ನಿಯತ್ತಿನ ಘರ್ಷಣೆ: ಪಾರ್ಥಸಾರಥಿ ಎನ್.

ಗುರು ಕೈಗೆ ಕಟ್ಟಿದ್ದ ಗಡಿಯಾರ ನೋಡಿಕೊಂಡ. ಸಂಜೆ ಆರುಘಂಟೆ ದಾಟುತ್ತಿತ್ತು. ಅವನ ಮನಸ್ಸು ಅಯಾಚಿತವಾಗಿ ನೆನೆಯಿತು. ಬೆಂಗಳೂರಿನಲ್ಲಿ ಈಗ ಸಮಯ ರಾತ್ರಿ ಹತ್ತುವರೆ ಅಗಿರುತ್ತದೆ.  ಮನೆಯಲ್ಲಿ ಅಪ್ಪ ಅಮ್ಮ ಮಲಗಿರುತ್ತಾರೆ,ತಂಗಿ ಓದುತ್ತ ಕುಳಿತಿರಬಹುದು. ಆದಿನದ ಮಟ್ಟಿಗೆ ಕೆಲಸವೇನು ಬಾಕಿ ಇರಲಿಲ್ಲ. ಸರಿ ಹೊರಡೋಣವೆಂದು ಎದ್ದು ನಿಂತ. ಅವನ ಸ್ನೇಹಿತ ಶ್ರೀನಾಥ ಇವನತ್ತ ನೋಡಿದ, ಏನು ಹೊರಟೆ ಅನ್ನುವಂತೆ. ಇಬ್ಬರೂ ಸೇರಿ ದೂರದ ಆ ನಾಡಿನಲ್ಲಿ ಮನೆ ಮಾಡಿದ್ದರು. 

"ನಾನು ಹೊರಟಿರುತ್ತೇನೆ"  ಗುರು ನುಡಿದ,  ಶ್ರೀನಾಥನತ್ತ ನೋಡುತ್ತ. 
ಶ್ರೀನಾಥ ತಲೆಹಾಕಿದ, ಸರಿ ಅನ್ನುವಂತೆ. ಅವನಿಗೆ ಗುರುವಿನ ಸ್ವಭಾವ ಗೊತ್ತು. ಗುರು ಸ್ವಲ್ಪ ಭಾವನಜೀವಿ. ಮಾತು ಕಡಿಮೆ. ಕೆಲಸಕ್ಕೆ ಸಂಬಂಧಪಡಿಸಿದ್ದನ್ನು ಹೊರತುಪಡಿಸಿ ಹೊರಗೆ ಅವನು ಮಾತನಾಡುವುದು ಕಡಿಮೆಯೆ.  ಒಂಟಿಯಾಗಿ ಇರಬಯಸುವವನು. 
ಗುರು ಹೊರಟಂತೆ , ಅವನ ಪಕ್ಕದ ಕ್ಯಾಬಿನ್ನಿನ ಗ್ರೇಸಿ ಅವನತ್ತ ನಗುತ್ತ ಕೇಳಿದಳು
"ಗುರು ಒಬ್ಬನೇ ಹೊರಟೆಯ ? ನಾನು ಕಂಪನಿ ಕೊಟ್ಟರೆ ನಡೆದೀತ. ಹತ್ತು ನಿಮಿಷ ಕಾದರೆ ಆದೀತು" 
ಗ್ರೇಸಿ ಇಂಗ್ಲೇಂಡಿನಿಂದ ಬಂದವಳು, ಅಲ್ಲಿ ಇವರದೇ  ಜೊತೆ ' ಗುಡ್‌ಹೆಲ್ತ್ ಅರ್ಕೋಲಾಬ್'  ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವಳು. ಅಷ್ಟು ದಿನದ ಪರಿಚಯದಲ್ಲಿ ಗುರುವಿನ ಸ್ವಭಾವ ಅರ್ಥಮಾಡಿಕೊಂಡಿದ್ದಳು, ಬೇಕೆಂದೇ ರೇಗಿಸಲು ಎನ್ನುವಂತೆ ಕೇಳಿದ್ಧಳು. 

