ಜೀವ ಹಿಡಿಯಾಗುತ್ತಿದೆ. ಅವರ ಮೆಲು ನಗೆ, ಕಣ್ಣಲ್ಲಿ ಕಾಣದ ಆದರೆ ತುಟಿಯಲ್ಲಿ ತೇಲುವ ನಗೆ ಅಸಹ್ಯ ಹುಟ್ಟಿಸುತ್ತಿದೆ. ಮಾತು ಮಾತಿಗೆ “ಗ್ರಾನೀ” ಅನ್ನುವ, ಚಾಕೊಲೇಟ್ ಬಾಯಿಗೆ ಹಿಡಿಯುವ ಪರಿಗೆ, ಅದನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುವ ತವಕಕ್ಕೆ ಕೆಟ್ಟ ಕೋಪ ಬರುತ್ತಿದೆ. ಇಲ್ಲಿಂದ ಓಡಿ ಹೋಗಬೇಕು, ನನ್ನ ಮನೆಗೆ, ಆದರೆ ಅದು ಎಲ್ಲಿದೆ? ನನ್ನವರು ಯಾರು? ಅಸಲು ನಾನು ಯಾರು? ತಲೆ ತಿರುಗುತ್ತಿದೆ. ” ಸಾಕು ಇನ್ನು ಫ಼ೋಟೋ ತೆಗೆದಿದ್ದು. ಬೇಗ ಬೇಗ ಉಡುಗೊರೆ ಹಂಚಿ. ಉಪಹಾರ ಮುಗಿಸಿ ಹೊರಡೊಣ. ನಾನು ರಾತ್ರಿ ಊರಿಗೆ ಹೊರಟಿರುವೆ. ನನ್ನ ಅಮ್ಮನನ್ನು ನೋಡಲು” ಎಲ್ಲರಿಗಿಂತ ಸ್ವಲ್ಪ ವಯಸ್ಸಾದವಳಂತೆ ಕಾಣುತ್ತಿದ್ದ ಹೆಂಗಸು ನುಡಿದಳು.
ಮೆಲುದನಿಯಲ್ಲಿ ಪಕ್ಕದವಳ ಬಳಿ ಹೇಳಿದಳು.” ತಮ್ಮನ ಹೆಂಡತಿ ಗೊಣಗಲು ಶುರು ಮಾಡಿದ್ದಾಳೆ. ನಿಮ್ಮ ಮನೆಗೆ ಸ್ವಲ್ಪ ದಿನ ಕರೆದೊಯ್ಯಿ ಎಂದು. ನನ್ನ ಹಾಗು ಮದನ್ ಷೆಡ್ಯೂಲ್ ಗೊತ್ತಿದೆಯಲ್ಲ. ಉಸಿರಾಡಕ್ಕೊ ಪುರುಸೊತ್ತಿಲ್ಲ. ಒಮ್ಮೆ ನೋಡಿ ಬರುತ್ತೇನೆ. ಸ್ವಲ್ಪ ಹಣ ಕೊಟ್ಟು ಬರೋಣವೆಂದಿದ್ದೇನೆ.” . ” ಅವರನ್ನು ಕರೆದುಕೊಂಡು ಇಲ್ಲಿ ಸೇರಿಸಿಬಿಡು. ತಿಂಗಳಿಗೆ ಸ್ವಲ್ಪ ಹಣ ಕೊಟ್ಟರೆ ಎಲ್ಲರೂ ನಿರಾಳವಾಗಿರಬಹುದು” ಇನ್ನೊಬ್ಬಳ ಉವಾಚ. ಉಸಿರು ಕಟ್ಟಿತು. ಈ ಮಾತುಗಳನ್ನೆಲ್ಲೊ ಕೇಳಿದ ನೆನಪು. ಮುಂದೆ ಯೋಚಿಸದಂತೆ ತನ್ನನ್ನು ಕೋಣೆಯ ಮಧ್ಯೆ ಕರೆದೊಯ್ದರು. ಅಲ್ಲಿದ್ದ ಕೇಕ್ ಸುತ್ತ ತನ್ನನ್ನು, ಮಿಕ್ಕವರನ್ನು ನಿಲ್ಲಿಸಲಾಗಿತ್ತು. ಸುತ್ತ ಒಳ್ಳೊಳ್ಳೆ ಬಟ್ಟೆ ತೊಟ್ಟು ಸ್ಮರ್ಟ್ ಆಗಿ ಕಾಣುವ ಹೆಣ್ಣು ಗಂಡುಗಳು. ಅವರೆಲ್ಲರ ಕೈಯಲ್ಲೂ ಕ್ಯಾಮೆರ ಅಥವಾ ಮೊಬೈಲು. ಎಲ್ಲಾ ಕಡೆ ಬಲೂನುಗಳು. ಮೆಲುವಾದ ವಾದ್ಯ ಸಂಗೀತ. ತನ್ನ ತೊಳನ್ನು ಗಟ್ಟಿಯಾಗಿ ಹಿಡಿದ ಆಯಾ. ಕೈ ಬಿಡು, ನೋಯುತ್ತಿದೆ ಎಂದು ಕೂಗುವ ಹಾಗಾಯಿತು. ” ಅತ್ತೆ, ಕೂದಲು ಬಿಡಿ, ನೋಯುತ್ತಿದೆ” ಎಲ್ಲಿಂದಲೂ ತೇಲಿ ಬಂತು ಹಿಂದಿನ ನೆನಪು. ತಾನು ಹೇಳಿದ್ದಾ? ಅಥವಾ ತನಗ್ಯಾರೋ ಹೇಳಿದ್ದಾ? ತಲೆ ಕೊಡವಿದೆ.
