ನಾವು… ನಮ್ಮದು: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ)

ನಮ್ಮ ಜೀವನದ ಗತಿಯನ್ನು, ನಮ್ಮ ಯೋಚನಾ ಲಹರಿಯನ್ನು ಬದಲಿಸಬಲ್ಲ ತಾಕತ್ತು ಇರುವುದು ಪುಸ್ತಕಗಳಲ್ಲಿ ಮಾತ್ರ ಎಂದು ಬಲವಾಗಿ ನಂಬಿರುವವನು ನಾನು. ನಮ್ಮ ಮನೆಯಲ್ಲಿದ್ದ ಪುಸ್ತಕಗಳು, ವಾರಕ್ಕೊಮ್ಮೆ ಬರುತ್ತಿದ್ದ ತರಂಗ, ಸುಧಾ ಗಳಂತಹ ಪತ್ರಿಕೆಗಳು ನಮ್ಮ ಓದಿನ ಹುಚ್ಚು ಹೆಚ್ಚಿಸಿದ್ದಲ್ಲದೆ ನಮ್ಮ ಯೋಚನಾ ಕ್ರಮವನ್ನೇ ಬದಲಿಸಿದ್ದವು. ಅವುಗಳು ಈಗಿನ ಗೂಗಲ್ ಗಿಂತ ಹೆಚ್ಚಿನ ಮಾಹಿತಿಗಳನ್ನು ಕೊಡುತ್ತಿದ್ದವು. ಈಗಿನ ಅಂತರ್ಜಾಲ ಒಂದು ಸಾಗರ. ಅದರಲ್ಲಿ ನಮಗೆ ಬೇಕಾದ ನಿಖರ ಮಾಹಿತಿ ತೊಗೊಳ್ಳೋದು ಅಂದರೆ ಒಳ್ಳೆಯ ಬಲೆಯಲ್ಲಿ ಮೀನು ಹಿಡಿದಂತೆ. ಆದರೆ ವಾರ/ಮಾಸಪತ್ರಿಕೆಗಳು ತಾವೇ ಮೀನು ಹಿಡಿದು ವಾರಕ್ಕೊಮ್ಮೆ ಒಳ್ಳೆಯ ಮೃಷ್ಟಾನ್ನ ಭೋಜನ ತಯಾರಿಸಿ ಕೊಡುತ್ತವೆ. ನನ್ನ ಅಮ್ಮ (ಪರಿಮಳ ಕುರ್ತಕೋಟಿ) ತುಂಬಾ ಆ ಸಮಯದಲ್ಲಿ ಪ್ರಸಿದ್ಧ ಕತೆಗಾರ್ತಿ ಹಾಗೂ ಒಳ್ಳೆಯ ಓದುಗಳೂ ಆಗಿದ್ದಳು. ನನ್ನನ್ನು ತುಂಬಾ ವಿಷಯಗಳಲ್ಲಿ ಪ್ರಭಾವಿಸಿದವಳು ಅವಳು. ಎಷ್ಟೋ ಒಳ್ಳೆಯ ಪುಸ್ತಕಗಳು ನಮ್ಮ ಮನೆಯಲ್ಲಿದ್ದವು ಹಾಗೂ ಎಷ್ಟೋ ವಾರಪತ್ರಿಕೆಗಳಿಗೂ ನಾವು ಚಂದಾದಾರರಾಗಿದ್ದೆವು. ನಮ್ಮ ಮನೆಯಲ್ಲಿನ ಪುಸ್ತಕಗಳಿಂದ ನನ್ನ ಕೆಲವು ಗೆಳೆಯರೂ ಕೂಡ ಪ್ರಭಾವಿತರಾಗಿದ್ದರು. ಹಾಗೆಯೇ ನನ್ನ ಗೆಳೆಯರ ಮನೆಯಲ್ಲಿನ ಪುಸ್ತಕ ಭಂಡಾರವೂ ನನ್ನನು ಆಕರ್ಷಿಸುತ್ತಿತ್ತು.

