ಕಥಾಲೋಕ

ನಿಯತ್ತು…: ದುರ್ಗಾ ಪ್ರಸಾದ್

durga-prasad

ಮೂರು ದಿನವಾದರೂ ಒತ್ತರಿಸಿ ಬರುತ್ತಿದ್ದ ಸೊಸೆ ಮಾಡಿದ ಅವಮಾನದ ದೃಶ್ಯಗಳನ್ನು ರಂಗಪ್ಪನಿಗೆ ಸಹಿಸಲಾಗುತ್ತಿರಲಿಲ್ಲ. ಬೆಳ್ಳಂಬೆಳಗ್ಗೆಯೇ ಊರಿನಿಂದ ಬಂದ ಮಗಳನ್ನು ನಿಂದಿಸಿರುತ್ತಿರುವ ಸೊಸೆಯನ್ನು ಕಂಡು ರಂಗಪ್ಪನಿಗೆ ಸುಮ್ಮನಿರಲಾಗಲಿಲ್ಲ. ಯಾಕಮ್ಮ ಹಾಗೆಲ್ಲ ಮಾತಾಡುತ್ತಿಯಾ ಎಂದು ಕೇಳಿದಾಕ್ಷಣ ಮಾವನ ಕೊರಳಪಟ್ಟಿ ಹಿಡಿದು ಮತ್ತೊಂದು ಕೈಯಲ್ಲಿ ಚಪ್ಪಲಿ ಹಿಡಿದು ನಿಂತ ಸೊಸೆಯನ್ನು ಹಿಗ್ಗಾ ಮುಗ್ಗಾ ತಳಿಸಿಬಿಡಬೇಕು ಎಂದೆನಿಸಿದರೂ ಉಸಿರು ಗಟ್ಟಿ ಮಾಡಿಕೊಂಡು ಸುಮ್ಮನಾಗಿದ್ದರು. ತಂದೆಯನ್ನು ಕೊರಳಪಟ್ಟಿ ಹಿಡಿದರೂ ಏನೊಂದು ಮಾತಾಡದೆ ಒಳನಡೆದ ಮಗನನ್ನು ಕಂಡು ರೇಜಿಗೆ ಹುಟ್ಟಿತು. ಊರಮಂದಿಯೆಲ್ಲಾ ಮನೆಯ ಮುಂದೆ ನೋಡುತ್ತಾ ನಿಂತುಕೊಂಡು ಎಂಥಾ ಜಗಳಗಂಟಿ ಹೆಂಗಸು, ಮನೆಗೆ ಕಾಲಿಟ್ಟಾಗಿನಿಂದ ಒಂದು ದಿನವೂ ಆ ಮುದಕನನ್ನು ನೆಮ್ಮದಿಯಾಗಿ ಇರಗೊಡಲಿಲ್ಲ. ಚಿನ್ನದಂಥಾ ಅತ್ತೆಯನ್ನು ನುಂಗಿ ನೀರು ಕುಡಿದಳು, ನಾದಿನಿ ಮೈದುನರನ್ನು ಕಂಡರೆ ಹಾವು ಮುಂಗುಸಿಯಂತೆ ಕಾದಾಡುವ ಇವಳು ಒಬ್ಬಳು ಹೆಂಗಸೇ? ಎಂದು ಗುಸು ಗುಸು ಪಿಸುಪಿಸು ಮಾತನಾಡಿಕೊಳ್ಳುತ್ತಿದ್ದರು. ಅಷ್ಟರಲ್ಲೆ ಮಗಳು ಧಾವಿಸಿ “ನಮ್ಮಪ್ಪನ ಕೊರಳಪಟ್ಟಿ ಹಿಡಿಯುತ್ತಿಯೇನೆ ರಂಡೆ ಮುಂಡೆ” ಎಂದು ಕೂದಲನ್ನು ಹಿಡಿದು ಬಗ್ಗಿಸಿದಳು. ಊರಜನಕ್ಕೆ ಹಬ್ಬದೂಟವೆಂಬಂತೆ ಕಿಸಿ ಕಿಸಿ ನಗುತ್ತಾ ವಿಚಿತ್ರ ಸುಖವನ್ನು ಅನುಭವಿಸುತ್ತಿದ್ದರು. ಕೋಣೆಯಿಂದ ಹೊರಬಂದ ರಾಜೀವ ಹೆಂಡತಿಗೂ, ತಂಗಿಗು ಎರಡೆರಡು ಬಿಗಿದು ಒಳಗೆ ಕಳುಹಿಸಿದ. “ಅಪ್ಪನ ಕೊರಳಪಟ್ಟಿ ಹಿಡಿದವಳನ್ನು ನೋಡುತ್ತಾ ಸುಮ್ಮನೆ ನಿಂತಿದ್ದ ನಿನ್ಯಾವ ಸೀಮೆಯ ಗಂಡಸೋ? ಅಮ್ಮೌರ ಗಂಡ ಆಗಲಿಕ್ಕೆ ಲಾಯಕ್ಕಿದಿ ನೋಡು” ಎಂದು ತಂಗಿ ಗೌರಿ ಆಡಿದ ಮಾತುಗಳಿಗೆ ಒಂದಿಷ್ಟು ಸೊಪ್ಪು ಹಾಕದೆ ಗೂಳಿ ಬಸವಣ್ಣನಂತೆ ಚಪ್ಪಲಿ ಸಿಕ್ಕಿಸಿಕೊಂಡು ಸೀದಾ ಹೊರನಡೆದನು. ರಾಜೀವ ಸಾಕಿದ ಬಿಳಿನಾಯಿಯು ಅವನೊಂದಿಗೆ ಹೆಜ್ಜೆ ಹಾಕಿತು.
     