ಮರುಕ್ಷಣ ಹಾಡು, ತಮ್ಮನ್ನು ಹಿಡಿದು ಡ್ಯಾನ್ಸು, ಬಾಯೊಳಗೆ ಸಿಹಿ ತುರುಕುವುದು, ಅದರ ವೀಡಿಯೋ ಸೆರೆಹಿಡಿಯುವುದು, ಕ್ಯಾಮೆರ ಕ್ಲಿಕ್ಕಿಸುವುದು, ಅದರಿಂದ ತಲೆ ಮತ್ತೆ ಧಿಂ ಎನ್ನುಲು ಶುರುವಾಯಿತು.” ದೆ ಆರ್ ಟಯರ್ಡ್, ಬೇಗ ಮುಗಿಸಿ. ಲೆಟ್ಸ್ ಲೀವ್” ಈಗ ಕೋಣೆಯಲ್ಲಿ ಎರಡು ಗುಂಪಾದವು. ಅವರೆಲ್ಲರ ಕೈಯಲ್ಲೂ ಪ್ಲೇಟ್ ಬಂತು. ಆಯಾಗಳು ವಯಸಾದವರಿಗೆ ತಿನ್ನಿಸಿದ ಶಾಸ್ತ್ರ ಮಾಡಿ, ಪ್ಲೇಟ್ ಬದಿಗಿಟ್ಟರು. ನನ್ನ ಬಾಯಿಗೂ ಏನೋ ಬಿತ್ತು. ತಿನ್ನಲಾಗದೆ ನುಂಗಿದೆ. ” ಸಾಕು, ಕೇಕು, ಬಿಸ್ಕತ್ತು ಅರಗಲ್ಲ. ಆಮೇಲೆ ಹೆಚ್ಚು ಕಡಿಮೆ ಆದರೆ ನೀವೇ ಬಳಿಯಬೇಕು” ದೊಡ್ಡಮ್ಮ ಗುಟುರು ಹಾಕಿದಳು. ಅವಳು ಯಾರು? ತಾನೇಕೆ ಅವಳ ಮಾತಿಗೆ ನೋಟಕ್ಕೆ ಹೆದರುತ್ತೇನೆ? ಇವಳ ಪಟವನ್ನು ಒಮ್ಮೆ ನನಗೆ ತೋರಿಸಿ ಯಾರೊ ಹೇಳಿದ್ದರು. ” ಇವಳು ದೊಡ್ಡಮ್ಮ. ವಯಸ್ಸಾದವರಿಗೆ ಆಶ್ರಮ ನಡೆಸುತ್ತಾಳೆ. ದೊಡ್ಡ ದೊಡ್ಡ ಕಂಪನಿಯವರು ತಮ್ಮ ಸಾಮಾಜಿಕ ಕಳಕಳಿ ತೋರಿಸಲು ಇವಳ ಆಶ್ರಮಕ್ಕೆ ಭೇಟಿ ನೀಡಿ, ಉಡುಗೊರೆಯನ್ನಿತ್ತು, ಸಮಯ ಕಳೆದು ಸಂಭ್ರಮಿಸುತ್ತಾರೆ” ಇನ್ನು ಏನೇನೊ ಹೇಳಿದ್ದರು. ಯಾರದು? ಪ್ರತಿಮಾ? ಶೋಭಾ? ನನ್ನ ಮಗಳಾ? ಸೊಸೆಯಾ? ” ನೀನು ಅಂಥಹವಳೇ, ನನ್ನ ಮಗನ ತಲೆಗೆ ನನ್ನ ವಿರುಧ ಊದುವವಳು.ಅದೇ ನನ್ನ ಮಗಳನ್ನು ನೋಡು, ಬಂಗಾರದ ಹೆಣ್ಣು. ಅದಕ್ಕೆ ಹೇಳುವುದು, ಮಗಳು ಯಾವತ್ತೂ ನಮ್ಮವಳೆ, ಮಗ ಹೆಂಡತಿ ಬರುವವರೆಗೆ ಮಾತ್ರ ನಮ್ಮವನು ಎಂದು” ಈ ಮಾತನ್ನು ನನಗೆ ಯಾರಾದರೂ ಹೇಳಿದರಾ? ನಾನು ಯಾರಿಗಾದರೂ ಮುಖ ತಿವಿದು ಹೇಳಿದ್ದಾ? ತಲೆಯೊಳಗೆ ಹೇಳಲಾಗದ ಯಾತನೆ. ಹಲವಾರು ನೆನಪುಗಳು, ಭಾವನೆಗಳು ಕಲಸಿ ಕಲಸಿ ನರಗಳನ್ನು ಹಿಪ್ಪೆ ಮಾಡಿತ್ತಿರುವಂತೆ. ಸಮುದ್ರದ ಅಲೆಗಳು ನನ್ನ ತಲೆಯೊಳಗೆ ತಾಂಡವ ಮಾಡಿದಂತೆ…. ಕೊಚ್ಚಿಕೊಂಡು ಹೋದಂತೆ…. ಮುಂದಿನ ಕ್ಷಣ ಎಲ್ಲ ಮೌನ. ಎಲ್ಲಾ ಹೊರಟರಾ? ಅಥವಾ ನನ್ನ ಮೆದುಳು ಸ್ತಬ್ದವಾಯಿತಾ?
” ನಾನು ಅಪ್ಲೋಡ್ ಮಾಡಲಾ, ನೀನು ಮಾಡುವೆಯೋ? ಒಬ್ಬಳ ದನಿ. ” ಎಲ್ಲರೂ ಮಾಡಬೇಡಿ, ಒಬ್ಬರು ಎಲ್ಲ ಪಟಗಳನ್ನು ಒಟ್ಟು ಮಾಡಿ ಎಲ್ಲೆಡೆ ಷೇರ್ ಮಾಡಿ, ಮೊದಲು ನಮ್ಮ ಮ್ಯಾನೇಜರ್ ಗೆ ಎಲ್ಲ ಮೇಲ್ ಮಾಡಿ. ಈ ಸಲ ಸೀ ಎಸ್ ಆರ್ ಚಟುವಟಿಕೆಗೆ ನಮ್ಮ ಕಂಪನಿಗೆ ಅವಾರ್ಡ್ ಬರಬೇಕು” ಮಾತುಗಳು ಅಪ್ಪಳಿಸುತ್ತಿತ್ತು. ಎಲ್ಲೂ ಅರ್ಥವಾಗುತ್ತಿತ್ತು, ತಕ್ಷಣ ಮರೆಯಾಗುತ್ತಿತ್ತು. “ಮನೆಯವರ ಜತೆ ಇದ್ದರೆ ಭಯ ಕಡಿಮೆಯಿರುತ್ತದೆ. ಎಲ್ಲೊ ಯಾರ ಜತೆ ಯಲ್ಲೊ ಬಿಟ್ಟರೆ ಘಾಬರಿಯಾಗುತ್ತದೆ. ನೆಮ್ಮದಿಯಾಗಿ ಇರಲು ಆಗುವುದಿಲ್ಲ. ಇಷ್ಟರ ಮೇಲೆ ನಿಮ್ಮಿಷ್ಟ.” ವೈದ್ಯರ ದನಿ. ಯಾರು ಅವರು? ಯಾರ ಬಗ್ಗೆ ಹೇಳಿದರು” ನನಗಾ? ಮಗಳಿಗಾ? ಸೊಸೆಗಾ? ಹಾಗೆ ಕುಸಿದೆ.
