ಯುವಕವಿ ಪ್ರಕಾಶ ಶಿವಲಿಂಗಪ್ಪ ಡೆಂಗಿಯವರು ವೃತ್ತಿಯಲ್ಲಿ ವೈದ್ಯರಾಗಿದ್ದು ಪ್ರವೃತ್ತಿಯಲ್ಲಿ ಒಬ್ಬ ಪ್ರಜ್ಞಾವಂತ ಕವಿಯಾಗಿ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣ ಮಾಡುತಲಿದ್ದಾರೆ. ಇವರ ಪ್ರತಿಭೆಗಳನ್ನು ಪೋಟೋಗ್ರಾಪಿಯಲ್ಲಿ, ಕಲಾಚಿತ್ರಗಳ ಸಂಗ್ರಹದಲ್ಲಿ, ನಿಸರ್ಗದ ಮಡಿಲಲ್ಲಿ ವಿಹರಿಸುವ ಪ್ರವಾಸಪ್ರಿಯರಾಗಿ, ಪುಸ್ತಕಗಳನ್ನು ಸಂಗ್ರಹಿಸುವುದರಲ್ಲಿ ಕಾವ್ಯವಾಚನ ಜತೆಯಲ್ಲಿ ಗಾಯನ ಪ್ರೀತಿಯಲ್ಲಿ ತಮ್ಮನ್ನೂ ತೊಡಗಿಸಿಕೊಂಡು ತಮ್ಮದೇ ಆದ ಲೋಕದಲ್ಲಿ ವಿಹರಿಸುವ ಮನೋವಿಕಾಸದ ಉತ್ತಮ ಸ್ನೇಹಿತ.
ಪ್ರಸ್ತುತ ‘ನಾ..ನೀ’ ಕೇವಲ ಎರಡಕ್ಷರವಲ್ಲ ಕವಿತ ಸಂಕಲನ ಪ್ರಕಾರ ಡಂಗಿಯವರ ದ್ವೀತಿಯ ಕೃತಿಯಾಗಿದ್ದು ಅನುಭವಿಸಿದ ಅಥವಾ ಕಣ್ಣ ಮುಂದೆ ಹಾದು ಹೋಗುವ ಅನೇಕ ಸಂದರ್ಭಗಳನ್ನು ಸಮಾಜದ ಹಿತ ದೃಷ್ಠಿಯಲ್ಲಿ ಕಾವ್ಯದ ರೂಪ ನೀಡುವಲ್ಲಿ ವೈದ್ಯ ಪ್ರಕಾಶ ಡಂಗಿಯವರು ಭವಿಷ್ಯದ ಒಬ್ಬ ಕವಿಯಾಗಿ ಗಟ್ಟಿಯಾಗಿ ತಮ್ಮ ಸ್ಥಾನ ಕನ್ನಡ ಸಾಹಿತ್ಯ ಲೋಕದಲ್ಲಿ ಪಡೆದುಕೊಳ್ಳುವ ಭರವಸೆ ಖಂಡಿತ. ಪ್ರಕಾಶ್ ನಿಮಗೆ ಶುಭಕೋರುತ್ತ ನಿಮ್ಮ ಕೃತಿಯನ್ನು ಒಂದೊಂದು ಪುಟದಂತೆ ಅವಲೋಕ ಮಾಡಲೆತ್ನಿಸುವೆ.
“ಥೇಟ್ ಹಾಗಂತ” ಮೊದಲ ಕವಿತೆಯಲ್ಲೇ ಓದುಗರ ಮನಸನ್ನು ಗೆಲ್ಲುವ ಸಾಹಸಮಾಡಿ ಅವರ ಮೆಚ್ಚುಗೆಗೆ ಪಾತ್ರವಾಗಿದ್ದಿರಿ. ಇಲ್ಲಿ ನೀವು ನೀಡಿರುವ ಉಪಮಾಗಳು ಕವಿತೆಗೆ ಭೂಷಣದಂತಿದೆ.
‘ನಾನೇನು ಕೊಳಲು ಊದುವ ಗೊಲ್ಲನಲ್ಲ
ಅವಳು ಗೋಪಿಕಾಸ್ತ್ರೀಯೂ ಅಲ್ಲ
ನಮ್ಮಿಬ್ಬರದು ಕೃಷ್ಣ ರುಕ್ಮಿಣಿಯರ ಸಂಬಂಧ
ಪ್ರೀತಿ ಗೆಳೆತನ ಕೃಷ್ಣ ರಾಧೆಯರಂಥದು
ಹೀಗೆ ಹೋಲಿಸಿ ಹೊಗಳಿದರೆ ನಾಚಿ ತಬ್ಬುತ್ತಾಳೆ
ಥೇಟ್ ಅಮ್ಮನ ಮಡಿಲ ಮಗುವಂತೆ.’