"ಥ್ಯಾಂಕ್ಸ್ ಗ್ರೇಸಿ, ಆದರೆ ನನಗೆ ಅದೇನೊ ಒಬ್ಬನೆ ಹೋಗಬೇಕೆನಿಸುತ್ತಿದೆ. ಸಂಜೆಯ ಮುಳುಗುವ ಸೂರ್ಯನ ಬಿಸಿಲಲ್ಲಿ ನದಿಯ ದಡದಲ್ಲಿ ಒಬ್ಬನೆ ನಡೆದಾಡುವ ಆಸೆ, ತಪ್ಪು ತಿಳಿಯಬೇಡ" 
ಗುರು ಅಂದ ಮಾತಿಗೆ , ಗ್ರೇಸಿ ನಗುತ್ತ, 
"ಸರಿ ನಿನಗೆ ನನ್ನ ಜೊತೆ ಸರಿಹೋಗದು ಬಿಡು, ಕಾಂಗೋ ನೆಲದ ಕರಿಯ ಸುಂದರ ಹೆಣ್ಣೊಂದು ನಿನಗೆ ಜೊತೆಗೆ ಸಿಗಲಿ ಹೊರಡು" ಎಂದಳು. 
ಅವಳು ಹಾಕಿದ್ದು ಶಾಪವೋ , ಅಥವ ಹಾರೈಕೆಯೊ ಅರ್ಥವಾಗದೆ ನಗುತ್ತ ಹೊರಟ ಗುರು. 

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಗುರುರಾಜನಿಗೆ   ತನ್ನ ಕಂಪನಿ 'ಗುಡ್‌ಹೆಲ್ತ್ ಅರ್ಕೋಲಾಬ್' ನಿಂದ ವಿದೇಶಕ್ಕೆ ಹೊರಡುವ ಅವಕಾಶ ದೊರೆತಾಗ ಸಂತಸಪಟ್ಟಿದ್ದ.  'ಗುಡ್‌ಹೆಲ್ತ್ '  ಒಂದು ಎಮ್ ಎನ್ ಸಿ ಕಂಪನಿಯಾಗಿದ್ದು , ಐವತ್ತಕ್ಕು ಹೆಚ್ಚು ದೇಶಗಳಲ್ಲಿ ಬಾಹು ಹರಡಿದ್ದು, ಈಗ ಆಫ್ರಿಕದ ಕೆಲವು ರಾಜ್ಯಗಳಲ್ಲಿ ತನ್ನ ವ್ಯಾಪಾರ ವ್ಯವಹಾರ ವಿಸ್ತರಿಸಿತ್ತು . ಅವನ ಜೊತೆ ಮತ್ತೂ ಹತ್ತು ಜನರಿಗೆ ಹೊಸ ಅಸೈನ್‌ಮೆಂಟಿನಲ್ಲಿ  ವಿದೇಶಕ್ಕೆ ಹೋಗುವ ಮೊದಲು ಮುಂಬೈಗೆ   ಟ್ರೈನಿಂಗ್‌ಗೆ ಕಳಿಸಿದಾಗ ಮನೆಯಲ್ಲಿ ಎಲ್ಲರೂ ಮಗ ಅಮೇರಿಕಾಕ್ಕೆ ಹೊರಟನೆಂದೆ ಭಾವಿಸಿದ್ದರು. ಆದರೆ ಟ್ರೈನಿಂಗ್ ನಂತರ ಅವರು ಕಳಿಸುತ್ತಿರುವುದು ಆಫ್ರಿಕಾದ ದೇಶ, ಕಾಂಗೋವಿಗೆ ಎಂದು ತಿಳಿದಾಗ ಪೆಚ್ಚಾಗಿದ್ದರು. ಆದರೆ ಗುರುವಿಗೇನು ಬೇಸರವಿರಲಿಲ್ಲ ಸಾಕಷ್ಟು ಹುಮ್ಮಸ್ಸಿನಿಂದಲೇ ಹೊರಟಿದ್ದ. ಈಗ ಹೊರದೇಶದಲ್ಲಿದ್ದು ಮನೆಯಿಂದ ದೂರ ಇರುವದರ ಅನುಭವವಾಗುತ್ತಿತ್ತು. 

