ವಿಕಲ ಚೇತನ ಸಕಲ..
ಯಾರು ವಿಕಲ ಚೇತನರು, ಸ್ವಾಮಿ ?
ಸಕಲವಿದ್ದೂ ಇಲ್ಲದ ನಾವೊ, ಅವರೊ?
ಯಾರ ತಪ್ಪೊ, ಪಾಪವೊ ಸುಂಕ
ಕಟ್ಟುತ ತೆರದಲೆ ಜೀವನ ಪೂರ
ಹೋರಾಟದ ಬದುಕಲಿ ಛಲ ಬಂಡವಾಳ…
ಆತ್ಮಾಭಿಮಾನ ಸ್ವಾಭಿಮಾನ ಹಂಬಲ
ಸಕಲಾಂಗರೆ ಕೈಬಿಟ್ಟಾ ಗಳಿಗೆ
ವೈಕಲ್ಯವೆ ದೂರಿ, ಕಾಡಿ ಸಂಬಳ ನೋವಲ್ಲೆ
ಕೀಳರಿಮೆ ಅನುಕಂಪದ ಎದೆಯಲೆ
ಬೀಜ ಬಿತ್ತು ಬೆಳೆದು – ಗೊಂಚಲೊ, ಕುರುಚಲೊ..!
ಊನವಿದ್ದರೇನು ದೈಹಿಕ, ಮಾನಸಿಕ ?
ವಿಕಲಾಂಗ ನೋಡುವ ದೃಷ್ಟಿ ಸಹಿತ
ಸಹಿ ಹಾಕಿಬಿಡುವ ಅಂಕಿತ ಮುದ್ರೆಯಡಿ
ಕಳಚಿಕೊಂಡಂತಲ್ಲವೆ ಹೊಣೆ?
ಲೊಚಗುಟ್ಟಿ ಬದಿ ಸರಿಸಿ ಕಾರ್ಯಬಾಹುಳ್ಯ ..
ಯಾರಿಲ್ಲವೀ ಜಗದಲಿ ಸರ್ವೋತ್ಕೃಷ್ಟಾ
ಒಂದಲ್ಲೊಂದು ಯಾತನೆ ತನುಮನಾಸ್ವಸ್ಥ
ಇಣುಕಿತೆಂದು ಇನಿತು ವಿಕಲ ಚೇತನವೇ?
ಕೆಣಕದಿರೆ ಜಗವ ಸಜ್ಜನಿಕೆ, ಚೇತೋಹಾರಿಯೆ ?
ಬಿಡು ಯಾರಿಲ್ಲ ವಿಕಲ-ಚೇತನ-ಸಕಲ ಸೃಷ್ಟಿಯಲಿ ..
-ನಾಗೇಶ ಮೈಸೂರು
ಹೃದಯ ವಿಕಲರಲ್ಲ ನಾವು…
ಡೊಂಕಾಗಿದೆಯೆಂದು ಕಬ್ಬಿನ ಜಲ್ಲೆಯನ್ನು ಜರಿಯದಿರಿ,
ಕೋಟಿ ಸಿಹಿಯ ಕಣಗಳಿಹವು ಅದರ ಒಡಲಲಿ!
ಅಂತರಂಗಕಿಳಿವ ಶಕ್ತಿ ಬಾಹ್ಯ ನ್ಯೂನ್ಯತೆಗಿಲ್ಲ,
ಊನವೆಂಬುದು ಅಡಗಿದೆ ಬರಿ ದೇಹದ ಜಡದಲಿ!
ದೇಹ ಬರಿಯ ಯಂತ್ರ; ಇಚ್ಛೆ ಅದನು ನಡೆಸೊ ಸೂತ್ರ
ಕೊರತೆಯನೆಲ್ಲ ಮರೆತು ನಡೆಸು ಜಯದ ಹಾದಿಗೆ;
ತನ್ನ ಬಲವ ತಾನೆ ಮರೆತ ಹನುಮನಂತೆ ನಮ್ಮ ಮನವು
ಅರಿತೊಡೆ, ಎದ್ದು ಜಿಗಿವುದು ಸೋಲಿನ ಶರಧಿಯಾಚೆಗೆ!
