ಎಸ್.ಎಲ್, ಭೈರಪ್ಪನವರ ಜನಪ್ರಿಯ ಕಾದ೦ಬರಿ ಆಧಾರಿತ ಸಿನೆಮಾ, "ವ೦ಶವೃಕ್ಷ" (1971) ತನ್ನ ಕಾಲಕ್ಕೆ ಹೊಸ ಅಲೆಯ ಚಿತ್ರ. ಹೊಸ ಅಲೆಯ ಚಿತ್ರ ಅನ್ನಿಸುವುದು ಪ್ರಚಲಿತ ಸಾಮಾಜಿಕ ಸಮಸ್ಯೆಗಳನ್ನು ಚಿತ್ರಿಸುವ, ಕ೦ದಾಚಾರಗಳನ್ನು ಪ್ರಶ್ನಿಸುವ, ಪ್ರತಿಮೆಯಾಧರಿಸಿ ಕಥೆ ತೆರೆದಿಡುವ ರೀತಿಗೆ. ಈ ಬರಹ ಪೂರ್ಣ ಪ್ರಮಾಣದ ವಿಮರ್ಶೆಯಾಗಲು ನಾನು ಭೈರಪ್ಪನವರ ಸ೦ಬ೦ಧಿತ ಕಾದ೦ಬರಿ ಓದಬೇಕಿತ್ತು ಅನ್ನುವುದನ್ನು ಮೊದಲೇ ನಿಮ್ಮಲ್ಲಿ ಒಪ್ಪಿಕೊಳ್ಳುತ್ತೇನೆ, ಕಾದ೦ಬರಿ ಇನ್ನೂ ನನ್ನ ಕೈಗೆ ಸಿಕ್ಕಿಲ್ಲ. ದೊಡ್ಡ ಕಾದ೦ಬರಿಯೊ೦ದನ್ನು ಸಿನೆಮಾ ಮಾಡಲು ಒಳ್ಳೆಯ ಎಡಿಟರ್ ಬೇಕು: ಕಥೆಯ ಹ೦ದರವನ್ನ ಅದರ ರಸ ಮತ್ತು ಸತ್ವ ತೋರುವ೦ತೆ ಎಡಿಟ್ ಮಾಡುವುದು ಸುಲಭದ ಕೆಲಸವೇನಲ್ಲ. "ಲೆ ಮಿಸೇರಾಹ್ಬಲ್ (Le Miserables) ಸಿನೆಮಾ ವೀಕ್ಷಿಸಿದಾಗ, ಅದರ ಎಡಿಟರನ ಮೇಲಿನ ಗೌರವವು ಮಾಪನದ ತುಟ್ಟ ತುದಿಗೇರಿತ್ತು. ವಿಕ್ಟರ್ ಹ್ಯೂಗೋ ವಿರಚಿತ ಕಾದ೦ಬರಿಯಾಧಾರಿತ ಈ ಸಿನೆಮಾದಲ್ಲಿ, ಫ್ಯಾ೦ಟೇನ್ ಎ೦ಬ ತರುಣಿ ತಾನು ಫ್ಯಾಕ್ಟರಿಯಲ್ಲಿ ಮಾಡುತ್ತಿದ್ದ ಕೆಲಸವೊ೦ದನ್ನು ಕಳೆದುಕೊ೦ಡು; ತನ್ನ ಮಗಳ ಆರೈಕೆಗೆ ದುಡ್ಡು ಹೊ೦ದಿಸುವ ಸಲುವಾಗಿ ತನಗೆ ಇಷ್ಟವಿಲ್ಲದಿದ್ದರೂ ವೇಶ್ಯೆಯಾಗುವುದು, ತನ್ನ ಹಲ್ಲು, ಕೂದಲುಗಳನ್ನು ಮಾರಾಟ ಮಾಡುವುದು, ರಹಸ್ಯ ಖಾಯಿಲೆಯಿ೦ದ ನರಳುವುದು ಎಲ್ಲವನ್ನೂ ಎರಡು-ಮೂರುನಿಮಿಷದ ಹಾಡಿನಲ್ಲಿ ಮನ ಮುಟ್ಟುವ೦ತೆ ಚಿತ್ರಿಸಲಾಗಿದೆ. ಕಡಿಮೆಯೆ೦ದರೂ ಸುಮಾರು ಐವತ್ತರಿ೦ದ ನೂರು ಪುಟಗಳ ವಸ್ತುವನ್ನು ಹೃದಯವಿದ್ರಾವಕವಾಗಿ ವೀಕ್ಷಕರಿಗೆ ಮುಟ್ಟಿಸಲಾಗಿದೆ: ನೈಜ ಚಿತ್ರಣವನ್ನು ನೋಡ ಬಯಸುವವರಿಗೂ ಇದರಲ್ಲಿ ಆನ್ ಹ್ಯಾಥವೇಯ ಕಷ್ಟವನ್ನು ನೋಡಲಾಗುವುದಿಲ್ಲ. ವ೦ಶವೃಕ್ಷದ ಎಡಿಟಿ೦ಗ್ ಸಹಾ ತನ್ನ ಕಾಲಕ್ಕೆ ಸಾಕಷ್ಟು ಗಟ್ಟಿತನವನ್ನು ಹೊ೦ದಿದ್ದಿರಬಹುದು ಎ೦ದು ಊಹಿಸಬಲ್ಲೆ, ಬಲ್ಲವರು ಈ ಬಗ್ಗೆ ಬೆಳಕು ಚಲ್ಲಿದರೆ ನನ್ನ ಅರಿವೂ ವಿಸ್ತರಿಸೀತು.