ಮಗ ರಾಜೀವ ಸೌಭಾಗ್ಯಳನ್ನು ಪ್ರೇಮಿಸಿ ಮನೆಗೆ ಕರೆದುಕೊಂಡು ಬಂದಾಗ ಹೆಣ್ಣುಮಕ್ಕಳಿಬ್ಬರೂ ಮದುವೆ ವಯಸ್ಸಿಗೆ ಬಂದಿದ್ದರು. ಹೆಣ್ಣು ಮಕ್ಕಳನ್ನು ಹೊರಗೆ ಕಳುಹಿಸಿ ಸೊಸೆಯನ್ನು ತಂದಿದ್ದರಾಗಿತ್ತು, ಸೊಸೆ ನಾಧಿನಿಯರ ಜಗಳಗಳನ್ನು ನೋಡಿ ನೋಡಿ ಸಾಕಾಗಿಲ್ಲವೆ? ನನಗಂತೂ ಈ ಮದುವೆಮಾಡುವುದಕ್ಕೆ ಸ್ವಲ್ಪವೂ ಸಮಾಧಾನವಿಲ್ಲವೆಂದು ಮಡದಿ ರಮಾಕ್ಕಳಿಗೆ ಹೇಳಿದಾಗ, ಒಬ್ಬನೇ ಗಂಡು ಮಗನ ಮೇಲೆ ಅತೀವ ಮಮಕಾರ ಇಟ್ಟುಕೊಂಡಿದ್ದ ರಮಾಕ್ಕ “ರೀ ವಯಸ್ಸಿಗೆ ಬಂದ ಮಗ ಮನೆ ಬಿಟ್ಟು ಹೋದರೆ ನಮಗೆ ನೆಮ್ಮದಿ ಇರುತ್ತದೆಯೇ? ಹೇಗಾದರೂ ಮಾಡಿ ಸಾಲವೋ ಶೂಲವೋ ಚಿಕ್ಕದಾಗಿ ಮದುವೆ ಮಾಡಿಬಿಡಿ” ಎಂದು ಮಗನ ಪರ ವಕಾಲತ್ತು ವಹಿಸಿದ್ದಳು. ಬಂದದ್ದು ಬರಲಿ ಎಂದು ಸಾಮೂಹಿಕ ವಿವಾಹದಲ್ಲಿ ರಾಜೀವನ ವಿವಾಹವೂ ನಡೆಸಲಾಯಿತು.
        
