ನನ್ನ ಬದುಕಿನ ಹಾದಿಯಲ್ಲಿ ನಗುವಿನ ಹೂ ಚೆಲ್ಲಿನಿಂತ
ನಿನಗಾಗಿ….. ನಿನ್ನವನಿಂದ….
ಡಿಸೆಂಬರ್ ತಿಂಗಳ
ಚಮುಚುಮು ಚಳಿಗಾಳಿ…..
ಮೆಲ್ಲನೆ, ಹರಿವ ಸದ್ದೂ
ಕೇಳದಷ್ಟು
ಶಾಂತತೆ ಕಾಪಾಡಿಕೊಂಡು
ಈ ನದಿ
ಚಂದ್ರನ ಹಾಲು ಬೆಳಂದಿಗಳು
ಜೊತೆಗೊಂದಿಷ್ಟು ನಿನ್ನ ನೆನಪುಗಳು
ಎದೆಯಲ್ಲಿ ಮಲ್ಲಿಗೆ ಬಿರಿದಂತೆ
ಉಲ್ಲಾಸ ಉತ್ಸಾಹ
ಅಹಾ….! ನಾನೇ ಈ ಜಗದ
ಪರಮ ಸುಖಿ….
ನಂಗೊತ್ತು ನೀನು ನೆನಪಾಗ್ತ ಇದ್ದೆ ಎಂದ್ರೆ ನಿಂಗೆ ಕೆಟ್ಟ ಕೋಪ ಬರುತ್ತೆ…… ಮರೆತವರು ಮಾತ್ರ ನೆನಪಿಸಿಕೊಳ್ಳೊದು ಅಂತಾ ನಿನ್ನ ವಾದ ಅಲ್ವಾ…..? ಅದು ಹಾಗಲ್ಲಾ ದಿನದ ಹಗಲೆಲ್ಲಾ ಜೊತೆಯಾಗೇ ಇದ್ರೂ ನಿನ್ನ ಅಪ್ಪಿಕೊಳ್ಳೋಕೆ ಸಮಯವೇ ಸಿಕ್ಕಿರಲ್ಲಾ but ಮುಸ್ಸಂಜೆ ಹೊತ್ತಿನ ನಮ್ಮ ಏಕಾಂತದಲಿ ಅಪ್ಪಿ ಈ ಜಗವನ್ನು ಮರೀತಿವಲ್ವಾ..? ಹಾಗೇ ಈ ನೆನಪುಗಳು ಜೊತೆಗೇ ಇದ್ರೂ ಅದನ್ನು ಅಪ್ಪಿ ಮುದ್ದಾಡುವ ಸಮಯ ಈ ಏಕಾಂತದಲ್ಲಿ ಸಿಗೋದು…. ನೀನ್ಯಾವಾಗ್ಲೂ ಹೇಳ್ತಿಯ ಅಲ್ವಾ ನಿನಗೆ ನನ್ನ ಮೇಲೆ ಪ್ರೀತಿ ಅಷ್ಟಕಷ್ಟೆ ಬಿಡು ಅಂತಾ ನಿನ್ನ ನಾನೆಷ್ಟು ಪ್ರೀತಿಸ್ತಿನಿ ಅಂತಾ ನಂಗೇ ಗೊತ್ತಿಲ್ಲ….!! ಅದನ್ನು ಹೇಳಿಕೊಳ್ಳುವ ಭಾಷೆ ರೀತಿ ಯಾವುದು ಗೊತ್ತಿಲ್ಲ…. ಈ ಏಕಾಂತದ ಸಮಯ ಇದೆಯಲ್ಲಾ ಅದು ನಮ್ಮ ಪ್ರೀತಿಯ ಆಳವನ್ನು ಅನುಭವಕ್ಕೆ ತರುವ ಸಮಯ ನಿನ್ನ ತುಂಬಾನೇ ಮಿಸ್ ಮಾಡಿಕೊಳ್ಳುವ ಸಮಯ ಕೂಡ….! ಸರಿ ರಾತ್ರಿಯಲ್ಲಿ ತಣ್ಣನೆ ನದಿಯ ತಟದಲ್ಲಿ ನಿನ್ನ ನೆನಪುಗಳ ಹೊದ್ದು ಕುಳಿತ ನನಗೆ ಈ ನದಿಯ ನೀರವತೆ, ಗಾಳಿಯ ವಿಶಾಲತೆ, ಭೂಮಿಯ ತಾಳ್ಮೆ, ಆಗಸದ ಸೊಗಸು ಎಲ್ಲಾ ಪ್ರೀತಿಯ ರೂಪಕಗಳಂತೆ ಕಾಣಿಸುವ ಸುಮಧುರ ಗಳಿಗೆ ಇದು….!!
“ಮುಂದಿನ ತಿಂಗಳು ಜಾತ್ರೆ ಕಣೋ ನಿಂಗೆ ನೆನಪಿದೆ ಅಲ್ವಾ ಹಿಂದಿನ ಜಾತ್ರೆಯಲ್ಲಿ…..?” ನಿನ್ನೆ ನೀನು ಈ ಮಾತು ಹೇಳಿದ ಕ್ಷಣದಿಂದ ಕಳೆದ ಮೂರು ವರುಷಗಳ ಹಿಂದಿನ ನೆನಪುಗಳು ಜೇನಿನಂತೆ ಬಂದು ನನ್ನ ಮುತ್ತುತಿವೆ…. ಅಲ್ಲಿಯವರೆಗೂ ನಾವಿಬ್ಬರು ಬರಿಯ ಸ್ನೇಹಿತರು…. ತುಂಬಾನೇ ಆತ್ಮೀಯತೆ ಕಾಳಜಿ ಸಲುಗೆ ಎಲ್ಲಾ ತುಂಬಿಕೊಂಡಿದ್ದ ಮಧುರ ಸ್ನೇಹವಾಗಿತ್ತದು…..!! ಅದ್ಯಾವ ಗಳಿಗೆಯಲ್ಲಿ ನಮ್ಮ ಎರಡು ವರ್ಷದ ಸ್ನೇಹ ಪ್ರೀತಿಯ ಗಡಿ ರೇಖೆ ದಾಡಿತೋ ಗೋತ್ತೇ ಆಗಲಿಲ್ಲ ನೋಡು…. ಬಹುಶಃ ಅತಿಯಾದ ಸೇಹದ ತುತ್ತು ತುದಿಯೇ ಪ್ರೀತಿಯ ಆರಂಭಸ್ಥಾನ ಅಂತಾ ಅನ್ನಿಸಿದ್ದು ನಮಗೆ ಇಲ್ಲೇ ಅಲ್ವಾ…. ಇಬ್ಬರು ಎದೆಯಲ್ಲಿ ಬೆಟ್ಟದಷ್ಟು ಪ್ರೀತಿ ಇಟ್ಕೂಂಡಿದ್ರೂ ಹೇಳಿಕೊಳ್ಳೊಕೆ ಆಗದೆ ಸ್ನೇಹಿತರಂತೆ ನಟಿಸುತ್ತಾ ಇದ್ವಿ…. ಅದು ಬರಿಯ ನಟನೆ ಅಷ್ಟೇ ಪ್ರೀತಿ ಅನ್ನೋದು ಒಳಗಡೆ ನುಸುಳಿಯಾಗಿದೆ ಎಂಬ ಸತ್ಯ ಇಬ್ಬರಿಗೂ ಅರಿವಾಗೇ ಇತ್ತು…. ನಿಂಗೆ ಜಾತ್ರೆಯ ತೊಟ್ಟಿಲು (Giant wheel) ಎಂದರೆ ತುಂಬಾನೇ ಇಷ್ಟ. ನಂಗೆ ಅದು ಅಷ್ಟೆ ಭಯ. ಅವತ್ತು ನಿನ್ನ ಒತ್ತಾಯಕ್ಕೆ ಹೇಗೋ ದೈರ್ಯಮಾಡಿ ಅದರೊಳಗೆ ಕೂತವನಿಗೆ ನಿನ್ನ ಮೊಗದಲ್ಲಿ ಮಿನುಗುತಿದ್ದ ನಗೆಯೊಂದಿಗೆ, ಸಣ್ಣ ತುಡಿತವೊಂದು ಏನೋ ಹೇಳಲು ಕಾತರಿಸುತ್ತಿರುವಂತೆ ಭಾಸವಾಗುತಿತ್ತು. ತೊಟ್ಟಿಲ್ಲು ಮೆಲ್ಲನೆ ಸುತ್ತು ಆರಂಭಿಸಿದಾಗ ಕೆಳಗಡೆ ನೋಡಬೇಡಾ ಕಣೋ ನಿಂಗೆ ಭಯ ಆಗುತ್ತೆ ಎಂದ ನಿನ್ನಾ ಮಾತುಗಳನ್ನು ಕೇಳಿಸಿ ಕೊಳ್ಳದಷ್ಟು ಮಂತ್ರ ಮುಗ್ದನಾಗಿ ನಾ ನಿನ್ನನೇ ಕಣ್ ತುಂಬಿಕೊಳ್ಳುತ್ತಿದೆ…. ನಿನ್ನೆಡೆಗೆ ನೆಟ್ಟ ನನ್ನ ದೃಷ್ಟಿ ಕದಲದಿರಲಿ ಎಂಬ ನೀನು ಆ ಮಾತು ಅಂದದ್ದು ಅಂತಾ ನಂಗೆ ಚೆನ್ನಾಗಿ ಗೊತ್ತು…. ನಿಧಾನವಾಗಿ ತೊಟ್ಟಿಲು ಏರಿಳಿತ ಜೋರಾದಂತೆ ನಮ್ಮ ಎದೆಯ ಬಡಿತವೂ ಜೋರಾಗುತ್ತಲೇ ಇತ್ತು…. ಅಷ್ಟರವರೆಗೆ ಪಟ-ಪಟ ಅಂತ ಮಾತಾಡುತ್ತಿದ್ದ ನೀನು ಅದ್ಯಾವುದೋ ಮಂಕು ಕವಿದಂತೆ ಮೌನಿಯಾಗಿ ನನ್ನನೇ ದಿಟ್ಟಿಸುತ್ತಿದೆ….. ಅಂದು ನಮ್ಮ ಸ್ನೇಹದ ಸಂಬಂಧಕ್ಕೆ ಪ್ರೀತಿಯ ಪೋಷಾಕು ತೊಡಿಸುವ ಗಳಿಗೆ ಬಂದಿತ್ತು. ತೊಟ್ಟಿಲು ಎತ್ತರದ ತುದಿಯ ತಲುಪಿದಾಗ ನೀ ನನ್ನ ಕೈ ಹಿಡಿದಿದ್ದೆ ನಾಚಿದ ಕಂಗಳಲ್ಲಿ ತುಂಬಿ ತುಳುಕುತಿದ್ದ ಪ್ರೀತಿಯ ಒತ್ತಾಸೆಗೆ ನೀ ಹೇಳಿಕೊಳ್ಳಲಾಗದ ತುಡಿತಗಳಿಂದ ನನ್ನ ಕೆನ್ನೆಗೆ ಮುತ್ತಿಟ್ಟು I love you ಎಂದಿದ್ದೆ….!!!! ಅದು ಬದುಕಿನ ಮರೆಯದ ಗಳಿಗೆ ಬಹುದಿನದ ನಿರೀಕ್ಷೆಯು ಸಾಕಾರಗೊಂಡ ಕ್ಷಣ….!! ಮರಳಿ ಹಣೆಗೊಂದು ಮುತ್ತನಿಟ್ಟು ನಿನ್ನ ನಿವೇದನೆ ಒಪ್ಪಿಗೆಯ ಅಂಕಿತ ಹಾಕಿದ್ದೆ…. ಅಂದು ಜಾತ್ರೆಯ ತುಂಬಾ ಬರೀ ನಾನು-ನೀನು, ನೀನು-ನಾನು ಮಾತ್ರ ಅನ್ನಿಸಿಬಿಟ್ಟಿತ್ತು….!! ಅದೇ ಸಮಯದಲ್ಲಿ ಸರಿಯಾಗಿ ಜಾತ್ರೆ ದೊಡ್ಡ ಮೈಕೊಂದರಲ್ಲಿ ಗೀತೆ ತೇಲಿ ಬರುತಿತು….Teri meri meri teri prem kahani……ಅಂತೂ ಪ್ರೀತಿ ಹುಟ್ಟಿದ್ದು ಯಾವಾಗ ಅಂತಾ ಗೊತ್ತಾಗದೆ ಇದ್ದರೂ, ಅದು ತೆರೆದುಕೊಂಡ ಬಗೆಯಂತೂ ಮರೆಯಲಾರದ ವಿಶೇಷವೇ ಸರಿ…. ಅದಕ್ಕೆ ಅಲ್ವಾ ನಿಮ್ಮೂರ ಜಾತ್ರೆ, ತೊಟ್ಟಿಲು, ಆ ಗೀತೆ ಎಲ್ಲವೂ ವಿಶೇಷವಾಗಿಯೇ ಉಳಿದು ಹೋದದ್ದು. ಕಳೆದ ಜಾತ್ರೆಯಲ್ಲಿ ನಾವಿಬ್ಬರೂ ಒಟ್ಟಾಗಿ ಒಡಾಡಿದ್ದೇ ಒಂದು ದೊಡ್ಡ ಸಂಭ್ರಮ…. ಅದೇ ಜಾತ್ರೆ ಮತ್ತೆ ಬಂದಿದೆ, ಈ ಮೂರು ವರ್ಷದಲ್ಲಿ ನಮ್ಮ ಪ್ರೀತಿ ಅಂದು ಕೊಳ್ಳಲಾರದದಷ್ಟು ಗಾಢವಾಗಿ ಬೆಳೆದಿದೆ…. ಹಾಗಂತ ನಮ್ಮ ನಡುವಿನ ಸ್ನೇಹವೇನು ಅಲ್ಲೇ ಕೊನೆಯಾಗಲಿಲ್ಲ ಅಲ್ವಾ. ಈಗಲೂ ನಾವಿಬ್ಬರು ಆ ಆತ್ಮೀಯತೆಯನ್ನು ಹಾಗೇ ಕಾಪಾಡಿಕೊಂಡೇ ಬಂದಿದ್ದೀವಿ….ಅದು ನಮ್ಮ ಪ್ರೇಮದ ಪವಿತ್ರತೆ ಅಂದು ಕೊಳ್ಳುತ್ತೇನೆ. ಈ ಬಾರಿಯ ಜಾತ್ರೆಯಲ್ಲೂ ಮತ್ತದೆ ಉಲ್ಲಾಸ-ಉತ್ಸಾಹದಿಂದ ಸುತ್ತಾಡೋಣ. ಈಗಂತೂ ತೊಟ್ಟಿಲಲ್ಲಿ ಕೂರೋಕೆ ಭಯ ಇಲ್ಲ, ಆದರೆ ನೆಲ ನೋಡದೆ ನಿನ್ನ ಮೊಗವನ್ನೇ ನೋಡುವ ಅಭ್ಯಾಸ ಮಾತ್ರ ಬದಲಾಗದು….!! ತೊಟ್ಟಿಲು ರಭಸದಿಂದ ತುತ್ತ ತುದಿಗೆ ಹೋದಾಗ ಮತ್ತೆ ನೀ ನನ್ನ ಕೈ ಹಿಡಿದು I love you ಎನ್ನಬೇಕು….. ಈ ಬಾರಿ ಒಂದೇ ಕೆನ್ನಗೆ ಮುತ್ತಿಟ್ಟರೆ ಸಾಲದು ಎರಡು ಕೆನ್ನೆಗೆ ಬೇಕು ನೆನಪಿರಲಿ….
ನೋಡು ಈ ನೆನಪುಗಳೊಡನೆ ಜೂಟಾಟ ಆಡೋದಂದ್ರೆ ಊಟ,ತಿಂಡಿ ನಿದ್ದೆ ಎಲ್ಲವನ್ನೂ ಮರೆತ ಹಾಗೇ.. ಗಂಟೆ 12 ಆಯ್ತು, ನೀನು ಬಿಡು ಕುಂಭಕರ್ಣನ ವಂಶದ ಕೊನೆಯ ಮೊಮ್ಮಗಳು 8 ಗಂಟೆಗೆಲ್ಲಾ ನಿದ್ರೆಗೆ ಜಾರಿಯಾಗುತ್ತೆ….! ಈಗಂತೂ ಸವಿಗನಸುಗಳಲ್ಲಿ ತೇಲಾಡುತ್ತಾ ಇರ್ತೀಯಾ..
ಆದರೂ ನಿಂಗೆ Good Night…. ಮುಂದಿನ ಪತ್ರಾ ಬರೆವ ವರೆಗೂ ಜಾತ್ರೆಯ ನೆನಪುಗಳೂಡನೆ ತೇಲಾಡ್ತಾ ಇರೋಣ….ಏನಂತಿಯಾ….?
ಇಂತಿ,
ಕನಸುಗಳ ತೊಟ್ಟಿಲಲ್ಲಿ,
ಆಸೆಗಳ ರಂಗು ತೊಟ್ಟು,
ಪ್ರೀತಿಯ ಪಯಣವ ಸವಿಯುತ್ತಿರುವ ನಿನ್ನವ…..
*****