ನಾಲ್ಕು ಕವಿತೆಗಳು: ವೆಂಕಟೇಶ್ ನಾಯಕ್, ಶಿವಕುಮಾರ ಚನ್ನಪ್ಪನವರ, ಗುರು ಪ್ರಸಾದ್, ರಾಣಿ ಪಿ.ವಿ.

ಬೆಳೆ ಕಳೆ

ನನ್ನ ಬೆಳೆ, ನನ್ನ ಕಳೆ
ನನ್ನದೇ ಹೊಲದಲ್ಲಿ
ನಾನೇ ಭಿತ್ತಿದ ಬೀಜ
ಸದಾವಕಾಶದಲ್ಲಿ ಬೆಳೆದು
ಕಳೆ ಇಲ್ಲದ ಬೆಳೆ
ಕನಸು ಕಂಡಿದ್ದು ನಿಜ

ಮಣ್ಣಿದು, ಕಪ್ಪಿರಲಿ ಕೆಂಪಿರಲಿ
ಖಂಡಿತ ಚಿಗುರುವುದು ಕಳೆ
ನೀರಾಕಿದ್ದು ನಾನೇ ಬೆಳೆಗೆ, ಇಂಗಿತ.
ಅದರೊಡನೆ ಬೆಳೆದದ್ದು ಕಳೆ

ಇಂದು, ಬೆಳೆಗಾತ್ರಕ್ಕೆ ಬೆಳೆದ ಕಳೆ
ಅಲ್ಲಿ ಕೆಸರು ತುಂಬಿದ ಕೊಳೆ

ಈಗ ಪಿಕಾಸಿ ಹಿಡಿದು
ಹೊಲದ ಬದಿಯಲ್ಲಿ ನಿಂತ ನಾನು
ತಲೆಯಲ್ಲಿ ಸಾಕದಿದ್ದರೂ
ಬದುಕುವ ಹೇನು
 
ರಭಸದಲಿ ತೆಗೆಯ ಬೇಕೆಂದಿರುವೆ ಕಳೆ
ಪಟ್ಟು ತಪ್ಪಿದರೆ ಆಪತ್ತಿನಲ್ಲಿ ಬೆಳೆ
ಕಿತ್ತೊಗೆಯಬೇಕು ಕಳೆ
ಆದರೆ ಬೇಕು ನನ್ನ ಬೆಳೆ…

-ವೆಂಕಟೇಶ ನಾಯಕ್

 

 

 

 



ಸ೦ಗಾತಿಗಳೇ ಬನ್ನಿ

ಬನ್ನಿ ಸ೦ಗಾತಿಗಳೇ
ಹುಟ್ಟಿ ಕರುಳ ಬಳ್ಳಿಯ ಕತ್ತರಿಸಿ
ಮೊದಲು ಹೀರಿದ ಶುದ್ದ ಗಾಳಿಯೇ ಬನ್ನಿ
ಅತ್ತ……..
ಉಸಿರು ಕೊಟ್ಟವಳ, 
ಉಸಿರೇ ಕಿತ್ತುಕೊ೦ಡ,
ಕಾರ್ಮೊಡದ ವಿಧಿಯೇ
ದೇಹವನ್ನುಸಿರೊಳಗೆ ಬಚ್ಚಿಟ್ಟ
ಫಸಲು ಭೂವಿಯೇ,
ಟಾರು ಬಿದಿಯ ಕಿತ್ತು ಬನ್ನಿ
ಬೈಗು, ಬೆಳಗೆನದೇ ದೊತ್ತೆ೦ದು
ಸುರಿಯುತ್ತಿದ್ದ ಮಳೆಹನಿಯೇ ಇಳಿದು ಬನ್ನಿ
ಒ೦ದು ಇರುಳಾಗಿ, ಹಗಲಾಗಿ
ಬಿಸಿಲಲ್ಲಿ ಕಳೆ ಕಿವುಚುವಾಗ,
ಕಿತ್ತು ಬ೦ದ ಬೆವರಾಗಿ ಬನ್ನಿ
ನಿದ್ದೆಯಾಗಿ,
ಕನಸೊ೦ದು ಕವಿತೆಯಾಗಿ,
ಮನದ ಮೌನ ಕದಡಲು ಬನ್ನಿ
ಸ್ನೇಹದಿ೦ದ ನಕ್ಕ ಒವಾಗಿ ಬನ್ನಿ
ನೆನಪ ಹೊತ್ತು ತನ್ನಿ
ಅವಳ ದಾ೦ಪತ್ಯ,
ಇವಳ ಸಾ೦ಗತ್ಯ,
ಮತ್ತೊಬ್ಬಳ ಸು೦ದರತೆ.
ಹಲ್ಲುದುರಿ, ಕಾಲು ಮೂರಾಗಿ,
ಪೂರ್ಣ ವಿರಾಮದ ಹ೦ತದಲ್ಲಿದ್ದರೂ,
ಬದುಕುವ ಹತಾಸೆ ಹುಟ್ಟುತ್ತಿದೆ
ಇನ್ನೊಮ್ಮೆ ಬಾಳಲ್ಲಿ ಬನ್ನಿ
ಓ ಸ೦ಗಾತಿಗಳೆ ಬನ್ನಿ.