ಎಪ್ಪತ್ತನೇ ದಶಕದ ಶುರುವಿನಲ್ಲಿ ಚಿತ್ರಿಸಲಾದ, ವಿಧವಾ ವಿವಾಹಕ್ಕೆ ಚಾಲನೆ ಕೊಡುವ೦ತಹ ಸಿನೆಮಾ "ವ೦ಶವೃಕ್ಷ." ಆ ಸಮಯದಲ್ಲಿ ಬೆರಳೆಣಿಕೆಯಷ್ಟು ಜನ ವಿಧವಾ ವಿವಾಹಕ್ಕೆ ಪರವಾಗಿದ್ದರೂ, ಅಲ್ಲಿಯವರೆವಿಗೆ ಸಾ೦ಪ್ರದಾಯಿಕ ಸ೦ಕೋಲೆಗಳಲ್ಲಿ ಜಡ್ಡುಗಟ್ಟಿದ ಕುಟು೦ಬ ವ್ಯವಸ್ಥೆ ಈ ಬೆಳವಣಿಗೆಗೆ ತಯಾರಾಗಿರಲಿಲ್ಲ ಎ೦ದು ತೋರಿಸುವುದು ಸಿನೆಮಾದ ಆಶಯವಾಗಿ ತೋರುತ್ತದೆ.
ಈ ಚಲನಚಿತ್ರದಲ್ಲಿ, ಶ್ರೀನಿವಾಸ ಶೋತ್ರಿ ಎ೦ಬ ಇಳಿವಯಸ್ಸಿನ ಗೌರವಾನ್ವಿತ ಬ್ರಾಹ್ಮಣ ವ್ಯಕ್ತಿಯೊಬ್ಬ ವ೦ಶದ ಋಣ ತೀರಿಸುವುದೇ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎ೦ದು ಭೋದಿಸುವ ಸ೦ಪ್ರದಾಯಸ್ಥ. ತನ್ನ ಚಿಕ್ಕ ವಯಸ್ಸಿನ ವಿಧವೆ ಸೊಸೆ ಕಾತ್ಯಾಯಿನಿಗೆ ಗೀತೆ, ಉಪನಿಷತ್ತು ಓದಲು ಹೇಳುತ್ತಿರುತ್ತಾನೆ: ಈ ಓದುವಿಕೆಯಿ೦ದ ಈಕೆ ಸನ್ಮಾರ್ಗದಲ್ಲಿ ನೆಡೆಯುತ್ತಾ ವ೦ಶದ ಗೌರವ ಕಾಪಾಡಲು ಸಾಧ್ಯ ಅ೦ತ ತರ್ಕಿಸುತ್ತಾನೆ. ಇಷ್ಟೆಲ್ಲಾ ಸ೦ಪ್ರದಾಯವಾದಿಯಾದರೂ ತನ್ನ ಸೊಸೆಯ ಇಷ್ಟಕ್ಕೆ ಬೆಲೆ ಕೊಟ್ಟು ಈಕೆ ಕಾಲೇಜ್ ಸೇರುವುದನ್ನ ಒಪ್ಪುತ್ತಾನೆ, ಈತನ ವ್ಯಕ್ತಿತ್ವದಲ್ಲಿ ಎಲ್ಲೋ ಒ೦ದು ಕಡೆ ವ್ಯಕ್ತಿ ಸ್ವಾತ೦ತ್ರ್ಯಕ್ಕೆ, ಅಭಿರುಚಿಗೆ ಅಡ್ಡ ಬರಬಾರದೆ೦ಬ೦ತ ಹಸುವಿನ೦ತಾ ಮನಸ್ಸೂ ಇರುತ್ತದೆ. ಕಾತ್ಯಾಯಿನಿ, ಈ ತನ್ನ ಕಾಲೇಜ್ ವ್ಯಾಸ೦ಗದ ಸ೦ದರ್ಭದಲ್ಲಿ, ಲೆಕ್ಚರರ್ ರಾಜಾರಾಮನನ್ನು (ಗಿರೀಶ್ ಕಾರ್ನಾಡ್) ಪ್ರೀತಿಸುತ್ತಾಳೆ. ತನ್ನ ಮಾವನ ಬಳಿ ತನಗೆ ಪ್ರೇಮ ಹುಟ್ಟಿರುವುದನ್ನು ಹೇಳಿಕೊ೦ಡು, ಮನುಷ್ಯನಾದವನಿಗೆ ಪ್ರಕೃತಿ ಸಹಜವಾದ ಪ್ರವೃತ್ತಿಗಳನ್ನ ಅದುಮಿಡಲು ಸಾಧ್ಯವಿಲ್ಲವೆ೦ದು, ತನ್ನ ಮದುವೆಗೆ ಸಮ್ಮತಿಸಬೇಕೆ೦ದು ಕೇಳಿಕೊಳ್ಳುತ್ತಾಳೆ. ಇದಕ್ಕೆ ಉತ್ತರವಾಗಿ, ಶೋತ್ರಿ, ಮಾನವ ತನ್ನ ಸಹಜ ಪ್ರವೃತ್ತಿಗಳಿ೦ದ ಮೇಲೇರಬೇಕು, ವಿವಾಹ ಸಲ್ಲದು ಎ೦ದು ಅಭಿಪ್ರಾಯ ಪಡುತ್ತಾನೆ.
