ಪಂಜು-ವಿಶೇಷ

ನಾವು- ನಮ್ಮ ಕನ್ನಡ: ನಾಗೇಶ್ ಟಿ. ಕೆ.


ನನ್ನ ಹೆಸರು ನಾಗೇಶ್ ಟಿ ಕೆ. ಮೂಲತಃ ಹಾಸನ ಜಿಲ್ಲೆಯವ, ಪ್ರಸ್ತುತ ಗೌರಿಬಿದನೂರು ತಾಲ್ಲೋಕಿನಲ್ಲಿ ವಾಸ. ನಾನೊಬ್ಬ ಕನ್ನಡ ಪ್ರೇಮಿ, ಹುಚ್ಚು ಅಭಿಮಾನಿಯಲ್ಲ ಕೇವಲ ಭಾಷಾಭಿಮಾನಿಯಷ್ಟೆ. 
  
1956ರಲ್ಲಿ ಅಸ್ಥಿತ್ವಕ್ಕೆ ಬಂದ ‘ಮೈಸೂರು ರಾಜ್ಯ’ ಇಂದು ಶ್ರೀಗಂಧದ ಬೀಡು, ಶಿಲ್ಪಕಲೆಗಳ ತವರೂರು ಎಂದು ಕರೆಯಲ್ಪಡುವ ‘ಕರ್ನಾಟಕ’ 60ನೇ ಕನ್ನಡ ರಾಜ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಕನ್ನಡ ನಾಡು, ಕನ್ನಡ ರಾಜ್ಯೋತ್ಸವದ ವಿಶೇಷತೆ, ಕನ್ನಡಿಗರ ಭಾಷಾಭಿಮಾನದ ಬಗ್ಗೆ ಬರೆಯಲು ಇಚ್ಛಿಸುತ್ತೇನೆ.
  
ಕನ್ನಡ ನಾಡಿನ ಇತಿಹಾಸ ಎರಡು ಸಾವಿರ ವರ್ಷಕ್ಕು ಹೆಚ್ಚಿನದು. ಹಲವು ಸಾಮ್ರಾಜ್ಯಗಳು ಹಾಗು ರಾಜವಂಶದವರು ಉದಾಹರಣೆಗೆ ಕನ್ನಡದ ಮೊದಲ ರಾಜವಂಶ ಬನವಾಸಿ ಕದಂಬರು, ಶಿಲ್ಪಕಲೆಯ ತವರೂರನ್ನು ಹುಟ್ಟಿಹಾಕಿದ ಹೊಯ್ಸಳರು, ತಲಕಾಡಿನ ಗಂಗರು, ಚರಿತ್ರೆಯ ಪುಟಗಳಲ್ಲಿ ಸುವರ್ಣ ಯುಗವನ್ನು ಬರೆದು ಹೋಗಿರುವ ವಿಜಯನಗರ ಸಾಮ್ರಾಜ್ಯ ಅರಸರು, ಹೀಗೆ ಹಲವಾರು ರಾಜವಂಶಗಳು ಕರ್ನಾಟಕವನ್ನು ಆಳಿ, ಕನ್ನಡದ ವೈಭವೋಪೆತ ಇತಿಹಾಸಕ್ಕೆ ಮತ್ತು ಶ್ರೀಮಂತ ಶಿಲ್ಪಕಲೆ ಸಾಹಿತ್ಯ ಸಂಸ್ಕೃತಿಯ ಹುಟ್ಟು ಹಾಗು ಬೆಳವಣಿಗೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ.
  
