ಸಿಕ್ಕ ಸಿಕ್ಕವರೊಂದಿಗೆ ನಾನೇ ಮುಂದಾಗಿ ಕೈ ಚಾಚಿ ಗೆಳೆತನ ಮಾಡಿಕೊಳ್ಳೋದು ಅಂದ್ರೆ ಮೊದಲಿನಿಂದಲೂ ಅದೇಕೋ ಇಷ್ಟ ನಂಗೆ. ಈ ಗೆಳೆತನದ ವಿದ್ಯೆಗೆ ನಾನೇ ಗುರುವಾಗಿ ತುಂಬಾ ಕಲಿತಿದಿನಿ. ತೊಚಿದ್ದೆನ್ನೆಲ್ಲಾ ಗೀಚಬೇಕೆನ್ನುವ ಹುಚ್ಚು ಅದ್ಯಾವಾಗ ಹಿಡಿತೋ ಎಷ್ಟು ತಲೆ ಕೆರೆದುಕೊಂಡರೂ ನೆನಪಾಗ್ತಿಲ್ಲ. ಪುಸ್ತಕಗಳ ರಾಶಿಯ ಮಧ್ಯೆ ನನ್ನನ್ನೇ ಮರೆತು ಹೋಗುವ ಖಯಾಲಿಯಂತೂ ಖಾಸಾ ಗೆಳತಿಯರಿಂದ ಹಿಡಿದು ನಿನ್ನೆ ಮೊನ್ನೆ ಕೈಕುಲುಕಿದವರಿಗೂ ಗೊತ್ತಿದೆ.ಹಟ ತೊಟ್ಟ ಹಟವಾದಿ ಹಂಗ ಓದೋದು ಬರೆಯೋದು ಅಂದ್ರ ಪಂಚಪ್ರಾಣ.ಹಂಗಂತ ಮಾತಿಗೇನೂ ಕಮ್ಮಿಯಿಲ್ಲ. ಆದರೂ ಯಾರೂ ನನಗ ಬಾಯಿಬಡಕಿ ಮಾತಿನ ಮಲ್ಲಿ ಅಂದಿಲ್ಲ. ಬುದ್ಧಿ ಬಂದಾಗಿಂದ ದೊಡ್ಡ ಬಾಯಿ ತೆಗೆದು ಜಗಳವಾಡಿದ ನೆನಪೂ ಇಲ್ಲ. ಮೈಕ್ ಸಿಕ್ಕಾಗ ಮಾತಾಡಾಕ ಹಾಡಾಕ ಇಲ್ಲ ಅಂತ ಹೇಳಿದ್ದು ನನ್ನ ಜಾಯಮಾನದಾಗ ದಾಖಲಾಗಿಲ್ಲ. ಬೇರೆಯವರ ತರ ಬೇರೆಯವರನ್ನು ಬೈಕೊಂಡು ಓಡೋಡೊದು ನನಗೆ ಗೊತ್ತೇ ಇಲ್ಲ. ಇಷ್ಟೆಲ್ಲ ವಿಚಿತ್ರ ಸಂಗಮವಾಗಿರುವ ನನ್ನನ್ನು ನೀನು ಮೊದ ಮೊದಲು ವಿಶ್ವದ ವಿಸ್ಮಯವನು ಕಂಡಂತೆ ಬೆರಗಾಗಿ ನೋಡುತ್ತಿದ್ದೆ.