 ’ಕಿನ್ಷಾಸ’,  ಊರಿನ ಹೆಸರು ಹೇಳಲೇ ಮೊದಲಿಗೆ ತಡವರಿಸುವಂತೆ ಆಗುತ್ತಿತ್ತು.ಅವನ ಅಮ್ಮನ ಬಾಯಲ್ಲಿ ಈಗಲೂ ಈ ಊರಿನ ಹೆಸರು ಹೊರಡಲ್ಲ. ಅದೇನೊ ಆಫ್ರೀಕ ಅನ್ನುತ್ತಾಳೆ ಅಷ್ಟೆ. ಅದೇನೊ ಆಫ್ರಿಕ ಅನ್ನುವಾಗ ಬಂಧುಗಳ ಮುಖದಲ್ಲಿ ಸ್ವಲ್ಪ ಕುತೂಹಲ ಅವರೆಲ್ಲ ಅದೇನೊ ಈಗಲೂ ಅಲ್ಲಿ ಎಲ್ಲರೂ ಸೊಂಟಕ್ಕೆ ಸೊಪ್ಪುಕಟ್ಟಿ ತಿರುಗುತ್ತಾರೆ ಎಂದು ನಿರ್ಧರಿಸಿದಂತೆ ಇತ್ತು. ಕಪ್ಪನೆಯ ಗುಂಗುರು ಕೂದಲಿನ ಅರ್ಥವಾಗದ ಕಾಡುಬಾಷೆ ಮಾತನಾಡುವ ಜನರಿರುವ ನಾಡು ಅದು ಎಲ್ಲರ ಪಾಲಿಗೆ,  ಆಫ್ರಿಕ ಎಂದರೆ ಗಾಂಧೀಜಿ, ನೆಲ್ಸನ್ ಮಂಡೇಲ ಎನ್ನುವ ಹೆಸರುಗಳು ನೆನಪಿಗೆ ಬರುತ್ತಿದ್ದವು ಅವನಿಗೆ.  ಒಂದೇ ದಿನದಲ್ಲಿ ಮೂರು ಕಾಲಮಾನವನ್ನು ಕಾಣುವ ಬೆಂಗಳೂರಿನಿಂದ ಬಂದವನಿಗೆ ವರ್ಷಪೂರ್ತಿ ಒಂದೇ ಅಧಿಕ ಉಷ್ಣಮಾನವಿರುವ ,  ಅಧಿಕ ಮಳೆಯನ್ನು ದಾಖಲಿಸುವ ಅಲ್ಲಿನ ವಾತಾವರಣ ಮೊದಲಲ್ಲಿ ಕಸಿವಿಸಿ ಮೂಡಿಸಿತ್ತು.  ಕಿನ್ಷಾಸ ಅತಿ ವಿಶಾಲವಾಗಿ ಹರಡಿದ್ದ ಪ್ರದೇಶವಾಗಿದ್ದು, ಹಳ್ಳಿ ಹಾಗು ನಗರ ಎರಡು ವಾತವರಣವನ್ನು ಒಳಗೊಂಡಿದ್ದು, ಹತ್ತಿರ ಹತ್ತಿರ ಒಂದು ಕೋಟಿ ಜನಸಂಖ್ಯೆಯ ಹತ್ತಿರವಿದ್ದು. ಕಾಂಗೋವಿನ ರಾಜದಾನಿಯಾಗಿತ್ತು

 ಆಡಳಿತ ಭಾಷೆ ಫ್ರೆಂಚ್ ಆದರೂ ಅಲ್ಲಿನ ಆಡುಬಾಷೆ 'ಲಿಂಗಲಾ' , ಬಂದು ವರ್ಷದ ನಂತರ ಅಲ್ಲಿನ ಆಡುಬಾಷೆಯ ಕೆಲವು ಪದಗಳು ಅವನಿಗೆ ಅರ್ಥವಾಗುತ್ತಿತ್ತು. ಅವನಿಗೆ ಅತ್ಯಂತ ಆಕರ್ಷಣೆ ಎನಿಸುತ್ತ ಇದ್ದದ್ದು ಪಟ್ಟಣಕ್ಕೆ ಹತ್ತಿರವಾಗಿ ಹರಿಯುತ್ತಿದ್ದ 'ಕಾಂಗೋ' ನದಿಯ ದಡ. ಒಮ್ಮೆ ಮೀನುಗಾರಿಕೆಯೆ ಪ್ರಮುಖ ಉದ್ಯೋಗವಾಗಿದ್ದ ಸ್ಥಳ. ಅವನು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹತ್ತಿರವಾಗಿದ್ದ ನದಿಯ ಹತ್ತಿರ ಹೋಗಿ ಅಲ್ಲಿಯ ತೀರದಲ್ಲಿ ಕುಳಿತುಕೊಳ್ಳುವುದು ಅವನಿಗೆ ಆಸಕ್ತಿಯ ಕೆಲಸವಾಗಿತ್ತು.  

