ನಿಮ್ ಹೆಸರೇನ್ ಸರ? ಯಾವ್ ಊರು? ಈ ಊರಿಗೆ ಬಂದ್ ಎಷ್ಟ್ ವರ್ಸಾತು? … ಮದ್ವೆ ಆಗೇದೋ? ಎಷ್ಟು ಮಕ್ಳು ? ಹೀಗೆ ಒಬ್ಬ ಮುದುಕ ಎನ್ಕ್ವೈರಿ ಮಾಡುತ್ತಿದ್ದ. ಯಜ್ಮಾನ, ನಾನ್ ಪರೀಕ್ಷೆಗೆ ಕುಂತಿಲ್ಲೋ ಯಪ್ಪಾ, ಒಂದೊಂದ್ ಪ್ರಶ್ನೆ ಕೇಳು ಅಂದೆ.
"ಆತು ಹೇಳಪಾ" ಅಂದ.
ಆ ವಯಸ್ಸಾದ ಮುದುಕ ಬರೀ ಒಂದು ಪಂಜೆ, ಮೇಲೊಂದು ಬನೀನು ಹೆಗಲ ಮೇಲೊಂದು ಟವೆಲ್ ಹಾಕಿ ಕೊಂಡು ಬಸವಣ್ಣ ಸರ್ಕಲ್ ಬಳಿಯ ಸೈಕಲ್ ಶಾಪ್ ಕಟ್ಟೆಗೆ ಕೂತು ವಿಚಾರಿಸುತ್ತಿದ್ದ. ನೋಡುತ್ತಿದ್ದಂತೆಯೇ ಆ ಮುದುಕ ಬ್ರಾಂಬ್ರು ಮನುಷ್ಯ ಎಂದು ಗುರುತಿಸುವುದು ಕಷ್ಟವೇನಾಗಲಿಲ್ಲ. ನಮ್ಮ ಕಡೆ ಮೊದ ಮೊದಲೇ ಸಂಪರ್ಕ, ಮಾತು, ನಡೆ ಇಷ್ಟವಾಯ್ತು ಅಂದ್ರೆ ಸಾಕು ಮಾಮ, ಕಾಕಾ, ಅತ್ತೆ, ಅಕ್ಕ ಹೀಗೆ ಸಂಭಂಧಗಳನ್ನು ಸಂಭಂಧಿಗಳಲ್ಲದೆಯೂ ಬೆಸೆದುಕೊಂಡು ಬಿಡುತ್ತವೆ. ನಾವಿದ್ದಾಗ ಹಂಗಿತ್ತಪ್ಪ… ಈಗ ಹೆಂಗೋ ಗೊತ್ತಿಲ್ಲ. ಒಂದೇ ಒಂಟೆತ್ತಿನ ಬಂಡಿಯಲ್ಲಿ ಒಂದೇ ಟ್ರಿಪ್ಪಿಗೆ ಇಡೀ ಮನೆ ಸಾಮಾನು ಹೇರಿಕೊಂಡು ಬಂದು ಆ ಸಂದಿ ಯಲ್ಲಿದ್ದ ಒಂದು ಕೋಣೆಯ ಮನೆಯಲ್ಲಿ ಇಳಿಸುತ್ತಿದ್ದೆ. ಆಗ ಕಾಕಾ ವಿಚಾರಣೆ ಆರಂಭಿಸಿದ್ದ. ಮನೆಯಲ್ಲಿದ್ದದ್ದು ನಾನು, ಅವ್ವ ಹೆಂಡತಿ ಒಬ್ನೇ ಒಬ್ಬ ಮಗ; ಟೀವಿ, ಫ್ರಿಡ್ಜ್, ಅಲಮಾರು, ಟೇಬಲ್ಲು, ಖುರ್ಚಿ, ಬಂಗಾರ, ಬೆಳ್ಳಿ, ಎಲ್ಲಾ ಬಿಟ್ಟು.
