ಕಾವ್ಯಧಾರೆ

ನಾಲ್ವರ ಕವಿತೆಗಳು: ಸಿರಿ ಹೆಗ್ಡೆ, ಚಿದು, ಬಿದಲೋಟಿ ರಂಗನಾಥ್, ಕಿರಣ್ ಬಾಗಡೆ

ಕ್ಷಮಿಸಿ ನನ್ನನ್ನು …

ಇಷ್ಟು ವರ್ಷಗಳ ಕಾಲ ಕುಣಿಸಿದೆ,
ಗೆಜ್ಜೆಯ ಗೀಳು ಹತ್ತಿಸಿದೆ,
ನಿಮ್ಮಿಂದ ನಾ ಹೆಸರು ಗಳಿಸಿದೆ,
ಆದರಿಂದು …?
ಕ್ಷಮಿಸಿ ನನ್ನನ್ನು…

ನೋವೆಂದು ನೀವಳುತ್ತಿದ್ದ ದಿನಗಳವು,
ಬೇಡ ಸಾಕೆಂದು ಗೋಗರೆಯುತ್ತಿದ್ದ ಕಾಲ,
ಕೇಳಲಿಲ್ಲ ನಾನು, ಅಹಂಕಾರಿ !
ಮತ್ತೆ ಕಟ್ಟಿಸಿದೆ ಗೆಜ್ಜೆ, ಕುಣಿಸಿದೆ,
ಆದರಿಂದು …?
ಕ್ಷಮಿಸಿ ನನ್ನನ್ನು…

ನಿಮ್ಮ ಸಾಮರ್ಥ್ಯಕ್ಕಿಂತ ಜಾಸ್ತಿ ದುಡಿಸಿದೆ,
ಇಂದು ನನ್ನ ಹೊಗಳುತ್ತಾರೆ, ನಿಮ್ಮಿಂದ,
ನಾ ಸದಾ ಕೃತಜ್ನೆ,
ಆದರಿಂದು …?
ಕ್ಷಮಿಸಿ ನನ್ನನ್ನು…

ಬಂದನವನು ನನ್ನ ಬಾಳಲ್ಲಿ,
ಕಲ್ಲು ಚಪ್ಪಡಿಯಾಗಿದ್ದ ನನ್ನ ಶಿಲಾಬಾಲಿಕೆಯಾಗಿಸಿದ,
ಮುಳುಗಿದೆ ಅವನೆದೆಯೆಂಬ ಪ್ರೀತಿಯ ಬೆಚ್ಚನೆ ಗೂಡಲ್ಲಿ,
ಮರೆತೆನೇ ನಿಮ್ಮ …?
ಸಾಧ್ಯವೇ ನನ್ನ ಕೈಯಲ್ಲಿ ಬಿಟ್ಟು ನಿಮ್ಮ ಬಾಳಲು …?
ಕ್ಷಮಿಸಿ ನನ್ನನ್ನು…

ಮತ್ತೆ ನೆನಪಾದಿರಿ,
ನನ್ನ ಕಾಲ್ಗಳೆಂಬ ನನ್ನೆರಡು ಜೀವಗಳು,
ಭಾಷೆಯಿತ್ತಿದ್ದೆನಲ್ಲಾ ನಿಮಗೆ,
ಉಸಿರಿರುವ ವರೆಗೆ ಕಟ್ಟುತ್ತೇನೆ ಗೆಜ್ಜೆಯೆಂದು,
ನಿಮ್ಮೆಲ್ಲಾ ನೋವ ಮರೆತು ನನಗಾಗಿ ಇರುವ ನಿಮ್ಮಿಬ್ಬರಿಗಾಗಿ,
ಆದರಿಂದು…?

ಕ್ಷಮಿಸುತ್ತೀರಾ ನನ್ನನ್ನು …?
ಏಕೆಂದರೆ…
ನನಗಾಗಿರುವ ನಿಮ್ಮಿಬ್ಬರಿಗಾಗಿ ಇನ್ನು ಮುಂದೆ 
ನೀಡಲಾರೆ ಯಾವುದೇ ಭಾಷೆ,
ಕಟ್ಟಲಾರೆ ನಿಮ್ಮ ಕೊರಳಿಗೆ ಗೆಜ್ಜೆ,
ಕೇಳಲಾರಿರಿ ನೀವು ಯಾವುದೇ ತಾಳ,
ನೋಡಲಾರಿರಿ ಆ ಕೆಂಪು ರಂಗು,
ಅನುಭವಿಸಲಾರಿರಿ ಆ ಕುಣಿವ ಸುಖ,
ಹೀರಲಾರಿರಿ ಆ ರಂಗದ ಧೂಳ,

ಕ್ಷಮಿಸುತ್ತೀರಾ ನನ್ನನ್ನು…?
ಯಾಕೆಂದರೆ…
ಹೋಗುತ್ತಿದ್ದೇನೆ ಅವನಲ್ಲೊಂದಾಗಲು !
ಇನ್ನು ನಾನು ನಾನಲ್ಲ, ನಾನು ಅವನು !
ನನ್ನ ಪಾಲಿಗೆ ನೀವು ನನ್ನೆರಡು ಜೀವ,
ಆದರೆ, ಅವನಿಗೆ ನೀವೆಂದರೆ ಕೇವಲ ನನ್ನೆರಡು ಕಾಲ್ಗಳು !! 

ಕ್ಷಮಿಸಲಾರಿರಿ ನೀವೆಂದಿಗೂ,
ಆದರೂ, ಕಣ್ಣೀರಿಟ್ಟು ಬೇಡುತ್ತಿದ್ದೇನೆ…
ಕ್ಷಮಿಸಬೇಡಿ ಈ ಸ್ವಾರ್ಥಿಯ,
ಮರೆಯದಿರಿ ನಾ ಮಾಡಿದ ಮೋಸವ…
ಏಕೆಂದರೆ, ಈ ಸಿರಿಗೆ ನೀವೆಂದರೆ ಜೀವ !!
-ಸಿರಿ ಹೆಗ್ಡೆ (Siri Hegde)


ಹಲವಾರು ಜನರ 
ಕನಸಿನ ಸೌಧವನ್ನು 
ಕಟ್ಟಿದ್ದವಳ ಕಣ್ಣುಗಳು 
ರಾತ್ರಿಯ ಹೊತ್ತಿಗೆ 
ಕನಸುಗಳನ್ನೆ ಕಾಣದಷ್ಟು 
ದಣಿದು, 
ಸೂರಿಲ್ಲದ ಮನೆಯ 
ಹೊರಗಡೆ ಆಕಾಶವನ್ನೆ 
ದಿಟ್ಟಿಸುತ್ತ 
ನಿದಿರೆಗೆ ಜಾರುತ್ತಿದ್ದವು. . .

*****

ಕಲಿಕೆಯ ಆಸೆ, ಆಸಕ್ತಿಯಿರದ 
ಯುವ ಮನಗಳ 
ಜೇಬು ತುಂಬಿರುತಿತ್ತು
ವಿದ್ಯಾವೇತನದಿಂದ,
ವಿದ್ಯಾಭ್ಯಾಸಕ್ಕಾಗಿ. . 
ಆದರಿವಳ ಜಾತಿಗೆ 
ಆ ಭಾಗ್ಯವಿರಲಿಲ್ಲ 
ಕಲಿಕೆಯ ಆಸೆ ಕಮರಿತ್ತು 
ದಿನ ಕೂಲಿಯ 
ಪಾತ್ರೆ ತಿಕ್ಕುವಲ್ಲಿ 
ಒಪ್ಪೊತ್ತಿನ ಕೂಳಿಗಾಗಿ. .
-ಚಿದು


ಎದೆಯೊಳಗಿನ ಖುಷಿ

ಮಗ ಹುಷಾರಾದಕ್ಕೆ
ನನ್ನ ಎದೆಯೊಳಗಿನ ಖುಷಿಗೆ
ಬಾಗಿನ ಅರ್ಪಿಸಿದ್ದೇನೆ.
ಅವನು ನೋಡುವ ನೋಟದೊಳಗೆ
ಸಾವಿರಾರು ಕನಸುಗಳು
ಅರಳಿ ನಗುತ್ತಿವೆ.