ಕವಿತೆಯ ಪ್ರತಿ ಪ್ಯಾರದಲ್ಲಿರುವ ಪದಗಳು ಕವಿತೆಗೆ ಮುತ್ತಿನ ಶೃಂಗಾರ ಮಾಡಿದಂತೆ ಅನುಭವಿಸಿದ್ದಾರೆ ದಡಕ್ಕೆ ಅಲೆ ಅಪ್ಪಳಿಸುವಂತೆ, ದುಂಬಿಗಾಗಿ ಕಾಯೋ ಹೂವಿನಂತೆ, ಅಮ್ಮನ ಮಡಿಲ ಮಗುವಿನಂತೆ ಮತ್ತು ಮಳೆ ನಿಂತರು ಮಳೆ ಹನಿನಿಲ್ಲದಂತೆ , ಸೊಗಸಾದ ಕಲ್ಪನೆ.
ಕವಿ ಸಮಾಜದ ಕ್ರೂರ ದೃಷ್ಠಿಯನ್ನು ಲಜ್ಜೆ ಕವಿತೆಯಲ್ಲಿ ಅತಿ ಸೂಕ್ಷಮವಾಗಿ ಮಾರ್ಮಿಕವಾಗಿ ತಿದ್ದುವ ಕಾಯಕ ತಮ್ಮ ಲೇಖನಿಯಿಂದ ಮಾಡಿದ್ದಾರೆ.
ಜನರ ಕಣ್ಣಿಗೆ ಅರೀಷಿಣ ಬಿದ್ದಿದೆ
ಮಲ್ಲಿಗೆ ಮುದುಡಿಸಿ ಆಕಳಿಸಿದರ ಹೆಂಗ
ಗಂಧವ ಒಡಲೊಳಗ ಇರಿಸಿಕೊಂಡು
ಮೈ ಅಂದವ ಮರೆಮಾಚಿದರ ಹೆಂಗ.
ಕಾಮುಕರ ಕಾಮನೆಗಳಿಂದ ವಿಕೃತ ಮನೋಭಾವದಿಂದ ಹೆಣ್ಣಿನ ಬಗ್ಗೆ ಇಲ್ಲ ಸಲ್ಲದ ಟೀಕೆಗಳನ್ನು ಸೇರಿಸಿ ಹೇಳಿ ಹೀಯಾಳಿಸಿ ಕೇಕೆ ಹಾಕುವ ಜನರ ಮುಂದೆ ಓಡಾಡೋದೆ ಬ್ಯಾಡ ಜನರ ವಕ್ರದೃಷ್ಠಿಯನ್ನು ಸರಿಪಡಿಸಲಾಗದ ಸ್ಥಿತಿಯಲ್ಲಿ ತನ್ನತಾ ರಕ್ಷಣೆ ನೀಡುಯವ್ವ ಎಂದು ಕವಿಯ ಅಳಲು ಸಾಕರಗೊಂಡಿದೆ.
‘ಪದ ಶೃಂಗಾರ’ ಕವಿತೆಯ ಅಲಂಕಾರಕ್ಕೆ ಕವಿ ಬಯಸೋದು ಸಹಜ ಇದರಿಂದ ಉತ್ತಮ ಕವಿತೆ ರಚನೆಯಾಗಬಹುದು ಎಂಬ ಕಲ್ಪನೆಯಲ್ಲಿ ಈ ಕವಿಯಲ್ಲಿ ಗಮನಿಸಿದೆ.
‘ಅರ್ಪಣೆ ಸಮರ್ಪಣೆ
ಪ್ರತಿಮೆಯೋ ಉಪಮೇಯೊ
ನಿನಗಾಗಿಯೇ ಪ್ರತಿಪದ
ನಿನ್ನ ನಗುವೆ ಸಿರಿ ಸಂಪದ’.