ಹಾಸಿಗೆಯ ಮೇಲೆ ಮಲಗಿಸಿದರು. ಮೆತ್ತನೆಯ ರಗ್ಗು ಮೈ ಮೇಲೆ ಬಂತು. ” ಅಂತು ದೊಡ್ಡಮ್ಮ ಜಾಣೆ. ಒಂದು ಪೈ ಖರ್ಚು ಮಾಡದೆ ಹೆಸರು ಮಾಡಿದ್ದಾಳೆ. ಅವರಿವರು ಕೊಟ್ಟ ದುಡ್ಡಿನಿಂದ, ನಮ್ಮ ದುಡಿಮೆಯಿಂದ, ಈ ಪಾಪಿಗಳ ಮನೆ ಜನರಿಂದ ಅವಳು ಉದ್ದಾರ ಆಗುತ್ತಿದ್ದಾಳೆ. ಮೊನ್ನೆ ಅದೆಲ್ಲೊ ವಿದೇಶಕ್ಕೆ ಹೋಗಿ ಬಂದಳಂತೆ” ಆಯಾಗಳ ಮಾತು ಮುಂದುವರೆಯುತ್ತಲೇ ಇತ್ತು. ಕಣ್ಣು ತಂತಾನೇ ಮುಚ್ಚಿತು. ಆಯಾಗಳು ಮಿಕ್ಕ ತಿಂಡಿ ತಿನ್ನುತ್ತಾ ಮಾತಾಡುತ್ತಿದ್ದು ಕೇಳಿಸುತ್ತಿತ್ತು.
“ಅಮ್ಮ” ದನಿಗೆ ಕಣ್ಣು ತೆರೆದೆ. ಯಾರೀತ? ಅಯ್ಯೊ, ಇವನು ನನ್ನ ಮಗ. ಹೆಸರು? ನೆನಪಿಗೆ ಬರುತ್ತಿಲ್ಲ. ಆ ಗುಂಗುರು ಕೂದಲು, ಆ ಅಗಲ ಕಿವಿಗಳು. ಇವನಂತೆ ಇನ್ನೊಬ್ಬರಿದ್ದರು. ಯಾವಾಗಲೂ ನನ್ನ ಜತೆ ಜಗಳವಾಡುತಿದ್ದರು. ನನ್ನ ಗಂಡ! ಎಲ್ಲಾತ? ” ನಾನಮ್ಮ, ಅಜಯ್, ನಿನ್ನ ಮಗ. ನೋಡು, ಇದು ಪ್ರತಿಮಾ, ನಿನ್ನ ಸೊಸೆ, ನಿನ್ನ ಮೊಮ್ಮಗಳು ರಶ್ಮಿ. ನೆನಪಿಸಿಕೊ” ನೆನಪು ಬರುತ್ತಿದೆ, ಮರೆಯಾಗುತ್ತಿದೆ. ಇವಳ ಮುಡಿ ಹಿಡಿದು ಜಗ್ಗಿದ ನೆನಪು. ಅಥವಾ ನನ್ನ ಮುಡಿ ಇವಳು ಹಿಡಿದಿದ್ದಳಾ? ಇವಳನೊಮ್ಮೆ ಚೆನ್ನಾಗಿ ಬೈದ ನೆನಪು. ಯಾಕೆ? ಅರ್ಧಮರ್ಧ ನೆನಪಿನಿಂದ ತತ್ತರಿಸಿ ಹೋದೆ. ” ಸ್ವಲ್ಪ ಹೊತ್ತು ಬಿಡಿ, ಸುಧಾರಿಸಿಕೊಳ್ಳಲಿ. ಆಮೇಲೆ ಯೋಚಿಸುವ” ಬಿಳಿ ಕೋಟ್ ಧಾರಿ ನುಡಿದಳು.