ಮದುವೆಯಾದ ಒಂದು ವರುಷದೊಳಗೆ ಬೇರೆ ಮನೆ ಮಾಡುತ್ತೇನೆಂದು ರಾಜೀವ ಎಂದಾಗ ಇದು ಸೊಸೆಯ ಕೈವಾಡವೇ ಎಂದು ತಿಳಿದುಕೊಳ್ಳಲು ಬಹಳ ಹೊತ್ತು ಹಿಡಿಯಲಿಲ್ಲ. ಮೊದಮೊದಲು ಅತ್ತೆ ಮಾವನ ಬೇಕುಬೇಡಗಳನ್ನು ವಿಚಾರಿಸಿಕೊಳ್ಳುತ್ತ ಮನೆಗೆ ತಕ್ಕ ಸೊಸೆಯಂತೆ ನಡೆದುಕೊಳ್ಳುತ್ತಿದ್ದ  ಸೊಸೆ ಈಗ ಗಂಡನೊಂದಿಗೆ ಬೇರೆ ಮನೆ ಮಾಡಬೇಕೆಂದು ಗಂಡನ ಕಿವಿ ಊದಿರುವುದು ತಿಳಿದು ರಂಗಪ್ಪನಿಗೆ  ನಿದ್ರೆ ಹತ್ತಲಿಲ್ಲ. ಇನ್ನು ಎರಡು ಹೆಣ್ಣು ಮಕ್ಕಳನ್ನು ಮದುವೆ ಮಾಡಬೇಕು. ವರದಕ್ಷಿಣೆ, ಛತ್ರ, ಊಟದಖರ್ಚು, ಅದೂ ಇದೂ ಎಂದರೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಕೂಲಿ ಕೆಲಸ ಮಾಡುವ ನಾನು ಎಲ್ಲಿಂದ ಹೊಂದಿಸಲಿ. ಮಗ  ಅಪ್ಪನಿಗೆ ಸಹಕಾರಿಯಾಗಿ ತಂಗಿಯರ ಮದುವೆ ಮಾಡುತ್ತನೆಂದು ನಂಬಿದ್ದ ಕನಸು ನುಚ್ಚುನೂರಾಗಿ ಹೋಯಿತಲ್ಲ ಎಂದು ರಾತ್ರಿಯೆಲ್ಲಾ ಬಿಟ್ಟಕಣ್ಣು ಬಿಟ್ಟಹಾಗೆ ನೋಡುತ್ತಾ ಚಿಂತೆ ಮಾಡುತ್ತಿದ್ದನು. ಪಕ್ಕದ ಮನೆಯ ಗಾಡಿ ಸಾಬರ ಕೋಳಿ ಕೊಕ್ಕೂಕ್ಕೊ ಎಂದು ಕೂಗಿದಾಗ ಕಣ್ಣು ಮಂಜಾದಂತಾಗಿ ನಿದ್ರೆಗೆ ಎಳೆಯುತ್ತಿತ್ತು.
    
