ಅದೇ ರಾಗ, ಬೇರೆ ಹಾಡು..
(ಧಾಟಿ: ಚೆಂದುಟಿಯ ಪಕ್ಕದಲಿ; ಚಿತ್ರ: ಡ್ರಾಮ)
ಕಂಗಳಲಿ ಕೋರೈಸೊ ಬೆಳದಿಂಗಳಾ ಹೊಳಪ
ಚಂದಿರನ ಮೊಗದಲ್ಲೂ ನಾ ಕಾಣೆ;
ಅಂಗಳದಿ ನೀ ಬರೆದ ರಂಗೋಲಿಯ ಹಾಗೇ
ಬಾಳನ್ನು ಸಿಂಗರಿಸು ಓ ಜಾಣೆ;
ಬರೆದಿರುವೆ ಈ ಗೀತೆ ನಿನಗಾಗಿ..
ಮೂಡಿರುವೆ ನೀ ಇದರ ಶೃತಿಯಾಗಿ..
ಹಾಡೋಣವೇ ಒಮ್ಮೆ ಜೊತೆಯಾಗಿ?
ಎತ್ತರದಿ ಅರಳಿರುವ ಚಾಚೊ ಕೈಯ್ಯಿಗೆ ಸಿಗದ
ಪಾರಿಜಾತದ ಹೂವು ಬಲು ಚಂದವಂತೆ;
ನೀ ದೂರ ಸರಿದಂತೆ ನೆನಪುಗಳು ಸನಿಹಾಗಿ
ಗಾಢವಾಗುವ ಮೋಹಕೆ ಕೊನೆಯೆಂಬುದುಂಟೆ?
ಎಡರುಗಳು ನೂರಿರಲಿ ಎದುರಲ್ಲಿ,
ಒಂಚೂರು ಒಲವಿರಲಿ ನಡುವಲ್ಲಿ,
ಕಡೆತನಕ ನಡೆಯೋಣ ಜೊತೆಯಲ್ಲಿ…
|ಕಂಗಳಲಿ ಕೋರೈಸೊ|
ಏಳುಬಣ್ಣದ ತೇರು ನಿನ್ನ ಚಿತ್ತವ ಹೊತ್ತು
ನನ್ನಿಂದ ಬಲುದೂರ ಕದ್ದೊಯ್ವುದೇನೋ..
ಒಂಟಿಯಾಗಿರುವಾಗ ಕಾಡುತಿರುವಂತಹ
ಕಳೆದುಕೊಳ್ಳುವ ಭಯವು ನಿನಗೂ ಉಂಟೇನು?
ನಿನ್ನ ಸವಿ ಬಯಕೆಗಳ ಸಾಲಲ್ಲಿ,
ಕಾದು ನಿಂತಿಹ ನನಗೂ ಪಾಲಿರಲಿ,
ದುಗುಡದಲೂ ಸೊಗಸಿಹುದು ಒಲವಲ್ಲಿ…
|ಕಂಗಳಲಿ ಕೋರೈಸೊ|
-ವಿನಾಯಕ ಭಟ್,
ಅಪ್ಪ ಅಂದ್ರೆ…
ನಾನು ಹುಟ್ಟಿದ್ದು ಮಾತ್ರ
ಅಮ್ಮನ ಒಡಲು
ಬೆಳೆದು ನಲಿದು ಓಲಾಡಿದ್ದು
ಅಪ್ಪನ ಮಡಿಲು
ಅಪ್ಪ, ಅವನ ಮಗನಿಗೆ
ಆದರ್ಶ ನನ್ನಪ್ಪ
ತಾಯಿಯಿಲ್ಲದ ತಬ್ಬಲಿಗೆ ತಾಯಾದ
ಅಪ್ಪ; ಅಪ್ಪನೊಂದಿಗೆ.