ನನ್ನ ಗೆಳೆಯ ಆದರ್ಶನ ತಂದೆ ಪ್ರೊ. ಸದಾನಂದ ಅರ್ಕಸಾಲಿ ಸರ್ ನನಗೆ ಬೀಚಿ ಅವರ “ಭಯಾಗ್ರಫಿ” ಯನ್ನು ಓದಲು ಕೊಟ್ಟಿದ್ದರು. ಕ್ರಮೇಣ ನಾನು ಬೀಚಿಯವರ ಭಕ್ತನಾಗುವಂತೆ ಮಾಡಿದ ಅವರಿಗೆ ನಾನು ಚಿರಋಣಿ. ಆ ಪುಸ್ತಕವನ್ನು ಎಷ್ಟೋ ಸಲ ಓದಿದ್ದೇನೆ, ಈಗಲೂ ಓದುತ್ತಿರುತ್ತೇನೆ. ನಮ್ಮ ಮನೆಯ ಹತ್ತಿರವೇ ಇದ್ದ ಇನ್ನೊಂದು ಮನೆ, ಸಾಹಿತಿಗಳು ಹಾಗೂ ನಮ್ಮ ತಂದೆಯ ಬಾಸ್ ಆಗಿದ್ದ ಪ್ರೊ. ಸದಾನಂದ ಕನವಳ್ಳಿ ಸರ್ ಅವರದು. ಅವರ ಮನೆಗೆ ನಾನು ತುಂಬಾ ಸಲ ಹೋಗುತ್ತಿದ್ದೆ. ಅವರು ಯಾವಾಗಲೂ ಗಂಭೀರವಾಗಿ ಏನಾದರೂ ಒಂದು ಓದುತ್ತಲೋ ಬರೆಯುತ್ತಲೋ ಇರುತ್ತಿದ್ದರು. ಆಗಾಗ ತಮಾಷೆ ಕೂಡ ಮಾಡುತ್ತಿದ್ದರೂ, ಅವರ ಜೊತೆ ಮಾತಾಡಲು ನಮಗೆ ಭಯ ಅಥವಾ ಸಂಕೋಚ. ಕ್ವಾರ್ಟರ್ ನ ಅವರ ಮನೆಯ ಪಕ್ಕದ ಇನ್ನೊಂದು ಮನೆ ಕೂಡ ಅವರದೇ ಆಗಿತ್ತು ಹಾಗೂ ಆ ಮನೆಯ ತುಂಬಾ ಪೂರ್ತಿ ಪುಸ್ತಕಗಳೇ. ಆ ಅದ್ಭುತ ಮಿನಿ ಲೈಬ್ರರಿ, ಅಲ್ಲಿಟ್ಟಿದ್ದ ತಬಲಾಗಳು, ಸಿತಾರ್ ಹೀಗೆ ಎಷ್ಟೋ ವಿಶಿಷ್ಠಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದೆ. ಅವು ಎಷ್ಟು ಗಾಢವಾಗಿ ನನ್ನನ್ನು ಪ್ರಭಾವಿಸಿದ್ದವು ಅಂದರೆ ನಾನೂ ಮುಂದೆ ಹೀಗೊಂದು ಪುಸ್ತಕ ಭಂಡಾರವನ್ನು ನನ್ನ ಮನೆಯಲ್ಲಿ ಮಾಡಬೇಕು ಹಾಗೂ ತಬಲಾ ಕಲಿಯಬೇಕು ಅಂತ ಅನ್ನಿಸುತ್ತಿತು. ಆಗಿನ ಹಿರಿಯರು ನಮ್ಮಲ್ಲಿ ಇಂತಹ ಕನಸುಗಳನ್ನು ಬಿತ್ತುತ್ತಿದ್ದರು ಈರ್ಷೆಯನ್ನಲ್ಲ! ಈಗಿನ ಕಾಲದಂತೆ ನಾನು ಮುಂದೆ ಇವರಿಗಿಂತ ಒಳ್ಳೆಯ ಕಾರ್ ಕೊಳ್ಳಬೇಕು ಅಂತಲೋ, ದೊಡ್ಡ ಶ್ರೀಮಂತ ಆಗಬೇಕು ಅಂತಲೋ ಎಂದೂ ನಮಗೆ ಆಗ ಅನಿಸುತ್ತಿರಲಿಲ್ಲ. ಊರಲ್ಲಿದ್ದ ಕೆಲವು ಸಿರಿವಂತರ ಮನೆಗೂ ಹೋಗುವ ಅವಕಾಶ ಸಿಕ್ಕಿತ್ತಾದರೂ ಅವರ ತರಹದ್ದೆ ನಮ್ಮ ಮನೆ ಇರಬೇಕು ಎಂಬ ಭಾವನೆ ಎಂದೂ ಬರುತ್ತಲೇ ಇರಲಿಲ್ಲ. ನಾವಿದ್ದದ್ದು ಒಂದು ರೂಮಿನ ಕ್ವಾರ್ಟರ್. ಒಂದೇ ಬಚ್ಚಲು ಮನೆ, ಮನೆಯ ಹೊರಗಿದ್ದ ಒಂದೇ ಒಂದು ಪಾಯಖಾನೆ. ಆಗೆಲ್ಲ ಪಯಖಾನೆಗಳು ಮನೆಯ ಹೊರಗೇ ಇರುತ್ತಿದ್ದವು! ಈಗಿನ ಕಾಲದಲ್ಲಿ ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬಚ್ಚಲು ಮನೆ. ನಮಗೆ ಯಾವತ್ತಿಗೂ ಇನ್ನೊಂದು ರೂಂ ಇದ್ದರೆ ಎಷ್ಟು ಚೆನ್ನ ಅಂತ ಅನಿಸಲೇ ಇಲ್ಲ. ಇದ್ದ ಒಂದೇ ಒಂದು ರೂಮು ಮನೆಯಲ್ಲಿದ್ದ ಎಲ್ಲರದೂ ಆಗಿತ್ತು. ಯಾವುದೇ ಸಮಸ್ಯೆ ಕೂಡ ಮನೆಯಲ್ಲಿದ್ದ ಎಲ್ಲರ ಸಮಸ್ಯೆ ಆಗಿರುತ್ತಿತ್ತು. “ನಮ್ಮದು” ಅನ್ನುವ ಆ ಸಂಸ್ಕೃತಿ ಕ್ರಮೇಣ ಹೊರಟು ಹೋಗಿ “ನನ್ನದು” ಎಂದು ಕಾಲ ಬದಲಾಗಿದ್ದು ನಮಗೆ ಅರಿವಾಗಿದ್ದು ನಾವು ಅಮೆರಿಕೆಗೆ ಹೋದಾಗ ಅನಿಸುತ್ತೆ!