“ಹೆಂಡತಿ ಬಸುರಿ, ಈಗ  ಏಳುತಿಂಗಳು. ಡಾಕ್ಟರು ಡೇಟನ್ನು ಕೊಟ್ಟಾಗಿದೆ ಈಗಾಗಲೇ ಸ್ಕ್ಯಾನಿಂಗು, ನೂರೆಂಟು ಚೆಕಪ್ಪುಗಳು ಎಂದು ಸಾವಿರಾರು ರೂಪಾಯಿ ಖರ್ಚಾಗಿದೆ. ಯಾವಾಗ ನೋವು ಬರುತ್ತದೋ ಆ ದೇವರೇ ಬಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋದರೆ ಒಂದು ಖರ್ಚೆ ? ನೂರೆಂಟು ಟಾನಿಕ್ಕು ಮಾತ್ರೇ , ಮಗುವಿಗೆ ಬೇಕಾದ ಅವಶ್ಯಕ ವಸ್ತುಗಳು ಎಷ್ಟು ಹಣ ಸುರಿದರೂ ಸಾಲದು. ಅಂತಹದ್ದರಲ್ಲಿ ತಂಗಿ ಮದುವೆಗೆ ಹಣ ಹೇಗೆ ಹೊಂದಿಸಿ ಕೊಡಲಿ ಅಪ್ಪ. ನನಗಂತೂ ಈ ಸಂಸಾರದಿಂದ ಸಾಕು ಸಾಕಾಗಿ ಹೋಗಿದೆ. ಬೇರೆ ಎಲ್ಲಾದರೂ ವ್ಯವಸ್ಥೆ ಮಾಡಿಕೊಳ್ಳಪ್ಪ. ನೀನು ಈ ವಿಷಯಕ್ಕೆ ಇಲ್ಲಿಗೆ ಬಂದಿದ್ದೀಯಾ ಎಂದು ಅವಳಿಗೆ ಗೊತ್ತಾದರೆ ತುಂಬಾ ನೊಂದುಕೊಳ್ಳುತ್ತಾಳೆ” ಎಂದು ರಾಜೀವ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ತನ್ನ ಹೊಸ ಬಾಡಿಗೆ ಮನೆಯನ್ನು ಪೂರ್ಣವೂ ತೋರಿಸದೆ ಹೊರಗಟ್ಟಿದ್ದ. ಮೊದಲನೆಯದು ಹೆಣ್ಣಾಗಿತ್ತು, ಸುಂದರ ವದನೆ, ಆಸ್ಪತ್ರೆಯಲ್ಲಿ ನೋಡಿದ್ದು ಬಿಟ್ಟರೆ ಮೂರುತಿಂಗಳಾದರೂ ನೋಡಿರಲಿಲ್ಲ. ಮಗುವಿನ ಮೂಗು ಥೇಟ್ ಅಜ್ಜನ ಹಾಗೇ ಇದೆ ಎಂದು ಮನೆಗೆ ಬಂದವರೆಲ್ಲಾ ಮಾತನಾಡಿಕೊಳ್ಳುತ್ತಿದ್ದರಂತೆ, ಅಜ್ಜನ ಹೆಸರು ಉಳಿಸೋಕೆ ಮೊಮ್ಮಗಳಾದರೂ ಹುಟ್ಟಿದಳಲ್ಲ. ತೂಟ್ಟಿಲಲ್ಲಿದ್ದ ಮಗುವಿನ ಕೈಗೆ ನೂರರ ನೋಟನ್ನು ಕೊಟ್ಟು ಚಪ್ಪಲಿ ಹುಡುಕಾಡುತ್ತಿದ್ದ ರಂಗಪ್ಪನನ್ನು ರಾಜೀವನ ನಾಯಿ ಕಾಲನ್ನು ನೆಕ್ಕುತ್ತಾ ಹತ್ತಿರ ಸುಳಿದಾಡಿತು. ನಾಯಿಗಿರುವ ನಿಯತ್ತನ್ನು ಸಾಬೀತುಪಡಿಸಲು ಸಾಫಲ್ಯವಾಗಿತ್ತು.
    
