ನಿಜದನಿ: ಕೆ ಟಿ ಸೋಮಶೇಖರ ಹೊಳಲ್ಕೆರೆ. 

450px-flag_of_karnataka-svg
ನಾವು ಯಾವುದನ್ನೂ  ಬಲವಂತವಾಗಿ  ಉಳಿಸಲಾಗದು. ಹಾಗೆ ಉಳಿಸಿದರೂ ಬಹಳ ವರ್ಷ ಬದುಕದು. ಯಾವುದನ್ನು ಬಳಸುತ್ತೇವೋ ಅದು ಬಹಳ ವರ್ಷ ಉಳಿಯುತ್ತದೆ ಬೆಳೆಯುತ್ತದೆ. ಬರಿ ಬಾಯಿಯಿಂದ ಕನ್ನಡ ಉಳಿಸಿ ಬೆಳೆಸಿ ಎಂದು ಅಬ್ಬರಿಸಿದ ಮಾತ್ರಕ್ಕೆ ಕನ್ನಡ ಉಳಿಯದು. ಕನ್ನಡ ಬಳಸಿದರೆ ಉಳಿದೀತು, ಪ್ರೀತಿಸಿದರೆ ಬೆಳೆದೀತು. ಇದು ಯಾವುದೇ ಸಂಘ, ಸಂಸ್ಥೆ,  ಒಕ್ಕೂಟಗಳ ಜವಾಬ್ದಾರಿಯಾಗಿರದೆ ಪ್ರತಯೊಬ್ಬ ಕನ್ನಡಿಗನ ಕರ್ತವ್ಯವಾಗಿರುತ್ತದೆ

ಕನ್ನಡ ಸುಂದರ ಲಿಪಿಯಿರುವ ಮಧುರ ಭಾಷೆ. ಕನ್ನಡಿಗರನ್ನು, ಕನ್ನಡ ಸಂಸ್ಕೃತಿಯನ್ನು ರೂಪಿಸಿ, ದಾನ, ತ್ಯಾಗ ಉದಾತ್ತ ಗುಣಗಳಿಗೆ ಹೆಸರಾದ ಭಾಷೆ. ಭಾರತದಲ್ಲೇ ಅತಿ ಹೆಚ್ಚು ಜ್ಙಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟ ಭಾಷೆ ! ಅನೇಕರನ್ನು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಭಾಷೆ ! ಅನೇಕರನ್ನು ವಿಶ್ವಮಾನವರಾಗಿಸಿದ ಭಾಷೆ !

ಕುರಿತೋದದೆಯೂ ಕಾವ್ಯ ಪ್ರಯೋಗ ಪರಿಣತಮತಿಗಳ್ – ಎಂದು ಕನ್ನಡಿಗರ ಕಾವ್ಯ ಪೌಢಿಮೆಯನ್ನು, " ಕಾವೇರಿಯಿಂದ ಗೋದಾವರಿವರೆಗೆ ' ಕನ್ನಡ ನಾಡು ಹಬ್ಬಿತ್ತು ಎಂದು ಕವಿರಾಜಮಾರ್ಗದಲ್ಲಿ ಕನ್ನಡ ನಾಡಿನ ವಿಸ್ತೀರ್ಣವನ್ನೂ ಹೇಳಿದೆ. ಕಿ ಶ ೪೫೦ ರಲ್ಲಿ ಹಲ್ಮಿಡಿ ಶಾಸನದಲ್ಲಿ ಕನ್ನಡ ಬರಹ ದೊರೆತಿದೆ. ಅಂದರೆ ಕಿ ಶ ೪೫೦ ರಿಂದ ಬರಹದ ಇತಿಹಾಸ ಕಾಣಬಹುದು. 

ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ
ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್
ಮಾದವನೀತನ್ ಪೆರನಲ್ಲ!  – ಈ ಕಪ್ಪೆ ಅರಬಟ್ಟನ ಶಾಸನದಲ್ಲಿ ಕನ್ನಡದ ವೀರನೊಬ್ಬನು ಆವೇಶದ ಚಿತ್ರಣ ಸೊಗಸಾಗಿ ಮೂಡಿದೆ. ಹೀಗೆ ವಿಸ್ತೀರ್ಣವಾದ ಕನ್ನಡ ನಾಡು, ಕನ್ನಡದ ಕಂಪು, ಕನ್ನಡಿಗರ ಸ್ವಭಾವದ ವರ್ಣನೆ ಕನ್ನಡದ ಪ್ರಾಚೀನತೆ ಶಾಸನ, ಗ್ರಂಥಗಳಲ್ಲಿ  ನೋಡಬಹುದು. 

ಇಂದು ನಮ್ಮ ನಾಡಿನಲ್ಲಿ ಕನ್ನಡ ಭಾಷೆ ಬಳಕೆಯಾಗುತ್ತಿರುವುದನ್ನು ಅವಲೋಕಿಸಿದ ಯಾರಿಗೇ ಆಗಲಿ ಕನ್ನಡದ ಅವಸಾನ ಆರಂಭವಾಗಿದೆ ಅನ್ನಿಸದಿರದು. ನಾವು ವಸ್ತು ಸ್ಥಿತಿಯನ್ನು ತಿಳಿದು ಕನ್ನಡದ ಬಗ್ಗೆ  ಮಾತನಾಡಬೇಕಿದೆ. ಮೈಮೇಲೆ  ಕನ್ನಡದ ಹಚ್ಚೆ ಹಾಕಿಸಿಕೊಂಡೋ, ವೇದಿಕೆಗಳಲಿ ಚಪ್ಪಾಳೆಗಾಗಿ ನಾಲ್ಕು ಕನ್ನಡದ ಮುತ್ತುಗಳ ಉದುರಿಸಿಯೋ, ಅನ್ಯ ಭಾಷಿಗರ ಮೇಲೆ ಅಸಹನೆ ವ್ಯಕ್ತಪಡಿಸಿಯೋ ಕನ್ನಡವನ್ನು ಉಳಿಸಲಾಗದು. ಇಂದು ಬಹಳ ಕಡೆ ಇದೇ ನಡೆಯುತ್ತಿದೆ. 

