ನಾಲ್ಕು ವೇದಗಳೊಂದಿಗೆ ಐದನೇ ನಾಟ್ಯವೇದ: ಕೆ.ಪಿ.ಎಂ. ಗಣೇಶಯ್ಯ


ಎಲ್ಲವನ್ನೂ ತಿಳಿದ ನಾವು ನಮ್ಮ ತನುವನ್ನ ಬಿಟ್ಟು ಕೊಡುವುದಿಲ್ಲವೇಕೆ.? ಅಪ್ಪ ಹಾಕಿದ ಆಲದ ಮರವಿದೆ. ಬೇಕಾದ ರೀತಿಯಲ್ಲಿ, ಬೇಕಾದ ಹಾಗೆ ಬದುಕು ಕಂಡುಕೊಂಡ ಎಷ್ಟೋ ಜೀವಿಗಳು ನಮ್ಮ ಕಣ್ಣ ಮುಂದಿವೆ. ಹಾಗಂತ ಎಲ್ಲರನ್ನೂ ದೂಷಿಸಲು ಬರುವುದಿಲ್ಲ. ಕೆಲವರಾದರೂ ತಮ್ಮ ಕುಟುಂಬದ ಘನತೆಗೆ ತಕ್ಕಂತೆ “ಪರೋಪ ಕಾರ್ಯಾರ್ಥಂ ಮಿದಂ ಶರೀರಂ” ಎನ್ನುವ ಹಾಗೆ ಪರೋಪ ಕಾರ್ಯದಲ್ಲಿ ತೊಡಗಿರುವವರು ಎಷ್ಟೋ ಜನ..? ನಮ್ಮಷ್ಟಕ್ಕೇ ನಾವು ಅಂದುಕೊಂಡು ಇತರರನ್ನೂ ಕಡೆಗಣಿಸಿ ತಮ್ಮಿಷ್ಟದಂತೆ ಬದುಕು ನಡೆಸಿಕೊಂಡು ಹೋದರಾಯ್ತು ಎಂಬುವವರಿಗೆ ನಮ್ಮ ದೇಶದಲ್ಲೇನೂ ಕೊರತೆಯಿಲ್ಲ.
ಆಧುನಿಕ ಯುಗದ ಸ್ಪರ್ಧಾ ಜಗತ್ತಿನಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳುವ ಬಗೆಯಾದರೂ ಹೇಗೆ.? ಪ್ರತಿಯೊಂದು ದಿಕ್ಕಿನಲ್ಲೂ, ಪ್ರತಿಯೊಂದು ಹೆಜ್ಜೆಯಲ್ಲೂ, ಪ್ರತಿಯೊಂದು ಕ್ಷೇತ್ರದಲ್ಲೂ “ಕಾಂಚಾಣಂ ಸರ್ವಕಾರ್ಯ ಸಿದ್ಧಿಃ” ಅನ್ನೋ ಘೋಷವಾಕ್ಯ ತನ್ನ ಗಟ್ಟಿಸ್ಥಾನವನ್ನು ಅಲಂಕರಿಸಿಬಿಟ್ಟಿದೆ. ಪೂರ್ವಕಾಲದಲ್ಲಿ ವಿದ್ಯಾಭ್ಯಾಸಕ್ಕಿದ್ದ ಸಂಸ್ಕøತಿ, ಸಂಪ್ರದಾಯ, ಪೂಜ್ಯನೀಯ ಭಾವನೆ ಮರೆಯಾಗಿ ಸಂಪೂರ್ಣ ನೆಲಕಚ್ಚಿದೆ. ಉದ್ಯೋಗದ ನಿರೀಕ್ಷೆಯಲ್ಲಿ ಸಾವಿರಾರು, ಲಕ್ಷಾಂತರ ವಿದ್ಯಾವಂತ ನಿರುದ್ಯೋಗಿಗಳ ಬದುಕು ಹಸನಾಗುವ ಕನಸು ಕನಸಾಗಿಯೇ ಇದೆ.

ಈ ನಿಟ್ಟಿನಲ್ಲಿ ಉತ್ತಮ ಭವಿಷ್ಯ ಇರದಿದ್ದರೂ ಒಗ್ಗಟ್ಟು, ನೆಮ್ಮದಿ, ಕಷ್ಟ ಸುಖ, ತಾಳ್ಮೆ, ಸಹಬಾಳ್ವೆ, ಗೌರವ ಮುಂತಾಗಿ ಎಲ್ಲವನ್ನೂ ನಿರೀಕ್ಷಿಸುತ್ತಾ, ಸಾಂಸ್ಕøತಿಕ ಮನೋಭಾವದ ಉತ್ತುಂಗತೆಯಲ್ಲಿರುವ ರಂಗಭೂಮಿಯನ್ನು ಆಶ್ರಯಿಸಬಾರದೇಕೆ..? ಸಂಗೀತ, ನಾಟಕ, ನೃತ್ಯ ಮೊದಲಾದವುಗಳು ರಂಗಭೂಮಿಯ ಕೊಡುಗೆ ಎಂದು ತಿಳಿದಿಲ್ಲವೇಕೆ..? ನನ್ನದೆಚ್ಚು, ತನ್ನದೆಚ್ಚು ಎಂದು ತಾನು ನೆಲೆನಿಂತ ಕ್ಷೇತ್ರವನ್ನು ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳನ್ನು ಕನಿಷ್ಟ ಎಂದು ಭಾವಿಸುವ ಮಹಾಮೂರ್ತಿಗಳಿಗೇನೆಂಬೆ..?