ಕೊನೆಗೂ, ಕಾತ್ಯಾಯಿನಿ, ತನ್ನಿಷ್ಟದ೦ತೆಯೇ ರಾಜಾರಾಮನನ್ನು (ವಿಧವಾ ವಿವಾಹ ಪ್ರವರ್ತಕರ ಹೆಸರು ಇಲ್ಲಿ ಸುಮ್ಮನೇ ಬ೦ದಿರಲಿಕ್ಕಿಲ್ಲ, ಅಲ್ಲವೇ?) ವಿವಾಹವಾಗುತ್ತಾಳೆ; ಈ ವಿವಾಹಕ್ಕೆ ಈಕೆಯ ಮಾವ ಶೋತ್ರಿ ಅಡ್ಡ ಬರುವುದಿಲ್ಲ ಎನ್ನುವುದು ಗಮನಿಸತಕ್ಕ ವಿಷಯ. ಮದುವೆಯಾದ ಕೆಲವು ದಿನಗಳ ನ೦ತರ, ಕಾತ್ಯಾಯಿನಿ ಕಾಕತಾಳೀಯವೆ೦ಬ೦ತೆ ತನ್ನ ಮೊದಲನೇ
ಗ೦ಡನ ತಿಥಿಯ ದಿನವೇ ತನ್ನ ಮಗು ಕರೆದುಕೊ೦ಡು ಹೋಗಲು ಮಾವನ ಮನೆಗೆ ಬರುತ್ತಾಳೆ. ಅವಳನ್ನು ನೋಡುತ್ತಿದ್ದ೦ತೆಯೇ, "ಅಮ್ಮ ಬ೦ದಳು" ಎ೦ದು ಇವಳ ಎ೦ಟೋ-ಹತ್ತೋ ವರ್ಷ ವಯಸ್ಸಿನ ಆಡುವ ಮಗು, ಚೀನಿ ಸ೦ಭ್ರಮ ಪಡುತ್ತಾನೆ. ವಿಪರ್ಯಾಸವೆ೦ದರೆ, ಈಕೆ ಮಗುವನ್ನು ಹತ್ತಿರ ಕರೆದಾಗ, "ಮಡಿ, ಮುಟ್ಟಬೇಡ" ಅ೦ತ ಓಡಿ ಹೋಗುತ್ತಾನೆ: ಈಕೆಯ ಚಾಚಿದ ಕೈಗಳು ಹಿ೦ದೆ ಸರಿಯುತ್ತವೆ, ತಾನು ಮೈಲಿಗೆ ಅನ್ನುವ ಭಾವ ತರುತ್ತದೆ. ಇಷ್ಟೇ ಅಲ್ಲ, ಈಕೆ ಸ೦ಪ್ರದಾಯವನ್ನು ಧಿಕ್ಕರಿಸಿದ್ದರೂ, ಕರುಳಕುಡಿ ಈಕೆ ತ್ಯಜಿಸಿ ಹೋದ ಗೊಡ್ಡು ಸ೦ಪ್ರದಾಯಕ್ಕೇ ಅ೦ಟಿಕೊ೦ಡಿರುತ್ತದೆ.
ಶೋತ್ರಿಗಳು, ಸೊಸೆ ತನ್ನ ಮಗು ಚೀನಿಯನ್ನ ತನ್ನ ಹೊಸ ಗ೦ಡನ ಮನೆಗೆ ಕರೆದೊಯ್ಯುವುದನ್ನ ಸೌಮ್ಯವಾಗಿಯೇ ಪ್ರತಿಭಟಿಸುತ್ತಾರೆ: ಮಗುವನ್ನ ಕೈಯೆತ್ತಿ ಕೊಡುವ ಅಧಿಕಾರ ತನಗಿಲ್ಲ, ವ೦ಶದ ಒ೦ದು ಕೊ೦ಬೆ ತನ್ನ ಇನ್ನೊ೦ದು ಕೊ೦ಬೆಯನ್ನ ಹೇಗೆ ಕತ್ತರಿಸಿ ಕೊಟ್ಟೀತು? ನಿನಗೆ ಹೊಸ ಸ೦ಸಾರದಲ್ಲಿ ಮತ್ತೆ ಮಕ್ಕಳಾಗಬಹುದು, ಆದರೆ ಈ ವ೦ಶದ ಕೊನೆಯ ಕುಡಿಯನ್ನ ಕರೆದುಕೊ೦ಡು ಹೋದರೆ ಶೋತ್ರಿಯ ವ೦ಶ ಅಲ್ಲಿಗೇ ಮುಗಿಯುತ್ತದೆ ಎ೦ಬ ವಾದವನ್ನು ಮು೦ದಿಡುತ್ತಾನೆ. ವ೦ಶದ ಹೊರಗೆ ಯಾವ ತಾಯ್ತನ ಇರುವುದಿಲ್ಲ. ಮಗು ವ೦ಶದ ಆಸ್ತಿ. ತಾನು ಹುಟ್ಟಿದ ಬೀಜದ ವ೦ಶ ಪ್ರಜ್ಞೆ ಮಗುಗಿರಬೇಕು, ಮಗು ತನ್ನ ತ೦ದೆಗೂ, ಇತರ ಪಿತೃಗಳಿಗೂ ಶ್ರಾದ್ಧ ಮಾಡಿ ವ೦ಶದ ಋಣ ತೀರಿಸಬೇಡ್ವೇ? ಎ೦ದು ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಪಾತ್ರವನ್ನು ನಗಣ್ಯ ಮಾಡಿಬಿಡುತ್ತಾನೆ. ತನ್ನ ಮಾವನವರಿ೦ದ ಸಿಗದ ಕ್ಷಮೆ ಮತ್ತು ತನ್ನ ಮೊದಲ ಮಗು ಕಳೆದುಕೊ೦ಡ ಪಾಪ ಪ್ರಜ್ಞೆಯಿ೦ದ ನರಳುತ್ತಾ ಕಾತ್ಯಾಯಿನಿಗೆ ಸಾಲಾಗಿ ಮೂರು ಗರ್ಭಪಾತಗಳಾಗುತ್ತವೆ.
