ಊರಲ್ಲಿ ನೋಡಿದ್ರೆ ಜನ ರಾಚನ ಮನೆ ಮುಂದೆ ಜಮಾಯ್ಸಿದಾರೆ. ರಾಚ ಮಾತ್ರ ತನಗೇನು ಗೊತ್ತೇ ಇಲ್ಲ ದಂತೆ ಊರ ಉಸಾಬರಿ ಮಾಡದೇ ತಾನಾಯ್ತು ತನ್ನ ಹೊಲ, ದೊಡ್ಡಿ ದನಗಳ ಮೇವು, ಮುಸುರಿ, ಸಗಣಿ ಕೆಲಸದ ಜೊತೆ ಬಿಜಿನೋ ಬಿಜಿ. ಜನ, ಅವನ ಹೆಂಡ್ತೀನ ಕೇಳ್ತಾ ಇದ್ರು. ಅವನ ಹೆಂಡ್ತಿ ಕೂಡ "ಇವ್ನ ಹೆಣದ್ ಜೊತೆ ಅವ್ರೀಸು ಮಂದೀದು ಎತ್ಲಿ" ಅಂದು ಬಾಯ್ತುಂಬ ಶಪಿಸಿದಳು. ಸಧ್ಯಕ್ಕೆ ಒಲೆಗೆ ಇಡೋಕೆ ಸೌದೆ ಇಲ್ದೇ ಮನೆ ಮುಂದೆ ಬಂದ ಜನಗಳ ಕೈ ಕಾಲ್ಗಳನ್ನೇ ಮುರಿದು ತುರುಕುವ ಸಿಟ್ಟಿನಲ್ಲಿದ್ದಳು. ಅದಕ್ಕೂ ಎರಡು ದಿನದ ಮುಂಚೆ ಏನಾಗಿತ್ತಂದ್ರೆ, ರಾಚ ಊರ ದೇವ್ರು ಹಗರಿ ಆಂಜನೇಯ ದೇವಸ್ಥಾನವೆಂಬ ಹೆಸರೂ ಚಾಲ್ತಿಯಲ್ಲಿದ್ದ ಹನುಮಪ್ಪನ ಗುಡಿ ಮುಂದೆ ನಿಂತು ಅವನ ಹೆಂಡ್ತಿ, ಪೂಜಾರಪ್ಪನ ವಿಟ್ನೆಸ್ ನಲ್ಲಿ ಹನುಮಪ್ಪನ ಮ್ಯಾಲೆ ಆಣೆ ಮಾಡಿ "ಇನ್ನೆರಡು ವಾರದ್ ನಂತ್ರ ಈ ಹಳ್ಳಿ ಮನಿ ಕಡೀಗ್ ಬರಾದಿಲ್ಲ, ಬಂದ್ರೂ ಬಾಯ್ ಮಾಡಾದಿಲ್ಲ, ಓಣಿ ಜನಗುಳ್ ಹತ್ರ ಒದರ್ಯಾಡಿ ಒದೆ ತಿನ್ನಂಗಿಲ್ಲ, ಮಕ್ಳಿಗೆ ಓದಾಕ್ ಬುಕ್ಕು, ಬ್ಯಾಗು, ಫೀಸು, ಕೊಟ್ಟು ಚಲೋ ತ್ನಾಗಿ ಇಂಗ್ಲೀಸು ಸಾಲಿಗೆ ಕಳಿಸ್ತೀನಂತ" ದೊಡ್ಡದಾಗಿ ಹೇಳಿದ್ದ.
ರಾಚ ನಾಲ್ಕೆಕೆರೆ ಹೊಲದಲ್ಲೇ ತಾನಾಯಿತು, ದುಡಿಮೆಯಾಯಿತು. ಬೇರೆ ಅಡ್ನಾಡಿ ಕೆಲಸಗಳಲ್ಲಿ ಅವನದು ಮೈಲುದ್ದ ದೂರದ ಅಂತರ. ಅಂತಃಕರಣದ ವಿಷಯಕ್ಕೆ ಬಂದರೆ ಅವ್ನು ದಿನಾ ಬೆಳಿಗ್ಗೆ ಮನೆ ಮನೆಗೆ ಹಾಕೋ ನೀರು ಬೆರಸದ ಹಾಲಿನ ಮೇಲಾಣೆ, ಹಾಲಿನಂಥದೇ ಗುಣ. ಅವನ ಬಾಯಲ್ಲಿ ಬಾರೋ ಮಾತೆಲ್ಲ ಅಕ್ಷರಶಃ ತಪ್ತಾ ಇದ್ದಿಲ್ಲ. ಆಕಸ್ಮಿಕವಾಗಿ ಸೇರ್ಪಡೆಯಾದ ಹೊಸ ವಿಷ್ಯ ಅಂದ್ರೆ ಇಬ್ರೂ ಹೆಂಡ್ತಿಯರ ಗಡಿಬಿಡಿ ಗಂಡ, ಒಬ್ಬ ಪ್ರಾಮಾಣಿಕ ಮೇಷ್ಟ್ರು ಕುಡ್ತಾ ಕಲೀದೇ ಇದ್ರೂ ತನ್ನಿಂದ ಮೇಷ್ಟ್ರು ಕುಡ್ತಾ ಕಲ್ತು ಹಾಳಾದ್ರಂತ ಹಬ್ಬಿಸಿದ ಸುದ್ದಿಗೆ ನಾಲಗೆ ಮೇಲೆ ಮಚ್ಚೆಗೆ ಬೆಂಕಿ ಬಿದ್ದವನಂತಾಗಿದ್ದ. ಅವನು ನಿಯತ್ತಿನ ವಿರುದ್ಧವಾಗಿ ಆಪಾದನೆ ಮಾಡಿದರೆ, ಹಣಿದರೆ, ಹತಾಷೆಗೊಳಿಸಿದರೆ ಆ ಸಿಟ್ಟಿನಲ್ಲಿ ಹೇಳಿದ ಮಾತು, ಬೈಗಳ ಯಾವೂ ಹುಸಿಯಾಗು ತ್ತಿರಲಿಲ್ಲ. ಅದು ಕಾಕತಾಳೀಯವೂ ಆಗಿರಬಹುದು. ಆದರೆ, ಜನ ಮಾತ್ರ ರಾಚನನ್ನು ಯಾವುದೇ ಕಾರಣಕ್ಕೂ ರೇಗಿಸುತ್ತಿರಲಿಲ್ಲ. ಊರಲ್ಲಿ ವಾರ್ಷಾನುಗಟ್ಟಲೇ ಇದ್ದ ಜನ ರಾಚನ ಮಾತಿನ ನಂತರ ನಡೆದ ಕಾಕತಾಳೀಯ ಘಟನೆಗಳಿಗೆ ಸಾಕ್ಷಿಯಂತಿದ್ದರು. ಅವನು ಅಂದುಕೊಳ್ಳದಿದ್ದರೂ ಬಾಯಿಗೆ ಬಂದ ಯಾರದಾ ದರೂ ಮಾತು ಹೇಳಿದ್ದನ್ನು ಅರಗಿಸಿಕೊಳ್ಳದೇ ಕತ್ತಲಲ್ಲಿ ಮುಸುಕು ಹೊದ್ದು ಒದ್ದುಬಿಡುತ್ತಿದ್ದರು. ಆದರೆ, ಇದೇ ಜನ ತಮ್ಮ ಹೊಲದಲ್ಲಿ ನೀರು ಬೀಳುವ ಜಾಗ ತೋರಿಸಿದಾಗ, ಹೆಣ್ಣು ಮಕ್ಕಳ ಮದುವೆಗೆ ಗಂಡನ್ನು ಗೊತ್ತು ಮಾಡುವಾಗ, ಬೆಳೆ ಕೈಗೆ ಹತ್ತುವ ಬಗ್ಗೆ ಹೇಳಿದಾಗ, ಕುಟುಂಬಕ್ಕೆ, ಊರಿಗೆ, ಸಂತೋಷವಾಗುವ ವಿಚಾರ ಮುಂಚೆಯೇ, ರಾಚ ತಾನಾಗೇ ಹೇಳಿದ್ದ ಸಂಧರ್ಭದಲ್ಲಿ ಹಲ್ಲು ಕಿಸಿದು ಅವನಿಗೆ ಖುಷಿಯಲ್ಲಿ ನೂರಿನ್ನೂರು ಕೊಟ್ಟು ಬಡಾಯಿ ಕೊಚ್ಚಿಕೊಂಡವರೇ.
ಆ ಊರಲ್ಲಿದ್ದ ಒಂದೇ ಸರ್ಕಾರಿ ಶಾಲೆಯ ತೊಂಭತ್ತೈದು ಮಕ್ಕಳಿಗೆ ಒಬ್ನೇ ಮೇಷ್ಟ್ರು. ಆ ಮೇಷ್ಟ್ರಿಗೆ ಅದೇ ಊರಲ್ಲಿ ಒಂದು ಮನೆ, ಒಬ್ಳು ಹೆಂಡ್ತಿ, ಒಂದೇ ಗಂಡು ಕೂಸು. ಅದೂ ಆ ಊರಿಗೆ ಹೊಸದಾಗಿ ಮೇಷ್ಟ್ರು ಕೆಲ್ಸ ಸಿಕ್ಕ ನಂತರ ಅಲ್ಲೇ ಒಬ್ಬಂಟಿಯಾಗಿ ಇದ್ದದ್ದನ್ನು ನೋಡ್ಲಾರ್ದೆ ಊರವ್ರೇ ನೋಡಿ ಮಾಡಿದ ಮದುವೆ. ಹಳೇ ಶಾಲೆ, ಹೊಸ ಮೇಷ್ಟ್ರು, ಅದೇ ಮಕ್ಳು, ಹೊಸ ಪಾಠ, ಮನೆ ಪಾಠ ಹೇಳಿ ಚೆಂದಾಗೇ ಇರ್ತಿದ್ದ ಮೇಷ್ಟ್ರು ಶನಿ ವಾರ ಬಂತದ್ರೆ ಸಾಕು ಹೊಳೆ ಆಚೆ ಇದ್ದ ತನ್ನ ಸ್ವಂತ ಊರೆಂದು ಹೇಳಿಕೊಳ್ಳುತ್ತಿದ್ದ ಹಳ್ಳಿಗೆ ಹೊರಟುಬಿಡು ತ್ತಿದ್ದ. ಬರುತ್ತಿದ್ದುದು ತಿರುಗಾ ಸೋಮವಾರ ಬೆಳಿಗ್ಗೆನೇ. ಆ ಊರಲ್ಲೂ ಕೂಡ ಪಾಪ, ಆ ಬಡ ಮೇಷ್ಟ್ರಿಗೆ ಅಪ್ಪ ಅಮ್ಮನಿಲ್ಲದ ತನ್ನ ಸ್ವಂತ ಮನೆಯಲ್ಲಿದ್ದದ್ದು ಅವರಪ್ಪ, ಅಮ್ಮನ ಕೊನೆ ಆಸೆಗೆ ಬೆಲೆ ಕೊಟ್ಟು ಇದ್ದ ವಿಷ್ಯ ಹೇಳೀನೇ, ಒಪ್ಪಿಸಿಯೇ ಕಟ್ಟಿಕೊಂಡ ಒಬ್ಳೇ ಹೆಂಡ್ತಿ, ಒಂದೇ ಹೆಣ್ ಮಗಾ, ಅಷ್ಟೇ.
ಇಬ್ರು ಹೆಂಡ್ರ ಗಡಿಬಿಡಿ ಮೇಷ್ಟ್ರು ತಂಟೆ- ತಗಾದೆ, ರಂಪಾಟ ಎಲ್ಲಾನೂ ಹೋಟ್ಯಾಗ ಇಟ್ಕೊಂಡೇ ಪಾಪ, ಶಾಲೇಲಿ ಚೆಂದಗೆ ಪಾಠ ಮಾಡ್ತಿದ್ದ. ದುರಾದೃಷ್ಟವಶಾತ್ ಆ ಮೇಷ್ಟ್ರು ಮನೆ ಈ ರಾಚ ಇದ್ದ ಓಣಿಯಲ್ಲೇ ಇತ್ತು. ದಿನಾ ಮನೆ ಮನೆಗೆ ಹಾಲು ಹಾಕೋದರ ಜೊತೆ ಕ್ಷೇಮ, ಕೆಲ್ಸ-ಬೊಗ್ಸೆ, ಮಾತಾಡ್ಕೊಂಡು ಬರೋನು. ಈ ಮಧ್ಯೆ ಗಡಿಬಿಡಿ ಸ್ವಲ್ಪ ಜಾಸ್ತೀನೇ ಮಾಡ್ಕೊಂಡಿದ್ದ ಮೇಷ್ಟ್ರನ್ನು ಇಬ್ರೂ ಹೆಂಡ್ತೀರು ಫ್ಯಾಮಿಲಿ ಅಫ್ಫೇರ್ಸ್ ನಿಂದಾನೇ ಅಮಾನತ್ತು ಮಾಡಿದ್ದರು. ಇದ್ದೂರಿನ ಹೆಂಡತಿ ತನ್ನ ತವರು ಸೇರಿದರೆ, ಮೇಷ್ಟ್ರು ಸ್ವಂತ ಊರಲ್ಲಿದ್ದ ಹೆಂಡತಿ ಈ ಊರು ಮನೆ ಮುಂದೆ ಸತ್ಯಾಗ್ರಹಕ್ಕೆ ಕುಂತಿದ್ದಳು. ಈಗ ಫಜೀತಿ ಬಂದದ್ದು ಪಂಚಾಯ್ತಿಗೆ. ಹಂಗೂ ಹಿಂಗೂ ಊರ ಪಂಚರ ರಾಜಿ ನಂತರ ಇಬ್ರೂ ಹೆಂಡ್ರನ್ನೂ ಅಚ್ಚಕಟ್ಟಾಗಿ ನೆಮ್ಮದಿ ಯಾಗಿ ಇಡುವ ಕರಾರನ್ನು ಮೇಷ್ಟ್ರು ಒಪ್ಪಿದ ಮೇಲೆ ಎರಡನೇ ಹೆಂಡ್ತಿ ಮೇಷ್ಟ್ರು ಸ್ವಂತ ಊರಿಗೆ ಮಗಳು ಸಮೇತ ಹೊರಟಳು. ಮೊದಲನೆಯವಳು ತವರಿಂದ ಇನ್ನು ಬರಬೇಕಿತ್ತು.
ಅವತ್ತು ರಾತ್ರಿ ಎಂದೂ ಕುಡಿಯದ ಮೇಷ್ಟ್ರು ಎರಡು ಕಿಲೋಮೀಟರ್ ದೂರದ ಊರ ಹೊರಗಿನ ಧಾಭಾ ಹೊಕ್ಕಿದ್ದ. ಆದರೆ ಕುಡಿಯೋಕೆ ತಾನು ಮಾಡಿದ ಪಾಠ ಅಡ್ಡ ಬಂದಂತೆ ಬೆಚ್ಚಿ ಹೊರಬಿದ್ದ. ಅಷ್ಟರಲ್ಲಿ ರಾಚ ಹೊಲದಿಂದ ಸೈಕಲ್ ಮೇಲೆ ಬರ್ತಾ ಇದ್ದದ್ದು ಕಾಣಿಸಿತು. ಕಣ್ಣು ತಪ್ಪಿಸಿಕೊಳ್ಳಲೂ ಆಗದಂತೆ ರಾಚನ ಕೈಗೆ ಮೇಷ್ಟ್ರು ಸಿಕ್ಕರು. ರಾಚನೇ ಮೇಷ್ಟ್ರನ್ನು ಸಮಾಧಾನ ಮಾಡುತ್ತಾ ಮನೆತನಕ ಬಿಟ್ಟು ಬಂದಿದ್ದ. ಹೊತ್ತು ಮುಳುಗಿದ ದಾರಿಯಲ್ಲಿ ಕಂಡ ಊರ ಜನ ಧಾಭಾ ಕಡೆ ರಸ್ತೆಯಿಂದ ಬಂದ ಮೇಷ್ಟ್ರನ್ನೂ ಮತ್ತು ರಾಚನನ್ನು ನೋಡಿ, "ರಾಚ, ಚೆನ್ನಾಗಿದ್ದ ಮೇಷ್ಟ್ರನ್ನೂ ಶರಾಬು ಖಾನೆಗೆ ಸೇರ್ಸಿಬಿಟ್ನಲ್ಲ" ಅಂದು ಪುಕಾರು ಮಾಡಿದರು. ನಿಜವೆಂದರೆ, ಆ ದಿನ ರಾಚನಾಗಲೀ ಮೇಷ್ಟ್ರಾಗಲೀ ಕುಡಿದೇ ಇರಲಿಲ್ಲ.