ಅನಾದಿ ಕಾಲದಿಂದಲೂ ಕೇವಲ ನಾಲ್ಕೇ ವೇದಗಳು ಪ್ರಚಲಿತವಿರುವುದು. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ. ಇಲ್ಲಿಂದ ಮುಂದಿರುವ ವೇದದ ಕಲ್ಪನೆಯ ಬಗ್ಗೆ ಸೊಲ್ಲೆತ್ತದಿರುವುದು ವಿಪರ್ಯಾಸವೇ ಸರಿ, ಈ ನಾಲ್ಕೂ ವೇದಗಳು ಸೇರಿ ಮತ್ತೊಂದು ವೇದದ ಮಹತ್ವವನ್ನು ಪ್ರಸ್ತಾಪವಿಡದೆ, ತಿಳಿಸಿಕೊಡದೆ “ಬಡವ ನೀನು ಮಡದಂಗಿರು” ಅನ್ನೋಹಾಗೆ ಐದನೇ ವೇದವನ್ನು ಕಡೆಗಣಿಸುವುದು ಎಷ್ಟು ಸರಿ..? ಪ್ರತಿಯೊಂದು ಶಾಲೆ ಕಾಲೇಜುಗಳಲ್ಲಿ ವೇದಗಳು ಎಷ್ಟು.? ಅವು ಯಾವುವು.? ಅದಕ್ಕೆ ಉತ್ತರವಾಗಿ ನಾಲ್ಕೇ ವೇದಗಳು ಕೇಳಿಬರುವುದು. ಮತ್ತೆ ಯಾವ ಯಾವ ವೇದಗಳು ಏನನ್ನು ಕುರಿತು ಹೇಳುತ್ತವೆ..? ಎಂಬುದಕ್ಕೆ ಭವಿಷ್ಯದ ಪೀಳಿಗೆಯಲ್ಲಿ ಉತ್ತರವಿಲ್ಲ.

ಆದ್ಯ ರಂಗಾಚಾರ್ಯರು ಅನುವಾದಿಸಿದ, ನೀನಾಸಂ ರಂಗಶಿಕ್ಷಣ ಕೇಂದ್ರ ಹೆಗ್ಗೋಡು ಪರವಾಗಿ ಅಕ್ಷರ ಪ್ರಕಾಶನ ಪ್ರಕಟಿಸಿದ ಭರತಮುನಿ ವಿರಚಿತ ನಾಟ್ಯಶಾಸ್ತ್ರದಲ್ಲಿ ಬ್ರಹ್ಮನಿಂದ ನಿರ್ಮಿತವಾದ ನಾಟ್ಯವೇದದ ಹುಟ್ಟು ಕಥೆಯಿಂದ ಕೂಡಿದೆ. “ಪೂರ್ವದಲ್ಲಿ ಸ್ವಾಯಂಭುವ ಮನ್ವಂತರದಲ್ಲಿ ಕೃತಯುಗ ಮುಗಿದು ವೈವಸ್ವತ ಮನ್ವಂತರದ ತ್ರೇತಾಯುಗ ಪ್ರಾರಂಭವಾಗುವ ಮಧ್ಯಂತರದಲ್ಲಿ ಜನತೆಯಲ್ಲಿ ಗ್ರಾಮ್ಯ ನೀತಿ ತಲೆದೋರಿತು. ಕಾಮ- ಲೋಭಗಳು ಜಾಗೃತವಾದವು, ಈರ್ಷಾ-ಕ್ರೋಧಾದಿಗಳಿಂದಾಗಿ ಜನತೆಗೆ ಸುಖ-ದುಃಖಗಳೆರಡೂ ಸಂಭವಿಸಿದವು. ದೇವ-ದಾನವ-ಗಂಧರ್ವ-ಯಕ್ಷ-ರಾಕ್ಷಸ-ಉರಗಗಳು ಜಂಬೂದ್ವೀಪವನ್ನು ಆಕ್ರಮಿಸಿದವು. ಜನರು ರಾಜರನ್ನು (ಲೋಕಪಾಲ ಎಂದು) ನಿಯಮಿಸಿಕೊಂಡರು. ಆಗ ಇಂದ್ರನನ್ನು ಮುಂದೆ ಮಾಡಿಕೊಂಡು ದೇವತೆಗಳು ಬ್ರಹ್ಮನ ಕಡೆ ಬಂದು, ವೇದಗಳು ಶೂದ್ರಜಾತಿಗಳಿಗೆ ನಿಷಿದ್ಧವಾದುದರಿಂದ ಎಲ್ಲ ವರ್ಣಗಳಿಗೂ ಲಭ್ಯವಾಗಬಹುದಾದ ಒಂದು ಐದನೆಯ ವೇದವನ್ನು ರಚಿಸು, ಕೇಳಲು, ನೋಡಲು ರಂಜಿತವಾಗುವಂತಹದಿರಬೇಕು ಎಂದು ಕೇಳಿದರು. ಬ್ರಹ್ಮನು ನಾಲ್ಕೂ ವೇದಗಳನ್ನು ನೆನೆಸಿಕೊಂಡು ಧರ್ಮ, ಅರ್ಥ, ಯಶಸ್ಸುಗಳಿಗೆ ಸಹಾಯಕವಾಗಬಲ್ಲ, ಉಪದೇಶವನ್ನು ಒಳಗೊಂಡ, ಸಂಕ್ಷೇಪವಾಗಿ ಭವಿಷ್ಯದ ಆಗುಹೋಗುಗಳನ್ನು ಲೋಕಕ್ಕೆ ಸೂಚಿಸಬಲ್ಲ, ಎಲ್ಲ ಶಾಸ್ತ್ರಾರ್ಥಗಳನ್ನೂ ಒಳಗೊಂಡ, ಎಲ್ಲ ಶಿಲ್ಪಗಳಿಂದಲೂ ಪೋಷಿತವಾಗುವಂತಹ, ನಾಟ್ಯ ಎಂಬ ಐದನೆಯ ವೇದದವನ್ನು ವಿವರ ಸಹಿತವಾಗಿ ರಚಿಸುತ್ತಾನೆ. ಋಗ್ವೇದದಿಂದ ಪಠ್ಯವನ್ನೂ, ಸಾಮವೇದದಿಂದ ಸಂಗೀತವನ್ನೂ, ಯಜುರ್ವೇದದಿಂದ ಅಭಿನಯವನ್ನೂ, ಅಥರ್ವಣ ವೇದದಿಂದ ರಸಗಳನ್ನು ಆಯ್ದುಕೊಂಡು ಉಪವೇದಗಳ ಸಹಿತವಾಗಿ ನಾಟ್ಯವೇದ ಎಂಬ ಐದನೇ ವೇದವನ್ನು ರಚಿಸುತ್ತಾನೆ.