ಕನ್ನಡ ಅಳಿಯುತ್ತಿರುವ ಸೂಚನೆ ಅರಿತ ಪ್ರಯುಕ್ತ ಅದನ್ನು ಉಳಿಸಲು ನಾಡಿನಾದ್ಯಂತ ಸಂಘ, ಸಂಸ್ಥೆ, ಸಂಘಟನೆಗಳು ಉದಯಿಸಿವೆ, ಹೋರಾಡುತ್ತಿವೆ. ಕನ್ನಡವನ್ನು ಉಳಿಸಬೇಕೆಂದು ಹೋರಾಡದ, ಕನ್ನಡಾಭಿಮಾನವೆಂದರೇನೆಂದು ಅರಿಯದ, ಕನ್ನಡ ಭಾಷೆಯ ಮಹತ್ವ ತಿಳಿಯದ, ಕನ್ನಡ ಸಾಹಿತ್ಯದ ಗಾಳಿ ಗಂಧ ಅರಿಯದ. . . . ಜನರಿಂದ ಇಷ್ಟು ಪ್ರಮಾಣದಲ್ಲಿ ಕನ್ನಡ ಇನ್ನೂ ಉಳಿದಿರಲು ಸಾಧ್ಯವಾಗಿದೆ. ಅವರು ಯಾರೆಂದರೆ ಹಳ್ಳಿಗರು, ಗುಡ್ಡಗಾಡಿನವರು, ಮನರಂಜನಾ ಸುದ್ದಿ ಮಾಧ್ಯಮಗಳ, ನಗರಗಳ ಹೆಚ್ಚಿನ ಪ್ರಭಾವಕ್ಕೆ ಒಳಗಾಗದವರು. ಅವರ ಬದುಕೇ ಕನ್ನಡ!  ಕನ್ನಡ!  ಕನ್ನಡ !

ಆದರೆ  ಇಂದು  ಅಲ್ಲಿಗೂ ಇಂಗ್ಲಿಷ್  ಧಾಳಿಯಿಟ್ಟಿದೆ. ಪ್ರಭಾವೀ ಮನರಂಜನಾ ಸುದ್ದಿ  ಮಾಧ್ಯಮಗಳ ಪ್ರಭಾವ ಹೆಚ್ಚುತ್ತಿದೆ. ನಗರಗಳ ಸಂಪರ್ಕ ಅವಲಂಬನೆ ಹೆಚ್ಚುತ್ತಿರುವುದರಿಂದ, ಇಂಗ್ಲಿಷ್  ಭಾಷೆಯ ಮಹತ್ವ, ಅನಿವಾರ್ಯತೆ ಅರ್ಥವಾಗುತ್ತಿರುವುದರಿಂದ ಅಲ್ಲೂ ತಡೆಯಿಲ್ಲದೆ ಹರಡುತ್ತಿದೆ. ಮೊದಮೊದಲು ಇದು ವ್ಯಾಮೋಹ, ಘನತೆಯಾಗಿ ವ್ಯಕ್ತವಾದರೂ, ಅದರ ಅನಿವಾರ್ಯತೆ, ಮಹತ್ವ ಅರಿತಮೇಲಂತೂ ಅದಕ್ಕೆ ಪ್ರಥಮ ಪ್ರಾಶಸ್ತ್ಯ ನೀಡುತ್ತಿವೆ. ಇದು ತಪ್ಪಲ್ಲವಾದರೂ ಅಲ್ಲೂ ಕನ್ನಡದ ಅಳಿವು ನೋವುತಂದಿದೆ. ಅವರು ಕನ್ನಡ ಅಳಿವಿನ ಉದ್ದೇಶಿತರಲ್ಲ. ಕನ್ನಡ ಇಂಗ್ಲಿಷ್ ಪದಗಳ ನಡುವಿನ ತಾರತಮ್ಯ ಅವರಿಗೆ ಗೊತ್ತಿಲ್ಲ , ಹಾಗೆ ಮಾಡುವುದು ಅವರಿಗೆ ಬೇಕಿಲ್ಲ. ಅವರ ಭಾವಗಳು ಬೇರೆಯವರಿಗೆ ಅರ್ಥವಾದರೆ ಸಾಕು. ಈ  ಎಲ್ಲಾ ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತಾ ಕನ್ನಡ ಉಳಿಸಬೇಕಾಗಿದೆ. 