ಮಾರನೇ ದಿನ ಹಾಲು ಕೊಡ್ತಾ ಬರುವಾಗಲೇ ಊರ ಜನ ಕಿಚಾಯ್ಸೋ ತರ ನೋಡೋದನ್ನು ರಾಚ ಅರ್ಥ ಮಾಡ್ಕೊಂಡಿದ್ದ. ಆ ದಿನ ಸಂಜೆ ಹೊಲದಿಂದ ಓಣಿಯಲ್ಲಿ ಬರುತ್ತಲೇ ಜನ ಕಲ್ಪಿಸಿಕೊಂಡು ಮಾತಾಡಿಕೊಂಡಿ ದ್ದನ್ನು ಎದೀಗೆ ಒದ್ದಂಗೆ ಹೇಳ್ತಾ ಸುಳ್ಳು ಆಡಿದ ನಾಲಗೆಗಳನ್ನು ಒಂದೇ ತಕ್ಕಡಿಯಲ್ಲಿ ತೂಗು ಹಾಕಿ "ಆ ಸಾಯಿಬಾಬಾನೇ ಬಂದು ಹೇಳಿದ್ರೂ ನಾನ್ ಮಾತ್ರ ಕ್ಷಮ್ಸಕಿಲ್ಲ" ಅಂದು ಒಂದು ರವಂಡು ಬೈಗಳಲ್ಲಿ ಕೂಡಿ ಹಾಕಿಬಿಟ್ಟ.
ಎರಡು ದಿನ ಒಂದೂ ಮಾತನಾಡದೇ ಊರ ಓಣಿಗಳಲ್ಲಿ ಹಾಲು ಹಾಕಿ ಬಂದಿದ್ದ. ಅಪ್ಪಿತಪ್ಪಿ ಮೇಷ್ಟ್ರು ಮನೆಗೆ ಹೋಗಿದ್ದಿಲ್ಲ. ಯಾಕೇಂತ ಮನೇಲೂ, ಊರವರಲ್ಲೂ ಹೇಳಲಿಲ್ಲ. ಮೇಷ್ಟ್ರೇ ತನ್ನ ಮನೆಗೆ ಬಂದು ಹಾಲು ತೆಗೆದುಕೊಂಡು ಹೋಗಿದ್ದರು. ಆಗಲೂ ರಾಚ ಮೇಷ್ಟ್ರಿಗೆ ಕಾರಣ ಹೇಳಿದ್ದಿಲ್ಲ. ಆ ದಿನ ಸಂಜೆ ರಾಚ ತನ್ನ ಮಗನ ಕೈಲಿ ಮೇಷ್ಟ್ರಿಗೆ "ಇವೊತ್ ರಾತ್ರೀನೇ ಅವ್ರ ಎಲ್ಡು ಹೆಂಡ್ರುನ್ನು ಕಣ್ತುಂಬ ನೋಡ್ಕಂಡು ಮಾತಡ್ಸಕೆ ಹೋಗಿ ಬರುವಂತೆ" ಹೇಳಿ ಕಳಿಸಿದ್ದ. ಮೇಷ್ಟ್ರಿಗೆ ತಳಬುಡ ಗೊತ್ತಾಗ್ಲಿಲ್ಲ. ಮೇಷ್ಟ್ರು ಮಾರನೇ ದಿನ ಬೆಳಿಗ್ಗೆ ಹೋದ ರಾಯ್ತು ಅಂದುಕೊಂಡನಷ್ಟೇ. ಬೆಳಗಿನ ನಸುಕಿನಲ್ಲಿ ಇಬ್ಬರೂ ಬೈಕ್ ನಿಲ್ಲಿಸಿದ ಸದ್ದು. ನಸುಗತ್ತ ಲಲ್ಲೇ ಬಾಗಿಲು ತೆಗೆದ ಮೇಷ್ಟ್ರಿಗೆ ಆಘಾತದ ಸುದ್ದಿ ಎದುರಾಗಿತ್ತು. ಹೆಂಡತಿಯರ ಕಡೆಯ ಜನರಿಬ್ಬರು ಬಂದು ನಿಂತಿದ್ದರು. ಇಬ್ಬರೂ ಹೆಂಡತಿಯರು ಮಕ್ಕಳನ್ನು ಜೋಪಾನವಾಗಿರಿಸಿ ಒಬ್ಬಳು ಬಾವಿಗೆ ಹಾರಿದ್ದಳು, ಇನ್ನೊ ಬ್ಬಳು ಕೊರಳು ಬಿಗಿದುಕೊಂಡು ಸತ್ತಿದ್ದಳು. ಮೇಷ್ಟ್ರಿಗೆ ಆ ಹೊತ್ತಿಗೆ ರಾಚ ಬಹಳ ಕಾಡಿದ. ಇತ್ತ ರಾಚ ಮಾತ್ರ ಅವನ ಮನೆಯಲ್ಲಿ "ಇನ್ನೊಂದ್ ವಾರದ್ ನಂತ್ರ ಮಕ್ಳಿಗೆ ಪಾಠ ಮಾಡೋಕೆ ಶಾಲೇಲಿ ಹೊಸ ಮೇಷ್ಟ್ರುಬರೋ ದಾರಿ ಕಾಯೋದೇ ಕೆಲ್ಸವಾಗುತ್ತೆ" ಅಂದುಬಿಟ್ಟ. ರಾಚನ ಹೆಂಡತಿ ಉಸಿರು ಕಟ್ಟಿದಂತೆ ನಿಂತೇ ಇದ್ದಳು.