ನಿನ್ನದೊ ಸದಾ ಒಬ್ಬಂಟಿಯಾಗಿರಬೇಕೆನ್ನುವ ಹುಚ್ಚು. ಪ್ರಪಂಚದ ಪ್ರೀತಿ ಸಿಗದ ಅನಾಥನಂತೆ ಆಸೆ ಆಕಾಂಕ್ಷೆಗಳೆಲ್ಲ ಬತ್ತಿ ಹೋದ ರೀತಿಯಲ್ಲಿ ಎದೆಯವರೆಗೂ ಗಡ್ಡ ಬಿಟ್ಟು ಓಡುಡುತ್ತಿದ್ದ ನಿನ್ನನ್ನು ಕಂಡು ಆವಾಕ್ಕಾಗಿದ್ದೆ. ನನ್ನ ಪೂರಾ ತದ್ವಿರುದ್ಧದ ವ್ಯಕ್ತಿತ್ವ ನಿನ್ನದು. ಎಲ್ಲರಿಗೂ ಚಾಚಿದ ಸ್ನೇಹದ ಹಸ್ತವನ್ನು ನಿನಗೂ ಚಾಚಿದ ನಂತರವೇ ಗೊತ್ತಾಯ್ತು. ನಿನ್ನ ನಿರ್ಮಲ ಮನಸ್ಸನ್ನು ಯಾರೂ ಗುರುತಿಸಿಲ್ಲ. ಮೃದು ಮನದ ಭಾವನೆಗಳಿಗೆ ನುಡಿಯ ರೂಪ ನೀಡಲು ಯಾರೂ ಆಸ್ಪದ ನೀಡಿಲ್ಲವೆಂದು. ನಿನ್ನ ಮನವೂ ನನ್ನಂತೆಯೇ ಉಕ್ಕಿ ಹರಿಯುವ ಪ್ರೀತಿ ತೊರೆಗೆ ಹಾತೊರೆಯುತ್ತಿದೆಯೆಂದು.
ನನ್ನೊಂದಿನ ಸ್ನೇಹವು ನಿನ್ನ ಜೀವನವನ್ನು ಪೂರಾ ಪೂರಾ ಬದಲಾಯಿಸಿತು. ನೀನು ನಿನ್ನ ಆಸೆ ಆಕಾಂಕ್ಷೆಗಳನ್ನು ಗುರುತಿಸಿಕೊಂಡೆ. ಬಯಕೆಯ ಸಸಿಗಳನ್ನು ಮನದಂಗಳದಲ್ಲಿ ನೆಟ್ಟುಕೊಂಡೆ. ಜೀವನದ ವ್ಯಾಖ್ಯೆಯನ್ನೇ ಬದಲಾಯಿಸಿಕೊಂಡು ಇತರರ ನಡುವೆ ಬೆರೆತು ನಲಿಯುವದನ್ನು ಕಲಿತೆ. ಪ್ರತಿ ಕ್ಷಣವನು ಸಂಭ್ರಮಿಸುವದನು ರೂಡಿಸಿಕೊಂಡೆ. ಇಬ್ಬರ ಎದೆಯಲ್ಲಿ ಪ್ರೀತಿಯ ನದಿಯೊಂದು ಹರಿಯಲು ಚಾಲನೆ ನೀಡಿದೆ. ನಿನ್ನ ಕಾಳಜಿ ಪ್ರೀತಿಯ ಕಳಕಳಿಯ ಸದ್ದು ಕಿವುಡನಿಗೂ ಕೇಳುವಷ್ಟು ಜೋರಾಗಿತ್ತು. ನನ್ನ ಕಂಗಳಲ್ಲಿ ನೂರೆಂಟು ಒಲುಮೆಯ ಹೊಂಗನಸುಗಳಿಗೆ ಜಾಗ ಕೊಡಿಸಿದೆ. ಕಂಡ ಕನಸುಗಳೆಲ್ಲ ಇನ್ನೇನು ನನಸಾಗುತ್ತವೆ ಎನ್ನುವಷ್ಟರಲ್ಲಿ ನೀನು ತಪಸ್ಸಿಗೆ ಕುಳಿತ ಸನ್ಯಾಸಿಯಂತೆ ಮೌನಿಯಾದೆ.ಮಾತಿನಲ್ಲೇ ಪ್ರೀತಿಯ ಮಂಟಪ ಕಟ್ಟುತ್ತಿದ್ದ ನೀನು ಶಾಶ್ವತವಾಗಿ ಮೌನಕ್ಕೆ ಶರಣಾದೆ. ಇನ್ನೊಂದು ಬೀದಿಯಲ್ಲಿ ಬಿರಿದ ಪ್ರೀತಿಯ ಹೂವಿಗೆ ಮರುಳಾಗಿರುವೆ ಎನ್ನುವದು ನನಗೆ ಅವರಿವರಿಂದ ತಿಳಿಯಿತು.ನೀನು ಹೂವಿನಿಂದ ಹೂವಿಗೆ ಹಾರುವ ದುಂಬಿ ಎಂಬ ಗುಟ್ಟು ಬಿಟ್ಟು ಕೊಡದೇ ವಿವಿಧ ತರಹೇವಾರಿ ಕುಸುಮಗಳು ಬಿರಿಯುವ ಗಲ್ಲಿಯಲ್ಲಿ ನೀನು ಹಾರುತ್ತಿರುವದು ತಿಳಿದು ಕಿವಿಯಲ್ಲಿ ಕಾದ ಸೀಸ ಸುರುವಿದಂತಾಯ್ತು.
