ಹೊಟ್ಟೆ ಹಸಿವೆಯಿಂದ ಗುರುಗುಡುತ್ತಿತ್ತು. ಯಾಕಿವತ್ತು ಇನ್ನೂ ತಟ್ಟೆಯ ಸಪ್ಪಳವೇ ಇಲ್ಲಾ? ನಾಲಿಗೆ ಹೊರ ಚಾಚಿ, ಮುಚ್ಚಿರುವ ತಲಬಾಗಿಲನ್ನೊಮ್ಮೆ ದಿಟ್ಟಿಸಿ ನೋಡುತ್ತಾ, ತಲೆಯ ಮೇಲೆ ಸುಡುತ್ತಿರುವ ಸೂರ್ಯನ ಶಾಖವನ್ನು ತಾಳಲಾರದೇ ತನ್ನ ಗೂಡಿನೆಡೆಗೆ ಕುಂಯ್ ಗುಡುತ್ತಾ ರಾಜಾ ವಾಪಸ್ಸಾದ. ಗೂಡಿನಲ್ಲಿ ತಾಪ ಇನ್ನೂ ಜಾಸ್ತಿಯಿತ್ತು. ತಾನು ಆ ಮನೆಯನ್ನು ಸೇರಿದ್ದು ಚಿಕ್ಕ ಕುನ್ನಿಯಾಗಿದ್ದಾಗ. ತನ್ನ ಅಮ್ಮ ಟ್ರಕ್ಕಿನಡಿಯಲ್ಲಿ ಸಿಕ್ಕಿ ಸತ್ತು ತಾನು ತಬ್ಬಲಿಯಾದಾಗ, ಮುದ್ದಾಗಿದ್ದೆನೆಂದೋ ಅಥವಾ ಮುಂದೆ ಮನೆ ಕಾಯುವೆನೆಂದೋ ತನ್ನನ್ನು ಮನೆಗೆ ತಂದು ಸಾಕಿದ್ದು ಈ ಮನೆಯ ಯಜಮಾನ ಸಿದ್ದಣ್ಣ. ಊಟಕ್ಕೇನು ಕೊರತೆಯಿರಲಿಲ್ಲ ಅಲ್ಲಿ. ಸರಿಯಾದ ಸಮಯಕ್ಕೆ ತಿಂಡಿ ತೀರ್ಥಗಳು ದೊರಕಿದ್ದೂ ಅಲ್ಲದೇ, ತನಗೆ ಒಂದು ಗೂಡು ಕಟ್ಟಿ ಕೊಟ್ಟಿದ್ದು ಸಿದ್ದಣ್ಣನ ದೊಡ್ಡತನ. ಕಂಪೌಂಡಿನಲ್ಲಿದ್ದುಕೊಂಡು ಬಂದವರೆಲ್ಲರ ಕಂಡು, ಅಪರಿಚಿದ್ದರೆ ಬೊಗಳಿ ಸಿದ್ದಣ್ಣನ ವಿಶ್ವಾಸ ಬಹು ಬೇಗನೇ ಗಳಿಸಿಕೊಂಡಿದ್ದವನಿಗೆ ರಾಜ ಅಂತ ನಾಮಕರಣ ಬೇರೆ ಆಗಿತ್ತು. ವಾರಕ್ಕೊಮ್ಮೆ ಸ್ನಾನ, ಸಂಜೆಗೊಮ್ಮೆ ಹೊರಗಡೆ ಯಜಮಾನನೊಟ್ಟಿಗೆ ವಾಕಿಂಗು. ಹಬ್ಬಕ್ಕೆ ಸಿಹಿ ಊಟ, ಸ್ವರ್ಗಕ್ಕೆ ಮೂರೇ ಗೇಣು. ಆದರಿವತ್ತ್ಯಾಕೋ ಇನ್ನೂ ಊಟ ಹಾಕಿಲ್ಲದಿದ್ದದ್ದು ರಾಜಾನಿಗೆ ಬಗೆ ಹರಿಯಲಾರದ ಸಮಸ್ಸೆಯಾಗಿತ್ತು.
