ನಿಂತಲ್ಲೇ ಎಲ್ಲವೂ ಆಗಬೇಕು: ಕೆ.ಪಿ.ಎಮ್. ಗಣೇಶಯ್ಯ,


ಎಲ್ಲಾದರೂ ಉಂಟೆ..? ನಿಂತಲ್ಲೇ ಎಲ್ಲವೂ ಆಗಬೇಕು ಅಂದ್ರೆ..? ನಿಮಗೆಲ್ಲೋ ತಲೆ ಕೆಟ್ಟಿರಬೇಕು, ಇಲ್ಲಾ ಯಾರೋ ತಲೆಗೆ ತುರುಕಿರಬೇಕು. ಏನಂತ..? ನೀನು ಈಗಿಂದೀಗ ಅದು ಆಗಬೇಕು ಅಷ್ಟೆಯಾ..! ಎಲ್ಲಿಯಾದರೂ ಉಂಟೆ..? ನೆಚ್ಚಿಕೊಂಡ ಕ್ಷೇತ್ರದ ಬಗ್ಗೆ ಮಾಹಿತಿ, ತರಬೇತಿ, ಮಾರ್ಗದರ್ಶನ, ಅಭ್ಯಾಸ ಹೀಗೆ ಏನನ್ನೂ ಪಡೆಯದೆ, ಇದ್ದಕ್ಕಿದ್ದ ಹಾಗೆ ಎಲ್ಲವೂ ನನ್ನದಾಗಬೇಕು ಅಂದರೆ ಹೇಗೆ ಸಾಧ್ಯ.? ಮುಖವಾಡದ ಮುಖಗಳನ್ನು ಹೊತ್ತ ಮುಖಗಳಿಗೆ ನಿಜವಾದ ಮುಖಗಳ ಪರಿಶ್ರಮ, ಗೊತ್ತಿದ್ದರೂ ಅವುಗಳನ್ನು ಹಿಂದಕ್ಕೆ ನೂಕಿ, ನಾನೂ ಅವನಂತೆ, ನನ್ನನ್ನು ಒಪ್ಪಿಕೊಳ್ಳಿರಿ ಎಂದು ದುಂಬಾಲು ಬಿದ್ದು, ಆಮಿಷಗಳಿಗೆ ಇಂಬುಕೊಟ್ಟು ಸಾಧಕರ ಪೀಠವನ್ನು ಅಲಂಕರಿಸುವ ಮತ್ತು ಅಸಾಧ್ಯವಾದುದನ್ನು ಸಾಧ್ಯ ಮಾಡಿ ತೋರಿಸುವ ಮಹಾಸಾಧಕರಿಗೆ ನಮ್ಮಲ್ಲಿ ಕೊರತೆ ಎಂಬುದಿಲ್ಲ, ಒಪ್ಪೋಣ. ಆದರೆ ಸಾಧಿಸಿ ತೋರುವ ಕ್ಷಣಗಳಿಗೆ, ಸನ್ನಿವೇಶಗಳಿಗೆ, ಘಟನೆಗಳಿಗೆ ಸಿಗುವ ಫಲಿತಾಂಶವಾದರೂ ಏನು.? ಎಂದು ತಿರುಗಿ ನೋಡುವ ಪ್ರಯತ್ನವಾದರೂ ನಾವು ಮಾಡುತ್ತಿದ್ದೇವೆಯೇ.? ಇಲ್ಲ. ಇದು ಆಧುನಿಕ ಜಗತ್ತಿನ ನಿಯಮ.