 ಗುರು ಆಫೀಸಿನಿಂದ ಹೊರಟವನು ನದಿಯ ದಡವನ್ನು ಸೇರಿ , ಸೂರ್ಯ ಮುಳುಗಿದ ನಂತರ ಅಲ್ಲಿಂದ  ಸುಮಾರು  ಆರು ಕಿ.ಮೀ ದೂರದಲ್ಲಿದ್ದ ತನ್ನ ವಾಸಸ್ಥಳಕ್ಕೆ ಹೊರಟಿದ್ದ .   ಬಸ್ಸಿನಿಂದ ಇಳಿದು. ರಸ್ತೆಯಲ್ಲಿ ನಡೆಯುತ್ತ ಹೊರಟ. ಕಿನ್ಷಾಸದ ಕೆಲವು ಪ್ರದೇಶಗಳು ನಗರದ ಲಕ್ಷಣಹೊಂದಿದ್ದರೆ ಕೆಲವು ಜಾಗ ತೀರ ಹಳ್ಳಿಯಂತೆಯೆ ಕಾಣುತ್ತಿತ್ತು.  

ಇಕ್ಕೆಲದಲ್ಲು ಬೆಳೆದ ಮರಗಳ ನಡುವೆ ಕಪ್ಪು ರಸ್ತೆಯಲ್ಲಿ ನಡೆಯುತ್ತ ಇದ್ದವನಿಗೆ ರಸ್ತೆಯ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು, ಕೈಬೀಸಿ, ದ್ವನಿ ಮಾಡುತ್ತ ಕರೆದಾಗ ಅನುಮಾನಿಸುತ್ತ ನಿಂತ. ಗಮನಿಸಿದ ತನ್ನನ್ನು ಕರೆದ ವ್ಯಕ್ತಿ ಒಂದು ಹೆಣ್ಣು!. 

 ಗುರುವಿಗೆ ಮೊದಲು ಸ್ವಲ್ಪ ಆತಂಕ ಅನ್ನಿಸಿತು. ತನಗೆ ಪರಿಚಯವೇ ಇಲ್ಲದ ಅಪರಿಚಿತ ಹೆಣ್ಣೊಬ್ಬಳು ಗೊತ್ತಿಲ್ಲದ ನಾಡಿನಲ್ಲಿ ತನ್ನನ್ನು ಕೈಮಾಡಿ ಕರೆಯುತ್ತಿದ್ದಾಳೆ ಎನ್ನುವಾಗ ಆಶ್ಚರ್ಯವೆನಿಸಿತ್ತು. ವಿಧಿಯಿಲ್ಲದೆ ನಿಂತ. ಕತ್ತಲಿದ್ದ ಜಾಗದಲ್ಲಿ ನಿಂತಿದ್ದ ಆಕೆ ಸ್ವಲ್ಪ ಮುಂದೆ ಬಂದಳು. ಅವನತ್ತ ನಗುತ್ತ ನೋಡುತ್ತಿದ್ದಳು. ಗುರು ಗಮನಿಸಿದ. ಕಪ್ಪುವರ್ಣದವಳಾದರು ಆಕೆ ಆಕರ್ಷಕವಾಗಿಯೆ ಕಾಣುತ್ತಿದ್ದಳು. ಜೀನ್ಸ್ ಪ್ಯಾಂಟ್ , ಮೇಲೆ ಕುರ್ತಾದಂತಹ ಕೆಂಪು ವರ್ಣದ ಮೇಲುಡುಗೆ ಧರಿಸಿದ್ದವಳು ನಗುತ್ತ ಮುಂದೆ ಬಂದು,
"ಹಾಯ್ , ನಾನು ದ್ಯುಲಿ ಅಂತ, ನೀನು ಭಾರತದಿಂದ ಬಂದವನಂತೆ ಕಾಣುತ್ತೀಯ" ಎನ್ನುತ್ತ ಕೈಚಾಚಿದಳು. 
ಆಕೆ ತಡವರಿಸುತ್ತ ಆದರು ಸ್ವಷ್ಟವಾದ ಅಂಗ್ಲದಲ್ಲಿ ಮಾತನಾಡುತ್ತಿದ್ದಳು.

ಗುರು ಸಹ ಕೈನೀಡಿದ ಅವನ ಮನದಲ್ಲಿ ಒಂದೇ ಯೋಚನೆ, ಅಪರಿಚಿತಳಾದ ಈಕೆ ನನ್ನನೇಕೆ ಮಾತನಾಡಿಸುತ್ತಿರುವಳು. ಏನಾದರು ದರೋಡೆಯಂತ ಯೋಜನೆಗಳಿದೆಯ ಎಂದು. 

