ನಿನ್ನವನಲ್ಲದ ಪಾಪಿ ಪ್ರೇಮಿ: ಸಾವಿತ್ರಿ ಹಟ್ಟಿ

ಪ್ರೀತಿಯ ಇವ್ಳೇ,

ಕಾಲ ಅನ್ನೂದೇನಾರ ನಮ್ ಕೈಯ್ಯಾಗಿದ್ದಿದ್ರ ಎಳ್ಕೊಂಬಂದು ನಮ್ಮನಿ ಪಡಸಾಲಿ ನಡುಗಂಬಕ್ಕ ಕಟ್ಟಿ ಹಾಕ್ತಿದ್ದೆ ನೋಡು ಹುಡುಗಿ. ಆಗ ಬಹುಶಃ ನಾನು ನೀನು ಸಣ್ಣ ಹುಡುಗ ಹುಡುಗಿ ಆಗೇ ಇರತಿದ್ವಿ. ಶ್ರಾವಣ ಮಾಸ, ಪಂಚಮಿ ದಿನಗೊಳಂದ್ರ ನಿನಗ ಪ್ರಾಣ ಅಲಾ! ನಿನ್ನ ಉದ್ದನ ಜಡಿಗಿ ಬಾಬಿ ರಿಬ್ಬನ್ ಗೊಂಡೆ ಹೆಣಕೊಂಡು, ಚಿತ್ತಾರದ ನಿರಿಗಿ ಲಂಗ ಉಟ್ಕೊಂಡು, ಗಗ್ರಿ ತೋಳಿನ ಪೋಲ್ಕಾ ಹಾಕೊಂಡು, ಆಬಾಲಿ, ಮಲ್ಲಿಗಿ ಕ್ಯಾದಗಿ ಹೂವು ಮುಡ್ಕೊಂಡು ಜೋಕಾಲಿ ಆಡುವಾಗ ನನಗ ಯಾಡ್ ಕಣ್ಣು ಸಾಲ್ತಿರಲಿಲ್ಲ ನೋಡಾಕ! ನಿನ್ನ ನೋಡೂದಂದ್ರ ನನಗ ಹಬ್ಬ ಆಕ್ಕಿತ್ತ ಸುಬ್ಬಿ. ನೀನು ಮಲ್ಲಿಗಿ ಹೂವಿನ ಮಾಲಿ ಒಳಗ ಕನಕಾಂಬರದಂತಾಕಿ. ಸೇವಂತಿಗಿ ಮಾಲಿ ಒಳಗಿನ ಕ್ಯಾದಗಿ ಅಂಥಾಕಿ. ಬಿಳೇ ಹಳ್ಳಿನ ವಾಲೆ ಒಳಗಿನ ಕೆಂಪು ಹಳ್ಳಿನಂಥಾಕಿ!! ಏನೇನ್ ವರ್ಣೀಸೀದ್ರೂ ನನಗ ತೃಪ್ತಿ ಆಗಂಗಿಲ್ಲ ನೋಡು…

