವನಿಗೆ ಮತ್ತಷ್ಟು ಮೂಕವಾಗಿ ನಿಷ್ಪ್ರಯೋಜಕ ವಸ್ತುವಾಗಿದೆ, ಅವಳ ಪರಿಸ್ಥಿತಿಗೆ ಬಾಯಿ ಬಿಟ್ಟು ಮಾತನಾಡದೆ ಕಾಲದ ಜೊತೆಯಲ್ಲಿ ಸಾಗುವ ವಸ್ತುವಷ್ಟೇ ನನ್ನ ಅಸ್ತಿತ್ವ.
ಬರಿ ಮನುಷ್ಯರಿಗಷ್ಟೇ ಸೀಮಿತವಾಗದೆ ಭೂಗೋಳದ ವಿಸ್ಮಯಗಳಲ್ಲಿ ಒಂದಾಗಿರುವ ಜೀವರಾಶಿಗಳಿಗೆ ನೆರಳಾಗಿರುವೆ. ಇರುವೆ, ಜೇಡ, ಹೆಗ್ಗಣ, ಅಳಿಲು, ಚಿಟ್ಟೆ ಮುಂತಾದ ಜೀವಿಗಳು ನನ್ನ ಜೊತೆ ದಿನ ನಿತ್ಯ ಒಡನಾಟ ಬೆಳೆಸುತ್ತವೆ. ಮಳೆ ಬಂದಾಗಲೆಲ್ಲ ಮತ್ತೆ ಬಿಸಿಲಿನ ಬೇಗೆಯಿಂದ ಬಳಲಿದಾಗ ನಿದ್ರಿಸಲು ಬಡಕಲು ಶರೀರದ ನಾಯಿಯೊಂದು ಬರುತ್ತದೆ, ಕೆಲವೊಮ್ಮೆ ಪಕ್ಷಿಗಳು ನನ್ನ ಮೇಲೆ ಬಿದ್ದ ತಿಂಡಿಗಳನ್ನು ಹೆಕ್ಕಲು ಬರುತ್ತವೆ, ಆದರು ಯಾವ ಜೀವಿಗಳಿಗೂ ಸ್ಪಂದಿಸದೇ ನಿಂತಲ್ಲೇ ನಿಂತು ರಂಗಭೂಮಿಯಲ್ಲಿ ನಡೆವ ಬದುಕನ್ನು ವೀಕ್ಷಿಸುವ ಮೂಕ ವಸ್ತು.
ಅದೋ! ನಮ್ಮ ಮಾತಿನ ನಡುವೆ ಸೂರ್ಯ ಮೆಲ್ಲಗೆ ದಿಗಂತಡಿ ಜಾರಿಕೊಂಡ, ಇದೇ ಸಮಯದಿ ಥಟ್ಟನೆ ಬೀದಿ ದೀಪ ಅಂಟಿಕೊಂಡು, ಕತ್ತಲದ ಕೆಲವು ಭಾಗಗಳನ್ನು ಸೀಳಿ ಬಿಟ್ಟಿತು. ಬೀದಿ ದೀಪದ ಕನ್ನಡಿಗೆ ಆಕರ್ಷಣೆಗೊಂಡ ಒಂದಷ್ಟು ಹುಳುಗಳು ಗುಯ್.. ಗುಯ್.. ಎಂದು ಅದರ ಬೆಳಕಿನ ಕಡೆ ಹಾರುತ್ತಿದವು, ಅದನ್ನು ಹಿಡಿದು ಸ್ವಲ್ಪ ಹೊಟ್ಟೆ ತುಂಬಿಸಿಕೊಳ್ಳುವ ಪ್ರಯತ್ನದಲ್ಲಿ ಬಡಕಲು ಶರೀರದ ನಾಯಿ ಹರ ಸಾಹಸ ಮಾಡುತಿತ್ತು. ಇದೆಲ್ಲದರ ನಡುವೆ ಇದಕ್ಕಿದ್ದ ಹಾಗೆ ಬಾವಲಿಯೊಂದು ಹಾರಿ ಬಂದು ಲೈಟ್ ಕಂಬ ಹಿಡಿದು ಕುಳಿತಿದ್ದ ದೊಡ್ಡ ಹಸಿರು ಮಿಡತೆಯನ್ನು ಹಿಡಿದು, ನನ್ನೆದುರಿನ ಮರದ ಮೇಲೆ ಕುಳಿತುಕೊಂಡಿತ್ತು. ಬಾವಲಿ ತನ್ನ ಬೇಟೆಯನ್ನು ಚಪ್ಪರಿಸುತ್ತಿರುವ ದೃಶ್ಯ ನೋಡಿದ ನಾಯಿ ಮರದ ಕೆಳಗೆ ನಿಂತು ಬೌ-ಬೌ-ವೌ ಎಂದು ಕೂಗಿದ ಸಮಯ! ನಿಶಬ್ದತ್ತೆಯಿಂದ ಕೂಡಿದ ಉದ್ಯಾನವನದ ಮೌನ ಮುರಿಯಿತು. ಬಾವಲಿ ನಾಯಿಯ ಯಾವ ಕಿರುಚಾಟಕ್ಕೂ ಜಗ್ಗದೆ ತನ್ನ ಬೇಟೆ ಮುಗಿಸಿ ಬೇರೆ ಯಾವುದೊ ದಿಕ್ಕಿನಲ್ಲಿ ಹಾರಿ ಹೋಯಿತು. ನಾಯಿ ತನ್ನ ಹೊಟ್ಟೆಯ ಪರಿಸ್ಥಿತಿಗೆ ಕುಯ್ಯಿ.. ಎನ್ನುತ್ತ ನನ್ನ ಕೆಳಗೆ ಬಂದು, ಬಾಲ ಮುದುರಿ ಲೈಟ್ ಕಂಬದ ಕಡೆ ಹಾರುತ್ತಿದ್ದ ಹುಳುಗಳನ್ನು ನೋಡುತ್ತಾ ಮಲಗಿತ್ತು. ಇಲ್ಲಿಯವರೆಗೆ ಚಟುವಟಿಕೆಗಳಿಂದ ಕೂಡಿದ ಉದ್ಯಾನವನ ಮೌನ ಸ್ವರೂಪ ಪಡೆದು, ಸರ್ವವೂ ನಶ್ಚರವಾಗಿ ಹೋದವು. ಕಪ್ಪು ಬಿಲದಿಂದ ಇಲಿ ಮತ್ತು ದೈತ್ಯ ಹೆಗ್ಗಣದ ಗುಂಪು ಆಹಾರ ಸಂಶೋಧನೆ ಶುರು ಮಾಡಿದವು, ಯಾವುದೊ ಎರಡು ಹೆಗ್ಗಣಗಳಿಗೆ ಆಹಾರ ಸಿಕ್ಕಿತೆಂದು ಮಿಕ್ಕವೆಲ್ಲವೂ ಬಂದು ಅವುಗಳ ಜೊತೆ ಕಚ್ಚಾಡ ತೊಡಗಿದವು. ಇದಕ್ಕಿದ್ದ ಹಾಗೆ ಮನುಷ್ಯರ ವಾಹನದ ಸದ್ದು ಕೇಳಿ ತಿಂಡಿಯ ವಿಷಯ ಮರೆತು ದಿಕ್ಕಾಪಾಲಾಗಿ ಬಿಲದ ಬಾಗಿಲೊಳಗೆ ಓಡಿ ಹೋದವು. ಮತ್ತಷ್ಟು ಸಮಯ ಮೌನ ಆವರಿಸಿದ ಸಂದರ್ಭ. ಸ್ವಲ್ಪ ಸಮಯ ಕಳೆದು ಹೆಗ್ಗಣ ಒಂದು ಬಿಲದ ಬಾಗಿಲಿಂದ ಪಿಳಿ ಪಿಳಿ ನೋಡುತ್ತಾ ಮೇಲೆ ಬಂತು. ಮಿಕ್ಕವೆಲ್ಲ ಒಂದೊಂದಾಗಿ ಮೇಲೆ ಬಂದವು.