ಕನ್ನಡಪರ ಸಂಘಟನೆಗಳು : ಇವು ಬೇರೆ ಭಾಷಿಗರ ಪುಂಡಾಟಿಕೆಯನ್ನು , ದೌರ್ಜನ್ಯವನ್ನು ತಡೆಯುವಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿವೆ. ಇವುಗಳು ಇಲ್ಲದಿದ್ದರೆ ಕನ್ನಡಿಗರು ಎಷ್ಟು ದೌರ್ಜನ್ಯಗಳಿಗೆ ತುತ್ತಾಗಬೇಕಿತ್ತೋ ? ಪುಂಡಾಟಿಕೆಯೇ ಉತ್ತರ ಆಗಬಾರದಾದರೂ ಅನಿವಾರ್ಯತೆಯನ್ನು ಸೃಷ್ಟಿಸಿರುವವರು ಇದನ್ನು ಅರ್ಥಮಾಡಿಕೊಳ್ಳಬೇಕು. ಇವು ಕನ್ನಡವೇ ನನ್ನ ಉಸಿರು  ಎಂಬಂತೆ ಹೋರಾಟ ಮಾಡುತ್ತಿವೆ. ನಾವು ಕನ್ನಡ ಭಾಷೆ ಉಳಿಸಬೇಕಾದರೆ, ಅದರ ಅಳಿವಿಗೆ ಇರುವ ನೈಜ ಕಾರಣಗಳನ್ನು ಮೊದಲು ಪತ್ತೆಹಚ್ಚಬೇಕು. ಆಗ ಅತಿ ಹೆಚ್ಚು ಪ್ರತಿಫಲ ಪಡೆಯಲು ಸಾಧ್ಯ. ಇವರ ಕನ್ನಡಾಭಿಮಾನ ಪ್ರಶ್ನಾತೀತ. ಕನ್ನಡೇತರ ಫಲಕಗಳಿಗೆ ಮಸಿ ಬಳಿಯುವುದು, ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದರಿಂದ ಕನ್ನಡ ಉಳಿಸಲಾಗದು. ಆದರೂ ಅವಶ್ಯಕ . ಕನ್ನಡ ವ್ಯವಹಾರ ಭಾಷೆಯಾಗಬೇಕು. ಇದಕ್ಕಾಗಿ ಎಲ್ಲರೂ ಬಣಗಳನ್ನು ಮಾಡಿಕೊಳ್ಳದೆ  ಒಗ್ಗಟ್ಟಿನಿಂದ ಹೋರಾಡಬೇಕು. ಹೋರಾಟಗಳು ತಾತ್ವಿಕ ನೆಲೆ ಮೇಲೆ ಚಳುವಳಿ ರೂಪತಳೆಯಬೇಕು. ಹೀಗಾಗದ್ದರಿಂದ ಕನ್ನಡ ನಾಡಲ್ಲೇ ಕನ್ನಡಿಗರು ಅನ್ನಿಗರಾದ ಅನುಭವವಾಗುತ್ತಿದೆ. ಅಷ್ಟರಮಟ್ಟಿಗೆ ಇಂಗ್ಲಿಷ್ ಆವರಿಸಿದೆ, ಅನಿವಾರ್ಯವೂ ಆಗುತ್ತಿದೆ. ಇಂಗ್ಲೀಷ್ ಉಪಯೋಗಿಸುತ್ತಾ ಕನ್ನಡ ಹೇಗೆ ಬೆಳೆಸಬೇಕೆಂದು ಚಿಂತಿಸಬೇಕಿದೆ. 

ಚಲನಚಿತ್ರರಂಗ : ಇದು ಎಲ್ಲಾ ವಯೋಮಾನದವರ ಮೇಲೂ ಹೆಚ್ಚು ಪ್ರಭಾವ ಭೀರುವ ಮಾಧ್ಯಮ. ದಿ. ಡಾ. ರಾಜ್ ಕುಮಾರ್ ನೇತೃತ್ವದ ಚಿತ್ರರಂಗ ನಾಡು, ನುಡಿಗಾಗಿ ಪ್ರಬಲ ಹೋರಾಟ ನಡೆಯಿಸಿತು. ಅಂದಿನ ಎಲ್ಲಾ ಕಲಾವಿದರೂ ಕನ್ನಡ ಸಾಹಿತ್ಯವನ್ನು, ಕನ್ನಡ ನುಡಿಯ ಸೊಬಗನ್ನು ನಾಡಿಗೆ ಉಣಬಡಿಸಿ ಕನ್ನಡವನ್ನು ಶ್ರೀಮಂತಗೊಳಿಸಿದರು. ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದಿದೆ. ಕಾಲಕ್ಕೆ ತಕ್ಕಂತೆ ಚಿತ್ರರಂಗ ಬದಲಾಗಬೇಕು, ಬದಲಾಗಿದೆ. ಚಿತ್ರರಂಗದವರ ಮುಖ್ಯ ಉದ್ದೇಶ  ಜನರಿಗೆ ಮನರಂಜನೆ ನೀಡಿ, ಉತ್ತಮ ಕಲಾ ಪ್ರದರ್ಶನದ ಮೂಲಕ ಹಣ ಗಳಿಸುವುದಾಗಿರುತ್ತದೆ ವಿನಃ, ಕನ್ನಡ ಉಳಿಸುವುದಾಗಲಿ,  ಬೆಳೆಸುವುದಾಗಲಿ ಅಲ್ಲ. ಆದ್ದರಿಂದ ಅದರಲ್ಲೇ ತನ್ಮಯವಾಗಿ ಜನರ ಮನಸೆಳೆಯಲು ಭಿನ್ನ ಭಿನ್ನ ಪ್ರಯೋಗ ಮಾಡುತ್ತ್ತಾ, ಕಲೆಯನ್ನು ಮೆರೆಯಿಸುತ್ತಿದ್ದಾರೆ. ಇಂಗ್ಲಿಷ್ ಪ್ರಭಾವದಿಂದಾಗಿ ಚಲನಚಿತ್ರದ ಶೀರ್ಷಿಕೆಯಿಂದ ಹಿಡಿದು ಹಾಡು,  ಸಂಭಾಷಣೆಗಳಲ್ಲಿ ಇಂಗ್ಲಿಷ್, ಪದಗಳು, ಭಾಷೆ  ವಿಜೃಂಭಿಸಿವೆ. ಕನ್ನಡ ಎಂದರೆ ಭಾಷೆ ಅಷ್ಟೇ ಅಲ್ಲ. ನೆಲ, ಜಲ, ಆಹಾರ ವಿಹಾರ, ಆಚಾರ , ವಿಚಾರ, ಸಂಸ್ಕೃತಿ, ಸಂಸ್ಕಾರ, ಹುಟ್ಟು ಸಾವು ಎಲ್ಲಾ . ನೆಲಕ್ಕೋ ಜಲಕ್ಕೋ ಭಾಷೆ, ಭಾವಕ್ಕೋ. . . . ಧಕ್ಕೆ ಆದಾಗ  ನಟ ನಟಿಯರು ಹೋರಾಟಕ್ಕೆ ಧುಮುಕಿ ಕನ್ನಡಾಭಿಮಾನ ಮೆರೆಯುತ್ತಾರೆ. ಇದು ಪ್ರಶ್ನಾತೀತ. ಆದರೆ ಕೆಲವರು ಕನ್ನಡದಲ್ಲಿ ಪ್ರತಿಕ್ರಯಿಸಲು ಕಷ್ಟಪಡುವುದು, ಕನ್ನಡ ಪದಗಳಿಗೆ ತಡಕಾಡುವುದು, ಇಂಗ್ಲಿಷ್ ನಲ್ಲಿ ಸುಲಲಿತವಾಗಿ ಪ್ರತಿಕ್ರಿಯಿಸುವುದು ಕಾಣುವಂತಾಗಿದೆ. ಇದೆಲ್ಲಾ ಕನ್ನಡದ ಅಳಿವಿಗೆ , ಇಂಗ್ಲಿಷ್ ವೃದ್ಧಿಗೆ ಕಾರಣವಾಗುತ್ತಿದೆ. ಈ  ಉದ್ದೇಶ ಇವರದಲ್ಲ. ಆದರೂ. . . . . . . 