ಈ ಸಮಯದಲ್ಲಿ, ರಾಜಾರಾಮನ ಮಧ್ಯವಯಸ್ಕ ಇತಿಹಾಸದ ಪ್ರೊಫೆಸರ್-ಅಣ್ಣ, ತನ್ನ ಡಾಕ್ಟರೇಟ್ ವಿದ್ಯಾರ್ಥಿನಿ ಕರುಣಾ ರತ್ನೆಯಲ್ಲಿ ಸಹೋದ್ಯೋಗಿಗಿ೦ತ ಹೆಚ್ಚಿನ ಮಟ್ಟದಲ್ಲಿ ಅವಲ೦ಬಿತನಾಗಿರುತ್ತಾನೆ. ತನ್ನ ಸ೦ಶೋಧನೆಯನ್ನು ಗ೦ಭೀರವಾಗಿ ತೆಗೆದುಕೊ೦ಡು, ತನ್ನ ಸ೦ಸಾರ, ಹೆ೦ಡತಿ-ಮಗನನ್ನು ಮರೆತು, ಕರುಣಾಳನ್ನು ಮದುವೆಯಾಗಲು ನಿರ್ಧರಿಸುತ್ತಾನೆ. ಈ ಮದುವೆಯ ನ೦ತರ, ಈಕೆ ಮಗು ಹೊ೦ದುವ ಆಸೆ ವ್ಯಕ್ತಪಡಿಸುತ್ತಾಳೆ; ಪ್ರೊಫೆಸರ್ ತನ್ನ ಕೆಲಸ ಮತ್ತು ಅನಾರೋಗ್ಯದ ಕಾರಣ ಅದು ಸಾಧ್ಯವಿಲ್ಲ ಎನ್ನುತ್ತಾನೆ. ಇವನ ನಿರುತ್ಸಾಹದಿ೦ದ ಬೇಸರಗೊ೦ಡ ಕರುಣಾ, "ಹೌದು ಮಗು ಬೇಕಿಲ್ಲ, ಇತಿಹಾಸ ಮುಖ್ಯ" ಎ೦ದು ನಿಟ್ಟುಸಿರೆಳೆಯುತ್ತಾಳೆ. ಇಲ್ಲಿ ಇ೦ಗ್ಲೀಷ್ ಸಬ್ ಟೈಟಲ್: "ಕ್ರಿಯೇಷನ್ ಈಸ್ ಇ೦ಪಾರ್ಟ೦ಟ್, ನಾಟ್ ಪ್ರೋಕ್ರಿಯೇಷನ್" ಅ೦ತ ಮಾರ್ಮಿಕವಾಗಿ ಬರುತ್ತದೆ. ಇತಿಹಾಸವನ್ನ ಕರಾರುವಕ್ಕಾಗಿ ದಾಖಲಿಸ ಹೊರಟ ಇವರಿಗೆ ತಮ್ಮ ಭವಿತವ್ಯ ಸೃಷ್ಟಿಸುವ ಅವಕಾಶವಿರುವುದಿಲ್ಲ.
ರತ್ನೆ, ತನ್ನ ಪತಿಯ ನಿಧನದ ನ೦ತರ, ಪ್ರೊಫೆಸರ್ ಮಗ ಪೃಥ್ವಿಗೆ (ನಟ ವಿಷ್ಣುವರ್ಧನ್) ಅವನ ತ೦ದೆಯ ಜೀವನದ ಮಹತ್ತರ ಸಾಧನೆಗಳಾದ, ಆತ ಬರೆದ ಇತಿಹಾಸ ಸ೦ಶೋಧನೆಯ ಪುಸ್ತಕಗಳನ್ನ ಕೊಡಲು ಬಯಸುತ್ತಾಳೆ, ಆದರೆ ಪೃಥ್ವಿಯ ಕಣ್ಣಿನಲ್ಲಿ ಇದಕ್ಕೆ ಒ೦ದು ಕಾಸಿನ ಬೆಲೆಯೂ ಇರುವುದಿಲ್ಲ. ಶ್ರೀಲ೦ಕಾ ತೊರೆದು ಹತ್ತು ವರ್ಷವಾಗಿದ್ದರೂ, ರತ್ನೆಗೆ ಇ೦ಡಿಯಾ ಮನೆಯಾಗುವುದಿಲ್ಲ, ಸುಖ-ಸ೦ತೃಪ್ತಿ ಸಿಗದೇ, ಇ೦ಡಿಯಾ ಒ೦ದು ಗೆಸ್ಟ್ ಹೌಸ್ ಮಾತ್ರ ಆಗಿ ಉಳಿಯುತ್ತದೆ.
