ಕಾವ್ಯಧಾರೆ

ನಾಲ್ಕು ಕವಿತೆಗಳು: ವೈ.ಬಿ.ಹಾಲಬಾವಿ, ಮೌಲ್ಯ ಎಂ., ಸಾಬಯ್ಯ ಸಿ.ಕಲಾಲ್, ಶೀತಲ್ ವನ್ಸರಾಜ್

ಪ್ರೀತಿ ಬೆರೆಸೋಣ…

ಹೇಳುವುದು ಬಹಳಷ್ಟಿದೆ
ಏಳುತ್ತಿಲ್ಲ ನಾಲಿಗೆ ಸೀಳಲ್ಪಟ್ಟಿದೆ
ಹೊಲಿಯಲ್ಪಟ್ಟಿವೆ ತುಟಿಗಳು
ಆದರೂ; ಮಾತಾಡೋಣ ಬಾ ಗೆಳಯ
ನಮ್ಮ ಎದೆಗಳಿಂದ
ನೂತ ನೋವಿನ ಎಳೆಗಳಿಂದ…

ಕೇಳುವುದು ಬಹಳಷ್ಟಿದೆ
ಸುರಿದ ಸೀಸ ಇನ್ನೂ ಆರಿಲ್ಲ
ಕಿವುಡಾಗಿವೆ ಕಿವಿಗಳು
ಪಿಸುಗುಡುತ್ತಿವೆ ಸನಾತನ ಗೋಡೆಗಳು
ಆದರೂ; ಆಲಿಸೋಣ ಬಾ ಗೆಳಯ
ನಮ್ಮ ಎದೆಬಡಿತದ ಸದ್ದುಗಳಿಂದ…

ನೋಡುವುದು ಬಹಳಷ್ಟಿದೆ
ಕುರುಡಾಗಿವೆ ಕಣ್ಣುಗಳು
ನೆಟ್ಟ ಅವರ ಕ್ರೂರ ನೋಟಗಳಿಂದ
ಆದರೂ; ಬೆಸೆಯೋಣ ಬಾ ಗೆಳೆಯ
ನಮ್ಮ ಅಂತರಂಗದ ನೋಟಗಳನ್ನು
ಎದೆಗೂಡಿನಲ್ಲಿ ಬಚ್ಚಿಟ್ಟ ಕನಸುಗಳಿಂದ…

ನಡೆಯುವುದು ಬಹಳಷ್ಟಿದೆ
ನಡೆಯಲಾಗುತ್ತಿಲ್ಲ
ಶತ ಶತಮಾನದ ಬಂಧಿಗಳು ನಾವು
ಆದರೂ; ಕ್ಷಮಿಸೋಣ ಬಾ ಗೆಳೆಯ
ಮಾನವೀಯತೆ ತುಂಬಿದ ಕಂಗಳಿಂದ…
ಅನಾದಿ ಕಾಲದಿಂದ ಅವರಿಟ್ಟ
ವಿಷದ ಬಟ್ಟಲಿಗೆ ಪ್ರೀತಿ ಬೆರೆಸಿ…!!

-ವೈ.ಬಿ.ಹಾಲಬಾವಿ

 

 

 

 

 

ಒಂದು ನಾಳೆಯ ಗೀತೆ

ನಮ್ಮ ಕಾರುಗತ್ತಲ ಕಣ್ಣಿಗೆ 
ನಿಮ್ಮ ಲೋಲಾಕು ಅಪ್ಪಿದ 
ವಜ್ರದ ಹೊಳಪು ಹೊಂದುವುದಿಲ್ಲ… 
ಸಂಕಟದ ಹಾಡುಗಳು
ಯಾವತ್ತಿಗೂ ಶೃತಿಬದ್ಧ 
ಒಕ್ಕೊರಳಿನ ಗಾನ ಎತ್ತರಾದಷ್ಟೂ
ಲೋಕಮಾನ್ಯರ ಲೋಕದ 
ನಾಜೂಕು ಕಿವಿಗಳ ಕಿವುಡು
ಆಳವಾಗುತ್ತಲೇ ಸಾಗುತ್ತಿದೆ…