-ಶಿವಕುಮಾರ ಚನ್ನಪ್ಪನವರ

 

 

 

 


ಬರಡು ವಾಸ್ತವ

ಕಣ್ಣ ಪೊರೆಯಲ್ಲಿ 
ಹೆಣ್ಣೊಂದು ಸಿಲುಕಿ
ಕಣ್ರೆಪ್ಪೆ ತೊಳಲಾಡಿದೆ
ಕನಸಿನಿರಿತವ ಕನವರಿಸುತ್ತಾ
ಹಗಲ ಹೆಗಲಿಗೆ ಜೋತುಬಿದ್ದಿವೆ
ಕಾದು ಸೋತ ನಿದಿರೆ

ಹೆಣ್ಣೆಜ್ಜೆಯಿಟ್ಟಾಗ ಅರಿವಾಗಿತ್ತು
ಎದೆಬಡಿತ ಹಾದಿತಪ್ಪಿ
ಮಧುರ ನಾದವಾಗಿದ್ದು
ಈಗಲೂ ಎದೆ ಝುಂಗುಟ್ಟುತ್ತಿದೆ
ಬಿಟ್ಟುಹೋದ ಒಂಟಿಗೆಜ್ಜೆಯ
ತಪ್ಪಿದತಾಳಕ್ಕೆ ಸಿಲುಕಿ

ಇರಿದ ಕನಸು ಖಾಲಿಯಾಗಿ
ವಾಸ್ತವತೆ ನೆಕ್ಕುತಿರುವಾಗ
ಬರಿದಾದ ಮನದ ಬಟ್ಟಲ,
ರುಚಿ ಮರೆತ ಇಂದುಗಳ
ನೆನಪ ನೆನ್ನೆಗಳು ಚುಚ್ಚುತ್ತಿವೆ

-ಗುರು ಪ್ರಸಾದ್

 

 

 

 


ಬದಲಾವಣೆ

ಮಿನುಗುವಾ ನಕ್ಷತ್ರದಲಿ
ಕಣ್ಚುಚ್ಚುವ ಆಕ್ರಂದನ,
ಸಮಾಧಾನಕರ ಕತ್ತಲ ಕಬಳಿಸುತ
ಬೆಳದಿಂಗಳಲಿ ಭುವಿಯ ಆಲಿಂಗನ.

ಕಾನನವ ಓದಿ ತಾ ಸೇರಲು
ಜಿಂಕೆಯ ಮೊಗದಲು ಎನೋ ವ್ಯಾಘ್ರತನ
ಸಹಾಯಕೆ ಲೋಕವನರಸಲು
ಎಲ್ಲದಕೂ ಹಿದಿದಂತಿಹುದು ಗ್ರಹಣ.

ಚಂದನದ ನುಣುಪಿನಲಿ,
ತೇದವರ ಸಂಕಟ ನಿದರ್ಶನ
ಕಣ್ಣಿನ ಅಂದದ ಕಾಡಿಗೆಯಲಿ
ಉರಿದ ಬೆಳಕಿನ ನೋವಿನ ಶೇಕರಣ.

ಗಾಯನದ ಆಲಪನೆಯಲಿ ಕೇಳಿಹುದು 
ಕಿವಿ ಕಚ್ಚುವ ವಿಕಾರ ವೇದನಾ,
ಕನಸಿನ ಸುಂದರ ಬಿಡಿ ಬಣ್ಣಗಳು
ಸಂಚಿನಲಿ ಸೇರಿ ಆಗಿಹವು ಕಪ್ಪು ವರ್ಣ.

ನೊರೆ ಹಾಲಿನಾ ರುಚಿಯಲಿ
ಕರುವಿನ ಹಸಿವ ರೋದನಾ,
ಎಲ್ಲ ಕಾಳಜಿಯಲು ಮನವು ಮಾಡಿಹುದು
ಒಳಗಿನ ಸ್ವಾರ್ಥದ ಸಂಶೋಧನ.

ಕಣ್ಣೀರಿಡಲೂ ತವಗುಡುತಿತ್ತು ದಾಟಲಾರದೇ
ಆ ದಟ್ಟ ಮೋಡವನು ಹೊಂಗಿರಣ,
ಎಲ್ಲವನೂ ನೆನೆದು ನೋವಿನಲಿ
ರವಿಯೇ ಮುಳುಗಿದ್ದ ತಿಳಿಸದೇ ಕಾರಣ.

-ರಾಣಿ ಪಿ.ವಿ.

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Omkar Hosalli
Omkar Hosalli
7 years ago

ಉತ್ತಮ ಕವಿತೆಗಳು….)

1
0
Would love your thoughts, please comment.x
()
x