“ಅಮ್ಮಾ ಅಮ್ಮಾ ”
ಯಾರಿದು? ಒಂದೆ ಸಮ ಕಿಟಕಿ ಸಂಧಿಯಲ್ಲಿ ಮೂತಿ ಇಟ್ಕಂಡು ಕರೆಯುತ್ತಿರೋದು? ಓಹ್! ಮಾದೇವಿ. ಈ ದಿನ ಬೆಳಗ್ಗೆಯೇ ಬಂದು ಮನೆ ಕೆಲಸ ಮಾಡಿ ಹೋದಳಲ್ಲಾ? ಇನ್ನೂ ಮಧ್ಯಾಹ್ನ ಎರಡೂವರೆಯಷ್ಟೆ. ಈಗ್ಯಾಕೆ ಬಂದ್ಲಪ್ಪಾ ಇವಳು? ಇನ್ನೇನು ರಾಮಾಯಣವೊ ಏನೊ? ಇವಳ ಗೋಳು ಯಾವತ್ತು ಮುಗಿಯುತ್ತೊ? ಸದಾ ಒಂದಲ್ಲಾ ಒಂದು ಗಲಾಟೆ ಕುಡುಕ ಗಂಡನನ್ನು ಕಟ್ಟಿಕೊಂಡು. ಇದ್ದ ಒಬ್ಬ ಮಗನ ಪಾಲನೆ,ಪೋಷಣೆಯ ಜವಾಬ್ದಾರಿಗೆ ನಿಯತ್ತಾಗಿ ಮೂಕ ಎತ್ತಿನಂತೆ ದುಡಿಯುವ ಹೆಣ್ಣು. ಏನು ಹೇಳಿದರೂ ಇಲ್ಲಾ ಅನ್ನದೇ ಮನೆ ಕೆಲಸ ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಇವಳು, ಹಾಗೆ ಗುಣವೂ ಅಷ್ಟೇ ಬಂಗಾರ. ಕೈ ಬಾಯಿ ಸ್ವಚ್ಛವಾಗಿರುವಂತಹ ಹೆಣ್ಣು. ಆದರೆ ಈಗ್ಯಾಕೆ ಬಂದಳೊ ಏನೊ.
ನನಗೊ ಹಂಗಂಗೇ ಕಣ್ಣು ಎಳೀತಾ ಇದೆ. ಸ್ವಲ್ಪ ಅಡ್ಡ ಆಗೋಣ ಅಂದರೆ ಇವಳು ಈಗಲೇ ಬರಬೇಕಾ? ದೇಹದ ಸುಸ್ತು ಕಣ್ಣೆಳೆತ ಆಗಷ್ಟೆ ಊಟ ಮುಗಿಸಿ ಅಡಿಗೆ ಮನೇಲಿ ಎಲ್ಲ ಜೋಡಿಸಿಟ್ಟು ಸ್ವಲ್ಪ ಮಲಗೋಣ ಅಂತ ರೂಮಿನ ಕಡೆ ಹೋಗುತ್ತಿದ್ದ ಶಾರದೆಗೆ ಬೆಡ್ ರೂಮಿನ ಕಿಟಕಿಯಲ್ಲಿ ಕರೆಯುತ್ತಿರುವ ಮಾದೇವಿ ಕಂಡು ಕೆಟ್ಟ ಕೋಪ ತರಿಸಿತು. ಅದು ಹಾಗೆ ; ನಿದ್ದೆ ಬರುವ ಹೊತ್ತಲ್ಲಿ ಕಂಡವರ ಆಗಮನ ಮನಸ್ಸು ಸೆಟಗೊಳ್ಳುವುದು ಸ್ವಾಭಾವಿಕ ತಾನೆ. ಶಾರದೆಯ ಸ್ಥಿತಿ ಕೂಡಾ ಹೀಗಯೇ ಆಗಿದ್ದು.
ಇದೆ ಟೈಮು ಈ ಕೆಲಸದವರಿಗೆ ಮನೆಗೆ ಬರುವುದಕ್ಕೆ. ಏನ್ಮಾಡದೂ, ಅವರಿಂದಲೆ ತಾನೆ ನಮ್ಮನೆ ಬೇಳೆ ಬೇಯೋದು. ಕೈಲಾಗದ ತಪ್ಪಿಗೆ ರೇಗೊ ಹಾಗಿಲ್ಲ, ಬಾಯಿಬಿಟ್ಟು ಮನಸ್ಸಿಗೆ ಅನಿಸಿದ್ದು ಹೇಳೊ ಹಾಗಿಲ್ಲ. ಎಲ್ಲಾದರೂ ಅಪ್ಪಿ ತಪ್ಪಿ ಏನಾದರು ಹೇಳಿದ್ರೊ ಮೂತಿ ಊದಿ ಪಾತ್ರೆಗಳು ಜೋರಾಗಿ ಸೌಂಡ ಮಾಡಿ ಗುಡಿಸೊ ಪೊರಕೆ ಅಲ್ಲೊಂದು ಮಾರು ಇಲ್ಲೊಂದು ಮಾರು ಕಸ ಎಲ್ಲ ಅಲ್ಲಲ್ಲೆ . ಉಪಾಯವಿಲ್ಲದೆ ದೀಪ ಹಚ್ಚೊ ಟೈಮಲ್ಲಿ ನಾವೇ ಶಾಸ್ತ್ರ ಅಂಟಿಸಿಕೊಂಡವರು ಗುಡಿಸ್ಕೊಬೇಕು ಅಷ್ಟೆ. ಅದೆ ಬೆಳಗ್ಗೆ ಮನೆ ಮುಂದೆ ನೀರಾಕೊ ಶಾಸ್ತ್ರಕ್ಕೆ ಬೀದಿ ಗುಡಿಸೋದಿಲ್ವೆ ಹಾಗೆ ಕೆಲಸದವರು ಸಿಟ್ಟು ಬಂದಾಗ ಗುಡಿಸೊ ಅವತಾರ.
ಇನ್ನು ಕೆಂಪು ಕೋಟಿನ ಬೀದಿ ಗುಡಿಸುವವರು ಕೈಯಲ್ಲಿ ಆ ಕೈಗೊಂದು ಈ ಕೈಗೊಂದು ಪೊರಕೆ ಹಿಡಿದು ಮಾರಾಕ್ಕೊಂಡು ಬಂದು ಅವರೊಂಥರಾ ಗುಡಿಸಿ ಬಿಡೋಲ್ವೆ ಹಾಗೆ. ಅಲ್ಲೂ ಏನಾದರು ಮಾತಾಡಿದರೆ ; “ಯಾಕಕ್ಕೊ ಗುಡಿಸ್ತಿರೋದು ಕಾಣಲ್ವಾ. ಯಾವಾಗ್ಲು ನಿಮ್ಮನೆ ಮುಂದೆನೇ ಎಷ್ಟೊಂದು ಕಸ. ಎಷ್ಟು ಗಿಡ ಬೆಳೆಸಿದ್ದೀರಾ?”
ಆಯ್ತಲ್ಲಪ್ಪ ದಿನಾ ಗಿಡದ ಎಲೆಗಳನ್ನು ನಾನು ಗುಡಿಸೋದು ಮಗಚಿ ನೆಲ ಕಚ್ಚಿತು. ಮಾತು ಕಡಿಮೆ ಮಾಡೂ ಅಂತ ಹೇಳಿದ್ರೆ ಕೇಳ್ತೀಯಾ? ಬೇಕಿತ್ತಾ? ಅನುಭವಿಸು. ಸುಮ್ಮನೆ ಬಾಯಿ ಮುಚ್ಕಂಡು ಒಳಗೆ ನಡಿ. ಒಳ ಮನಸ್ಸು ಹೇಳದೆ ಇನ್ನೇನು ಮಾಡುತ್ತೆ. ಯಾಕೊ ಎಲ್ಲ ನೆನಪಾಗಿ ಪಿತ್ತ ನೆತ್ತಿಗೇರಿತು. ಹಿಂದೆಲ್ಲ ಕೆಲಸದವರು ನಡೆದುಕೊಂಡ ರೀತಿ ಬೇಡ ಬೇಡಾ ಅಂದರೂ ಆಗಾಗ ನೆನಪಿಗೆ ಬಂದು ಈ ಮಾದೇವಿನೂ ಅದೇ ದಾರಿ ಹಿಡಿದರೆ ಅನ್ನುವ ಆತಂಕದಲ್ಲಿ ಸ್ವಲ್ಪ ಮೆತ್ತಗಾಗಿದ್ದಾಳೆ ಶಾಮಲಾಳೂ ಕೂಡಾ. ಆದರೂ ಕೆಲವೊಮ್ಮೆ ರೇಗೋದು ಮಾತ್ರ ಬಿಡೋದಕ್ಕೆ ಆಗ್ತಿಲ್ಲ.
ಆದರೆ ಮಾದೇವಿ ಎಲ್ಲರಂತಲ್ಲ, ಅದು ಶಾರದೆಗೂ ಗೊತ್ತು. ಆದರೂ ರೇಗುತ್ತಿದ್ದಾಳೆ ತನ್ನಷ್ಟಕ್ಕೆ. ಬಹುಶಃ ಯಾರದ್ದೊ ತಪ್ಪು ಪಾಪದ ಬಡಪಾಯಿ ಮೇಲೆ. ಕಲಸುಮೇಲೊಗರವಾದ ಮನಸ್ಸು ಬೀದಿ ಕಸ ಗುಡಿಸುವವಳಿಂದ ಆಗಿದ್ದು ಈ ದಿನ ಬೆಳಗ್ಗೆಯಷ್ಟೆ. ಈಗ ಮಾದೇವಿ ಮೇಲೆ ತಿರುಗಿ ಬಿತ್ತು.
ಎಷ್ಟೋ ಸಾರಿ ಮಾದೇವಿ “ಅಮ್ಮಾ ನಾನೇನು ಮಾಡಿಲ್ಲ,ಯಾಕಮ್ಮಾ ರೇಗ್ತೀರಾ?” ಅಂತ ಕೇಳಿದಾಗೆಲ್ಲ ಮತ್ತಷ್ಟು ಸೆಟಗೊಂಡು “ನೋಡು ನೀ ಮಾತಾಡಬೇಡಾ” ಅಂತಂದು ಒಳಗೊಳಗೇ ತನ್ನ ತಪ್ಪಿನ ಅರಿವಾದರೂ ತೋರ್ಪಡಿಸಿಕೊಳ್ಳದೆ ಅವಳ ಮೇಲೆ ಕಣ್ಣು ಗುರಾಯಿಸುವುದು ಆಗಾಗ ನಡೀತಿತ್ತು.
ಆದರೂ ಮಾದೇವಿಗೂ ಶಾರದೆಗೂ ಅದು ಯಾವ ಜನ್ಮದ ನಂಟೊ ಏನೊ. ಅವಳು ಕೆಲಸದವಳು ಇವಳು ಮನೆಯೊಡತಿ . ಅವರಿಬ್ಬರ ಭಾಂದವ್ಯ ಒಡ ಹುಟ್ಟಿದವರಿಗಿಂತ ಹೆಚ್ಚಾಗಿತ್ತು. ಒಮ್ಮೊಮ್ಮೆ ಆರೋಗ್ಯ ಕೆಟ್ಟಾಗ ಅವಳ ಹತ್ತಿರ ಅಲವತ್ತುಕೊಂಡು “ಅಯ್ಯೋ ಬಿಡಿ ಅಮ್ಮಾ. ಯಾಕೆ ಈಟೊಂದು ಬೇಜಾರು ಮಾಡ್ಕತ್ತೀರಾ? ನಾನಿಲ್ವಾ? ಅದೇನು ಕೆಲಸ ಇದೆ ಹೇಳಿ ಮಾಡ್ಕೊಟ್ಟೇ ಹೋಯ್ತಿನಿ” ಅಂತಂದು ತನ್ನ ಆನುವಂಶಿಕ ಕಾಯಿಲೆಗೆ ನೋವಿನ ಎಣ್ಣೆ ಹಚ್ಚಿ ನೀವಿ “ಈಗ ಮಲ್ಕಳಿ. ಬೇಜಾರ ಮಾಡ್ಕಬೇಡಿ. ಕಾಯಿಲೆ ಮನುಷ್ಯಂಗಲ್ಲದೇ ಮರಕ್ಕೆ ಬತ್ತದಾ”? ವೇದಾಂತದ ಮಾತು ಹೇಳಿ ಸಮಾಧಾನ ಮಾಡಿದಾಗೆಲ್ಲ ಅವಳ ಮೇಲೆ ಪ್ರೀತಿ ಉಕ್ಕುತ್ತದೆ. ಆಗೆಲ್ಲ ತನ್ನ ಹಳೆ ಸೀರೆನೊ ಇಲ್ಲಾ ದುಡ್ಡೊ ಕೊಟ್ಟು ಅವಳನ್ನು ಖುಷಿ ಪಡಿಸ್ತಾಳೆ.
ಬದುಕಿನ ಕೆಲವು ಕ್ಷಣಗಳಲ್ಲಿ ಅದರಲ್ಲೂ ದಿನನಿತ್ಯದ ಕೆಲಸವನ್ನೂ ಮಾಡಲಾಗದ ಅಸಹಾಯಕ ಸಮಯದಲ್ಲಿ ಆಪದ್ಬಾಂಧವರಂತೆ ನಮ್ಮ ಸಹಾಯಕ್ಕೆ ಬರುವುದು ಇಂತಹ ನಂಬಿಕೆಯ ಮನೆ ಕೆಲಸದವರು. ಈಗಿನ ಕಾಲದಲ್ಲಿ ದುಡ್ಡಿನ ಮುಖ ನೋಡುವವರೇ ಜಾಸ್ತಿ. ನಿಯತ್ತಾಗಿ ಕೆಲಸ ಮಾಡಿಕೊಂಡು ಹೋಗುವವರು ಅತೀ ವಿರಳ. ಅಂತಹವರಲ್ಲಿ ಒಳ್ಳೆ ಹೆಂಗಸು ಈ ಮಾದೇವಿ.
ಗಂಡ ಮತ್ತು ಮಗ ಆಫೀಸಿಗೆ ಹೋದ ಮೇಲೆ ಯಾರಿಲ್ಲದ ಮನೆಯಲ್ಲಿ ಒಂಟಿಯಾಗಿ ಬಿಡುತ್ತಿದ್ದ ಶಾರದೆಗೆ ಅಪರೂಪದ ಗುಣದ ಮಾದೇವಿ ಬಂದ ಮೇಲೆ ದಿನ ಕಳೆದಂತೆ ಒಂದು ರೀತಿ ನಿರಾಳ. ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮಾದೇವಿ ಕ್ರಮೇಣ ಶಾರದೆಯೊಂದಿಗೆ ಬಿಟ್ಟಿರಲಾರದಷ್ಟು ನಂಬಿಕೆ ವಿಶ್ವಾಸ ಗಳಿಸಿಕೊಂಡಿದ್ದಳು. ಶಾರದೆಯೂ ಅಷ್ಟೆ ಅವಳ ಕಷ್ಟ ಸುಖಕ್ಕೆಲ್ಲ ಭಾಗಿಯಾಗಿ ಇವಳು ಕೆಲಸದವಳು ಎಂಬ ತಿರಸ್ಕಾಕರದಿಂದ ಒಂದಿನ ಕಂಡವಳಲ್ಲ.
ಶಾರದೆ ಸೀದಾ ಮುಂಬಾಗಿಲಿಗೆ ಹೋದವಳೆ ರೇಗಿಕೊಂಡೇ ಚಿಲಕ ತೆಗೀತಾ “ಏನ್ ಮಾದೇವಿ ಇಷ್ಟು ಹೊತ್ತಿನಲ್ಲಿ? ಒಂದರದ೯ಗಂಟೆ ಮಲಗೋಣ ಅಂದರೂ ಬಿಡಲ್ವಲ್ಲೆ. ಈಗಲೇ ಬರಬೇಕಾ? ಅದೇನು ಅಂತ ಹೇಳು ಬೇಗ. ರಾತ್ರಿ ಮಗ ಬರೋದು ಲೇಟು. ಅವನಿಗೆ ಬಡಿಸಿ ಎಲ್ಲ ಎತ್ತಿಟ್ಟು ಮಲಗೋದರಲ್ಲಿ ಗಂಟೆ ಹನ್ನೊಂದಾಗುತ್ತೆ. ಈ ವಯಸ್ಸಿಗೆ ಮಲಗಿದ ಕೂಡಲೆ ನಿದ್ದೆ ಬರುತ್ತ, ಅದೂ ಇಲ್ಲ. ನಿಂಗೇನು ಗೊತ್ತು ನನ್ನ ಕಷ್ಟ.”
ಅಮ್ಮನ ಕೋಪ ಮಾದೇವಿಗೆ ಮಾಮೂಲು. ಅಷ್ಟೇ ಕೂಲಾಗಿ ” ಹೂಂ ಅಮ್ಮ, ನನಗೂ ಗೊತ್ತಾತದೆ. ಆದರೆ ಏನ್ಮಾಡದೂ? ಎಲ್ಲಾರ ಮನೆ ಕೆಲಸ ಮುಗಿಸಿ ಬರೋದರಾಗೆ ಈಟೋತ್ತಾಯ್ತು. ಮತ್ತೆ ಮೊನ್ನೆ ನೀವು ಹೇಳಿಲ್ವಾ ನಿಮ್ಮ ತಂಗೀ ಮನೆಗೆ ಕೆಲಸದವಳು ಇದ್ರೆ ಹೇಳು ಅಂದಿದ್ದರಲ್ವಾ. ಒಬ್ಬಳು ಇದ್ದಾಳೆ ಅಮ್ಮ. ಕರಕಂಡ ಬಂದೀವ್ನಿ. ಇವಳ ಹೆಸರು ನಿಂಗಿ ಅಂತ. ಮಾತ್ನಾಡಿ ನೀವು. ಏಯ್ ಬಾರೆ ಇಲ್ಲಿ ಅದೇನು ಮಾತಾಡಬೇಕಂತಿದೆಯೊ ಎಲ್ಲಾ ಮಾತಾಡಕ ಆಯ್ತಾ.?”
ಈಗ ಶಾರದೆಗೆ ಜ್ಞಾನೋದಯವಾಯಿತು. ತಾನು ಹೇಳಿದ ಕೆಲಸಕ್ಕೆ ಇವಳು ಬಂದಿರೋದು. ಛೆ! ಸುಮ್ಮನೆ ರೇಗಾಡಿಬಿಟ್ಟೆ. ಅಯ್ಯೋ! ನನ್ನ ತಲೆ ಕಾಯಾ!! ಸ್ವಲ್ಪ ಸಾವರಿಸಿಕೊಂಡು:
“ಏನೆ ನಿನ್ನ ಹೆಸರು? ಯಾವೂರು? ಇರೋದು ಏಲ್ಲಿ? ಮದುವೆ ಆಗಿದೇಯಾ? ”
“ಅಮ್ಮ ನಾ ಈ ಊರವಳೆಯಾ. ಬೋ ವಸಾ೯ತು ಇಲ್ಲಿದ್ದು. ಮದುವೆ ಆಗೈತೆ. ಗಂಡ ಗಾರೆ ಕೆಲಸಕ್ಕೆ ಹೊಯ್ತಾವ್ವನೆ. ಮಕ್ಕಳು ಮರಿ ಯಾರು ಇಲ್ಲ. ಅಕ್ಕನ ಮನೆ ತಾವ ಮನೆ ಮಾಡ್ಕಂಡ ಇವ್ನಿ. ನಾಕ್ ಮನೆ ಕೆಲಸ ಮಾಡೋದೆ ನನ್ನ ಕಸಬು. ಅಲ್ಲೊಂದು ಮನೆಗೆ ಹೋಯ್ತಿದ್ದೆ. ಅವರು ಬ್ಯಾರೆ ಕಡೆ ಹೊಸಾ ಮನೆ ಕಟ್ಕಂಡಿ ಹೊಂಟೋದರು. ಈಗೊಂದು ಮನೆ ಕೆಲಸ ಮಾಡಾಕೆ ಠೇಮ್ ಐತೆ. ಅದಕೆ ಬಂದಿವ್ನಿ.”
“ಒಳ್ಳೆದೇ ಆಯ್ತು. ನೋಡು ನನ್ನ ತಂಗಿ ಮನೆಯಲ್ಲಿ ಕೆಲಸ ಮಾಡ್ತೀಯಾ? ಇಲ್ಲೆ ಸ್ವಲ್ಪ ದೂರದಲ್ಲಿ. ಇರೋದು. ಇವತ್ತು ಆಫೀಸಿಗೆ ರಜೆ ಹಾಕಿ ಮನೆಯಲ್ಲೇ ಇದ್ದಾಳೆ. ಕರೆದುಕೊಂಡು ಹೋಗ್ತೀನಿ. ಏನೆ ಮಾದೇವಿ ಹೋಗೋಣ್ವೆನೆ?”
“ಆಯ್ತು. ಬಿರೀನೆ ಹೋಗಿ ಅದೇನು ಅಂತ ಮಾತಾಡವಾ. ಏ ನಡೀಯೆ. ಅಮ್ಮಾವರ ತಾವ ಸರಿಯಾಗಿ ಮಾತಾಡ್ಕ. ಆಮೇಕೆ ನನ್ನ ತಾವ ಕೊರಗ ಬ್ಯಾಡಾ. ಇವಳು ಕರ್ಕಂಡ ಬಂದು ಸೇರ್ಸೀದ್ಲು ಹಾಂಗೆ ಹೀಂಗೆ ಅಂತ. ಈಗ್ಲೆ ಹೇಳಿವ್ನಿ.”
“ಆಗ್ಲಿ ಅಕ್ಕಾ. ನಾ ನಿನ್ ದೂರಾಕಿಲ್ಲ. ನಂಗೊಂದು ಕೆಲಸದ ಮನಿ ತೋರ್ಸಿ ಪುಣ್ಯ ಕಟ್ಕಂಡೆ. ನಂಗೂ ಒಸಿ ಮರ್ವಾದೆ ಐತೆ. ಶಿವನಾಣೆ ಆಂಗೆಲ್ಲ ಏನ್ ಅನ್ನುಕಿತ್ತಾ. ನಿನ್ನುಪಕಾರ ಜಪ್ತಿ ಮಡ್ಕತ್ತೀನಿ.”