ಅಲ್ಲಿ ಆ ಸಂಸ್ಕೃತಿ ಆಗಲೇ ಹಾಸುಹೊಕ್ಕಾಗಿದೆ, ಭಾರತದಲ್ಲೂ ಅದು ನಮಗರಿವಿಲ್ಲದಂತೆ ಆವರಿಸಿಕೊಳ್ಳುತ್ತಿದೆ. ಅಲ್ಲಿನ ಮನೆಯಲ್ಲಿ ಇರುವ ಎಲ್ಲರಿಗೂ ಒಂದೊಂದು ರೂಮು. ಸಧ್ಯ ಗಂಡ ಹೆಂಡತಿ ಒಟ್ಟಿಗೆ ಒಂದೇ ರೂಮಿನಲ್ಲಿ ಇರುತ್ತಾರೆ! ಆದರೆ ಗಂಡ ಹೆಂಡತಿಗೆ ತಮ್ಮದೇ ಅದ ಒಂದೊಂದು ಕಾರ್ ಇರುತ್ತದೆ. ಅಲ್ಲಿ ಯಾರ ಮೇಲೂ ಅವಲಂಬಿತರಾಗಿರಬಾರದು ಅನ್ನುವ ಜೀವನಶೈಲಿ. ಒಂದು ರೀತಿ ಒಳ್ಳೆಯದೇ. ಆದರೆ ಅದು ಯಾರ ಬಗ್ಗೆಯೂ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ “ಐ ಡೋಂಟ್ ಕೇರ್” ಎಂಬಂತಹ ಮನಸ್ಥಿತಿ ಮಕ್ಕಳಲ್ಲಿ ಬೆಳೆಯಲು ಕಾರಣ ಆಗಿದೆ ಅಂತ ನನ್ನ ಭಾವನೆ. ನಾವಲ್ಲಿದ್ದಾಗ ನನ್ನ ಎಷ್ಟೋ ಗೆಳೆಯರ ಅಪ್ಪಅಮ್ಮಂದಿರು ಭಾರತದಿಂದ ಅಲ್ಲಿಗೆ ಬಂದಿರುತ್ತಿದ್ದರು. ಮಗಳ ಬಾಣಂತನ ಮಾಡಲು ಬರುವವರೆ ಜಾಸ್ತಿ ಇದ್ದರೇನೋ. ಹಾಗೆ ಬಂದಾಗ ಕೆಲವು ಹಿರಿಯರಿಗೆ ಅಲ್ಲಿ ಸಮಯ ಕಳೆಯೋದೇ ಕಷ್ಟ ಆಗುತ್ತಿತ್ತು. ಎಲ್ಲರೂ ತಮ್ಮ ತಮ್ಮ ರೂಮಿನಲ್ಲಿ ಕೂತು ಬಿಟ್ಟಿರುತ್ತಾರೆ, ಇಲ್ಲಿ ತಮಗೆ ತುಂಬಾ ಬೇಜಾರು ಆಗುತ್ತೆ ಅಂತ ಕೆಲವು ಹಿರಿಯರು ನನ್ನಲ್ಲಿ ಹೇಳಿಕೊಳ್ಳುತ್ತಿದ್ದರು. ಬೆಂಗಳೂರಿನ ಹಿರಿಯರ ಪರಿಸ್ಥಿತಿ ಕೂಡ ಹೆಚ್ಚು ಕಡಿಮೆ ಹಾಗೆಯೇ ಆದರೂ ಅಮೇರಿಕೆಯಲ್ಲಿ ಹಾಗೆ ತಾತ್ಕಾಲಿಕವಾಗಿ ಹೋದ ಹಿರಿಯರು ಎಷ್ಟೋ ವಿಷಯಗಳಿಗೆ ಮಕ್ಕಳ ಮೇಲೆ ಡಿಪೆಂಡ್ ಆಗಬೇಕಾಗುತ್ತೆ. ತಮ್ಮಷ್ಟಕ್ಕೆ ತಾವು ಅಡ್ಡಾಡಲು ಎಲ್ಲ ಹಿರಿಯರಿಗೂ ಸಾಧ್ಯವಿರುವುದಿಲ್ಲ. ಎಲ್ಲರಿಗೂ ಅಮೆರಿಕೆಯಲ್ಲಿ ಕಾರ್ ಓಡಿಸಲು ಬರಬೇಕಲ್ಲ. ಕಾರ್ ಇದ್ದರೇನೆ ಅಲ್ಲಿ ಜೀವ ಇದ್ದ ಹಾಗೆ! ಹಾಗಂತ ಹಿರಿಯರು ತಮಷ್ಟಕ್ಕೆ ತಾವು ಇರುವಂತಹ ಸೌಲಭ್ಯಗಳೂ ಕೂಡ ಅಲ್ಲಿ ತುಂಬಾ ಚೆನ್ನಾಗಿವೆ. ಆದರೂ ಒಟ್ಟಿನಲ್ಲಿ ಅಲ್ಲಿ ಇಂತಹ ಕೆಲವು ಸಮಸ್ಯೆಗಳನ್ನು ಬಿಟ್ಟರೆ ಜೀವನ ತುಂಬಾ ಸರಾಗವಾದದ್ದು ಅನಿಸಿತು.