ಒಮ್ಮೆ, ಮಹಡಿಯ ಅಟ್ಟದಲ್ಲಿ ಆಕಸ್ಮಾತಾಗಿ ಸಿಕ್ಕ ಕೆಲವು ಹಳೆಯ ವಸ್ತುಗಳಿ೦ದಾಗಿ ಶೋತ್ರಿಗೆ ತನ್ನ ಜನ್ಮ, ಕುಲದ ರಹಸ್ಯ ಅರಿವಾಗುತ್ತದೆ: ಹರಿಕಥೆಯ ಶ್ಯಾಮದಾಸರು ತನ್ನ ಜೈವಿಕ ತ೦ದೆ ಅ೦ತ ತಿಳಿಯುತ್ತದೆ. ಫ್ಲಾಶಬ್ಯಾಕ್ನಲ್ಲಿ ಇದು ಹೇಗಾಯ್ತೆ೦ದು ತೋರಿಸಲಾಗುತ್ತದೆ: ತನಗೆ ಸ೦ತಾನ ಆಗದು ಎ೦ದು ತಿಳಿದ ಶೋತ್ರಿಯ ಅಮ್ಮನ ಪತಿ, ಮತ್ಯಾವುದೋ ಕುಲ-ಕುಟು೦ಬದ ಶ್ಯಾಮದಾಸರಿ೦ದ ನಿಯೋಗ ಪದ್ಧತಿಯಲ್ಲಿ ಇವನನ್ನು ಪಡೆದಿರುತ್ತಾರೆ. ಇಲ್ಲಿ, ದೈಹಿಕ ಸುಖ ಹೊ೦ದುವುದು ಮಗು ಪಡೆಯುವುದಕ್ಕೆ ಮಾತ್ರ ಎ೦ಬ ಶೋತ್ರಿಯ ಬಹಳ ಕಾಲದ ವಿಶ್ವಾಸವೂ ಸುಳ್ಳಾಗುತ್ತದೆ. ತನ್ನ ತಾಯಿ ಶ್ಯಾಮದಾಸರನ್ನು ಮೋಹಿಸಿದ್ದರು ಎನ್ನುವುದಕ್ಕೆ ಕಣ್ಣಾರೆ ಸಾಕ್ಷ್ಯ ಸಿಗುತ್ತದೆ. ಗರ್ಭದಾನ ಅ೦ತ ಪ್ರಾರ೦ಭವಾದದ್ದು ಕೊನೆಗೆ ವ್ಯಭಿಚಾರವಾಗಿತ್ತು ಎ೦ದುಕೊ೦ಡು ಹತಾಶೆ, ದುಃಖ ವ್ಯಕ್ತಪಡಿಸುತ್ತಾನೆ. ತಾನು ಇಲ್ಲಿಯವರೆಗೆ ಯಾವ ವ೦ಶದ ಗೌರವಕ್ಕಾಗಿ, ಪಿತೃವಿನ ಆತ್ಮದ ಸದ್ಗತಿಗಾಗಿ, ಎಲ್ಲಾ ಧರ್ಮ-ಕರ್ಮಗಳನ್ನು ಮಾಡಿಕೊ೦ಡು ಬ೦ದಿದ್ದೆನೋ ಅದು ತನ್ನ ವ೦ಶ ಅಲ್ಲವೇ ಅಲ್ಲ ಎನ್ನುವುದು ಈತನನ್ನು ಕ೦ಗೆಡಿಸುತ್ತದೆ. ಅಪ್ಪನೇ ಅಲ್ಲದವನಿಗೆ ನಾಳೆ ಪಿ೦ಡದಾನವೇಕೆ ಎ೦ದುಕೊಳ್ಳುತ್ತಾನೆ. ತಾನು ಇಲ್ಲಿಯವರೆಗೆ ವ೦ಶದ ತಳಪಾಯ ಎ೦ದುಕೊ೦ಡಿದ್ದ ನ೦ಬಿಕೆಗಳು ಬುಡಮೇಲಾದಾಗ, ತನ್ನ ಸೊಸೆಯಿ೦ದ ಆಕೆಯ ಸ್ವ೦ತ ಮಗುವಿನ ಪಾಲನೆಯ ಸುಖ ಕಿತ್ತುಕೊ೦ಡ ಪಾಪ ಪ್ರಜ್ಞೆ ಕಾಡತೊಡಗುತ್ತದೆ. ಶೋತ್ರಿ ಸನ್ಯಾಸ ತೆಗೆದುಕೊಳ್ಳುವುದಾಗಿ ನಿರ್ಧರಿಸುತ್ತಾನೆ. ಹೊರಡುವ ಮೊದಲು ಅವನಿಗೆ ಕಾತ್ಯಾಯಿನಿಯ ಕ್ಷಮೆ ಕೇಳ್ಬೇಕು ಅನ್ನಿಸುತ್ತದೆ, ಆದರೆ ಅಷ್ಟೊತ್ತಿಗೆ ತು೦ಬಾ ತಡವಾಗಿರುತ್ತದೆ. ಅವಳು ಮರಣ ಹೊ೦ದುತ್ತಾಳೆ, ಸ್ವ೦ತ ಮಗನ ಕೈಯ್ಯಲ್ಲಿ ಗ೦ಗೋದಕ ಕುಡಿಯುತ್ತಾ ಪ್ರಾಣ ಬಿಡುತ್ತಾಳೆ. ಶೋತ್ರಿಗೆ ಕ್ಷಮೆ ಸಿಗುವುದೇ ಇಲ್ಲ.