ಅವಳ ಮಾತಿಗೆ ಮಾದೇವಿ ಏನು ಶಾರದೆಯೂ ಮರುಳಾಗಿ ಬಿಟ್ಲು. ಇಬ್ಬರೂ ನಗುತ್ತ ತಂಗಿ ಶಾಮಲೆಯ ಮನೆಗೆ ಅವಳನ್ನು ಕರೆದುಕೊಂಡು ಹೊರಟರು.
“ಶಾಮಲಾ ಎನು ಮಾಡ್ತಿದ್ದೀಯೆ? ಬಾಗಲು ತೆಗಿ.”
“ಬಂದೆ.” ಅಡಿಗೆಮನೆಯಲ್ಲಿ ಮಕ್ಕಳಿಗೆ ಸಾಯಂಕಾಲಕ್ಕೆ ತಿಂಡಿ ಮಾಡುತ್ತಿದ್ದವಳು ಕಿಟಕಿಯಿಂದಲೇ ಬಗ್ಗಿ ನೋಡಿ ಈ ಅಕ್ಕ ಯಾರನ್ನೊ ಕರೆದುಕೊಂಡು ಬಂದಾಂಗಿದೆ? ಒಲೆ ಆರಿಸಿ ಸೀದಾ ಬಂದು ಬಾಗಿಲು ತೆಗಿತಾಳೆ.
“ಬಾ ಅಕ್ಕ. ಕೂತೂಕೊ. ಇವಳು ಯಾರು?” ಅಕ್ಕ ತನ್ನ ಕೆಲಸದವಳೊಟ್ಟಿಗೆ ಹೊಸಬಳನ್ನು ಕರೆದುಕೊಂಡು ಬಂದಿದ್ದು ನೋಡಿ ಬಂದವಳನ್ನು ಅಡಿಯಿಂದ ಮುಡಿಯವರೆಗೆ ಗಮನಿಸುತ್ತಾ ಮನಸ್ಸಲ್ಲೆನೊ ಲೆಕ್ಕ ಹಾಕ್ತಾಳೆ ಶಾಮಲಾ.
“ಇವಳಾ, ನೀ ಕೆಲಸದವರು ಬೇಕು ಹೇಳಿರಲಿಲ್ವಾ? ಅವಳೇ ಇವಳು. ನಿಂಗಿ ಅಂತ ಇವಳ ಹೆಸರು. ಇದೇ ಊರಿನವಳಂತೆ. ಅದೇನು ಅಂತ ಮಾತಾಡು. ಹಂಗೆ ಬೇಗ ಚಾ ಮಾಡು ಮಾರಾಯ್ತಿ. ಇನ್ನೇನು ಸ್ವಲ್ಪ ಮಲಗೋಣ ಅಂತ ಹೊರಟಿದ್ದೆ ಇವಳು ಬಂದ್ಲು. ಕಣ್ಣು ಎಳೀತಿದೆ. ಬಿಸಿ ಚಾ ಕುಡಿದರೆ ಸ್ವಲ್ಪ ಸಮಾಧಾನ ಆಗುತ್ತೆ.”
“ಅಯ್ಯೋ! ನೀ ಹೇಳಬೇಕಾ ಅಕ್ಕಾ, ನಿನ್ನ ಚಾ ಚಟ ಗೊತ್ತಿದ್ದೆ. ಇರು ಮೊದಲು ಚಾ ಮಾಡುತ್ತೇನೆ. ಎಲ್ಲರೂ ಕುಡಿಯೋಣ. ಆಮೇಲೆ ಮಾತು.”
ಅಕ್ಕನ ಮಾತು ಕೇಳಿ ಅಪರಿಮಿತ ಸಂತೋಷ ಶಾಮಲಳಿಗೆ. ಸರಿಯಾದ ಕೆಲಸದವರು ಯಾರೂ ಸಿಗದೆ ಪಟ್ಟ ಪಾಡು ಅವಳಿಗೇ ಗೊತ್ತು. ಬೆಳಗಿಂದ ಸಾಯಂಕಾಲದವರೆಗೂ ಮನೆ ಕೆಲಸ ಆಫೀಸು ಕೆಲಸ ಅಂತ ಒದ್ದಾಡಿ ಒದ್ದಾಡಿ ಸಾಕಾಗಿತ್ತು. ಗುರುತು ಪರಿಚಯವಿಲ್ಲದವರನ್ನು ಮನೆ ಕೆಲಸಕ್ಕೆ ಇಟ್ಟುಕೊಳ್ಳಲೂ ಭಯ, ಗೊತ್ತಿರೊ ಕೆಲಸದವರು ಆಗಲೇ ಪಾಳಿಯಂತೆ ಬೇರೆ ಮನೆ ಒಪ್ಪಿಕೊಂಡು ಕೇಳಿದರೆ “ಆಗಲ್ಲ ಅಕ್ಕಾ. ಟೈಮು ಸೆಟ್ ಆಗಲ್ಲ ” ಎಂಬ ಸೊಲ್ಲು.
ಒಳಗೆ ಸರಿದ ಶಾಮಲಾ ಚಾ ಹಿಡಿದು ಬರುವಷ್ಟರಲ್ಲಿ ಹೊಸಾ ಕೆಲಸದವಳಾದ ನಿಂಗಿ ಕೂತಲ್ಲೆ ಮನೆಯೆಲ್ಲ ಕಣ್ಣಾಯಿಸಲು ಶುರು ಮಾಡಿದಳು. ದೊಡ್ಡ ಮನೆ. ಶ್ರೀಮಂತರೇ ಇರಬೇಕು. ಒಳಗೊಳಗೆ ಸಂಬಳ ಎಷ್ಟು ಕೇಳಲಿ ಅನ್ನುವ ಲೆಕ್ಕಾಚಾರ.
“ಸರಿ, ನಿನ್ನ ಹೆಸರು ಏನು ಎತ್ತ ಎಲ್ಲ ಹೇಳಮ್ಮಾ. ನನಗೂ ಮನೆ ಕೆಲಸ ಮಾಡಿ ಮಾಡಿ ಸಾಕಾಗೋಗಿದೆ. ನಾಳೆಯಿಂದಲೇ ಬೇಕಾದರೂ ಬಾ.”
ನಿಂಗಿಗೊ ಒಳಗೊಳಗೇ ಹಿಗ್ಗು. ಈ ಅವ್ವಾಗೆ ಕೆಲಸದವರ ತರಾತುರಿ ಶಾನೆ ಐತೆ. ಒಸಿ ಸಂಬಳ ಜಾಸ್ತೀನೆ ಕೇಳವಾ.
” ನನ್ನ ಹೆಸರು ನಿಂಗಿ, ಇಲ್ಲೇ ಹತ್ರದಾಗ ಮನಿ ನಂದು. ಮನೆ ಅಂದಮ್ಯಾಕೆ ಜನ ಇರ್ದೆ ಇತಾರಾ. ಅದೆನೇನು ಕೆಲಸ ಮಾಡಬೇಕು ವೋಳಿ. ಎಲ್ಲ ಕೆಲಸ ಮಾಡ್ಕಂಡ ಹೋಯ್ತೀನಿ. ಸಂಬಳ ಎಷ್ಟು ಕೊಡ್ತೀರಿ ಒಸಿ ನೀವೇ ಲೆಕ್ಕಾಚಾರ ಮಾಡಿ ಹೇಳಿ. ಪಾಪ! ಶಾನೆ ದಣದಾಂಗ್ ಕಾಣ್ತದೆ.” ಇಟ್ಟಳು ಸಂಭಾವಿತತನದ ಬತ್ತಿ.
ಶಾಮಲನೊ ಅವಳ ಮಾತಿಗೆ ಕರಗೋದ್ಲು. ಎಷ್ಟು ಜನ ಇದ್ದೀರಾ, ಏನೇನು ಕೆಲಸ ಅಂತನೂ ಕೇಳಿಲ್ಲ. ಒಬ್ಬಳೇ ಬೇರೆ. ಮಕ್ಕಳ ಉಸಾಬರಿ ಇಲ್ಲ. ಕೆಲಸ ತಪ್ಪಿಸೊ ಪ್ರಮೇಯ ಇಲ್ಲ. ಹೀಗೆ ಏನೇನೋ ಮನಸಲ್ಲಿ ಲೆಕ್ಕಾಚಾರ ಹಾಕಿ “ನೋಡು ನಿಂಗಿ,ನಾ ಹೇಳೊ ಎಲ್ಲಾ ಕೆಲಸ ಮಾಡಿಕೊಂಡು ಹೋಗಬೇಕು. ತಪ್ಪಿಸಬಾರದು. ಏನೊ ಅನು ಆಪತ್ತು ಬರುತ್ತದೆ. ಆಗ ನಿನ್ನ ಅಕ್ಕನ ಹತ್ತಿರ ಹೇಳಿ ಕಳಿಸು. ನಾ ಕೊಡೊ ಸಂಬಳಕ್ಕೆ ನೀ ಒಪ್ತಿಯೊ ಇಲ್ವೊ ಏನೊ. ಆದರೂ ಹೇಳ್ತೀನಿ ಕೇಳು ; ಎಲ್ಲ ಸೇರಿ ಎರಡು ಸಾವಿರ ಕೊಡ್ತೀನಿ. ಆಗುತ್ತಾ?”
ಗದ್ದಕ್ಕೆ ಕೈ ಇಟ್ಟು ಎಲ್ಲ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವ ನಿಂಗಿ ” ಅಲ್ಲ ಕಣವ್ವಾ, ಈಟೊಂದು ದೊಡ್ಡ ಮನಿ. ಮೇಲೆ ಕೆಳಗೆ ಒರೆಸಬೇಕು. ಜನ ಎಷ್ಟಿದ್ದೀರಿ? ಕೋಲು ಕೊಡ್ತೀರಾ ಒರೆಸೋಕೆ?”
“ಇದುವರೆಗೂ ಯಾರಿಗೂ ಒರೆಸೊ ಕೋಲು ಕೊಟ್ಟಿಲ್ಲ, ಕೈಯಲ್ಲೇ ಒರೆಸ್ತಾ ಇದ್ದರು. ಆದರೆ ನೀ ಕೇಳ್ತಿದ್ದೀಯಲ್ಲ. ಯಾಕೆ ಕೈಯಲ್ಲಿ ಒರೆಸು, ಹಳೆ ಬಟ್ಟೆ ಕೊಡ್ತೇನೆ.”
ನೆಟ್ಟಗೆ ಕುಳಿತ ನಿಂಗಿ,”ಆಗಾಕಿಲ್ಲ ಕಣವ್ವೊ. ನಾನೂ ನಾಕ್ ಮನೆ ಕೆಲಸ ಮಾಡೋದು ಬ್ಯಾಡ್ವಾ. ಸೊಂಟ ಎಲ್ಲಾ ಬಿದ್ದೋತೈತೆ. ಕೋಲು ಕೊಡಿ ಒರಸಾಕೆ.”
“ಹೋಗ್ಲಿ,ಆಯ್ತು. ನೀ ಬಾ ನಾಳೆಯಿಂದ. ಅಂಗಡಿಯಿಂದ ತಂದಿಡ್ತೀನಿ.”
