ನಮ್ಮ ಹಟ್ಟಿಯಲ್ಲೆರಡು ಎಮ್ಮೆಗಳಿದ್ದವು. ಮೇವು ಹಾಕುವಾಗ ಹುಲ್ಲಿನ ಕಂತೆಯನ್ನು ಎರಡು ಪಾಲು ಮಾಡಿ ಸಮಾನವಾಗಿ ಹಂಚಿ ಹಾಕಲಾಗುತ್ತಿತ್ತು. ಆ ಎಮ್ಮೆಗಳು ತಮ್ಮ ಪಾಲಿನ ಕಡೆಗೆ ತಿರುಗಿಯೂ ನೋಡುತ್ತಿರಲಿಲ್ಲ. ಬದಲಿಗೆ ತಮ್ಮದಲ್ಲದ ಮೇವಿನ ರಾಶಿಯಿಂದ ಎಷ್ಟು ಎಟಕುತ್ತದೋ ಅಷ್ಟನ್ನು ಮೊದಲು ತಿನ್ನಲು ತೊಡಗುತ್ತಿದ್ದವು. ಆಗಾಗ ಸಿಟ್ಟಿನಲ್ಲಿ ಕೊಂಬಿನಿಂದ ತಿವಿದುಕೊಳ್ಳುವುದು, ಹೊಳ್ಳೆಯರಳಿಸಿ ಉಸಿರು ಬಿಡುವುದು ಮಾಡಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದವು. ಒಂದು ಹುಲ್ಲಿನ ಚೂರೂ ಉಳಿಯದಂತೆ ತಿಂದರೂ ತಮಗೇನೋ ಕಮ್ಮಿ ಆಗಿದೆ ಎಂಬಂತೆ ಅತ್ತಿತ್ತ ಸಾಗುವ ನಮ್ಮ ಮುಖವನ್ನು ಗುರ್ರಾಯಿಸಿ ನ್ಯೋಯ್.. ಎಂದು ಬೊಬ್ಬೆ ಹಾಕುತ್ತಿದ್ದವು. ಹಟ್ಟಿ ಸಣ್ಣದಾದ ಕಾರಣ ಅವುಗಳನ್ನು ಹೆಚ್ಚು ದೂರ ದೂರ ಮಾಡಿ ಕಟ್ಟುವಂತಿರಲಿಲ್ಲ. ಕುತ್ತಿಗೆಯ ಸಂಕೋಲೆಯನ್ನು ಸಣ್ಣದಾಗಿಸಿದರೆ ಅವಕ್ಕೆ ಮಲಗಲು ಸಾಧ್ಯವಾಗುತ್ತಿರಲಿಲ್ಲ.. ಹಾಗಾಗಿ ಇದೊಂದು ಸಮಸ್ಯೆಯಾಗಿಯೇ ಉಳಿದಿತ್ತು.
ಪರಿಹಾರ ಒಂದಲ್ಲ ಒಂದು ದಿನ ದೊರಕೀತೆಂಬ ಕಾರಣಕ್ಕೆ ಈ ಸಮಸ್ಯೆಯನ್ನು ಅದರ ಪಾಲಿಗೆ ಬಿಟ್ಟು ಬಿಡೋಣ.
ನಾವು ಚಿಕ್ಕವರಿದ್ದಾಗ ರಜಾದಲ್ಲಿ ಅಜ್ಜಿಯ ಮನೆಗೆ ಹೋಗ್ತಾ ಇದ್ದೆವು. ಇದು ಅಪ್ಪ ಹುಟ್ಟಿ ಬೆಳೆದ ಮನೆಯೇ ಆದರೂ ಅಪ್ಪನ ಉದ್ಯೋಗದ ನಿಮಿತ್ತ ನಾವು ಈ ಮನೆಯಿಂದ ದೂರ ಇದ್ದುದರಿಂದ ನಾವು ಅಪರೂಪಕ್ಕೆ ಹೋಗುವ ನೆಂಟರ ಪಟ್ಟಿಯಲ್ಲೇ ಸೇರಿಕೊಳ್ಳುತ್ತಿದ್ದೆವು. ಮನೆಯಲ್ಲಿದ್ದ ದೊಡ್ಡಮ್ಮ ದೊಡ್ಡಪ್ಪ ಚಿಕ್ಕಮ್ಮ ಚಿಕ್ಕಪ್ಪ ಅವರ ಮಕ್ಕಳು, ನಮ್ಮ ಹಾಗೆ ರಜೆಯಲ್ಲಿ ಬಂದ ಅತ್ತೆಯಂದಿರ ಮಕ್ಕಳು ನಾವುಗಳು ಎಲ್ಲಾ ಒಟ್ಟು ಸೇರಿದರೆ ಕಡಿಮೆಯೆಂದರೂ ಎಲ್ಲಾ ಕೈಬೆರಳುಗಳು ಕಾಲ್ಬೆರಳುಗಳನ್ನು ಸೇರಿಸಿದಕ್ಕಿಂತ ಜಾಸ್ತಿಯೇ ಜನ ಆಗುತ್ತಿತ್ತು. ಮೂರು ಹೊತ್ತಿನ ಊಟ ಉಪಹಾರಕ್ಕೆ ಉದ್ದನೆಯ ಸಾಲು ಕುಳಿತುಕೊಳ್ಳುತ್ತಿತ್ತು.
ಈ ಮನೆಯಲ್ಲೊಂದು ಅಲಿಖಿತ ನಿಯಮವಿತ್ತು. ಮನೆಗೆ ಯಾರೇ, ಏನೇ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಹೋದರೂ ಅದನ್ನು ಮನೆಯೊಡತಿಯಾದ ಅಜ್ಜಿಯ ಕೈಯ್ಯಲ್ಲೇ ಕೊಡಬೇಕು. ದೊಡ್ಡಮ್ಮನ, ಚಿಕ್ಕಮ್ಮನ ತವರು ಮನೆಯವರೇ ಇರಲಿ ಅಥವಾ ಬೇರೆ ನೆಂಟರಿಷ್ಟರೇ ಇರಲಿ ಎಲ್ಲರಿಗೂ ಈ ಕಾನೂನು ಲಾಗೂ ಆಗುತ್ತಿತ್ತು. ಕೂಡು ಕುಟುಂಭದಲ್ಲಿ ಒಡಕುಗಳು ಮೂಡದಿರಲೆಂದು ಈ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡುತ್ತಿದ್ದರು.
ಹೆಚ್ಚಾಗಿ ಪೇಟೆಯ ಹಣ್ಣುಗಳು ಎಂದೇ ಹೆಸರು ಹೊತ್ತ ಮುಸಂಬಿ, ಸೇಬುಗಳು ಅಥವಾ ಮುರುಕುಲು ತಿಂಡಿಗಳಾದ ಬಿಸ್ಕೆಟ್, ಬ್ರೆಡ್, ರಸ್ಕ್ ಗಳು, ಹತ್ತಿರ ಎಲ್ಲಾದರೂ ಜಾತ್ರೆಯಿದ್ದರೆ ಅಲ್ಲಿಂದ ತರುತ್ತಿದ್ದ ಬೆಂಡು ಬತ್ತಾಸುಗಳು ಅಜ್ಜಿಯ ಕೈ ಸೇರುವ ತಿಂಡಿತೀರ್ಥಗಳಾಗುತ್ತಿದ್ದವು. ಅಜ್ಜಿ ಅದನ್ನು ದೀಪದ ಬೆಳಕಿಲ್ಲದಿದ್ದರೆ ನಡು ಹಗಲಿನಲ್ಲಿ ಬಿಳಿ ಬಟ್ಟೆ ಉಟ್ಟು ನಿಂತಿದ್ದರೂ ಕಾಣಲು ಸಾಧ್ಯವಿಲ್ಲದಂತಹ ಕತ್ತಲ ಗೂಡಾದ ಉಗ್ರಾಣ ಎಂಬ ಕೋಣೆಯಲ್ಲಿಡುತ್ತಿದ್ದರು. ಅಲ್ಲಿ ಹಣ್ಣಾಗಲೆಂದು ಬೆಚ್ಚಗೆ ಗೋಣಿಯಲ್ಲಿ ಸುತ್ತಿಟ್ಟ ಮಾವಿನ ಕಾಯಿ, ಬಾಳೆಕಾಯಿ, ಅನಾನಾಸು, ಚಿಕ್ಕು ಮುಂತಾದ ಹಣ್ಣುಗಳು ತಮ್ಮ ಪರಿಮಳದಿಂದ ತಮ್ಮಿರುವನ್ನು ಸಾರಿ ಹೇಳುತ್ತಿದ್ದವು. ಅಜ್ಜಿಯ ಬುಡ್ಡಿ ದೀಪದ ಬೆಳಕಿನಲ್ಲಿ ಬೆಲ್ಲ, ಹಪ್ಪಳದ ಕಟ್ಟು, ಮಾಂಬಳ, ಸಾಂತಾಣಿ ಮುಂತಾದವುಗಳು ತುಂಬಿರುವ ಡಬ್ಬಗಳು ಎಲ್ಲಿವೆ ಎಂದು ನಮಗೆ ಗೊತ್ತಿದ್ದರೂ ಅಲ್ಲಿ ಗೊಗ್ಗಯ್ಯನಿದ್ದಾನೆ ಎಂಬ ಹೆದರಿಕೆಯಿಂದ ನಾವ್ಯಾರೂ ಆ ಕೋಣೆಯ ಕಡೆಗೆ ಕಣ್ಣೆತ್ತಿ ನೋಡುತ್ತಿರಲಿಲ್ಲ. ಸಾಮಾನ್ಯವಾಗಿ ಸಂಜೆಯ ಹೊತ್ತು ಮನೆಯ ಸದಸ್ಯರೆಲ್ಲರೂ ಮನೆ ಸೇರಿದರೆಂದು ಗೊತ್ತಾದ ಮೇಲೆ ಅಜ್ಜಿ ಚಿಮಿಣಿ ದೀಪ ಹಿಡಿದು ಅದರೊಳಗೆ ನುಗ್ಗುತ್ತಿದ್ದರು. ನಾವು ಬಾಳೆ ಎಲೆಯನ್ನು ನಡುವಿನಲ್ಲಿ ಸೀಳಿ ಪುಟ್ಟ ಚೌಕಾಕೃತಿಯಲ್ಲಿ ಹರಿದು ಮನೆಯ ಸದಸ್ಯರ ಲೆಕ್ಕ ಎಷ್ಟಿದೆಯೋ ಅಷ್ಟು ಸಿದ್ದ ಮಾಡಿ ಅಜ್ಜಿಯ ಮುಂದೆ ಇಡುತ್ತಿದ್ದೆವು. ಅಜ್ಜಿ ಆ ದಿನದ ತಿಂಡಿಯನ್ನು ಸಮಾನವಾಗಿ ಎಲ್ಲಾ ಎಲೆಗಳಿಗೂ ಹಂಚಿ ಹಾಕಿ ಒಬ್ಬೊಬ್ಬರಿಗೆ ಒಂದೊಂದನ್ನು ತಾವೇ ಎತ್ತಿ ಕೊಡುತ್ತಿದ್ದರು. ಎಲ್ಲರೂ ಒಟ್ಟಿಗೆ ಕುಳಿತು ತಿಂಡಿ ತಿನ್ನುತ್ತಿದ್ದೆವು. ಮಕ್ಕಳಾದ ನಾವು ಮಾತ್ರ ಇನ್ನೊಬ್ಬರ ಎಲೆಯನ್ನೇ ನೋಡುತ್ತಾ ಆ ಎಲೆಯಲ್ಲಿರುವ ಕಡ್ಲೆ ನನ್ನ ಎಲೆಯ ಕಡ್ಲೆಯಿಂದ ದೊಡ್ಡದಿದೆ, ಬೆಂಡು ಬತ್ತಾಸಿನಲ್ಲಿ ಹೆಚ್ಚು ಸಕ್ಕರೆ ಅಂಟಿದೆ, ನನಗೆ ಆ ಎಲೆ ಸಿಗದೆ ಅನ್ಯಾಯವಾಗಿದೆ ಎಂಬ ಭಾವನೆಯಿಂದಲೇ ತಿಂಡಿ ತಿನ್ನುತ್ತಿದ್ದೆವು. ಅಜ್ಜಿಯ ಹಂಚುವಿಕೆ ಎಂದೂ ನಮಗೆ ಸಮಾಧಾನ ತಂದದ್ದೇ ಇಲ್ಲ.
ಅದೇ ನಾವು ನಾವೇ ತೋಟಕ್ಕೆ ಹೋಗಿ ಕೊಯ್ದ ಸೀಬೇಹಣ್ಣು, ಅಬ್ಬುಳ್ಕ ಹಣ್ಣು, ನೇರಳೆ ಹಣ್ಣು. ಕುಂಟಾಲ ಹಣ್ಣುಗಳನ್ನು ಹಂಚಿಕೊಳ್ಳುತ್ತಿದ್ದಾಗ ಈ ರೀತಿಯ ಮೋಸ ಹೋದ ಅನುಭವ ನಮಗಾಗುತ್ತಲೇ ಇರಲಿಲ್ಲ.