ಅದೊಂದು ಕಾಂಪೌಂಡ್ ನಲ್ಲಿ ಸಣ್ಣ ಸಣ್ಣ ಒಂದೇ ಕೋಣೆ ಇರುವಂಥ ಹತ್ತಾರು ಮನೆಗಳಿರುವ ವಠಾರ ಅದು. ಅದಕ್ಕೆ ಹೆಸರು "ನಾರಾಣಾಚಾರಿ ಕಾಂಪೌಂಡ್" ಅಂತ. ಅದ್ಯಾಕೆ ಆ ಹೆಸರು ಬಂತೋ ಇತ್ತೋ ಗೊತ್ತಿಲ್ಲ. ಆದ್ರೆ ಆ ವಠಾರದಲ್ಲಿರುವ ಮನೆಗಳೆಲ್ಲವೂ ಒಬ್ಬ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಮಾಲೀಕನದು. ಅದರಲ್ಲಿ ದ್ದದ್ದು ಮುಸ್ಲಿಂ, ಹಿಂದೂ, ಬ್ರಾಹ್ಮಣ, ದರ್ಜಿ, ಮುಂತಾದ ಜಾತಿಗಳ ಬಡ ಮಧ್ಯಮ ಕುಟುಂಬಗಳು. ಆ ಕುಟುಂಬಗಳ ಮೂಲ ವೃತ್ತಿ ಅಂದರೆ, ಈ ರಸ್ತೆಯಲ್ಲಿ ಬಟ್ಟೆ, ಪಾನಿಪುರಿ, ಟೀ ಸ್ಟಾಲ್ ಅಂಗಡಿ, ಹಣ್ಣಿನ ವ್ಯಾಪಾರ ಹೀಗೆ. ಆ ಸಂದಿಯಲ್ಲಿ ಒಬ್ಬರು ಆ ಕಡೆಯಿಂದ ಬಂದು, ಬೀದಿ ನಲ್ಲಿಯಿಂದ ಕೊಡ ತುಂಬಿ ಕೊಂಡು ಈ ಕಡೆ ಹೋಗುತ್ತಿದ್ದರೆ ಎದುರಾಗುವ ಮಂದಿಗೆ ಜಾಗ ಇರುತ್ತಿದ್ದಿಲ್ಲ. ಮನೆ ಮುಂದೇನೆ ಸಣ್ಣ ಗಟಾರ, ಒಂದೊಂದು ಮನೆಯಲ್ಲಿ ಕರೆಂಟು ಇದ್ದರೆ ಇತ್ತು ಇಲ್ಲಾಂದ್ರೆ ಇಲ್ಲ. ಮನೆಗೆ ಬೀಗರು, ಮದುವೆ ಮಾಡಿಕೊಟ್ಟ ಹೆಣ್ಣು ಮಕ್ಕಳು, ಮರಿ ಬಂದರೆ, ಪಕ್ಕದ ಮನೆಯಿಂದ ಎರಡು ದಿನಗಳ ಮಟ್ಟಿಗೆ ದಿನಕ್ಕೆ ಹತ್ತು ರುಪಾಯಿಯಂತೆ ಹಣ ಕೊಟ್ಟು ಒಂದೇ ಕ್ಯಾಂಡಲ್ ಲೈಟ್ ಹತ್ತುವಷ್ಟು ಬಾಡಿಗೆ ಕರೆಂಟು.
ಪ್ರತಿ ದಿನ ನಿತ್ಯ ಕರ್ಮಕ್ಕೆ ಬಯಲೇ ಗತಿ. ಅಂಥಾದ್ದರಲ್ಲೂ ಮಡಿವಂತ ಬ್ರಾಹ್ಮಣರ ಪೂಜೆ, ತುಳಿಸಿ ಕಟ್ಟೆ, ಅವಲಕ್ಕಿ ತಿಂಡಿ, ಪಕ್ಕದ ಮನೆಯಿಂದ ಭರ್ತಿ ಬಿರ್ಯಾನಿ ವಾಸನೆ, ಹಾಗೆ ಮುಂದೆ ಸಂದಿಯಲ್ಲಿ ಬಂದರೆ ದಪ್ಪಾ ದಪ್ಪಾ ರೊಟ್ಟಿ ಬಡಿಯುವ ಸವುಂಡು. ಗಂಟೆ ಸದ್ದು. ಸೂರ್ಯ ಬಲಿತ ಮೇಲೆ ಎದ್ದು ಗಂಟಲು ಕೆಬರುತ್ತಾ ಕ್ಯಾಕರಿಸುವ ಪಕ್ಕದ ಅಮೀನವ್ವ ಮತ್ತು ಆಕೆಯ ರಾತ್ರಿ ಕುಡಿದ ಸರಾಯಿ ಘಾಟು, ಮಗನಿಗೆ ಹೊಟ್ಟೆ ತುಂಬಿ ಕೊಳ್ಳುವಷ್ಟು ಬೈಗುಳ. ಅಂಥ ಕಷ್ಟದಲ್ಲೂ ಟೀ ಮಾರಿ ದುಡಿದು ತರುತ್ತಲೇ ಮಕ್ಕಳು ಚೆನ್ನಾಗಿ ಓದುವ ಆಸೆ ಇಟ್ಟುಕೊಂಡ ನಾಗಪ್ಪ. ಸಣ್ಣ ಹೋಟೆಲ್ ನಲ್ಲಿ ಇಡ್ಲಿ ಮಾರಿ ತನ್ನ ದುರ್ಬಲ ಹೃದಯಕ್ಕೆ ಚಿಕಿತ್ಸೆ ಕೊಡಿಸುತ್ತಾ, ತನ್ನ ಇಸ್ಪೀಟು, ಓ. ಸಿ. ಗೆ ಬಂದ ದುಡಿಮೆಯ ಅರ್ಧದಷ್ಟು ಸುರಿಯವ ಶೆಟ್ಟಿ. ಟೇಲರ್ ಕುಟುಂಬ. ಮೂಲತಃ ಮುಸ್ಲಿಂ ಕುಟುಂಬವಾದರೂ ಬ್ರಾಹ್ಮಣರಿಗಿಂತಲೂ ತುಸು ಹೆಚ್ಚೇ ಅನ್ನುವಷ್ಟು