ಅಂದಿನಿಂದ ಇಂದಿನವರೆಗೂ ಮಾತಿಲ್ಲ ಕತೆಯಿಲ್ಲ. ಅಬ್ಬರದ ಅಲೆಗಳೆದ್ದು ಒಮ್ಮೆಲೆ ನಿಂತಂತೆ ಸಾಗರದಂತಾಯ್ತು ನನ್ನ ಜೀವನ. ಹೊರಗಡೆಯಿಂದ ಶಾಂತ ಸಾಗರದಂತೆ ಕಂಡು ಬಂದರೂ ಮನದೊಳಗೆ ದುಃಖದ ಸಮುದ್ರ ಮಡುಗಟ್ಟಿತ್ತು. ಹೀಗೆ ಪ್ರೀತಿ ಸಾಗರದ ನಡುವೆ ಇಷ್ಟು ವರ್ಷ ಜೊತೆಗಿದ್ದವನು ಇದ್ದಕ್ಕಿಂದ್ದಂತೆ ಹೊರಟು ಹೋಗುವಾಗ ನಿನ್ನೆದೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಲಿಲ್ಲವೇ? ಹೀಗೆ ಜೀವ ನದಿಯ ನಡು ನೀರಿನಲ್ಲಿ ಬಿಟ್ಟು ಹೋಗುವಾಗ ಒಮ್ಮೆಯಾದರೂ ತಿರುಗಿ ನೋಡಬೇಕೆಂದು ನಿನಗೇಕೆ ಅನ್ನಿಸಲಿಲ್ಲವೇಕೆ ಎಂಬ ದೊಡ್ಡ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಉತ್ತರಕ್ಕಾಗಿ ಹುಡುಕಾಡಿ ಸುಸ್ತಾಗಿ ಕಣ್ಣಂಚಿನ ನೀರಲ್ಲೇ ದಿನಗಳೆದಿದ್ದೇನೆ. ಕನ್ನಡಿಯಲ್ಲಿ ವಿರಹದ ನೆರಿಗೆಗಳನ್ನು ಗಮನಿಸಿದಾಗಲೊಮ್ಮೆ ಭಾವದ ಕಟ್ಟೆಯೊಡೆದು ಗಳಗಳನೆ ಅತ್ತಿದ್ದೂ ಇದೆ. ಜೀವ ನದಿಯಲ್ಲಿ ಒಬ್ಬಂಟಿಯಾಗಿ ಇವಳು ಈಜಲಾರದೇ ಸುಳಿಯಲ್ಲಿ ಸಿಕ್ಕು ಸಾಯಬಹುದೆಂಬ ಸಣ್ಣ ಸಂಶಯವೂ ನಿನ್ನ ಮನದಲ್ಲಿ ಸುಳಿಯಲಿಲ್ಲವೆ? ಪ್ರೀತಿ ಮಾಡಿ ಅರ್ಧ ದಾರಿಯಲ್ಲಿ ಬಿಟ್ಟು ಹೋಗಬಾರದೆಂದು ಮೇಲಿಂದ ಮೇಲೆ ನುಡಿಯುತ್ತಿದ್ದ ನಿನ್ನ ಮಾತೇ ನಿನಗೆ ಮರೆತು ಹೋಯಿತೆ? ಸಂಕಷ್ಟದ ಸ್ಥಿತಿಯಲ್ಲಿ ಅಪರಿಚಿತ ಪುರುಷನಾದರೂ ಸರಿ ಬೆಂಬಲವಾಗಿ ನಿಂತು ರಕ್ಷಿಸುತ್ತಾನೆ ಎಂಬ ನಂಬಿಕೆ ಮಹಿಳೆಯರಲ್ಲಿ ಇನ್ನೂ ಜೀವಂತವಾಗಿದೆ ಅಂಥದ್ದರಲ್ಲಿ. ಪ್ರೀತಿಯ ವೈ ಫೈ ದಂತೆ ನನ್ನ ಹಿಂದೆ ಮುಂದೆ ಸುತ್ತುತ್ತಿದ್ದ ನಿನಗೆ ಸಮಾಧಾನದ ಸೇತುವೆಯನ್ನಾದರೂ ಕಟ್ಟಿ ಹೋಗುವ ಸಣ್ಣ ಕಾಳಜಿಯೂ ನಿನ್ನಲ್ಲಿ ಇಲ್ಲದೆ ಹೋಯಿತೆ?
ಹೋದವನಿಗಾಗಿ ಕಾದು ಕುಳಿತುಕೊಳ್ಳುವಷ್ಟು ಸಣ್ಣ ಮೌಲ್ಯದ್ದಲ್ಲ ಜೀವನ. ಭಾವ ಪರವಶತೆಯಲ್ಲಿ ಮುಳುಗಿ ಹೋದರೆ ಹುಚ್ಚಿಯಾಗುವೆನೆಂಬ ಅರಿವು ಮೂಡಿ ನೀನಿಲ್ಲದೆ ಬದುಕಬಲ್ಲೆ ಎನ್ನುವ ಆತ್ಮವಿಶ್ವಾಸ ಹುಟ್ಟಿಸಿತು. ನೀನಿಲ್ಲದ ಜಗತ್ತು ಶೂನ್ಯ ಎಂದುಕೊಂಡ ನನಗೀಗ ಜಗದ ಪ್ರೀತಿಯಲ್ಲಿ ದಡ ಸೇರುವ ಹುಮ್ಮಸ್ಸು ಹೆಚ್ಚುತ್ತಿದೆ. ದಾರಿಯುದ್ದಕ್ಕೂ ಒಂಟಿಯಾಗಿ ಸಾಗುತ್ತಿದ್ದರೂ ಜನರ ನೋವು ನಲಿವುಗಳಿಗೆ ಸ್ಪಂದಿಸಿ ಮಾನವೀಯತೆಯ ನಿಜ ಅರ್ಥ ತಿಳಿದುಕೊಳ್ಳುತ್ತಿದ್ದೇನೆ. ಹೊಸತನಕ್ಕೆ ಮನವನ್ನು ಬಿಚ್ಚಿಡುತ್ತಿದ್ದೇನೆ. ನಿಸರ್ಗದ ರಮ್ಯತೆಗೆ ಕಣ್ತೆರದು ಖುಷಿಪಡುತ್ತಿದ್ದೇನೆ.ಸಣ್ಣ ಸಣ್ಣ ಸಂಗತಿಗಳಲ್ಲಿ ಸಂತಸ ಸವಿಯುತ್ತ ದೊಡ್ಡ ಬಾಯಿ ತೆರೆದು ನಗುವದನ್ನು ಕಲಿತಿದ್ದೆನೆ. ಎದುರಿಗೆ ಸಿಕ್ಕವರನ್ನು ಕಂಡು ಒಂದಿನಿತೂ ಆಯಾಸಗೊಳ್ಳದೆ ಮತ್ತಷ್ಟು ಮೊಗದಷ್ಟು ಪ್ರೀತಿಯನ್ನು ಮೊಗೆ ಮೊಗೆದು ನೀಡುವದರಲ್ಲಿ ಸಂತೃಪ್ತಿಯ ಭಾವ ನನ್ನಲ್ಲಿ ಅರಳುತ್ತಿದೆ. ಎಲ್ಲ ಗೊಂದಲಗಳನ್ನು ದಾಟಿ ಇನ್ನೊಂದು ಪ್ರೀತಿಯ ತೊರೆ ಮುಂದೆ ಸಿಕ್ಕೇ ಸಿಗುತ್ತೆ. ಎಂಬ ಭರವಸೆಯಿಂದ ಮುನ್ನುಗ್ಗುತ್ತಿದ್ದೇನೆ. ಜಂಟಿಯಾಗಿ ನಡೆಯುವ ಹೊಸ ಅವಕಾಶ ತನ್ನ ಬಾಹುಗಳನ್ನು ಚಾಚಿ ನನಗಾಗಿ ಕಾಯುತ್ತಿದೆ ಎಂಬ ಹೊಸ ಆಸೆಯಿಂದ ಸಾಗುತ್ತಿದ್ದೇನೆ.
ಪ್ರೀತಿಯನ್ನು ತೊರೆದು ನಿರೀಕ್ಷೆಯನ್ನು ಹುಸಿಗೊಳಿಸಿ ಹೋದಂದಿನಿಂದ ಮನಸ್ಸು ನಿನ್ನ ಬಗ್ಗೆ ಮರುಗುವದನ್ನು ಮರೆತು ಬಿಟ್ಟಿದೆ. ಮನಸ್ಸು ಚಳಿಗಾಲದ ಮಂಜಿನ ಗಡ್ಡೆಯಂತೆ ಗಟ್ಟಿಯಾಗಿದೆ. ಪ್ರೀತಿಯ ಮೊಗ್ಗು ಹಿಗಿ ಹಿಗ್ಗಿ ಹೂವಾಗುವ ಹೊತ್ತಲ್ಲೇ ಅಲ್ಲವೆ ಆ ಕೃಷ್ಣ ರಾಧೆಯನ್ನು ಬಿಟ್ಟು ಹೋಗಿದ್ದು. ಗೋವುಗಳ ಕರೆಕೇಳಿ ಕೃಷ್ಣ ಬಂದಿರಬೇಕು ಎಂದು ಪ್ರೀತಿಯ ಉನ್ಮಾದದಲ್ಲಿ ಜಿಂಕೆಯಂತೆ ಜಿಗಿಯುತ್ತ ಸಂಗೀತ ಕೇಳಿದಾಗಲೊಮ್ಮೆ ಕೊಳಲಿನ ನಾದ ಬಂದ ದಿಕ್ಕಿನೆಡೆಗೆ ಓಡೋಡುತ್ತ ಕೊಳಲಿನ ದನಿಯಲ್ಲಿ ಕೃಷ್ಣನ ಪ್ರೀತಿಯ ಅರಿಸುವ ರಾಧೆಯಮತೆ ಬರಿಯ ಭ್ರಮೆಯನ್ನು ನಿಜ ಭರವಸೆಯೆಂದುಕೊಂಡು ಕನಸು ಕಾಣುವ ಮನಸ್ಸು ನನ್ನಲ್ಲಿ ಉಳಿದಿಲ್ಲ.
ಒಂದೇ ಮಾತಲ್ಲಿ ಹೇಳಬೇಕೆಂದರೆ ಉಪವನದಲ್ಲಿ ಏಕಾಂತವಾಗಿ ಕೃಷ್ಣನ ವಿರಹದ ಬೇಗುದಿಯಲ್ಲಿ ಬೇಯುವ ರಾಧೆಯಾಗುವ ಇರಾದೆ ನನಗಿಲ್ಲ ಗೆಳೆಯ—–
-ಜಯಶ್ರೀ.ಜೆ. ಅಬ್ಬಿಗೇರಿ