ಪ್ರೀತಿಯ ಕ್ಯಾಂಪಸ್ಸಿನ ಕನ್ಯೆ,
ಕ್ಯಾಂಪಸ್ಸಿನಲ್ಲಿನ ಹೂವುಗಳ ಘಮಲು ಮನಸ್ಸಿಗೆ ತಾಕುತ್ತಿದೆ. ಆ ನೆನಪುಗಳು ಇನ್ನೂ ಇಲ್ಲೇ ಎಲ್ಲೋ ಸುಳಿದಾಡುತ್ತಿವೆ. ಇಬ್ಬರೂ ಕೈ ಕೈ ಹಿಡಿದು ಸುತ್ತಾಡಿದ ಜಾಗಗಳಲ್ಲೆಲ್ಲ ಉಳಿದ ನಮ್ಮ ಬಿಸಿ ಉಸಿರನ್ನು ಹುಡುಕುತ್ತಿದ್ದೇನೆ ನೀನಿಲ್ಲದ ಜಾಗದಲ್ಲಿ. ನನಗಿನ್ನೂ ನೆನಪಿದೆ ನನ್ನನ್ನು ಹುಡುಕುತ್ತಿದ್ದ ನಿನ್ನ ಕಣ್ಣುಗಳ ಹೊಳಪು ಹಾಸುಹೊಕ್ಕಾಗಿದೆ ಈ ಮನದಲ್ಲಿ. ಮೊದಲ ಆಕಸ್ಮಿಕ ಭೇಟಿ ಜಗಳದಿಂದಲೇ ಶುರುವಾದದ್ದು, ಮತ್ತೆ ಕೆಲವು ದಿನ ಓರೆಗಣ್ಣಲ್ಲಿ ನೋಡುವ ಅದೇ ಲುಕ್. ವೈರತ್ವ ಕ್ರಮೇಣ ಸ್ನೇಹವಾಗಿ ರೂಪುಗೊಂಡಿತು. ನೀನು ಎಲ್ಲಿ ಇರುತ್ತಿಯೋ ನಾನಲ್ಲಿ ! ಎಂದು ಆಗಾಗ ನೀನು ಹೇಳುವ ತುಂಟ ಮಾತುಗಳು ಇನ್ನೂ ಕಿವಿಯಲ್ಲಿ ಗುನುಗುಟ್ಟುತ್ತಿವೆ. ನೀನು ನನ್ನ ಕೈ ಹಿಡಿದುಕೊಂಡು ನಡೆಯುವಾಗ ನನ್ನ ಮನ ತಕಧಿಮಿತ ಹಾಡುತ್ತಿತ್ತು ಕಣೆ.
ರೂಪಾ, ನೀ ನನ್ನನ್ನು ಹಿಂಬಾಲಿಸಿಕೊಂಡು ಬಂದಿದ್ದ ಕ್ಯಾಂಪಸ್ಸಿನ ಟಾರು ರೋಡು, ಹಸಿರು ಉದ್ಯಾನವನ, ಬಟಾನಿಕಲ್ ಗಾರ್ಡನ್, ಬಸ್ಟಾಪು, ಚೆನ್ನಮ್ಮ ಗ್ರೌಂಡು, ಮೇನ್ ಲೈಬ್ರರಿ, ವಿದ್ಯಾಸೌಧ ಮುಂದಿರುವ ಗಾರ್ಡನ್ನುಗಳಲ್ಲಿ ಅಲೆದಾಡಿದ ಹೆಜ್ಜೆ ಗುರುತುಗಳು ಇನ್ನೂ ಅಚ್ಚಳಿಯದೆ ಉಳಿದಿವೆ. ಈಗಲೂ ಕಾಡುತ್ತಿವೆ. ನನ್ನಲ್ಲಿ ಶಾಶ್ವತವಾಗಿ ಹುದುಗಿ ಹೋಗಿದ್ದ ಭಾವನೆಗಳನ್ನು ಗರಿಗೆದರಿಸಿದಾಕೆ ನೀನು. ಆ ನಿನ್ನ ಮುಗುಳು ನಗೆ, ಕುಹಕ ನಗೆ ನನ್ನನ್ನು ಹುಚ್ಚೆಬ್ಬಿಸುತ್ತಿತ್ತು. ನಿನ್ನ ಹಿಂದಿನ ಕಷ್ಟದ ದಿನಗಳನ್ನು ನನ್ನೊಡನೆ ಹಂಚಿಕೊಂಡಾಗ ಇಂತಹ ಕಷ್ಟವನ್ನು ಮನಸ್ಸಲ್ಲಿ ಇಟ್ಟುಕೊಂಡು ಇಷ್ಟು ಚೆನ್ನಾಗಿ ನಗು ಮುಖದಿಂದ ಎಲ್ಲರನ್ನೂ ನಗಿಸುತ್ತ ಇರುತ್ತಿ. ದಾಳಿಂಬೆಯ ಬೀಜಗಳಂತಿರುವ ಆ ನಿನ್ನ ಬಿಳಿಯ ಹಲ್ಲುಗಳು ಯಾವಾಗಲೂ ಆಕರ್ಷಣೀಯ. ನಿನ್ನ ಹೆಸರಲ್ಲೆ ರೂಪ ಅಡಗಿದೆ.
ಸ್ನೇಹದ ರೂಪದಲ್ಲಿ ನೀ ನನ್ನನ್ನು ಪ್ರೀತಿಸಿದ ರೀತಿ ಇದೆ ಅಲ್ವಾ, ಅದು ನನಗೆ ತುಂಬ ಹಿಡಿಸಿತು ಚಲುವೆ. ಮೆಚ್ಚುವಂತದ್ದು. ನೀನು ಕಾಲ್ ಮಾಡಿದಾಗ ನಾನು ಊಟಕ್ಕೆಂದು ಮೆಸ್‍ಗೆ ಹೋದಾಗ ಅಥವಾ ಬೇರೆ ಕಾರ್ಯದಲ್ಲಿ ಮಗ್ನನಾಗಿದ್ದರೆ ಮುಗಿದೆ ಹೋಯ್ತು. ಅವತ್ತು ಮಾತ್ರ ರಂಪಾಟ ತೆಗೆಯುತ್ತಿದ್ದೆ. ಸ್ವಲ್ಪ ತಡವಾದರೂ ಕುರುಕ್ಷೇತ್ರವಾಗುತ್ತಿತ್ತು. ಆಮೇಲೆ ಭೇಟಿಯಾದಾಗ ನೀ ಸಿಟ್ಟಿಗೆದ್ದು ಮುಖವನ್ನು ಸಿಂಡರಿಸಿಕೊಂಡು ಬೇರೆ ಕಡೆಗೆ ನೋಡುತ್ತ ಕುಳಿತಿರುತ್ತಿದ್ದೆ. ಆ ನಿನ್ನ ಮುಗ್ಧತೆ, ಕೋಪದಲ್ಲೂ ತೋರಿಸುವ ನಿನ್ನ ಪ್ರೀತಿ ತುಂಬ ಚೆನ್ನಾಗಿ ಕಾಣಿಸುತ್ತಿತ್ತು. ನಿನ್ನ ಮುಖ ಲಕ್ಷಣಗಳನ್ನು ವರ್ಣಿಸತೊಡಗಿದಾಗ ನಿನ್ನ ಸಿಟ್ಟು ನೆತ್ತಿಗೇರಿ, ನೀ ಬೆನ್ನಿಗೆ ಹಾಕುತ್ತಿದ್ದ ಏಟುಗಳು ಹೂವನ್ನು ಸ್ಪರ್ಶಿಸಿದ ಹಾಗಿತ್ತು ಕಣೆ. ನನ್ನಲ್ಲಿ ಪ್ರೀತಿ ಅನ್ನುವುದು ಇಲ್ಲದಿದ್ದರೂ ನೀ ನನ್ನನ್ನು ಕಂಡಾಪಟ್ಟೆ ಪ್ರೀತಿಸಿದೆ.