ಹೆಂಗ ಕಳೆದು ಹೋದ್ವು ಮೂವತ್ತು ವರ್ಷ!!! ಮೊನ್ನೆ ಮೊನ್ನೆರ ಬಸವಣ್ಣನ ಜಾತ್ರ್ಯಾಗ ನಿನ್ನ ಹುಡುಕಿ ಅಲೆದಾಡಿದ ನೆನಪು ಅಚ್ಚ ಹಸುರಾಗೇತಿ ನೋಡೆ! ಅಷ್ಟು ಗದ್ದಲದಾಗ ನಿನ್ನ ಬೆಳ್ಳಿ ಬಟ್ಟಲದಂಥಾ ಕಣ್ಣು ಮಿಟುಕಿಸಿ ನೀನು ತೇರನ್ನು ನೋಡಿದರೆ ನಾನು ತೇರು ಬೀದೀ ಇನ್ನೊಂದ್ಕಡೆ ನಿಂತ್ಕೊಂಡು ನಿನ್ನೇ ನೋಡ್ತಿದ್ದೆ… ಕೋಟೆ ವೀರಭದ್ರೇಶ್ವರ ಜಾತ್ರಿ ಒಳಗ ನೀನು ತೇರಿಗೆ ಉತ್ತತ್ತಿ ಎಸೆದು ನಮಸ್ಕಾರ ಮಾಡೀದ್ರ ನಾನು ಕೈಯ್ತುಂಬ ಹೂವು ಹಿಡ್ಕೊಂಡು ನಿನ್ನ ಮ್ಯಾಲೆ ಬೀಳುವಂಗ ತೂರಿ ಎದಿ ಮುಟ್ಕೊಂತಿದ್ದೆ… ಗೋಕುಲಾಷ್ಠಮಿಯ ರಾತ್ರಿ ಕೃಷ್ಣನ ತೊಟ್ಟಲ ಕಾರ್ಯಕ್ರಮದಾಗ ನೀನು ಜೋಗುಳ ಹಾಡುವ ಹೆಣ್ಮಕ್ಕಳ ಬಾಲಗೋಂಚಿ ಥರಾ ಅವರ ಜೊತಿ ದನಿಗೂಡಿಸ್ತಿದ್ರ ನಾನು ಕಿವಿ ತುಂಬ್ಕೊಂಡು ಧನ್ಯ ಆಕ್ಕಿದ್ದೆ… ಹಬ್ಬ ಹರಿದಿನ‌ದಾಗ ಪ್ರಸಾದ ಕೊಡೂ ನೆಪದಾಗ ನಿನ್ನ ಕೋಮಲವಾದ ಚಿಗುರು ಬೆರಳಿನ ಅಮೃತ ಹಸ್ತಕ್ಕ ಕೈ ತಾಕಿಸಿ ಪುಳಕಿತ ಆಕ್ಕಿದ್ದೆ. ನೀನು ಪುಸ್ತಕ ಎದಿಗವಚಿಕೊಂಡು ಕಾಲೇಜಿಗೆ ಹೊಂಟ್ರ ನಾನು ಜೋಡ್ ಕೊಡ ತುಂಬಿಕೊಂಡು ನಿನ್ನ ಮುಂದ ಮುಂದ ಗಂಡಸತನ್ಕಿ ತೋರಿಸ್ಕೊಂತ ಹೊಕ್ಕಿರತಿದ್ದೆ…. ನೀನು ಹಿಟ್ಟು ಹಾಕ್ಸಾಕ ಗಿರಣಿಗಿ ಬಂದ್ರ ಯಾವುದೊ ಮಾಯದಾಗ ನನ್ನ ಕಾಳಿನ ಪುಟ್ಟಿ ನಿನ್ನ ಕಾಳಿನ ಪುಟ್ಟಿ ಹಿಂದಿಟ್ಟು ನೀನು ಹಿಟ್ಟು ಹಾಕಿಸಿಕೊಂಡು ಹಿಂತಿರುಗಿ ಹೋಗೂತನಕ ಕದ್ದಿನಿಂದ ನಿನ್ನ ಕಾವಲುಗಾರ ಆಗಿರತಿದ್ದೆ… ನೀನು ಕನ್ನೇರ ಬಾವಿ ನೀರಿಗೆ ಬಂದು ಗೆಳತ್ಯಾರ ಜೊತಿ ಮಾತಾಡ್ಕೊಂತ ನಿಂತಾಗ ಕಣ್ಮುಚ್ಚಿ ಕಣ್ಣು ತೆಗೆಯೂದ್ರಾಗ ನಿನ್ನ ಕೊಡ ತುಂಬಿಟ್ಟಿರತಿದ್ದೆ… ನೀ ಹತ್ತುವ ಬಸ್ಸನ್ನೇ ಕಾಯ್ಕೊಂಡು‌ ನಿಂತು ವಸ್ತ್ರ ಹಾಕಿ ಸೀಟು ಹಿಡದು ಕಡಿಗಿ ಆ ವಸ್ತ್ರ ಯಾರದು ಅಂತ ಯಾರಿಗೂ ಗೊತ್ತಾಗದೇ ಹೋದಾಗ ನೀ ವಸ್ತ್ರ ಸರಿಸಿ ಸೀಟಿನ್ಯಾಗ ಕುಂತಾಗ ನಾ ನಿಂತ್ಕೊಂಡಲ್ಲೇ ಎದಿ ಮುಟ್ಕೊಂಡು ಖುಷಿ ಪಟ್ಕೊಂತ ಅದೆಷ್ಟು ವಸ್ತ್ರ ಖರ್ಚು ಮಾಡಿದೆ ಗೊತ್ತೇನೇ ಹುಡುಗಿ!!!!

