ಮರೆಯಲಾಗದು !!!
ಅ೦ದೇಕೊ ಘಾಸಿಗೊ೦ಡ ಮನ
ಮತ್ತೆ ಚೇತರಿಸಿಕೊಳ್ಳಲಿಲ್ಲ
ಪ್ರಯತ್ನಗಳು ಹಲವು
ಆದವೆಲ್ಲ ವ್ಯರ್ಥವು…..
ಎಲ್ಲ ದುಃಖಗಳ ಮರೆತರೂ
ಅದೊ೦ದೆ ನೆನಪು
ಅದೇಕೊ ತಿಳಿಯದು
ಮಾಸುತಿಲ್ಲ ಆ ಗಾಯವು….
ಅಷ್ಟಿತ್ತಾ ಘಾಸಿಯ ತೀವ್ರತೆ
ಅ೦ದೇಕೊ ತಿಳಿಯಲಿಲ್ಲಿ
ಸಿಹಿಯ೦ತಿತ್ತು ಆ
ಮರೆಯಲಾಗದ ಮಮತೆಯು…
ಮರೆತೆನೆ೦ದರೆ ಸುಳ್ಳು
ಮರೆಯದಿದ್ದರೆ ಅದು
ಕಹಿಯಾದ ಸತ್ಯವು
ಸಾಯಿಸದೇ ಸುಡುತಿಹುದು….
— ಕಾವ್ಯಪ್ರಿಯ
*****
ಬೆಳಕಾಗುವ ಮೊದಲೇ
ಕತ್ತಲೆಯ ಮುಸುಕು,
ಶುರುವಾಗುವ ಮೊದಲೇ
ಕೊನೆಯಾಗುವ ಕೊರಗು,
ಅರಳುವ ಮೊದಲೇ
ಬಾಡಿಹೋಗುವ ಕುರುವು,
ಒಲವೇ ನೀ ಒಂಟಿ ನನ್ನಲ್ಲಿ ಯಾವಾಗಲೂ…..
ಚಡಪಡಿಸಿದೆ ತುಟಿ ಪಡೆದ
ಸಿಹಿ ಮುತ್ತಿನ ಸವಿ ಮರೆಯಲು,
ಒರಳಾಡಿದೆ ಮನಸು ಕಂಡ
ಕನಸುಗಳ ಗಳಿಗೆ ಮರೆಯಲು,
ಬಡಿದಾಡಿದೆ ಕಣ್ಣ ರೆಪ್ಪೆ
ನಿನ್ನ ಛಾಯೆ ಮುಚ್ಚಲು,
ಒಲವೇ ನೀ ಒಂಟಿ ನನ್ನಲ್ಲಿ ಯಾವಾಗಲೂ……
– ದಿನೇಶ್ ಚನ್ನಬಸಪ್ಪ (ಮಂಚದಿ)
******
ಒಕ್ಕಲೆಬ್ಬಿಸುವ ನಿನ್ನ ಕಡತಕ್ಕೆ
ಒಂದಿಷ್ಟು ಜಾಗದಲಿ ಮರವೇ ತುಂಬಿದೆ
ಅಥವಾ
ಮರವಿರುವ ಜಾಗ
ಸುರಕ್ಷಿತ ಪ್ರದೇಶದ ಗುರ್ತು
ಒಲುಮೆ ಇಲ್ಲದ ಹೆಸರಿಗೆ
ಎಂದೆಂದೂ ಇರುವು
ಸಾವು ಮಿಲಾಕತ್ತು
ಮರವನ್ನಪ್ಪಿದ ಬಳ್ಳಿಗೆ
ತಬ್ಬಲಾಗದ ಬಾಗಲಾಗದ
ಮರ….
ನೀನೂ….
ಒಲವಿಗೆ ಬರ.
ಬೀಳುವ ಗೋಡೆ ಹಿಡಿಯಲು ಸೋತ
ಮಾತುಗಳು
ಬಿಡಿಸಿಟ್ಟ ಎಲೆ ಪಂಕ್ತಿಯಲಿ ನಿಂತು
ಹುಡುಕುತಿವೆ ಹೆಸರು
ಅಗುಳಿನದು….
ನಾನೂ….
ಹೂಡಲಾಗದು ದಾವೆ.
ಒಲವಿಗೆ ನೀರೆರೆದವಳ ಬದುಕೆ
ಬೇಕೆ ಒಕ್ಕಲೆಬ್ಬಿಸುವ ಕಡತಕ್ಕೆ.
-ಅಕ್ಷತಾ ಕೃಷ್ಣಮೂರ್ತಿ ಬೇಲೇಕೇರಿ.
*****
ನಾನು ಮಗುವಾಗಿದ್ದಿದ್ದರೆ
ಈ ಎಲ್ಲ ಬೇಗುದಿ ನಿಟ್ಟುಸಿರು ಇರ್ತಾ ಇರಲಿಲ್ಲ
ನಾನು ಮಗುವಾಗಿದ್ದಿದ್ದರೆ
ಮನಸ್ಸಿನ ತೊಳಲಾಟದಲ್ಲಿ
ಒದ್ದಾಟದಲ್ಲಿ ಬೆಂದು ನಲುಗುತಿರಲಿಲ್ಲ ..
ನಾನು ಮಗುವಾಗಿದ್ದಿದ್ದರೆ
ಕಳ್ಳತನದ ನೋಟದ ಅರಿವಿರುತಿರಲಿಲ್ಲ;
ಸುಳ್ಳಿನ ಮಣಿಗಳ ಪೋಣಿಸುತಿರಲಿಲ್ಲ॒
ನಾನು ಮಗುವಾಗಿದ್ದಿದ್ದರೆ
ಭೇದ-ಭಾವದ ಹಂಗಿಗೆ ತಿಳಿಯುತಿರಲಿಲ್ಲ
ಜಾತಿ-ಧರ್ಮದ ಎಳೆಗೆ ಎಂದೂ ಸಿಲುಕುತ್ತಿರಲಿಲ್ಲ॒
ಹೌದು….
ನಾನು ಮಗುವಾಗಲಿಲ್ಲ..
ಮಗುವಿನ ನಗು ಕಲಿಯಲಿಲ್ಲ….
ಮಗುವಲ್ಲಿ ಮಗುವಾಗಿ ಬೆರೆಯುವ ಮನಸ್ಸು ತಿಳಿಯಲಿಲ್ಲ..
ಓ ಮನವೇ
ಇನ್ನಾದರೂ ಬದಲಾಯಿಸು
ರಚ್ಚೆ ಹಿಡಿದು ಕಾಡುವ ಮನಸ್ಸನ್ನು
ಮುಕ್ತವಾಗಿ ನಗುವಂತೆ….
ಕಲಿತುಕೊ
ಮಗುವಿನ ಎಳೆ ಸೆಳೆತದ ಮುಗ್ಧ ನಗುವನ್ನು….
-ಸುಚಿತ್ರ ಕೆ. ಮಂಗಳೂರು
****