ನಿನ್ನ ಪ್ರೇಮದ ಪರಿಯ….

ಓಯ್,

ಮೊದಲಿಗೆ ಹೇಳಿ ಬಿಡ್ತೀನಿ ಕೇಳು, ನಾ ಸುಮಾರಾಗಿ ಒಂದಷ್ಟು ಪ್ರೇಮ ಪತ್ರಗಳನ್ನ ಹಿಂದೆಯೂ ಬರೆದಿದ್ದೇನೆ, ಆದರೆ ಆ ಎಲ್ಲಾ ಪತ್ರ ಬರಿಯೋದಕ್ಕೂ ಮೊದಲು ಯೋಚಿಸುತಿದ್ದುದು ಇದನ್ನ ಯಾರಿಗೆ ಬರೀಲಿ ಎಂದು, ಕಾರಣ ಇಲ್ಲದಿಲ್ಲ ಕೊಡೋದಕ್ಕೆ ಕಲ್ಪಿತ ಸುಂದರಿಯರೆ ನನ್ನ ಮುಂದಿದ್ದದ್ದು….ಆದರೆ ಈ ಭಾರಿ ಈ ವಿಷಯದಲ್ಲಿ ನಾ ಅದೃಷ್ಟವಂತನೆ ಸರಿ, ಬರೆದಿಟ್ಟಿದ್ದನ್ನು ಕೊಡಲು ನೀನಿದ್ದಿ, ಜತನದಿಂದ ಪತ್ರವನ್ನು ಎತ್ತಿಟ್ಟು ನಿನ್ನ ತೆಕ್ಕೆಯಲ್ಲಿ ನನ್ನ ಬಂಧಿಸಿ “ಐ ಲವ್ ಯೂ” ಎನ್ನುತ್ತಿ ಎಂಬುದು ಗೊತ್ತಿರುವ ಕಾರಣ ನಿನ್ನದೊಂದು ಹೂ ಮುತ್ತಿನ ಆಸೆಯಲ್ಲಿ ಒಂದಷ್ಟು ನೆನಪನ್ನು ನೆನಪಿಸುವ ಪ್ರಯತ್ನ ನಡೆಸುತ್ತೇನೆ ಗೆಳತಿ, ವಿಶೇಷವೆಂಬ ಯಾವೊಂದು ನಿರೀಕ್ಷೆಗಳಿಲ್ಲದೆ ನನ್ನ ಹಂಗಂಗೆ ಒಪ್ಪಿಸಿಕೊಂಡು ಬಿಡು, ನಿನ್ನ ಮನದ ಹೂದೋಟದಲ್ಲಿ  ಚಂಗನೆ ನೆಗೆಯೊ ದುಂಬಿಯಾಗಿ ನಿನ್ನೊಳಗೆ ಅರಳಿ ನಿಂತ ಕುಸುಮಗಳನ್ನು ಹಂಗಂಗೆ ಅಘ್ರಾಣಿಸಿ ಸುತ್ತಿ ಬಿಡುವೆ.
 
