ನಾ ಕಂಡ ನಮ್ಮ ನಡುವಿನ ವಿಜ್ಞಾನದ ಸಂಪನ್ಮೂಲ ವ್ಯಕ್ತಿಗಳು: ಎಂ.ಎಲ್.ನರಸಿಂಹಮೂರ್ತಿ, ಮಾಡಪ್ಪಲ್ಲಿ

ಫೆ.೨೦.೨೦೧೬ ರಂದು ಬಾಗೇಪಲ್ಲಿಯ ಗಂಗಮ್ಮ ಗುಡಿ ರಸ್ತೆಯ ಶ್ರೀನಿವಾಸ್ ಮೆಸ್ ಹಿಂಭಾದಲ್ಲಿನ ಶ್ರೀ ವಾಸುದೇವ ಮೂರ್ತಿ ಎಂಬುವರ ಮನೆಗೆ ತೆರಳಿದ್ದೆ. ಏಕೆಂದರೆ 2013ರಲ್ಲಿ ನ್ಯಾಷನಲ್ ಕಾಲೇಜಿನ ನೆಚ್ಚಿನ ಗುರುಗಳಾದ ಬಿ.ಪಿ.ವಿ ಸರ್ ಅವರು ವಾಸುದೇವ ಸರ್ ಅವರ ಕುರಿತು ಒಂದಿಷ್ಟು ವಿಷಯ ತಿಳಿಸಿದ್ದರು. ನಂತರ ಅದೇವರ್ಷ ಜೂನ್ ತಿಂಗಳಲ್ಲಿ ಖುದ್ದಾಗಿ ಗಂಗಮ್ಮ ಗುಡಿ ರಸ್ತೆಯಲ್ಲಿನ ಅವರ ಮನೆಗೆ ಬೇಟಿ ನೀಡಿದಾಗ ಅವರು ಮನೆಯಲ್ಲಿರಲಿಲ್ಲ. ಕೆಲ ದಿನಗಳ ನಂತರ ಅವರ ಮನೆಗೆ ಹೋದಾಗ ಹಳೇ ತಾಮ್ರದ ತಂತಿಯಿಂದ ಯಾವುದೋ ಮಾದರಿ ಅಥವಾ ಹೊಸ ಪ್ರಯೋಗದ ಕಾರ್ಯದಲ್ಲಿ ನಿರತರಾಗಿದ್ದರು. ಮನೆಯೊಳಗೆ ಹೋದ ನಾನು ನನ್ನ ಪರಿಚಯ ಮಾಡಿಕೊಂಡೆ. ಅವರು ತುಂಬಾ ಖುಷಿ ಪಟ್ಟರು ಸುಮಾರು ಬೆಳಗ್ಗೆ 11ರ ಸಮಯಕ್ಕೆ ಹೋದವನು ಮದ್ಯಾಹ್ನ 2.30ರ ವರೆಗೆ ಅವರ ಮನೆಯಲ್ಲಿ ವಿವಿಧ ವಿಜ್ಞಾನ ಉಪಕರಣಗಳನ್ನು ನೋಡುವುದರಲ್ಲೇ ಕಾಲ ಕಳೆದೆ. ಆಗ ನನ್ನ ಬಳಿ ಇದ್ದದ್ದು ನೋಕಿಯಾ x2 ಮೊಬೈಲ್ ಆಗಿದ್ದಕ್ಕಾಗಿ ಯಾವುದೇ ಪೋಟೋ ತೆಗೆಯಲಿಲ್ಲ. ಅವರ ಮನೆಯ ಮೇಲಿನ ಕೊಠಡಿಯಲ್ಲಿ ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಂಡ ಸುಮಾರು.