2012-13 ನೆಯ ಅವಧಿ ನಾನು ಕನ್ನಡ ವಿಶ್ವವಿದ್ಯಾಲಯದಲ್ಲಿ “ಮುನವಳ್ಳಿ ಒಂದು ಸಾಂಸ್ಕೃತಿಕ ಅಧ್ಯಯನ” ಎಂ. ಫಿಲ್ ಪದವಿಗಾಗಿ ಡಾ. ವ್ಹಿ. ಎಸ್. ಮಾಳಿಯವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುತ್ತಿದ್ದೆ. ಮುನವಳ್ಳಿಯ ಅನೇಕ ಹಿರಿಯರ ಸಂಪರ್ಕದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದೆ. ಮುನವಳ್ಳಿಯ ನಾಟಕವೊಂದು ಮೈಸೂರು ದಸರಾ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ಬಗ್ಗೆ ಮಾಹಿತಿ ಬೇಕಾಗಿತ್ತು. ಗೆಳೆಯ ಜಯದೇವ ಅಷ್ಠಗಿಮಠ ಈ ವಿಚಾರ ಪಾಂಡುರಂಗ ಯಲಿಗಾರ ಅವರನ್ನು ಕೇಳಬೇಕು. ಅವರು ಬೆಳಗಾವಿಯಲ್ಲಿ ಇರುವರು. ರವಿವಾರ ಮುನವಳ್ಳಿಗೆ ಬರುತ್ತಾರೆ ನೀನು ಅವರನ್ನು ಭೇಟಿಯಾಗಬೇಕು. ನಾನು ಹೇಳಿ ಕಳಿಸುವೆ ಬರುವಂತೆ ಎಂದ. ಆಯಿತೆಂದುಕೊಂಡೆ. ಭಾನುವಾರ ಪಾಂಡುರಂಗ ಯಲಿಗಾರವರು ರಾಯಲ್ ಚಿತ್ರಮಂದಿರ ಹತ್ತಿರದ ರವಿ ಯಲಿಗಾರ ಅವರ ಆಫೀಸಿನಲ್ಲಿದ್ದರು. ಜಯದೇವ ಅಷ್ಠಗಿಮಠ ನನಗೆ ಪೋನ್ ಮಾಡಿ ಬರಲು ಸೂಚಿಸಿದ. ಆ ಪ್ರಕಾರ ನಾನು ಪಾಂಡುರಂಗ ಯಲಿಗಾರ ಅವರ ಭೇಟಿ ಮಾಡಿದೆ. ಅವರ ನಾಟಕ ಸಾಹಿತ್ಯದ ಬದುಕನ್ನು ನನ್ನೊಡನೆ ಚರ್ಚಿಸಿದರು. ನನ್ನ ಎಂ. ಫಿಲ್ ಪ್ರಬಂಧದಲ್ಲಿ ಅವರ ಅನುಭವಗಳನ್ನು ದಾಖಲಿಸಿದೆ. ಅಂದಿನಿಂದ ಇಂದಿನವರೆಗೂ ಅವರ ಆತ್ಮೀಯತೆ ಹೃದಯಪೂರ್ವಕ ಮಾತುಗಳು ನನಗೆ ಸ್ಪೂರ್ತಿದಾಯಕ.
ಇದು ನಡೆದು ಇಂದಿಗೆ 7 ವರ್ಷಗಳಾದವು. ಈ “ನಿನ್ನೆ ನಾಳೆಯ ನಡುವೆ”. ನಮ್ಮ ಒಡನಾಟ ಎಂ. ಫಿಲ್ ಪೂರೈಸಿದರೂ ನಿಂತಿಲ್ಲ. ಮುನವಳ್ಳಿಯಲ್ಲಿ ಯಲಿಗಾರ ಕುಟುಂಬ ಎಂದರೆ ರಾಜಕೀಯ ಮತ್ತು ವ್ಯಾಪಾರ. ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಇಂತಹ ಕುಟುಂಬದಲ್ಲಿ ಪೋಲಿಸ್ ಇಲಾಖೆಯಲ್ಲಿ ಇದ್ದು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಕ್ರಿಯಾತ್ಮಕ ಚಟುವಟಿಕೆಯ ಮೂಲಕ ಈಗ ನಿವೃತ್ತಿ ಬದುಕಿನಲ್ಲೂ ಕೂಡ ಕನ್ನಡ ಸಾಹಿತ್ಯ ಪರಿಷತ್ತಿನ ಫೇಸ್ಬುಕ್ ಲೈವ ಮೂಲಕ ತಮ್ಮ ಉಪನ್ಯಾಸ ಮತ್ತು ಕವಿತಾ ವಾಚನದ ಮೂಲಕ ಗಮನ ಸೆಳೆದ ಹಿರಿಯರಾದ ಪಾಂಡುರಂಗ ಯಲಿಗಾರ ಅವರನ್ನು ಪೋನ್ ಕರೆ ಮಾಡಿ ಮಾತನಾಡಿಸಿದೆ.
ನನ್ನ ಯೋಗಕ್ಷೇಮ ವಿಚಾರಿಸುವ ಜೊತೆಗೆ ನನ್ನ ತಂದೆಯ ನೆನಪನ್ನು ಹಂಚಿಕೊಂಡರು. ವ್ಯಾಟ್ಸಪ್ ಮೂಲಕ ಅವರ ಭಾವಗೀತೆಗಳ ಕ್ಯಾಸೆಟ್ “ನೀನೇ”ಯಲ್ಲಿನ ಎಂಟು ಗೀತೆಗಳನ್ನು ಕಳಿಸಿದರು. ಅವರ ಎರಡು ಕವನ ಸಂಕಲನ ನನ್ನ ಹತ್ತಿರ ಇಂದಿಗೂ ಜೋಪಾನವಾಗಿರಿಸಿದ್ದೆ. ಈಗ ಅವುಗಳ ಕವನಗಳನ್ನು ನೋಡತೊಡಗಿದೆ. ಎಂಥಹ ಅದ್ಬುತ ಕಾವ್ಯಶಕ್ತಿ ಇವರದು. ನಿವೃತ್ತಿಯಾದರೂ ಕಳೆದ ವರ್ಷ ಧಾರವಾಡದಲ್ಲಿ ಜರುಗಿದ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರ ಕವನ ವಾಚನ ಎಲ್ಲರ ಗಮನ ಸೆಳೆದಿತ್ತು. ಈಗ ಅವರ ಕವಿತೆಗಳನ್ನೆಲ್ಲ ಓದುತ್ತ ಅವರ ಬದುಕಿನ ಘಟ್ಟಗಳನ್ನು “ನಿನ್ನೆ ನಾಳೆಗಳ ನಡುವೆ” ಮೆಲುಕು ಹಾಕಿದೆ.