ಮೊದಲ ಮಗಳು ಗೌರಿಯನ್ನು ದೂರದ ಮೈಸೂರಿಗೂ, ಎರಡನೇ ಮಗಳು ಸರಸ್ವತಿಯನ್ನು ಭದ್ರಾವತಿ ಹತ್ತಿರದ ಅಂತರಗಂಗೆಗೂ ಮದುವೆ ಮಾಡಿಕೊಟ್ಟ ಮೇಲೂ ಸುಖದಿಂದ ನಿದ್ರೆಮಾಡಲು ರಂಗಪ್ಪನಿಗೆ  ಸಾದ್ಯವಾಗಲಿಲ್ಲ. ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳುವುದಕ್ಕೆ ಹೊತ್ತು ಹೊರಳುವ ಮುನ್ನ ಮನೆಯಿಂದ ಹೊರಬೀಳುತಿದ್ದ. ಆರಡಿ ಮೈಕಟ್ಟು ಹರೆಯದಲ್ಲಿ ಗರಡಿಯ ವ್ಯಾಯಾಮದಿಂದ ಗಟ್ಟಿಗೊಂಡ ದೇಹಕ್ಕೆ ಪೋಲಿಸ್ ಪೇದೆಯ ಕೆಲಸ ಸಿಕ್ಕಿತಂತೆ. ಅಪ್ಪನ ಗದ್ದೆ, ಮನೆಕೆಲಸಗಳಿಗೆ ನೂರಾರು ಆಳುಗಳಿಟ್ಟು ಕೆಲಸ ಮಾಡಿಸುವಾಗ ಬೇರೊಬ್ಬರ ಕೈಕೆಳಗೆ ಕೆಲಸ ಮಾಡುವುದಕ್ಕೆ ಮಗನನ್ನು ಕಳಿಸುವುದಕ್ಕೆ ತಂದೆಗೆ ಇಷ್ಟವಾಗಲಿಲ್ಲವಂತೆ. ಪೋಲಿಸ್ ಕೆಲಸವೆಂದರೆ ಹೆಣಕಾಯುವುದಕ್ಕೂ ಸಿದ್ದವಾಗಿರಬೇಕು ಅಂತಹ ಗತಿ ನನ್ನ ಮಗನಿಗೆ ಬರುವುದು ಬೇಡ ಎಂಬುದು ತಂದೆಯ ಇಚ್ಚೆಯಾಗಿತ್ತಂತೆ. ಹೈಸ್ಕೂಲು ಮುಗಿಸಿದ್ದ ಏಕೈಕ ಮಗನೆಂದು ಹೆಗ್ಗಳಿಕೆ ಗಳಿಸಿ, ಕಾಲೇಜಿಗೆ ಹೋಗಿ ಆರಾಮಾಗಿ ಓದಿಕೊಂಡು, ಗರಡಿಯಲ್ಲಿ ವ್ಯಾಯಾಮ ಮಾಡುತ್ತ ಬೆಣ್ಣೆಮುದ್ದೆ ರೂಟ್ಟಿಗಳನ್ನು ಮೆಲ್ಲುವುದು ರಂಗಪ್ಪನ ದಿನಚರಿಯಾಗಿತ್ತು, ಅಪ್ಪನ ಜಮೀನು ಮಾರಾಟವಾದ ಮೇಲಂತೂ ಬೆಣ್ಣೆ ರೊಟ್ಟಿಯ ಮಾತಿರಲಿ ತಿನ್ನುವ ಅನ್ನಕ್ಕೂ ತತ್ವಾರ ಬಂದು. ಕೂತುಂಡು ಓಡಾಡಿಕೊಂಡಿದ್ದ ಪೈಲ್ವಾನ ಸಹೋದರರೆಲ್ಲ ದಿನನಿತ್ಯ ಕೂಲಿಗಾಗಿ ಅಲೆಯಬೇಕಾಯಿತು.
        