ರೂ.80000 ರಿಂದ 150000 ರೂ ಬೆಲೆ ಬಾಳುವ ದೂರದರ್ಶಕಗಳಿದ್ದವು. ದೊಡ್ಡ ಗಾತ್ರದ ಎರಡು ದೂರದರ್ಶಕಗಳಂತೂ ತುಂಬಾ ಚೆನ್ನಾಗಿದ್ದು ಚಂದ್ರನನ್ನು ಸ್ಪಷ್ಟವಾಗಿ ನೋಡುವಷ್ಟು ತೀಕ್ಷ್ಣವಾಗಿದ್ದವು. ಅಷ್ಟೆ ಅಲ್ಲದೆ ಅವರ ಮನೆಗೆ 2 ದೀಪಗಳು ಉರಿಯುವಷ್ಟು ವಿದ್ಯುತ್ ನ್ನು ಹಳೇ ಫ್ಯಾನಿನ ರೆಕ್ಕೆ ಬಳಸಿ ಮನೆ ಮೇಲೆ ಅವುಗಳನ್ನು ಜೋಡಿಸಿ ಪವನ ವಿದ್ಯುತ್ ತಯಾರಿಸುತ್ತಿದ್ದರು. ವಿವಿಧ ಲೋಹಗಳ ತಗಡುಗಳಿಂದ ಪ್ರೋಫೆಲರ್ ಗಳನ್ನು ತಯಾರಿಸಿ ,ಅವುಗಳ ವೇಗ, ಹಗುರತೆಗಳಿಗನುಸಾರವಾಗಿ ಲೆಕ್ಕಾಚಾರ ಮಾಡುತ್ತಿದ್ದರು. ಹಲವು ರೀತಿಯ ಸೌರ ಸಾಧನಗಳು ಅವರಲ್ಲಿ ಇದ್ದವು. ಅಷ್ಟೆ ಅಲ್ಲದೆ ಕೆಲ ಶಿಕ್ಷಕರಿಗೆ ವಿಜ್ಞಾನ ವಸ್ತು ಪ್ರದರ್ಶನಗಳಿಗೆ ಬೇಕಾಗುವ ಉಪಕರಣಗಳನ್ನು ಕಡಿಮೆ ವೆಚ್ಚದಲ್ಲಿ ಮಾಡಿಕೊಡುತ್ತಿದ್ದರಂತೆ. ಅವರ ಮನೆಯೇ ಒಂದು ರೀತಿಯ ವಿಜ್ಞಾನ ವಸ್ತುಗಳ ಮ್ಯೂಸಿಯಂ ಆಗಿತ್ತು.   

ಮೂರು ವರ್ಷಗಳ ನಂತರ ಮತ್ತಷ್ಟು ವಿಜ್ಞಾನ ಮಾಹಿತಿಯನ್ನು ಮತ್ತು ವಾಸುದೇವ ಮೂರ್ತಿಯವರ ವಿಜ್ಞಾನ ಪಯಣವನ್ನು ಸಂಪೂರ್ಣ ತಿಳಿದುಕೊಂಡು ದಾಖಲಿಸುವ ಕುತೂಹಲದಲ್ಲಿ ಅಂಜಿನಿ ಸ್ಟೊರ್ಸ್ ಯಿಂದ ಹೊಸದೊಂದು ಪೆನ್ನು ಖರೀದಿಸಿ ನಾನಾ ಬಗೆಯ ಪ್ರಶ್ನೆಗಳ ಗಂಟನ್ನು ತಲೆ ತುಂಬ ಹೊತ್ತಿಕೊಂಡು ಹೋದೆ. ಅಲ್ಲೊಂದು ಆಘಾತಕಾರಿ ವಿಷಯ ನಾನು ಕೇಳಿಸಿಕೊಳ್ಳುತ್ತೇನೆ ಎಂಬ ಸುಳಿವು ಇಲ್ಲದೆ ಸಂಭ್ರಮದಲ್ಲಿ ಅವರ ಮನೆ ತಲುಪಿದೆ. ಅವರ ಮನೆ ಮೇಲಿನ ಹಳೇ ಫ್ಯಾನ್ ಚಕ್ರಗಳ ಪವನ ವಿದ್ಯತ್ ಚಕ್ರಗಳು ಮೌನದಲ್ಲೇ ಮರುಗುತ್ತಿದ್ದವು ಅನಸಿತ್ತು. ಬಾಗಿಲ ಬಳಿ ಹೋಗಿ ಸರ್ ಸರ್ ಎಂದು ಎರಡು ಸಲ ಬಾಗಿಲು ತಟ್ಟಿದೆ. ಯಾರೂ..? ಎಂಬ ಮೆಲ್ಲನೆಯ ಶಬ್ಧ ಕೇಳಿ ಬಂತು. ಆಗ ನಾನು ಸರ್ ಮಾಡಪ್ಪಲ್ಲಿ ಹುಡುಗ ಎರಡು ವರ್ಷಗಳ ಹಿಂದೆ ಬಂದಿದ್ದೆ ಎಂದೆ. ಅಷ್ಟ್ರಲ್ಲಿ ಆ ಮನೆಯಲ್ಲಿದ್ದ ಯುವಕನೋರ್ವ ಬಾಗಿಲು ತೆರೆದರು ಸರ್ ಯಾರ್ ಬೇಕಿತ್ತು ಎಂದರು. ಅದಕ್ಕೆ ನಾನು ಸರ್ ವಾಸುದೇವಾ ಸರ್ ಅವರು..? ಅದಕ್ಕೆ ಆ ಯುವಕ ಅವರಿಲ್ಲ ಸರ್..ಎರಡು ತಿಂಗಳ ಹಿಂದೆ ….?? ಮಾತುಗಳ ಮೌನ ಎದೆ ಹೊಡೆದೋದಂತಾಯಿತು.ಸಾರಿ ಸರ್..ಸಾರಿ..ಎಂದು ಮೆಲ್ಲಗೆ ಹಿಂದೆಜ್ಜೆ ಹಾಕಲೆತ್ನಿಸಿದೆ.,ಅವರು ಬನ್ನಿ ಸರ್ ಒಳಗೆ ಬನ್ನಿ ಎಂದರು..ನಾನು ಪರವಾಗಿಲ್ಲ ಸರ್ ಮತ್ತೊಮ್ಮೆ ಬರುತ್ತೇನೆ ಎಂದು ಏನೋ ಒಂದು ರೀತಿಯ ಮೌನದಲ್ಲಿ ವಾಪಸ್ಸು ಮರಳಿದೆ. 

ಬಾಗೇಪಲ್ಲಿಯಲ್ಲಿ ವಿಜ್ಞಾದ ಕುರಿತು ಸುಮಾರು 60ರ ಆಸುಪಾಸಿನ ಒಬ್ಬ ಶಿಕ್ಷಕನಲ್ಲದ, ವಿಜ್ಞಾನ ವಿಷಯದಲ್ಲಿ ಪದವಿ ಪಡೆಯದ(ಅವರು ಬಿ.ಎ ಓದಿದ್ದರಂತೆ), ಅಥವಾ ಯಾವುದೋ ಗುರಿ ಸಾಧನೆಗೆಂದೇ ಸಂಶೋಧನೆ ಮಾಡದೆ ಕುತೂಹಲಕಾರಿ ಅಂಶಗಳನ್ನು ತಿಳಿಯುವ ನಿಟ್ಟಿನಲ್ಲಿ ತನ್ನ ಕೊನೆ ದಿನಗಳ ವರೆಗೆ ಪ್ರಾಯೋಗಿಕ ಜೀವನ ನಡೆಸಿದ ನಿಜವಾದ ವಿಜ್ಞಾನ ವಿಷಯದ ಸಂಪತ್ತು  ಇಂದು ಇಲ್ಲ ಅನ್ನುವುದು ನೋವಿನ ಸಂಗತಿ. ಇಷ್ಟೆಲ್ಲ ನೆನಪಾಗಲು ಕಾರಣ 28ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಎಂಬುದಕ್ಕಾಗಿ.