ಕರ್ನಾಟಕದ ಹುಟ್ಟಿನ ಬಗ್ಗೆ ತಿಳಿಯುವುದಾದರೆ 1905ರಲ್ಲಿ ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್ ರವರು ಕರ್ನಾಟಕ ಏಕೀಕರಣ ಚಳುವಳಿಯನ್ನು ಪ್ರಾರಂಭಿಸಿದರು. 1950ರಲ್ಲಿ ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪಗೊಂಡವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ 1956ರ ನವೆಂಬರ್ ಒಂದರಂದು ಏಕೀಕೃತ ಕನ್ನಡ ನಾಡು ‘ಮೈಸೂರು ರಾಜ್ಯ’ ಎಂಬ ಹೆಸರಿನಲ್ಲಿ ಉದಯವಾಯಿತು. ನಂತರದ ಬೆಳವಣಿಗೆಗಳಲ್ಲಿ  ಏಕೀಕರಣ ಚಳುವಳಿಯ ಹೋರಾಟಗಾರರ,  ಕನ್ನಡ ಸಾಹಿತಿಗಳ, ಕನ್ನಡ ಪರ ಸಂಘಟನೆಗಳ ಆಶಯದಂತೆ, ದೇವರಾಜು ಅರಸರ ಕಾಲದಲ್ಲಿ 1973ರ ನವೆಂಬರ್ ಒಂದರಂದೇ ‘ಕರ್ನಾಟಕ ರಾಜ್ಯ’ ವೆಂದು ನಾಮಕರಣಗೊಂಡಿತು. ಇದರ ಸವಿನೆನಪಿಗಾಗಿಯೆ ಪ್ರತಿ ವರ್ಷ ನವೆಂಬರ್ ತಿಂಗಳು ಪೂರ್ತಿ ಕನ್ನಡಿಗರೆಲ್ಲರು ಹಬ್ಬವನ್ನು ಆಚರಿಸುತ್ತಾರೆ. ಇದುವೆ ಕನ್ನಡ ರಾಜ್ಯೋತ್ಸವ.

 ಕನ್ನಡ ರಾಜ್ಯೋತ್ಸವ ಎಂದರೆ ಮನಸ್ಸಿಗಾಗುವ ಖುಷಿಯನ್ನ ಹೇಳಲಾಗದು.  ‘ಕನ್ನಡದ ರವಿ ಮೂಡಿ ಬಂದ, ಮುನ್ನೆಡೆವ ಬೆಳಕನ್ನು ತಂದ ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ ‘ ಎಂಬ ಕವಿವಾಣಿಗೆ ಹೆಜ್ಜೆ ಹಾಕುತ್ತಾ,  ‘ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವ ತಾಣವೆ ಗಂಧದ ಗುಡಿ’ ಎಂಬ ಅರ್ಥ ಗರ್ಬಿತ ಸಾಲುಗಳನ್ನು ಮೆಲುಕು ಹಾಕುತ್ತಾ,  ‘ಕನ್ನಡ ಕನ್ನಡ ಕಸ್ತೂರಿ ಕನ್ನಡ, ಕನ್ನಡ ಕನ್ನಡ ಕರುನಾಡ ಕನ್ನಡ’ ಎಂದು ಗುನುಗುತ್ತಾ,  ‘ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪ ಒಲವೆತ್ತಿ ತೋರುವ ದೀಪ’ ಎಂಬ ಸಾಲುಗಳನ್ನು  ಎಲ್ಲರ ತನುಮನಗಳಲ್ಲಿ ತುಂಬುತ್ತಾ, ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ, ಕನ್ನಡ ಡಿಂಡಿಮ ಬಾರಿಸುವೆ ಎಂದು ಬರೆಯುತ ಹಾಡುವೆ ಎಂಬ ಅರ್ಥಪೂರ್ಣ ಸಾಲುಗಳಲ್ಲಿರುವ ಮಾಧುರ್ಯದಲ್ಲಿ ಮೈ ಮರೆತು ಕೋಟಿ ಕೋಟಿ ಕನ್ನಡಿಗರೆಲ್ಲ ಸಂಭ್ರಮದಿಂದ ಆಚರಿಸುವ ಕನ್ನಡ ಹಬ್ಬವೆ ‘ಕನ್ನಡ ರಾಜ್ಯೋತ್ಸವ’
        