ಹರಿದ ಕರುಳು, ಮುರಿದ ಜೋಪಡಿ 
ಉರಿವ ಎದೆ, ಒಲೆಯ ಮೇಲಿಟ್ಟ ಹೆಂಚೇ
ಸೀದು ಸಿಡಿದು ಹಾರುವ ನಮ್ಮೊಡಲ ತಾಪಗಳೆಲ್ಲ
ಸವಿನಯದಿಂದ ಹಾಡುತ್ತಿವೆ… … 
ಮೈಯೆದ್ದು ನಿಲ್ಲುವ ನಾಡಿನ ಮೇಲೆ 
ಸಂಯಮದ ಹಚ್ಚೆ ಸುಯ್ದು ಯುಗಗಳೇ ಸಂಧಿವೆ… 

ನಿಮ್ಮ ಕಾರುಣ್ಯದ ಮಡಿಬಟ್ಟೆ 
ಮೈಲಿಗೆಯಾದೀತು ದೂರ ನಿಲ್ಲಿ… 
ಹಿಡಿದ ಮುಷ್ಠಿಯೊಳಗಿದ್ದ
ನೀಲಿಗಟ್ಟಿದ ಬೆರಳುಗಳನ್ನು
ನಲುಮೆಯಲಿ ನೇವರಿಸಿ ಕಡಿದು ನುಂಗಿದ್ದು
ನಮಗಿನ್ನೂ ನೆನಪಿದೆ… 
ನಮ್ಮ ತಾಕಿದ ನಿಮ್ಮ ಔದಾರ್ಯತೆ ನೂರ್ಮಡಿಗೊಳಲಿ.

ನಮ್ಮವರ, ನಮ್ಮಂಥವರ
ಲೋಕ ಕಂಟಕ ಸತ್ಯಗಳನ್ನು
ನಿಟ್ಟುಸಿರಿನ ಸೋಗಿನಡಿಯಲ್ಲೂ
ವ್ಯಕ್ತಪಡಿಸಬಾರದು.. ಇದು ಇಲ್ಲಿ
ಜೀವಿಸಲು ಪಾಲಿಸಲೇಬೇಕಾದ ಶರತ್ತು.
ಚಿಂತೆ ಇಲ್ಲ……
ಶಾಪಿತಸ್ಥರಿಗೆ ಶಪಿಸುವ ಹಕ್ಕನ್ನು
ಕಳುವಿನಲ್ಲೇ ದಯಪಾಲಿಸಿದವನಿಗೆ
ನಜ್ಜು-ಗುಜ್ಜು ದೇಹವನೇ ಒಗ್ಗೂಡಿಸಿಕೊಂಡು 
ಹಾಕುತ್ತೇವೆ… ಇಷ್ಟುದ್ದದ ದೀಡು ನಮಸ್ಕಾರ… 

ಕತ್ತಲಿಗೆ ಕಣ್ಣುಳ್ಳವರು ತನನ್ನು 
ಕಣ್ತುಂಬಿಕೊಳ್ಳುವುದೇ ಏನೋ ಹಿಗ್ಗು… 
ಕಣ್ಣೊಳಗೆ ಕತ್ತಲು ಸ್ಥಾಪಿತವಾದವರನ್ನು
ಅದ್ಹೇಗೋ ಲೋಕ ಜಾಡಿಲ್ಲದೆ ಗುಡಿಸಿಬಿಟ್ಟಿರುತ್ತದೆ
ಸುಮ್ಮನೊಂದು ತಾತ್ಸಾರದ ತುಣಕನೆಸೆದು.

ಗಾಯದ ಕಣ್ಣಿನಲಿ ಸುಖದ ಚಿತ್ರ ಹುಡುಕಿದ್ದಕ್ಕೋ
ರಕ್ತವಸರುವ ನಾಲಿಗೆಯಲ್ಲೇ
ಚರಿತ್ರೆಯ ಚರ್ಮಗೀತೆಯ ಹಾಡಿದಕ್ಕೆ
ಸುಖದ ಗುಲಾಮನ ಜೋಡಿನ
ಅಡಿಯೂ ಗುಟುರುತ್ತದೆ.

ನಮಗೆಂದೇ ನುಗ್ಗಿ ಬರುವ ಪ್ರಾರಬ್ಧಗಳಿಗೆ
ಹೆಸರಿಟ್ಟು ಮುಪ್ಪಾಗಿದ್ದೇ ತಿಳಿಯಲಿಲ್ಲ… 
ಈ ಬದುಕು ಯಾರ್ಯಾರದೋ ಮುಲಾಜಿಗೆ ಸಿಕ್ಕು 
ಚಿಂದಿಯಾದದ್ದು, ಬಿದ್ದ ತೇಪೆಯಲೇ 
ತೃಪ್ತವಾಗಿದೆ ನಿಮಗೆ ಕಾದಿಯಾಗಿದ್ದಕ್ಕೆ.