ಮನೆಯನ್ನು ಪದೇ ಪದೇ ತೊಳೆಯುವ, ಬಾಗಿಲ ಬಳಿ ನೀರು ಸುರಿಯುವ, ದಿನಕ್ಕೆ ಇಪ್ಪತ್ತು ಸಾರಿ ಮುಸುರೆ ತಿಕ್ಕುವ, ಬೆಳಗಿನಿಂದ ಸಂಜೆವರೆಗೂ ಇರುವ ತಟಗು ಮನೆಯಲ್ಲಿ ಬಾವಿಗೆ ತಂದು ಸುರುವಿದಂತೆ ನೀರು ಹೊತ್ತು ಹಾಕುವ ಹಣ್ಣು ಮಾರುವ ಕುಟುಂಬ. ಯಾಕೆ ಆ ಮುಸ್ಲಿಂ ಮನೆಯ ಹೆಂಗಸರು ಈ ರೀತಿ ಮಾಡುತ್ತಾ ರೆಂದು ಗೊತ್ತೇ ಆಗಿದ್ದಿಲ್ಲ. ಅದು, ಮೊನ್ನೆ ನನ್ನ ಮಗ ಓ ಮನಸೇ ಪುಸ್ತಕದಲ್ಲಿ ಓದುತ್ತಿದ್ದ "OCD" ಲಕ್ಷಣ ವದು. ಆಹಾ .. ನಮೂನೆ ಬಗೆಯ ಗುಣಲಕ್ಷಣ ಮಂದಿ, ಮನೆ ಇರುವ ವಠಾರ ಅದು.
ಒಂದು ಸಂಗತಿ ಹೇಳುತ್ತೇನೆ. ಅಷ್ಟೊಂದು ಮಡಿ, ಮೈಲಿಗೆ, ಮಾಡುವ ಬ್ರಾಂಬ್ರ ಮನೆ ಮುದುಕನ ಮಗನ ಹೆಸರು "ಭೋಗಪ್ಪ" ಅಂತ. ಬದುಕಿನ ವ್ಯಂಗ ನೋಡಿ ಹೆಂಗಿರುತ್ತೆ. ಆ ಮನುಷ್ಯ ಒಂದು ಲಾಡ್ಜ್ ನಲ್ಲಿ ಕೆಲ್ಸ ಮಾಡ್ತಾ ಇದ್ದ. ಮತ್ತು ಲಾಡ್ಜಿಗೆ ಬಂದ ಮಹಾನುಭಾವರಿಗೆ ಗುಂಡು, ತುಂಡು ತಂದಿಟ್ಟು, ಅವರು ತಿಂದುಂಡು ಆದ ಮೇಲೆ ಎಲುಬು, ಎಂಜಲು ಸಮೇತ ತಟ್ಟೆ ಗ್ಲಾಸು ಎತ್ತಿಟ್ಟು ಅವರು ಕೊಟ್ಟ ಟಿಪ್ಸ್ ಕೂಡಿಟ್ಟುಕೊಂಡು ಮನೆಗೆ ಬಂದು ಹೊರಗೆ ಸ್ನಾನ ಮಾಡಿ ಜನಿವಾರ ನೀವಿಕೊಂಡು ಕುಳಿತು ಉಪ್ಪಿಲ್ಲದ ಬೇಳೆಸಾರಲ್ಲಿ ಅನ್ನ ಕಲೆಸಿ ಉಣ್ಣುತ್ತಿದ್ದ.
ಬಂದ ಹೊಸದಾಗಿ ನಾನು, ಅವ್ವ, ಹೆಂಡತಿ ಈ ತರಹೇವಾರಿ ಮಂದಿಯನ್ನು ಅರ್ಥ ಮಾಡಿಕೊಳ್ಳುವುದು, ಅವರೊಂದಿಗೆ ಬೆರೆಯುವುದು ತುಸು ತ್ರಾಸ ಆಗಿತ್ತೇನೋ ಸರಿ. ಆದರೆ ವಿಧಿಯಿಲ್ಲ, ಜಾಸ್ತಿ ಬಾಡಿಗೆ ಕೊಟ್ಟು ಚಲೋ ಮನೆ ಏನೋ ಸಿಗುತ್ತವೆ ಆದರೆ, ತಿಂಗಳುಗಟ್ಟಲೇ ಬಾಡಿಗೆ ಕೊಡದಿದ್ದರೂ ಸುಮ್ಮನಿರುವ ಮಾಲೀಕರು ಇರುವ ಅಥವಾ ಕಡಿಮೆ ಬಾಡಿಗೆಗೆ ಸಿಗುವ ಮನೆಗಳು ಇದ್ದಿಲ್ಲದ ಕಾರಣ ಹೊಂದಿಕೊಳ್ಳಲೇ ಬೇಕಿತ್ತು. ಬಾಡಿಗೆಯಾದರೂ ಎಷ್ಟು ? ಒಂದು ನೂರಕ್ಕಿಂತಲೂ ಕಡಿಮೆ; ತಿಂಗಳಿಗೆ. ಅದನ್ನು ಕೊಡಲೂ ಹೆಣಗಾಟ. ಈ ಬಡತನ ಹಣವಂತರ ಸರಿಸಮಾನಕ್ಕೆ ನಾವು ನಿಂತು ಹಣದಿಂದಲೇ ಮಾತಾಡಲು ಮಾತಿನ ಕೊರತೆ ಉಂಟು ಮಾಡಿದರೂ ಮಾಡಬಹುದು ಆದರೆ, ಅವತ್ತಿನದು ಅವತ್ತಿಗೆ ತಂದು ಹೊಟ್ಟೆ ಹೊರೆ ನೀಗಿಸಿಕೊಂಡು ಇಲ್ಲವೇ , ಹಸಿವಿಗೆ ಚುಕ್ಕು ತಟ್ಟಿ ಜೋಗುಳ ಹಾಡಿ ಕಾಡದೇ ನಿದ್ರಿಸುವ ಕಲೆ ಕಲಿಸಿ ನಿರುಮ್ಮಳವಾಗಿರುವ ಸೈರಣೆಯನ್ನಂತೂ ತಂದು ಕೊಡುತ್ತದೆ.