ಲೆಕ್ಕ ಹಾಕಿದ ಇವತ್ತೆಲ್ಲ ಲೆಕ್ಕ ಹಾಕಿದರು ನನ್ನ ಬಳಿ ಹತ್ತು  ಹನ್ನೆರಡು ಸಾವಿರ ಫ್ರಾಂಕ್  ಸಿಗಬಹುದು.  ಎಚ್ಚೆತ್ತು ನುಡಿದ
"ನಾನು ಗುರುರಾಜ ಎಂದು ನೀವು ಹೇಳಿದಂತೆ ಭಾರತದವನು. ನನ್ನಿಂದ ಏನಾಗಬೇಕಿತ್ತು" 
ಆಕೆ ನಕ್ಕಳು. 
"ಅಷ್ಟೊಂದು ಏಕೆ ಆತುರ. ಸರಿ , ನೀನು ಒಬ್ಬನೆ ಹೊರಟಿದ್ದಿ, ನೀನು ನನಗೇಕೆ ಕಂಪನಿ ಕೊಡಬಾರದು, ಹೋಟೆಲ್ ನಲ್ಲಿ ಜೊತೆಯಲ್ಲಿ ಸೇರಿ ಊಟಮಾಡಬಹುದು"
ಇಂದು ಅದೇಕೆ ನನ್ನ ಜೊತೆ ಈ ಹೆಂಗಸರು ಗಂಟು ಬೀಳುತ್ತಿದ್ದಾರೆ. ಮನೆಯಲ್ಲಿ ಶ್ರೀನಾಥ ಊಟಕ್ಕೆ ಸಿದ್ಧಪಡಿಸಿ ಕಾಯುತ್ತ ಇರುತ್ತಾನೆ. ನಾನಿಲ್ಲಿ ಸಮಯ ಕಳೆಯುತ್ತಿದ್ದೇನೆ ಅನ್ನಿಸಿತು  ಗುರುವಿಗೆ. 
ಆಫೀಸಿನಲ್ಲಿ ಗ್ರೇಸಿಯ ಶಾಪ ನೆನಪಿಗೆ ಬಂದಿತು. 
"ಸರಿ ನಿನಗೆ ನನ್ನ ಜೊತೆ ಸರಿಹೋಗದು ಬಿಡು, ಕಾಂಗೋ ನೆಲದ ಕರಿಯ ಸುಂದರ ಹೆಣ್ಣೊಂದು ನಿನಗೆ ಜೊತೆಗೆ ಸಿಗಲಿ ಹೊರಡು" 

ನಗುಮುಖ ಹೊತ್ತು ನುಡಿದ. 
"ಇಲ್ಲ ಕ್ಷಮಿಸು. ಇಂದು ನಾನು ಹೊರಗೆ ತಿನ್ನಲಾರೆ, ಮನೆಯಲ್ಲಿ ಸ್ನೇಹಿತ ಕಾಯುತ್ತ ಇರುತ್ತಾನೆ ಊಟಕ್ಕೆ. ನಿನ್ನ ಜೊತೆ ಮತ್ತೊಂದು ದಿನ ಬರುವೆ" 
"ಸ್ನೇಹಿತನೆ ?"  
ಆಕೆಯ ದ್ವನಿಯಲ್ಲಿ ಎಂತದೋ ಆಶ್ಚರ್ಯ. ಆಕೆ ಏನೊ ಅಪಾರ್ಥ ಮಾಡಿಕೊಂಡಂತೆ ಇತ್ತು. ಮತ್ತೆ ನುಡಿದಳು

"ನೋಡು ಈದಿನ ನನಗೆ ಯಾವ ದುಡಿಮೆಯೂ ಇಲ್ಲ. ಇಂದು ನನ್ನ ರಾತ್ರಿಯ ಊಟದ ಏರ್ಪಾಟು ನೀನು ಏಕೆ ವಹಿಸಿಕೊಳ್ಳಬಾರದು. ನನಗೆ ಹೊಟ್ಟೆತುಂಬಾ ಊಟ. ನಿನಗೂ ಅಷ್ಟೆ ನೀನು  ಬಯಸುವದೆಲ್ಲ ನನ್ನ ಬಳಿ ಇದೆ. ನಿನಗೂ ಹೊಟ್ಟೆ ತುಂಬಾ ಸಿಗುತ್ತದೆ "ಎನ್ನುತ್ತಾ ಆಕರ್ಷಕವಾಗಿ ಕಾಣುವಂತೆ ನಕ್ಕಳು.  