ಸುತ್ತ ಕತ್ತಲಿರುವಾಗ
ಹೊದಿಸಿ ಮಲಗಿಸಿದ
ಒಳಗಿರುವ ಕತ್ತಲೆಯ
ಒದ್ದು ಓಡಿಸಿದ
ಹೊತ್ತು ಹೆತ್ತ ತಾಯಿಯಂತೆ
ತುತ್ತು ಮಾಡಿ ಉಣಿಸಿದ
ಆಟವಾಡಿ ದಣಿದು ಬರಲು
ನೀರು ಕುಡಿಸಿ ತಣಿಸಿದ
ಅಳುವಾಗ ಲಾಲಿ ಹಾಡಿದ
ನಲಿವಾಗ ಜೋಕಾಲಿ ತೂಗಿದ
ದಣಿದಾಗ ದನಿಯಾದ
ಅವನಿಗವನೇ ಸರಿಯಾದ
ಪ್ರೀತಿಯ ಬಳ್ಳಿಯಾದ
ನೀತಿಯ ನೆಲೆಯಾದ
ಸ್ಫೂರ್ತಿಯ ಸೆಲೆಯಾದ
ಕೀರ್ತಿಯ ಮೂಲವಾದ
ದಾರಿಗೆ ದೀವಿಗೆಯಾದ
ಬಾಳಿಗೆ ದೇವನೇ ಆದ
ಅಪ್ಪ ಅಂದ್ರೆ ಅಪ್ಪ
ಅವನ ಮಗನಿಗೆ ಆದರ್ಶ ನನ್ನಪ್ಪ…
-ಇಂದುತನಯ.
ಹನಿಗವನಗಳು
1.
ಬೇಸಿಗೆಯ ಬೇಗೆಯಲ್ಲಿ
ನೊಂದು ಬೆಂದ ಭುವಿಯ
ಆಕ್ರಂದನ ಕೇಳಿ ಹರಿಸಿವೆ
ಒಡಲೊಳಗೆ ಗಂಗೆಹೊತ್ತ
ಮೋಡಗಳು ಕಣ್ಣೀರಿನ ಹೊಳೆ!!
ಮುಸ್ಸಂಜೆಯ ಬಾನಿನಿಂದ
ಆರಿಸಲು ಧರೆಯ ಧಗೆಯ
ಕಳ್ಳ ಸೂರ್ಯನ ಒದ್ದು ಓಡಿಸಿ
ಗಿಡಮರಗಳ ಚುಂಬಿಸುತ್ತಾ
ಸುರಿದಿದೆ ಮುಂಗಾರಿನ ಮಳೆ!!
2.
ಕನಸಿನ ಗೋಡೆ ಮೇಲಿನ
ನಿನ್ನ ಚಿತ್ರದ ಬಣ್ಣವ
ಸೇರಿಕೊಂಡು ಅಳಿಸುತಿವೆ
ಕಣ್ಣ ಕಡಲಿನ ನೀರ ಅಲೆಗಳು!!
ಬಣ್ಣಹೋದ ಗೋಡೆಮೇಲೆ
ಚಿತ್ರ ಅಳಿಸಿದ ಜಾಗದಲ್ಲಿ
ಮತ್ತೆ ಮತ್ತೆ ಮೂಡುತ್ತಿವೆ
ನಿನ್ನ ನೆನಪಿನ ನೂರು ಕಲೆಗಳು!!
3.
ತಿರುಕನಂತೆ ನಿನ್ನ ಒಡನಾಟ ಬಯಸಿ
ಅಲೆಯುತ್ತಿದ್ದ ಆ ಅಲೆಮಾರಿಗೆ
ನೀಡಬೇಕಿತ್ತು ನೀ ಪ್ರೀತಿಯ ಭಿಕ್ಷೆ!!
ಹುಚ್ಚನಂತೆ ನಿನ್ನ ಮನಸಾರೆ ಪ್ರೀತಿಸಿ
ಆರಾಧಿಸುತ್ತಿದ್ದ ಆ ಅಮಾಯಕನಿಗೆ
ಯಾಕೆ ಕೊಡಬೇಕಿತ್ತು ಆ ರೀತಿಯ ಶಿಕ್ಷೆ!!