ನನ್ನನ್ನು ಖುರ್ಚಿಯಲ್ಲಿಕೂಡಿಸಿದರು. ” ಎಲ್ಲಾದಕ್ಕೊ ನನ್ನನ್ನು ನನ್ನ ಹೆಂಡತಿಯನ್ನು ಹೊಣೆ ಮಾಡುತ್ತಿದ್ದಳು ಅಕ್ಕ. ನಾವು ಸರಿಯಾಗಿ ಊಟ ಕೊಡುತ್ತಿಲ್ಲ, ಅಪ್ಪ ಹೋದ ಮೇಲೆ ಅಮ್ಮನನ್ನು ಕಡೆಗಾಣಿಸಿದ್ದೇವೆ, ಔಷಧ ಕೊಡಿಸುವುದಿಲ್ಲ, ನಾವಿಬ್ಬರೂ ಅವಳನ್ನು ಬಿಟ್ಟು ಎಲ್ಲಾ ಕಡೆ ಸುತ್ತುತೀವಿ, ಹೀಗೆ, ಹತ್ತು ಹಲವಾರು. ಇದರ ಮಧ್ಯೆ ಅಮ್ಮನನ್ನು ಸಂಭಾಳಿಸುವುದು ಬಹಳ ಕಷ್ಟವಾಯಿತು, ಮಾತು ಮಾತಿಗೂ ಜಗಳ, ಆರೋಪ, ಪ್ರತಿಮಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹೊಡೆಯುವುದು…” ಅವನ ದನಿ ಗದ್ಗದವಾಯಿತು. ಇದೇ ಸಮಯದಲ್ಲಿ ನನ್ನ ಮಗಳಿಗೆ ತೀವ್ರ ಅನಾರೋಗ್ಯವಾಯಿತು, ಆಫ಼ೀಸಿನಲ್ಲಿ ವಿದೇಶಕ್ಕೆ ತೆರಳಬೇಕೆಂಬ ಆದೇಶ ಬಂತು” ಈಗ ಅವನು ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಅವನನ್ನು ತಬ್ಬಿ ಸಮಾಧಾನಿಸಬೇಕು. ಆದರೆ, ಮಾತು ಹೊರಡುತ್ತಿಲ್ಲ, ಉಸಿರು ಕಟ್ಟಿದಂತಾಗಿದೆ. ವಿಲ ವಿಲ ಒದ್ದಾಡಿದೆ. ನನ್ನ ಬಗ್ಗೆ ಅವರ ಗಮನವಿರಲಿಲ್ಲ.
” ಇದು ಮೆದುಳ ಸಮಸ್ಯೆ, ಕೆಲವರಿಗೆ ಮೆದುಳು ಚಿಕ್ಕದಾಗುತ್ತಾ ಹೋಗುತ್ತದೆ. ಮರೆವು ಷುರುವಾಗುತ್ತದೆ, ಇದಕ್ಕೆ ಔಷಧಿ ಇಲ್ಲ. ಅವರನ್ನು ಹುಶಾರಾಗಿ ನೋಡಿಕೊಳ್ಳುವುದು ಕಷ್ಟ. ಅದಕ್ಕೆ ನಿಮ್ಮ ಅಕ್ಕ ಇಲ್ಲಿ ಸೇರಿಸಿದ್ದು.”
” ನಾ ವಾಪಸ್ಸು ಬರುವುದು ೧೦ ತಿಂಗಳಾಗುತ್ತದೆ. ಆಷ್ಟು ದಿನ ನೋಡಿಕೊ ಎಂದರೆ ಇಲ್ಲಿ ಸೇರಿಸಿದ್ದಾಳೆ, ಮಗಳ ಬಾಣಂತನದ ನೆವ ಮಾಡಿ, ನಮ್ಮ ಭಾವನ ಕಿತಾಪತಿಯೂ ಇದಕ್ಕೆ ಕಾರಣ” ಅವನ ಧ್ವನಿಯಲ್ಲಿ ಸಿಟ್ಟಿತ್ತು. ” ಬೇಡವೋ, ಅಷ್ಟು ಕೋಪ ಒಳ್ಳೆಯದಲ್ಲ, ಸಮಾಧಾನ ಮಾಡಿಕೊ” ಅವನ ತಲೆ ಸವರಬೇಕೆನಿಸಿತು, ಅವನ ಕೈ ಹಿಡಿದ ಅವಳನ್ನು ನೋಡಿ ಆಸೂಯೆ ಉಕ್ಕಿತು.” ನಮ್ಮತ್ತೆಯನ್ನು ನಾನು ನೋಡಿಕೊಳ್ಳುವೆ, ಬೇಕಾದರೆ ಅವರಿಗಾಗಿ ನರ್ಸನ್ನು ಇಡೋಣ” ಮೆಲುದನಿಯಲ್ಲಿ ಹೇಳಿದಳು ಅವಳು. ಇವಳು ಯಾರು? ಆ ಹುಡುಗ ನನಗೆ ಸೇರಿದವನು. ಇವಳ್ಯಾರು ಅವನನ್ನು ಸಮಾಧಾನ ಮಾಡಲು? ಅವಳನ್ನು ನೋಡಿದರೆ ನನಗ್ಯಾಕೆ ಹುಚ್ಚು ಕೋಪ ಬರುತ್ತಿದೆ? ಹಾಗೆ ತಳ್ಳಿಬಿಡೊಣ ಎನ್ನಿಸುತ್ತಿದೆ. ತಲೆ ಒತ್ತಿ ಹಿಡಿಯಬಾರದೆ ಯಾರಾದರೂ, ಒಳಗಾಗುತ್ತಿರುವ ಹಿಂಸೆ ತಾಳಲಾರೆ.ಅವರ ಮಾತು ಮುಂದುವರೆಯುತ್ತಲೇ ಇತ್ತು.