ಬೀಗರು, ಸಂಭಂಧಿಕರು ಅಕ್ಕಪಕ್ಕದೂರುಗಳಲ್ಲಿದ್ದರೂ ಇಬ್ರೂ ಹೆಂಡ್ರು ಶವ ಸಂಸ್ಕಾರವನ್ನು ಒಂದೇ ಊರಿ ನಲ್ಲಿ ಮುಗಿಸಿ ಅತ್ತೆಯರೊಂದಿಗೆ ಮಕ್ಕಳನ್ನು ಬಿಟ್ಟು ಬಂದ ಮೇಷ್ಟ್ರು ದಿನದಿಂದ ದಿನಕ್ಕೆ ಮಂಕಾಗಿದ್ದರು. ಆದರೆ, ಶಾಲೆಗೇ ಬಂದಿರಲಿಲ್ಲ. ಓಣಿಯಲ್ಲಿ ಹೆಚ್ಚು ಓಡಾಡುತ್ತಿರಲಿಲ್ಲ. ಅದೊಂದು ಸಂಜೆ ದುಃಖ ತಾಳಲಾರದೇ ಊರಿಂದ ಎರಡು ಕಿಲೋಮೀಟರ್ ದೂರದ ಧಾಭಾ ಕಡೆ ಕಾಲೆಳೆದುಕೊಂಡು ಮತ್ತೆ ಹೊಕ್ಕರು. ಅದೆಷ್ಟು ಕುಡಿ ದಿದ್ದರೋ ಏನೋ ಮರುದಿನ ಬೆಳಿಗ್ಗೆ ಹೊಲಕ್ಕೆ ಹೊರಡುವ ಓಣಿ ಮಂದಿ ಕಂಡಂತೆ ಊರ ಹೊರಗಿನ ಗಾಳೆ ಮ್ಮನ ಗುಡಿ ಪ್ರಾಂಗಣದಲ್ಲಿ ಮೇಷ್ಟ್ರು ಶವವಾಗಿದ್ದರು. ರಾಚ ಊರಲ್ಲಿ ಹಾಲು ಹಾಕಿ ಬರುವ ಹೊತ್ತಿಗೆ ಮೇಷ್ಟ್ರು ಹೋದ ಸುದ್ದಿ ಮುಟ್ಟಿದ್ದೇ ತಡ, ಅವನ ನಾಲಗೆಯಲ್ಲಿ ಶರಾಬು ಮಾರುವ ದುಖಾನಿನವರು ಈ ಬಾರಿ ಹರಿತಕ್ಕೆ ಸಿಕ್ಕು ಗಾಯವಾಗಲು ಮೊದಲಾದರು. ಅದೆಂಗೋ ರಾಚನ ಬೈಗಳು ಶರಾಬು ಮಾರುವವರ ಕಿವಿಗೆ ಬಿದ್ದವು. ಶರಾಬು ದುಖಾನಿನ ಮಾಲೀಕ ರಾತ್ರೋ ರಾತ್ರಿ ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ಶಿರಿಡಿಗೆ ಪ್ರಯಾಣ ಬೆಳೆಸಿದನೆಂದೂ ಮತ್ತು ಶರಾಬು ದುಖಾನು ಬಂದ್ ಮಾಡಲಾಗಿದೆ ಎಂದೂ ಊರವರು ಮಾತಾಡಿ ಕೊಂಡರು.
ಆಗಲೇ ಜನ ರಾಚನ ಮನೆ ಮುಂದೆ ಬಂದು ಬಂದು ವಿಚಾರಿಸಿದ್ದು, ಮತ್ತವನ ಹೆಂಡತಿ ಗೊಣಗಿದ್ದು. "ಊರ ಜನ್ರಿಗೆ ಬಾಯಿಗ್ ಬಂದದ್ದು ಹೇಳಿ ಬರೋಕಾಗುತ್ತೆ. ಮನೆ, ಹೆಂಡ್ತಿ, ಮಕ್ಳು ಕಡೆ ಒಂಚೂರು ಲಕ್ಷ್ಯ ಕೊಡಾದಿಲ್ಲ ಗಂಡ" ಅನ್ನೋದು ರಾಚನ ಹೆಂಡ್ತಿ ತಕರಾರು. ದಿನಗಳೂ ಕಳೆದವು. ಮೂರು ಸಂಜೆ ಹೊತ್ತಲ್ಲಿ ಹೊಲದಿಂದ ಬರುತ್ತಿದ್ದ ಪ್ರತಿದಿನ ಒಂದಿಷ್ಟು ಎಕರೆಗಳಷ್ಟು ತಿರುಗುತ್ತಾ ರಾಚ ವಾರೊಪ್ಪೊತ್ತಿನಲ್ಲಿ ಊರವರ ಹೊಲಗಳಲ್ಲಿ ಅಲೆದಾಡಿ ಬಂದ. ಮಣ್ಣನ್ನು ಬೊಗಸೆ ತುಂಬಾ ಹಿಡಿದ, ಹಣೆಗೆ ಒತ್ತಿಕೊಂಡ. ಊರ ಮಂದಿ ರಾಚನನ್ನು "ಅಯ್ಯೋ"ಎನ್ನುವಂತೆ ನೋಡಿದರು. ರಾಚ ತುಟಿ ಎರಡು ಮಾಡಲಿಲ್ಲ. ಹುಣ್ಣಿಮೆ ದಿನದಂದು ಊರಿನ ಮಕ್ಕಳು "ಬೆಳದಿಂಗಳೂಟದ ಕಾರ್ಯಕ್ರಮ"ಕ್ಕೆ ಶಾಲೆಯ ಅಂಗಳದಲ್ಲಿ ಸೇರಿದ್ದರು. ರಾಚ ಹೆಂಡತಿಯನ್ನು ಕರೆದು "ಇನ್ನೆರಡು ವಾರಗಳಲ್ಲಿ ಮಕ್ಕಳು ಪೇಟೆಯ ಶಾಲೆಗೇ ಹೋಗುತ್ತಾರೆ. ನಮ್ಮದಿನ್ನು ಅಲ್ಲಿಯೇ ವಾಸ. ಆಮೇಲೆ ಈ ಭೂಮಿಯ ಋಣದಿಂದ ನಾವು ಮುಕ್ತರಾಗುತ್ತೇವೆ." ಅಂದುಬಿಟ್ಟ. ಜೊತೆಗೆ ಊರ ಜನರು ದುಡ್ಡಿನಾಸೆಗೆ ಮನೆಯ ಯಜಮಾನಿಕೆಗೆ ಹಳಹಳಿಸಿ ವಯಸ್ಸಾದವರನ್ನು ಬಾಯಿ ಮುಚ್ಚಿಸುತ್ತಾರೆಂದು ಹೇಳಿದ್ದು ತಡವಾಗದೇ ಹಳ್ಳಿ ತುಂಬಾ ಹಬ್ಬಿತ್ತು.