ಎಲ್ಲವೂ ಪೂರ್ವ ನಿಯೋಜಿತ ಟಿವಿ ಕಾರ್ಯಕ್ರಮ ಇದ್ದಂತೆ. ಇವತ್ತು ಇದನ್ನು ಮಾಡಬೇಕು, ಸಂಜೆಗೆ ೭ ಗಂಟೆಗೆ ಮಗಳನ್ನು ಈ ಕ್ಲಾಸಿಗೆ ಕರೆದೊಯ್ಯಬೇಕು, ಪ್ರತಿ ಭಾನುವಾರ ಇಲ್ಲಿಗೇ ಊಟಕ್ಕೆ ಹೋಗಬೇಕು, ಗೆಳೆಯನ ಮನೆಗೆ ಹೋಗಲು ಕೆಲವು ದಿನಗಳ ಮೊದಲೇ ಪ್ಲಾನ್ ಮಾಡಬೇಕು, ಮಕ್ಕಳು ಬೇರೆಯವರ ಮನೆಗೆ ಆಟ ಆಡಲು ಹೋಗಲು ಪ್ಲೇ ಡೇಟ್ ಅಂತ ಮೊದಲೇ ನಿಗದಿ ಆಗಬೇಕು… ಹೀಗೆ ಎಲ್ಲವೂ scripted. ಅನಿರೀಕ್ಷಿತ ತಿರುವುಗಳು ಇಲ್ಲದ ಜೀವನವೂ ಒಂದು ಜೀವನವೇ?! ನಾವು ಮಾತ್ರ ಇಲ್ಲಿ ಇದ್ದ ಹಾಗೆಯೇ ಅಲ್ಲೂ ಇದ್ದೆವು. “ಈಗ ನಿಮ್ಮ ಮನೆಗೆ ಚಾ ಕುಡಿಯಲು ಬರುತ್ತಿದ್ದೇನೆ” ಅಂತ ಹೇಳಿ ಅಥವಾ ಕೆಲವು ಸಾರಿ ಹೇಳದೆಯೂ ಹೋಗಬಹುದಂತಹ ಕೆಲವು ಗೆಳೆಯರೂ ಅಲ್ಲಿ ಸಿಕ್ಕಿದ್ದರು. ಅದು ನಮ್ಮ ಪುಣ್ಯ! ಗಜನಿಯ ಅಮ್ಮನಂತೂ ನೀನು ನನ್ನ ಮಗ ಇದ್ದಂತೆ ಎಂಬ ಅಕ್ಕರೆ ತೋರಿಸುತ್ತಿದ್ದರು. ಆ ಮಹಾತಾಯಿ ತುಂಬಾ ಕಲಿತಿರದ ಹೆಣ್ಣುಮಗಳಾದರೂ ಅಮೆರಿಕೆಗೆ ಒಬ್ಬಳೇ ಬರುವಷ್ಟು ಇಂಡಿಪೆಂಡೆಂಟ್ ಆಗಿದ್ದ ಅವರ ಧೈರ್ಯಕ್ಕೆ ಅವರು ಬೆಳೆದ ಹಳ್ಳಿಯ ಪರಿಸರವೇ ಕಾರಣವಲ್ಲವೇ? ನಮ್ಮ ದೇಶದಲ್ಲಿ ಎಷ್ಟೇ ಒಬ್ಬರ ಮೇಲೆ ಒಬ್ಬರಿಗೆ ಅವಲಂಬನೆ ಇದೆ ಅಂತ ಅನ್ನಿಸಿದರೂ ಕುಟುಂಬದಲ್ಲಿ ಅವರವರ ಜವಾಬ್ದಾರಿ ನಿರ್ವಹಿಸುತ್ತಾ ಸ್ವತಂತ್ರವಾಗಿಯೇ ಬದುಕುತ್ತಿಲ್ಲವೇ? ನಮ್ಮ ಜನ ಸಮಯ ಬಂದರೆ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧ ಆಗಿರುತ್ತಾರೆ. ಆ ಒಂದು ಧೈರ್ಯ ಕ್ರಮೇಣ ಕಡಿಮೆಯಾಗುತ್ತಿದೆಯಲ್ಲವೇ. ಅದು ಅಮೇರಿಕೆಯೇ ಇರಬಹುದು ಭಾರತವೇ ಇರಬಹುದು. ಇದೆ ಕಾರಣಕ್ಕೆ ಅತ್ಮಹತ್ಯೆಗಳಂತಹ ಪಾಪಗಳನ್ನು ಜನರು ಮಾಡುತ್ತಿದ್ದಾರೆ. ಮಜಾ ಅಂದರೆ ಅಮೆರಿಕೆಯಲ್ಲಿಯೂ ಕೂಡ ಕೌಟುಂಬಿಕ ವ್ಯವಸ್ಥೆ ಹೆಚ್ಚು ಕಡಿಮೆ ನಮ್ಮ ವ್ಯವಸ್ಥೆಯನ್ನೇ ಹೋಲುತ್ತಿತ್ತು ಅಂತ ರಾನ್ ಡೆಕರ್ಡ ಹೇಳಿದ ಕೆಲವು ವಿಷಯಗಳಿಂದ ತಿಳಿದು ನನಗೆ ಅಚ್ಚರಿಯಾಗಿತ್ತು. ರಾನ್ ಅಮೆರಿಕೆಯ ನನ್ನ ಕಂಪನಿಯಲ್ಲಿ ಸಹೋದ್ಯೋಗಿ. ವಯಸ್ಸಿನಲ್ಲಿ ನನಗಿಂತ ತುಂಬಾ ದೊಡ್ಡವನು. ನಮ್ಮಿಬ್ಬರ ನಡುವೆ ಅದು ಹೇಗೋ ಬಾಂಧವ್ಯ ಬೆಳೆದಿತ್ತು. ಅವನು ಈ ತರಹದ ಎಷ್ಟೋ ವಿಷಯಗಳನ್ನು ನನಗೆ ತಿಳಿಸುತ್ತಿದ್ದ. ಅವನಿಗೆ ಹಾಗೂ ಅವನ ಹೆಂಡತಿಗೆ ನಮ್ಮ ಮನೆಗೆ ಊಟಕ್ಕೂ ಕರೆದಿದ್ದೆವು. ಹಾಗೆ ನಾವು ಆಹ್ವಾನಿಸಿದ್ದ ಮೊದಲ ಅಮೆರಿಕನ್ ಪ್ರಜೆ ಅವನೇ ಆಗಿದ್ದ. ಗಂಡ ಹೆಂಡತಿ ಇಬ್ಬರೂ ಬಂದು ಆಶಾಳ ಕೈರುಚಿಯ ಅಡುಗೆಯನ್ನು ತಿಂದು ಬಾಯಿ ಚಪ್ಪರಿಸಿ ಹೊಗಳಿ ಹೋಗಿದ್ದರು. ಮುಂದೆ ಥ್ಯಾಂಕ್ಸ್ ಗಿವಿಂಗ್ ಹಬ್ಬದಂದು ನಮಗೂ ಅವರ ಮನೆಗೆ ಊಟಕ್ಕೆ ಕರೆದಿದ್ದರು. ಹಾಗೆ ಅಮೆರಿಕನ್ನರು ಮನೆಗೆ ಕರೆಯೋದು ತುಂಬಾ ಅಪರೂಪ ಅಂತ ಅಲ್ಲಿನ ಕೆಲವರು ಹೇಳಿದ್ದು ನನಗೆ ಖುಷಿ ಕೊಟ್ಟಿತ್ತು.