ಶೈಕ್ಷಣಿಕ ಬದುಕು
ಮುನವಳ್ಳಿ ಮುನಿಗಳ ಹಳ್ಳಿ. ತಪೋಭೂಮಿ. ಇಂತಹ ಪವಿತ್ರ ತಾಣದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ 15-12-1945 ರಲ್ಲಿ ಭೀಮರಾಯಪ್ಪ ರೇಣಮ್ಮ ದಂಪತಿಗಳ ಏಳು ಜನ ಮಕ್ಕಳಲ್ಲಿ ಆರನೆಯವರಾಗಿ ಜನ್ಮ ತಳೆದವರು ಪಾಂಡುರಂಗ ಯಲಿಗಾರ. ಅಂದಿನ ಇವರ ಮನೆತನದ ಪರಿಸ್ಥಿತಿಯನ್ನು ಇಂದು ನೆನೆಯುತ್ತಾರೆ. ಪ್ರತಿಯೊಬ್ಬರೂ ಕೃಷಿ ಚಟುವಟಿಕೆಗಳಲ್ಲಿ ದುಡಿದೇ ಶ್ರಮದಿಂದ ಬದುಕುತ್ತಿದ್ದರು.
ಪಾಂಡುರಂಗ ಓದಿನಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದರು. ಬದುಕಿನಲ್ಲಿ ಓದಿನ ಮೂಲಕ ಏನಾದರೂ ಸಾಧಿಸಬೇಕೆಂಬ ಉತ್ಕಟ ಇಚ್ಛೆ ಇವರಿಗಿತ್ತು. ಭೂಪಾಲಪ್ಪ ಯಲಿಗಾರ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಧಾರವಾಡದಿಂದ ತಮಗೆ ಬೇಕಾದ ವಸ್ತುಗಳನ್ನು ತಂದು ಮುನವಳ್ಳಿಯಲ್ಲಿ ವ್ಯಾಪಾರದಲ್ಲಿ ತೊಡಗಿದ್ದರು. ಹೀಗೆಯೇ ಪ್ರತಿಯೊಬ್ಬರೂ ದುಡಿಮೆಯ ಮೂಲಕ ಬದುಕನ್ನು ಕಟ್ಟಿಕೊಳ್ಳುತ್ತಿದ್ದ ಈ ಕುಟುಂಬದ ಒಟ್ಟು 7 ಜನ ಮಕ್ಕಳಲ್ಲಿ ಐದು ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ ತುಂಬು ಕುಟುಂಬದ ತಂದೆ ತಾಯಿಗಳು ದೈವಭಕ್ತರು ದಾನಿಗಳು ಆಗಿದ್ದು. ಇವರ ಪ್ರಾಥಮಿಕ ಶಿಕ್ಷಣ ಮುನವಳ್ಳಿಯಲ್ಲಿ ಪ್ರೌಢ ಶಿಕ್ಷಣವೂ ಕೂಡ ಎಸ್. ಪಿ. ಜೆ. ಜಿ. ಪ್ರೌಢಶಾಲೆಯಲ್ಲಿ ಮತ್ತು ಎಸ್. ಕೆ. ಪ್ರೌಢಶಾಲೆ ಸವದತ್ತಿಯಲ್ಲಿ ಜರುಗಿತು. ಕರ್ನಾಟಕ ಕಾಲೇಜ ಧಾರವಾಡದಲ್ಲಿ 1964-1969 ರ ಅವಧಿ ಬಿ. ಎಸ್ಸಿ . ಕ್ರಿಮಿನಾಲಜಿ ವಿಷಯದಲ್ಲಿ ಪದವಿ ಪೂರೈಸಿದರು. ಹೀಗೆ ಶಾಲೆಯಲ್ಲಿ ಜಾಣ ವಿದ್ಯಾರ್ಥಿಯಾಗಿದ್ದ ಪಾಂಡುರಂಗ ಯಲಿಗಾರ ತಂದೆಯ ಹೆಸರಿಗೆ ಕೀರ್ತಿ ತಂದರು. ಇವರ ಸಹೋದರ ಬಿ. ಬಿ. ಯಲಿಗಾರ ಕೂಡ ರಾಜಕಾರಣದಲ್ಲಿ ಉತ್ತಮ ರಾಜಕಾರಣಿಯಾಗಿ ಸವದತ್ತಿ ತಾಲೂಕಿನಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದರು. ಅವರ ಮಗ ರವಿ ಯಲಿಗಾರ ಕೂಡ ಜಿಲ್ಲಾ ಪಂಚಾಯತಿ ಸದಸ್ಯರಾಗಿ ತಂದೆಗೆ ತಕ್ಕ ಮಗನಾಗಿ ರಾಜಕಾರಣದಲ್ಲಿ ಮಿಂಚಿ ಇಂದಿಗೂ ಕೂಡ ಜನಾನುರಾಗಿಯಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವರು.