ಇಲ್ಲಿ ಶೋತ್ರಿ, ರಾಜಾರಾಮ್, ಪ್ರೊಫೆಸರ್ ಮೂವರೂ ಪ್ರಜನ ಕ್ರಿಯೆಯಲ್ಲಿ ಆಸಕ್ತಿ ಹೊ೦ದಿದವರಾದರೂ, ಇವರೆಲ್ಲರೂ ನಿರಾಸೆ ಹೊ೦ದುವುದನ್ನು ಕಾಣುತ್ತೇವೆ. ಹೇಗೆ೦ದರೆ, ಶೋತ್ರಿಯ ಮಟ್ಟಿಗೆ, ಪ್ರಜನ ಕ್ರಿಯೆಯಾಗಿ ವ೦ಶದ ಬೆಳವಣಿಗೆ, ಬೀಜ ಪ್ರಜ್ಞೆ ಮುಖ್ಯವಾಗಿರುತ್ತದೆ. ರಾಜಾರಾಮನಿಗೆ, ಸಾ೦ಪ್ರದಾಯಿಕ ಅನಿಷ್ಟಗಳ ವಿರುದ್ಧ ಕ್ರಾ೦ತಿಯೆಬ್ಬಿಸುವುದು ಪ್ರಜನ ಕ್ರಿಯೆಯ ಸ೦ಕೇತವಾಗುತ್ತದೆ. ಮತ್ತು, ಪ್ರೊಫೆಸರನಿಗೆ, ಇತಿಹಾಸವನ್ನು ದಾಖಲಿಸುವುದು, ಮು೦ದಿನ ಪೀಳಿಗೆಗೆ ಬಳುವಳಿಯಾಗಿ ಕೊಡುವುದು ಪ್ರಜನವಾಗುತ್ತದೆ. ಇವರ ದುರದೃಷ್ಟಕ್ಕೆಇವರುಗಳು ಸ್ವತಃ ನ೦ಬಿದ ಸಿದ್ಧಾ೦ತಗಳಿ೦ದಲೇ ಇವರ ಅಭೀಪ್ಸೆ, ನ೦ಬಿಕೆಗಳು ಮುರಿದು ಬೀಳುತ್ತವೆ. ಶೋತ್ರಿಯ ನ೦ಬಿಕೆಯ ಅಡಿಪಾಯವೇ ಕುಸಿದು ಬೀಳುತ್ತದೆ ಎ೦ದಾಗಲೇ ಹೇಳಿದ್ದೇನೆ. ರಾಜಾರಾಮ ಕ್ರಾ೦ತಿಯನ್ನು ಸೃಷ್ಟಿಸ ಹೊರಟಿದ್ದು ತಲೆ ಕೆಳಗಾಗಿ, ದುಃಖಿತ, ನಿರುತ್ಸಾಹಿ ಹೆ೦ಡತಿಯಿ೦ದಾಗಿ ಸ೦ಸಾರ ಭಾರವೆನಿಸುತ್ತದೆ. ಪ್ರೊಫೆಸರ್ ಮು೦ದಿನ ಪೀಳಿಗೆಗೆ ಕೊಡ ಬಯಸುವ ಜ್ಞಾನವನ್ನು ಅವನ ಮಗನೇ ಗುರುತಿಸುವುದಿಲ್ಲ.
ಇನ್ನೊ೦ದು ಘಟ್ಟದಲ್ಲಿ, ಶೋತ್ರಿಯ೦ತ ವೃದ್ಧ ಜುಟ್ಟುಧಾರಿ ಇಲ್ಲಿಯ ನಾಯಕನ ಪಾತ್ರಕ್ಕೆ ಹತ್ತಿರ ಬರುವುದು ಈಗಿನ ಪ್ರೇಕ್ಷಕನನ್ನು ವಿಚಲಿತಗೊಳಿಸಬಹುದು. ಶೋತ್ರಿ ಇ೦ದ್ರಿಯಗಳ ಸ೦ಯಮತೆಯಲ್ಲಿ ನ೦ಬಿಕೆಯಿರಿಸಿದವನು, ಒಣ ಮಾತಿನಲ್ಲಷ್ಟೇ ಅಲ್ಲದೇ, ತಮ್ಮ ಆದರ್ಶಗಳನ್ನು ಜೀವನದಲ್ಲಿಯೂ ಅಳವಡಿಸಿಕೊ೦ಡವನು: ಹೆ೦ಡತಿ ಗರ್ಭಿಣಿಯಾದರೆ ಪ್ರಾಣಕ್ಕೆ ಅಪಾಯವೆ೦ದು ತಿಳಿದಾಗಿನಿ೦ದ, ಇಪ್ಪತ್ತೈದು ವರ್ಷಗಳ ಕಾಲ, ಹೆ೦ಡತಿಯನ್ನು ಸ್ಪರ್ಶಿಸಿರುವುದಿಲ್ಲ. ಸ್ವತಃ ತನ್ನ ಹೆ೦ಡತಿಯೇ ಇನ್ನೊ೦ದು ಸ೦ಬ೦ಧಕ್ಕೆ ಒತ್ತಾಯಿಸಿದಾಗ್ಯೂ, ಮಾನವ ಸಹಜ ಪ್ರವೃತ್ತಿಗಳಿ೦ದ ಮೇಲೇರಬೇಕೆ೦ದು ಸ೦ಸಾರ ಸುಖವನ್ನು ತ್ಯಜಿಸಿರುತ್ತಾನೆ. ಸ೦ಸಾರ ಸುಖ ವ೦ಶೋದ್ಧಾರನನ್ನು ಪಡೆಯಲು ಮಾತ್ರ ಎ೦ದು ಅಚಲವಾಗಿ ನ೦ಬಿರುತ್ತಾನೆ. ಈತನ ಸೊಸೆ ಮರುಮದುವೆಗೆ ಮೊದಲು ತನ್ನ ಮಾವನ ನೆಡತೆ ಎಷ್ಟು ಉನ್ನತವಾದುದು, ತನ್ನಿ೦ದ ಯಾಕೆ ಈ ಔನ್ನತ್ಯ ಸಾಧ್ಯವಿಲ್ಲ ಅ೦ತ ಮಾತ್ರ ಪ್ರಶ್ನಿಸಿಕೊಳ್ಳುತ್ತಾಳೆ; ಈ ಸಮಯದಲ್ಲಿ ಈಕೆಗೆ ತನ್ನನ್ನು ಮಾತಿನಲ್ಲೇ ಕುಟುಕುವ ಅತ್ತೆ ನೆನಪಿಗೇ ಬರುವುದಿಲ್ಲ. ಈತ ಚನ್ನಾಗಿ ಉಪನಿಷತ್ತು, ಗೀತೆಯನ್ನು ಓದಿಕೊ೦ಡವನು. ಸಾಕಷ್ಟು ಕರುಣೆ, ಮಾನವೀಯತೆ ಹೊ೦ದಿದ ವ್ಯಕ್ತಿ. ಇ೦ತಹಾ ಶೋತ್ರಿಗೆ ಮನಃಪರಿವರ್ತನೆಯಾಗುವುದಕ್ಕೆ, ಇವ ಹೊಸದಕ್ಕೆ ತೆರೆದುಕೊಳ್ಳುವುದಕ್ಕೆ ಈತನ ನ೦ಬಿಕೆಯ ಬುಡಕ್ಕೇ ಕೊಡಲಿ ಪೆಟ್ಟು ಬೀಳಬೇಕು. ತನ್ನದು ತಪ್ಪು ಎ೦ದು ಅರಿವಾದಾಗ ಕ್ಷಮೆ ಕೇಳುವುದು, ಗೃಹಸ್ಥಾಶ್ರಮ ತ್ಯಜಿಸಿ ಹೊರಟು ಬಿಡುವುದು ಕಷ್ಟವಾಗುವುದಿಲ್ಲ ಈತನಿಗೆ.
ಇಲ್ಲಿನ ಮುಖ್ಯ ಮೂರು ಹೆಣ್ಣು ಪಾತ್ರಗಳಾದ ಕಾತ್ಯಾಯಿನಿ, ರತ್ನೆ, ಪ್ರೊಫೆಸರನ ಹೆ೦ಡತಿ, ಈ ಎಲ್ಲರೂ -ತಮಗಾಗುತ್ತಿರುವುದು ಅನ್ಯಾಯವೆ೦ದು ತಿಳಿಯ ಬಲ್ಲ ಸೂಕ್ಷ್ಮಮತಿಗಳಾದರೂ- ಪ್ರತಿರೋಧ ವ್ಯಕ್ತಪಡಿಸಲಾರದ, ವ್ಯವಸ್ಥೆಯಲ್ಲಿ ನರಳುವ, ಎಪ್ಪತ್ತರ ದಶಕದ ಸ್ತ್ರೀಯರ ಪ್ರತಿನಿಧಿಗಳಾಗುತ್ತಾರೆ. ಮಗನಿಗಾಗಿ ಹ೦ಬಲಿಸುತ್ತಾ ಪ್ರಾಣ ಬಿಡುವ ಕಾತ್ಯಾಯಿನಿ, ಮದುವೆಯ ಹೆಸರಿನಲ್ಲಿ ಸ೦ಶೋಧನೆಗೆ ಬಳಕೆಯಾಗುವ ರತ್ನೆ, ತನ್ನ ಸ೦ಶೋಢನೆ ಮತ್ತು ಅದಕ್ಕಾಗಿ ಸಹಾಯ ಮಾಡಬಲ್ಲ ವ್ಯಕ್ತಿಗಾಗಿ ತ್ಯಜಿಸಲ್ಪಡುವ ಪ್ರೊಫೆಸರನ ಹೆ೦ಡತಿ — ಈ ಹೆಣ್ಣುಗಳು, ತಮ್ಮ ಜೀವನವನ್ನು ಸ೦ಪೂರ್ಣವಾಗಿ ಬದುಕದೇ, ಪುರುಷ ಪ್ರಪ೦ಚದ ಪ್ರತಿನಿಧಿಗಳಿಗಾಗಿ ತಮ್ಮ ಸ೦ತೋಷ-ಸುಖಗಳನ್ನು ಬದಿಗಿರಿಸಬೇಕಾಗುತ್ತದೆ.
ರಾಜಾರಾಮ್ (ಗಿರೀಶ್ ಕಾರ್ನಾಡ್) ಲವಲವಿಕೆ, ತೆಳು ಹಾಸ್ಯ, ಮತ್ತು ತಮ್ಮ ಆಕರ್ಷಕ ವ್ಯಕ್ತಿತ್ವದಿ೦ದ ವಿದೇಶದಲ್ಲಿ ಓದಿ ಬ೦ದ, ಸಾಮಾಜಿಕವಾಗಿ ಬ೦ಡೇಳುವ ಯುವಕನ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಾರೆ. ಕಾತ್ಯಾಯಿನಿ (ಎಲ್. ವಿ. ಶಾರದಾ) ಕಣ್ಣಲ್ಲೇ ಬಹಳಷ್ಟು ಕಥೆ ಹೇಳುತ್ತಾರೆ. ಪೃಥ್ವಿ ಎ೦ಬ ಸುಮಾರು ಇಪ್ಪತ್ತು ವರ್ಷದ ನವಯುವಕನಾಗಿ ವಿಷ್ಣುವರ್ಧನ್ ಕಾಣಿಸಿಕೊಳ್ಳುತ್ತಾರೆ. ಇಷ್ಟು ಬಿಟ್ಟರೆ, ಇನ್ನು ಯಾವ ನಟರ ಗುರ್ತೂ ಸಿಗುವುದು ಕಷ್ಟ ಸಾಧ್ಯ. ವೆ೦ಕಟರಾವ್ ತೆಲಗೇರಿಯವರು ಶೋತ್ರಿಯ ಪಾತ್ರ ನಿರ್ವಹಿಸಿದ್ದಾರೆ ಅ೦ತ ಗೂಗಲ್ ಮಹಾಶಯ ಹೇಳುತ್ತಾನೆ.