ಸಾಹಿತಿಗಳು : ಸಾಹಿತಿಗಳು ಬಿಡದೆ ಕನ್ನಡದಲ್ಲಿ ಕೃತಿ ರಚಿಸುತ್ತಿರುವುದಕ್ಕೆ ಧನ್ಯವಾದಗಳು. ಇವರ ಮುಖ್ಯ ಉದ್ದೇಶ ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆಯ ಮೂಲಕ ಕನ್ನಡ ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಎಡ ಬಲ ಪಂಥಗಳಾಗಿ ವೈಯಕ್ತಕ ನೆಲೆಗಲ್ಲಿ ದ್ವೇಷ ಸಾಧಿಸುವುದು ಸರಿಯಲ್ಲ . ಒಗ್ಗಟ್ಟಿನ ಕೊರತೆ, ಹೋರಾಟದ ದಿಕ್ಕು ದೆಸೆ ತೋರುವವರಿಲ್ಲದಿರುವುದು, ಇದ್ದವರು ಒಂದಾಗದಿರುವುದು, ಒಳ್ಳೆಯ ಬೆಳವಣಿಗೆಗಳಲ್ಲ ! ತಾತ್ವಿಕ ನೆಲೆಗಟ್ಟಿನ ಮೇಲೆ ಚಳುವಳಿ ರೂಪಿಸದಿರುವುದು. ಇವರ ಹೋರಾಟಗಳು ಇಂಗ್ಲಿಷ್ ಪ್ರಭಾವವನ್ನು ತಡೆಯುವಷ್ಟರಮಟ್ಟಿಗೆ ಪ್ರಭಾವಿಯಾಗುತ್ತಿಲ್ಲ.  ರಾಜಾಶ್ರಯದ ಸಾಹಿತ್ಯ ಸಮ್ಮೇಳನಗಳು ನಿರೀಕ್ಷಿತ ಫಲ ನೀಡುತ್ತಿಲ್ಲ. ಅತಿ ಹೆಚ್ಚು ಜ್ಙಾನಪೀಠ ಪ್ರಶಸ್ತಿ ಪಡೆದ ಕನ್ನಡ ಧನ್ಯ. ಶ್ರಮಿಸಿದ ಜ್ಞಾನ ಅನನ್ಯ. ಕನ್ನಡದ ಪೆಸರು ಎಲ್ಲೆಡೆ ಪಸರಿಸುವಂತೆ ಮಾಡಿದರೂ, ಕನ್ನಡ ಉಳಿಸುವಿಕೆ ಹೋರಾಟ ಸಾಲದಾಗಿದೆ. ಸಂದರ್ಭ ಸರಕಾರ, ವಸ್ತು ಸ್ಥಿತಿಗಳೂ ಕಾರಣವಾದವೇನೋ. 

ದೂರದರ್ಶನ : ಇವರ ಮುಖ್ಯ ಉದ್ದೇಶ ಕನ್ನಡ ಉಳಿಸುವುದು ಬೆಳೆಸುವುದು ಆಗಿರದೆ, ಪ್ರಪಂಚದಾದ್ಯಂತ ಘಟಿಸುತ್ತಿರುವ ಘಟನೆಗಳನ್ನು , ಮನರಂಜನೆಯನ್ನು, , ಬೇರೆ ಬೇರೆ , ವಿದ್ಯಾಮಾನಗಳನ್ನು ಜನರ ಮುಂದೆ ತೆರೆದಿಟ್ಟು , ತಮ್ಮ ಟಿ ಆರ್ ಪಿ ಮತ್ತು ಬೇಡಿಕೆ ಹೆಚ್ಚಿಸಿ ಹಣಗಳಿಸಿ, ಪ್ರಖ್ಯಾತರಾಗಿ, ತಮ್ಮ ಹೆಚ್ಚುಗಾರಿಕೆ ಜಗಕೆ ತಿಳಿಸುವುದಾಗಿದೆ . ಇವರ ಟಿವಿ ಚಾನಲ್ ಕಾರ್ಯಕ್ರಮಗಳು ಕನ್ನಡದವಾದರೂ ಇಂಗ್ಷಿಷ್ ಮಯವಾಗಿರುತ್ತವೆ. Save Kannada, Talk Kannada, ಎಂಬ ಇತ್ಯಾದಿ  ಕನ್ನಡ ಉಳಿಸುವ, ಬೆಳೆಸುವ  ಕಾರ್ಯ ಕ್ರಮಗಳನ್ನು ರೂಪಿಸುವುದು. ಕಾರ್ಯ ಕ್ರಮ ಎಲ್ಲಾ ಇಂಗ್ಲಿಷ್ ಮಯ ಮಾಡಿಬಿಡುವುದನ್ನು ಕಾಣುತ್ತೇವೆ. ಹೆಸರು ಕನ್ನಡ ಉಳಿಸುವುದಾಗಿದ್ದರೂ, ಪ್ರಯತ್ನ ನೈಜವಾಗಿದ್ದರೂ ಕನ್ನಡ ಅಳಿವಿಗೆ, ಇಂಗ್ಲೀಷ್ ಬೆಳೆಯಿಸಲು ಸಹಕಾರಿಯಾದಂಥವಾಗಿರುತ್ತವೆ.  ಇದು ಇವರ ಉದ್ದೇಶವಲ್ಲ. ಆದರೂ. . . 