ವೃತ್ತಿ ಬದುಕು
ಶೈಕ್ಷಣಿಕ ಬದುಕಿನಲ್ಲಿ ಬಿ. ಎಸ್ಸಿ . ಕ್ರಿಮಿನಾಲಜಿ ವಿಷಯ ತಗೆದುಕೊಂಡ ಕಾರಣ 1970 ರಲ್ಲಿ ಪೋಲಿಸ್ ಇಲಾಖೆಯಲ್ಲಿ ಪಿ. ಎಸ್. ಐ. ಹುದ್ದೆಗೆ ಆಯ್ಕೆಯಾದರು. 11-5-1970 ರಲ್ಲಿ ಮೈಸೂರಿನಲ್ಲಿ ಒಂದು ವರುಷ ಬೇಸಿಕ್ ತರಭೇತಿ ನಂತರ ಗುಲ್ಬರ್ಗಾ ಜಿಲ್ಲೆಯಲ್ಲಿ 6 ತಿಂಗಳು ಪ್ರೊಭೇಶನರಿ ಟ್ರೇನಿಂಗ್. 1972 ರಿಂದ 1974 ರ ವರೆಗೆ ಕಾಳಗಿಯಲ್ಲಿ, 1974 ರಿಂದ 1976 ರ ವರೆಗೆ ಗುರುಮಟ್ಕಲ್. 1976-1977 ಯಾದಗಿರಿ ಟೌನ್. 1977-1979 ಗುಲ್ಬರ್ಗಾ ಸ್ಟೇಶನ್ ಬಜಾರ್ ಹೀಗೆ ಗುಲ್ಬರ್ಗಾ ಬಿಸಿಲು ನಾಡಿನಲ್ಲಿ 1970 ರಿಂದ 1979 ರ ವರೆಗೆ ಸೇವೆ ಸಲ್ಲಿಸಿ 1979 ರಲ್ಲಿ ಬೆಳಗಾವಿ ಜಿಲ್ಲೆಯ ಸದಲಗಾಕ್ಕೆ ವರ್ಗಾವಣೆಗೊಂಡು ಮೂಲ ಜಿಲ್ಲೆಗೆ ಆಗಮಿಸಿದರು. 1979-1980 ರ ವರೆಗೆ ಸದಲಗಾ. 1980-81 ರ ವರೆಗೆ ನಿಪ್ಪಾಣಿಯಲ್ಲಿ ಸೇವೆ ಸಲ್ಲಿಸುವಾಗ ಬಡ್ತಿಯಾಯಿತು. 1982 ಸಿ. ಪಿ. ಐ ಆಗಿ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿ 1982-1984 ರ ವರೆಗೆ ಸೇವೆ ಸಲ್ಲಿಸಿದರು. ಅಲ್ಲಿಂದ ಧಾರವಾಡ ಜಿಲ್ಲೆಗೆ ಪೋಲಿಸ್ ಟ್ರೇನಿಂಗ್ ಸ್ಕೂಲ್ ಚೀಪ್ ಇನ್ಸ್ಟ್ರಕ್ಟರ್ ಆಗಿ 1985-1986 ಸೇವೆ ಸಲ್ಲಿಸಿದರು. ನಂತರ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ 1986-1989 ರ ವರೆಗೆ ಸೇವೆ. ತದನಂತರ ಬೆಂಗಳೂರಿನಲ್ಲಿ ಸಿ. ಓ. ಡಿ ವಿಭಾಗದಲ್ಲಿ ಅಲ್ಲಿಂದ ಮತ್ತೆ ಬೆಳಗಾವಿಯಲ್ಲಿ. ಖಾನಾಪುರ ಪೋಲಿಸ್ ಟ್ರೇನಿಂಗ್ ಸ್ಕೂಲ್‍ದಲ್ಲಿ ಸೇವೆ ಸಲ್ಲಿಸಿ 1997 ರಲ್ಲಿ ಡಿ. ಎಸ್. ಪಿಯಾಗಿ ಬಡ್ತಿ ಪಡೆಯುವ ಮೂಲಕ ವೃತ್ತಿ ಜೀವನವನ್ನು ಪೂರೈಸಿ 31-12-2003 ರಲ್ಲಿ ಸೇವೆಯಿಂದ ನಿವೃತ್ತಿಯಾದರು. ಹೀಗೆ ಪೋಲಿಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವ ಜೊತೆಗೆ ದಕ್ಷ ಅಧಿಕಾರಿಯಾಗಿ ಇಲಾಖೆಯಿಂದ ಪ್ರಶಸ್ತಿ ಪುರಸ್ಕೃತರಾದರು.
ಸಾಹಿತ್ಯದ ನಂಟು
ಇವರಿಗೆ ಕಾಲೇಜು ದಿನಗಳಿಂದಲೇ ಸಾಹಿತ್ಯದ ನಂಟು. ಧಾರವಾಡದ ಆ ಪರಿಸರದಲ್ಲಿ ಕವನಗಳು ಅರಳಿದ್ದವು. 1989 ರಲ್ಲಿ “ನಿನ್ನೆ ನಾಳೆಯ ನಡುವೆ” ಕವನ ಸಂಕಲನ ಬಿಡುಗಡೆಯಾಯಿತು. 1996 ರಲ್ಲಿ “ಹಕ್ಕಿ ಗೂಡಿನ ಗರಿಕೆ” ಕವನ ಸಂಕಲನ ಬಿಡುಗಡೆಯಾಯಿತು. 2018 ರಲ್ಲಿ ಮೂರನೆಯ ಕವನ ಸಂಕಲನ “ರಾಗರತಿ” ಬಿಡುಗಡೆಯಾಯಿತು. ಹೀಗೆ ಮೂರು ಕವನ ಸಂಕಲನಗಳಲ್ಲದೇ “ನೀನೇ” ಎಂಬ ಗೀತೆಗಳ ಆಡಿಯೋ ಕೂಡ ಪ್ರಸಿದ್ದ ಗಾಯಕ ಗಾಯಕಿಯವರ ಸುಮಧುರ ಕಂಠದಲ್ಲಿ ಮೂಡಿ ಬಂದಿದೆ.
