ಬಹುತೇಕ ಹೆಣ್ಣು ಮಕ್ಕಳಿಗೆ. ನಾನೂ ಸೇರಿದಂತೆ ಭಾವನೆಗಳು ಜಾಸ್ತಿ, ಬಹಳ ಬೇಗ ಬೇರೆಯವರಿಗೆ ಹತ್ತಿರವಾಗಿಬಿಡುತ್ತಾರೆ, ಅದೇ ರೀತಿ ಮುನಿಸು, ವಿರಸವೂ ಬೇಗ ಬಂದುಬಿಡುತ್ತದೆ,. ನಮ್ಮೆಜಮಾನ್ರು ನನಗೆ ಯಾವಾಗಲೂ ಹೇಳುತ್ತಿರುತ್ತಾರೆ” ನಿಂದೆಲ್ಲಾ ಯಾವಾಗಲೂ ಅತಿರೇಕದ ಪ್ರತಿಕ್ರಿಯೆಗಳು. ಹಚ್ಚಿಕೊಂಡರೆ ಅತಿಯಾಗಿ, ಅದೇ ಏನಾದರೂ ಸಣ್ಣ ವಿಷಯ ನಡೆಯಲಿ, ಕುಗ್ಗಿ ಹೋಗುತ್ತೀಯ. ಸ್ವಲ್ಪ ಸಮತೋಲನ ಇರಬೇಕು ಅಲ್ಲವಾ?” ಆಗೆಲ್ಲಾ ನನಗೆನಿಸುತ್ತದೆ ಹೌದಲ್ವಾ, ನಾನು ಸ್ವಲ್ಪ ಬದಲಾಗಬೇಕು ಎಂದು. ಆದರೆ ಆ ನಿರ್ಧಾರಗಳೆಲ್ಲ ತಾತ್ಕಾಲಿಕ.
ಮೊನ್ನೆ ನಮ್ಮ ಪಕ್ಕದ ಮನೆಗೆ ನವ ದಂಪತಿಗಳು ಬಂದರು. ಚಿಕ್ಕ ವಯಸ್ಸಿನ ಅವರನ್ನು ನೋಡಿ ನನ್ನ ಹೃದಯ ತಾಯ ಮಮತೆಯಿಂದ ಉಕ್ಕಿತು, ಕಾಫ಼ಿ ಫ಼್ಲಾಸ್ಕ್, ಬಿಸ್ಕತ್ ಹಿಡಿದು ಹೊರಟವಳನ್ನು ತಡೆದಿದ್ದು ನನ್ನ ಮನೆ ಕೆಲಸಗಾತಿ. ” ಅಮ್ಮ, ಅವರು ಕನ್ನಡದವರಲ್ಲ. ಯಾವುದೋ ಬೇರೆ ಭಾಷೆ ಮಾತಾಡುತ್ತಿದ್ದರು” ಅವಳ ಮಾತನ್ನು ಕಡೆಗಣಿಸಿ ಅವರ ಬಾಗಿಲು ತಟ್ಟಿದೆ. ಸ್ವಲ್ಪ ಸಿಟ್ಟಿನ ಮೋರೆಯಿಂದಲೇ ಬಾಗಿಲು ತೆರೆದು ” ಏನು ಬೇಕು?” ಎಂದು ದುರುಗುಟ್ಟಿದಳು. ಫ಼್ಲಾಸ್ಕ್ ಹಾಗು ಪ್ಲೇಟ್ ಹಿಡಿದೆ. ಅಚ್ಚ ಆಂಗ್ಲ ಭಾಷೆಯಲ್ಲಿ ” ನಮ್ಮದಾಗಿದೆ, ಬೇಡ” ಎಂದು ರಪ್ಪನೇ ಬಾಗಿಲು ಮುಚ್ಚಿದಳು, ಕೋಪ, ಸಂಕಟ ತಡೆಯಲಾಗದೆ ಎದುರು ಮನೆ ಸವಿತಾ ಬಳಿ ಹೋಗಿ, ಕಾಫ಼ಿ ಕುಡಿದು, ಹೊಸಬಳನ್ನು ದೂರುತ್ತಾ ಕೂತವಳಿಗೆ ಎನೋ ಸುಟ್ಟ ವಾಸನೆ ಬಡಿದಿದ್ದು ತಿಳಿಯಲೇ ಇಲ್ಲ. ತಿಳಿಯವಷ್ಟರಲ್ಲಿ ತಡ ಆಗಿತ್ತು. ಗ್ಯಾಸ್ ಮೇಲೆ ಕುದಿಯಲ್ಲಿಟ್ಟಿದ್ದ ಸಾರು ತಳ ಕಂಡು ಪಾತ್ರೆ ಸೀದಿತ್ತು.