ಇಷ್ಟೆಲ್ಲಾ ಯಾಕೆ ಮಾಡಿದೆ! ನಿನಗ ಅರ್ಥಾಗಲೇ ಇಲ್ಲ! ನೀನು ನಡೆದದ್ದೇ ಹಾದಿ. ಎಲ್ಲಾ ಸಂದರ್ಭದಾಗೂ ನನ್ನ ವರ್ತನೆಯನ್ನ ಒಂದು ತಪ್ಪು ಅಥವಾ ಆಕಸ್ಮಿಕ ಅಂದ್ಕೊಂಡು ಬಿಟ್ಟೆಯೇನೊ ಅನ್ಸುತ್ತದೆ… ಒಂದಲ್ಲಾ ಒಂದಿನ ನೀನು ತಿರುಗಿ ನನ್ನ ಕಡೆ ನೋಡ್ತಿದಿ, ನನ್ನ ಕಣ್ಣಾಗಿನ ಪ್ರೇಮ ಗುರುತಿಸ್ತಿದಿ ಅಂತ ಎಷ್ಟು ದಾರಿ ‌ಕಾಯ್ದೆ! ನೀನು ತಿರುಗಿ ನೋಡಲೇ ಇಲ್ಲ. ಕಡಿಗಿ ನೀನು ಓದೂದು ಮುಗಿಸಿ, ನಿನ್ನ ಮದುವಿ ಪ್ರಯತ್ನ ನಡೆದಾಗ ನಮ್ಮಪ್ಪಗ ಹೇಳ್ಬೇಕು ಹೇಳ್ಬೇಕು ಅಂತ ಎಷ್ಟು ಒದ್ದಾಡಿದೆ. ಆದ್ರ ಧೈರ್ಯ ಬರಲೇ ಇಲ್ಲಲೇ ಸುಂದ್ರಿ… ಭಂಡ ಧೈರ್ಯ ಮಾಡಿ ನಿನಗೊಂದು ಚೆಂದನ ಪ್ರೇಮ ಪತ್ರ ಬರೆದು ನಿನ್ನ ಮನಿಗಿ ಪೋಸ್ಟ್ ಕಳ್ಸಿದ್ದೆ. ನನ್ನ ಹೆಸರು ಬರೆಯದೇ. ನೀನು ಗುರುತಿಸಬಹುದು ಅಂದ್ಕೊಂಡಿದ್ದೆ. ಆದ್ರ ನಿಮ್ಮವ್ವ ಅದ್ನ ಒಲಿಯಾಗ ಹಾಕಿಬಿಟ್ಲು ಅಂತ ಗಾಳಿ ಸುದ್ದಿ ತಲುಪಿತು. ಈಗಿನ ಥರಾ ಮೊಬೈಲ್ ಫೋನ್ ಇದ್ದಿದ್ರ ಯಾವ ಮಗನ ಹೆದರಿಕಿಲ್ದಾ ನಿನಗ ನನ್ನ ಮನಸನ್ನ ಬಿಚ್ಚಿ ತೋರಿಸ್ತಿದ್ದೆ ನೋಡ್ ಹುಡುಗಿ… ಈಗಿನಷ್ಟು ಧೈರ್ಯ ಬಂದಿದ್ರ ನಿನ್ನ ಕದ್ದುಕೊಂಡಾದ್ರೂ ಹೋಗಿ ನನ್ನ ಹೃದಯಾನ ನಿನಗ ಒಪ್ಪಿಸ್ತಿದ್ದೆ…

ಆದ್ರ ಆಗಿದ್ದಾ ಬ್ಯಾರೆ. ನಿನ್ನ ಲಗ್ನ ಪತ್ರ ಕಂಡ ದಿನ ನಾನು ರೆಕ್ಕಿ ಮುರುಕೊಂಡ ದುಂಬಿಯಂಗಾಗಿದ್ದೆ… ನೀನು ಎಂಥಾ ಕಲ್ಲು ಹೃದಯದಾಕಿನೇ ಹುಡುಗಿ. ನಾನು ಅಷ್ಟೆಲ್ಲಾ ನಿನ್ನ ಸುತ್ತ ಸುಳಿದಾಡಿದರೂ ನೀನ್ಯಾಕ ಗುರುತಿಸಲಿಲ್ಲ. ನೀನು ಕ್ಯಾರೆ ಅನ್ನದೇ ನನಗ ಧೈರ್ಯನಾದ್ರೂ ಹೆಂಗ ಬಂದೀತು!!! ನಿಮ್ಮಪ್ಪ ಹುಡುಕಿದ ಹುಡುಗನ ಕೈ ಹಿಡಕೊಂಡು ಬಸ್ ಹತ್ತಿದ ಆ ದಿನ ನನಗಾದ ಸಂಕ್ಟಾನ ಹೆಂಗ ಹೇಳಲಿ! ಪತ್ರೆನಬಾವಿ ನೀರಾಗ ಮ್ಯಾಲಿಂದ ಸುರುಗಿ ಸುರುಗಿ ನೀರಾಗ ಕಣ್ಣೀರು ಹಾಕಿದ್ದು ಆ ಗಂಗವ್ವನ ಎದಿಗಿ ‌ಮಾತ್ರ ಗೊತ್ತು ನೋಡೇ ಹುಡುಗಿ!!!

