ಮೂಲ
ನನ್ನ ಬಯಕೆಗಳ ಮೂಲ
ಈ ಎದೆಗೂಡಾಗಿದ್ದರೆ
ತುರ್ತಾಗಿ ಎದೆಗೂಡನು
ಕೆಡವಿ ಬಿಡುವುದು ಲೇಸು
ಇಲ್ಲವಾದರೆ –
ಈ ದೇಹ ಪಾಳು ಬಿದ್ದೀತು ,,.
ನನ್ನ ಬಯಕೆಗಳ ಮೂಲ
ಈ ನೆತ್ತರಾದರೆ
ಒಮ್ಮೆ ಎಲ್ಲವ
ಬತ್ತಿಸುವುದು ಲೇಸು
ಇಲ್ಲವಾದರೆ –
ಮೈ ನೀಲಿಗಟ್ಟೀತು ,,,
ನನ್ನ ಬಯಕೆಗಳ ಮೂಲ
ಈ ಉಸಿರಾದರೆ
ಒಮ್ಮೆ ಸತ್ತುಬಿಡುವುದು ಲೇಸು
ಇಲ್ಲವಾದರೆ –
ಉಸಿರಿಗೆ ಉಸಿರು ಸೇರಿ
ಊರು ಕೆಟ್ಟೀತು ,,,
ನನ್ನ ಬಯಕೆಗಳ ಮೂಲ
ಈ ಆತ್ಮವಾದರೆ ,,,
ಅಯ್ಯೋ .,.,
ಒಮ್ಮೆಲೇ
ಆತ್ಮ ಸ಼ಂಹಾರ
ಮಾಡುವುದು ಲೇಸು..
ಇಲ್ಲವಾದರೆ –
ಆ ನರಕ ಕೆಟ್ಟೀತು ,,.,
– ಜಾನ್ ಸುಂಟಿಕೊಪ್ಪ.
ಗುಬ್ಬಿಯ ಆಲಾಪ
ಓ ಮರಗಿಡ ಬಳ್ಳಿಗಳೆ
ನೀವಾದರು ಆಶ್ರಯ ನೀಡುತ್ತೀರ
ನೊ೦ದ ಮನಸ್ಸನ್ನು ಸ೦ತೈಸುತ್ತೀರ
ಮನದಾಳದ ನೋವನ್ನು
ಹೇಳಿಕೊಳ್ಳಬೇಕು ನಿಮ್ಮ ಹತ್ತಿರ.
ಮನುಷ್ಯನ ವಿಶ್ವಾಸಕ್ಕೆ
ಕರಗಿ ನೀರಾಗಿ ನಿಮ್ಮೆಲ್ಲರನ್ನು
ಬಿಟ್ಟು ಹೊರಟು ಹೋದೆ
ಮನೆ ಮಹಲು ಬ೦ಗಲೆಗಳಿಗೆ
ಮರುಳಾಗಿ ನಿಮ್ಮನ್ನು ತೊರೆದೆ
ಕ್ಷಮೆ ನೀಡಿ ಈ ತಪ್ಪಿಗೆ
ಮಾನವನ ದುರಾಸೆಗಳಿಗೆ
ಕೊನೆಯಿಲ್ಲ ಎನ್ನಿಸುತ್ತಿದೆ
ನಮ್ಮ ಜೀವಗಳಿಗೆ ಬೆಲೆ ಕೊಡದೆ
ಅವನ ಆಸೆಗಳ ಹೆಚ್ಚಿಸುತ್ತಾ ಹೋದ
ನಮ್ಮ ಪ್ರಾಣಕ್ಕೆ ಕ೦ಟಕ ಬ೦ದದ್ದು
ಗೊತ್ತಾದರು ಅವನ ಆಸೆಗಳು ನಿಲ್ಲಲಿಲ್ಲ
ನಮ್ಮ ಸಹಾಯಕ್ಕೆ ಬರಲ್ಲಿಲ್ಲ.
ಏ ಮಾನವರೆ ನಿಮ್ಮ ದುರಾಸೆಯಿ೦ದ
ನಮ್ಮನ೦ತು ವಿನಾಶದ ಅ೦ಚಿಗೆ
ಕಳುಹಿಸಿದ್ದೀರಿ ನಮ್ಮದ್ದಾಯಿತು
ನಿಮ್ಮ ಮು೦ದಿನ ಪೀಳಿಗೆಯವರಿಗಾದರು
ಒಳ್ಳೆಯದನ್ನು ಬಿಟ್ಟು ಹೋಗಿರಿ
ದುರಾಸೆಯ ಲವಲೇಶವು
ಬರದಂತೆ ತಡೆಯಿರಿ.