“ಬ್ಯಾಡ್ ಬ್ಯಾಡಾ. ಒಸಿ ನಾನೇ ನಿಮ್ಮೊಟ್ಟಿಗೆ ಬರ್ತೀನಿ. ನನಗೆ ಸರಿಯಾದ ಕೋಲು ನಾನೇ ಆರಿಸ್ಕಂತೀನಿ. ಮತ್ತೆ ಪಾತ್ರೆ ಸಿಂಕನಾಗೆ ತೊಳೆಯೋದಾ? ಇಲ್ಲಾ ಕೆಳಗಡೆ ಕೂಕಂಡಿ ತೊಳಿಯಾದಾ?”
“ಎರಡೂ ಇದೆ ಕಣೆ. ಆದರೆ ಹೊರಗಡೆ ಕೆಳಗೆ ಕೂತ್ಕಂಡೆ ತೊಳಿ, ಒಳಗಡೆ ಗಲೀಜಾಗುತ್ತದೆ. ”
” ಹಾಂಗಂದ್ರೆ ಹೇಂಗೆ ಅವ್ವಾ. ಕೆಳಗಡೆ ಕೂಕಂಡರೆ ಎದ್ದು ಕಾಲು ನೆಟ್ಟಗೆ ಮಾಡಾಕೆ ಆಗಾಕಿಲ್ಲ. ನಿಮ್ಮ ಒಂದು ಮನೆ ಕೆಲಸನಾ ಮಾಡೋದು? ಇನ್ನೂ ನಾಲ್ಕು ಮನೆ ಕೆಲಸ ಮಾಡೋದು ಬ್ಯಾಡ್ವಾ?” ಉಹ್ಊಂ.
ಸ್ವಲ್ಪ ಬೇಸರ ಮಾಡಿಕೊಂಡಂತಿತ್ತು ಅವಳ ಮಾತು. ಇರಲಿ ಯಾವುದಕ್ಕೂ ಸ್ವಲ್ಪ ದಿನ ಇವಳಂತೆ ನಡೆಯೋಣ ಅಂತ ಲೆಕ್ಕಾಚಾರ ಹಾಕಿದ ಶಾಮಲಾ “ಆಯ್ತಮ್ಮಾ ಬರ್ತೀಯಾ ನಾಳೆಯಿಂದ?”
“ಒಸಿ ಇರವ್ವಾ. ಈಗ ಮನೆಯಲ್ಲಿ ನಾಕ್ ಮಂದಿ ಇದ್ದೀರಿ ಅಂದ ಮ್ಯಾಕೆ ಬಟ್ಟೆನೂ ಅಷ್ಟೆ ಇರ್ತೈತಲ್ವಾ? ವಾಷಿಂಗ್ ಮಷಿನ್ ಇಲ್ವಾ ಅವ್ವ?”
“ಇದೆ. ಆದರೆ ನೀ ಬಂದ ಮೇಲೆ ಅದ್ಯಾಕೆ. ಯಾವಾಗಾದರೂ ನೀನು ಬರದೇ ಇದ್ದಾಗ ಅಗತ್ಯ ಇರೊ ಬಟ್ಟೆ ಅದರಲ್ಲಿ ನಾ ತೊಳ್ಕೋತೀನಿ. ಬಟ್ಟೆ ತೊಳೆಯೊ ಕಲ್ಲು ಹೊರಗಿದೆ. ಅಲ್ಲೇ ತೊಳೆಯೋದು ಅಲ್ಲೇ ತಂತಿ ಮೇಲೆ ಒಣಗಾಕೋದು ಮಾಡು ಸಾಕು.”
” ನೋಡವ್ವಾ, ನಾ ಹೀಂಗತೀನಿ ಅಂತ ಬ್ಯಾಸರಾ ಮಾಡ್ಕಬೇಡಿ. ನಂಗೂ ಮಷಿನ್ನಾಗೆ ಬಟ್ಟೆ ತೊಳಿಯೋದು ಬರ್ತೈತೆ. ನಾನೂ ಅದರಲ್ಲೆ ತೊಳಿತೀನಿ. ಈಗ ಬ್ಯಾರೆ ಕೆಲಸದವರ ಮನ್ಯಾಗೆ ಮಾಡಲ್ವಮ್ಮಾ? ಹಂಗೇಯಾ. ಮಾತಿಗೆ ಇಲ್ಲ ಅನ್ಬೇಡಿ. ನಂಗೂ ಕೈಯ್ಯೆಲ್ಲ ಸಾಬೂನು ತಾಗಿ ತಾಗಿ ಬೆಳ್ಳಗಾಗೋಯ್ತದೆ.”
ಇವಳು ಹೇಳೋದು ಹೌದಿರಬೇಕು. ಅವರೆಲ್ಲ ಮಾಡಿಸುವಾಗ ನಾನ್ಯಾಕೆ ಬ್ಯಾಡಾ ಹೇಳಲಿ ಅಂತಂದುಕೋಂಡ ಶಾಮಲಾ ” ಸರಿ ಬಾರೆ ನಾಳೆಯಿಂದ.”
“ಆಯ್ತು ಅವ್ವಾ, ಬತ್ತೀನಿ. ಆದರೆ….”
“ಇನ್ನೇನೆ ಸಮಸ್ಯೆ. ಎಲ್ಲಾ ಆಯ್ತಲ್ಲಾ?”
ಘಾಟಿ ನಿಂಗಿ. ಅಳೆದೂ ಸುರಿದೂ ಶಾಮಲಾಳಿಗಿರುವ ಕೆಲಸದವ ಅಗತ್ಯ ಸೂಕ್ಷ್ಮವಾಗಿ ಗಮನಿಸುತ್ತ ಮುಂದುವರಿಸುತ್ತಾಳೆ ; “ಅದು ಹಾಗಲ್ಲ, ಒಸಿ ಸಂಬಳ ಜಾಸ್ತಿ ಮಾಡಿ. ಇದೇ ಕೆಲಸಕ್ಕೆ ನಾ ಹೋಗೊ ಕೆಲಸದ ಮನೆಯವರು ನಾಲ್ಕು ಸಾವಿರ ಕೊಡ್ತವ್ರೆ. ನಿಮ್ಮಕ್ಕ ನನ್ನಕ್ಕಾ ಮಾತಾಡಿ ನನ್ನ ಸೇರಿಸ್ತಿರೋದಲ್ವರಾ? ಅದಕೆ ನಾನೇ ಕಮ್ಮಿ ಕೇಳ್ತದ್ದೀನಿ. ಮೂರೂವರೆ ಕೊಡಿ. ಹಂಗೆ ಸಣ್ಣ ಪುಟ್ಟ ಕೆಲಸ ಇದ್ರೂ ಮಾಡಿಕಂಡ ಹೋಯ್ತೀನಿ.”
ನಿಂಗಿಯ ಮಾತಿಗೆ ಹೂಂ ಅನ್ನದೇ ಗತ್ಯಂತರವಿಲ್ಲ. ಮನೆ ಕೆಲಸ ಮಾಡಿ ಕೊಳ್ಳಲೂ ಆಗೋದಿಲ್ಲ, ಇತ್ತ ಇದುವರೆಗೂ ಸರಿಯಾದ ಕೆಲಸದವರೂ ಸಿಗುತ್ತಿಲ್ಲ. ಈಗ ಇವಳನ್ನು ಬಿಟ್ಟರೆ ಬೇರೆಯವರು ಸಿಗದಿದ್ದರೆ ಅನ್ನುವ ಯೋಚನೆಯಲ್ಲಿ “ಆಯ್ತು ಮಾರಾಯ್ತಿ. ನೀನು ಕೇಳಿದಷ್ಟು ಸಂಬಳ ಕೊಡುತ್ತೇನೆ. ಆದರೆ ನಾಳೆಯಿಂದಲೇ ಕೆಲಸಕ್ಕೆ ಬೆಳಗ್ಗೆ ಬೇಗ ಬಾ. ತಪ್ಪಿಸಬೇಡ.”
“ಆಯ್ತು ಕಂಡ್ರವ್ವಾ. ಆರು ಗಂಟೆಗೆಲ್ಲ ಬಂದು ಎಲ್ಲಾ ಕೆಲಸ ಮುಗಿಸಿ ಹೋಯ್ತೀನಿ. ಆದರೆ ಒಂದು ಮಾತು.”
“ಎಲ್ಲಾ ಮಾತಾಡಿ ಆಯ್ತಲ್ಲಾ. ಮತ್ತಿನೇನು”
“ಅದು ಹಂಗಲ್ವರಾ. ನೋಡಿ ಶಾನೆ ಬೆಳಿಗ್ಗೆ ಎದ್ದು ನಿಮ್ಮನೀ ತಾವನೇ ಪಸ್ಟ ಬರಾದು. ನೀವ್ ಬೇರೆ ಆಪೀಸಿಗೆ ಹೋಯ್ತೀನಿ ಅಂತೀರಿ. ಕರೆಕ್ಟ್ ಠೇಮ್ಗೆ ಬರಬೇಕು ಅಲ್ವರಾ?”
“ಹೂಂ, ಹೌದು. ಆಗಲೇ ಹೇಳಿದ್ನಲ್ಲಾ. ಈಗ್ಯಾಕೆ ರಾಗ ಹಾಕ್ತೀಯಾ?”
” ನಂಗೆ ಒಂದು ಚಟ ಐತೆ. ಬೋ…ವರ್ಷದಿಂದ. ನೀವು ಇಲ್ಲಾ ಅನ್ನಕಿಲ್ಲಾ. ಹಂಗಂದ್ರೆ ನಾ ವೋಳ್ತೀನಿ. ನಂಗೇನು ಬಿಡೇ ಇಲ್ಲ. ನೀವು ಹೂಂ ಅಂದಮ್ಯಾಲೇ ಒಪ್ಗಳದು ಕೆಲಸಕ್ಕೆ ಆಯ್ತರಾ?”
ತತ್ತರಕಿ. ಇದೇನು ಇವಳದ್ದು ವರಸೆ. ಮನಸ್ಸಿಗೆ ಸ್ವಲ್ಪ ಕಿರಿ ಕಿರಿ ಅನಿಸಿದರೂ ಶಾಮಲಾ “ಆಯ್ತು. ಅದೇನಂತ ಹೇಳು.”
“ನೋಡಿ ನಾ ಬೆಳಗ್ಗೆ ಬಂದವಳೇ ಮನೆ ಮುಂದೆ ನೀರಾಕಿ ರಂಗೋಲಿ ಹಾಕ್ತೀನಿ. ಅಷ್ಟರಾಗೆ ನಂಗೊಂದು ಲೋಟ ಖಡಕ್ ಚಾ ಮಾಡ್ಕೊತ್ರಾ? ಅದಿಲ್ಲ ಅಂದರೆ ನನ್ನ ಕೈ ಕಾಲು ಆಡಾಕಿಲ್ಲ.”