ಯಥಾ ಪ್ರಕಾರ, ನನ್ನದು ರಾತ್ರಿ ಊಟದ ನಂತರ ಹೆಗಲಿಗೆ ಒಂದು ಟವೆಲ್ ಹಾಕಿಕೊಂಡು ಹತ್ತಿರದ ಚೌಕದಲ್ಲಿ ಕಲೆಯುತ್ತಿದ್ದ ಪುಡಾರಿಗಳ, ಸಿನೆಮಾ ಬಾಕ್ಸ್ ಖರೀದಿ ಮಾಡಿಕೊಂಡು ಥೀಯೇಟರ್ ಗಳಲ್ಲಿ ಈ ದಿನದ ಕಲೆಕ್ಷನ್ ಎಷ್ಟಾತು? ಎಂದು ಲೆಕ್ಕ ಹಾಕುವವರ ಸರದಿಯಲ್ಲಿ ಜರ್ದಾ ಪಾನ್ ಅಗಿದು ಊರ ಸುದ್ದಿ ಉಗಿಯುತ್ತಾ, ಎದ್ದು ಬಂದು ಮನೆಯ ಮಾಳಿಗೆಯಲ್ಲಿ ತಲೆ ಇಟ್ಟು ಮಲಗುವ ಹೊತ್ತಿಗೆ ಬೆಳಗಿನ ಎರಡರ ಜಾವ. ರಾತ್ರಿ ಆಕಾಶದಲ್ಲಿ ಏಳೆಂಟು ನಕ್ಷತ್ರಗಳಿರುವ ಒಂದು ಗುಂಚಲು. ಅದಕ್ಕೆ ಏನೋ ಹೆಸರು ಕರೆಯುತ್ತಿದ್ದರು. ಅಲ್ಲಲ್ಲಿ ಒಂಟಿ ನಕ್ಷತ್ರಗಳು ಹೆಚ್ಚು ಪ್ರಕಾಶಮಾನವಾಗಿರುತ್ತಿದ್ದವು.
ಮಳೆಗಾಲದಲ್ಲಿ ಮಾಳಿಗೆಯಲ್ಲಿ ಮಲಗುವಂತಿಲ್ಲ.. ಇದ್ದ ಒಂಟಿ ಕೋಣೆಯಲ್ಲೇ ಒಬ್ಬರ ಕಾಲಿಗೆ ಮತ್ತೊಬ್ಬರ ತಲೆದಿಂಬು ತಾಕಿಸುತ್ತಾ ನಮ್ಮ ನಿದ್ದೆ. ನಾನು ದೇವರನ್ನೂ ಹೆಚ್ಚು ನಂಬಿ ಜೋತು ಬೀಳುತ್ತಿದ್ದಿಲ್ಲ. ಇನ್ನು ದೆವ್ವಗಳದ್ದು ಯಾವ ದಿಕ್ಕು? ಮೊದ ಮೊದಲು ಈ ಮನೆಗೆ ಬಂದ ಹೊಸತರಲ್ಲಿ " ಹೋಗಿ ಹೋಗಿ.. ಈ ಕಾಂಪೌಂಡ್ ಗೆ ಯಾಕ್ ಬಂದು ಸೇರಿಕೊಂಡ್ರೋ ಇವ್ರು" ಅನ್ನುವಂತೆ ಕೆಲವು "ನಮ್ಮ" ಜನ ನೋಡಿದ್ದರು.