ಎಲ್ಲವನ್ನೂ ಬಲ್ಲೆ ಎಂದು ಹೇಳಿಕೊಂಡು ವ್ಯಕ್ತಿಗಳು ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಕಾಣಸಿಗುತ್ತಾರೆ. ಪದವಿ ಪಡೆಯಲಿ ಅಥವಾ ಪಡೆಯದೇ ಇರಲಿ, ನಾನೂ ಸಹಿತ ಅದಕ್ಕೆ ಬಾಧ್ಯಸ್ಥ ಎಂದು ಬೀಗುತ್ತಾರೆ. ಯಾವೊಂದೂ ಅನುಭವಗಳಿರದ, ಅನುಭವಿಸದ, ಕಸರತ್ತುಗಳನ್ನು ತಿಣುಕಿ ಕೊಡುವವರನ್ನು ನೋಡಿದರೆ, ಅಷ್ಟೆ. ಅದರಲ್ಲಿ ಕೆಲಸ ನಿರ್ವಹಿಸುವವರ ಎದೆಗೆ ಅದೇನೋ ಚುಚ್ಚಿಕೊಂತು ಅಂತಾರಲ್ಲ, ಹಂಗೆ. ಮುಟ್ಟಿ ನೋಡಿಕೊಂಡ ಅನುಭವವಾಗುತ್ತೆ ಏನಂತೀರಾ.? ಮಾತಾಡೋನು ಮಾತಾಡ್ತಾನೆ ಇರ್ತಾನೆ. ಬರೆಯೋನು ಬರೀತಾನೆ ಇರ್ತಾನೆ. ಆದರೆ ಕೇಳುವವನ ಗತಿ ಏನು.? ನೋಡುವವನ ಪಾಡೇನು.? ಮಾತಾಡೋನು ಬಿಡಿ ಅದು ಅವನ ಬಾಯಿ ಚಪಲ. ಬರೆಯೋನ್ಗೆ ಬಂದ ಹಾಗೆ ಗೀಚುವ ಚಪಲ. ಈ ಎಲ್ಲದರ ಮಧ್ಯೆ ನಾಟಕ ಮಾಡುವವರ ಪಾಡೇನು ಗೊತ್ತಾ.? ಇವರನ್ನ ಸಮಾಧಾನಪಡಿಸೋದು. ಮಾತನ್ನ ಬರವಣಿಗೆ ರೂಪದಲ್ಲಿಳಿಸಿ ರಂಗರೂಪಕ್ಕೂ ಎಡತಾಕಿದ್ರೆ ಅದು ಕಡಿಮೆಯೇನಲ್ಲ. ಅಲ್ಲೂ ಸಹ ಸಾಹಿತ್ಯದ ಅಭಿವ್ಯಕ್ತಿಗೆ ಪೈಪೋಟಿ ಅದನ್ನ ಹಾಗೆ ರಚಿಸಬಹುದಿತ್ತು. ಇದನ್ನ ಹೀಗೆ ರಚಿಸಬಹುದಿತ್ತೂ ಅಂತ ತಲೆ ಕೆಡಿಸಿಕೊಂಡು ಬೇರೊಬ್ಬರ ತಲೆ ಕೆಡಿಸಿ ದ್ವಂಧ್ವಾರ್ಥಕ್ಕೆ ಎಡೆ ಮಾಡುವವರ ಸಂಖ್ಯೆ ನಮ್ಮಲ್ಲಿ ಕಡಿಮೆಯೇನಿಲ್ಲ. ಸಾಹಿತ್ಯದ ಮಾತು ಬಿಡಿ, ಪ್ರಯೋಗದ ಬಗ್ಗೆ ಹೇಳಿ ಅಂದ್ರೆ ಅಲ್ಲೂ ಸಹ ಪೈಪೋಟಿಯೇ. ಅದನ್ನ ಹಾಗೆ ಪ್ರಯೋಗಿಸಬಹುದಿತ್ತು, ಇದನ್ನ ಹೀಗೆ ಪ್ರಯೋಗಿಸಬಹುದಿತ್ತು ಅಂತ ನಿರ್ದೇಶಕರ, ಮಾರ್ಗದರ್ಶಕರ, ದಿಗ್ದರ್ಶಕರ, ವಿಮರ್ಶಕರ ಮುಂತಾದವರ ಸಾಮರ್ಥ್ಯದ ತಕ್ಕಡಿ ಹೊಗಳು ಭಟ್ಟರ ಪಾಲಾಗೋದಂತೂ ಖಂಡಿತ.