ಅವನು ಚಿಕ್ಕವನಿದ್ದಾಗ ಅವನ ಕುಟುಂಬ ಕೂಡ ಹಳ್ಳಿಯಲ್ಲೇ ವಾಸವಾಗಿತ್ತಂತೆ. ಅವರೆಲ್ಲ ಒಟ್ಟಿಗೆ ಇದ್ದರಂತೆ. ಅವನ ಅಪ್ಪ ಈಗಲೂ ಕೂಡ ಕೈಯಿಂದಲೇ ಮಾಡುವ ಬ್ರೆಡ್ ತುಂಬಾ ಚೆನ್ನಾಗಿರುತ್ತೆ ಅಂತ ಅವನು ಹೇಳಿದ್ದ. ಅದಕ್ಕೆ ದೇಶ ಸುತ್ತಿ ನೋಡು ಅಂತ ಹೇಳುತ್ತಾರಲ್ಲವೇ! ಆದರೂ ನಾವೂ ಕೂಡ ಅವರಂತೆಯೇ ಬದಲಾಗುತ್ತಿದ್ದೇವೆ, ಅವರಂತೆಯೇ ಆಗಿಬಿಡುತ್ತೇವೆ ಎಂಬ ಕಳವಳ ಕೂಡ ನನಗೆ ಆಯ್ತು. ಹಾಗಂತ ಅಲ್ಲಿ ಎಲ್ಲವೂ ಸರಿಯಿಲ್ಲ ಅಂತಲ್ಲ. ಎಷ್ಟೋ ವಿಷಯಗಳಲ್ಲಿ ಅವರಂತೆ ಖಂಡಿತ ನಾವಾಗಬೇಕು. ಅಲ್ಲಿನ ಲೈಬ್ರರಿಯಲ್ಲಿ ಪ್ರತಿ ವಾರ ಹದಿನೈದು ಪುಸ್ತಕಗಳನ್ನು ಎರವಲು ಪಡೆಯಬಹುದಾಗಿತ್ತು. ನಮಗಿಂತ ಮೊದಲೇ ಡಿಜಿಟಲ್ ಕ್ರಾಂತಿ ಆಗಿರುವ ಅಲ್ಲಿ ಇನ್ನೂ ಪುಸ್ತಕಗಳ ಹುಚ್ಚು ಕಡಿಮೆಯಾಗಿಲ್ಲ. ನನ್ನ ಮಗಳಿಗೆ ಎರ್ರಾ ಬಿರ್ರಿ ಓದುವ ಹುಚ್ಚು ಬೆಳೆದಿದ್ದು ಇದೆ ಅಮೇರಿಕಾದಲ್ಲಿ. ಸ್ವಚ್ಚತೆ, ಇಂಡಿಪೆಂಡೆನ್ಸ್, ತಮಗನಿಸಿದ್ದನ್ನು ನಿರ್ಭಿಡೆಯಿಂದ ಹೇಳುವ ಅವರ ಶೈಲಿ ಇನ್ನೂ ಎಷ್ಟೋ ಒಳ್ಳೆಯ ಗುಣಗಳನ್ನು ಖಂಡಿತ ಅವರಿಂದ ಕಲಿಯಬಹುದು. ಆದರೆ ಇನ್ನೂ ಎಷ್ಟೋ ವಿಷಯಗಳಲ್ಲಿ ಅವರು ಮಾಡೋದು ಅತಿ ಅನಿಸುತ್ತದೆ. ಅದೇ ರೀತಿ ನಾವೂ ಕೂಡ ಕೆಲವೂ ವಿಷಯಗಳಲ್ಲಿ ಅತಿ ಮಾಡುತ್ತೇವೆ. ಹೀಗಾಗಿ ಅವರ ಕೆಲವು ವಿಷಯಗಳನ್ನು ಸ್ವೀಕರಿಸಿ ನಮ್ಮತನವನ್ನೂ ಉಳಿಸಿಕೊಂಡ ಒಂದು ಮಧ್ಯದ ಶೈಲಿ ಅಳವಡಿಸಿಕೊಂಡರೆ ಎಷ್ಟು ಚೆನ್ನ ಅನಿಸುತ್ತದೆ…

ಗುರುಪ್ರಸಾದ ಕುರ್ತಕೋಟಿ


ಮುಂದುವರಿಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Suvarna
Suvarna
3 years ago

Very well written views. Takes a reader to a unknown place and enlightens the reader about culture and traditions. Good article.

Shankar A
Shankar A
3 years ago

ಆಗಿನ ಹಿರಿಯರು ನಮ್ಮಲ್ಲಿ ಇಂತಹ ಕನಸುಗಳನ್ನು ಬಿತ್ತುತ್ತಿದ್ದರು ಈರ್ಷೆಯನ್ನಲ್ಲ! ಇದು ಅರ್ಥವಾದವರಿಗೆ ಮುಂದೆ ಹೇಳಬೇಕಾದುದು ಏನಿಲ್ಲ. ಅಂಥ ಕಾರಣಕ್ಕಾಗಿಯೆ ನಿಮ್ಮ ಮುಂದಿನ ವಿವರಣೆಗಳಲ್ಲಿ ಅನುಭವದ ಛಾಯೆ ತುಂಬಿದೆ. ಪ್ರತ್ಯೇಕತೆ, ಸ್ವಂತಿಕೆಗಳು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಅಗತ್ಯ ಅಂಶಗಳು ನಿಜ. ಆದರೆ ಎಲ್ಲರೊಳಗೊಂದಾಗಿ ಬೆರೆಯದ ಜೀವನಕ್ಕೆ ಏನು ತಾನೇ ಅನುಭವ ಬಂದೀತು? ಸದ್ಯ, ಗಂಡ-ಹೆಂಡಿರು ಒಂದೇ ಕೋಣೆಯಲ್ಲಿರುತ್ತಾರೆ!-ಇದೇ ಈ ಲೇಖನದ ಪಂಚ್!!!