ಪತ್ರಿಕೆಗಳು : ಇವು ಬಹಳಷ್ಟು ಕನ್ನಡದಲ್ಲಿವೆ. ಕನ್ನಡ ಓದುಗರ ಸಮೂಹವನ್ನು  ಹೊಂದಿವೆ. ತಮ್ಮದೇ ಅಭಿರುಚಿಯನ್ನು ಬೆಳೆಯಿಸುತ್ತಿವೆ. ಪ್ರಯತ್ನ ಜಾರಿಯಲ್ಲಿದೆ. ಇತ್ತೀಚೆಗೆ ಜಾಹಿರಾತುಗಳ ಮೊರೆ ಹೋಗುವಂತಾಗಿವೆ. 

ಟಿ ವಿ, ಅಂತರ್ ಜಾಲ ಹೊಂದಿರುವ ಕಂಪ್ಯೂಟರುಗಳಿಂದ ಪತ್ರಿಕೆಗಳ ಪ್ರಭಾವ ಕುಗ್ಗುವಂತಾಗಿದೆ. ಸಾಹಿತಿಕ ವಿಚಾರಗಳಿಗಿಂತ ಬೇರೆ ವಿಚಾರಗಳು ಮಾನ್ಯತೆ ಪಡೆಯುತ್ತಿವೆ. ಎಷ್ಷೋ ಪತ್ರಿಕೆಗಳು ಬಂದದ್ದು ಕಾಣೆಯಾಗಿದ್ದು ತಿಳಿಯದಾಗಿವೆ. 

ಕನ್ನಡ ನಾಡಿನ ಆಡಳಿತ ವ್ಯವಸ್ಥೆಗಳು : ಇನ್ನು ನಾಡಿನ ಆಗು ಹೋಗು, ಬೇಕು ಬೇಡಗಳನ್ನು ನಿರ್ಧರಿಸುವುದು ಜನಪ್ರತಿನಿಧಿಗಳ ಮತ್ತು ಅಧಿಕಾರ ವರ್ಗದ ಆಡಳಿತ ವ್ಯವಸ್ಥೆಗಳು. ಇವರ ಮುಖ್ಯ ಉದ್ದೇಶ ರಾಜ್ಯದ ಆಡಳಿತ. ಆಡಳಿತ ಮಾಡಲು ಭಾಷೆ ಅನಿವಾರ್ಯ. ಐ. ಎ ಎಸ್. ಅಧಿಕಾರಿಗಳು ಬಹುತೇಕ ಅನ್ಯ ಭಾಷಿಗರಾಗಿರುವುದರಿಂದ, ಅವರದಲ್ಲದ ಭಾಷೆ ಬಗ್ಗೆ ಅವರಿಗೆ ಅಷ್ಟಾಗಿ ಅಭಿಮಾನ ಇರದಿರುವುದರಿಂದ, ಕನ್ನಡಲ್ಲಿ ವ್ಯವಹರಿಸಲು ಅವರಿಗೂ ತೊಡಕಾಗುವುದರಿಂದ, ಕನ್ನಡ ಬೆಳೆಸುವ ಬಗ್ಗೆ ಅಷ್ಟಾಗಿ ಕಾಳಜಿ, ತೊಂದರೆ ತೆಗೆದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ನಮ್ಮ ಜನಪ್ರತಿನಿಧಿಗಳು ಅವರು ಕನ್ನಡಾಭಿಮಾನಿಗಳೆ. ಆದರೆ ಅವರ ಆಸಕ್ತಿಗಳು ಬೇರೆ ಕಡೆಗೆ ಇರುವುದರಿಂದ ಕನ್ನಡದ ಬೆಳವಣಿಗೆಗೆ ಸಮಯ ಕೊಡದಂತಾಗಿದೆ. ಹಾಗೂ ಕನ್ನಡ ಬೆಳೆಸುವ ಇಚ್ಛಶಕ್ತಿ ಸಾಲದಾಗಿದೆ. ಜನರ ಒತ್ತಡಕ್ಕೆ ಮಣಿದು ಕನ್ನಡ ಆಡಳಿತ ಭಾಷೆ ಆಗಬೇಕು, ಎಲ್ಲಾ ಸರ್ಕಾರದ ಆದೇಶಗಳು ಕನ್ನಡದಲ್ಲೇ ಇರಬೇಕು ' ಇಂತಹ ಎಷ್ಟೋ ಕಾನೂನು ಮಾಡಿ ಕೈತೊಳೆದುಕೊಳ್ಳತ್ತವೆ. ಅವಕ್ಕೆ ಭಂಗವಾದರೂ ತಲೆ  ಕೆಡಿಸಿಕೊಳ್ಳದ ಮೌನಗಳು ಏನನ್ನು ಸೂಚಿಸುತ್ತವೆ?  ಬೆಳಗಾವಿಯಲ್ಲಿ ಮರಾಠಿಗರು ಅಟ್ಟಹಾಸ ಮೆರೆಯುತ್ತಿರುವುದು, ಬೆಳಗಾವಿ ಮಹಾನಗರಪಾಲಿಕೆಯಲ್ಲಿ ಮರಾಠಿಯೇ ಈ ನಗರಪಾಲಿಕೆಯ ಆಡಳಿತ ಭಾಷೆಯಾಗಬೇಕೆಂದು ಠರಾವು ಮಂಡನೆಯಾಗಿ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾದದ್ದು, ಕಾವೇರಿ ನೀರು ಪರರ ಪಾಲಾಗುತ್ತಿದ್ದರೂ ತಾವು ಬಳಸಿಕೊಳ್ಳಲು ಆಗದೆ ಇರುವುದು. ಅದನ್ನು ಇದುವರೆಗೂ ಗಂಬೀರವಾಗಿ ಪರಿಗಣಿಸಲಾಗದ ಧೋರಣೆಗಳೇ ನಾಡು, ನುಡಿ, ನೆಲ, ಜಲ . . . . . . . ಅನ್ಯರ ಪಾಲಾಗುತ್ತಿರುವುದಕ್ಕೆ ಕಾರಣ. 
     