ವಿಮರ್ಶೆ ಮಾಡುವುದು ತಪ್ಪಲ್ಲ, ತಿದ್ದಿ ತೀಡುವುದೂ ತಪ್ಪಲ್ಲ. ಅಂದರೆ ತಪ್ಪನ್ನ ತಪ್ಪೂ ಎಂದು ಹೇಳುವುದು ತಪ್ಪಲ್ಲ. ತಪ್ಪನ್ನು ಸರಿ ಎಂದು ಹೇಳುವುದೂ ತಪ್ಪಲ್ಲ. ಈ ತಪ್ಪು ಒಪ್ಪುಗಳ ಮಧ್ಯೆ ತಲೆ ಕೆಡಿಸಿಕೊಂಡು, ಹೊಟ್ಟೆಗೆ ಹಿಟ್ಟಿಲ್ದಂಗೆ, ಜುಟ್ಟಿಗೆ ಜೋಡು ಹೂವ ಸಿಗುಸ್ಕೊಂಡು, ಕಣ್ಣಿಗೆ ನಿದ್ದಿಲ್ದಂಗೆ ಒದ್ದಾಡೋರನ್ನ ಎಷ್ಟು ಜನ ನೋಡಿಲ್ಲ..! ಕಾರ್ಯ ಪದ್ಧತಿಯ ಮತ್ತು ಚಟುವಟಿಕೆಗಳ ಕೆಲವುಗಳನ್ನು ಸಾಧನೆ ಎಂದು ಸಾಧಿಸಿಕೊಂಡು, ನಾನು ಮತ್ತು ನನ್ನದು ಎಂಬ ಹಾದಿಯಲ್ಲಿ, ತಮ್ಮದೇ ಆದ ರೀತಿಯಲ್ಲಿ ಸಮರ್ಥನೆ ಮಾಡಿಕೊಂಡು, ಪ್ರಭಾವಿಗಳಿಂದ ಶಿಫಾರಸ್ಸು, ಸ್ನೇಹ ಸಂಪಾದನೆ, ಗುಂಡು ತುಂಡುಗಳ ಆರಾಧನೆ, ಸಮಾಜದಲ್ಲಿ, ಲೋಕಸಂಚಾರದಲ್ಲಿ ಎಲ್ಲವೂ ನನ್ನದೇ ಸಾಧನೆ ಎಂದು ಹೇಳಿಕೊಂಡು ಯಾರು ತಾನೆ ಪ್ರಶಸ್ತಿ, ಪುರಸ್ಕಾರಗಳನ್ನು ಗಿಟ್ಟಿಸಿಕೊಂಡಿಲ್ಲ.? ಇವನ್ನೆಲ್ಲಾ ಪಡೆದುಕೊಂಡ ಮೇಲೂ ಕಾರ್ಯಸಾಧನೆ ಮುಂದುವರೆದಿದೆಯೇ.? ಅದೂ ಕೆಲವರಲ್ಲಿ ಮಾತ್ರ ಮತ್ತೆ ಚಿಗುರೊಡೆಯುತ್ತದೆ ಮತ್ತು ಗೋಚರಿಸುತ್ತದೆ. ಇಲ್ಲದಿದ್ದರೆ ಪ್ರಶಸ್ತಿಯ ಘನತೆ ಉಳಿಯಬೇಕಲ್ಲಾ..|

ನಿಂತಲ್ಲೇ ಎಲ್ಲವೂ ಆಗಬೇಕು ಎಂಬುದನ್ನು ಒಮ್ಮೆ ನಿಂತು ಆಲೋಚಿಸಬೇಕು. ಕಾರ್ಯ ಸಾಧನೆಗೆ ನನ್ನೆಲ್ಲಾ ಪ್ರಯತ್ನಗಳು, ಪ್ರಯೋಗಗಳು, ಸಂಘಟನೆಗಳು, ಅದರ ಫಲಿತಾಂಶಗಳು ಸರಿದೂಗಲಿದೆಯೇ ಎಂಬುದನ್ನು ಮನಗಾಣಬೇಕು. ಪ್ರಶಸ್ತಿ, ಪುರಸ್ಕಾರಗಳಿಗೆ ಸಾಧನೆ ಕಡಿಮೆಯಾದರೂ, ಆ ಸಾಧನೆಯ ಸಾರ್ಥಕತೆಗೆ ನಿರಂತರ ಶ್ರಮಿಸುವಂತಾಗಬೇಕು. ನಿಜವಾದ ಸಾಧನೆಗೆ ಪ್ರಶಸ್ತಿ, ಪುರಸ್ಕಾರ ನೀಡಿ ಮತ್ತಷ್ಟು ಪ್ರೋತ್ಸಾಹಿಸುವ ಮನೋಭಾವ ಉಳ್ಳವರಲ್ಲೂ ಮತ್ತು ಎಲ್ಲರಲ್ಲೂ ಮೂಡಲೆಂದು ಆಶಿಸುತ್ತೇನೆ.
– ಕೆ.ಪಿ.ಎಮ್. ಗಣೇಶಯ್ಯ,


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Parameshwarappa Kudari
Parameshwarappa Kudari
5 years ago

ಉತ್ತಮ ಬರಹ

1
0
Would love your thoughts, please comment.x
()
x