 ಹಾಗೆಯ ಚಿಕ್ಕಬಳ್ಳಾಪುರದಲ್ಲಿ ಸುಮಾರು 8 ವರ್ಷಗಳಿಂದ ಪರಿಚಯವಿರುವ ಸಿ.ಎನ್ ಕೃಷ್ಣಮೂರ್ತಿ ಸರ್. ಟೌನ್ ಹಾಲ್ ಸಮೀಪ ಕೃಷ್ಣ ಥಿಯೇಟರ್ ಹತ್ತಿರ ಅವರ ಮನೆ . ಅದೆಷ್ಟೋ ಸಲ ಅವರೊಂದಿಗೆ ಆತ್ಮೀಯ ಸಂಭಾಷಣೆಗಳು ನಡೆಸಿದ್ದೇನೋ ಗೊತ್ತಿಲ್ಲ. ಹಲವು ಸಲ ಮಳೆಗಾಲದಲ್ಲಿ ಅವರ ಛತ್ರಿ ಹಿಡಿದು ನಮ್ಮ ರೂಮಿಗೆ ತಲುಪುತ್ತಿದ್ದೇ ನೆನಪು. ಕೃಷ್ಣಮೂರ್ತಿ ಸರ್ ಅವರು ಸರಳ ಸಜ್ಜನಿಕೆಯ ವ್ಯಕ್ತಿಗಳಾಗಿದ್ದರು. ನಿತ್ಯ ನಿರಂತರ ಕೈಯಲ್ಲೊಂದು ಛತ್ರಿ , ಕಂಕುಲಲ್ಲೊಂದು ಬ್ಯಾಗ್ ಹಿಡುದು. ನಮ್ಮ ವಿಜ್ಞಾನ ಕೇಂದ್ರಕ್ಕೆ ತಪ್ಪದೆ ಬೇಟಿ ಮಾಡುತ್ತಿದ್ದರು. ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಸುಮಾರು ವರ್ಷಗಳ ಹಿಂದೆಯೇ ನಿವೃತ್ತಿಯಾಗಿದ್ದರು. ಅವರ ಸೇವೆಯೆಲ್ಲವೂ ಬಳ್ಳಾರಿಯಲ್ಲಿನ ಸಿ.ಎಸ್.ಐ ಕ್ರಿಸ್ಚಿಯನ್ ಶಾಲೆಯಲ್ಲಿ ಮುಗಿಸಿದ್ದರೂ ತೊಂಬತ್ತರ ಹರೆಯದಲ್ಲೂ ಚಟುವಟಿಕೆಯಿಂದ ಓಡಾಡುತ್ತಿದ್ದರು. ಅವರ ಮಡದಿಯೂ ಅಲ್ಲಿನವರೇ ಆದ್ದರಿಂದ ಪ್ರೀತಿಯಿಂದ ಸಂತಸವಾಗಿ ಇದ್ದರು. ಈಗಲೂ ಉಡುಪಿಯಲ್ಲಿ ತಮ್ಮ ಮಗನೊಂದಿಗೆ ಇದ್ದಾರೆ. ಅವರ ಮಾರ್ಗದರ್ಶನವಂತೂ ಅನನ್ಯವಾದ್ದು. ಪ್ರತಿ ದಿನವೂ ಒಂದಿಲ್ಲೊಂದು ರೀತಿಯ ತ್ಯಾಜ್ಯ/ವ್ಯರ್ಥ ವಸ್ತುವಿನಿಂದ ತಯಾರಸಲ್ಪಟ್ಟ ವಿಜ್ಞಾನ ಅಥವಾ ಗಣಿತ ವಿಷಯದ ಕುರಿತ ಮಾದರಿಗಳು ತಮ್ಮ ಬ್ಯಾಗನಲ್ಲಿ ನಮ್ಮ ವಿಜ್ಞಾನ ಕೇಂದ್ರಕ್ಕೆ ತಂದು ಕೊಡುಗೆ ನೀಡುತ್ತಿದ್ದರು. ಯಾವುದಾದರೂ ಒಂದು ನೆಪದಲ್ಲಿ ಒಂದಿಬ್ಬರು ಮಕ್ಕಳಿಗಾದರೂ ಈ ವಸ್ತು ಉಪಯೋಗವಾಗಲಿ ಎಂಬ ಆಶಯ ಅವರದ್ದು. ಹಳೇ ಫೌಡರ್ ಡಬ್ಬಿಯಿಂದ ಬಹುರೂಪದರ್ಶಕ(ಕೆಲಿಡಿಯೋ ಸ್ಕೋಪ್), ಹಲ್ಲಿನ ಪೇಷ್ಟ್ ಕಾಗದದ ಬಾಕ್ಸಿಂದ ಪೆರಿಸ್ಕೋಪ್, ಲಗ್ನಪತ್ರಿಕೆಯಿಂದ ಸನ್ ಡಯಲ್, ಗಟ್ಟಿಯಾದ ತಂತಿಯಿಂದ ತ್ರಿ ಪಾದಿ ಆಧಾರ ಸ್ತಂಭ(ಟ್ರೈಪಾಡ್ ಸ್ಟ್ಯಾಂಡ್ ) ಹೀಗೆ ಬಜಾರ್ ರಸ್ತೆಯಲ್ಲಿ ಬರುವಾಗ ಮತ್ತು ಹೋಗುವಾಗಿ ಅಂಗಡಿಯವರು ತಮ್ಮ ಅಂಗಡಿಯಲ್ಲಿ ಬಿಸಾಡುವ ನಿರುಪಯುಕ್ತ ರಟ್ಟಿನ ಡಬ್ಬಿ, ಬಣ್ಣದ ಕಾಗದದ ರಟ್ಟು, ತಂತಿ ತಗಡು ಮತ್ತಿತರ ವಸ್ತುಗಳನ್ನು ಮಾದರಿ ಕರ್ನಾಟಕ ಹಿರಿಯ ಪ್ರಾಥಮಿಕ ಶಾಲೆ(ಡಿಡಿಪಿಐ ಕಚೇರಿ ಸಮೀಪ) ತಲಪುವಷ್ಟ್ರಲ್ಲಿ ಹೊಸ ಕಲಿಕೆಯನ್ನು ಕೊಂಡು ತರುತ್ತಿದ್ದರು..ಅವರ ವಿಜ್ಞಾನದ ವಿಷಯದ ಕುರಿತ ಕುತೂಹಲ ಅವರನ್ನು ಪಡೆದ ವಿದ್ಯಾರ್ತಿಗಳ ಭಾಗ್ಯ ಎಂದು ಎಷ್ಟೋ ಸಲ ಅವರ ಬಳಿ ಹೇಳಿದ್ದೆ. ಅವರೆಂದರೆ ನಮ್ಮ ಕೇಂದ್ರದ ಮುಖ್ಯಸ್ಥರಾಗಿದ್ದ ಮಂಜುನಾಥ್ ಕೆ.ಆರ್(ಆತ್ಮೀಯ ಸ್ನೇಹಿತರು.), ಮತ್ತು ಸಿಬ್ಬಂದಿ ಚಂದ್ರಶೇಖರ್ .ಟಿ., ಹರೀಶ್.ಜಿ.ಸಿ, ಎಲ್ಲಪ್ಪ, ಶಿವಶಂಕರ, ವೇಣುಗೋಪಾಲ್, ರಘುನಾಥಗೌಡ, ಅಯ್ಯಪ್ಪ, ಸುದರ್ಶನ್, ರೇವತಿ ಮೇಡಂ, ಮತ್ತಿತರರಿಗೂ ವಿಶೇಷ ಪ್ರೀತಿ ಗೌರವ . ನೈಸರ್ಗಿಕವಾಗಿ ಸಂಭವಿಸುವ ವೈಜ್ಞಾನಿಕ ಕುತುಹಲಕಾರಿ ವಿಷಯಗಳನ್ನು ತಪ್ಪದೆ ದಾಖಲಿಸಿ ವಿವಿರಿಸುತ್ತಿದ್ದರು..(ಉದಾ:ಗ್ರಹಣ, ಕಾಮನಬಿಲ್ಲು)..