ಕವಿತೆಯ ಶೃಂಗಾರ ಹಾಗೂ ಪ್ರೇಯಸಿಯ ಶೃಂಗಾರ ಭಾವನೆಗಳು ಆಲೋಚನೆಗಳು ಚಿಂತನೆಗಳು ಒಂದು ಉತ್ತಮ ಕವಿತೆಗೆ ಹಂತ ಹಂತಗಳಾಗಿರಲುಬಹುದು ಅದರ ಅರ್ಪಣೆ ಈ ಸಾಲುಗಳು. ಪ್ರೇಯಸಿಯ ಒಂದು ನಗುವಿಗಾಗಿ ಸಮರ್ಪಣೆ ಮಾಡುವುದು ಕವಿಯ ಅಂತರಂಗದಲ್ಲಿ ಹುದುಗಿರುವ ಪ್ರೀತಿಯೇ ಕಾರಣ.
ನಮ್ಮೆಲ್ಲರ ಅಭಿಮಾನ ನಾವು ಕನ್ನಡಿಗರು ನಮ್ಮ ನೆಲೆ ಕರ್ನಾಟಕ ನಮ್ಮ ಭಾಷೆಕನ್ನಡ. ಕನ್ನಡೋತ್ಸವ ಒಂದು ಹಬ್ಬದ ಸಡಗರದಿ ಕಾಣುವ ನಾವು ಕನ್ನಡಾಭಿಮಾನಿಗಳು.
‘ಯಾರೋ ಬಂದರು
ಇಲ್ಲೆ ನೆಲೆ ನಿಂತರು ಕೊಂಡರು ಉಂಡರು
ಅಂದರು ಎನ್ನಡಾ ಎಕ್ಕಡಾ
ಅವರ ಜೊತೆಕೂಡಿ ನಾವು ಹೊಡೆದೆವು
ಅವರದೆ ಭಾಷೆಯ ಬೊಂಬಡಾ.’
ನಮ್ಮ ರಾಜ್ಯಕ್ಕೆ ನೆರೆ ರಾಜ್ಯದವರು ಬಂದರು.ನೆಲೆಸಿದರು ಇಲ್ಲೇ ಬದುಕಿ ಬಾಳಿದರು ಅವರಲ್ಲಿ ಕನ್ನಡದ ಅಭಿಮಾನವೇ ಇಲ್ಲ ಈವತ್ತಿಗೂ ಅವರವರ ಭಾಷೆಯಲ್ಲೆ ವ್ಯವಹರಿಸುವುದು ನಾವು ಕಾಣುತ್ತೇವೆ. ತೆಲುಗು ಜನ ಎಕ್ಕಡ ಎಂದರೇ ತಮಿಳಿಗರು ಎನ್ನಡ ಎಂದೆ ಸಾಗುವರು ಇವರು ಅಭಿಮಾನ ಶೂನ್ಯರಲ್ಲವೆ ಇಷ್ಟೆಲ್ಲದರ ನಡೆಯು ನಾವು ರಾಜೋತ್ಸವ ಆಚರಿಸುತ್ತೇವೆ.
ದುಡಿಮೆಯನ್ನು ಕುರಿತಂತೆ ಕವಿ ಅತ್ಯಂತ ಆಳಕ್ಕೆ ಹೋಗಿ ‘ರಕ್ತ ಮತ್ತು ಬೆವರು’ ಕವಿತೆಯನ್ನು ಅರ್ಥೈಸುವಲ್ಲಿ ಓದುಗರ ಮನ ಮುಟ್ಟುತ್ತಾರೆ.
‘ಪ್ರತಿ ರೈತ, ಪ್ರತಿ ಕಾರ್ಮಿಕ,
ಪ್ರತಿ ಕೂಲಿಯವ ಪ್ರತಿ ಸೈನಿಕ
ಎಲ್ಲ ಶ್ರಮಿಕರು ಬೆವರು ಬಸೆದು
ರಕ್ತವನ್ನೇ ಹರಿಸಿದ್ದಾರೆ…’
ಶ್ರಮಿಕರ, ರೈತರ, ಕಾರ್ಮಿಕರ ಸೈನಿಕರ ಬೆವರು, ಬೆವರು ಮಾತ್ರವಲ್ಲ ಅವರ ದೇಹದಲ್ಲಿರುವ ರಕ್ತವೆ ಬೆವರಾಗಿ ಫಲ ನೀಡುತ್ತದೆ. ಇದಕ್ಕೆ ಸಮಾನಾದದು ಯಾವುದು ಇಲ್ಲ ಬೆಲೆಯು ಕಟ್ಟಲು ಸಾಧ್ಯವಿಲ್ಲ. ಇವರ ಶ್ರಮ ತಾಯಿ ನಾಡಿಗಾಗಿ, ಭಾರತೀಯತೆಗಾಗಿ ಜನ್ಮ ಸಾರ್ಥಕತೆಗಾಗಿ ಎಂದು ಕವಿ ಹೇಳ ಹೊರಟಿದ್ದಾರೆ. ಇವರೆಲ್ಲರ ಶ್ರಮದ ಬೆಲೆ ಕವಿಗೂ ಗೊತ್ತು ಹಾಗಾಗಿ ತನ್ನ ಕವಿತೆಯ ಮೂಲಕ ಓದುಗರಲ್ಲಿ ಅರಿವು ಮೂಡಿಸುವಲ್ಲಿ ಕವಿಯ ಶ್ರಮವು ಇದೆ.