ಬರು ಬರುತ್ತಾ, ಒಂದೊಂದೇ ಸುದ್ದಿಗಳು ಕಿವಿಗೆ ಬಿದ್ದವು. ಓಣಿಯ ಜನ ಮಾತಾಡಿದರೂ "ಅದು ಅವರ ದರ್ದು ನನಗ್ಯಾಕೆ ಅವ್ರ ಕರ್ಮ" ಅಂದು ಸುಮ್ಮನಾಗಿದ್ದೆ. ಅದೊಂದು ದಿನ ಅವ್ವ ಹೇಳಿದಳು ; " ಮಗಾ, ಈ ಓಣಿಯಲ್ಲಿ ದೆವ್ವ ಇದೆ, ಪ್ರತಿ ಅಮಾವಾಸ್ಯೆ ದಿನ ರಾತ್ರಿ ಘಲ್ ಘಲ್ ಗೆಜ್ಜೆ ಸದ್ದು ಮಾಡುತ್ತಾ ನಾರಾಣಾಚರಿ ಕಾಂಪೌಂಡ್ ನಲ್ಲೇ ದಿಗ್ಗ ದಿಗ್ಗ ನೆಂದು ಹೆಜ್ಜೆ ಊರುತ್ತಾ ತಿರುಗಾಡುತ್ತೆ, ಪಕ್ಕದಲ್ಲೇ ನಿಂತು ಸರಿಯುತ್ತೆ, " ಅಂದಿದ್ದಳು. ಆಗ ಅವ್ವ ಬ್ರಾಂಬ್ರ ಮನೆ ಮುಂದೆ ತುಳಸಿ ಗಿಡದ ಪಕ್ಕದ ಜಾಗದಲ್ಲೇ ಮಲಗುತ್ತಿದ್ದಳು.
"ದೇವ್ರು ಅನ್ನೋನೇ ಇನ್ನು ನನ್ ಕಣ್ಣಿಗೆ ಬಿದ್ದಿಲ್ಲ, ನನ್ ಕೆಲ್ಸಕ್ಕೆ, ದುಡಿಮೆಗೆ ಒಂಚೂರು ದಯೆ ತೋರ್ಸ್ಲಿಲ್ಲ; ಇನ್ನು ದೆವ್ವ ಎಲ್ಲಿಂದ ಬರ್ಬೇಕಬೆ? " ಅಂದುಬಿಟ್ಟೆ. ಮುದುಕಿ ಗಟ್ಟಿ ಗುಂಡಿಗೆ ಇದ್ದವಳು. ಹೊಲದಲ್ಲಿ ಎಂಥ ಕತ್ತಲಲ್ಲೂ ಹೆದರದೇ ನೀರು ಕಟ್ಟಲು ಹೋಗುತ್ತಿದ್ದಳಂತೆ; ಅದೂ ಊರಿಂದ ದೂರ. ಒಂದು ಮಾತು ಹೇಳಿದಳು; ನಾನು ಕೇಳಲಿಲ್ಲ. ಹಾಗೆ ವರ್ಷಗಳು ಕಳೆದವು. ಮಗ ಹೈಸ್ಕೂಲ್ ಗೆ ಬಂದ. ದೊಡ್ಡ ಮಗಳು, ಮಗನನ್ನು ಹೆಂಡತಿ ತೌರು ಮನೆಯವರು ಸಾಕುತ್ತಿದ್ದರು. ಈ ಬಾರಿ ಹೆಂಡ್ತಿ ಕಂಪ್ಲೇಂಟ್ ಶುರುವಾಯ್ತು; "ಅದೇ ಮಾರಾಯಾ, ರಾತ್ರಿ ಹೊತ್ತು, ಘಲ್ ಘಲ್ ಗೆಜ್ಜೆ ಸದ್ದು, ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ" ರಾತ್ರಿ ಹೊತ್ತು ಬಾಗಿಲನ್ನೇ ಹಾಕದೇ ಮಲಗುತ್ತಿದ್ದೆವು; ಗಾಳಿಯ ಸಲುವಾಗಿ. ನಾನು ಬರುತ್ತಿದ್ದುದೇ ಹನ್ನೆರಡು ಗಂಟೆಯ ನಂತರ. ಒಂದು, ಎರಡು ಸಹ ಆಗುತ್ತಿತ್ತು. "ಇವನೌನ, ಇವತ್ತು ನಾನ್ ಚೌಕಕ್ಕೆ ಹೋಗೋದೇ ಇಲ್ಲ, ಇಲ್ಲೇ ಕಾಯ್ತೀನಿ, ನೋಡೋನ್; ಅದೇನ್ ಸದ್ದು, ಅದ್ಯಾವ್ ದೆವ್ವ" ಕುಂತುಬಿಡುತ್ತಿದ್ದೆ. ಊಹೂ… ಅವತ್ತು ಜಪ್ಪಯ್ಯ ಅಂದ್ರೂ ಘಲ್ ಘಲ್ ಸೌಂಡು ಇಲ್ಲ, ದೊಪ್ಪ ದೊಪ್ಪಾ ಹೆಜ್ಜೆ ಸಪ್ಪಳವೂ ಇಲ್ಲ.
"ಥೂ …. ನಿಮ್ ಹಣೆಬರಕ್ಕಿಷ್ಟು" ಬೆಳಿಗ್ಗೆ ಎದ್ದು ಮನೆಯಲ್ಲಿ ಬಯ್ಯಲು ಶುರುವಿಟ್ಟು ಬಿಡುತ್ತಿದ್ದೆ.