ಕೃಷ್ಣಮೂರ್ತಿ ಸರ್  ಅವರು 2015 ಫೆಬ್ರವರಿ ತಿಂಗಳಲ್ಲಿ ಉಡುಪಿಯಲ್ಲಿರುವ ತಮ್ಮ ಮಗ ಮಂಜುನಾಥ್ ಅವರ ಮನೆಗೆ ಹೋಗಲು ಚಿಕ್ಕಬಳ್ಳಾಪುರ ಬಿಟ್ಟು ಹೋದರು. ಆಗ ನನಗೆ ಕರೆ ಮಾಡಿ ನಮ್ಮ ಮನೆಯಲ್ಲಿ ಸಾಕಷ್ಟು ಉಪಕರಣಗಳು ಇವೆ, ಇವನ್ನು ಯಾವುದಾದರೂ ಶಾಲೆಗೆ ತಲುಪಿಸಿ ಎಂದಿದ್ದರು. 

ವಿಜ್ಞಾನ ಎನ್ನುವುದು ಪ್ರತಿ ವಿಷಯದಲ್ಲೂ ಪ್ರತಿ ಕ್ಷಣದ ಪರೀಕ್ಷೆಗಳ ಲೆಕ್ಕಾಚಾರ. ಸತ್ಯಾಸತ್ಯತೆಯ ಸಂಶೋದನೆ ನಿರಂತರವಾದದ್ದು. ವಿಷಯಗಳ ಕ್ರಮಬದ್ದತೆ.. 

ನಮ್ಮ ನೆರೆಹೊರೆಯಲ್ಲೇ ದೊರೆಯುವ ಸಂಪನ್ಮೂಲ ವ್ಯಕ್ತಿ, ವಸ್ತುಗಳ ಸದ್ಬಳಕೆ ಮಾಡಿಕೊಂಡು ವಿಷಯಗಳನ್ನರಿಯಬೇಕಾಗಿದೆ. ಗೂಗಲ್ ನೊಡಿ, ಇನ್ಸೈರ್ಡ್ ಅವಾರ್ಡ್ ಸ್ಪರ್ಧೆಗೆ, ವಿಜ್ಞಾನ ವಸ್ತು ಪ್ರದರ್ಶನಕ್ಕೆ ಸೀಮಿತಗೊಳಿಸುವುದು ವಿಜ್ಞಾನ ಭೋದನೆಯ ಮಹಾ ಅಪರಾಧದಂತೆ. ಇದನ್ನು ನಿರಂತರವಾಗಿ ಅಳವಡಿಸಿಕೊಂಡು ಪ್ರತಿ ಅವಧಿಯಲ್ಲೂ ವಿಸ್ಮಯಗೊಳಿಸದಿದ್ದರೂ ವಿಭಿನ್ನತೆ ಕಾಪಾಡಿಕೊಂಡು ಹೋದರೆ ಸಾಕೆಂಬ ನನ್ನ ಹಂಬಲ.. ಅದೇ ರೀತಿಯ ವ್ಯವಸ್ಥೆಗಳು, ಸ್ವಾತಂತ್ರ್ಯವೂ ಶಿಕ್ಷಕರಿಗೆ ಒದಗಿಸಬೇಕಾಗಿದೆ. 

ಏನೇ ಆಗಲೀ ವಿಜ್ಞಾನ ಬರೀ ವಿಷಯವೆಂದರಿಯದೇ ಜೀವನದೊಂದು ಭಾಗವಾಗಬೇಕು.

-ಎಂ.ಎಲ್.ನರಸಿಂಹಮೂರ್ತಿ, ಮಾಡಪ್ಪಲ್ಲಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x