ಕಾಲದ ಮಿತಿಯಲ್ಲಿ ಇನ್ನೂ ತರ್ಕದಲ್ಲಿರುವ ಪ್ರಾಚೀನ ಗ್ರಂಥ ಭರತನ ನಾಟ್ಯಶಾಸ್ತ್ರದಲ್ಲಿ ಬ್ರಹ್ಮನೇ ಸೃಷ್ಟಿಸಿದ ಐದನೇ ವೇದ ನಮ್ಮ ಮುಂದಿದ್ದರೂ, ಕೈಗೆತ್ತಿಕೊಳ್ಳದ ನಾವು ಮತ್ತೆ ಮತ್ತೆ ಕಣ್ಣಲ್ಲೇ ಅದರ ಸ್ವಾದವನ್ನು ಹೀರಿ, ಆಸ್ವಾದಿಸಿ, ಅನುಭವಿಸಿ ಮನಃಸ್ಪೂರ್ತಿಯಾಗಿ ಸಂತುಷ್ಟರಾಗುತ್ತಿದ್ದೇವಲ್ಲಾ..! ಮಾನಸಿಕ ಹಾಗೂ ದೈಹಿಕವಾಗಿ ಆತ್ಮಸ್ಥೈರ್ಯವನ್ನು ಉಂಟು ಮಾಡುವ ನಾಟ್ಯವೇದದ ಪರಿಕಲ್ಪನೆಯ ಬಳಕೆ ಅಮೋಘವಾದುದು ಮತ್ತು ಸ್ಮರಣೀಯವಾದುದು. ಎಲ್ಲ ಕಾಲಕ್ಕೂ ಪೂಜ್ಯನೀಯವಾಗಿ ಬಳಸುವ ಈ ಸಂಪನ್ಮೂಲವನ್ನು ಕಂಡೂ ಕಾಣದಂತೆ ಹೋಗುವುದು ಸರಿಯೇ..?

ನಾಟ್ಯವೇದ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ. ಬದುಕಿನ ಸಾರಸ್ವತ ಲೋಕವನ್ನು ಪ್ರತಿನಿಧಿಸುವ ನಾಟ್ಯವೇದವು ರಂಗಭೂಮಿಯಲ್ಲಿ ಮಾತ್ರ ದೊರೆಯುವಂತಾದ್ದು. ಸಂಗೀತ, ನಾಟಕ, ನೃತ್ಯ, ಶಿಸ್ತು, ಏಕಾಗ್ರತೆ, ಅಭಿವ್ಯಕ್ತಿ ಎಲ್ಲವನ್ನೂ ಮೇಳೈಸಿಕೊಂಡಿರುವ ರಂಗಭೂಮಿಯ ಕಲಾವಿದರನ್ನು ಬಳಸಿಕೊಂಡು ತಮ್ಮ ಗುರಿ ಸಾಧಿಸಬಾರದೇಕೆ..?

ಕೆ.ಪಿ.ಎಂ. ಗಣೇಶಯ್ಯ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x