ಕನ್ನಡಿಗರ ಔದಾರ್ಯ : ಕನ್ನಡ ನಾಡಿನಲ್ಲೇ ಕನ್ನಡಿಗರು ಪರದೇಶಿಗರಾದಂತಾಗಿರುವುದಕ್ಕೆ, ಕನ್ನಡ ನೆಲದಲ್ಲಿ ಅಸಂಖ್ಯಾತ ಅನ್ಯ ಭಾಷಿಗರು ನಿರುಮ್ಮಳವಾಗಿ ವಾಸಿಸುತ್ತಿರುವುದಕ್ಕೆ, ಕನ್ನಡ ನೆಲವನ್ನು ಅನ್ಯ ಭಾಷಿಗರು ಬಂದು ಕೊಳ್ಳುಲು ಅವಕಾಶಮಾಡಿಕೊಟ್ಟಿರುವುದಕ್ಕೆ , ಅಲ್ಲಿ  ಅವರ ಭಾಷೆಯ ವಾತಾವರಣ, ಶಾಲೆ, ಭಾಷೋತ್ಸವಗಳನ್ನು ಆಚರಿಸಲು ಅವಕಾಶ ಮಾಡಿಕೊಟ್ಟಿರುವುದಕ್ಕೆ, ಆ ಪ್ರದೇಶದ ಪ್ರತಿನಿಧಿಯಾಗಲು ಅವರಿಗೆ ಅವಕಾಶ ಮಾಡಿಕೊಟ್ಟರುವುದಕ್ಕೆ,  ಆ ಪ್ರದೇಶ ತನ್ನ ನಾಡಿಗೇ ಸೇರಬೇಕೆಂಬ ದನಿಯೆತ್ತಲು ಅವಕಾಶ ಮಾಡಿಕೊಟ್ಟರುವುದಕ್ಕೆ, ಕನ್ನಡಿಗರ ನೆಲ, ಜಲ, ಗಾಳಿ, ಆಹಾರ ಸವಿದು , ಕನ್ನಡ ನಾಡಲ್ಲೇ ಜೀವಿಸುತ್ತಾ, ಕನ್ನಡಿಗರ ವಿರುದ್ದವೇ ನಿಲ್ಲುತ್ತಿರುವುದಕ್ಕೆ ಕನ್ನಡಿಗರೆಲ್ಲ ಕಾರಣ. ಅದಕ್ಕೇ ಇಂದು ಕನ್ನಡ ನಾಡಲ್ಲೇ ಕನ್ನಡಿಗರು ಅನಾಥವಾಗುತ್ತಿರುವುದು! ಆಡಳಿತ ವ್ಯವಸ್ಥೆಗಳು ತಲೆತಗ್ಗಿಸುವಂಥ ಸ್ಥಿತಿ ಬಂದಿರುವುದು!
     
ಇನ್ನೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಅನೇಕರು , ಸಂಘಗಳು ಹೋರಾಡಿದರೂ ಅಸಾಧ್ಯವಾಗುತ್ತಿರುವುದು ವಿಷಾದನೀಯ. ನಾಡಿನ ಪ್ರತಿಯೊಬ್ಬರೂ ಕನ್ನಡದಲ್ಲಿ ಸಂವಹನ ಮಾಡುವ, ವ್ಯವಹಾರಿಸುವ ಅನಿವಾರ್ಯ ಉಂಟಾಗದ ಹೊರತು ಕನ್ನಡ ಉಳಿಸಲು, ಬೆಳೆಸಲು ಸಾಧ್ಯವಿಲ್ಲ. ಕನ್ನಡ ಉಳಿಸುತ್ತಾ ಇಂಗ್ಲಿಷ್ ಕಲಿಯುವ ಸವಾಲು ನಾವು ಎದುರಿಸಬೇಕಿದೆ. ಕನ್ನಡ ನಡೆ, ನುಡಿ, ನಾಡು, ನೆಲ, ಜಲ ಉಳಿಸುವುದು ಯಾವದೋ ಒಂದು ಸರ್ಕಾರ, ಸಂಘಟನೆಗಳ ಕೆಲಸವೆಂದು ಮೌನವಹಿಸಬಾರದು. ಇದು ಪ್ರತಿಯೊಬ್ಬರ ಕರ್ತವ್ಯ, ಜವಾಬ್ದಾರಿ.  ಕನ್ನಡವನ್ನು ಬಳಸದೆ ಉಳಿಯದು, ಪ್ರೀತಿಸದೆ ಬೆಳೆಯದು. 