“ನಿನ್ನೆ ನಾಳೆಯ ನಡುವೆ”
1989 ರಲ್ಲಿ ಬಿಡುಗಡೆಗೊಂಡ ನಿನ್ನೆ ನಾಳೆಯ ನಡುವೆ ಕವನ ಸಂಕಲನ ವಿಶ್ವಜ್ಯೋತಿ ಪ್ರಕಾಶನ ಮುನವಳ್ಳಿಯ ಮೂಲಕ ಪ್ರಕಟಗೊಂಡಿದೆ. ಅಂದಿನ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರಿನ ಅಧ್ಯಕ್ಷರಾದ ಜಿ. ಎಸ್. ಸಿದ್ದಲಿಂಗಯ್ಯನವರ ಮುನ್ನುಡಿಗೆ ಮೊದಲು ಮಾತುಗಳು. ಶ್ರೀ ಕುಮಾರ ಸ್ವಾಮಿಗಳು ವಿರಕ್ತಮಠ ಹಾನಗಲ್ ಸಿಂದೋಗಿ ಮುನವಳ್ಳಿ(ಸದ್ಯದ ಮೂರುಸಾವಿರ ಮಠದ ಜಗದ್ಗುರುಗಳು) ಇವರ ಶುಭ ಹರಕೆಯ ನುಡಿಗಳು ಖ್ಯಾತ ಸಾಹಿತಿ ಎನ್ಕೆಯವರ ಮುನ್ನುಡಿ. ಒಳಗೊಂಡು ಒಟ್ಟು 32 ಕವನಗಳನ್ನು ಈ ಕವನ ಸಂಕಲನ ಒಳಗೊಂಡಿದೆ. ಈ ಕವನ ಸಂಕಲನ ಕುರಿತಂತೆ ಡಾ. ಪಂಚಾಕ್ಷರಿ ಹಿರೇಮಠ ನುಡಿಗಳನ್ನು ಕೊನೆಯಲ್ಲಿ ಮುದ್ರಿಸಿದ್ದು. ಕೊನೆಯ ರಕ್ಷಾಪುಟದಲ್ಲಿ ಡಾ. ಬಿ. ಕೆ. ಹಿರೇಮಠರ ಬೆನ್ನುಡಿ ಇರುವುದು. ಹೀಗೆ ಒಂದು ಸುಂದರ ಕವನ ಸಂಕಲನವಿದು.
ಹುಟು ಸಾವಿನ ನಡುವೆ ಬದುಕಿನುಯ್ಯಾಲೆ
ನಿನ್ನೆ ನಾಳೆಯ ನಡುವೆ ಇಂದಿನ ಕಣ್ಣು ಮುಚ್ಚಾಲೆ
ದಡಗಳೆರಡರ ನಡುವೆ ಜೀವಜಾಲದ ಪಡೆ
ದೃಡತೆ ಕಾಣದೆ ಸಾಗಿದೆ ಸಾವಿನೆಡೆ
ಶಾಪಕ್ಕೆ ಗುರಿಯಾದ ಧೀಮಂತ ಭೀಷ್ಮ, ಕರ್ಣರು
ಚಿರಂಜೀವಿ ವರಪಡೆದ ಧ್ರುವ ಮಾರ್ಕಂಡೇಯರು
ಕಾಲಗರ್ಭವ ಸೇರಿ ಕರಗಿರುವಾ ಕಥೆಯ ನೆನೆದು
ಭವಿಷ್ಯದಾಸೆಯಲಿ ತೇಲಿ ಸಾಗುವ ನಾವೆ
“ನಾವೆ” ಎಂಬ ಕವಿತೆಯಲ್ಲಿನ ಈ ಸಾಲುಗಳು ಇಹ ಜೀವನದ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಕಳೆದು ಅಧ್ಯಾತ್ಮಿಕತೆಯ ತಳಹದಿಯಲ್ಲಿ ಚಿಂತನೆಯನ್ನು ಅನುಭವದ ಸಾಲುಗಳಲ್ಲಿ ಮೂಡಿಸಿರುವ ಇವರ ಭಾವ ನವನವೀನ. ಕವಿಯಾದವನು ತನ್ನ ಜೀವನಾನುಭವದ ತೆಕ್ಕೆಯಲ್ಲಿ ಬಂದ ಎಲ್ಲವನ್ನೂ ಕಾವ್ಯವಾಗಿಸಬಲ್ಲ ಎಂಬುದಕ್ಕೆ ಇಲ್ಲಿರುವ 32 ಕವಿತೆಗಳು ಒಂದಲ್ಲ ಒಂದು ರೀತಿಯಲ್ಲಿ ತನ್ನದೇ ಆದ ರಾಗ ಭಾವಗಳ ಸೊಗಸನ್ನು ಹೊಂದಿವೆ.
ಹಕ್ಕಿ ಗೂಡಿನ ಗರಿಕೆ
ಈ ಕವನ ಸಂಕಲನ 1996 ರಲ್ಲಿ ಬಿಡುಗಡೆಗೊಂಡಿದೆ. ಪೋಲಿಸ ಇಲಾಖೆಯ ಐ. ಪಿ. ಎಸ್ ಅಧಿಕಾರಿಯಾಗಿರುವ ವಿಜಯ ಸಾಸನೂರು ಮುನ್ನುಡಿ ಬರೆದಿದ್ದು. ಈ ಕವನ ಸಂಕಲನವನ್ನು ಪಾಂಡುರಂಗ ಯಲಿಗಾರವರು ತಮ್ಮ ತಾಯಿಗೆ ಅರ್ಪಿಸಿದ್ದಾರೆ. 36 ಕವನಗಳನ್ನು ಈ ಕವನ ಸಂಕಲನ ಒಳಗೊಂಡಿದೆ. ಲೇಖಕನ ಮಾತುಗಳಲ್ಲಿ ತಾವು ಸಾಹಿತ್ಯದ ವಿದ್ಯಾರ್ಥಿಯಲ್ಲದಿದ್ದರೂ ಸಾಹಿತ್ಯ ಅಭಿರುಚಿ ಹೊಂದಿರುವ ಕುರಿತು ಹೇಳಿದ್ದಾರೆ.
ಹೊಸಗಾಳಿ ಬೀಸಬಹುದು
ಈ ಹೊಸ ವರುಷದಾದಿಯಲಿ
ಬಿಸಿಯುಸಿರು ಕರಗಬಹುದು
ಚೈತ್ರದೀ ರವಿಯ ಶಾಖದಲಿ
ಜೀವ ಜೀವದ ಸೊಲ್ಲು
ಕೂಗುತ್ತ ಸಾಗಿಹುದು
ಬದುಕಿನಿಬ್ಬಗೆ ಬಂಡೆದಾರಿಯಲ್ಲಿ
ಕಂಡ ಕನಸುಗಳಿಗೀಗ
ಕೋಟಿ ವರುಷದ ಹರೆಯ
ಕಾತುರತೆ ಏನಿಹುದು ನಿರೀಕ್ಷೆಯಲ್ಲಿ. ?
