ಎಪ್ಪ ಏನೋ ಇದು ಅಷ್ಟೊಂದು ದೊಡ್ದುದು ಗುಡ್ಡ ಇದ್ದಂಗೆ ಇದೆಯಲ್ಲೋ ಮಾರಾಯ ಅಂದ ನಮ್ಮ ಹನುಮಂತಣ್ಣ ಜೆರೋಸಿಕ್ ಪಾರ್ಕ್ ಸಿನಿಮಾನ ಟಿವಿ ನಲ್ಲಿ ನೋಡುತ. ಹೇ ಹನುಮಂತಣ್ಣ ಅಂತವು ಎರಡು ತರೋನು ನಾವು ಹೊಲ ಹಸನು ಮಾಡೋಕೆ ಬರುತ್ತೆ ಅಂದೆ ಅದಕೆ ಥಟ್ಟಂತ ಉತ್ತರ ಬಂತು ಹನುಮಂತಣ್ಣನಿಂದ “ಬೇಡ ಚಿಕ್ಕ ಧಣಿಯಾರೇ ನಮಗೆ ತಿನ್ನಾಕೆ ಏನು ಸಿಗ್ತಿಲ್ಲಾ ಈ ಮಳೆ ನಂಬಕಂಡು ಇರೋ ಎರಡು ಎತ್ತು ಸಾಕೋದಕ್ಕೆ ಅವರ ಕಾಲು ಇವರ ಕಾಲು ಹಿಡಿದು ಮೇವತಗೊಂಡು ಬರ್ತಾಇದಿವಿ” ಇನ್ನೂ ಅಷ್ಟುದೊಡ್ಡದು ಡೈನೋಸಾರಗೆ ಏನು ಹಾಕೋದು. ಅದುನ್ನ ತಂದ್ರೆ ನಾವು ಮನೆಯವರು ಎಲ್ಲರು “ಉಪ್ಪು ಹಚ್ಚಿಕೊಂಡು ಮಲ್ಕೊಬೇಕು ಅಷ್ಟೇ” ಅಂದ. ಅವನು ಹೇಳದ್ರಾಗು ನಿಜ ಇದೆ ಯಾಕೆ ಅಂದ್ರೆ ಇವತ್ತಿನ ದಿನದಾಗ ಹೈ,ಕರ್ನಾಟಕ ಕಡೆಗೆ ಬಂದ್ರೆ ಎಷ್ಟು ದೂರನೋಡಿದ್ರು ಕಲ್ಲು-ಗುಡ್ಡ ಬಂಡೇನೇ ಕಾಣೋದು. ಸ್ವಲ್ಪಾನು ಹಸಿರಿಲ್ಲ ಮರಗಳು ಇಲ್ಲ. ಇನ್ನು ಕೆಲವೊಂದುಕಡೆ ಭೂಮಿನ ಬಗೆದು ಕಲ್ಲು ತೆಗೆದು ದುಡ್ಡು ಮಾಡೋರು ಎಷ್ಟೋ ಇದಾರೆ. ಆ ಕಲ್ಲು ತೆಗೆದ ಭೂಮಿ ಹುಳುಮೆ ಮಾಡೋಕೆ ಎಲ್ಲಿಂದ ಬಂದಾತು.
ಈ ಹನುಮಂತಣ್ಣ ಯಾರು ಅಂತ ಪರಿಚಯ ಮಾಡಿಕೊಡ್ತೀನಿ. ಹನುಮಂತಪ್ಪ ಅಂತ ಹೆಸರು ಬರೋಕೆ ಒಂದು ಕಾರಣ ಇದೆ ಹನುಮಂತಣ್ಣ ತನ್ನ ತಾಯಿ ಹೊಟ್ಯಾಗಿಂದ ಈ ಭೂಮಿಗೆ ಬರ್ಬೇಕಾದ್ರ ಬಹಳ ತ್ರಾಸ್ ಕೊಟ್ಟಾನ. ಅವರ ತಾಯಿಗೆ ಹೆರಿಗೆ ನೋವು ಬಹಳ ಕಾಡಿಸಿದಕ್ಕೆ ಅವರ ಅಜ್ಜಿ ಹನುಮಾನ ದೇವರಿಗೆ ಹರೆಕೆ ಹೊತ್ತು “ನಿನ್ನ ಹೆಸರೇ ಇಡ್ತೀನಿ ಹುಟ್ಟೋ ಮಗುಗೆ ಹೆರಿಗೆ ಆರಾಮಾಗಿ ಆದ್ರೆ” ಅಂತ ಆ ಹನುಮಾನ ದೇವರ ಆಧಾರ ತಂದು ಬಾಣಂತಿಗೆ ಹಚ್ತಾಳ ಅವಾಗ ನಮ್ಮ ಹನುಮತಣ್ಣ ಹುಟ್ಯಾನ ನೋಡ್ರಿ.