ನಾನು ಮತ್ತು ಅಣ್ಣ ಅವಳಿ ಮಕ್ಕಳು. ನಮಗೆಂದು ಏನೇ ತಂದರೂ ಒಂದೇ ರೀತಿಯದ್ದು ಎರಡು ತರಬೇಕಾಗಿತ್ತು. ಮುಂದೆ ಅವುಗಳು ಯಾರಿಗೆ ಸೇರಿದ್ದೆಂಬ ವಿಷಯದಲ್ಲಿ ತಕರಾರು ಬರದಿರಲೆಂದು ಬಣ್ಣ ಮಾತ್ರ ಬೇರೆ ಬೇರೆ ಇರುತ್ತಿತ್ತು. ಅಂಗಿಗಳಾದರೆ ವಿನ್ಯಾಸ ಬದಲಾಗಿ ಬರುತ್ತಿತ್ತು. ಅಪ್ಪ ಅಮ್ಮ ಅದನ್ನು ಪಾಲು ಮಾಡಿ ಕೈಗೆ ಕೊಟ್ಟರೆ ನನಗೆ ಅಣ್ಣನಿಗೆ ಹುಡುಗರಿಗೆ ಹಾಕುವಂತಹ ಅಂಗಿ ಚಡ್ದಿಯೇ ತಂದಿರುತ್ತಾರೆ ಅಂತ ಗೊತ್ತಿದ್ದರೂ ಅವನ ಅಂಗಿ ನನ್ನ ಅಂಗಿಗಿಂತ ಚೆನ್ನಾಗಿದೆ. ನಂಗೆ ಸರಿಯಾದ್ದು ತಂದಿಲ್ಲ ಅನ್ನೋ ಭಾವ ಕಾಡಲು ಶುರು ಆಗುತ್ತಿತ್ತು. ಅದು ಒಂದೇ ಅಳತೆಯ ಒಂದೇ ಬಣ್ಣದ ಬಳಪದ ಕಡ್ಡಿಯಾಗಿದ್ದರೂ ಸಹ ಅವನ ಕಡ್ಡಿಯಲ್ಲಿ ಚೆನ್ನಾಗಿ ಹಿಡಿಯುತ್ತದೆ, ನನ್ನ ಕಡ್ಡಿ ಅಷ್ಟು ಚೆನ್ನಾಗಿ ಬರೆಯುತ್ತಿಲ್ಲ ಅನಿಸುತ್ತಿತ್ತು. ಇದಕ್ಕೆ ನನ್ನಣ್ಣನೂ ಹೊರತಾಗಿರಲಿಲ್ಲ. ಆದರೆ ಅದೇ ಸಾಮಗ್ರಿಗಳನ್ನು ತಂದಿಟ್ಟು ಯಾವುದು ಬೇಕೋ ನೋಡಿ ನೀವೆ ನಿರ್ಧರಿಸಿ ಅಂತ ಬಿಟ್ಟು ಬಿಟ್ಟರೆ, ನಾವು ನಾವೇ ಇದು ನಿನಗೆ ಇದು ನನಗೆ ಅಂತ ಒಂದಿಷ್ಟೂ ರಗಳೆ ಮಾಡದೇ ತೆಗೆದುಕೊಳುತ್ತಿದ್ದೆವು. ಮನುಷ್ಯ ಸ್ವಭಾವವೇ ಇಷ್ಟು. ಎಷ್ಟೇ ಹಗುರದ ವಸ್ತುವಾದರೂ ಇನ್ನೊಬ್ಬರು ನಮ್ಮ ಮೇಲೆ ಹೇರಿದರೆ ಭಾರವೆನಿಸುತ್ತದೆ. ಅದೇ ನಾವು ನಾವೇ ಹೊರಲಾರದ ಹೊರೆಯನ್ನು ಹೊತ್ತು ತೊನೆದಾಡುತ್ತಿದ್ದರೂ ಭಾರವೇ ಇಲ್ಲವೆನಿಸುತ್ತದೆ.
ಇದು ವಸ್ತುಗಳ ಆಯ್ಕೆಯಿಂದ ಹಿಡಿದು ಬದುಕುವ ರೀತಿ, ನಾವು ಪಾಲಿಸುವ ನೀತಿ ಎಲ್ಲದರಲ್ಲೂ ಕಾಣಬಹುದು.