ಕಡಿಗಿ ನಮ್ಮಪ್ಪ ಹುಡುಕಿದ ಹುಡುಗಿನ ಲಗ್ನ ಆಗಿ ಬದುಕು ಹೆಂಗೊ ಸಾಗಿ ಬಿಟ್ತು. ನಿನ್ನ ಮರೆತೆ ಅಂದ್ಕೊಂಡ್ಯಾ? ಹೆಂಗ ಮರೆಯಲಿ! ಮೂವತ್ತು ವರ್ಷದ ಹಿಂದ ನೀನು ಹದಿನೆಂಟರ ಹುಡುಗಿ ನಾನು ಇಪ್ಪತ್ತರ ಹುಡುಗ… ನೀನು ಮದ್ವಿ‌ಮಾಡ್ಕೊಂಡು ಹೋದ್ರೂನು, ನಾನೂ ಮದ್ವಿ ಮಾಡ್ಕೊಂಡ್ರೂನು ನಿನ್ನ ಮುಖ ನೋಡೂ ಹಂಬಲ ಕಮ್ಮಿ ಆಗಲೇ ಇಲ್ಲ. ನೀನು ಸುಖವಾಗಿಲ್ಲ ಅಂತ ಯಾರ್ ಯಾರೋ ಮಾತಾಡಿದ್ದು ಕಿವಿಗಿ ಬಿದ್ದ ಸಲಕ್ಕೊಮ್ಮಿ ಜೀವ ತಲ್ಲಣಿಸಿ ಬಿಡುತ್ತೇ ಹುಡುಗಿ… ಅಳು ನುಂಗಿಕೊಂಡು ಇರೂದು ಕಲ್ತೀನಿ… ಮೊನ್ನೆ ನಮ್ಮ ಕಾಕಾ ಸತ್ತ ದಿನ ನೀನು ಅಷ್ಟು ದೂರದ ಊರಿಂದ ಬರತೀದಿ ಅಂದ್ಕೊಂಡಿರಲಿಲ್ಲ. ಅಚಾನಕ್ ಆಗಿ ಸಾವಿನ ಮನಿ ಮುಂದ ನಿನ್ನ ಕಂಡಾಗ ಅಳು ತಡೆಯಲಾಗಲಿಲ್ಲ. ಬಂದಾರೆಲ್ಲರ ಕಣ್ಣಾಗೂ ನೀರಿತ್ತಲ್ಲ, ನನ್ನ ಕಣ್ಣೀರನ್ನ ಯಾರೂ ತಪ್ಪಾಗಿ ತಿಳ್ಕೊಳ್ಳೂ ಚಾನ್ಸ್ ಇಲ್ಲ ಅನ್ನೂ ಧೈರ್ಯದ ಮ್ಯಾಲೆ ಕಣ್ಣೀರು ಕಟ್ಟೆ ಒಡೆದು ಬಿಟ್ತು ಕಣೇ ಸುಬ್ಬಿ… ಎದ್ದು ಬಾತ್ ರೂಮ್ ಒಳಗ್ಹೋಗಿ ಕಣ್ಣೀರು ಒಂದು ಹಂತಕ್ಕ ಬತ್ತೂವಂಗ ಸುರಿಸಿ ಮುಖ ತೊಳ್ಕೊಂಡು ಹೊರಗ ಬಂದೆ.

ನಮ್ಮ ಅರಿವಿಗಿ ನಿಲುಕೂದು ಇದೊಂದಾ ಜನ್ಮ. ಬದುಕು ಹಿಂಗ್ಯಾಕ ಮೋಸ ಮಾಡ್ತೈತಿ!

ನಿನ್ನ ನೇರವಾಗಿ ಮಾತಾಡಿಸಾಕ ಧೈರ್ಯ ಇಲ್ಲದ ಹೇಡಿ ನಾನು. ಕ್ಷಮಿಸಿ ಬಿಡು…

ನಿನ್ನವನಲ್ಲದ ಪಾಪಿ ಪ್ರೇಮಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x