ಮಳೆ ಬಿದ್ದು ಹದವಾದ ಭೂಮಿ ಬಿತ್ತಲು ರೈತರು ಉತ್ಸುಕರಾಗಿದ್ದ ದಿನಗಳಲ್ಲೇ ರಾಚನ ಬಡಬಡಿಕೆ ಕೇಳಿಸಿ ಕೊಂಡ ಜನ ನೀಡಿದ ದೂರಿನ ಮೇಲೆ ಊರ ಪಂಚರು ಹನುಮಪ್ಪ ದೇವರ ಕಟ್ಟೆಗೆ ರಾಚನನ್ನು ಕರೆದು ನಿಲ್ಲಿಸಿದರು. ಊರ ಜನ ಒತ್ತಟ್ಟಿಗೆ. ಇವನೊಬ್ಬನೇ ಇಕ್ಕಟ್ಟಿಗೆ. ಅಲ್ಲೂ ರಾಚ ಒಗಟಾಗಿಯೇ ಹೇಳಿದ. "ನೋಡಿ ಪಂಚರೇ, ನಾನು, ನನ್ನ ಹೆಂಡ್ತಿ ಮಕ್ಳು ಕರ್ಕೊಂಡು ಪಕ್ಕದ ಸಣ್ಣ ಪ್ಯಾಟಿಗೆ ವಲಸೆ ಹೋಗ್ತೀನಿ, ಹೋಗ್ತಾ, ನನ್ನ ಹೊಲ ಮನಿ ಮಾರ್ತೇನಿ, ಹೈನು ಒಂದೇ ನನ್ನ ಉಪ ಕಸುಬು, ಹಂಗಾಗಿ ದನಕರುಗಳನ್ನು ಕೊಡಾದಿಲ್ಲ." ಅಂದ. "ನೀನೆಂಗರ ಹಾಳಾಗ್ ಹೋಗ್ ರಾಚ, ಊರವರ ಬಗ್ಗೆ ಅದೇನ್ ನಿನ್ ಅದ್ವಾನದ ಮಾತು" ಪಂಚರಲ್ಲೊಬ್ಬ ಕೇಳಿದ. "ಹಗಲೋತ್ತಿನ್ಯಾಗೆ ಮಳೆ, ಬಿಸ್ಲು ಇಲ್ದೇನೇ ಛತ್ರಿಗಳು ತಲೆಯೆತ್ತುತ್ತವೆ. ಅದರ್ ಬುಡುಕಾ ನಮ್ಮವೇ ಹಳ್ಳಿ ಚಿಗುರು ಮೀಸೆ ಹುಡುಗ್ರು ತಮ್ ತಮ್ ಹೊಲಗಳನ್ನು ಬೇಕಾಬಿಟ್ಟಿ ಮಾರೋಕ್ ತಿರುಗ್ತಾವೆ" ರಾಚ ಹೇಳುತ್ತಿದ್ದರೆ ಕೇಳುವ ಸ್ಥಿತಿಯಲ್ಲಿ ಯಾರೂ ಇದ್ದಿಲ್ಲ. "ಮತ್ತದೇ ಬಡಬಡಿಕೆ ಯದೇ ಕಾಯಕ ಶುರು ಮಾಡ್ದಾ ರಾಚ" ಅಂತಲೇ ಜನ ಜಾಗ ಖಾಲಿ ಮಾಡಿದ್ದರು. ಪಂಚರಿಗಿನ್ನೇನು ಕೆಲಸ? ಅವರೂ ಪಂಚೆ ಕೊಡವಿ ಮೇಲೆದ್ದರು. ದೇಗುಲದ ಹನುಮಪ್ಪನ ಮುಂದಿನ ಪ್ರಣತಿಯಲ್ಲಿ ಸಣ್ಣಗೆ ದೀಪ ಉರಿಯುತ್ತಿತ್ತು.
ವಾರದ ನಂತರ ರಾಚ ತನ್ನ ನಾಲ್ಕೆಕೆರೆ ಹೊಲವನ್ನು ತನ್ನ ಅನುಕೂಲದ ರೇಟಿಗೆ ಕೊಟ್ಟ. ಮಕ್ಕಳನ್ನು ಪೇಟೆ ಶಾಲೆಗೆ ಸೇರಿಸಿದ. ಮನೆ ಸಾಮಾನುಗಳನ್ನು ದೊಡ್ಡದೊಂದು ಲಾರಿಯಲ್ಲಿ ದನ-ಕರುಗಳ ಸಮೇತ ಮನೆ ಸಾಮಾನುಗಳನ್ನು ಹೇರಿದ. ಪಂಚರಿಗೆ ಒಂದು ಮಾತು ಹೇಳಿ, ಊರ ಹನುಮಪ್ಪ ದೇಗುಲದ ಮುಂದೆ ನಿಂತು "ನೀನೇ ಕಣ್ಣಾರೆ ನೋಡಪ್ಪಾ" ಅಂದ. ದೂರ ನಿಂತ ಜನರದ್ದು ಮತ್ತದೇ ಗೇಲಿ ನಗೆ. ಪಂಚರು, ಊರ ಜನ, ದಿನ ಕಳೆದಂತೆ ರಾಚನನ್ನು ಮರೆತರು. ಆ ಹಳ್ಳಿಗೆ ಸರಿಯಾಗಿ ಡಾಂಬರ್ ರಸ್ತೆ, ಆಸ್ಪತ್ರೆ, ನೀರಿನ ಟ್ಯಾಂಕು, ಡಾಕ್ಟ್ರು, ಚರಂಡಿ ಯಾವುದರ ಬಗ್ಗೆಯೂ ಚುನಾವಣೆ ಬಿಟ್ರೆ ಇನ್ಯಾವಾಗಲೂ ಮಾತಾಡದ, ಬರದ ಜನರು, ಗಾಡಿಗಳು, ಶ್ರೀಮಂತರು ಒಬ್ಬೊಬ್ಬರಾಗಿ ಒಮ್ಮೊಮ್ಮೆ ಹಿಂಡಾಗಿ ಹಳ್ಳಿಯತ್ತ ತಿರುಗಲಾರಂಭಿಸಿದರು.
ಹೊಲಗಳ ಒಡೆಯರನ್ನು ಒಟ್ಟುಗೂಡಿಸಿ ಸಭೆ ಮಾಡಿದರು. ತಮ್ಮ ಹೊಲಗಳಲ್ಲಿ ಅಂತರ್ಜಲ ಇದ್ದು ಬರುವ ಬೆಳೆ ಲಾಭ, ಮಳೇ ನಂಬಿಯೇ ಬಿತ್ತಿದರೆ ಸಿಗುವ ಲಾಭದ ಕುರಿತು ಅನುಕಂಪದ ಮಾತುಗಳನ್ನು ಹೇಳಿ ಸಂತೈ ಸಿದರು. ರೈತರಿಗೆ ಸಿಗದ ಸಾಲ, ತೀರಿಸಲಾಗದೇ ಉಳಿದ ಬಡ್ಡಿ, ಆತ್ಮಹತ್ಯೆಗಳಂಥ ಅನಾಹುತಗಳು, ರೈತರ ಮಕ್ಕಳಿಗೆ ಸಿಗದ ಅಥವಾ ಉಪಯೋಗಿಸಿಕೊಳ್ಳಲಾರದ ಶೈಕ್ಷಣಿಕಾ ಸೌಲಭ್ಯಗಳು, ಆದಕ್ಕೆ ಬೇಕಾದ ಆರ್ಥಿಕ ಸವಲತ್ತುಗಳು ಎಲ್ಲದರ ಬಗ್ಗೆ ತೀಡಿ ತೀಡಿ ಹೇಳಿದರು. ಈಗಿನ ರೈತರ ಹೊಲಗಳಿಗೆ ಇದ್ದಿರಬಹುದಾದ ಬೆಲೆಗಳ ಅಂದಾಜನ್ನು ರೈತರ ವಯಸ್ಸಿಗೆ ಬಂದ ಮಕ್ಕಳ ಎದೆಗೆ ನಾಟುವಂತೆ ಹೇಳಿದರು ನೋಡಿ? ಅಲ್ಲಿಗೆ "ದೊಡ್ದವರಾಟ" ಚೆನ್ನಾಗೇ ವರ್ಕ್ ಔಟ್ ಆಯಿತು.
ಮನೆಗೆ ಬಂದ ರೈತರಿಗೆ ಅವರ ಮಕ್ಕಳು ಪುಡಿಗಾಸಿಗೆ ಹೊಲ ಮಾರಿಕೊಂಡ ರಾಚನ ಉದಾಹರಣೆ ಕೊಟ್ಟು ಈಗ ತಮ್ಮ ತಮ್ಮ ಹೊಲಗಳಿಗೆ ಸಿಗಲಿರುವ ರೇಟಿಗೆ ಹೆಂಗೆ ಜೀವನವನ್ನು ನಡೆಸಬಹುದು ಎನ್ನುವುದನ್ನು ಹೇಳುತ್ತಿದ್ದರೇ ಹೊರತು, ಹೊಲಗಳಲ್ಲೇ ತಮ್ಮ ಉಸಿರನ್ನು ನೆಟ್ಟ ಜೀವಗಳ ಮಾತುಗಳನ್ನು ಕಿವಿಗೇ ಹಾಕಿಕೊಳ್ಳ ಲಿಲ್ಲ. ಒಬ್ಬರಿಂದ ಒಬ್ಬರಿಗೆ ಸಾಂಕ್ರಾಮಿಕವಾಗಿ ಹರಡಿದ ಹೊಲದ ರೇಟಿನ ರೋಗ ಊರ ರೈತರ ವಯಸ್ಸಿಗೆ ಬಂದ ಮಕ್ಕಳ ಆಪೋಶನ ತೆಗೆದುಕೊಳ್ಳುತ್ತಿದ್ದರೂ ಪಂಚರೆನಿಸಿಕೊಂಡವರು ಹನುಮಪ್ಪನ ನೆತ್ತಿಗೆ ಕಷ್ಟದ ಬುತ್ತಿ ಹೊರಿಸಿದರು. ನೋಡನೋಡುತ್ತಿದ್ದಂತೆಯೇ ಹಲವು ರೈತರ ನೂರಾರು ಎಕರೆ ಹೊಲಗಳಲ್ಲಿ ಪಾಲಾದವು. ಕುಟುಂಬಗಳು ಬೇರೆಯಾದವು. ಖರೀದಿಗೆ ಕರಾರು ಪತ್ರಗಳು ತಯಾರಾದವು. ಮುಂಗಡ ಪಾವತಿಯಾದವು. ವರ್ಷಾನುಗಟ್ಟಲೇ ಹೊಲದಲ್ಲಿ ಬಿತ್ತಲಿಲ್ಲ, ಬೆಳೆಯಲಿಲ್ಲ, ಕಡೆಗೆ ಹೆಜ್ಜೆಯನ್ನೂ ಇಡದಂಥ ಪರಿಸ್ಥಿತಿ ಎದುರಿಸಿದ ರೈತರು ಕಂಗಾಲಾದರು. ಇದೇ ಕೊರಗಲ್ಲಿ ಕೆಲವರು ಸತ್ತರು, ಇನ್ನು ಹಲವರು ಕೈಗೆ ಖರೀದಿ ದುಡ್ಡು ಸೇರದೇ ಹನುಮಪ್ಪನ ದೇಗುಲದ ಕಟ್ಟೆಗೆ ಕುಳಿತು ರಾಚ ಹೇಳಿದ್ದನ್ನೇ ಮೆಲುಕು ಹಾಕಿ ಮುಲುಕಾಡಿದರು.