ಗುರು ಈಗ ಕೊಂಚ ಗಾಭರಿಯಾದ ಇದೇನು ಇವಳ ಮಾತು ಎಂದು ಅರ್ಥವಾಗದೆ ಸುತ್ತಲೂ ಗಮನ ಹರಿಸಿದ. ರಸ್ತೆಯ ಎದುರಿನ ಪುಟ್‍ಪಾತಿನಲ್ಲಿ ಮತ್ತಿಬ್ಬರು ಹೆಂಗಸರು ನಿಂತಿದ್ದರು. ಇವನತ್ತ ನೋಡುತ್ತ, ನಕ್ಕು ಕೈಬೀಸುತ್ತ,  ಸನ್ನೆ ಮಾಡುತ್ತ, ಪ್ರೋತ್ಸಾಹಿಸುವಂತೆ ನಕ್ಕರು 
ಅವನಿಗೆ ತಟ್ಟನೆ ಹೊಳೆಯಿತು. ಈಕೆ ಕಾಲ್‍ಗರ್ಲ್ , ಎದುರು ಪುಟ್‍ಪಾತಿನಲ್ಲಿ ನಿಂತಿರುವ ಅವರು ಸಹ ಇವಳದೇ ಗುಂಪಿನವರು. ಗುರುವಿಗೆ ಒಮ್ಮೆಲೆ ಕಾಲಿನಲ್ಲಿ ನಡುಕ ಕಾಣಿಸಿತು.ಜೀವನದಲ್ಲಿ ಮೊದಲ ಬಾರಿಗೆ ಇಂತಹ ಸಂದರ್ಭ ಎದುರಿಸಿದ್ದ.   ಕಾಂಗೋದಲ್ಲಿ ಯುದ್ಧ ಹಾಗು ಗುಂಪುಗರ್ಷಣೆ ದರೋಡೆಗಳಂತ ದುರಂತದಲ್ಲಿ ಸಿಕ್ಕಿ ಸತ್ತವರು ಅಪಾರ. ಹಾಗೆ ಅಪ್ಪ ಅಮ್ಮನನ್ನು ಕಳೆದುಕೊಂಡು ಅನಾಥರಾದ ಬಹಳ ಹುಡುಗಿಯರು ಹೊಟ್ಟೆಪಾಡಿಗಾಗಿ, ಈ ವೃತ್ತಿಯನ್ನು ಅವಲಂಭಿಸಿರುವರು ಎಂದು ಒಮ್ಮೆ ಓದಿದ್ದ . ಆದರೂ ಸಂದರ್ಭವನ್ನು ಎದುರಿಸುವಾಗ ಗುರುರಾಜ ಸಹಜವಾಗಿ ಹೆದರಿದ್ದ. 

ಬೆಂಗಳೂರಿನಿಂದ ಎಷ್ಟೋ ಸಾವಿರ ಮೈಲು ದೂರದಲ್ಲಿರುವ ತನ್ನನ್ನು ಪ್ರಶ್ನಿಸುವರು ಸಹ ಯಾರು ಇಲ್ಲ , ಆದರೆ ಅವನ ಮನವೇಕೊ ಇಂತಹ ವ್ಯವಹಾರಕ್ಕೆ ಒಡಂಭಡಲಿಲ್ಲ. ಮನ ಪ್ರಭಲವಾಗಿ ನಿರಾಕರಿಸುತ್ತಿತ್ತು.  ಅವನು ಹೇಳಿದ 
"ಕ್ಷಮಿಸು , ಇಂತಹ ವ್ಯವಹಾರವೆಲ್ಲ ನನಗೆ ಆಸಕ್ತಿಯಿಲ್ಲ. ಇಷ್ಟವೂ ಇಲ್ಲ" ಎನ್ನುತ್ತಾ ಗುರು ಹೊರಟ.
"ತಡೆ ಆಸಕ್ತಿ ಬರುವಂತೆ ನಾನು ಮಾಡುತ್ತೇನೆ, ನಿನ್ನ ವಯಸಿನಲ್ಲಿ ಇಷ್ಟವಿಲ್ಲ ಅಂದರೆ ಏನು ಅರ್ಥ. ಅಥವ ನೀನೇನು ಅಂತವನೊ? ನಿನ್ನ ಸ್ನೇಹಿತನನ್ನೆ ಹುಡುಕಿ ಹೋಗುತ್ತಿದ್ದೀ ?? .  ಹೋಗಲಿ ನನ್ನ ಪರವಾಗಿ ಯೋಚಿಸು, ನಿನ್ನಿಂದ ನನಗೆ ಇಂದಿನ ಊಟ ಸಿಗುತ್ತದೆ ಅಲ್ಲವೇ"  ಎಂದು ಬಲವಂತ ಮಾಡಿದಳು. 
"ನೋಡು ನೀನು ಹಸಿವೂ ಎನ್ನುತ್ತಿರುವೆ. ನಾನು ಇಂದಿನ ನಿನ್ನ ಊಟದ ಖರ್ಚನ್ನು ವಹಿಸಬಲ್ಲೆ. ಆದರೆ ನೀನು ಹೇಳಿದಂತೆ ನಿನ್ನ ಜೊತೆ ವರ್ತಿಸುವುದು ನನಗೆ ಸಾದ್ಯವಿಲ್ಲ" 
"ನೋಡು, ನಾನು ಈ ವೃತ್ತಿಯಲ್ಲಿ ಇರುವಳೆ ಇರಬಹುದು ಆದರೆ ನಿನ್ನಿಂದ ಸುಮ್ಮನೆ ಹಣ ಪಡೆಯಲಾರ, ಇದೊಂದು ಉದ್ಯೋಗ ನನಗೆ,  ಹಣ ಕೊಡು ನಾನು ಊಟ ಮಾಡುತ್ತೇನೆ, ನೀನು ಊಟಮಾಡು" 
ಎಂದಳು. 