ತಮಾಷೆಗೆ ಒಂದು ಮಾತು ಯಾವತ್ತೂ ಹೇಳುತ್ತಿರುವಂತೆ ಮತ್ತೆ ಹೇಳುತ್ತೇನೆ ಕೋಪಿಸಿಕೋಬೇಡ, ಅಲ್ಲೋ ಇಷ್ಟೊಂದು ಹುಡುಗರ ಮಧ್ಯೆ ನಾನೆ ನಿನಗಿಷ್ಟವಾಗಿದ್ದು ಏಕೆ? ಮತ್ಯಾಕೆ ಇದೆ ಕೇಳುತ್ತಿ ಅದು ವಿಧಿ ಬರಹ, ನನಗಿಷ್ಟವಾಯಿತು ಅಷ್ಟೆ ಎಂದೆನ್ನುತ್ತಿ ಎಂದು ಗೊತ್ತಿದ್ದರೂ ಈ ಪ್ರಶ್ನೆಯೊಂದು ಪ್ರಶ್ನೆಯಾಗೆ ಉಳಿದು ಬಿಟ್ಟಿದೆ ಕಣೆ, ಅನಗತ್ಯ ಪ್ರಶ್ನೆ ಅದರ ಚಿಂತನೆ ಆರೋಗ್ಯಕ್ಕೆ ಒಳ್ಳೇದಲ್ಲ ಬಿಡು, ಸರಿ ಮತ್ತೊಮ್ಮೆ ಕೇಳುವದಿಲ್ಲ. ನಿನ್ನ ನೋಡಿದ ಮೊದಲ ದಿನ ಗಂಭೀರ ವದನನಾಗಿ ಕೈ ಕಟ್ಟಿ ಕುಳಿತಿದ್ದೆ, ಕೊಬ್ಬಿನಾಂಶ ಜಾಸ್ತಿ ಎಂದು ತೋರಬಹುದಾದ ದೊಡ್ಡ ಹೊಟ್ಟೆ ಕಾಣದಿರಲೆಂದು ಪಡಿಪಾಟಲೂ ಪಟ್ಟಿದ್ದನ್ನೂ ಕಣ್ಣಂಚಿನಲ್ಲೆ ನೋಡಿ ಮನದಟ್ಟು ಮಾಡಿಕೊಂಡರೂ ನಿನಗೆ ನಾನೆ ಇಷ್ಟವಾಗಿ ಬಿಟ್ಟೆ. ಇದ್ದಿಲು ಕಪ್ಪಿನ ನನ್ನನ್ನೂ ಶ್ವೇತ ವರ್ಣದ ನೀನು ಅದೆಂಗೆ ಒಪ್ಪಿದೆಯೋ ತಿಳಿಯೆ. ಇದಕ್ಕಾಗೆ ನೀನು ಇತರರಿಗಿಂತ ವಿಭಿನ್ನವಾಗಿ ನನ್ನೆದುರು ನಿಲ್ಲುತ್ತಿ, ನನ್ನ ಸಂಪಾದನೆ ಬಗ್ಗೆ ನೀ ಕೇಳಿಲ್ಲ, ನನ್ನ ಬಾಹ್ಯಾಕಾರ, ಕಲರ್ ಬಗ್ಗೆ ಎಳ್ಳಷ್ಟೂ ಗಮನಹರಿಸಲಿಲ್ಲ. ಬದಲಾಗಿ ನನ್ನ ಕನಸುಗಳ ಬಗ್ಗೆ ಕೇಳಿದೆ, ನಿನ್ನ ಜೀವನದಲ್ಲಿ ನನ್ನ ಪಾತ್ರವೇನೆಂಬುದ ಕೇಳಿ ನನ್ನ ಅಭಿಪ್ರಾಯ ತಿಳಿದೆ, ಸುಖವಾಗಿಡಬಲ್ಲೆನೆ ನಾನು ಎಂಬುದನ್ನು ಖಾತ್ರಿ ಪಡಿಸಿಕೊಂಡೆ, ನಿನ್ನ ಸ್ವಾತಂತ್ರ್ಯಕ್ಕೆ ನಾ ಧಕ್ಕೆಯಾಗಲಾರೆನೆಂದು ನಿನಗನಿಸಿದ ಮರುಕ್ಷಣವೆ ನನ್ನ ಒಪ್ಪಿಸಿಕೊಂಡೆ. ಇದೆಲ್ಲವೂ ನನಗಿನ್ನು ಕನಸಿನ ಅರಮನೆಯ ಪಯಣ. ಒಳಗಣ್ಣನ್ನು ತೆರೆದು ನೋಡೊ ನಿನ್ನಂತ ಹೆಣ್ಣು ಜಗವೆಲ್ಲ ಇರಬಾರದೇಕೆ? ಹೆಣ್ಣು ಜಗವ ಪೊರೆಯುವ ಜೀವ ಎಂದು ನನ್ನಂತವ ಅಂದುಕೊಂಡಿದ್ದರಿಂದಲೆ ಇಂತಹ ಪ್ರಶ್ನೆ ನನ್ನೊಳಗೆ ಹುಟ್ಟೋದು. ಹೌದೋ ತಾಯಿಯೊಂದೆ ಸರ್ವಸ್ವ ಎನ್ನುತ್ತಾ ಇರುತಿದ್ದ ಕಾಲದಲ್ಲೆ ನೀ ಬಂದೆ ನನ್ನ ತಾಯಿ-ತಂದೆಗೆ ಮಗದೊಂದು ಹೆಣ್ಣು ಮಗಳಾಗಿ ನನ್ನ ತಂಗಿ ತಮ್ಮನೀಗೆ ಅಕ್ಕನಾಗಿ ನನ್ನ ಬಾಳಿನ ಅರ್ಧಾಂಗಿಯಾಗಿ, ನಿನ್ನಾರೈಕೆಯ ಪರಿಯ ನೋಡಿ ಒಮ್ಮೊಮ್ಮೆ ಅಂದುಕೊಳ್ಳುತ್ತೇನೆ ನನಗೀಗ ಈರ್ವರೂ ತಾಯಂದಿರೆಂದು., ಹಿರಿಯರು ಹೇಳಿದ ಮಾತು ಅವಾಗೆಲ್ಲಾ ನೆನಪಾಗುತ್ತದೆ “ಹೆಣ್ಣು ಮಾತೃ ಸ್ವರೂಪಿಯೆಂದು”.
 
 
ಇವತ್ತು ಪ್ರೇಮಿಗಳ ದಿನ, ಹರಿವ ನೀರಿಗೆ ಹೇಗೆ ಬಂಡೆಯ ಜಾತಿ ತಿಳಿದಿಲ್ಲವೊ, ಮರದ ಆಶ್ರಯ ಪಡೆದ ಹಕ್ಕಿಗೆ ಮರದ ಜಾತಿ ಹೆಂಗೆ ತಿಳಿದಲ್ಲವೊ ಅಂತೆಯೆ ಪ್ರೇಮಿಗಳ ಆಸ್ತಿಯಾದ ಈ ಪ್ರೀತಿಗೂ ಕೂಡ ಅದರ ಹುಟ್ಟು/ಜಾತಿ ತಿಳಿದಿಲ್ಲ!!!. ಅದಕ್ಕಾಗೆ ಪ್ರೀತಿಗೆ ಸಮಾಜದ ವರ್ಣಾಶ್ರಮವನ್ನು ಮೆಟ್ಟಿ ನಿಲ್ಲುವ ಹಲವು ವರ್ಣಗಳು ಇದೆ ಎಂದರೆ ನನ್ನ ಮಾತು ನಿನಗೆ ಅತೀ ಎನಿಸಲಾರದು ಮತ್ತಿದನ್ನು ಅರ್ಥೈಸಿಕೊಳ್ಳಬಲ್ಲೆ ಎಂಬ ಭರವಸೆ ನನಗಿದೆ. ಸಂಬಂಧಗಳೊಳಗಿನ ಪ್ರೀತಿ, ಸಂಬಂಧಗಳನ್ನಾಗಿಸುವ ಪ್ರೀತಿ ಹಾಗೂ ಹೊಸ ಸಂಬಂಧಗಳು ಏರ್ಪಟ್ಟು ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಜೀವನದೊಂದಿದೆ. ಒಂದಾಗಿ ನಡೆಯೋ ಪ್ರೀತಿ ಎಂಬುದಾಗಿ ಪ್ರೀತಿಯನ್ನು ವಿಭಜಿಸಿಕೊಂಡಲ್ಲಿ ನಾವೀಗ ಇರೋದು ಹೊಸ ಸಂಬಂಧಗಳು ಏರ್ಪಟ್ಟ ಪ್ರೀತಿ ಕೆಟಗರಿಯಲ್ಲಿ, ಈ ಮೂಲಕ ನಾವು ಸಂಬಂಧಗಳಾಗಿಸುವ ಪ್ರೀತಿಯ ಮೇಲೇರಿ ನಿಂತಿದ್ದೇವೆ ಹಾಗೂ ನನ್ನ ನಿನ್ನಯ ಪೂರ್ವಾಶ್ರಮದ ಸಂಬಂಧಗಳು ಅವರ ಪ್ರೀತಿಯನ್ನು ನನ್ನದು ನಿನ್ನದೆನ್ನದೆ ನಮ್ಮದಾಗಿಸಿ ಸಂಸಾರವೆಂಬ ಈ ಬಾಳನೌಕೆಯನ್ನ ಸುಖವೆಂಬ ದಡಕ್ಕೆ ಸೇರಿಸಬೇಕಾಗಿದೆ, ಅದರತ್ತ ನನ್ನ ನೀ ಕೈ ಹಿಡಿದು ನಡೆಸೀಯೆಂಬ ಭರವಸೆ ನನಗಿದೆ. ಅಷ್ಟಕ್ಕೂ ಪ್ರೀತಿ ಎನ್ನೋದು “ನಾನು ಎಂಬುದನ್ನು ಬದಿಗಿಟ್ಟು ನನ್ನದೆಲ್ಲವೂ ನಿನ್ನದೆ ಎಂದು ಸಮರ್ಪಿಸಿಕೊಂಡು ನಿನ್ನೊಳು ನನ್ನನ್ನು ಕಾಣುವ ಹಂಬಲ” ಎಂಬುದು ನಮಗೆ ನಾವೆ ಪ್ರೀತಿಗೆ ಕೊಟ್ಟ ಹೊಸ ವ್ಯಾಖ್ಯಾನವೆಂದಾದ ಮೇಲೆ ಎಲ್ಲವೂ ಸಾಧ್ಯವೆನ್ನುವ ಭರವಸೆ ಮೂಡಿದೆ. ಅದಕ್ಕೆ ಇರಬೇಕು ಹಿರಿಯರು ಹೇಳಿರೋದು ಪುರುಷನ ಯಶಸ್ಸಿನ ಹಿಂದೆ ಹೆಣ್ಣು ಇರುತ್ತಾಳೆ ಎಂದು, ಆದರೆ ನಾವೂಂಚೂರು ಬದಲಾವಣೆ ಮಾಡ್ಕೊಳ್ಳೋಣ ನಿನ್ನ ಯಶಸ್ಸಿಗೆ ನಾ ಬೆನ್ನಲುಬಾಗಿರ್ತೀನಿ ನನ್ನ ಯಶಸ್ಸಿನ ಹಿಂದೆ ಎಂತೂ ನೀನಿರ್ತಿ ಅಲ್ಲವೆ. ಈ ಬದಲಾವಣೆ ನಿನಗೊಪ್ಪಿಗೆನಾ? ಒಪ್ಪಿಗೆಯೆಂದಾದಲ್ಲಿ ಒಂದ್ ಸ್ಮೈಲ್ ಬಿಸಾಕು ನೋಡುವ!!!! ನಿನ್ನ ಆ ಮುಗುಳ್ನಗೆಯನ್ನ ಹಂಗಂಗೆ ಕ್ಯಾಚ್ ಹಿಡಿಯೋ ಪ್ರಯತ್ನ ನನ್ನಿಂದ ನಡೆದೆ ಬಿಡಲಿ…… ಇನ್ನೇನು ಬೇಕು ನನಗೆ!!! ನಿನ್ನ ಮೊಗದಲ್ಲಿ ಮುಗುಳ್ನಗೆಯೊಂದು ಲಾಸ್ಯವಾಡುತ್ತಿದ್ದರೆ ಸಾಕು ಅದೆ ನನ್ನ ಜೀವ ಚೈತನ್ಯ.
 