ಯಾಕೊ ಇವಳದ್ದು ಅತೀ ಆಯ್ತು ಅನಿಸಿದರೂ ಅವಳ ಮಾತಿಗೆ ಒಪ್ಪಿದ ಶಾಮಲಾ ” ಸರಿ ಬಾ ಕೆಲಸಕ್ಕೆ. ಮಾಡ್ಕೊಡ್ತೀನಿ” ಅಂದು ಕೆಲಸದವರಿಬ್ಬರನ್ನೂ ಸಾಗಾ ಹಾಕಿದಳು. ದೂರದಲ್ಲಿ ಹೋಗುತ್ತಿರುವ ನಿಂಗಿ ತಿರುಗಿ ತಿರುಗಿ ತನ್ನ ಮನೆಯತ್ತ ನೋಡುತ್ತ ಏನೊ ಹೇಳಿಕೊಂಡು ಹೋಗುತ್ತಿರುವುದನ್ನು ಕಂಡು ನಾಳೆ ಬರ್ತಾಳೊ ಇಲ್ಲವೊ ಕೆಲಸಕ್ಕೆ ಎಂಬ ಅನುಮಾನ ಕಾಡತೊಡಗಿತು.
ಅವರಿಬ್ಬರೂ ಅತ್ತ ಹೋದ ಮೇಲೆ ಇತ್ತ ಅಕ್ಕನೊಂದಿಗೆ ಮತ್ತೊಂದು ರೌಂಡ್ ಚಾ ಹೀರುತ್ತ ಹರಟೆ ಮುಗಿಯುವಷ್ಟರಲ್ಲಿ ಕತ್ತಲಾಗಿತ್ತು.
ಮಾರನೇ ದಿನ ಬೆಳಗ್ಗೆ ಹೇಳಿದ ಸಮಯಕ್ಕೆ ನಿಂಗಿಯ ಆಗಮನ ಆಗಿದ್ದು ಕಂಡ ಶಾಮಲೆ ಬಲು ಉತ್ಸಾಹದಿಂದ ” ಬಾ ಬಾರೆ ನಿಂಗಿ. ನೀರಾಕು ಅಷ್ಟರಲ್ಲಿ ನಾನು ಚಾ ಮಾಡುತ್ತೇನೆ. ನಾನೂ ಕುಡಿದಿಲ್ಲ. ಇಬ್ಬರೂ ಕೂತು ಕುಡಿಯೋಣ. ಅವರ್ಯಾರೂ ಇನ್ನೂ ಎದ್ದಿಲ್ಲ.” ಎಂದನ್ನುತ್ತ ಚಾ ಮಾಡಲು ಅಣಿಯಾದಳು.
ಹತ್ತೇ ನಿಮಿಷದಲ್ಲಿ ಬಂದ ನಿಂಗಿ ಬಗಲಿಂದ ಒಂದು ಲೋಟ ತೆಗೆದು ಮುಂದಿರಿಸಿಕೊಂಡು ಕೂತಳು.
“ಇದೇನೆ ನಿಂಗಿ ಲೋಟ ಯಾಕೆ ತಂದೆ? ನಮ್ಮನೆಯಲ್ಲಿ ಇಲ್ವಾ?”
“ಅದು ಹಾಗಲ್ವರಾ. ನಾ ದಿನಾ ಈ ಲೋಟದಾಗೆ ಕುಡಿಯದು. ಇದಕ್ಕೇ ಬಗ್ಗಸಿ.”
ಆ ಲೋಟವೋ ಸಮಾ ಮೂರು ಕಪ್ ಟೀ ಹಿಡಿವಷ್ಟು ದೊಡ್ಡದು. ಉಪಾಯವಿಲ್ಲದೆ ಶಾಮಲಾ ಅಷ್ಟೂ ಟೀಯನ್ನು ಅವಳ ಲೋಟಕ್ಕೆ ಬಗ್ಗಿಸಿ ಇನ್ನು ಹಾಲು ತರುವವರೆಗೂ ಇವತ್ತಿನ ಬೆಳಗಿನ ಟೀ ಪಂಗನಾಮ ಅಂದುಕೊಳ್ಳುವಷ್ಟರಲ್ಲೇ ;
“ಅಮ್ಮಾ ಇದೇನಿದು ಸಕ್ರೆ ಹಾಕಿಲ್ವರಾ? ಒಸಿ ಸಕ್ರೆ ಹಾಕಿ.”
ಪಂಗನಾಮ ಆದ ಟೀ ಜೊತೆಗೆ ಇವಳ ಬೇಡಿಕೆನೂ ಕೇಳಿ ಸಿಟ್ಟು ನೆತ್ತಿ ಏರುತ್ತಿದ್ದರೂ ಸಹಿಸಿಕೊಂಡು ಸಕ್ಕರೆ ಹಾಕಿ ಏನೂ ಮಾತಾಡದೇ ಅಡುಗೆ ಮನೆ ಸೇರಿದಳು ಶಾಮಲಾ. ಅವಳಿಗೆ ಇವಳ ಸ್ವಭಾವ ಕಾಡಲು ಶುರುವಾಯಿತು. ಅಲ್ಲಾ ಅಮ್ಮಾ ನೀವು ಟೀ ಕುಡದರಾ? ಇಲ್ಲಾ ಇದರಲ್ಲೇ ನಿಮಗೂ ಇಟ್ಟುಕೊಂಡು ಹಾಕಿ ಅನ್ನಬಾರದಾ? ಯಾಕೊ ಇವಳು ಬಹಳ ಸಲುಗೆ ತಗೋತಿದ್ದಾಳೆ. ತನ್ನ ಅಸಹಾಯಕತೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾಳೆ ಅನಿಸತೊಡಗಿತು.
ನಿಂಗಿಯ ಪಾತ್ರೆ ತೊಳೆಯುವ ಸೌಂಡಿಗೆ ಮನೆ ಮಂದಿಯೆಲ್ಲ ಎದ್ದಿದ್ದಾಯಿತು. ಗಂಡ ಆಗಲೇ ಹೋಗಿ ತಂದಿಟ್ಟ ಹಾಲಲ್ಲಿ ಟೀ ಮಾಡುತ್ತಿರುವಾಗ ಮಕ್ಕಳಿಬ್ಬರೂ ನಿಂಗಿಯನ್ನು ದುರುಗುಟ್ಟಿಕೊಂಡು ನೋಡುತ್ತಿರುವುದ ಕಂಡು ನಗು ತಡೆಯಲಾಗಲಿಲ್ಲ. ಬೆಳಗಿನ ಅವಳ ಜೋರಾದ ಮಾತು ಬಹುಶಃ ಇವರೆಲ್ಲರಿಗೂ ಕಿರಿ ಕಿರಿ ತಂದಿದ್ದಂತೂ ನಿಜ. ಇನ್ನೆಲ್ಲಿ ಅವಾಂತರ ಮಾಡಿ ಇವಳೂ ಕೆಲಸಕ್ಕೆ ಬರದಂತೆ ಆದರೆ ಎಂಬ ಆತಂಕ ಶುರುವಾಗಿದ್ದೇ ತಡ ಅವರಿಬ್ಬರಿಗೂ ಸಂಜ್ಞೆ ಮಾಡಿ ಒಳ ಕರೆದು ಸಮಾಧಾನದಿಂದ ಇರುವಂತೆ ಹೇಳಿ ಚಾ ಕೊಟ್ಟು ಅವರವರ ರೂಮಿಗೆ ಕಳಿಸಿ ಅಡಿಗೆಯ ಕೆಲಸದಲ್ಲಿ ಮಗ್ನವಾದಳು.
“ಅಮ್ಮಾ ನಾ ಬರ್ಲಾ?”
“ಅಲ್ವೆ ನಿಂಗಿ ನೆಲ ಒರೆಸೋದಿಲ್ವಾ? ಬಟ್ಟೆ ಬೇರೆ ಇದೆ”
“ಒಂದು ಕೆಲಸ ಮಾಡಿ. ನನಗೆ ದುಡ್ಡು ಕೊಟ್ಬುಡಿ. ನಾನು ನಾಳೆ ಬೆಳಗ್ಗೆ ಬರುವಾಗ ನಂಗೆ ಬೇಕಾದಂತ ಒರೆಸೊ ಕೋಲು ತಕ ಬತ್ತೀನಿ. ಇನ್ನು ಬಟ್ಟೆ ಇವತ್ತಿಂದು ನಾಳೆದು ಎಲ್ಲಾ ಸೇರಿ ತೊಳೆದ್ರಾಯ್ತು ಬುಡಿ. ನಂಗೂ ಠೇಮ್ ಆತದೆ. ಇನ್ನೊಂದು ಮನೆಗೆ ರಂಗೋಲಿ ಹಾಕೋಕೆ ಹೋಯ್ ಬೇಕು. ಬಿರೀನೆ ಕೊಡಿ. ನಾ ಮೋಸ ಗೀಸಾ ಮಾಡುವವಳು ಅಲ್ಲಾ ಆಯ್ತಾ?”
ಶಾಮಲಾ ಮರು ಮಾತಾಡದೇ ಮುನ್ನೂರು ರೂಪಾಯಿ ಕೊಟ್ಟು ಕಳಿಸುತ್ತಾಳೆ.
ಅವಳು ಅತ್ತ ಹೋಗಿದ್ದೇ ತಡ ಗಂಡ “ಯಾರೆ ಅವಳು? ಅದೆಷ್ಟು ಜೋರು ಮಾತು?, ಎಲ್ಲಿ ಸಿಕ್ಕಿದ್ಲೆ? ಛೆ!ಇವತ್ತಿನ ನಿದ್ದೆ ಎಲ್ಲಾ ಹಾಳಾಯ್ತು. ಹೋಗಿ ಹೋಗಿ ಭಾನುವಾರವೇ ಬರಬೇಕಾ?”
ಸಿಡುಕಿದ ಗಂಡನ ಮಾತು ಜೊತೆಗೆ ಸಾಥ್ ಕೊಟ್ಟ ಮಕ್ಕಳ ಸಿಡುಕು ಶಾಮಲಾ ಸುಸ್ತೊ ಸುಸ್ತು.
“ರೀ.. ನಂಗೂ ಯಾಕೊ ತಲೆ ಕೆಟ್ಟೋಯ್ತು. ಅವಳು ಬಲು ಘಾಟಿ ಅನಿಸ್ತಾಳ್ರಿ. ಬಂದ ಒಂದೇ ದಿನದಲ್ಲಿ ನನ್ನ ಹೇಗೆ ಆಟ ಆಡಿಸಿದಳು ನೋಡಿ. ಏನ್ಮಾಡೋದು ಉಪಾಯ ಇಲ್ಲ. ಮನೆ ಕೆಲಸಕ್ಕೆ ಯಾರೂ ಸಿಗೋದಿಲ್ಲಾರಿ. ನೋಡೋಣ ಸ್ವಲ್ಪ ತಿಳಿ ಹೇಳ್ತೀನಿ. ಸ್ವಲ್ಪ ಸುಧಾರಿಸಿಕೊಳ್ಳಿ. ತಿಂಡಿ ಮಾಡ್ತೀನಿ. ಸ್ನಾನ ಮಾಡಿ ದೇವರ ಪೂಜೆ ಮಾಡಿ ಬನ್ನಿ.”
ಇವಳ ಅವಸ್ಥೆ ಕಂಡು ನಕ್ಕು “ಆಯ್ತು ಮಾರಾಯ್ತಿ. ನೀನು ಟೆನ್ಷನ್ ಮಾಡಿಕೊಂಡು ಬಿಪಿ ಜಾಸ್ತಿ ಮಾಡಿಕೊಳ್ಳ ಬೇಡಾ. ತಿಂಡಿ ರೆಡಿ ಮಾಡು.”