ಓಣಿಯಲ್ಲಿ ಒಂದೊಂದು ಪ್ರಸಂಗಗಳು ನಡೆಯು ಹತ್ತಿದವು. ಬಡತನದಲ್ಲಿ ದುಡ್ಡಿರದಿದ್ದರೂ ಪರವಾಗಿಲ್ಲ, ಆದರೆ ಸಂಸಾರದಲ್ಲಿ ನಂಬಿಕೆಯೇ ಇರದಿದ್ದರೆ ಮಾತ್ರ ಕಷ್ಟ. ಸಾಲು ಸಾಲು ಮಕ್ಕಳು ಹೆತ್ತ ಮುಸ್ಲಿಂ ಹೆಂಗಸೊಬ್ಬಳು ಶಾಯಿದಾ ಅಂತ ಆಕೆ ಹೆಸರು, ಅದೇ ವಠಾರದಲ್ಲಿ ಉಪ್ಪಿನ ಕಾಯಿ ಮಾರಿಯೋ ಜೀವನ ಸಾಗಿಸುತ್ತಿದ್ದ ಇನ್ನೊಬ್ಬ ಗೃಹಸ್ಥ ನೊಂದಿಗೆ ರಾತ್ರೋ ರಾತ್ರಿ ಬಾಂಬೆಗೋ ಪೂನಾಗೋ ಓಡಿ ಹೋದದ್ದು ಆ ಏರಿಯಾದಲ್ಲಿ ಅಂತ ಸುದ್ದಿ ಯಾಗಲೇ ಇಲ್ಲ. ಯಾಕಂದ್ರೆ ಓಡಿ ಹೋದವರು ಸೆಲೆಬ್ರಿಟಿಗಳಲ್ಲವಲ್ಲ? ಸಣ್ಣ ಮಂದಿ. ಅದಾಗಿ ಹೋಳಿ ಹಬ್ಬದ ದಿನ ಈಜಲು ಹೋಗಿ ಸಣ್ಣ ಹುಡುಗ ಸತ್ತು ಹೋದ. ರಾತ್ರೋ ರಾತ್ರಿ ಹೋಟೆಲ್ ಶೆಟ್ಟಿ ಸಂಸಾರ ಸಮೇತ ನಾಪತ್ತೆಯಾಗಿಬಿಟ್ಟ; ಸಾಲದ ಹೊರೆಗೆ. ಇನ್ಯಾರೋ ಅನಾರೋಗ್ಯಕ್ಕೆ ಬಲಿಯಾದರು. ಹಣ್ಣಿನ ವ್ಯಾಪಾರಿಯ ಒಬ್ಬನೇ ಮಗ ವೃದ್ಧ ತಂದೆ ತಾಯಿಯನ್ನು ಬಿಟ್ಟು ಅದ್ಯಾವುದೋ ಹೆಂಗಸನ್ನು ಕಟ್ಟಿಕೊಂಡು ಮನೆ ತೊರೆದ. ಎಲ್ಲರಿಗೂ ಆ ವಠಾರದ ದೆವ್ವದ್ದೇ ಕಾಟ ಎನ್ನುವಂತೆ ನಂಬಿದರು. ನಾನು ಬೇರೆ ಕಡೆ ಮನೆ ನೋಡಿ ಶಿಫ್ಟ್ ಆಗಬೇಕೆಂಬುದು ಒನ್ ಪಾಯಿಂಟ್ ಅಜೆಂಡಾ ಆಗಿತ್ತು ಮನೆಯಲ್ಲಿ. ಏನ್ ಮಾಡ್ಲಿ? ದರಿದ್ರದ್ದು ದುಡಿಮೆ-ಕಡಿಮೆ. ನನ್ನ ಹಣೆಬರಹ ಹಳಿಯುತ್ತಲೇ ಇರುವಂಥ ಪರಿಸ್ಥಿತಿ.