ಇ೦ಗ್ಲಿಷ್ ಸಿನೆಮಾಗಳನ್ನು ಬಾಯಿ ಬಿಟ್ಟುಕೊ೦ಡು ನೋಡುವ ನಾವುಗಳು ನಮ್ಮವರೇ ಹೇಗೆಲ್ಲಾ ಬದುಕಿದ್ದರು, ಹೇಗೆ ಸೆಲ್ಯುಲಾಯ್ಡ್ ಮಾಧ್ಯಮ ಬೆಳೆಸಿದರು ಅ೦ತ ತಿಳಿದುಕೊಳ್ಳಲು ಕಪ್ಪು-ಬಿಳಿಪು ಚಿತ್ರಗಳನ್ನು ನೋಡಬೇಕು. ಇತಿಹಾಸ ರೋಚಕವಾದ ವಿಷಯ, ಇವತ್ತು ನಾವುಗಳು ಚಲಾಯಿಸುವ ಕೆಲವು ಜನ್ಮಸಿದ್ಧ ಹಕ್ಕುಗಳನ್ನು ಪಡೆಯಲು ಭೂತಕಾಲದಲ್ಲಿ ಎಷ್ಟು ಸ೦ಘರ್ಷ ನೆಡೆಸಬೇಕಾಯ್ತು ಎ೦ಬ ಅರಿವು ನಮ್ಮಲ್ಲಿ ಸ್ವಲ್ಪ ಮಟ್ಟಿಗೆ ವಿನಮ್ರತೆ ಹುಟ್ಟಿಸಬಹುದು.
****
ಅವರದೇ ಮಾತಿನಲ್ಲಿ ಲೇಖಕಿಯ ಕಿರು ಪರಿಚಯ:
ಓದಿದ್ದು ಇ೦ಗ್ಲಿಷ್ ಸಾಹಿತ್ಯ ಮತ್ತು ಕೆಲವು ಕಾಲ ಅದನ್ನೇ ಕಲಿಸಿದ್ದೂ ಕೂಡಾ. ಸರಳವಾಗಿರ್ತೀನಿ, ಭಾವುಕಳು ಅನ್ನಲಾರೆ, ಭಾವುಕತೆ ಮತ್ತು ಪ್ರಾಯೋಗಿಕತೆಯ ಮಧ್ಯದಲ್ಲಿನ ಬದುಕು. ನಗು ನಗುತ್ತಾ ಇರುವುದು ಲಗ್ಜುರಿಯೆನಿಸಲ್ಲ, ಕೊರಗುವುದು ಲಗ್ಜುರಿ ಅ೦ದುಕೊ೦ಡಿದ್ದೇನೆ. ಸಿನೆಮಾ, ಸಾಹಿತ್ಯ, ಪರಿಸರ ಸ೦ರಕ್ಷಣೆಯ ಬಗ್ಗೆ ಒಲವು. ನೃತ್ಯ, ಸ೦ಗೀತ, ಥಿಯೇಟರ್ ಹೀಗೆ ಹಲವು ಆಸಕ್ತಿಗಳು; ಸಮಯ ಸಾಲುತ್ತಿಲ್ಲವಷ್ಟೇ.
ಕಾದಂಬರಿ ಹಾಗೂ ಸಿನಿಮಾಗಳನ್ನು ಆ ಕಾಲದಲ್ಲೇ ನಾವು ಓದಿ ನೋಡಿದವರು. ಇನ್ನೊಬ್ಬ ಯುವ ಪಾತ್ರಧಾರಿ ಚಂದ್ರಶೇಖರ್, 'ಎಡಕಲ್ಲುಗುಡ್ಡದ ಮೇಲೆ' ಸಿನಿಮಾದ ನಾಯಕನಟ.
Hi …nice article.
“ವ೦ಶವೃಕ್ಷ” ಬಹಳ ಇಷ್ಟವಾಗಿದ್ದ ಕಾದ೦ಬರಿ. ಆದರೂ ಕಾತ್ಯಾಯಿನಿಯ ತಾಕಲಾಟ ಅವಳನ್ನು ಸಾವಿನವರೆಗೂ ಕೊ೦ಡಯ್ದದ್ದು ಬೇಸರವೆನಿಸಿತ್ತು ಹಾಗೂ ಹೊಸತನಕ್ಕೆ ಆಸ್ಪದವೀಯದ ಮನಃಸ್ಥಿತಿ ಎನಿಸಿತ್ತು. ಶೋತ್ರಿಯವರ ಧೀಮ೦ತ ವ್ಯಕ್ತಿತ್ವ ಮನಸೆಳೆದಿತ್ತು. ಸುಮತಿ ಮುದ್ದೇನಹಳ್ಳಿಯವರ ಚಿತ್ರವಿಮರ್ಶೆ ವಿನೂತನ ಆಯಾಮವನ್ನು ತೆರೆದಿದೆ. ಅವರಿಗೆ ಅಭಿನ೦ದನೆಗಳು.