ಧಾರವಾಡ ಉತ್ಸವಕ್ಕೆ ಹೋಗೋಣವೆಂದು ನನ್ನನ್ನು ನೀ 2 ತಾಸು ಕಾಯಿಸಿದ ದಿನವನ್ನು ಇಂದಿಗೂ ದ್ವೇಷಿಸುತ್ತೇನೆ. ಅವತ್ತು ನಿನಗಾಗಿ ತೆಗೆದುಕೊಂಡಿದ್ದ ಸ್ವೀಟನ್ನು ನಾನೊಬ್ಬನೇ ತಿಂದು ಬರಬೇಕಾದ ಪರಿಸ್ಥಿತಿಯನ್ನು ತಂದೊಡ್ಡಿದ್ದೆ. ಕಾಯುವುದರಲ್ಲೂ ಒಂಥರಾ ಖುಷಿ ಇದೆ. ಮತ್ತೊಮ್ಮೆ ನೀ ಕರೆದಾಗ ನಾ ಬಂದಿರಲಿಲ್ಲ. ಅಂದು ಮಂಗಳವಾರ ಇತ್ತು ಅನ್ಸುತ್ತೆ. ಸಾಯಂಕಾಲ ಸಿಕ್ಕಾಗ ಮಾತ್ರ ನನ್ನ ಕೆನ್ನೆ ಕೆಂಪಾಗುವ ಹಾಗೆ ಮಾಡಿದ್ದೆ. ಅದು ಮುತ್ತು ಕೊಟ್ಟದ್ದಲ್ಲ ಕಣೆ. ಕಪಾಳಕ್ಕೆ ಹೊಡೆದು ಮಂಗಳಾರತಿಯನ್ನು ನೀಡಿದ್ದು. ಮರುಕ್ಷಣವೇ ಕಣ್ಣೀರು ನಿನ್ನ ಕಣ್ಣಲ್ಲಿ, ನಗು ನನ್ನ ಮುಖದಲ್ಲಿ ಸೂಸುತ್ತಿತ್ತು. ನೀ ತಬ್ಬಿಕೊಂಡಾಗ ನಿನ್ನ ಬಿಸಿ ಉಸಿರು ಭುಜವನ್ನು ತಾಕುತ್ತಿತ್ತು. ನಿನ್ನ ಈ ಪವಿತ್ರ ಸ್ಥಾನವನ್ನು ಯಾರಿಂದಲೂ ತುಂಬಲೂ ಸಾಧ್ವವಿಲ್ಲ ಹೃದಯೇಶ್ವರಿ.
ಹತ್ತಿರವಿದ್ದಾಗ ನೀನು ಏನು ಅನ್ನೊದು ತಿಳಿದಿರಲಿಲ್ಲ. ನೀ ದೂರಾದಾಗ ಗೊತ್ತಾಗುತ್ತಿದೆ. ನೀ ಮೊದಲ ಸಲ ನನ್ನ ಜೊತೆ ಮಾತನಾಡಲು ಪ್ರಯತ್ನಿಸಿದಾಗ ನಿನ್ನ ತೊದಲು ನುಡಿಗಳು, ತಲೆ ತಗ್ಗಿಸಿ ಎಡಗಾಲಿನ ಹೆಬ್ಬರಳಿನಿಂದ 180 ಡಿಗ್ರಿಯಷ್ಟು ಕಾಮನಬಿಲ್ಲನ್ನು ಚಿತ್ರಿಸುತ್ತಿದ್ದ ದೃಶ್ಯಗಳ ನೆನಪುಗಳು ತಂದೊಡ್ಡುವ ಪುಳಕ ಅನುಭವಿಸಿದಾಗ ಏನೋ ಒಂದು ರೋಮಾಂಚನ. ನಿನ್ನ ತೆರೆದ ಹೃದಯದಲ್ಲಿ ಪ್ರೀತಿಯ ರೂಪವನ್ನು ನಾ ಕಾಣಲಿಲ್ಲ ಸ್ವಾರಿ ಕಣೆ ರೂಪಾ.
–ಬಂದೇಸಾಬ ಮೇಗೇರಿ
memorable love story.