ಬೆಳಗಿನ ಮೂಡು ಕೆಟ್ಟೋದರೆ ದಿನವೆಲ್ಲಾ ಒಂದು ರೀತಿ ಅಸಮಾಧಾನ ಆಗೋದು ಗ್ಯಾರಂಟಿ. ಇದನ್ನು ಸರಿಪಡಿಸಿಕೊಳ್ಳಬೇಕು ಅಂದರೆ ಈ ವಾತಾವರಣದಿಂದ ಹೊರಗೆ ಬರಬೇಕು. ಹೇಗಿದ್ದರೂ ಶಾಪಿಂಗ್ ಕೆಲಸ ಇದೆ. ಯಾವುದಾದರೂ ಮಾಲೆಲ್ಲಾ ಸುತ್ತಾಡಿ ಬೇಕಾಗಿದ್ದೆಲ್ಲ ಖರೀದಿಸಿ ಅಲ್ಲೇ ಹೊರಗೆಲ್ಲಾದರೂ ತಿಂದು ಬಂದರಾಯಿತೆಂಬ ಗಂಡ ಮಕ್ಕಳ ಸಲಹೆಗೆ ಶಾಮಲಾಳೂ ಒಪ್ಪಿದಳು. ಅವಳಿಗೂ ಏನು ಮಾಡುವ ಉತ್ಸಾಹ ಇರಲಿಲ್ಲ.
ಮಾರನೇ ದಿನ ಉದ್ದ ಒರೆಸುವ ಕೋಲಿನೊಂದಿಗೆ ನಿಂಗಿಯ ಆಗಮನ ಸಮಯಕ್ಕೆ ಸರಿಯಾಗಿ. ಪರವಾಗಿಲ್ವೆ ಸಮಯಕ್ಕೆ ಸರಿಯಾಗಿ ಬರ್ತಾಳೆ!
“ಅಮ್ಮಾ ಕೋಲು ತಂದೀವ್ನಿ. ಇನ್ನೂ ಐವತ್ತು ರೂಪಾಯಿ ನೀವೇ ಕೊಡಬೇಕು. ಅಂಗಡಿಯವನು ನನಗೆ ಗುರ್ತಾ. ನಾಳೆ ಕೊಡ್ತೀನಿ ಹೇಳಿ ತಂದೀವ್ನಿ. ಎತ್ ಮಡಗಿ. ನಾ ಬಿರೀನೆ ಎಲ್ಲಾ ಕೆಲಸ ಮಾಡಿ ಹೋಯ್ತಿನಿ. ಚಾಕ್ಕಿಡಿ ಬಂದೆ.”
ಅಬ್ಬಾ!ಇವಳ ಮಾತೆ. ಇವಳನ್ನು ಹೇಗಪ್ಪಾ ಸಹಿಸಿಕೊಳ್ಳೋದು ದೇವರೆ!
“ನಿಂಗಿ ಬಾ ಇಲ್ಲಿ. ಎಲ್ಲರೂ ಮಲಗಿದ್ದಾರೆ. ಸ್ವಲ್ಪ ಸಣ್ಣ ಧ್ವನಿಯಲ್ಲಿ ಮಾತಾಡು. ಪಾತ್ರೆ ಡಬ ಡಬ ಸೌಂಡ ಮಾಡಬೇಡಾ. ಗೊತ್ತಾಯ್ತಾ?”
ನಿಂಗಿ ನಗುತ್ತ “ಹಾಂಗ ಅಮ್ಮಾ? ನೋಡಿ ನಾನು ಸ್ವಲ್ಪ ಒರಟು. ಆದರೆ ನನ್ನ ಮನಸ್ಸು ಬಂಗಾರಾ ಕಣಮ್ಮೋ. ನೀವು ಹೇಳಿದಾಂಗೇ ಆಗಲಿ. ಅಪ್ಪಾವರು ಮಕ್ಕಳು ಮಲಕಳ್ಳಿ ಬಿಡಿ. ನಾ ಮೆತ್ತಗೆ ಕೆಲಸ ಮಾಡಿಕೊಂಡು ಹೋಯ್ತಿನಿ. ನೀವ್ ಚಿಂತಿ ಮಾಡ್ಬೇಡಿ.”
ನಿಂಗಿಯ ಮಾತಿಗೆ ಅವಕ್ಕಾದ ಶಾಮಲ ಸದ್ಯ ಇಷ್ಟಾದರೂ ತಿಳುವಳಿಕೆ ಇದೆಯಲ್ಲಾ. ತಮ್ಮನೆಗೆ ಹೇಗೆ ಬೇಕೊ ಹಾಗೆ ಪಳಗಿಸಿಕೊಳ್ಳುವುದು ಕಷ್ಟ ಇಲ್ಲ ಎಂಬ ನಂಬಿಕೆ ಬಂತು. ಖುಷಿಯಿಂದ ಅವಳೊಂದಿಗೆ ತಾನೂ ಚಾ ಕುಡಿದು ತನ್ನ ಕೆಲಸಕ್ಕೆ ಅಣಿಯಾದಳು.
ಒರೆ ಕಣ್ಣಿನಲ್ಲಿ ನಿಂಗಿಯ ಕೆಲಸದತ್ತ ಗಮನ ಹರಿಸಿದ ಶಾಮಲಾ ಅವಳು ಕೆಲಸ ಮಾಡುವ ಪರಿ ಕಂಡು ಸಮಾಧಾನಗೊಂಡಳು. ಸದ್ಯ ದೊಡ್ಡ ಸಮಸ್ಯೆ ಪರಿಹಾರ ಆಗುವ ಲಕ್ಷಣ. ತಾನಿನ್ನು ನಿರಾಳವಾಗಿ ಇರಬಹುದು. ಎಷ್ಟು ಕೆಲಸ ಮನೆ ಎಂದ ಮೇಲೆ. ಹೊರಗೂ ಒಳಗೂ ದುಡಿದು ದುಡಿದು ಸಾಕಾಗಿ ಹೋಗಿದೆ. ಎಷ್ಟು ಕೆಲಸದವರು ಆಯ್ತೊ ಏನೊ. ತನ್ನ ಹಣೆಬರಹಕ್ಕೆ ಒಬ್ಬರಾದರೂ ನಿಯತ್ತಿನ ಕೆಲಸದವರು ಸಿಕ್ಕಿರಲಿಲ್ಲ. ಅವರುಗಳ ಜೊತೆ ಏಗಿ ಏಗಿ ಸಾಕಾಗಿ ಹೋಗಿತ್ತು. ಈ ಅವತಾರಕ್ಕೆ ಯಾರೂ ಬೇಡಾ ಎಂದು ನಾವೇ ಎಲ್ಲ ಕೆಲಸ ಮಾಡಿಕೊಂಡಿದ್ದೂ ಇದೆ. ಆದರೆ ಈ ದೊಡ್ಡ ಸ್ವಂತ ಮನೆಗೆ ಬಂದ ಮೇಲೆ ನಾವೇ ಮಾಡಿಕೊಂಡು ಹೋಗೋದೂ ಕಷ್ಟ ಆಗುತ್ತಿದೆ. ಮತ್ತೆ ಕೆಲಸದವರ ಹುಡುಕಾಟ. ಒಂದೊಂದೇ ನೆನಪುಗಳು ಬಿಚ್ಚಿಕೊಳ್ತಾ ಪಟ್ಟ ಪಾಡು ಆ ದೇವರಿಗೇ ಪ್ರೀತಿ. ಇರೊ ಇಬ್ಬರು ಗಂಡು ಮಕ್ಕಳು ಎದೆ ಎತ್ತರಕ್ಕೆ ಬೆಳೆದಿದ್ದಾರೆ. ಗಂಡನಿಗೂ ಇನ್ನೊಂದು ಐದು ವರ್ಷಕ್ಕೆ ರಿಟೈರ್ಡ. ತಾನಂತೂ ಪೂರ್ತಿ ಸರ್ವೀಸ್ ಮುಗಿಸೋದು ಕಾಣೆ. ಏನಾಗುತ್ತೊ ಏನೊ. ಹೀಗೆ ಶಾಮಲಾಳ ಯೋಚನಾ ಲಹರಿ ಎಲ್ಲೆಲ್ಲಿಗೊ ಎಳಕೊಂಡು ಹೋಗುತ್ತಿದೆ.
“ಅಮ್ಮಾ ಕಾಸು ಕೊಡಿ. ಕೆಲಸ ಎಲ್ಲಾ ಆಯ್ತು. ಬಟ್ಟೆನೂ ಒಣ ಹಾಕಿದ್ದೀನಿ. ಒಸಿ ನೋಡ್ಕಳಿ.”
“ಆಯ್ತು. ತಗ ದುಡ್ಡು. ಚಂದ ಕೆಲಸ ಮಾಡ್ತೀಯಾ. ಋಷಿ ಆಯ್ತು ನೋಡು. ಹೀಗೆ ತಪ್ಪದೆ ಕೆಲಸ ಮಾಡಿಕೊಂಡು ಹೋಗು” ಅಂದಿದ್ದೇ ತಡ ನಿಂಗಿ ಕಣ್ಣುಗಳು ಬೆಳಗಿದವು!
ಬಿಡೇ ಇಲ್ಲದ ಮಾತು ಅವಳ ಮುಗ್ಧತೆ ನಗು ತರಿಸಿತು ಶಾಮಲಳಿಗೆ.
ಬರಬರುತ್ತ ನಿಂಗಿ ಮನೆ ಕೆಲಸಕ್ಕೆ ಒಗ್ಗಿಕೊಂಡಿದ್ದಲ್ಲದೇ ಮನೆಯ ಎಲ್ಲ ಜನರ ಪ್ರೀತಿ ವಿಶ್ವಾಸ ಗಳಿಸಿಕೊಳ್ಳುವುದರಲ್ಲೂ ಯಶಸ್ವಿಯಾದಳು. ಇಷ್ಟೇ ಕೆಲಸ ಎಂದು ಯಾವತ್ತೂ ಎಗರಾಡದ ನಿಂಗಿ ಯಾವ ಕೆಲಸ ಹೇಳಿದರೂ ಮರು ಮಾತಾಡದೆ ಒಪ್ಪವಾಗಿ ಮಾಡಿ ಮುಗಿಸುತ್ತಿದ್ದದ್ದು ಕಂಡು ಒಮ್ಮೆ ಶಾಮಲಾಳ ಗಂಡನೇ ಅವಳಿಗೆ ಇನ್ನೂ ಐನೂರು ಜಾಸ್ತಿ ಕೊಡು ಮಾರಾಯ್ತಿ. ನಾವು ಏನೇನಕ್ಕೋ ಖರ್ಚು ಮಾಡ್ತೀವಿ. ಪಾಪ ನಿಯತ್ತಿನ ಹೆಂಗಸು. ಬಡತನ ಇದ್ದರೂ ಕೈ ಬಾಯಿ ಸ್ವಚ್ಛ ಇದೆ. ಇಂತಹವರಿಗೆ ಕೊಟ್ಟರೆ ನಮಗೂ ಒಳ್ಳೆಯದಾಗುತ್ತದೆ ಎಂದು ನಿಂಗಿ ಸಂಬಳವೂ ಜಾಸ್ತಿ ಆಯಿತು ಕೆಲಸಕ್ಕೆ ಸೇರಿ ಎರಡು ತಿಂಗಳಲ್ಲೆ!