ಎಂಬ ಹೊಸ ವರುಷ ಕವನದಲ್ಲಿ ಕವಿಯ ಭಾವನೆಗಳು ಹೊಸ ನಿರೀಕ್ಷೆಯೊಂದಿಗೆ ಗರಿಗೆದರುವ ಪರಿ ನಿಜಕ್ಕೂ ಅಮೋಘ. ಯಲಿಗಾರರ ಕಲ್ಪನಾಶಕ್ತಿ ಅದ್ಬುತವಾದದ್ದು. ಈ ಕವನ ಸಂಕಲನದಲ್ಲಿ ಅಲ್ಲಲ್ಲಿ ಚುಟುಕುಗಳು ಕೂಡ ಇಣುಕಿವೆ. ಮೊದಲ ಕವನ ಸಂಕಲನ ಕುರಿತಂತೆ ಗುಳೆದಗುಡ್ಡದ ಮಾಜಿ ಶಾಸಕರಾಗಿದ್ದ ಮಲ್ಲಿಕಾರ್ಜುನ ಬನ್ನಿ. ಡಾ. ಮಹಾದೇವ ಕಣವಿ. ಹಾ. ಮಾ. ನಾಯಕ. ಅರವಿಂದ ಮಾಲಗತ್ತಿ. ಸಿದ್ದಲಿಂಗ ಪಟ್ಟಣಶೆಟ್ಟಿ. ಶ್ಯಾಮಸುಂದರ ಬಿದರಕುಂದಿ. ಪ್ರೊ. ಆರ್. ವಿ. ಹೊರಡಿ. ಗುರುಲಿಂಗ ಕಾಪಸೆ. ವಿಷ್ಣು. ನಾಯಕ. ಸೋಮಶೇಖರ ಇಮ್ರಾಪುರ, ದ. ಲ. ಕೆರೂರ. ಶ್ರೀ ನಾಗರಾಜ ಹೀರಾ. ಮಲ್ಲಿಕಾರ್ಜುನ ಮೇತ್ರಿ. ವ್ಹಿ. ಪಿ. ಜೇವೂರ. ಕವಿರಶ್ಮಿ. ಕಡೇಮನಿಯವರ ಅಭಿಪ್ರಾಯಗಳನ್ನು ಪ್ರಕಟಿಸಲಾಗಿದೆ. ಕೊನೆಯ ರಕ್ಷಾ ಪುಟದಲ್ಲಿ ಶ್ರೀರಾಮ ಇಟ್ಟಣ್ಣವರ ಬರೆದ ಬೆನ್ನುಡಿ ಇದೆ.
ನೀನೇ ಪ್ರಣಯ ಗೀತೆಗಳ ಧ್ವನಿ ಸುರುಳಿ
ನಕ್ಷತ್ರ ಆಡಿಯೋ ಬೆಳಗಾವಿಯವರು ಹೊರತಂದ ನೀನೇ ಪ್ರಣಯ ಗೀತೆಗಳ ಧ್ವನಿ ಸುರುಳಿಯ ಸಾಹಿತ್ಯ ರಚನೆ ಮತ್ತು ನಿರ್ಮಾಣದ ಹೊಣೆ ಹೊತ್ತು ಬಿಡುಗಡೆಗೊಳಿಸಿದ ಪಾಂಡುರಂಗ ಯಲಿಗಾರವರ ಈ ಗೀತೆಗಳಿಗೆ ರಾಗ ಸಂಯೋಜಿಸಿದವರು ರಫೀಕ ಶೇಖರವರು. ಖ್ಯಾತ ಹಿನ್ನಲೆ ಗಾಯಕ ಬದ್ರಿ ಪ್ರಸಾದ ಹಾಡಿರುವ ನೀನೇ ನೀನೇ ಗೀತೆಯೊಂದಿಗೆ ಈ ಭಾವಗೀತೆ ಆರಂಭಗೊಂಡಿದ್ದು. ಹಕ್ಕಿಗೂಡಿನ ಮೇಲೆ. ನನ್ನ ಸನಿಹ ನೀ ಬಂದರೆ, ಅದೇ ಭಾನು ಅದೇ ಭೂಮಿ. ಸುಂದರ ಸಂಜೆ ದಾರಿಯಲ್ಲಿ ಗೀತೆಗಳನ್ನು ಬದ್ರಿ ಪ್ರಸಾದ ಹಾಡಿದ್ದು. ದೇವರೆನ್ನ ತಡೆದರು ಎಂಬ ಗೀತೆಯನ್ನು ರಫೀಕ ಶೇಖ ನಂದಿತ ಹಾಡಿದ್ದರೆ. ಮನೆಯ ಬಾಗಿಲ ಮುಂದೆ ಗೀತೆಯನ್ನು ರಫೀಕ ಸೇಖ ಹಾಡಿರುವರು. ಕೊನೆಯ ಗೀತೆ ಬೆಳದಿಂಗಳಾಗಿ ಬಂದೆ ನೀನು ಅರ್ಚನಾ ಉಡುಪವರು ಹಾಡಿರುವರು. ಈ ಎಲ್ಲ ಗೀತೆಗಳು ಬಹಳ ಇಂಪಾಗಿವೆ.
ದೇವರೆನ್ನ ತಡೆದರು
ಜಗವೆ ನಿಂತು ನಕ್ಕರೆ
ಹೆದರಲಾರೆ ನಾ
ಹೆದರುವೆ ನೀ ದೂರಾದರೆ
ಎಂಬ ಗೀತೆ ರಫೀಕ ಶೇಖ ನಂದಿತ ಧ್ವನಿಯಲ್ಲಿ ಬಹಳಷ್ಟು ಸುಂದರವಾಗಿ ಮೂಡಿ ಬಂದಿದೆ.