ವರ್ಷಕೊಮ್ಮೆ ಬರುವ ನವೆಂಬರ್ ತಿಂಗಳಲ್ಲಿ ಕನ್ನಡದ ಅಭಿಮಾನದಲ್ಲಿ ತೇಲುವ ನಾವು ಕೆಲವೊಮ್ಮೆ ಹುಚ್ಚು ಅಭಿಮಾನಿಗಳಾಗಿಬಿಡುತ್ತೇವೆ. ಕನ್ನಡ ಭಾಷೆಯ ಉಳಿವಿಗೆ ಮತ್ತು ಅದರ ಬೆಳವಣಿಗೆಗೆ ಭಾಷಾಭಿಮಾನ, ಭಾಷೆಯ ಬಗ್ಗೆ ಆಪಾರವಾದ  ಜ್ಞಾನ, ಭಾಷೆಯ ಶ್ರೀಮಂತಿಕೆಗೆ ಶ್ರಮಿಸುವ ಶಕ್ತಿ ಮುಖ್ಯವಾಗುತ್ತವೆ. ಕೇವಲ ನವೆಂಬರ್ ಕನ್ನಡಿಗರಾಗುವುದರಿಂದಾಲಿ, ತನ್ನ ಭಾಷೆಯ ಬಗ್ಗೆ ಹುಚ್ಚು ಅಭಿಮಾನ ಬೆಳೆಸಿಕೊಂಡು ಅನ್ಯ ಭಾಷೆಗಳನ್ನು ತಿರಸ್ಕರಿಸುವುದರಿಂದಾಗಲಿ ಕನ್ನಡ ಭಾಷೆಯ ಉಳಿವು ಹಾಗು ಬೆಳವಣಿಗೆ ಸಾಧ್ಯವಿಲ್ಲ. ಮಾತೃ ಭಾಷಾ ಕನ್ನಡಿಗರು ಕನ್ನಡವನ್ನು ಆರಾಧಿಸುವುದರ ಜೊತೆಗೆ ಇತರೆ ಭಾಷೆಗಳನ್ನು  ಪ್ರೀತಿಸಿ, ನಮ್ಮೊಳಗಿರುವ  ಅನ್ಯ ಭಾಷಿಗರಿಗೆ ಕನ್ನಡವನ್ನು ಕಲಿಸುವ ಗುರುತರ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದೆ. ಕನ್ನಡಿಗರೆಲ್ಲರೂ ಕನ್ನಡ ಭಾಷೆಯನ್ನ ಹೆಬ್ಬಾಗಿಲಿನಂತೆ ಬಳಸಿ, ಇತರೆ ಭಾಷೆಗಳನ್ನು ಗಾಳಿ ಬೆಳಕಿಗೆ ಬೇಕಾದ ಕಿಟಕಿಗಳಂತೆ ಅಳವಡಿಸಿಕೊಳ್ಳಬೇಕು. ಭಾಷಾವಾರು ರಚನೆಯಾದ ಬೇರೆ ರಜ್ಯಗಳಲ್ಲಿ ಅಯಾ ರಾಜ್ಯಗಳ ಮಾತೃ ಭಾಷೆಯಲ್ಲೆ ವ್ಯವಹಿಸುವಂತೆ, ಮಾತನಾಡುವಂತೆ ಒತ್ತಡ ಹೇರುವ ಪರಿಸ್ಥಿತಿಯನ್ನ ಹೆಚ್ಚಾಗಿ ನೋಡಿಲ್ಲ. ಆದರೆ ನಮ್ಮ ಕರ್ನಾಟಕದಲ್ಲಿ ಮಾತೃಭಾಷಾ ಅಳವಡಿಕೆಗೆ ಎಲ್ಲರ ಮೇಲೂ ಒತ್ತಡ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ.
    
ಮಕ್ಕಳ ಮೊದಲ ಶಾಲೆ ಮನೆ. ಇಲ್ಲಿಂದಲೇ ಮಾತೃಭಾಷಾ ಕಲಿಕೆ ಮತ್ತು ಭಾಷಾಭಿಮಾನ ಬೆಳೆಸುವುದು ಮುಖ್ಯವಾಗುತ್ತದೆ. ಮಕ್ಕಳಿಗೆ ನಮ್ಮ ನಾಡಿನ, ದೇಶದ, ಜಗತ್ತ್ತಿನ ಪರಿಚಯ ಮಾಡುತ್ತಾ ಅವರ ಜ್ಞಾನ ಭಂಡಾರವನ್ನು ಹೆಚ್ಚಿಸುವುದು,ಇನ್ನೂ ಹೆಚ್ಚು ತಿಳಿಯಲು ಪ್ರೆರೇಪಿಸುವುದು, ಮಕ್ಕಳ ಮನಸ್ಸಿನ ಸೂಕ್ಷತೆಗಳನ್ನ ಅರಿತು ಅವರ ಓದುವ ಹವ್ಯಾಸವನ್ನು ಬೆಳೆಸುವುದು, ಅವರ ಭಾಷಾಭಿವೃದ್ಧಿಗೊಳಿಸುವುದು ಜೊತೆ ಜೊತೆಯಲ್ಲೆ ಮಾತೃಭಾಷೆಯಲ್ಲೆ ಮನೋರಂಜನೆ ನೀಡುವ ಕಾರ್ಯಗಳಾಗಬೇಕು. ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಗಳೆಂದರೆ ಸರ್ಕಾರಿ ಕನ್ನಡ ಶಾಲೆಗಳು.
  
ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಪೋಷಕರೇ ಹೆಚ್ಚು. ಇಂದಿನ ಸರ್ಕಾರಿ ಶಾಲೆಗಳು ಕೇವಲ ಕನ್ನಡ  ಭಾಷೆಯನಷ್ಟೆ ಬೋಧಿಸುತ್ತಿಲ್ಲ, ಕನ್ನಡದ ಜೊತೆಗೆ  ಪೋಷಕರು ಬೆನ್ನು ಹತ್ತಿ ಹೊರಟಿರುವ ಇಂಗ್ಲೀಷ್ ಅನ್ನು ಕೂಡ ಒಂದು ಭಾಷೆಯಾಗಿ ಬೋಧಿಸಲಾಗುತ್ತಿದೆ. ಇದರಿಂದ ಮಗು ತನ್ನ ಮಾತೃ ಭಾಷೆಯ ಜೊತೆಗೆ ಇತರೆ ಭಾಷೆಗಳನ್ನು ಕಲಿತು ಆ ಭಾಷೆಯ ಕಲೆ ಸಂಸ್ಕೃತಿ ವೈಚಾರಿಕತೆಗಳನ್ನು  ತಿಳಿದು ತನ್ನ ಮಾತೃಭಾಷೆಯ ಬೆಳವಣಿಗೆಗೆ  ಶ್ರಮಿಸಲು ಸಹಕಾರಿಯಾಗಿದೆ. 
  
ಕನ್ನಡಿಗರು ಇಂದು ಅನ್ಯ ಭಾಷೆಗಳ ಕಡೆ ಒಲವು ತೋರುತ್ತಿದ್ದಾರೆ, ಆ ಭಾಷೆಗಳು ಕನ್ನಡಿಗರನ್ನ ರತ್ನ ಗಂಬಳಿ ಹಾಸಿ ಕರೆದಿಲ್ಲ. ಅನ್ಯ ಭಾಷೆ ಕಲಿಯುವುದರಿಂದ  ಅವರ ಜೀವನೋಪಾಯ ಸುಲಭವಾಗಬಹುದು, ಇಚ್ಛಿಸಿದಲ್ಲಿ ನೌಕರಿ ಪಡೆಯಬಹುದು, ವಿಶಾಲವಾದ ಪ್ರಪಂಚದಲ್ಲಿ ಅಳುಕಿಲ್ಲದೆ ಸಂಚರಿಸಬಹುದು, ಕೂತಲ್ಲೆ ಕ್ಷಣಾರ್ಧದಲ್ಲಿ ಜಗತ್ತಿನ ಆಗು ಹೋಗುಗಳನ್ನು  ತಿಳಿಯಬಹುದು ಎಂಬ ಕಲ್ಪನೆ ಕನ್ನಡಿಗರಲ್ಲಿರಿಬಹುದು.ಈ ಎಲ್ಲಾ ಸೌಲಭ್ಯಗಳು ನಮ್ಮ ಮಾತೃಭಾಷೆಯಲ್ಲೆ  ದೊರೆಯುವಂತಾದರೆ ಕನ್ನಡಿಗರು ಕನ್ನಡಿಗರಾಗೆ ಉಳಿಯಬಹುದೇನೊ. ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡ ಭಾಷೆ,  ಕನ್ನಡ ನಾಡಿನ ಉಳಿವಿಗಾಗಿ ಹೋರಾಟ ಮಾಡುತ್ತಿರುವ ಎಲ್ಲಾ ಕನ್ನಡಪರ ಸಂಘಟನೆಗಳು ಒತ್ತಾಯ ಪೂರಕವಾಗಿ ಭಾಷಾ ಅಳವಡಿಕೆಯನ್ನು ಹೇರುವ ಪರಿಸ್ಥಿತಿ ದೂರವಾಗಿ, ಕನ್ನಡ ಭಾಷೆ ,ನಾಡು ಎಂದರೆ  ನಮ್ಮನ್ನೆಲ್ಲ ಹೊತ್ತು ಸಲಹಿ, ಅನ್ನ ನೀಡಿ ಸಲಹುತ್ತಿರುವ ತಾಯಿ ಇದ್ದಂತೆ ಎಂಬ ಭಾವನಾತ್ಮಕ ಅಂಶಗಳನ್ನು ಪ್ರತಿಯೊಬ್ಬ ಕನ್ನಡಿಗರ ಮನದಲ್ಲಿ ಬಿತ್ತುವ ಕಾರ್ಯ ಮಾಡಬೇಕಾಗಿದೆ. ಅಲ್ಲದೆ ಅನ್ಯ ಭಾಷೆಯಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳು ನಮ್ಮ ಕನ್ನಡ ಭಾಷೆಯಲ್ಲೂ ದೊರೆಯುವಂತೆ ನಮ್ಮ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಈ ಕಾಯಕದಲ್ಲಿ ಪ್ರತಿಯೊಬ್ಬ ಕನ್ನಡಿಗನು ಕಂಕಣಬದ್ಧನಾಗಿ ಕಾರ್ಯ ನಿರ್ವಹಿಸಿದರೆ ಕನ್ನಡಿಗರಷ್ಟೆ ಅಲ್ಲದೆ ಅನ್ಯ ಭಾಷಿಗರು ನಮ್ಮ ಕನ್ನಡ ಬಾಷೆಯನ್ನ  ಪ್ರೀತಿಸಿ ಅವರು ಅಳವಡಿಸಿಕೊಳ್ಳುವ ದಿನಗಳು ದೂರ ಉಳಿಯಲಾರವು.