"ಹಣ್ಣು ಬಿಟ್ಟಿರೋ ಮರಕ್ಕೆ ಮಾತ್ರ ಗೊತ್ತು ತಗ್ಗಿ ಬಗ್ಗಿ ನಿಲ್ಲೋದು, ಹಣ್ಣು ಬಿಡದೇ ನೆಟ್ಟಗೆ ನಿಂತ ಮರಕ್ಕೆ ಅಹಂ ಕಾರ ಜಾಸ್ತಿ ಇರುತ್ತೆ ಮಗಾ" ಊರ ಹನುಮಪ್ಪನ ದೇಗುಲದ ಕಟ್ಟೆಗೆ ಕುಂತ ಸನ್ಯಾಸಿಯೊಬ್ಬ ತನ್ನಷ್ಟಕ್ಕೆ ತಾನೇ ಗೊಣಗುತ್ತಿದ್ದ. ಅಲ್ಲಿಯೇ ಕುಳಿತಿದ್ದ ಊರ ಪಂಚರಲ್ಲೊಬ್ಬ ಕೇಳಿಸಿಕೊಂಡರೂ ಒಮ್ಮೆ ಹನುಮಪ್ಪನ ಮುಂದೆ ಸಣ್ಣಗೆ ಉರಿಯುತ್ತಿದ್ದ ದೀಪವನ್ನು, ಮತ್ತೊಮ್ಮೆ ಗಡ್ಡದ ಸನ್ಯಾಸಿಯನ್ನೂ ನೋಡಿ ನಿಟ್ಟುಸಿರಿಟ್ಟ.
ಸರ್ಕಾರದಿಂದ ಭೂಮಿಯನ್ನು ವಶಕ್ಕೆ ಪಡೆಯುವವರೆಂದು ಬಂದವರು. ಗಂಟುಗಳ್ಳ ಶ್ರೀಮಂತರು ಯಾರ್ಯಾ ರಿಗೆ ಎಷ್ಟೆಷ್ಟು ಶಕ್ಯವೋ ಅಷ್ಟನ್ನೂ ದಕ್ಕಿಸಿಕೊಂಡರು. ಸರ್ಕಾರಿ ಕಾರ್ಖಾನೆಗಳ ಸ್ಥಾಪನೆ, ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಕೆಲಸ ಕೊಡಿಸುವ ಆಮಿಷವೊಡ್ಡುವ ತಂಡಗಳು, ಅವುಗಳಲ್ಲಿ ಕೆಲಸ ಮಾಡುವ ನೌಕರರಿಗೆ ವಾಸಿಸಲು ಕಟ್ಟಡಗಳ ನಿರ್ಮಾಣ, ಅದಕ್ಕೆ ಸಿಕ್ಕುವ ಕಂಟ್ರಾಕ್ಟ್ ಕೆಲಸಗಳು, ದುಡ್ಡು, ಬಗೆ ಬಗೆ ಕನಸುಗಳನ್ನು ಭೂಮಿ ಕೊಟ್ಟ ರೈತರು, ಅವರ ಕುಟುಂಬಗಳ ಹುಂಬ ಮಕ್ಕಳಿಗೆ ಹಂಚಿದ್ದೇ ಹಂಚಿದ್ದು.
ಇಂಥ ಘಟನೆಗಳು ನಡೆದು ಹಲವು ವರ್ಷಗಳು ಕಳೆದರೂ ಟೀವಿ ಚಾನಲ್ ನವರು ಒಬ್ರಾದ್ರೂ ಬಂದು ಈ "ಮುರಿದ/ ಮುರಿಯುವ ಸುದ್ದಿ ಹಿಡಿಯಲು ಈಗಿನಂತೆ ಆಗ ಅವಕಾಶವಿಲ್ಲದ್ದು ಸೋಜಿಗದ ವಿಷ್ಯ". ಹಂಗಂತಾ ಒಂದು ಜನರೇಶನ್ ಗ್ಯಾಪ್ ಇದ್ದಂಥ ಜನ ಗೊಣಗುತ್ತಿದ್ದರು. ಇಷ್ಟೆಲ್ಲಾ ಸಂಗತಿಗಳನ್ನು ಹೇಳಿದ್ದ ರಾಚ ಅದ್ಯಾವ ಪೇಟೆಯ ಮೂಲೆಗೆ ಸೇರಿದ್ದನೋ? ಎಲ್ಲಿದ್ದಾನೋ, ಏನೋ?. ಸುದ್ದಿಗೇ ಸಿಗದಾಗಿದ್ದ…
*****
ಶ್ರೀಮಂತರ ಅಟ್ಟಹಾಸ
ಬಡವರ ಬೇಗುದಿಯನ್ನು
ಚೆನ್ನಾಗಿ ವರ್ಣಿಸಿದ್ದೀರಿ.
ಕಥೆಓದಲು ಪ್ರಾರಂಭಿಸಿದ್ದಷ್ಟೆ ಮುಂದೆ ಅದೆ ಕರೆದುಕೊಂಡು ಹೋಯಿತು. ಗ್ರಾಮೀಣ ಬದುಕನ್ನು ಚಂದ ಕಟ್ಟಿಕೊಟ್ಟಿದ್ದಿರಿ ಸರ್.
ತುಂಬಾ ಧನ್ಯವಾದಗಳು ಸರ್.
super
ಅಮರ್, ಚಂದದ ನಿರೂಪಣೆ!
Is it based on some real incidents or a fiction Amar? I have heard that there are some prophetic persons who can predict or foretell future. If its true (in all probability, it must be!), then thanks for introducing one such person'Raacha'!