ಇನ್ನೇನು ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ. ಮನೆಯೆಲ್ಲಾ ಸ್ವಚ್ಛ ಮಾಡಬೇಕು. ಈ ಬಾರಿ ಗಂಡ ಮಕ್ಕಳಿಗೆ ಗೋ ಗರೆಯೊ ಪ್ರಮೇಯ ಇಲ್ಲ. ಎಲ್ಲಾ ನಿಂಗಿಗೇ ಪೂಸಿ ಹೊಡೆದು ನಾಲ್ಕು ಕಾಸು ಜಾಸ್ತಿ ಕೊಟ್ಟು ಕೆಲಸ ಮಾಡಿಸಿಕೊಂಡರಾಯಿತು. ನಾಳೆ ಅವಳಿಗೆ ಹೇಳಬೇಕು. ಅವಳಿಗೂ ಹೊಸ ಸೀರೆ ಕೊಡೋಣ ಪಾಪ! ಉಟ್ಟುಕೊಳ್ಳಲಿ. ಇದೇ ಯೋಚನೆಯಲ್ಲಿ ನಿದ್ದೆಗೆ ಜಾರಿದ್ದೇ ಗೊತ್ತಾಗಲಿಲ್ಲ ಶಾಮಲಳಿಗೆ. ಇತ್ತೀಚೆಗೆ ಸಂತೃಪ್ತಿಯ ನಿದ್ದೆ ಅವಳದಾಗಿತ್ತು. ಆರೋಗ್ಯವೂ ಸುಧಾರಿಸುತ್ತಿದೆ. ದೇಹದ ದಣಿವೂ ಕಡಿಮೆ ಆಗಿದೆ. ಅಂತೂ ನಿಂಗಿಯು ಕೆಲಸಕ್ಕೆ ಬಂದ ಮೇಲೆ ಶಾಮಲಳಿಗೆ ನವೋಲ್ಲಾಸ.
ಎಂದಿನಂತೆ ಆಗಮಿಸಿದ ನಿಂಗಿ ಕೆಲಸವನ್ನು ಮುಗಿಸಿ ಇವಳು ಹೇಳುವ ಮೊದಲೇ “ಮತ್ತೆ ದೀಪಾವಳಿ ಹಬ್ಬ ಹತ್ತಿರ ಬರ್ತಾ ಐತೆ. ಹಬ್ಬದ ಕೆಲಸ ಏನಾರು ಐತರಾ? ಇದ್ದರೆ ವೋಳಿ. ಎಲ್ಲರ ಮನೆ ಕೆಲಸ ಮುಗಿಸಿ ಮತ್ತೆ ಬಂದು ಮಾಡ್ಕೊಟ್ಟೋಯ್ತಿನಿ. ಹಂಗೆ ಒಂದು ಹೊಸಾ ಸೀರೆ ಮಡಗಿ ಆಯ್ತಾ? ಇಲ್ಲಾ ಅನ್ಬೇಡಿ. ನಾವು ಬಡೂರು.”
“ಆಗಲಿ. ನಾನೇ ಹೇಳೋಣಾ ಅಂತಿದ್ದೆ. ನೀನೆ ಕೇಳಿದೆ. ನಾಳೆ ಬಂದಾಗ ಹೇಳ್ತೀನಿ. ಏನೇನು ಕೆಲಸ ಅಂತ. ಹೋಗಿ ಬಾ.”
“ಆಯ್ತ್ರವ್ವಾ ಬತ್ತೀನಿ.”
ಅವಳ ಬಿರುಸಾದ ನಡಿಗೆ ಕಂಡು ” ಸ್ವಲ್ಪ ನಿಧಾನಕ್ಕೆ ಹೋಗೇ ತಾಯಿ. ಎಲ್ಲಾದರೂ ಎಡವಿ ಬಿಟ್ಟಿಯಾ. ಬೆಳಗ್ಗೆ ಬಂದುಬಿಡು ತಪ್ಪಿಸಬೇಡಾ.” ಶಾಮಲಾಳ ಆತಂಕದ ಮಾತಿಗೆ ನಿಂಗಿ ತಿರುಗಿ ನಕ್ಕು ಗೋಣಲ್ಲಾಡಿಸುತ್ತಾ ನಡೆದಳು.
ನಾಲ್ಕು ತಿಂಗಳಿಂದ ನಿರಂತರವಾಗಿ ನಿಯತ್ತಾಗಿ ಕೆಲಸಕ್ಕೆ ಬರುತ್ತಿರುವ ನಿಂಗಿ ಶಾಮಲಳಿಗೆ ಎಷ್ಟು ಹೊಂದಿಕೊಂಡಳೆಂದರೆ ಅಚ್ಚುಕಟ್ಟಾಗಿ ಹಬ್ಬದ ಕ್ಲೀನಿಂಗ್ ಕೆಲಸ ಮುಗಿಸಿದ್ದೂ ಅಲ್ಲದೆ ಹಬ್ಬದ ದಿನವೂ ಕೆಲಸಕ್ಕೆ ಬರ್ತೀನಿ. ಬಣ್ಣ ಹಾಕಿ ರಂಗೋಲಿ ಹಾಕಬೇಕಲ್ವರಾ? ಅಂದಿದ್ದು ಅವಳ ಕಾಳಜಿಗೆ ಬೆರಗಾದಳು. ಈ ಖುಷಿ ಅಕ್ಕನಲ್ಲಿ ಹಂಚಿಕೊಳ್ಳುವ ತರಾತುರಿ.
ಅಕ್ಕನಿಗೆ ಫೋನಲ್ಲಿ ವರದಿ ಅರುಹುತ್ತಾಳೆ;
“ಥೇಟ್ ಮಾದೇವಿ ತರನೇ ಇವಳೂ ಕಣೆ ಅಕ್ಕಾ. ತುಂಬಾ ಚೆನ್ನಾಗಿ ಕೆಲಸ ಮಾಡ್ತಾಳೆ. ನಿನಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಒಂದು ದಿನ ಕೂಡಾ ತಪ್ಪಿಸೋದಿಲ್ಲ. ಬಹಳ ನಿಯತ್ತಿನ ಹೆಂಗಸು. ನಾನೇ ಈ ಹಬ್ಬಕ್ಕೆ ಇನ್ನೂ ಐದು ನೂರು ರೂಪಾಯಿ ಜಾಸ್ತಿ ಸಂಬಳ ಕೊಡೋಣ ಅಂತಿದ್ದೀನಿ. ಅವಳಿಗೆ ಅಂತ ಹಬ್ಬಕ್ಕೆ ಸೀರೆ ತಂದಿದ್ದೇನೆ. ಮನೆ ಧೂಳೆಲ್ಲ ಒರೆಸಿ, ಹಿತ್ತಾಳೆ ಪಾತ್ರೆ ಎಲ್ಲ ಎಷ್ಟು ಪಳ ಪಳ ಬೆಳಗಿದ್ದಾಳೆ ಅಂದರೆ ಇಷ್ಟು ವರ್ಷ ಯಾರೂ ಇಷ್ಟೊಳ್ಳೆ ಕೆಲಸದವರು ಸಿಕ್ಕೇ ಇರಲಿಲ್ಲ. ನನಗಂತೂ ಈ ಬಾರಿ ಹಬ್ಬ ಮಾಡೋದು ಭಯಂಕರ ಉತ್ಸಾಹ ತರಿಸುತ್ತಿದೆ. ಎಲ್ಲಾ ಕೆಲಸ ಅವಳೇ ಮಾಡಿದ್ದರಿಂದ ನನಗೆ ಸುಸ್ತು ಇಲ್ಲ. ಆರೋಗ್ಯ ಕೂಡಾ ಸುಧಾರಿಸುತ್ತಿದೆ. ನೀವೂ ಎಲ್ಲಾ ನಾಳೆ ಬೆಳಿಗ್ಗೆ ಬೇಗ ನಮ್ಮನೆಗೆ ಬಂದು ಬಿಡಿ. ಎಲ್ಲರೂ ಸೇರಿ ಇಲ್ಲೇ ಹಬ್ಬ ಮಾಡೋಣ. ಇವರೂ ಕೂಡಾ ನಿಮ್ಮೆಲ್ಲರನ್ನೂ ನಮ್ಮನೆಗೇ ಕರಿ ಅಂದಿದ್ದಾರೆ. ಮರಿ ಬೇಡಾ ಕಣೆ. ಫೋನಿಡ್ಲಾ? ಸ್ವಲ್ಪ ಒಳಗಡೆ ಹಬ್ಬಕ್ಕೆಲ್ಲ ಜೋಡಿಸ್ಕೋಬೇಕು.”
ತಂಗಿಯ ಉತ್ಸಾಹ ಕಂಡು ಖುಷಿಯಾದರೂ ತಾನು ಹೇಳಬೇಕಾದ ವಿಷಯಕ್ಕೆ ಆಸ್ಪದನೇ ಕೊಡದೆ ಫೋನಿಟ್ಟು ಬಿಟ್ಟಳಲ್ಲಾ. ಹೇಗೆ ತಿಳಿಸಲಿ ಇವಳಿಗೆ? ಅವಳ ಖುಷಿ ಹೀಗೆ ಇರಲಿ. ಹೇಗಿದ್ದರೂ ಬೆಳಗ್ಗೆ ಹೋಗುತ್ತೀನಲ್ಲಾ. ಆಗಲೇ ಹೇಳಿದರಾಯಿತು. ಮತ್ತೆ ಫೋನು ಮಾಡೋದು ಬೇಡಾ ಎಂದು ಸುಮ್ಮನಾಗುತ್ತಾಳೆ ಶಾರದ.
ಹಬ್ಬದ ಬೆಳಿಗ್ಗೆ ಆರಾಯಿತು ಏಳಾಯಿತು ನಿಂಗಿ ಪತ್ತೆ ಇಲ್ಲ. ಶಾಮಲಳಿಗೆ ಆತಂಕ. ಎಲ್ಲೋದಳು ಇವಳು? ಏನಾಯಿತು ಇವಳಿಗೆ? ಹೋಗಿ ಹೋಗಿ ಹಬ್ಬದ ದಿನವೇ ಕೈ ಕೊಡಬೇಕಾ? ನಿನ್ನೆನೇ ಬರೋದಿಲ್ಲ ಅಂತನಾದರೂ ಹೇಳಬಾರದಿತ್ತಾ? ಛೆ! ಇನ್ನೂ ಮನೆ ಮುಂದೆ ನೀರಾಕಿಲ್ಲ. ಗೊಣಗಿಕೊಳ್ಳುತ್ತ ತಾನೆ ನೀರು ಚಿಮುಕಿಸಿ ಗಡಿಬಿಡಿಯಲ್ಲಿ ರಂಗೋಲಿನೂ ಎಳೆದಿದ್ದಾಯಿತು. ಅಡಿಗೆ ಮನೆ ಕಡೆ ಕಾಲು ಎಳೆದರೂ ಕಣ್ಣು ಮಾತ್ರ ಬೀದಿ ಬಾಗಿಲ ಕಡೆಯೇ ನೆಟ್ಟಿತ್ತು.