 ಈಗಾಗಲೇ ನಮ್ಮ ಕನ್ನಡ ನೆಲ ಜಲವನ್ನು ಕಳೆದುಕೊಂಡಿದ್ದೇವೆ, ಮುಂದೆ ಭಾಷೆಯನ್ನು ಕಳೆದುಕೊಳ್ಳುವ ಆತಂಕ ಬರುವುದು ಬೇಡ, ಕನ್ನಡ ಭಾಷೆ  ಈ ನಾಡು ಸಮಸ್ತ ಕನ್ನಡಿಗರ ಆಸ್ತಿ. ‘ಸತ್ತಂತಿಹರನ್ನು ಬಡಿದೆಚ್ಚರಿಸಿ, ಕಚ್ಚಾಡುವವರನ್ನು ಕೂಡಿಸಿ ಒಲಿಸಿ’ ಎಂಬ ಕವಿವಾಣಿಯ ಆಶಯದಂತೆ ಕಾರ್ಯಪ್ರವೃತ್ತರಾಗೋಣ. ಗಡಿನಾಡೆ ಇರಲಿ, ನಡುನಾಡೆ ಇರಲಿ ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಸಾಧ್ಯವೊ ಅಲ್ಲೆಲ್ಲ ಕನ್ನಡದ ಕಂಪನ್ನು ಸೂಸಿ ಪರಿಮಳವನ್ನು ಚೆಲ್ಲೋಣ. ಕನ್ನಡದ ಕೀರ್ತಿ ಪತಾಕೆ ಹಾರಿಸೋಣ ಎಂದು ಶಪಥಗೈಯೋಣ. ಜೈ ಕನ್ನಡಾಂಬೆ.
-ಟಿ ಕೆ ನಾಗೇಶ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ನಾವು- ನಮ್ಮ ಕನ್ನಡ: ನಾಗೇಶ್ ಟಿ. ಕೆ.

  1. ಲೇಖನ ಕವನ ಕಥೆ ಅಥವಾ ಇನ್ನಿತರ ಬರಹಗಳಿಗೆ ಸಂಭಂದಿಸಿದಂತೆ ಪ್ರತಿ ಸಾರಿ ಹೊಸ ಹೊಸ ಪ್ರತಿಭೆ ಗಳಿಗೆ ಅವಕಾಶ ಕೊಟ್ಟರೆ ಪಂಜುವಿಗೆ ಇನ್ನು ಮೆರಗು ಹೆಚ್ಚುತ್ತದೆ.

     

Leave a Reply

Your email address will not be published. Required fields are marked *