ಗೌರಿಗೆ ಗಂಡು ಮಗುವಾಗಿ ಊರಿಗೆ ಬಂದಾಗ ಅರ್ದ ಸಾಲದ ಬಾರ ತೀರಿತ್ತು. ಅಮ್ಮನ ತೆಕ್ಕೆಯಲ್ಲಿ ಚೊಚ್ಚಲ ಬಾಣಂತನ ಮಾಡಿಸಿಕೋಬೇಕು ಎಂದು ಊರಿಗೆ ಬರುವುದೋ ಬೇಡವೋ ಎಂದು ಅಪ್ಪನಿಗೆ ಫೆÇೀನಾಯಿಸಿದಾಗ ಇಲ್ಲ ಎನ್ನಲಾಗದೇ ಬಾರಮ್ಮ ಎಂದು ಮನೆಗೆ ಕರೆಸಿಕೊಂಡಿದ್ದ. ಗೂಡಿನಷ್ಟಿರುವ ಮನೆಯನ್ನು ಇಬ್ಬಾಗ ಮಾಡಿ ಬಾಡಿಗೆಗೆ ಕೊಡಲಾಗಿತ್ತು. ಇರುವ ಮನೆಯೂ ಹೆಣ್ಣು ಮಕ್ಕಳ ಪಾಲಿಗೆ ರಂಗಪ್ಪ ಬರೆದುಬಿಡುತ್ತಾನೆಂದು ಸೌಭಾಗ್ಯ ತಾಕೀತು ಮಾಡಿ ಬಾಡಿಗೆ ಕೊಟ್ಟಿದ್ದ ಮನೆಯನ್ನು ಖಾಲಿ ಮಾಡಿಸಿ, ಒಂದಿಷ್ಟು ಹೆಚ್ಚಾಗಿಯೇ ಮುಂಗಡ ಹಣವನ್ನು ಕೊಟ್ಟು ಮನೆಗೆ ಸೇರಿಕೊಂಡರು. ರಂಗಪ್ಪನಿಗೆ ಕೊಂಚ ಸಾಲವೂ ತೀರಿತೆಂದು ಸಮಾಧಾನವಾದರೇ ತಿಂಗಳ ಬಾಡಿಗೆ ಹಣಕ್ಕೆ ಕುತ್ತುಬಂದಿತಲ್ಲ ಎಂದು ಮನದೊಳಗೆ ಪೇಚಾಡಿಕೊಂಡನು.
    
ಗೌರಿ ಬಾಣಂತನ ಮುಗಿಸಿ ಊರಿಗೆ ಹೋಗಿ ತಿಂಗಳಾಗಿರಲಿಲ್ಲ ರಮಾಕ್ಕಳಿಗೆ ವಿಪರೀತ ಜ್ವರಬಂದಂತಾಗಿ ಆಸ್ಪತ್ರೆಗೆ ಸೇರಿಸುವಂತಾಯಿತು. ಬಹಳ ದೊಡ್ಡ ಖಾಯಿಲೇ ಏನಿಲ್ಲವೆಂದು ಗೌರಿಗೆ ವಿನಂತಿಸಿದ್ದರೂ ಆಕೆ ದಡಬಡಾಯಿಸಿ ಚಿಕ್ಕ ಮಗು ಪ್ರೀತಮನನ್ನು ಬಗಲಲ್ಲಿಟ್ಟು ಓಡೋಡಿ ಬಂದಳು. ಆಸ್ಪತ್ರೆಯಲ್ಲಿ ಮಲಗಿದ್ದ ತಾಯಿಯನ್ನು ಆಲಂಗಿಸಿ ತಾನೇ ತಾನಾಗಿ ತೊಟ್ಟಿಕ್ಕಿದ ಕಣ್ಣೀರನ್ನು ಅಮ್ಮನಿಗೆ ಗೊತ್ತಾಗದ ಹಾಗೆ ಒರೆಸಿಕೊಂಡಳು. ಬಗಲಲ್ಲಿದ್ದ ಪ್ರೀತಮನ ಕೈಯನ್ನು ಮೃದುವಾಗಿ ಮುಟ್ಟುತ್ತಾ ನೀನ್ಯಾಕೆ ಬಂದ್ಯಮ್ಮ. ಅಳಿಯಂದಿರು ಏನಂದುಕೊಳ್ಳುತ್ತಾರೋ? ನನಗೇನು ಆಗುವುದಿಲ್ಲವೆಂದು ಮೊಮ್ಮಗನ ನೋಡುತ್ತಾ ಕಿರುನಗೆಯನ್ನು ಚಿಮ್ಮಿದರು. 