ಕೆನ್ನೆ ಮೂಗು ಸವರುತ್ತಾನೆ
ಪುಟ್ಟ ಕಾಲುಗಳಿಂದ ಎದೆಗೆ ಒದೆಯುತ್ತಾನೆ
ನನ್ನ ಮೇಲೆ ಸೂಸು ಮಾಡಿ
ತಣ್ಣಗೆ ನಗುತ್ತಾನೆ
ಬೆರಳ ತೋರಿಸಿ ಅತ್ತ ಕಡೆ ಕರೆದೊಯ್ಯಿ ಎಂದು
ಹೇಳುತ್ತಾನೆ.ಅವನಿಗಿನ್ನು ಒಂಬತ್ತು ತಿಂಗಳು.

ಚಳಿಗೆಂದು ಟೋಪಿ ಹಾಕಿದರೆ
ಯಾಮರಿಸಿ ಕಿತ್ತೊಗೆಯುತ್ತಾನೆ
ಅಮ್ಮಳ ಸನ್ನೆಯ ಅರಿತು
ಎಂಥದ್ದೋ ನಗೆ ಬೀರಿ
ಹಾಲಿಗಾಗಿ ಪುಸಲಾಯಿಸುತ
ಗಿಟ್ಟಿಸಿಕೊಳ್ಳುವ ಚಾಣಾಕ್ಷನ ಮೊಗದಲಿ
ಮತ್ತೆ ಚಂದ್ರ ನಗು ಕಂಡು
ಎದೆಯೊಳಗಿನ ಹೂ ಅರಳಿ ನಗುತ್ತಿದೆ

ಅಳುವ ನನ್ನವಳ ಮೊಗದಲ್ಲಿನ
ಭಯದ ಬರುಡೆ ಉಸಿರಾಡುವುದ ನಿಲ್ಲಿಸಿದೆ
ಚೈತನ್ಯದ ಭಾವ ಆ ಜಾಗ ಆಕ್ರಮಿಸಿದೆ
ಭುಜ ಅಪ್ಪುತ್ತಾನೆ
ಚಂಗಲು ನಗುವ ಎಸೆಯುತ್ತಾನೆ
ಮರುಳಾಗಲು ನಾನು ಮತ್ತು ನನ್ನ ಜೀವದ ಗೆಳತಿ
ಸದಾ ತಯಾರಿದ್ದೇವೆ.

-ಬಿದಲೋಟಿ ರಂಗನಾಥ್

 

 

 

 


ಅಲ್ಲೊಂದಿಷ್ಟು ಬೆಟ್ಟಗಳ ಸಾಲು,
ಸರಿವ ಮೋಡದ ಜೊತೆಗೆ
ಗೆಳೆತನದ ಸಲುಗೆ ಬೆಳಸಿ,
ಮಳೆರಾಯನ ಕರೆ ಎಂದು ಕೇಳಿ
ಬಿದ್ದ ಮಳೆಯ ನೀರ
ತನ್ನೊಡಳೊಳು ತುಂಬಿ
ಜಗದ ದಣಿವಾರಿಸುವ
ಜೀವನಾಡಿ ಆ ಬೆಟ್ಟಗಳ ಸಾಲು.

ಬೆಟ್ಟದಾಚಿಚೆ ಸರಿದಾಡುವ,
ಮಂಜ ಹೊದ್ದ ಮೋಡಗಳ ಸಾಲು.
ರವಿ ಬಂದರೆ ಕರಗುವ
ಶಶಿ ಬಂದರೆ ಮೆರೆಯುವ
ಹಸಿರು ರಾಶಿಯ ನಡುವೆ
ಮೆತ್ತಿದ ಹತ್ತಿಯ ಹಾಗೆ ಕಾಣುವ
ಕಣ್ ಮನಸಿಗೆ ತಂಪೆರೆವ
ಮೋಡಗಳ ಸಾಲು.

-ಕಿರಣ್ ಬಾಗಡೆ

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published.