ನಮ್ಮ ಭರವಸೆಯ ಭ್ರೂಣಗಳನ್ನು 
ಉಡಾಯಿಸಿ ಅವು ಆ ದೂರಕ್ಕೆ ಚಿಮ್ಮಿ,
ಸುಟ್ಟು, ಸೀದು, ಬೂದಿಯಾಗಿ ಉದುರುವಾಗ 
ನಿಮ್ಮ ಮಕ್ಕಳು ಹೊಳಪು ಕಣ್ತುಂಬಿಕೊಂಡು
ಎದೆ ತುಂಬಿ ನಕ್ಕುಬಿಡಲಿ… 

ನೆನಪಿರಲಿ, ಮರೆಯಬಾರದು ನೀವು..
ಈ ಗೀತೆ ಹೀಗೆಯೇ ಇರುವುದಿಲ್ಲ… 
ಎಲ್ಲವೂ ಬದಲಾಗುತ್ತದೆ ನಮ್ಮ ನಿನ್ನೆಗಳಂತೆ… 
ನಿಮ್ಮ ನಾಳೆಗಳಂತೆ…
ಪೃಥ್ವಿಗೂ ನಮ್ಮ ಸಹನೆಯಲ್ಲಿ ಪಾಲು ಕೊಟ್ಟಾಗಿದೆ,
ಅಲ್ಲಿಯವರೆಗೂ ಚೆಂಡು ನಿಮ್ಮದೆ, ಅಂಗಳವೂ ನಿಮ್ಮದೆ…

-ಮೌಲ್ಯ ಎಂ. 

 

 

 

 

 

 

ಬಾವಿ 

ರಾಜನಕೋಳೂರವೆಂಬ
ಪುರದೊಳಗ ಇತ್ತೊಂದು
ಬಾವಿ ಆ ಊರೊಳಗ
ಬಂದಿತು ಬಲು ಕೆಟ್ಟ ಬ್ಯಾಸಿಗಿ
ಹರಿಯುವ ಹಳ್ಳ ನಿಂತಾವ ಒಣಗಿ
ಕೀಳು ಜಾತಿಯರಿಗೆ
ಸೇರಮುಕ್ಕ ನೀರಿಲ್ಲ
ಇದ್ದೊಂದು ಬಾವಿಗೆ
ಬರುವ ಆಗಿಲ್ಲ
ಅದು ಮಿಸಲು ಮೇಲು ಜಾತಿಯವರಿಗೆಲ್ಲಾ ..

ಬಾವಿಯ ಹಾದಿಯಲಿ ತೆಲೆಬಾಗಿ
ನಿಂತಿಹರು
ಮೇಲು ಕುಲದವರಿಗೆ ಕಾಲಿಗೆ
ಬಿದ್ದಿಹರು
ಮಕ್ಕಳು ಹಸಿದಿಹರು ನೀರಿಲ್ಲ 
ಗಂಜಿಯ ಕುದಿಸಲು ನೀರಿಲ್ಲ 
ಮುಟ್ಟಬ್ಯಾಡಿರಿ ಮೈಲಿಗೆಯಾದಿತು
ದೂರನಿಲ್ಲಿ ನೀವು ಕೀಳು ಕುಲದವರು
ಎಂದು ಕೂಗಾಡಿ ನೀರು ಎತ್ತಿ
ಹಾಕಿಹರು
ಅಧ೯ ಭೂಮಿಗೆ ಇನ್ನಧ೯ ಮಡಕೆಗೆ..

ಗೌಡರ ಮನೆಯ ಬಚ್ಚಲು ನೀರು
ಕದ್ದುಕೊಂಡು ಮೈ ತೊಳೆದಿಹರು
ಕೀಳು ಕುಲದಾಗ ಹುಟ್ಟಿದ ತಪ್ಪಿಗಿ
ಸಿಟ್ಟಾಗಿ ಆ ಶಿವನ ಬೈದಿಹರು
ಅಕ್ಷರ ಕಲಿಯಾಕ ಶಾಲೆಯಲಿ
ಜಾಗವಿಲ್ಲ
ಧಣಿಯರ ಮನೆ ಜೀತ
ತಪ್ಪಲಿಲ್ಲ
ಊರ ಗುಡಿ ದ್ಯಾವ್ರುಗೆ ಬರವ
ಆಗಿಲ್ಲ ಕೀಳು ಕುಲದವರು
ಬೀದಿಯಲಿ ಉಗುಳುವ ಆಗಿಲ್ಲ
ಬದುಕಿದ್ದು ಶವದಂತೆ ಬಾಳಿಹರು
ಮೇಲು ಕುಲದವರು ಮನಬಂದಂತೆ
ತುಳಿದಿಹರು..