-ಪರಶು ರಾಮ್
"ರಂಜಾನ್ ವಿಶೇಷ"
ಅವಳ
ಗುಳಿಕೆನ್ನೆ,
ಹಾಲು ಮೊಗ,
ನೀಳ ನಾಸಿಕ,
ಕೆಂಪು ಹಚ್ಚದ
ಕೆಂದುಟಿ,
ನೆನ್ನೆ ಸಂಜೆಯಷ್ಟೇ
ಕತ್ತರಿಸಿದ್ದ
ತೆಳು ಉಬ್ಬು…
ಮೊನ್ನೆ
ಬೆಲೆ ಇಳಿದಾಗ
ಮಾಡಿಸಿಟ್ಟಿದ್ದ
ಹೊಕ್ಕಳು
ಮುಟ್ಟುವ
ನಕ್ಲೆಸುಗಳು,
ಸಾಬರ ಕಾಲೋನಿಯ
ಶೆಟ್ಟರ ಅಂಗಡಿಯ
ಆಷಾಡದ ಆಫಾರ್ ನಲ್ಲಿ
ಕಡಿಮೆ
ಚೌಕಾಸಿಗೆ ಸಿಕ್ಕಿದ್ದ
ಹೆಚ್ಚು
ಮಿಂಚುವ ಬಣ್ಣ – ಬಣ್ಣದ
ಸೀರೆ.
"ರಂಜಾನ್" ನ
ಒಂದೊತ್ತಿನ ನೆಪದಲ್ಲಿ
ಮಿತವಾಗಿ ತಿಂದು,
ಹಿತವಾಗಿ
ಕಾಣುವ
ಅವಳೊಡಲ
ಶೃಂಗಾರವೆಲ್ಲವನ್ನು
ತನ್ನಲ್ಲೇ
ಮುಚ್ಚಿಟ್ಟುಕೊಳ್ಳುವ
ಅ
ಕಪ್ಪು ಪರದೆಯನ್ನು
ಮನಸಾರೆ
ದ್ವೇಷಿಸುವ
ಮನಸಾಗುತಿದೆ!!!!
-ಮುರಳಿ ತರೀಕೆರೆ
"ಮರೆವು"
ಸ್ರಷ್ಟಿಕರ್ತ ಬ್ರಹ್ಮನಿಗೆ
ಮರೆವು ಬಂದಂತಿದೆ…
ಅವಳ ಬದುಕು ಸಾಗರ
ಸೇರದೆ ದಡದಿ ನಿಂತಿದೆ…
*
" ಅವಳು ಕಪ್ಪು"
ಮನಸು ಬಿಳಿಯ ಹಾಳೆಯಂತೆ
ಅವಳು ಮಾತ್ರ ಕಪ್ಪು…
ಬಣ್ಣದಿಂದಲೇ ವಯಸು ಮೀರಿತು
ಅವಳದೇನು ತಪ್ಪು…
*
ಕಪಟವಿಲ್ಲ ಮೋಸವಿಲ್ಲ
ಪರರ ಚಿಂತೆಗೆ ಸಮಯವಿಲ್ಲ
ಮನಸೆಲ್ಲಾ ಖಾಲಿ ಖಾಲಿ…
ಮತ್ತೆ ಯಾಕೆ ನಾ
ಸುತ್ತ-ಮುತ್ತ ಹೆಣೆಯಲಿ
ಸುಳ್ಳು ಮಾತಿನ ಬೇಲಿ…
*
"ಏನೆನ್ನಲಿ"
ನಿನ್ನ ನಾ ಏನೆನ್ನಲಿ
ಮುಗ್ದನೆನ್ನಲ್ಲೇ
ಮುಂಗೋಪಿ ಎನ್ನಲೇ
ಬೊಗಸೆ ತುಂಬಾ ಪ್ರೀತಿ
ಕೊಡುವ ಧಾರಾಳಿಯೆನ್ನಲೇ???
-ಪವಿತ್ರ ಆಚಾರ್ಯ