ಅದೃಷ್ಟವೋ ಏನೋ ವರ್ಷಗಳು ಕಳೆಯುತ್ತಲೇ ಮಗಳ ಮದುವೆ ನಡೆಯಿತು. ಮಗ ಸರ್ಕಾರಿ ನೌಕರಿಗೆ ಹತ್ತಿದ. ನಮ್ ಜೊತೆ ಇದ್ದ ಮಗ ಹಂಗು ಹಿಂಗೂ ಓದುತ್ತಿದ್ದ.. ಅವರು ಆಗಾಗ ಮನೆಗೆ ಬಂದಾಗ ಓಣಿಯಲ್ಲಿನ ಘಲ್ ಘಲ್ ಗೆಜ್ಜೆ ಸದ್ದು, ದೊಪ್ ದೊಪ್ಪಂತ ಯಾರೋ ಹೆಜ್ಜೆ ಊರಿ ಓಡಿದಂತೆ ಅವರ ಅನುಭವಕ್ಕೂ ತಟ್ಟಿತು. ನನಗೆ ದೆವ್ವಾ ಅಂತ ಅನ್ನಿಸಲೇ ಇಲ್ಲ, ಅದಿವರೆಲ್ಲರ ಭ್ರಮೆ ಅಂತಲೇ ನನ್ನ ನಂಬಿಕೆ. ಒಂದು ವೇಳೆ ಆ ಘಲ್ ಘಲ್ ಗೆಜ್ಜೆ ಸಪ್ಪಳ, ದೊಪ್ ದೊಪ್ಪಾ ಅಂತ ಹೆಜ್ಜೆ ಊರುತ್ತಾ ನಡೆವ ಕತ್ತಲ ನಡಿಗೆ ಯಾವುದೋ ಅತೃಪ್ತ ಆತ್ಮ ಇದ್ದರೂ ಇರಬಹುದೇನೋ ಆದರೆ ಅದಕ್ಕೆ ದೆವ್ವಾ ಕರೀಬಹುದಾ ? ಬಿಡಿ, ಈಗ ವೈದ್ಯಕೀಯ ಓದು ಓದಿದವರು ಕೂಡ ಕ್ಲಿನಿಕ್ ನಲ್ಲಿ ದೇವರ ಫೋಟೋ ಒಂದನ್ನಿಟ್ಟು ಪ್ರಾಕ್ಟೀಸ್ ಮಾಡುತ್ತಿರುತ್ತಾರೆ. ಅದು ಅವರ ನಂಬಿಕೆ ಇದ್ದರೂ ಇರಬಹುದು ಇಲ್ಲವೇ ಬರುವ ರೋಗಿಗಳ ಮನೋಸ್ಥೈರ್ಯ ಹೆಚ್ಚಿಸಲು, ಅವರ ನಂಬಿಕೆ ಬಲವಾಗಲು ಇಟ್ಟಿರಬಹುದು.
ನಮ್ಮೂರಲ್ಲಿ ಒಬ್ಬ ಹಿರಿಯ ವೈದ್ಯರಿದ್ದರು; ಅವರ ಹೆಸರು ರಾಮರಾವ್ ಅಂತ. ತಮ್ಮಲ್ಲಿ ಬರುವ ರೋಗಿ ಗಳಿಗೆ ಚಿಕಿತ್ಸೆಯನ್ನೇನೋ ನೀಡುತ್ತಿದ್ದರು. ಜೊತೆಗೆ ಆ ಓಣಿಯ ಎಂಟು ಹತ್ತು ವಯಸ್ಸಿನ ಮಕ್ಕಳಿಗೆ ಪ್ರತಿ ದಿನ ಸಂಜೆ ಕ್ಲಿನಿಕ್ ಗೆ ಕರೆಸಿ ಅವ್ರಿಗೆ ಗಾಯಿತ್ರಿ ಮಂತ್ರ, ಸರಸ್ವತಿ, ಗಣೇಶನ ಸ್ತೋತ್ರ, ಹೀಗೆ ಹತ್ತು ಹಲವು ಮಂತ್ರಗಳನ್ನು ಹೇಳಿಕೊಟ್ಟು ಕೊರಳಿಗೋ ಅಥವಾ ಕೈಯಲ್ಲೊಂದು ಹಳದಿ ಮತ್ತು ಕೆಂಪು ಬಣ್ಣದ ದಾರ ವೊಂದನ್ನು ಕಟ್ಟಿ "ದೇವರ" ಹೆಸರಲ್ಲಿ ಮಕ್ಕಳ ಓದನ್ನು ಅವರ ಜ್ಞಾಪಕ ಶಕ್ತಿಯನ್ನು, ಏಕಾಗ್ರತೆಯನ್ನು ಒಟ್ಟಿಗೆ ರೂಢಿಸಿಕೊಳ್ಳಲು ಪ್ರೇರೇಪಿಸುತ್ತಿದ್ದರು. ಈಗವರು ಅಲ್ಲಿಲ್ಲ ಬಿಡಿ; ನಮ್ ಜೊತೆ ಇದ್ದಾರೆ…. (ಯಾಕೆ ಅಂತೀರಾ? ಕೊನೆವರೆಗೂ ಮತ್ತು ಕೊನೆಗೆ ಓದಿ)……
ಅದೂ ಅಲ್ಲದೇ ಮಾಟ ಮಂತ್ರದಿಂದ "ಕೇಳಿಸಿ" ಕೊಳ್ಳುವ ಮಂದಿ ಎಷ್ಟೇ ಜನ ಸುತ್ತ ಮುತ್ತ ಇದ್ದರೂ ಅವರಿಗೆ ಘಲ್ ಘಲ್ ಗೆಜ್ಜೆ ಸದ್ದಿನಿಂದ ತಪ್ಪಿಸಿಕೊಳ್ಳಲು ಆಗಲಿಲ್ಲವಂತೆ. ಆ ವಠಾರದಿಂದ "ಹೋಗುವ" ವರೆಗೂ ನನಗೆ ಘಲ್ ಘಲ್ ಗೆಜ್ಜೆ ಸಜ್ಜು ಕೇಳಿಸಲೇ ಇಲ್ಲ. ಪಕ್ಕದಲ್ಲೇ ಮಸೀದಿ ಇತ್ತು, ದೇವಸ್ಥಾನ ಇದ್ದವು.. "ದೇವರ" ನ್ನು ಕೂಡಿ ಹಾಕಿ ಹೊರಗೆ ಮಂದಿ ದೆವ್ವದ ಸಂಗತಿಯಲ್ಲಿ ಮುಳುಗುತ್ತಿದ್ದುದು ವಿಪರ್ಯಾಸವೇ ಆಗಿತ್ತು.