ಯಾರನ್ನಾದರೂ ಕೇಳಿ ನೋಡಿ ಲವ್ ಮ್ಯಾರೇಜ್ ಒಳ್ಳೆಯದಾ ಅರೇಂಜ್ ಮ್ಯಾರೇಜ್ ಒಳ್ಳೆಯದಾ ಅಂತ.. ಯೋಚಿಸುವುದೇ ಇಲ್ಲ ಟಕ್ಕನೆ ತಾವು ಹೇಗೆ ಮದುವೆ ಮಾಡಿಕೊಂಡಿದ್ದೆವೋ ಅದೇ ಒಳ್ಳೆಯದು ಎಂದು ಹೇಳಿಕೆ ಹೊರಬೀಳುತ್ತದೆ. ಮನೆಯಲ್ಲಿರುವ ಗೃಹಿಣಿ ಪಟ್ಟ ದೊಡ್ಡದಾ, ದುಡಿಯುವ ಮಹಿಳೆಯ ಕಷ್ಟ ದೊಡ್ಡದಾ ಕೇಳಿ ನೋಡಿ. ನಾವು ನವi್ಮನ್ನು ತಕ್ಕಡಿಯಲ್ಲಿಟ್ಟು ತೂಗುತ್ತಾ ನಾವೇನಾಗಿದ್ದೇವೆಯೋ ಅದು ಅತ್ಯಂತ ಶ್ರೇಷ್ಟ ಎಂದು ಬಿಡುತ್ತೇವೆ. ಯಾವ ಧರ್ಮವನ್ನು ಅನುಸರಿಸುವುದು ಒಳ್ಳೆಯದು ಎಂದು ಕೇಳಿ ನೋಡಿ ನಾವೇನು ಅನುಸರಿಸುತ್ತಿದ್ದೇವೆಯೋ ಅದು ವಿಶ್ವದ ಶ್ರೇಷ್ಟ ಧರ್ಮ ಅದನ್ನೇ ಅನುಸರಿಸು ಎಂದು ಪಾಠ ಮಾಡಲು ಹೊರಡುತ್ತೇವೆ.
ಇದೆಲ್ಲವನ್ನೂ ಯೋಚಿಸಿ ಆಲೋಚಿಸಿ ಮಥಿಸಿ ಚಿಂತಿಸಿದ ನಂತರ ನಾನು ಮತ್ತೊಮ್ಮೆ ಹಟ್ಟಿಗೆ ಹೋದೆ.
ಹುಲ್ಲಿನ ಕಟ್ಟನ್ನು ಬಿಡಿಸಿ ಎರಡೂ ಎಮ್ಮೆಗಳಿಗೆ ಸಿಗುವಂತೆ ನಡುವಿನ ಜಾಗದಲ್ಲಿ ಒಂದೇ ರಾಶಿಯಾಗಿ ಹರವಿ ಹಾಕಿ ಹೊರ ಬಂದೆ. ಸ್ವಲ್ಪ ಹೊತ್ತು ಬಿಟ್ಟು ನೋಡಿದರೆ ಎರಡೂ ಎಮ್ಮೆಗಳು ಯಾವತ್ತಿನಂತೆ ಗುರಾಯಿಸದೆ ತಮ್ಮೆದುರು ಇರುವುದನ್ನು ತಮಗೆ ಬೇಕಾದಷ್ಟು ತಿಂದು ಒಂದಷ್ಟನ್ನು ಅಲ್ಲೇ ಉಳಿಸಿ ಮಲಗಿ ಮೆಲುಕು ಹಾಕುತ್ತಿದ್ದವು.
ಅಲ್ಲಾ ಈ ಎಮ್ಮೆಗಳೂ ಎಷ್ಟು ಕಲಿತಿದ್ದಾವೆ ನೋಡಿ
ತುಂಬಾ ಚೆನ್ನಾಗಿದೆ. ಈ ಭಾವನೆಯನ್ನು ನನ್ನ ವೃತ್ತಿಜೀವನದಲ್ಲೂ ನಿರಂತರವಾಗಿ ಅನುಭವಿಸುತ್ತಾ ಸಾಗಿದ್ದೇನೆ.
ತುಂಬ ಚೆನ್ನಾಗಿದೆ. ..
haha !! khandita satya …