ಹನುಮಂತಣ್ಣ ನಮ್ಮನೆಯ ಕೆಲಸ ಮಾಡುವ ಕೂಲಿಕಾರ. ಕೂಲಿಕಾರ ಅಂದ್ರೆ ತಪ್ಪಾಗುತ್ತೆ. ಮನೆಯ ಮಗನಂತೆ ಅವನು ಚಿಕ್ಕವನು ಇದ್ದಾಗಿಂದ ನಮ್ಮ ಮನೇಲೆ ಕೆಲಸ ಮಾಡ್ಕೊಂಡು ಇದಾನೆ ಅದಕ್ಕೆ ನಾವು ಹನುಮಂತಪ್ಪ ಬದಲಾಗಿ ಹನುಮಂತಣ್ಣ ಅಂತ ಕರಿತೀರೋದು.ಈ ಒಂದು ಪದದಿಂದ ಗೊತ್ತಾಗಿರ್ಬೇಕು ಹನುಮಂತಣ್ಣ ಎಷ್ಟು ನಿಷ್ಠಾವಂತ ಅಂತ.
ನನಿಗೆ ತಿಳದಂಗೆ ಹನುಮಂತಣ್ಣ ಓದಿಗೆ ಯಾವತ್ತೋ ತಿಲಾಂಜಲಿ ಇಟ್ಟಾನ. ಯಾಕೆ ಶಾಲಿಗೆ ಹೋಗಿಲ್ಲ, ನೀ ಶಾಲಿ ಯಾಕೆ ಕಲಿತಿಲ್ಲ ಅಂದ್ರೆ ಒಂದೇ ಮಾತು “ನಾನು ಸಾಲಿ ಕಳಿಯಾಕೆ ಹೋದ್ರೆ ಹೊಟ್ಟೆಗೆ ಇಟ್ಟು ತರೋರು ಯಾರು ಮನೆಯವರಿಗೆಲ್ಲ ತಣ್ಣೀರು ಬಟ್ಟೆನೆ ಗತಿ” ಅಂದ. ಹೌದು ಅವನು ದುಡ್ದಿಲ್ಲ ಅಂದ್ರೆ ಬದುಕು ನಡಿಯೋದು ಕಷ್ಟ. ಮತ್ತೊಂದು ಖುಷಿಯ ವಿಚಾರ ಅಂದ್ರೆ ಅವನ ಇಬ್ಬರು ಮಕ್ಳನ್ನು ಶಾಲಿಗೆ ಕಳುಹಿಸಿ ಒಳ್ಳೆಯ ಕೆಲಸ ಮಾಡ್ಯಾನ. ಒಂದು ಹುಡುಗ ಏಳನೇ ತರಗತಿ, ಹುಡುಗಿ ಹತ್ತನೇ ತರಗತಿ ಕಲಿತಿದ್ದಾರೆ.
ಸರ್ಕಾರದ ಯಾವುದೇ ಯೋಜನೆಗೆ ಆಸೆ ಪಟ್ಟೋನು ಅಲ್ಲ, ಅಲ್ಲೋ ರೂ.೧/- ಒಂದು ಕೆ ಜಿ ಹಕ್ಕಿ ಕೊಡ್ತಾರೆ ಅದು ತಗೋಬಹುದಲ್ಲ ಅಂದ್ರೆ “ನಾವು ರೈತರು ಬೆಳೆ ಬೆಳೆದು ಬೇರೆಯವರಿಗೆ ಕೊಡ್ಬೇಕು ಆದರೆ ನಾವು ಬೇರೆಯವರಿಂದ ತಗೋಳೋದು ಅಲ್ಲ” ಅಂದ ಕಡ್ಡಿನ ಎರಡು ತುಂಡುಮಾಡಿದಂಗೆ. ಅದಕ್ಕೆ ನಾನು ಹನುಮಂತಣ್ಣನ ಅಷ್ಟೊಂದು ಗೌರವದಿಂದ ನೋಡೋದು. ಈ ಕಾಲದಲ್ಲೂ ಇಂತ ಜನ ಇದಾರೆ ಅಂದ್ರೆ ಯಾರು ನಂಬೋಲ್ಲ. ಇಲ್ಲಿಯವರೆಗೂ ಹನುಮಂತಣ್ಣ ತಗೊಂಡಿರೋ ಸಾಲಕ್ಕೆ ಯಾವತ್ತೂ ಪತ್ರ ವ್ಯವಹಾರ ಇಲ್ಲ, ಬರಿ ಬಾಯಿ ಮಾತಲ್ಲೇ ನಡಿಯೋದು “ಹನುಮಂತಣ್ಣ ಅಂದ್ರೆ ನಿಯತ್ತು,ನಿಯತ್ತು ಅಂದ್ರೆ ಹನುಮಂತಣ್ಣ” ಅದರಲ್ಲಿ ಎರಡು ಮಾತು ಇಲ್ಲ. ಇವಾಗ ಹನುಮಂತಣ್ಣ ಆರ್ಥಿಕ ಪರಿಸ್ಥಿತಿ ಬಹಳ ಸುಧಾರಿಸಿದೆ ಯಾಕಂದ್ರೆ ಎರಡು ಆಕಳು ಇದಾವು ಮತ್ತೆ ತನ್ನ ಹೊಲನು ದುಡಿಮೆ ಮಾಡ್ತಾ ಇದಾನೆ.
–ಜೆಪಿ.ಅಡೂರ್