ಎಲ್ಲಾ ಸರಿ, ನಿಂದೇನು ಪುರಾಣ ಅನ್ನುತ್ತೀರಾ? ಇರಿ, ಅದನ್ನೂ ಚೊಕ್ಕವಾಗಿ ಹೇಳಿಬಿಡುತ್ತೇನೆ. ಅದೊಮ್ಮೆ ಅವಕಾಶ ಸಿಕ್ಕು ಗೆಳೆಯರೊಬ್ಬರೊಂದಿಗೆ ಕನ್ಯಾಕುಮಾರಿಗೆ ಹೋಗಿದ್ದೆ. ಅಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತ ಎರಡನ್ನೂ ಅಲ್ಲಿ ಅತ್ಯಂತ ಹತ್ತಿರದಿಂದ ಕಣ್ತುಂಬಿಕೊಂಡು ಖುಷಿ ಪಡಬಹುದು. ಅವತ್ಯಾಕೋ ಏನೋ ಜಗತ್ತಿಗೆ ನಾನು ಬೇಸರವಾದರೆ, ನನಗೆ ಜಗತ್ತಿನೆಡೆಗೆ ತಾತ್ಸಾರ ಬೆಳೆದರೆ ಇದೇ ದಂಡೆಯಲ್ಲಿ ಕಾಲು ಚಾಚಿ ಅಲೆಗಳ ರಭಸ ಕೇಳುತ್ತಾ, ಪ್ರತಿ ಮುಂಜಾನೆ ಪ್ರತಿ ಸಂಜೆ ನೋಡುತ್ತಾ ಕಳೆದುಬಿಡಬೇಕು ಅಂದ್ಕೊಂಡಿದ್ದೆ. ನಾವಂದು ಕೊಂಡಷ್ಟು ಸುಲಭವಾಗಿರುವುದಿಲ್ಲ, ನಮ್ಮ ಬದುಕಿನ ದಕ್ಕಡಿಗಳು.
ಎರಡು ಬಾರಿ ಕಾಣಿಸಿಕೊಂಡರೂ, ಬಂದದ್ದು "ಎದೆ ನೋವು" ಎಂದು ಗೊತ್ತಾಗಿದ್ದು; ಮೂರನೇ ಸಲ ಎದೆ ಒತ್ತಿ ಹಿಡಿದು ನೆಲಕ್ಕೆ ಬಿದ್ದಾಗಲೇ. ಹತ್ತಿರದ ವೈದ್ಯರು ನನ್ನ ಕೈ ಮುಟ್ಟುವುದರೊಳಗೆ ನನ್ನ ದೇಹವೇ ತಣ್ಣ ಗಾಗಿತ್ತು. ನನ್ನ ಮಗ "ನಾರಾಣಾಚಾರಿ ಕಾಂಪೌಂಡ್" ಮನೆ ಖಾಲಿ ಮಾಡುವುದರೊಳಗಾಗಿ ನಾನಾಗಲೇ ಮಣ್ಣು ಸೇರಿ ಇಪ್ಪತ್ತು ದಿನಗಳಾಗಿದ್ದವು.
ತಪ್ಪು ತಿಳಿಬೇಡಿ, ಇಷ್ಟೆಲ್ಲಾ ಕಥೆ ಹೇಳಿದ್ದು ನನ್ನದೇ ಆತ್ಮ. ಆದರೆ, ಯಾರ ಕನಸಿಗೂ ಬಾರದೇ ಗಾಳಿಯಲ್ಲೂ ಸುಳಿಯದೇ ಒತ್ತಟ್ಟಿಗೆ ಕುಂತು ಬದಲಾಗುತ್ತಿರುವ ಜಗತ್ತನ್ನು ನೋಡುತ್ತಲೇ ಸಂತೃಪ್ತವಾಗಿದೆ.
*****
very nice
Thale barahadindale barahakke sigabahudaada thiruvannu saleesaagi oohisabahudu. Aadare niroopane aasakthidaayakavaagide! Happy to see you in such a good form Amar.
ಚೆನ್ನಾಗಿದೆ ಸರ್
ಅಮರ್, 'ಆತ್ಮದ' ಅವಲೋಕನ ಚೆನ್ನಾಗಿದೆ! 🙂
ಎಂಥಾ ಒಳ್ಳೆಯ ಲೇಖನ ಕಣ್ರೀ, ಸೂಪರ್