ದ್ವೇಷ, ಮೋಸ, ಕಪಟಗಳಂಟಿದ ಹೃದಯ ವಿಕಲರಲ್ಲ ನಾವು
ಆಸೆ, ಕನಸುಗಳ ರೆಕ್ಕೆ ತೆರದು ಹಾರಬಲ್ಲೆವು;
ಖಿನ್ನತೆಗಳ ಕಡಲಿನಾಚೆ ಉನ್ನತಿಗಳ ತೀರವಿಹುದು
ದುಗುಡದಲೆಗಳ ಮೀರಿ ಅದನು ಸೇರಬಲ್ಲೆವು!
-ವಿನಾಯಕ ಭಟ್,
ವಿಕಲಚೇತನರು
ವಿಕಲಚೇತನರು ಅಂಕವಿಕಲರಲ್ಲಾ |
ವಿಕಲಚೇತನರು ನಾವೆಲ್ಲಾ||
ಚೇತನಾರಹಿತರನ್ನಾಗಿಸಿದ್ದಾರೆ ನೂರಾರು ಮುಗ್ಧ ಮಕ್ಕಳನ್ನು
ಭಯೋತ್ಪಾದಕರು ಹೆಸರು ಹೇಳಿ ಅಲ್ಲಾ |
ಚಿತ್ತ ತೋಚದೆ ಏನೂ ಮಾಡಲಾಗದೇ
ಸುಮ್ಮನೇ ಕುಳಿತಿದ್ದೇವೆ ನಾವೆಲ್ಲಾ ||
ವಿಕಲಚೇತನರು ಅಂಕವಿಕಲರಲ್ಲಾ |
ವಿಕಲಚೇತನರು ನಾವೆಲ್ಲಾ||
ವಿಶ್ವವೇ ನಡುಗುತಿದೆ ಇಂದು
ಮದ್ದುಗುಂಡುಗಳ ಸದ್ದಿನಿಂದೆಲ್ಲಾ|
ವಿಶ್ವದೇಹಿಯ ಮಡಿಲ ಸೇರಿದ ಪುಟ್ಟ ಹೃದಯಗಳ
ಭಾರವಾದ ಶವಗಳೆಲ್ಲಾ ||
ವಿಕಲಚೇತನರು ಅಂಕವಿಕಲರಲ್ಲಾ |
ವಿಕಲಚೇತನರು ನಾವೆಲ್ಲಾ||
-ಡಾ|| ರಶ್ಮಿ ಸುಧೀರ್
ಜಗವನೋಡಲು ಕಣ್ಣಿಲ್ಲ
ನಾ ಕುರುಡನೆಂದು ಕಣ್ಣೀರಿಡಬೇಡ
ಜಗವೆ ನಿನ್ನ ನೋಡಿ
ಮೆಚ್ಚುವಂತೆ ಬಾಳು…..
ದೇಹದ ವೈಕಲ್ಯತೆಗಿಂತ ಮಾನವನ
ಮನಸಿನ ವೈಕಲ್ಯತೆ ಬರಿ ಕೀಳು
ನೀ ಕಳೆದುಕೊಂಡಿಲ್ಲ ಏನನ್ನೂ
ಚೆನ್ನಾಗಿ ಬಾಳು…..
ಎಲ್ಲರಂತೆಯೇ ನೀನು ಮಾನವ
ಸಮಾಜದಲೂ ಸರಿಸಮಾನ
ಅಂಗವೈಕಲ್ಯತೆಯಿಂದ ನೊಂದಿರುವ
ನೀನಲ್ಲ ಕೀಳು…..
ಸರಕಾರದಿಂದ ಬರುತಿಹುದು
ಹಲವು ಸೌಲಭ್ಯಗಳು
ಅದ ಅರಿತು ಸದುಪಯೋಗಪಡಿಸಿ
ಇತರರಿಗೂ ತಿಳಿಸು…..
-ಪವಿತ್ರ ಆಚಾರ್ಯ
Dr .rashmi sudir’s vikalachetanaru poem is really good and apt to 26/11 or peshawar incident.