  <<<<

ಅಮ್ಮಾ ಅಜ್ಜನ ಊರಿಗೆ ವರ್ಗ ಮಾಡಿಸಿಕೊಂಡು ಬಿಡ್ತಿನಿ ಎಲ್ಲರೂ ಅಲ್ಲೇ ಹೋಗಿ ಇದ್ದುಬಿಡಾಣ. ತಂಗಿಯ ಓದು ಮುಗಿಯುತ್ತಾ ಬಂತಲ್ಲ. ಅಜ್ಜನಾದರೋ ತನ್ನ ತಂದೆ ಕೊಟ್ಟ ಮನೆಯನ್ನು ಬಿಟ್ಟುಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಜ್ಜಿ ಇದ್ದಾಗ ನಮ್ಮನೆಲ್ಲಾ ಎಷ್ಟು ಪ್ರೀತಿಯಿಂದ ನೋಡಿಕೊಂಡಿದ್ದಾಳೆ. ಈಗ ಅವಳೂ ಇಲ್ಲ. ಅಜ್ಜನನ್ನು ಯಾರು ನೋಡಿಕೊಳ್ಳುತ್ತಾರೆ? ಮೇಲಾಗಿ ಅಜ್ಜನನ್ನು ನನ್ನನ್ನೂ ಪ್ರೀತಿಯನ್ನು ಚಿಕ್ಕವರಿಂದ ಬಲು ಮುದ್ದಿನಿಂದ ಸಾಕಿಲ್ಲವೇ ? ಈಗಲಾದರೂ ನಾವು ಚೆನ್ನಾಗಿ ನೋಡಿಕೊಳ್ಳೋಣ ಅಮ್ಮ. ಎಂದು ಪ್ರೀತಮ್ ತೋರುತ್ತಿದ್ದ ಅಜ್ಜನ ಮೇಲಿನ ಕಾಳಜಿಗೆ  ಗೌರಿ ಮನದಲ್ಲೇ ಸಂತಸಗೊಂಡಳು. ಆಯ್ತು ಕಣೋ ಮಗನೇ ಹೋಗೋಣಂತೆ. ನಿಮ್ಮಪ್ಪನಿಗೆ ನಾನು ಒಪ್ಪಿಸುತ್ತೀನಿ ಎಂದಳು.
    