ಇದೆಲ್ಲ ದಿನನಿತ್ಯ ನಡೆವ ದೃಶ್ಯಾವಳಿಗಳು, ನನ್ನ ಸುತ್ತ ಮುತ್ತಲಿನ ಚಟುವಟಿಕೆಗಳು, ನನಗೂ ಎಲ್ಲ ಜೀವಿಗಳ ಹಾಗೆ ಸ್ಪಂದಿಸಲು ಇಷ್ಟ ಆದರೆ ಅದೊಂದು ಕಲ್ಪನೆಯ ಪ್ರಪಂಚದ ಗಾಳಿ ಮಾತು. ಅದ್ಯಾವುದೂ ನನ್ನ ಕಾಲವಲ್ಲ, ಜಡತ್ವ ನನ್ನ ಪಾಲಿಗೆ ಬಂದ ಅಮೃತ. ಯಾರ ಭಾವನೆ, ದುಃಖ, ಸಂತೋಷಗಳು ನನಗೆ ತಿಳಿಯುವುದಿಲ್ಲ. ಯಾವ ಜೀವಿಯ ಹಸಿವಿನ ಪರಿವು ನನಗೆ ಗೊತ್ತಿಲ್ಲ. ಮನುಷ್ಯರ ಅಥವಾ ಪ್ರಾಣಿಗಳ ಯಾವ ಒಡನಾಟಕ್ಕೂ ಸ್ಪಂದಿಸುವುದಿಲ್ಲ. ನನ್ನೊಂದು ಕಲ್ಲು ಯಾವ ಹುಟ್ಟು ಸಾವಿಗೂ ಚಿಂತಿಸುವ ಯೋಚನಾ ಕ್ರಿಯಾ ಶಕ್ತಿ ಇಲ್ಲ. ಕಾಲದ ಎಲ್ಲ ಋತುಚಕ್ರದಲ್ಲೂ ನನ್ನೊಂದು ಜಡ ವಸ್ತುವಷ್ಟೇ, ನನ್ನ ಅಂತ್ಯ ಇಲ್ಲೇ, ಇದೆ ಜಡತ್ವದಲ್ಲಿ. ಬದುಕು ನಾವು ಬಂದ ಪಥದಲ್ಲಿ ಮತ್ತೊಂದು ಬಾರಿ ಕರೆದೊಯ್ಯುತ್ತದೆ.
ಬಹುಶಃ ಇದ್ಯಾವುದು ಹುಚ್ಚುತನದ ಲೇಖನಿ ಕುರ್ಚಿಯದು ಎಂದು ಭಾವಿಸಿದ್ದರು ಚಿಂತೆಯಿಲ್ಲ. ಇಷ್ಟೆಲ್ಲಾ ಹೇಳಿದ ಮೇಲೆ ಮತ್ತೇಕೆ ಇದರ ಮಾತು, ಎಂಬುದು ನಿಮ್ಮ ಪ್ರಶ್ನೆಯಲ್ಲವೇ ಮೊದಲನೇ ಸಾಲುಗಳಲ್ಲಿ ನಾ ಹೇಳಿದ ಹಾಗೆ "ಮನಸಿನ ಮೂಲೆಯಲ್ಲಿ ಕುಳಿತ ಅನಾಮಿಕನ ಪ್ರಶ್ನೆಯೊಂದು ನೆನಪಾಯಿತು" ಎಂದು ಹೇಳಿದೆ ಆ ಮಾತು ನೆನಪಿಗೆ ಬಂತು, ಮತ್ತೆ ಮತ್ತೆ ಮೂಡಿ ಬರುವ ಆ ಪ್ರಶ್ನೆಗೆ ಉತ್ತರ ಬೇಡ, ಆ ಪ್ರಶ್ನೆ ಏನೆಂದರೆ
ನಿರಂತತ್ತೆಯಲಿ ನಾನೊಂದು…..???????????
ಇಂತಿ ಕುರ್ಚಿಯ ಪರವಾಗಿ,
ನಾನ್ಯಾರೋ
ಒಂದು ನಿರ್ಜೀವ ವಸ್ತುವಿಗೆ ಜೀವ ಕೊಟ್ಟ ಲೇಖನ ಸುಂದರವಾಗಿದೆ
ಲೇಖನ ಸುಂದರವಾಗಿದೆ
ಚೆನ್ನಾಗಿದೆ ! 🙂