ಮಾದಿಗರ ಮನೆಯಲ್ಲಿ ಕದ್ದು
ರೊಟ್ಟಿ ತಿಂದ ನಾಯಿಯ ಗೌಡರು
ಕೊಂದು ಹಾಕಿಹರು
ಗೌಡನ ಮನೆಯ ಮುದ್ದು ಮಗಳು
ಆಯತಪ್ಪಿ ಬಾವಿಗೆ ಬಿದ್ದಿಹಳು
ಕೂಗು ಕೇಳಿ ಬಾವಿಗೆ ಜಿಗಿದ ಕೆಂಚ
ಪ್ರಾಣವನುಳಿಸಿ ಮೇಲೆ ತಂದಿಹನು
ಮೈಲಿಗೆ ಆಯ್ತು ಬಾವಿಯ ನೀರೆಂದು
ಆ ಬಾವಿಯನ್ನೇ ಮುಚ್ಚಿಹರು
ಕೀಳು ಕುಲದವರ ಊರಿಂದ
ಹೊರಹಾಕಿಹರು

-ಸಾಬಯ್ಯ ಸಿ.ಕಲಾಲ್

 

 

 

 

 

ತಳ್ಳುವಿರೇಕೆ   ದೂರ ನನ್ನ .???…. 

ದಣಿದು ಹೋಗಲು ಗಂಗೆಯ ಬಳಿ 
ಕೇಳಲಿಲ್ಲ ಅವಳು ನೀನಾರೆಂದು 
ನೀರು  ಕೊಡುವ ಮುನ್ನ…. 

ನಿಂತಾಗ ಕಡಲ ದಡದಿ 
ದೂರ ಸರಿದು ನಿಲ್ಲಲಿಲ್ಲ
ಅಲೆಗಳು ಮುಟ್ಟದೆ  ನನ್ನ…. 

ಕಂಗಳ ತೆರೆಯಲು ಮುಂಜಾನೆ 
ರವಿಯೇನೂ ಅಸ್ತಮಿಸಲಿಲ್ಲ
ನೋಡುವುದಿಲ್ಲವೆಂದು ನನ್ನ….. 

ನಡೆವಾಗ ಧರೆಯೇನೂ 
ಬಿರುಕು ಬಿಡಲಿಲ್ಲ
ಸ್ಪರ್ಶಿಸಲಾಗದು ಎಂದು ನನ್ನ….. 

ಆದರೆ ನೀವೇಕೆ 
ದೂರ ತಳ್ಳಿ ಹೊರಗಿಟ್ಟಿರುವಿರಲ್ಲಾ ಹೆಣದಂತೆ 
ಮುಟ್ಟದೆ, ನೋಡದೆ, ಕೇಳದೆ 
ನಾ ಮಾಡಿದ ತಪ್ಪಾದರೂ 
ಏನೆಂದು ಹೇಳದೆ …. 

ಕೆಂಪಲ್ಲವೇ ನಿಮ್ಮದೂ 
ನನ್ನoತೆ ರಕ್ತದ ಬಣ್ಣ
ನಿಮ್ಮಂತೆಯೇ ಜೀವವಿರುವ ಮಾನವ ನಾ 
ಹೇಳಿ ತಳ್ಳುವಿರೇಕೆ ದೂರ ನನ್ನ .??
-ಶೀತಲ್ ವನ್ಸರಾಜ್ 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ನಾಲ್ಕು ಕವಿತೆಗಳು: ವೈ.ಬಿ.ಹಾಲಬಾವಿ, ಮೌಲ್ಯ ಎಂ., ಸಾಬಯ್ಯ ಸಿ.ಕಲಾಲ್, ಶೀತಲ್ ವನ್ಸರಾಜ್

Leave a Reply

Your email address will not be published. Required fields are marked *