4.
ಬಿಡು ಮಹರಾಯ್ತಿ
ಮನಸೊಳಗೆ ತೋಚಿದ್ದನ್ನು ಗೀಚಿಕೊಂಡು
ನೆಮ್ಮದಿಯಾಗಿ ನನ್ನಪಾಡಿಗೆ ನಾನಿರಲು!!
ಉಸಿರಾಡುವುದಾದರೂ ಹೇಗೆ?
ಅಳಿದುಳಿದ ಜಾಗವನ್ನೆಲ್ಲ ದೋಚಿಕೊಂಡು
ಹಾಯಾಗಿ ನನ್ನೆದೆಗೂಡಲಿ ನೀ ಕೂತಿರಲು!!
– ಯದುನಂದನ್ ಗೌಡ ಎ.ಟಿ
ದೇವದಾಸಿಯ ಸ್ವಗತ
ಹುಟ್ಟು ಸಾವು ಎಲ್ಲದಕು
ಈ ಜಗತ್ತು ಸಾಕ್ಷಿ ಕೇಳುತ್ತಿರುವಾಗ
ನಾನು ಪ್ರೀತಿಸಿದ್ದಕ್ಕೆ ಸಾಕ್ಷಿ ಕೇಳಿದ್ದರಲ್ಲಿ
ನಿನ್ನ ತಪ್ಪೇನೂ ಇಲ್ಲ ಬಿಡು
ಸಾಕ್ಷಿಗಿರಲಿ ಎಂದು ಮುದ್ರೆ-
ಯುಂಗುರ ಉಡುಗೊರೆಯಾಗಿ ನೀಡಿದ್ದ
ದುಷ್ಯಂತನೇ ಅದನು ಮರೆತು
ಕನವರಿಸುತ್ತಿರುವಾಗ, ನಾನು
ಸಾಕ್ಷಿ ಎಲ್ಲಿಂದ ತರಲಿ?
ನೀ ಕಟ್ಟಿದ್ದ ಗೆಜ್ಜೆ
ಎಂದೋ ‘ಘಲ್’ ನಿನಾದವ
ನಿಲ್ಲಿಸಿರುವಾಗ
ಮತ್ಯಾವ ಸಾಕ್ಷಿ ನನ್ನ ಬಳಿ?
ಬುದ್ಧಿವಂತ ನೀನು
ಬಿಟ್ಟು ಹೊರಡುವಾಗ ಗುಲಗುಂಜಿಯಷ್ಟೂ
ಸಾಕ್ಷಿ ದೊರೆಯದಂತೆ ಮುನ್ನೆಚ್ಚರಿಕೆ ವಹಿಸಿದ
ಮಹಾ ಚತುರ; ವಾಸ್ತವವಾದಿ
ಆ ಶಕುನಿಗೆ ನೀನೇ ಗುರುವೇ?
ಅಷ್ಟಕ್ಕೂ ನೀನೆಲ್ಲಿ ಸಾಕ್ಷಿಕೊಟ್ಟೆ ನನಗೆ?
ಒಂದು ಹನಿಯೂ ಮೈಗೆ ತಾಕದಂತೆ
ನಾಜೂಕಾಗಿ ಒರೆಸಿ ಎಸೆವಾಗ
‘ವೀರ್ಯ’ವೂ ಸಾಕ್ಷಿಯಾಗಬಹುದೆಂಬ
ಗುಮಾನಿಯಿತ್ತೇ ನಿನಗೇ?
ನಾನದನ್ನು ರಸಿಕತೆ ಎಂದುಕೊಂಡಿದ್ದೆ
“ಹೋಗು, ಸ್ನಾನ ಮಾಡು”’ಎಂದು
ಒತ್ತಾಯಿಸಿ, ಶವರ್ ಕೆಳಗೆ ನಿಲ್ಲಿಸಿ
ಮೈಯ್ಯುಜ್ಜಿದೆಯಲ್ಲ?