ಗುರುವಿನ ಮನಸ್ಸು ಈಗ ದೃಡವಾಯಿತು. ಜೇಬಿನಿಂದ ಹಣ ತೆಗೆಯುತ್ತ ಹೇಳಿದ.
"ನೋಡು ಇಲ್ಲಿ   ಎರಡಿ ಸಾವಿರ  ಫ್ರಾಂಕ್ಗಳಿವೆ, ತೆಗೆದುಕೋ, ನಿನ್ನ ಖರ್ಚಿಗಾಯಿತು, ನಾನು ನಿನ್ನ ಜೊತೆ ಬರಲಾರೆ, ಹಸಿವು ಎಂದು ನೀನು ಅನ್ನುವಾಗ ಹಾಗೆ ಹೋಗುವುದು ನನಗೆ ಧರ್ಮವಾಗಲಾರದು, ಮನುಷ್ಯತ್ವವೂ ಅಲ್ಲ" ಎಂದ
ಆಕೆ  ಸಹ ದೃಡವಾದ ದ್ವನಿಯಲ್ಲಿ ಹೇಳಿದಳು 
"ನೋಡು ನಿನ್ನ ಧರ್ಮದ ಹಣ ನನಗೆ ಬೇಡ, ನಾನೇನು ಬಿಕ್ಷುಕಿ  ಅಲ್ಲ ನಿನ್ನಿಂದ ಬಿಟ್ಟಿ ಹಣ ಪಡೆಯಲು. ನಿನಗೆ ಇಷ್ಟವಿಲ್ಲ ಅನ್ನುವದಾದರೆ ಹೊರಡುತ್ತಿರು, ನಿನ್ನಿಂದ ನನ್ನ ಸಮಯ ವ್ಯರ್ಥವಾಯಿತು. ನೀನು ಇಲ್ಲಿ ನಿಂತಿದ್ದರೆ ಬೇರೆ ಗಿರಾಕಿಗಳು ಇತ್ತ ಸುಳಿಯುವದಿಲ್ಲ"
"ಸರಿ ನಾನು ಹೊರಡುತ್ತೇನೆ, ಈ ಹಣವನ್ನು ನೋಡು ಇಲ್ಲಿ ಇಡುತ್ತಿದ್ದೇನೆ" 
ಎನ್ನುತ್ತ ಪಕ್ಕದಲ್ಲಿದ್ದ  ಕಲ್ಲು ಬೆಂಚಿನ ಮೇಲಿಟ್ಟ ಗುರುವು 
"ಈ ಹಣವನ್ನು ತೆಗೆದುಕೋ. ನಿನಗೆ ಒಳ್ಳೆಯದಾಗಲಿ" ಎನ್ನುತ್ತ ವೇಗವಾಗಿ ನಡೆಯುತ್ತ ಹೊರಟನು. 
ಎದುರಿಗೆ ನಿಂತಿದ್ದ ಇಬ್ಬರೂ ಇವನನ್ನೆ ನೋಡುತ್ತಿದ್ದರು. 

ವೇಗವಾಗಿ ನಡೆಯುತ್ತ ನಡೆಯುತ್ತ  ಗುರು ತನ್ನ ಮನೆಯ ಹತ್ತಿರ ಬಂದ. ಈಗ ಅವನ ಆತಂಕ, ನಡುಕ ಎಲ್ಲವೂ ಸ್ವಲ್ಪ ಮಟ್ಟಿಗೆಕಡಿಮೆ ಆಗಿತ್ತು, ಅವನು ಯೋಚಿಸಿದ, ಅದು ಏಕೆ ನನ್ನ ಮನ ಅವಳ ಅಹ್ವಾನವನ್ನು ಒಪ್ಪಲಿಲ್ಲ.  