ಇನ್ನ್ಯಾರದೋ ಮಾತು ಕೇಳಿಸಿತು ” ಅಮ್ಮ, ಮನೆಯೆಲ್ಲಾ ಉಗಿದಿದ್ದಿ. ಉಚ್ಚೆ ಹುಯ್ದಿದ್ದಿ. ಆ ಸೀರೆ ಉಟ್ಟಿರುವ ಪರಿ ನೋಡು, ಥೂ ಈಗ ಬೀಗರು ಬರುತ್ತಾರೆ, ನೀ ಈ ರೀತಿ ಅವರ ಮುಂದೆ ಬರಬೇಡ ಸಧ್ಯ” ” ಅಯ್ಯೊ ಅಜ್ಜಿ ನೋಡಮ್ಮ, ಹೇಗೆ ಸೀರೆಲಿ ಕಕ್ಕ ಮಾಡಿದ್ದಾರೆ”. “ಅಬ್ಬಬ್ಬ ನಿಮ್ಮಮ್ಮನ ಹುಚ್ಚುತನ ತಡೆಯೊಕ್ಕಾಗಲ್ಲ, ಮೊದಲು ಇಲ್ಲಿಂದ ಕಳಿಸುವುದು ನೋಡು, ನಿನ್ನ ತಮ್ಮ ಮತ್ತವನ ಹೆಂಡತಿಯನ್ನು ಎಷ್ಟು ಆಕ್ಷೇಪಿಸುತ್ತಿದ್ದೆ, ಈಗ ನೋಡು ಅವರನ್ನು ಸಂಭಾಳಿಸುವುದು ಎಷ್ಟು ಕಷ್ಟ”
” ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ, ನಿಮ್ಮಗಳನ್ನು ಕಂಡರೆ ಅವರಿಗಷ್ಟಕಷ್ಟೆ ಎನ್ನುತ್ತೀರಿ. ಮಗಳೇ ಹೊರ ತಳ್ಳಿದ್ದಾಳೆ, ನಿಮಗೆ ಇನ್ನು ಸುಲಭವೇ ಆಯಿತು. ಬೇಕಾದರೆ ಸ್ಪೆಷಲ್ ರೂಮಲ್ಲಿಡಿ, ವಾರ ವಾರ ಬಂದು ಹೋಗಿ” ಯಾರ ಮಾತಿದು? ಅಯ್ಯೊ ಮಗನೇ, ಅವರ ಮಾತು ಕೇಳಬೇಡ. ನನ್ನನ್ನು ಕರೆದುಕೊಂಡು ಹೋಗು, ಇಲ್ಲಿ ಯಾರೂ ನನ್ನವರಲ್ಲ. ನನಗೆ ಭಯವಾಗುತ್ತಿದೆ. ಅಮ್ಮ, ಎಲ್ಲಿದ್ದೀಯಮ್ಮ, ನನ್ನನ್ನು ತಬ್ಬಿಕೊ. ಗುಮ್ಮ ಬಂದಿದ್ದಾನೆ” ನಾಗಾಲೋಟದಿಂದ ಓಡುತ್ತಿದ್ದ ಮನಸ್ಸು…. ಅಮ್ಮ ಬೇಕು, ನನ್ನ ತವರು ಮನೆಗೆ ಹೋಗಬೇಕು, ಮಗ, ಮಗಳನ್ನು ಕರೆದುಕೊಂಡು, ಅಣ್ಣ ಅರಿಶಿನ ಕುಂಕುಮಕ್ಕೆ ಕರೆದಿದ್ದಾನೆ… ಹೊತ್ತಾಗುತ್ತಿದೆ…..ಯಾರು ನಾನು… ಎಲ್ಲಿ ನನ್ನ ಮನೆ… ಎಲ್ಲಿ ನನ್ನವರು….
-ಸಹನಾ ಪ್ರಸಾದ್