ಮುಂದಿನ ವಾರ ನಮ್ಮ ಮಹಿಳಾ ಸಂಘದ ವತಿಯಿಂದ ಪ್ರವಾಸ ಏರ್ಪಾಡಾಗಿತ್ತು. ಎಲ್ಲರೂ ಆದಷ್ಟು ಬೇಗ ದುಡ್ಡು ಕಟ್ಟಿದರೆ ಒಳ್ಳೆಯದು ಎಂದಿದ್ದರಿಂದ ನಾನು ಮತ್ತು ನನ್ನ ಗೆಳತಿ ಮಾಲಿನಿಯ ಪಾಲಿನ ಹಣವನ್ನು ಜಮಾ ಮಾಡಿದ್ದೆ. ಪ್ರವಾಸದಲ್ಲಿ ಹಾಗು ಬಂದ ಮೇಲೆ ಕೂಡ ಅವಳು ನನ್ನ ಕಣ್ಣ್ ತಪ್ಪಿಸಲು ಷುರು ಮಾಡಿದ್ದಳು. ಅಯ್ಯೊ, ಮಾತು ಬಿಟ್ಟರೆ ಬಿಡಲಿ, ನನ್ನ ಹಣ ಹಿಂದಿರುಗಿಸಿದರೆ ಸಾಕು ಹಾಗು ಕಳೆದ ತಿಂಗಳು ನನ್ನ ವಾರಗಿತ್ತಿಯ ತಮ್ಮನ ಹೆಂಡತಿಯ ಅಣ್ಣನ ಮನೆಯಲ್ಲಿ ನಡೆದ ವೃತ್ತಾಂತವನ್ನು ಯಾರಿಗೂ ಹೇಳದಿದ್ದರೆ ಸಾಕು ಎಂದು ಹಪಹಪಿಸುವಂತಾಗಿತ್ತು. ಕೊನೆಗೊಮ್ಮೆ ಧೈರ್ಯ ಮಾಡಿ ಕೇಳಿಯೇ ಬಿಟ್ಟೆ. ” ನಿನ್ನನ್ಯಾರೆ ನನ್ನ ಪಾಲಿನ ಹಣ ಕಟ್ಟು ಎಂದಿದ್ದು? ಬಲವಂತವಾಗಿ ನಾನು ಪ್ರವಾಸ ಬರಬೇಕಾಯಿತು, ಆ ಜಲಜ ಬರುವ ಕಡೆ ನನಗೆ ಬರಲು ಇಷ್ಟವೇ ಇರಲಿಲ್ಲ. ಅವಳು ಆಯೋಜಿಸಿದ್ದು ಇಷ್ಟು ಚೆನ್ನಾಗಿ ನಡೆಯಿತು, ಎಲ್ಲಾ ನಿಮ್ಮಂತಹವರಿಂದ” ಎಂದು ಸುಮಾರು ವಾಗ್ಬಾಣಗಳನ್ನು ಬಿಟ್ಟಳು. ಸುಸ್ತಾಗಿಬಿಟ್ಟೆ.
ಪಕ್ಕದ ಮನೆ ರತ್ನಳ ಸೀಮಂತಕ್ಕೆಂದು ಅವಳತ್ತೆ, ಅಮ್ಮ ಊರಿಂದ ಬಂದಿದ್ದರು. ” ನೀವೇನೂ ಚಿಂತಿಸಬೇಡಿ, ನಿಮಗೆ ಎಲ್ಲಾ ಸರಿ ಮಾಡಿಕೊಡುವ ಹೊಣೆ ನನ್ನದು” ಎಂದು ಇಲ್ಲದ ತಲೆ ನೋವು ಹೊತ್ತುಕೊಂಡೆ. ಆ ಹೆಂಗಸರಿಬ್ಬರೂ ಮನೆಯಲ್ಲಿ ಆರಾಮವಾಗಿ ಹರಟೆ ಹೊಡೆಯುತ್ತ ಕುಳಿತಿದ್ದರೆ ನಾನು ಬಿಸಿಲಿನಲ್ಲಿ ತಿರುಗಾಡಿ ಅಡುಗೆಯವರು, ಹೂವಿನವರು, ಬ್ಯೂಟಿ ಪಾರ್ಲರ್ನವರು ಎಂದು ಓಡಾಡಿ ಸುಸ್ತಾಗಿ ಜ್ವರ ಬಂದು ಮಲಗಿದೆ. ಸೀಮಂತಕ್ಕೆ ಹೋಗಲು ಆಗಲೇ ಇಲ್ಲ. ಮರುದಿನ ಎದ್ದಾಗ ತಿಳಿಯಿತು, ಅಡುಗೆ ತುಂಬಾ ಖಾರವಾಗಿತ್ತಂತೆ, ಹೂವಿನವಳು ದಿಂಡಿಗೆ ಬದಲಾಗಿ ಕಟ್ಟಿದ ಹೂ ತಂದಿದ್ದಳಂತೆ, ಪಾರ್ಲರ್ ಹೆಂಗಸು ಲೇಟಾಗಿ ಬಂದದ್ದಲ್ಲದೆ, ಹೆರಳು ಸರಿಯಾಗಿ ಹಾಕದೆ ಅದು ಬಿಚ್ಚೇ ಹೋಯಿತಂತೆ. ಇಡೀ ಕಾಲೋನಿಯಲ್ಲಿ ನನ್ನ ಗುಣಗಾನ ನಡೀತಾ ಇರುವಾಗ ನಾ ತಲೆ ಮೇಲೆ ಕೈ ಹೊತ್ತಿ ಕೂತೆ.
ಎರಡು ದಿನ ಬಿಟ್ಟು ನನ್ನ ಪ್ರೀತಿಯ ಗೆಳತಿ ತನ್ನ ಮಗಳನ್ನು ಕರೆದುಕೊಂಡು ಬಂದಳು. ” ನಿಮ್ಮ ಮನೆ ಹತ್ತಿರದ ಪೀಜಿಯಲ್ಲಿ ಇವಳು ಇರುತ್ತಾಳೆ ಕಣೆ, ಸ್ವಲ್ಪ ಕಣ್ಣಿಟ್ಟಿರು” ಅವಳ ಮಾತು ಮುಗಿಯುವುದರಲ್ಲೇ ನಾ ನುಡಿದೆ” ನಾ ಇರುವಾಗ ಪೀಜಿ ಯಾಕೆ, ನಮ್ಮನೇಲೆ ಇರುತ್ತಾಳೆ ಬಿಡು” ತಕ್ಷಣ ಬಂದ ಅವಳ ಉತ್ತರಕ್ಕೆ ನಾ ನಿರುತ್ತರಳಾದೆ” ಅಯ್ಯೊ, ಬೇಡಮ್ಮ, ಹೋದ ವರುಷ ನಳಿನಿಯ ಮಗಳನ್ನು ನಿನ್ನ ಮನೆಯಲ್ಲಿ ಬಲವಂತವಾಗಿ ಇರಿಸಿಕೊಂಡಿದ್ದೆಯಲ್ಲ, ನಿನ್ನ ಬಲವಂತಕ್ಕೆ ಹಾಲು, ತುಪ್ಪ, ಬೆಣ್ಣೆ, ಜಿಡ್ಡು ತಿಂದು ಅವಳು ಡುಮ್ಮಿ ಆಗಿರುವುದು, ಈಗ ಅದನ್ನಿಳಿಸಲಾಗದೆ ಕಷ್ಟ ಪಡುತ್ತಿರುವುದು ಗೊತ್ತು ನನಗೆ!”
-ಸಹನಾ ಪ್ರಸಾದ್