ಏನು ಕೋರಿತಾನಪ್ಪ ಎಂದನ್ನುಕೊಳ್ಳುತಿದ್ದಿಯಾ? ಸಹಜ ಬಿಡು ಫಿಲಾಸಫಿ ಬಗ್ಗೆ ಮಾತಾಡೋದಕ್ಕೆ ಇನ್ನೂ ಟೈಮಿದೆ, ನಾವಿನ್ನೂ ಶಿಶುಗಳು ಎಂಬ ಭ್ರಮೆಯೊಳಗೆ ಬದುಕುತ್ತಿರೋರು ಈ ಭ್ರಮೆ ಒಂದಷ್ಟೂ ದಿನ ಹಂಗಂಗೆ ಮುಂದುವರೀಲಿ… ನೀನೊಪ್ಪಿದರೆ ಪ್ರೇಮಿಗಳ ಈ ದಿನದಂದು ಒಂದು ಜಾಲಿ ರೈಡ್ ಹೋಗ್ ಬರೋಣ, ಹಕ್ಕಿಯಂತೆ ಮುದ್ದಾಡೊ ಹಾರಾಡೊ ಪ್ರೇಮಿಗಳ ಕಂಡು ಅವರ ಕಣ್ಣಾಸೆಗಳ ದಿಟ್ಟೈಸಿ ಮನತುಂಬಿಕೊಳೋಣ, ಪ್ರೇಮಿಸುವದರ ವಿವಿಧ ಆಯಾಮಗಳನ್ನು ಕಂಡುಕೊಳೋಣ, ಹೊಸದನ್ನು ಪ್ರಯೋಗಿಸುತ್ತಾ ಕೂತು ಕಲಿಯೋಕೆ ನಾವೇನೂ ಪ್ರಯೋಗ ಶಿಶುಗಳೆ? ಅಲ್ಲವೆಂದಾದ ಮೇಲೆ ಕಂಡು ಕಲಿಯೋಣ, ಹೀಗನ್ನುತ್ತೇನೆ!!! ಆದರೂ ನಂಗೊತ್ತಿದೆ ನಮ್ಮ ಪ್ರೇಮವೆ ದೊಡ್ಡದೆಂದು ಅದು ಹೇಗೆಂದರೆ ಉಳಿದೆಲ್ಲರಕ್ಕಿಂತಲೂ ನೀನೆ ಸುಂದರವಾಗಿ ನನ್ನ ಕಣ್ಣಿಗೆ ಕಂಡಂತೆ. ಏನೂ ಗಿಪ್ಟ್ ಕೊಡಿಸುತ್ತೀಯೆಂದು ಕೇಳಿದೆಯಾ???? ಹೂಂ ನನ್ನನ್ನೆ ನಿನಗರ್ಪಿಸಿದ ಮೇಲೆ ಇನ್ನೆಂತದೂ ಗಿಪ್ಟ್ ಮಣ್ಣಂಗಟ್ಟಿ ಎಂದರೆ ಏನ್ ಜಿಪುಣನಪ್ಪಾ? ಎಂದು ನೀ ಮುನಿಸಿಕೊಳ್ಳಬಹುದು ಆದರೂ ಏಕಾಂತದಲ್ಲಿ ಕೂತು ಯೋಚಿಸಿದಾಗ ಇದು ಹೌದಲ್ಲವೆ ಎಂದು ಎನಿಸೋಸು ಸತ್ಯ ಅಲ್ವೆ. ಇರಲಿ ನಿನಗಿಷ್ಟವಾದ ಬೇಯಿಸಿದ ಜೋಳ, ಕಡ್ಲೆ ಕಾಯಿ ಕೊಡಿಸಿಯೇನೂ, ಸಂಜೆ ಒಂದೊಳ್ಳೆ ಮಸಾಲೆ ದೋಸೆ ಅರ್ಧ ಕಫ್ ಟೀ ಮೆಲ್ಲುತ್ತಾ ನೀನ್ಯಾವಾಗಲೂ ಆಶಿಸುವ ಟೆಡ್ಡಿಬೇರ್ ಒಂದನ್ನು ನೆನಪಿಗೋಸ್ಕರ ಕೊಡಿಸಿಯೇನೂ. ಸದ್ಯಕ್ಕೆ ನಿನ್ನವನಾದ ನನಗೆ ಇದಕ್ಕಿಂತಲೂ ಹೆಚ್ಚಿನದೇನೂ ಹೊಳೆಯುತ್ತಿಲ್ಲ, ಪ್ರೇಮಿಗಳ ಪಾಲಿನ ಈ ದಿನಕ್ಕೆ ಮಾತ್ರ ನಮ್ಮಲ್ಲಿಯ ಪ್ರೀತಿ ಸೀಮೀತವಾಗದೆ ಪ್ರತಿದಿನದ್ದಾಗಲಿ ಈ ಹಿಂದಿನಂತೆ ಕೊನೆಯವರೆಗೂ ಎನ್ನೂತ್ತಾ ನಿನ್ನ ಜೊತೆಗೂಡಿ ಪ್ರೇಮಿಗಳೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯ ಕೋರುತಿದ್ದೇನೆ.
 