ಗುರುಪ್ರಸಾದ ಕುರ್ತಕೋಟಿ

ಸುವರ್ಣ ಮೇಡಂ,
ಬರಹ ನಿಮಗೆ ಇಷ್ಟವಾಗಿದ್ದು ಕೇಳಿ ಖುಷಿಯಾಯ್ತು! ನಿಮ್ಮ ಪ್ರತಿಕ್ರಿಯೆಗಳು ಮತ್ತೆ ಬರೆಯಲು ಸ್ಪೂರ್ತಿ ನಮಗೆ. 🙂

ಗುರುಪ್ರಸಾದ ಕುರ್ತಕೋಟಿ

ಶಂಕರ ಅವರೇ,
ತಮಗೆ ಬರಹ ಇಷ್ಟವಾಗಿದ್ದು ಕೇಳಿ ನನಗೆ ಖುಷಿ ಆಯ್ತು. ನಾವು ಬರೆದ ಕೆಲವೊಂದು ಅಂಶಗಳು ನಮಗೆ ತುಂಬಾ ಖುಷಿ ಕೊಟ್ಟಿರುತ್ತವೆ. ಅವನ್ನು ಓದುಗರು ಗುರುತಿಸಬೇಕು ಎಂಬ ಆಸೆ ಎಲ್ಲ ಲೇಖಕನಿಗೂ ಸಹಜ. ಅಂತಹ ಕೆಲವನ್ನು ನೀವು ಗಮನಿಸಿದ್ದು ಇನ್ನೂ ಖುಷಿ ಕೊಟ್ಟಿತು. ಧನ್ಯವಾದಗಳು 🙂

Manju
Manju
3 years ago

ಕಂಕಣ ಸುತ್ತಿ ಮೈಲಾರಕ್ಕೆ ಹೋದಂತೆ, ಬಸವಳಿದಿರುವ ಪಾಶ್ಚತ್ಯ ಸಂಸ್ಕೃತಿ ಏಷ್ಯಾ ಮತ್ತು ಆಫ್ರಿಕಾ ಕಡೆ ನೋಡುತ್ತಿವೆ, ಒಂದು ಸುತ್ತು ಪಾಶ್ಚತ್ಯ ಸಂಸ್ಕೃತಿ ನೋಡಿದ ಬಾರತೀಯರು ಅಯ್ಯೋ ಕುರ್ರೋ ಎಂದು ಮತ್ತೆ ಭಾರತೀಯ ಮೌಲ್ಯ ಮತ್ತು ಸಂಸ್ಕೃತಿಗೆ ಶರಣಾಗಿವೆ. ಭಯವಿಲ್ಲದ ಭಕ್ತಿ ಬಂದುಗಳಿಲ್ಲದ ಜೀವನ ಕಷ್ಟ ಸಾಧ್ಯ. ಗುರು ಅವರ ಕುಟುಂಬ ಇವೀಳಿರುವವರೆಗೂ ಮತ್ತು ಮತ್ತು ಇಲ್ಲಿಂದ ಹೋರಾಟ ನಂತರವೂ ತಮ್ಮದೇ ಛಾಪು ಮೂಡಿಸಿದ ಕುಟುಂಬ…

ಇಂತಿ
ನಿಮ್ಮ ಅಮೇರಿಕಾ ಮಿತ್ರ ಮಂಡಳಿ

5
0
Would love your thoughts, please comment.x
()
x