ದೂರದಲ್ಲಿ ಅಕ್ಕ ಒಬ್ಬಳೇ ಬರ್ತಿದ್ದಾಳಲ್ಲಾ. ಬಾವ ಎಲ್ಲಿ? ನಡಿಗೆಯಲ್ಲಿ ಗಡಿಬಿಡಿ ಇದೆ. ಯಾಕೊ ಗೊಂದಲವಾದ ಮನಸ್ಸು ತಡಿಲಾರದೆ ತಾನೆ ಅಕ್ಕನ ಸಮೀಪ ಬರುತ್ತಾಳೆ.
“ನಡಿಯೆ ಶಾಮಲಾ ಒಳಗೆ. ಇಲ್ಲಿ ಬೇಡಾ ” ಎಂದು ಹೇಳುತ್ತ ತಂಗಿಯ ಕೈ ಹಿಡಿದುಕೊಂಡೇ ಮನೆ ಒಳಗೆ ಬಂದು ಸೋಫಾದಲ್ಲಿ ಕೂರಿಸುತ್ತಾಳೆ.
“ನೋಡು ಶಾಮಲಾ ನಾನು ಹೇಳೋದು ತಾಳ್ಮೆಯಿಂದ ಕೇಳು. ಉದ್ವೇಗ ಬೇಡಾ. ಈ ಕೆಲಸದವರು ಎಂತಿದ್ದರೂ ಒಂದಿನ ಬಿಟ್ಟು ಹೋಗುವವರೆ. ಆದರೆ ನಿಂಗಿ ಹೀಗೆ ಹೋಗಬಾರದಿತ್ತು. ನನಗೂ ಕೇಳಿ ಬಹಳ ದುಃಖ ಆಯಿತು. ನೀನು ಸಮಾಧಾನ ಮಾಡಿಕೊಳ್ಳಬೇಕು. ನಾ ಹೇಳುವ ವಿಷಯ ಕೇಳಿ ಗಾಬರಿ ಆಗಬೇಡಾ.”
“ಅಯ್ಯೋ! ಅಕ್ಕಾ ಯಾಕೆ ಇಷ್ಟೆಲ್ಲಾ ಪೀಟಿಕೆ? ನೇರವಾಗಿ ವಿಷಯಕ್ಕೆ ಬಾ. ನನಗೆ ಇವತ್ತು ಯಾವ ಕೆಲಸವೂ ಆಗಿಲ್ಲ. ಇಷ್ಟು ಹೊತ್ತಿಗೆ ಸ್ನಾನ ಮಾಡಿ ದೇವರ ಮನೆಯಲ್ಲಿ ಪೂಜೆಗೆ ಅಣಿಗೊಳಿಸಬೇಕಿತ್ತು. ನೋಡು ಆ ನಿಂಗಿ ಬೇರೆ ಬರದೇ ಇವತ್ತೇ ಕೈ ಕೊಟ್ಲು. ಅದೇನು ಅಂತ ಹೇಳು. ಬಾವ ಎಲ್ಲಿ?”
” ಇನ್ನೆಲ್ಲಿ ನಿಂಗಿ ಶಾಮಲಾ. ನಿನ್ನೆ ನಿಮ್ಮನೆಯಿಂದ ಕೆಲಸ ಮುಗಿಸಿ ಹೋಗುವಾಗ ಯಾವುದೋ ಕಾರು ಅಡ್ಡ ಬಂದು ಗುದ್ದಿಕೊಂಡು ಹೋಗಿ ಅವಳು ನಡು ರಸ್ತೆಯಲ್ಲಿ ಅನಾಥ ಶವವಾಗಿ ಬಿದ್ದಿದ್ಲಂತೆ. ಯಾರೊ ನೋಡಿದವರು ಪೋಲಿಸ್ ಸ್ಟೇಷನ್ ಗೆ ವರದಿ ಮುಟ್ಟಿಸಿದ್ದಾರೆ. ಅವಳ ಗಂಡ ನಿನ್ನೆ ರಾತ್ರಿನೆ ಮಾದೇವಿಗೆ ಹೇಳಿ ಕೆಲಸದ ಮನೆಯವರಿಗೆ ತಿಳಿಸಿಬಿಡು. ಇನ್ನು ನಮ್ಮ ನಿಂಗಿ ಇಲ್ಲ ಅಂತ ಕಣ್ಣೀರಿಡ್ತಾ ಹೋದನಂತೆ. ನಿನ್ನೆ ರಾತ್ರಿ ನೀನು ಫೋನ್ ಮಾಡಿದಾಗಲೇ ನಾ ಹೇಳೋಣ ಅಂದರೆ ನೀನು ಫೋನು ಇಟ್ಟುಬಿಟ್ಟೆ. ಸರಿ ಬೆಳಗ್ಗೆ ನಾನೇ ಖುದ್ದಾಗಿ ಬಂದು ಹೇಳೋಣ ಅಂತ ಸುಮ್ಮನಾದೆ.”
ಶಾಮಲಾ ಗರಬಡಿದವಳಂತೆ ಕೂತಿದ್ದಳು. ಸುದ್ದಿ ತಿಳಿದ ಗಂಡ ಮಕ್ಕಳು ಕೂಡಾ ದಂಗಾಗಿ ನಿಂತಿದ್ದರು. ಒಂದು ರೀತಿ ಊಹಿಸಲಾಗದಂತ ಆಘಾತ. ನಿಂಗಿಯ ಬಿರುಸು ನಡಿಗೆ ಕಣ್ಣ ಮುಂದೆ. ಮುಂದಾಗುವ ಘಟನೆಯ ಸೂಚನೆ ವಿಧಿ ತನ್ನ ಬಾಯಿಂದ ಹೇಳಿಸಿತ್ತಾ? ಓಹ್! ವಿಧಿಯೇ ನಮ್ಮ ನಿಂಗಿನೇ ಬೇಕಿತ್ತಾ ನಿನಗೆ? ಅವಳು ಹಿಂತಿರುಗಿ ನೋಡಿ ನಕ್ಕು ಗೋಣಲ್ಲಾಡಿಸಿದ ದೃಶ್ಯ. ಆ ಮೂಲೆಯಲ್ಲಿ ಕೂತ ಲೋಟ ಖಡಕ್ ಚಾಗಾಗಿ ಕಾದಂತೆ. ಮನೆಯೆಲ್ಲ ಒಪ್ಪ ಓರಣ ಮಾಡಿ ಅಂದ ಗೊಳಿಸಿದ ನಿಂಗಿ ಇನ್ನು ಈ ಮನೆಗೆ ಕೆಲಸಕ್ಕೆ ಬರೋದೇ ಇಲ್ಲ ಎಂಬ ಮಾತು ಅರಗಿಸಿಕೊಳ್ಳಲೂ ಆಗುತ್ತಿಲ್ಲ….ಹೊಟ್ಟೆಯಲ್ಲಿ ವಿಪರೀತ ಸಂಕಟ ಅವಳ ನೆನೆದು…..
“ಶಾಮಲಾ ಶಾಮಲಾ” ಅಕ್ಕ ಅಲುಗಾಡಿಸಿದಾಗಲೇ ವಾಸ್ತವಕ್ಕೆ ಬಂದು “ಏನಕ್ಕಾ ನೀನು ಹೇಳ್ತಿರೋದು? ನಿಜಾನಾ?”
“ಹೌದು ಕಣೆ. ಅವಳನ್ನು ಹೋಗಿ ನೋಡಿಕೊಂಡು ಬರೋಣ. ಬರ್ತೀಯಾ? ಎಲ್ಲರೂ ಬಂದು ಬಿಡಿ ನಮ್ಮನೆಗೆ. ಅವಳ ನೆನಪು ಈ ಮನೆಯಲ್ಲಿ ಬಹಳ ಕಾಡುತ್ತದೆ ನಿಮಗೆ. ದಯವಿಟ್ಟು ಸಮಾಧಾನ ಮಾಡಿಕೊಳ್ಳಿ. ಇವತ್ತು ಯಾರೂ ಹಬ್ಬ ಮಾಡುವುದು ಬೇಡ. ಹೇಗಿದ್ದರೂ ದೀಪಾವಳಿ ಹಬ್ಬ ಮೂರು ದಿನ ಇದೆಯಲ್ವಾ? ಕೊನೆಯ ದಿನ ಮಾಡಿದರಾಯಿತು. ನಡಿರಿ ಎಲ್ಲರೂ.”
ಸೀದಾ ನಿಂಗಿಯ ಮನೆಗೆ ಬಂದರೆ ಆಗಲೇ ತುಂಬಾ ಜನ ಸೇರಿದ್ದರು. ಅವಳಿಗಾಗಿ ತಂದ ಹೊಸ ಸೀರೆಯನ್ನು ಶಾಮಲಾ ನಿಂಗಿಯ ಶವಕ್ಕೆ ಹೊದಿಸಿ ಹಬ್ಬಕ್ಕಾಗಿ ತಂದ ಹೂಗಳನ್ನು ಕೂಡಾ ಅವಳ ಪಾದದ ಬಳಿ ಸುರಿದು ತಡೆಯಲಾರದ ದುಃಖದಲ್ಲಿ ಅತ್ತುಬಿಟ್ಟಳು. ಎಲ್ಲರ ಕಣ್ಣೂ ತೇವವಾಯಿತು. ಅವಳ ಅಂತಿಮ ಯಾತ್ರೆ ತಮ್ಮ ಬಳಗದವರದ್ದೇ ಎಂಬ ಭಾವನೆಯಲ್ಲಿ ಪಾಲ್ಗೊಂಡು ಮನೆ ಸೇರಿದಾಗ ಮಧ್ಯಾಹ್ನ ಕಳೆದಿತ್ತು.
ಕ್ಷಣಿಕ ಬದುಕಿನಲ್ಲಿ ಬಂದು ಹೋಗುವವರು ಎಷ್ಟೋ ಜನ. ಆದರೆ ಶಾಶ್ವತವಾಗಿ ನೆನಪಲ್ಲಿ ಉಳಿಯುವವರು, ಕೆಲವೇ ದಿನಗಳಲ್ಲಿ ಆತ್ಮೀಯತೆ ಗಳಿಸಿಕೊಳ್ಳುವವರು ಕೆಲವೇ ಕೆಲವು ಮಂದಿ. ಎಲ್ಲದಕ್ಕೂ ಕಾರಣ ಸನ್ನಡತೆ, ನಂಬಿಕೆ, ಪ್ರೀತಿ,ವಿಶ್ವಾಸ. ಇಂತಹ ಜನ ಜೀವನದಲ್ಲಿ ಸಿಕ್ಕುವುದೂ ಅಪರೂಪ. ಅಂತಹ ಜಾಗಕ್ಕೆ ಶಾಮಲಾಳ ಮನಸ್ಸಿನಲ್ಲಿ ಸೇರಿಬಿಟ್ಟಿದ್ದಳು ಅಪರೂಪದ ನಡತೆಯ ಮನೆಗೆಲಸದ ನಿಂಗಿ!
ಚನ್ನಾಗಿದೆ
ಮೆಚ್ಚುಗೆಗೆ ಧನ್ಯವಾದಗಳು ಮೇಡಂ.
ಸೂಪರ್ ಆಗಿದೆ ನಿಂಗಿಯ ಕಥೆ….
ಬಹಳ ಸಂತೋಷವಾಯಿತು. ಬರೆಯುವ ಕೈಗೆ ಬಲ ಬಂತು. ಧನ್ಯವಾದಗಳು ತಮಗೆ.