ಹಕ್ಕಿಗೂಡಿನ ಮೇಲೆ
ಗರಿಕೆ ಎಸಳಿನ ಹಾಗೆ
ಭಾವ ಹೊದಿಕೆಯ ಹೊಚ್ಚಿ
ಬೆಚ್ಚಗಿಟ್ಟಿರುವೆ ನಿನ್ನ
ಎಂಬ ಗೀತೆ ಸೋಲೋ ದಾಟಿಯಲ್ಲಿ ಬದ್ರಿಪ್ರಸಾದ ಹಾಡಿದ್ದು. ಇದೊಂದು ನೋವನ್ನು ಸೂಸುವ ಸಾಹಿತ್ಯ ಒಳಗೊಂಡಿದೆ. ಒಟ್ಟಾರೆ ಸ್ವರಸಂಯೋಜನೆ ಸಂಗೀತ ಬಹಳ ಇಂಪಾಗಿದ್ದು ಇಂದಿಗೂ ಕೂಡ ಎಲ್ಲ ಗೀತೆಗಳು ಕೇಳಲಿಂಪಾಗಿವೆ. ಇಂತಹ ಸಾಹಿತ್ಯದ ಪ್ರಭೆಯನ್ನು ಪೋಲಿಸ್ ಇಲಾಖೆಯಲ್ಲಿದ್ದುಕೊಂಡು ಬರಹದ ಮೂಡಿಸುವ ಕವಿ ಹೃದಯ ಹೊಂದಿದ ಯಲಿಗಾರವರು ಇಂದಿಗೂ ಮಾತನಾಡುವ ಶೈಲಿ ಕೂಡ ಬಹಳ ಸೂಕ್ಷ್ಮ ಮಧುರ ಭಾಷೆಯನ್ನು ಹೊಂದಿರುವುದನ್ನು ಕಾಣಬಹುದು.
ಕಲಾವಿದರಾಗಿ ಪಾಂಡುರಂಗ ಯಲಿಗಾರ
ಇವರು ವಿದ್ಯಾರ್ಥಿ ದೆಸೆಯಲ್ಲಿ ನಾಟಕದಲ್ಲಿ ಅಭಿನಯಿಸುತ್ತಿದ್ದರು. ಇವರ ಮನೆಯ ಮೂವರು ಸಹೋದರರೂ ಕೂಡ ಕಲಾವಿದರಾಗಿದ್ದರು. ಮುನವಳ್ಳಿಯಲ್ಲಿ ಎರಡು ನಾಟಕ ತಂಡಗಳಿದ್ದವು. ಅದರಲ್ಲಿ ಇವರದ್ದು ಒಂದು ತಂಡ. ಪಾಂಡುರಂಗ ಯಲಿಗಾರ ಇವರು ಅಭಿನಯಿಸಿದ್ದ ನಾಟಕ”ಮನೆಯೇ ಮಂಗಳ ಗೌರಿ”(1969) ಇದರಲ್ಲಿ ಮಾಟನವರ ಮತ್ತು ಜಕಾತಿ ಶಿಕ್ಷಕರು ಚಂದ್ರು ಉಜ್ಜಿನಕೊಪ್ಪ. ಟಿ. ಎಸ್. ಬಡೆಮ್ಮಿ ಸ್ವತಃ ಪಿ. ಬಿ. ಯಲಿಗಾರ ಇವರ ಸಹೋಹದರ ಸುರೇಶ. ಯಲಿಗಾರ ಅಭಿನಯಿಸಿದ್ದು ಈ ನಾಟಕವು 1970 ರಲ್ಲಿ ಜರುಗಿದ ಮೈಸೂರ ದಸರಾ ಉತ್ಸವಕ್ಕೂ ಆಯ್ಕೆಯಾಗುವ ಮೂಲಕ ಮುನವಳ್ಳಿಯ ರಂಗ ಕಲಾವಿದರ ಅಭಿನಯದ ನಾಟಕವೊಂದು ದಸರಾ ಹಬ್ಬದಲ್ಲಿ ಜರುಗುವ ಮೂಲಕ ನಾಡಿನಲ್ಲಿ ಖ್ಯಾತಿ ಗಳಿಸಿದ್ದು ಈಗ ಇತಿಹಾಸವೆಂದರೆ ಅಚ್ಚರಿಯೇನಲ್ಲ.
ಈ ನಾಟಕ ಮೈಸೂರು ದಸರಾ ಪ್ರದರ್ಶನಕ್ಕೆ ಆಯ್ಕೆಯಾಗಿ ಪತ್ರ ಬಂದಿದ್ದನ್ನು ಇವರು ಇಂದಿಗೂ ನೆನೆಯುವರು. ಇವರು ನೌಕರಿ ಪ್ರಾರಂಭದ ದಿನಗಳವು. ಇವರ ನೌಕರಿ ಕೂಡ ಮೈಸೂರಿನಲ್ಲಿ ಜರುಗಿತ್ತು. ಇವರನ್ನು ಹೊರತು ಪಡಿಸಿದ ಕಲಾವಿದರು ಮುನವಳ್ಳಿಯಲ್ಲಿ. ಇವರೊಬ್ಬರು ಮೈಸೂರಿನಲ್ಲಿ. ಹೀಗಾಗಿ ಇವರ ವಿಳಾಸಕ್ಕೆ ಮುನವಳ್ಳಿಯಿಂದ ಪತ್ರ ಬರೆದು ನಾಟಕ ಸೆಲೆಕ್ಟ ಆಗಿರುವ ವಿಷಯ ತಿಳಿಸಿರುತ್ತಾರೆ. ಆ ಪತ್ರ ಇವರ ಟ್ರೇನಿಂಗ ಕಾಲೇಜ್ ಪ್ರಿನ್ಸಿಪಾಲ್(ಎಸ್. ಪಿ) ಯವರ ಕೈಗೆ ಸಿಕ್ಕು. ಅವರು ಇವರನ್ನು ಕರೆದು. ”ನೀನು ನಾಟಕ ಮಾಡುತ್ತೀಯಾ. ?: ಎಂದು ಕೇಳಿದ್ದರಂತೆ. ಇವರು ಏನಾದರೂ ಅನ್ನಬಹುದು ಎಂದುಕೊಂಡು “ಇಲ್ಲ ಸರ್”ಎಂದಿದ್ದರಂತೆ. ಯಾಕೆ ಸುಳ್ಳು ಹೇಳುವೆ. ನೋಡು ನಿಮ್ಮ ನಾಟಕ ಮೈಸೂರು ದಸರಾ ಉತ್ಸವಕ್ಕೆ ಆಯ್ಕೆಯಾಗಿದೆ ಎಂಬ ಪತ್ರ ಬಂದಿದೆ. ಇಲ್ಲಿ ನೀನು ನೌಕರಿ ಬಿಟ್ಟು ಹೋಗಿ ರಿಹರ್ಸಲ್ ಮಾಡುವಂತಿಲ್ಲ. ಏನು ಮಾಡುವೆ” ಎಂದರು. ನಾಟಕ ಇರುವ ದಿನ ಮತ್ತು ಹಿಂದಿನ ಒಂದು ದಿನ ಅವಕಾಶ ಕೊಟ್ಟರೆ ಪಾಲ್ಗೊಳ್ಳುವೆ ಎಂದು ಹೇಳಿ. ಊರಿನಲ್ಲಿರುವ ನಾಟಕದ ಕಲಾವಿದರಿಗೆ ಎಲ್ಲ ತಯಾರಿಯೊಂದಿಗೆ ಬರಲು ಹೇಳಿ ಪತ್ರ ಬರೆದರು. ಅದರಂತೆ ಅವರೂ ಆಗಮಿಸಿದರು. ಇವರು ಒಂದೇ ದಿನ ರಿಹರ್ಸಲ್ ಮುಗಿಸಿ ಮರುದಿನ ನಾಟಕದಲ್ಲಿ ಅಭಿನಯಿಸಿದರು. ಈ ನಾಟಕ ನೋಡಲು ಚಲನಚಿತ್ರ ನಿರ್ದೇಶಕ ರವಿ. ಮತ್ತು ನಟಿ ರಾಧಾ ಆಗಮಿಸಿದ್ದರು. ಅಂದು ಪ್ರದರ್ಶನಗೊಂಡ ಇವರ ನಾಟಕ ಪ್ರಥಮ ಪ್ರಶಸ್ತಿ ಗಳಿಸಿದ್ದನ್ನು ಇಂದಿಗೂ ನೆನೆಯುವರು. ಕಾಲೇಜು ದಿನಗಳ ಹವ್ಯಾಸ ನೌಕರಿ ಬದುಕಿನಲ್ಲಿಯೂ ಕೂಡ ಮುಂದುವರಿದರು. ಮುಂದೆ ಅಭಿನಯದಿಂದ ದೂರ ಉಳಿದರೂ ಡಾ. ರಾಜಕುಮಾರ ಅವರೊಂದಿಗೆ ಒಡನಾಟದವರೆಗೂ ಬೆಳೆದದ್ದು ಈಗ ಇತಿಹಾಸ.
ರಾಗಗತಿ
ಈ ಕವನ ಸಂಕಲನ ಬಿಡುಗಡೆಯಾಗಿದ್ದು 2018 ರಲ್ಲಿ “ನೀನೇ” ಕ್ಯಾಸೆಟ್ಟಿನಲ್ಲಿಯ ಗೀತೆಗಳು ಸೇರಿದಂತೆ ಇಲ್ಲಿ ಕವನಗಳಿವೆ. ಇದನ್ನು ತಮ್ಮ ಅಕ್ಕನಿಗೆ ಅವರು ಅರ್ಪಿಸಿರುವರು. ಮುನ್ನುಡಿಯನ್ನು ಡಾ. ಸರಜೂ ಕಾಟ್ಕರ ಬರೆದಿರುವರು. ಅವರು ಹೇಳುವಂತೆ ಕಾಡಿಸುವ ಕವಿತೆಗಳಿವು.
ನವೋದಯದ ಸೂರ್ಯ
ಪಶ್ವಿಮಾಂಬುಧಿಗಿಳಿದ
ನವ್ಯೋತ್ತರೋತ್ತರ
ಸಾಗರದಿ ಉದಯಿಸಿದ
ಕಾಲಕ್ಕೆ ತಕ್ಕಂತೆ ಬದಲಾಗಿ
ತಾಳಕ್ಕೆ ತಕ್ಕಂತೆ
ಕುಣಿಯೋಣ ನಾವಿಲ್ಲಿ
ಎಂದು ಬದಲಾದ ಸಾಹಿತ್ಯ ಪ್ರವಾಹವನ್ನು ಗುರುತಿಸುತ್ತಾರೆ. ಭೂತವು ಭೂತಕಾಲಕ್ಕೆ ಸರಿಯಿತು. ಭವಿಷ್ಯವನ್ನು ವರ್ತಮಾನಕಾಲದಲ್ಲಿ ಬರೆಯಬೇಕಾಗಿದೆ. ಎಂದು ಸರಜೂ ಕಾಟ್ಕರ ಬರೆದಿರುವರು. ಐದು ವಿಭಾಗಗಳಲ್ಲಿ ಇಲ್ಲಿನ ಕವಿತೆಗಳಿವೆ. ಮೊದಲ ವಿಭಾಗ ಪ್ರೇಮಲೋಕದಲ್ಲಿ 25 ಕವನಗಳು. ಎರಡನೆಯ ವಿಭಾಗದಲ್ಲಿ ಸ್ವಗತದಲ್ಲಿ 10 ಕವನಗಳು. ಮೂರನೆಯದು ಪ್ರಾಸಂಗಿಕದಲ್ಲಿ 8 ಕವನಗಳು ನಾಲ್ಕನೆಯದು ಭಾಷ್ಪಾಂಜಲಿಯಲ್ಲಿ ಐದು ಕವನಗಳು. ಐದನೆಯದು ಹನಿಗವನಗಳು ವಿಭಾಗದಲ್ಲಿ 8 ಹನಿಗವನಗಳು ನಂತರ ಡಾ. ಬಸವರಾಜ ಜಗಜಂಪಿಯವರ ಅಭಿನಂದನ ನುಡಿ. ಪ್ರೊ. ಎಂ. ಎಸ್. ಇಂಚಲ ಅವರ ನುಡಿಗಳು. ಹಿಂದಿನ ಕವನ ಸಂಕಲನ “ಹಕ್ಕಿ ಗೂಡಿನ ಅರಿಕೆ” ಕುರಿತಂತೆ ಹಾ. ಮಾ. ನಾಯಕ. ಕುಂ. ವೀರಭದ್ರಪ್ಪ. ಬಸವರಾಜ ಸಾದರ. ಎನ್ಕೆ. ಕಯ್ಯಾರ ಕಿಂಞಣ್ಣರೈ. ಸಿದ್ದಲಿಂಗ ಪಟ್ಟಣಶೆಟ್ಟಿ. ಗಿರಡ್ಡಿ ಗೋವಿಂದರಾಜ್. ಹಂಪನಾ. ಬಿ. ಎ. ಸನದಿ. ಎ. ಪಿದುರೈ. , ವಿಷ್ಣು ನಾಯ್ಕ. ದೇವೇಂದ್ರಕುಮಾರ ಹಕಾರಿ. ಪ್ರೊ. ವ್ಹಿ. ಎ. ಜೋಶಿ. ಮಾಲತಿ ಪಟ್ಟಣಶೆಟ್ಟಿ. ಪ್ರೊ. ಆರ್. ವ್ಹಿ. ಹೊರಡಿಯವರ ನುಡಿಗಳಿವೆ. ಕೊನೆಯ ರಕ್ಞಾಪುಟದಲ್ಲಿ ಸಿದ್ದಲಿಂಗ ಪಟ್ಟಣಶೆಟ್ಟಿಯವರ ಹಾರೈಕೆಯನ್ನು ಪ್ರಕಟಿಸಿರುವರು. ಹೀಗೆ ಇದೊಂದು ಸುಂದರ ಕವನ ಸಂಕಲನ.
ಸದ್ಯದ ಚಟುವಟಿಕೆಗಳು
ಕೊರೋನಾ ಕಾಲದಲ್ಲಿ ಮನೆಯಲ್ಲಿಯೇ ಇದ್ದು ಕಳೆದ 22 ವಾರಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನ ವೆಬನಾರ್ ಕಾರ್ಯಕ್ರಮಗಳಲ್ಲಿ ತಮ್ಮ ಕವನ ವಾಚನ ಉಪನ್ಯಾಸಗಳನ್ನು ನೀಡುತ್ತಿದ್ದು. ಇದೇ ಸೋಮವಾರ 9 ರಂದು 22 ನೇ ಸಂಚಿಕೆ ಪ್ರಸಾರವಾಗಲಿದೆ. ಇತ್ತೀಚಿಗಷ್ಟೇ ದಾರವಾಡ ಆಕಾಶವಾಣಿ ಕೇಂದ್ರದಿಂದ ಡಾ. ಬಸು ಬೇವಿನಗಿಡದ ಅವರು ನಡೆಸಿದ ಕೋರೋನಾ ಸಂದರ್ಭದಲ್ಲಿ ಋಣಾತ್ಮಕ ಧನಾತ್ಮಕ ಚಟುವಟಿಕೆಗಳು ಸಂದರ್ಶನ ಪ್ರಸಾರವಾಯಿತು. ಇದು ರಾಷ್ಟ್ರೀಯ ಮಾಧ್ಯಮದಲ್ಲಿ ಕೂಡ ಮೂಡಿ ಬಂದಿತು. ಸದ್ಯ ಬೆಳಗಾವಿಯಲ್ಲಿ ವಾಸವಾಗಿರುವ ಇವರು ತಮ್ಮ ಪತ್ನಿ ಜ್ಯೋತಿ ಪುತ್ರರಾದ ಸಂತೋಷ(ಮುನವಳ್ಳಿಯಲ್ಲಿ ಇರುವನು) ವಿಶ್ವನಾಥ. ವಿಶಾಲರೊಡನೆ ವಾಸಿಸುತ್ತಿರುವರು. ಮಹಾಭಾರತ. ರಾಮಾಯಣ ಭಗವದ್ಗೀತೆಗಳಂತಹ ಅಧ್ಯಾತ್ಮಿಕ ಗ್ರಂಥಗಳ ಓದು. ಕೃಷಿ ಚಟುವಟಿಕೆಗಳ ಮೂಲಕ ತಮ್ಮ ನಿವೃತ್ತಿ ಜೀವನ ಕಳೆಯುತ್ತಿರುವ ಪಾಂಡುರಂಗ ಯಲಿಗಾರ ಗ್ರಾಮೀಣ ಪ್ರತಿಭೆ. ಇಂದಿಗೂ ಕೂಡ ಸಾಹಿತ್ಯದ ನಂಟಿನಲ್ಲಿ ಇದ್ದದ್ದು ನಮ್ಮ ಊರಿನ ಹೆಮ್ಮೆ. ಮುನವಳ್ಳಿಯಲ್ಲಿ ಇವರ ತಂದೆಯವರ ಹೆಸರಿನಲ್ಲಿ ಬಿ. ಈಡಿ ಕಾಲೇಜ. ತಾಯಿಯವರ ಹೆಸರಿನಲ್ಲಿ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿವೆ. ಬರುವ ಡಿಸೆಂಬರ್ 15 ಕ್ಕೆ ಇವರಿಗೆ 75 ವಸಂತಗಳು ತುಂಬಿ 76 ಕ್ಕೆ ಕಾಲಿಡಲಿದ್ದು ಇವರ ಈ ಸಾಹಿತ್ಯ ಪ್ರತಿಭೆಗೆ ಅಭಿನಂದಿಸಲು ಅವರ ಸಂಪರ್ಕ ಸಂಖ್ಯೆ. 8660252587 ಕರೆ ಮಾಡಿ ಅಥವ ವ್ಯಾಟ್ಸಪ್ ಮೂಲಕ ಕೂಡ ತಮ್ಮ ಪ್ರತಿಕ್ರಿಯೆ ತಿಳಿಸಬಹುದು.
–ವೈ. ಬಿ. ಕಡಕೋಳ