ಸಣ್ಣ ಪುಟ್ಟ ವಿಷಯಗಳಿಗೆ ಪಕ್ಕದ ಮನೆಯಲ್ಲಿದ್ದ ಸೊಸೆ ಜಗಳ ಕಾಯುತ್ತಿದ್ದರಿಂದ ರಂಗಪ್ಪನಿಗೂ ರೋಸಿ ಹೋಗಿತ್ತು.  ಆ ಮುದುಕನನ್ನು ನೀವಾಗೇ ಯಾವುದಾದರೂ ವೃದ್ದಾಶ್ರಮಕ್ಕೆ ಸೇರಿಸುತ್ತೀರೋ. ಇಲ್ಲಾ ನಾನೇ ಹೊರಗೆ ತಳ್ಳಲೋ ಎಂದು ಗಂಡನಿಗೆ ಸೊಸೆ ತಾಕೀತು ಮಾಡುತ್ತಿದ್ದಾಗ ರಂಗಪ್ಪನ ಹೃದಯದಲ್ಲಿ ಸಲಾಕೆಯಿಂದ ತಿವಿದಂತಾಗುತಿತ್ತು. ಮೊಮ್ಮಕ್ಕಳ ಮೇಲೆ ಮಮಕಾರ ಸೊಸೆಯ ಮೇಲಿನ ಸಿಟ್ಟನ್ನು ತಣ್ಣಗೆ  ಮಾಡುತಿತ್ತು. ಹೆಂಡತಿಯ ಮಾತಿಗೆ ಸೊಪ್ಪುಹಾಕದ ರಾಜೀವನ ನಡುವಳಿಕೆಯನ್ನು ಕಂಡು ತನ್ನೊಳಗೆ ಒಮ್ಮೆ ಸಿಡಿಮಿಡಿಗೊಂಡಳು. ಅದೊಂದು ದಿನ ರಂಗಪ್ಪನನ್ನು ಮನೆಯಿಂದ ಹೊರಗೆ ಹಾಕಲೇ ಬೇಕೆಂದು ಶಪಥ ಮಾಡಿದಂತಿತ್ತು. ಹೊರಗೆ ಬಂದ ರಂಗಪ್ಪನ ಮೇಲೆ ಕೈ ಹಾಕಿದ ಸೌಭಾಗ್ಯಳನ್ನು ಯಾರೋ ತಡೆದಂತಾಯಿತು. ಪೋಲಿಸ್ ವೇಷದಲ್ಲಿ ಎದುರು ನಿಂತಿದ್ದ 24 ಹರೆಯದ ವ್ಯಕ್ತಿ ತೀರಾ ಹತ್ತಿರದ ಪರಿಚಯದವನಂತೆ ಕಂಡರೂ ಗುರುತು ಹತ್ತಲಿಲ್ಲ. ಸೌಭಾಗ್ಯಳನ್ನು ದರದರನೆ ಹಿಡಿದೆಳೆದು ಜೀಪಿನಲ್ಲಿ ಎಸೆದ ರಭಸಕ್ಕೆ ಸೌಭಾಗ್ಯಳ ಕೈ ಪರಚಿ ರಕ್ತ ಕಾರಿತು. ಊರಜನರೆಲ್ಲಾ ಮುತ್ತಿಕೊಂಡು ಎವೆಯಿಕ್ಕದೆ ನೋಡಹತ್ತಿದರು. ದಡಾರನೆ ಜೀಪಿನ ಬಾಗಿಲು ಹಾಕಿದ ಸದ್ದಾಯಿತು. ಕೂಲಿಂಗ್ ಗ್ಲಾಸ್ ತೆಗೆದು ತಾತಾ ನಾನ್ಯಾರು ಗುರುತು ಸಿಗಲಿಲ್ಲವೇ ? ನಿಮ್ಮ ಮೊಮ್ಮಗ ಪ್ರೀತಮ್. ಹೊಸ ಎ ಸಿ ಪಿ ಆಗಿ ಶಿವಮೊಗ್ಗಕ್ಕೆ ಬಂದೀದಿನಿ.  ಬನ್ನಿ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳಿ, ಅವಳಿಗೊಂದು ಗತಿ ಕಾಣಿಸುತ್ತೇನೆ . ರಂಗಪ್ಪ ಮೆಲ್ಲನೆ ಬಂದು ಜೀಪನ್ನು ಏರಿದರು. ಜೀಪು ಸುಯ್ಯಂನೆ ಹೊರಟಿತು. ರಂಗಪ್ಪ ಹಾಕಿದ ಅನ್ನವನ್ನು ಮೆಲ್ಲುತ್ತಿದ್ದ ನಾಯಿ ಸದ್ದು ಮಾಡುತ್ತಾ ಜೀಪಿನ ಹಿಂದೆ ಓಡಿತು.


     
    
 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ನಿಯತ್ತು…: ದುರ್ಗಾ ಪ್ರಸಾದ್

  1. ಒಂದು ಉತ್ತಮ ಪ್ರಯತ್ನ . ಶೈಲಿ ಛೆನ್ನಾಗಿದೆ. ಬರೆಯುತ್ತಿರಿ. ಶುಭವಾಗಲಿ

Leave a Reply

Your email address will not be published. Required fields are marked *