ಟಿವಿ , ಮೊಬೈಲ್, ಕಂಪ್ಯೂಟರ್, ಅಂತರ್ಜಾಲ ಎಲ್ಲರ ಕೈಗೆಟುಕಿ ಅದನ್ನೂ ಕಲಿಯಬೇಕಿರುವ ಅನಿವಾರ್ಯತೆಯನ್ನು, ತಂದೊಡ್ಡಿ ಒತ್ತಡ ಏರುತ್ತಿದೆ. ತಂತ್ರಜ್ಙಾದ, ವಿಜ್ಙಾನದ ಹೊಸಾವಿಷ್ಕಾರಗಳು ನಡೆದಾಗ ಅದರ ಫಲವಾಗಿ ಹೊಸ ಇಂಗ್ಲಿಷ್ ಪದಗಳು ಹುಟ್ಟಿಕೊಳ್ಳುತ್ತವೆ, ಅದಕ್ಕೆ ಕನ್ನಡದಲ್ಲಿ ತತ್ಸಮಾನವಾದ ಪದ ಹುಟ್ಟಿ ಬರುವಷ್ಟೊತ್ತಿಗೆ ಇಂಗ್ಲಿಷ್ ಪದ ಜನ ಮಾನಸದಲ್ಲಿ ನೆಲೆಯೂರಿರುತ್ತದೆ. ಸಂಚಾರಿ ದೂರವಾಣಿ ಪದ ಬರವಷ್ಟೊತ್ತಿಗೆ ಮೊಬೈಲ್ ಹೇಗೆ ನೆಲೆನಿಂತಿತೋ ಹಾಗೆ. ಬಹಳ ಸಲ ಕನ್ನಡದಲ್ಲಿ ಸೃಷ್ಟಿಸಲ್ಪಡುವ ಇಂಗ್ಲಿಷ್ ತತ್ಸಮಾನ ಪದಗಳು ಇಂಗ್ಲಿಷ್ ಗಿಂತ ಕ್ಲಿಷ್ಟ ಅನ್ನಿಸುತ್ತವೆ. ಅರಕ್ಷಕ ಠಾಣೆ, ಇಗರ್ಜಿ ಪದಗಳು ಉದಾಹರಣೆಗಳಾಗಿವೆ. ಸಂಬಂಧವಾಚಕಗಳು, ತರಕಾರಿ , ಹಣ್ಣುಗಳ,  ಹೋಟೆಲ್ ತಿನಿಸುಗಳ, ನಿತ್ಯೋಪಯೋಗಿ, ನಿತ್ಯವ್ಯವಹಾರಿ ವಸ್ತುಗಳ ಹೆಸರುಗಳು  ಇಂಗ್ಲಿಷ್ ಆಗಿವೆ. ಇಂಗ್ಲಿಷ್  ಪದಗಳ ಬಳಸಿದಾಕ್ಷಣ ಕನ್ನಡ ಭಾಷೆ ನಾಶವಾಯಿತೆಂದು ಅರ್ಥವಲ್ಲ. ಕನ್ನಡ ಭಾಷಾ ಸ್ವರೂಪಕ್ಕೆ ಧಕ್ಕೆಯಾಗುವುದಿಲ್ಲ. ಕನ್ನಡ ಪದಗಳು ಇಲ್ಲದ ಕನ್ನಡ ಭಾಷೆ ಹೇಗಿದ್ದೀತು ಊಹಿಸಿ !