ಅವನಿಗೆ ಅವನ ಅಮ್ಮ ನೆನಪಿಗೆ ಬಂದಳು. ಈಗಲು ದಿನ ಪೂಜೆ ಮಾಡುವ ಸಂಪ್ರದಾಯದವಳು ಅವಳು, ತಂದೆಯಾದರು ಅಷ್ಟೆ ದೇವರು ದೇವಸ್ಥಾನ ಎಂದು ಎಂದೂ ಸಹ ಹೋಗದಿದ್ದರೂ ಸಹ , ಶಿಸ್ತುಬದ್ಧ ಜೀವನ ಅವರದು. ಎಂದಿಗೂ ಆನೈತಿಕ   ಅನಾಚಾರದ ಜೀವನಕ್ಕೆ ಇಂಬುಗೊಟ್ಟವರಲ್ಲ.  ತಾನಾಗಲಿ ತಂಗಿಯಾಗಲಿ ಸಂಜೆ ದೀಪ ಹಚ್ಚಿದ ನಂತರವೂ ಮನೆಗೆ ಬರದಿದ್ದಲ್ಲಿ ಆತಂಕಪಡುವ ಸಂಸಾರ ತಮ್ಮದೂ.  ಹಾಗಿರಲು ಸಾವಿರಾರು ಮೈಲಿ ದೂರದಲ್ಲಿರುವ ಈ ದೇಶದಲ್ಲಿಯೆ ಆಗಲಿ ತನ್ನ ಮನ ಬೆಳೆದುಬಂದ ಹಿನ್ನಲೆಯನ್ನು ದಿಕ್ಕರಿಸಿ ಅಪಮಾರ್ಗಗಳಲ್ಲಿ ನಡೆಯಲು ಸಿದ್ದವಿಲ್ಲ ಅವನು ಸಿದ್ಧನಿರಲಿಲ್ಲ.

ಅವಳಾದರೂ ಅಷ್ಟೆ , ಮಾಡುವ ವೃತ್ತಿಧರ್ಮಕ್ಕನುಸಾರವಾಗಿ ಹಣ ಪಡೆಯಲು ಕಷ್ಟಪಡುವ ಅವಳು, ತಾನು ಹಾಗೆ ಹಣ ಕೊಡುವೆ ಎಂದರೆ ದಿಕ್ಕರಿಸಿದಳು, ತಾನೇನು ಬಿಕ್ಷುಕಿ ಅಲ್ಲ ಎಂದಳು. ಅವಳ ಕಣ್ಣುಗಳಲ್ಲಿ ಎದ್ದು ಕಾಣುತ್ತಿದ್ದ ಅಭಿಮಾನ ಅವನಿಗೆ ನೆನಪಿಗೆ ಬಂದಿತು.   

ತಾನು ಅಲ್ಲಿರಿಸಿದ ಹಣವನ್ನು ಅವಳು ತೆಗೆದುಕೊಂಡಳೋ ಇಲ್ಲವೋ ಎನ್ನುವ ಯೋಚನೆ ಅವನನ್ನು ಕಾಡಿತು.  ಪುನಃ ಹಿಂದೆ ಹೋಗಿ, ತಾನಿಟ್ಟ ಹಣ ಅವಳು ತೆಗೆದುಕೊಂಡಳೊ ಎಂದು ಪರಿಶೀಲಿಸಲೇ ? ಅನ್ನಿಸಿತು. ಇಲ್ಲ ಬೇಡ ಅಲ್ಲಿಹೋಗುವುದು ಬೇಡ. ಮತ್ತೆ ಅವಳನ್ನು ಎದುರಿಸಬೇಕು. ಅವಳ ಅಭಿಮಾನ ತುಂಬಿದ ಕಣ್ಣುಗಳನ್ನು , ತನ್ನನ್ನು ದಿಕ್ಕರಿಸಿದ ಕಣ್ಣುಗಳನ್ನು , ತಾನು ಬಿಕ್ಷುಕಿ ಅಲ್ಲ ಎನ್ನುವ ಅವಳ ಅಭಿಮಾನವನ್ನು ಪುನಃ ಎದುರಿಸಬೇಕು. 
ಗುರು ನಿಧಾನವಾಗಿ ಮನೆಯತ್ತ ನಡೆದ.

*****
(ರಘು ಎಸ್ ಪಿ ರವರ ಫೇಸ್ ಬುಕ್ಕಿನ ಪೋಸ್ಟ್ ನ ಪ್ರೇರಣೆಯಿಂದ ಬರೆದ ಕತೆ)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Gaviswamy
9 years ago

ಕಥೆ ಚೆನ್ನಾಗಿದೆ ಸರ್

1
0
Would love your thoughts, please comment.x
()
x