ತಾಯಿಗಿಂತ ದೇವರಿಲ್ಲ ಎಂಬ ಮಾತಿಗೆ ಕವಿಯ ಅಂತರಂಗ ಮಿಡಿದ ಭಾವ ‘ಅವ್ವನ ನೆನಪು’ ಕವಿತೆಯಲ್ಲಿದೆ.
ನೀ ಅಲ್ಲಿದ್ರೂ ನಿನ ಜೀವ
ನಮ್ಯಾಲೆ ಇರತೈತಿ
ಹಂಗ ಹೋಗಾಕ ಮನಸಿಲ್ದ
ಜಗಳಾ ತಗದ ಹೋಗಿರ್ತಿ.
ತಾಯಿ ಎಲ್ಲಿದ್ರು ಹೇಗಿದ್ರು ತನ್ನ ಮಕ್ಕಳಲ್ಲಿ ಅವಳ ಜೀವ. ಜೀವನ ಸಂತಸ ಸಂಭ್ರಮ ಎಲ್ಲವೂ ಅವಳೆಲ್ಲಿದ್ರು, ಅವಳ ಹಾರೈಕೆ ಮಕ್ಕಳಿಗೆ ಸದಾ ಇರುತ್ತದೆ. ನೊಂದರು ಬೆಂದರು ಆ ತಾಯಿ ಜೀವ ಮರುಗೈತಿ. ಕವಿಗೆ ಅವ್ವನ ನೆನಪು ಕಾಡುವಂತೆ ಓದುಗರಿಗೂ ಕಾಡುವ ಈ ಕವಿತೆಯ ಭಾವವೇ ಚೆಂದ.
ಯುವ ಮಿತ್ರ ಪ್ರಕಾಶ ಡಂಗಿಯವರು ಇಬ್ಬರ ನಡುವೆ ನಡೆಯುವ ಸಂಭಾಷೆಣೆಗಳಿಗೆ ವರ್ಣ ರಂಜಿತ, ಸುಗಂಧ ದ್ರವ್ಯ ಹೂವುಗಳು ಪರಿಮಳ ಬೀರಿದಂತೆ ಎಲ್ಲೋ ತಂಗಾಳಿಯ ಅಲೆ ತೇಲಿ ಬಂದು ಮೈಗೆ ತಾಕಿದಂತೆ ಅತ್ಯಂತ ಸರಳ ಗೀತೆಗಳ ಮುಖಾಂತರ ಓದುಗರನ್ನು ಅವರ ಮನಸನ್ನು ಗೆಲ್ಲುದಲ್ಲಿ ಯಶಸ್ಸು ಕಂಡಿದ್ದಾರೆ. ವೈದ್ಯೋ ನಾರಾಯಣಹರಿಯೊಂದಿಗೆ ಕನ್ನಡ ಕಾವ್ಯ ಲಹರಿ ನಾ..ನೀ ಯಾಗಿದೆ. ನಿಮಗೆ ಶುಭ ಕೋರುತ್ತ ಅಭಿನಂದಿಸುತ್ತೇನೆ. ನಿಮ್ಮಂದ ಇನ್ನಷ್ಟು ಕೃತಿಗಳು ಕನ್ನಡ ಕಾವ್ಯ ಜಗತ್ತಿಗೆ ಸಮರ್ಪಣೆಯಾಗಲಿ, ಓದುಗರ ವಿಮರ್ಶಕರ ಕೈ ಸೇರಲಿ ಕನ್ನಡದ ಖ್ಯಾತಿಯು ಲಭಿಸಲಿ ಶುಭವಾಗಲಿ.
–ಹೆಚ್. ಷೌಕತ್ ಆಲಿ, ಮದ್ದೂರು