ನನ್ನ ಮೈಗಂಟಿದ ನಿನ್ನ ಬೆವರ ಹನಿ’
ಸಾಕ್ಷಿ ಹೇಳಬಹುದೆಂಬ
ಅಂಜಿಕೆ ಇತ್ತು ನಿನಗೆ,
ನಾನದನ್ನು ಪ್ರೀತಿ ಎಂದು ಭ್ರಮಿಸಿದ್ದೆ.
ಹೋಗಲಿ ಬಿಡು, ಮುರಿದುಬಿದ್ದ
ಕನಸುಗಳನ್ನೆಲ್ಲ ಮತ್ತೆ
ಮತ್ತೆ ನೆನಪಿಸಿಕೊಂಡು ಮೆಲಕು-
ಹಾಕಿ ಅಳುವುದಕ್ಕೆ
ಸಮಯವಾದರೂ ಎಲ್ಲಿದೆ ನನಗೆ?
ಅಲ್ಲಿ ನಿನಗೆ ಹುಟ್ಟಿದ, ಹೊಟ್ಟೆಗೆ
ಬೆನ್ನು ಹತ್ತಿಕೊಂಡ ಮಗು
ಒಂದೇ ಒಂದು ತುತ್ತು ಗುಟುಕಿಗಾಗಿ
ಬಾಯ್ತೆರೆದು ಚೀತ್ಕರಿಸುತ್ತಿದೆ
ಕೈಗಿಷ್ಟು ನೋಟು ಇಟ್ಟುಬಿಟ್ಟರೆ,
ಅದರ ಹೊಟ್ಟೆಗೊಂದಿಷ್ಟು
ಅರೆಕಾಸಿನ ಮಜ್ಜಿಗೆ ಸುರಿಯುತ್ತೇನೆ
ಆಗದೇ ಆಗದು ಎನ್ನುವುದಾದರೆ
ಅದನ್ನಾದರೂ ಬಾಯಿಬಿಟ್ಟು ಹೇಳಿಬಿಡು
ನೀನೇ ಕಟ್ಟಿದ ಗೆಜ್ಜೆಯ ಬಿಚ್ಚಿ,
ಮಾರುತ್ತೇನೆ, ಎರಡು ಹೊತ್ತಿನ
ತುತ್ತಿಗೆ ದಾರಿಯಾದೀತು
ಇಲ್ಲವಾದರೆ ನನ್ನೆದೆಯೊಳಗಿನ
ಪ್ರೀತಿ ಮಂಟಪವ ನಿರ್ದಾಕ್ಷಿಣ್ಯವಾಗಿ
ಕೆಡವುತ್ತೇನೆ, ಕುಲವೃತ್ತಿಗೇ
ನೇಣು ಹಾಕಿಕೊಳ್ಳುತ್ತೇನೆ…
-ಶ್ರೀದೇವಿ ಕೆರೆಮನೆ
*****
‘ದೇವದಾಸಿಯ ಸ್ವಗತ’ಬಹಳ ಒಳ್ಳೆಯ ಕವಿತೆ. ಪ್ರೀತಿ ಕಾಮವನ್ನು ಮರೆಸಬಹುದಿತ್ತು, ಆದರೆ ಅವಳು ಒಬ್ಬಳು ದೇವದಾಸಿಯಾದ ಕಾರಣ ಇಲ್ಲಿ ಕಾಮವೇ ಸುಖಿಯಾಗಿದೆ.ಹಾಗಾಗಿ ಪ್ರೀತಿಯ ಸಾಕ್ಷ್ಯಿಪ್ರಜ್ಞೆಯು ಅಲ್ಪವಾಗುತ್ತದೆ ಎಂಬುದನ್ನು ಕವಯತ್ರಿಯ ಆಶಯವಗಿದೆ.