ಕೊನೆ ಮಾತು:- ಪ್ರೀತಿಗೊಂದು ಅಳತೆ ಮಾಪನ ಇಲ್ಲದ ಇಂದುಗಳಲ್ಲಿ ಪ್ರಶ್ನೆ ಮಾಡ್ತೀಯಾ? ನನ್ನೆಷ್ಟೂ ಪ್ರೀತಿಸುತ್ತೀಯೆಂದು?
ಉಂಗುಷ್ಟದಿಂದ ನೆತ್ತಿವರೆಗೆ, ನನ್ನ ಹೃದಯವನ್ನೆ ನಿನ್ನದೆಂದು ಬರೆಸಿ, ಈ ಜೀವವ ನಿನಗಾಗಿಸುವಷ್ಟು ಪ್ರೀತಿಸುವೆ, ಒಪ್ಪಿಸಿಕೋ ಎಂಬುದಷ್ಟೆ ನನ್ನುತ್ತರ.
 
ಅತಿಯಾಯಿಯಿತು ಎನ್ನುತ್ತೀಯೇನೋ? ಸಮಸ್ಯೆಯೇನಿಲ್ಲ ನನ್ನ ಕಲ್ಪಿತ ಸುಂದರಿ ಲವರ್ಸೂ ಹಿಂದೆ ಕನಸಲ್ಲಿ ಕಾಡಿ ಹಿಂಗೆ ಅನುತಿದ್ದರೂ. ನೀನು ನನ್ನ ಪಾಲಿಗೆ ಕನಸನ್ನು ನನಸಾಗಿಸಿದ ಅರ್ಧಾಂಗಿ. ಅದುಕ್ಕಾಗೆ ನಾ ನಿನ್ನ ಹೇಳೋದು ನೀ ನನ್ನ ಹಳೆ ಲವರ್ರೂ ಹೊಸ ಹೆಂಡ್ತಿ ಎಂದು, ರೇಗಿಸದಂಗಾತ ಚಿಂತಿಸ್ಬೇಡ, ಕೆ ಎಸ್ ಎನ್ ರ ಈ ಗೀತೆಯ ಸಾಲನ್ನು ಗುನುಗುತಿದ್ದೇನೆ ಕೇಳಿಸಿಕೊಂಡು ನಸು ನಕ್ಕು ಬಿಡು….
 
ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು…
ಹುಣ್ಣಿಮೆಯ ರಾತ್ರಿಯಲಿ
ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
ನಿನ್ನೊಳಿದೆ ನನ್ನ ಮನಸು…
 
ಇಂತು…
ನಿನ್ನ ಅನುದಿನದ ಪ್ರೇಮಿ.
 
-ರಾಘವೇಂದ್ರ ತೆಕ್ಕಾರ್
 
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x