ಅಂಕಲ್ ಆಂಟಿ ಡ್ಯಾಡಿ ಮಮ್ಮಿ 
ಬ್ರದರು ಕಸಿನು ಕನ್ನಡ!  ಇಂಗ್ಲಿಷಗನ್ನಡ !
ಕ್ಯಾರೋಟ್ ಕುಕುಂಬರ್ ಬೀಟ್ರೋಟ್ ಬ್ರಿಂಜಲ್
ಕ್ಯಾಪ್ಸಿಕಮ್ ಕ್ಯಾಬೇಜ್ ಕನ್ನಡ! ಇಂಗ್ಲಿಷಗನ್ನಡ
ಆಪಲ್ ಆರೇಂಜ್ ಪ್ಯಾರಲೆ ಪೈನಾಪಲ್
ಮ್ಯಾಂಗೊ ಬನಾನ ಕನ್ನಡ! ಇಂಗ್ಲಿಷಗನ್ನಡ !
ರೈಸ್ಬಾತ್ ವೆಜ್ ಪಲಾವ್ ಚಿಕನ್ನು ಮಟನ್ನು
ಸೂಪು ಕರಿ ಕನ್ನಡ! ಇಂಗ್ಲಿಷಗನ್ನಡ !
ಪಿಗ್ಗು ಡಾಗು  ಡಾಂಕಿ ಮಂಕಿ
ರ್ಯಾಟು ಕ್ಯಾಟು ಕನ್ನಡ!  ಇಂಗ್ಲಿಷಗನ್ನಡ !
ರೈಸು ದಾಲು ಆಟ ಆಯಿಲ್
ಸಾಲ್ಟು ಸುಗರ್ ಕನ್ನಡ!  ಇಂಗ್ಲಿಷಗನ್ನಡ !
ಕಾಟು ಚೇರು ಸೋಪಾ ಟೀಪಾಯ್ 
ಡೈನಿಂಗ್ ಟೇಬಲ್ ಕನ್ನಡ!  ಇಂಗ್ಲಿಷಗನ್ನಡ ! 
ಪ್ಯಾಂಟು ಷರಟು ಬ್ಲೋಸು ಸ್ಯಾರಿ
ಸ್ಕರ್ಟು ಲೆಗಿಂಗ್ಸು ಕನ್ನಡ ! ಇಂಗ್ಲಿಷಗನ್ನಡ !
ಬಸ್ಸು ಟಿಕೆಟ್ ಪ್ಯಾಸಿಂಜರ್ ಲಗೇಜು
ಡ್ರೈವರ್ ಕಂಡಕ್ಟರ್ ಕನ್ನಡ! ಇಂಗ್ಲಿಷಗನ್ನಡ !
ಸ್ಕೂಲು  ಕಾಲೇಜು ಪೆನ್ನು ಪನ್ಸಿಲು
ಬುಕ್ಕು ಪ್ರಾಜೆಕ್ಟವರ್ಕು ಕನ್ನಡ! ಇಂಗ್ಲಿಷಗನ್ನಡ ! 
ಹೋಟೆಲ್ ಕ್ಯಾಶಿಯರ್ ಸರ್ವರ್ ಕ್ಲಿನರ್
ವೆಜ್ಜು ನಾನ್ ವೆಜ್ಜು ಕನ್ನಡ! ಇಂಗ್ಲಿಷಗನ್ನಡ !
ಸಿನೆಮಾ ವಿಲನ್ ಹೀರೊ ಹೀರೋಯಿನ್ 
ಡೈರೆಕ್ಟರ್ ಡೈಲಾಗ್ ಕನ್ನಡ! ಇಂಗ್ಲಿಷಗನ್ನಡ !
ಬ್ಯಾಟು ಬಾಲು ಪೋರು ಸಿಕ್ಸಾರು
ಕ್ರಿಕೆಟ್ ವಿಕೆಟ್ ಕನ್ನಡ!  ಇಂಗ್ಲಿಷಗನ್ನಡ ! 
ಟೆಕ್ಸಟೈಲ್ಸ್  ಮೆಡಿಕಲ್ಸ್ ಪುಟ್ವೇರ್ ಮೆನ್ಸ್ವೇರ
ಕ್ಲಬ್ ಕಮುನಿಕೇಷನ್ಸ್ ಕನ್ನಡ! ಇಂಗ್ಲಿಷಗನ್ನಡ "
ಹ್ಯಾವ್ಯು ನೈಸ್ಡೆ ಸೀಯುಬಾಯ್ ಬಾಯ್
ಟಾಟಾ ಟೇಕೇರ್ ಕನ್ನಡ!  ಇಂಗ್ಲಿಷಗನ್ನಡ !
ನಿತ್ಯ ಉಪಯೋಗಿ ಪದಗಳೆಲ್ಲ ಇಂಗ್ಲಿಷ್
ಉಳಿವುದೆಂತು ಕನ್ನಡ! ಸವಿಗನ್ನಡ!
ಇರುವ ಕನ್ನಡ ಪದಗಳ ಬಳಸಿ
ಉಳಿಸಿ ಬೆಳಸಿ ಕನ್ನಡ!  ಕಸ್ತೂರಿ ಕನ್ನಡ!

ಇಂದು ಇಂಗ್ಲಿಷ್ ಮಾಧ್ಯಮದ ದುಬಾರಿ ಐಟೆಕ್ ಶಾಲೆಗಳು ನಾಯಿ ಕೊಡೆಗಳಂತೆ ಹೆಚ್ಚುತ್ತಿರುವುದು, ಸರಕಾರದ ಕನ್ನಡ ಶಾಲೆಗಳು ಮುಚ್ವುತ್ತಿರುವುದು ಏನನ್ನು ಸೂಚಿಸುತ್ತದೆ. ಇಂಗ್ಲಿಷ್ ಅನಿವಾರ್ಯವಾಗುತ್ತಿರುವುದನ್ನು. ಇಂಗ್ಲಿಷ್ ಎಲ್ಲಾ ಜ್ಙಾನ ವಿಷಯಗಳ ಭಂಡಾರ. ಹೊಸ ಸಂಶೋಧನೆಗಳು, ತಂತ್ರ ಜ್ಙಾನ, ವಿಜ್ಙಾನ ವಿಷಯ ದಾಖಲಾಗುತ್ತಿರುವುದು ಇಂಗ್ಲಿಷ್ನನಲ್ಲೆ. ಸಂವಹನ, ವ್ಯವಹಾರ ಭಾಷೆಯಾಗಿ . ಯಥೇಚ್ಛ ಉದ್ಯೋಗ ಸೃಷ್ಟಿಸಿ ವಿದೇಶಗಳಲ್ಲಿ ವಿಹರಿಸುವ ಸದವಕಾಶವನ್ನು ಬಾಗಿಲಿಗೆ ತರುತ್ತಿದೆ. ವಿಶ್ವವೇ ಒಂದು ಕುಟುಂಬವಾಗುವತ್ತ ಸಾಗುತ್ತಿರುವುದರಿಂದ ಮುಂದೊಂದುದಿನ ಎಲ್ಲರೂ ಪ್ರೀತಿಸುವ ಆರಾಧಿಸುವ. ಅಭಿವ್ಯಕ್ತಿಸುವ ಸಂವಹಿಸುವ ವ್ಯವಹರಿಸುವ ಭಾಷೆಯಾದರೆ ಅಚ್ಚರಿಯಿಲ್ಲ. 

* ಕೆ ಟಿ ಸೋಮಶೇಖರ ಹೊಳಲ್ಕೆರೆ. 
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x