*
ಆ ಸುಡುಗಾಡು ಮೀಟಿಂಗು ಮುಗಿಯುವ ಲಕ್ಷಣಗಳು ಕಾಣುತ್ತಿರಲಿಲ್ಲ. ಆಗಲೇ ಗಂಟೆ ಮೂರಾಗಿತ್ತು. ಅನಂತನ ಹೊಟ್ಟೆಯಲ್ಲಿ ತಳಮಳ ಶುರುವಾಗಿತ್ತು. ಆ ಆದಿನಾರಾಯಣ ಊಟಕ್ಕೆ ಕರೆದಾಗಲೇ ಅವನೊಟ್ಟಿಗೆ ಹೋಗಿ ಬರಬೇಕಿತ್ತು. ಅವನು, ಪ್ರಳಯವಾದರೂ ತನ್ನ ಸಮಯಕ್ಕೆ ಸರಿಯಾಗಿ ಊಟ ಮುಗಿಸುತ್ತಿದ್ದ. ಮೀಟಿಂಗುಗಳಿದ್ದರಂತೂ ಇನ್ನೂ ಬೇಗನೇ ಊಟ ಮಾಡಿಕೊಂಡು ಬಂದು ಬಿಡುತ್ತಿದ್ದನವನು. ಜೊತೆಗೆ ಸಣ್ಣಗೆ ತಲೆ ನೋವು ಶುರುವಾಗಿತ್ತು. ಇನ್ನು ಸ್ವಲ್ಪ ಹೊತ್ತಿಗೆ ಹಸಿವೆಯೂ ಸತ್ತು ಹೋಗುತ್ತದೆ. ಮುಂದಿದ್ದ ಬಾಟಲಿ ನೀರನ್ನು ಗಟಗಟನೇ ಕುಡಿದು ಉದರಾಗ್ನಿಯ ಶಮನ ಮಾಡುವ ವ್ಯರ್ಥ ಪ್ರಯತ್ನ ಮಾಡಿದ. ಮೀಟಿಂಗು ಮುಗಿಯುತ್ತಲೇ ಊಟಕ್ಕೆ ಹೋಗಬೇಕೆನ್ನುವ ತವಕಕ್ಕೆ ಹಸಿವೆ ಇನ್ನೂ ಜೋರಾಗಹತ್ತಿತ್ತು. ತನ್ನ ಮ್ಯಾನೇಜರ್ ಹೇಳಿದ್ದನ್ನೇ ಹೇಳುತ್ತಾ ತವಡು ಕುಟ್ಟುತ್ತಿದ್ದ. ಅವನ ಚೇಲಾಗಳು ಅವನು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಿ ಮೆಚ್ಚುಗೆ ಸೂಚಿಸುತ್ತಿದ್ದರು. ತಾನು ಅಲ್ಲಿದ್ದು ಏನು ಶತಕೃತ್ಯ ಮಾಡುತ್ತಿದ್ದೇನೆ ಎನಿಸಿತವನಿಗೆ.
*
ಅಂತೂ ತಲಬಾಗಿಲು ಕಿರುಗುಟ್ಟಿದಾಗ ತನ್ನ ಬಾಲ ತನಗರಿವಿಲ್ಲದಂತೆ ಅಲ್ಲಾಡಗಿದ್ದು ರಾಜಾನ ಗಮನಕ್ಕೆ ಬಂತು. ಗಕ್ಕನೇ ಗೂಡಿನಿಂದ ಹೊರಗೋಡಿ ಬಂದವನಿಗೆ ಸಿದ್ದಣ್ಣ ನಿರಾಶೆ ಮಾಡಲಿಲ್ಲ. ತನಗಾಗಿ ಮೀಸಲಿಟ್ಟಿದ್ದ ತಟ್ಟೆಯಲ್ಲಿ ಅನ್ನವನ್ನು ಸುರಿದು ಲಗುಬಗೆಯಿಂದ ಒಳ ನಡೆದ. ಗಬಗಬನೇ ಹೊಟ್ಟೆಗಿಳಿಸಿ ಗೂಡಿಗೆ ತೆರಳಿದ ರಾಜಾಗೆ ಹೊಟ್ಟೆಯೇನೋ ತುಂಬಿತ್ತು ಆದರೆ ತನ್ನ ಯಜಮಾನನ ಮೇಲೆ ಕೋಪ ಬಂದಿತ್ತು. ಸೆಕೆಗೆ ಆ ಕೋಪ ಇನ್ನೂ ಜಾಸ್ತಿಯಾಗಿತ್ತು. ತಾನು ಇಷ್ಟು ಭಕ್ತಿಯಿಂದ ಮನೆ ಕಾದರೂ ಇವನು ಹೀಗೆ ಊಟಕ್ಕೆ ತನಗೆ ಕಾಯಿಸಬಹುದೆ? ಅನ್ನುವುದು ರಾಜಾನ ಸಿಟ್ಟಿಗೆ ಕಾರಣವಾಗಿತ್ತು. ಹೊಟ್ಟೆ ತಣ್ಣಗಾಗಿದ್ದರಿಂದ ಸ್ವಲ್ಪ ಜೋಂಪು ಹತ್ತಿತ್ತು.
*
ಕೊನೆಗೂ ಮೀಟಿಂಗ್ ಮುಗಿದಾಗ ನಾಲ್ಕು ಘಂಟೆ. ಲಗುಬಗೆಯಿಂದ ಊಟಕ್ಕೆ ಹೊರಟವನ ಹೊಟ್ಟೆ ತಮಟೆ ಬಾರಿಸುತ್ತಿದ್ದರೆ, ತಲೆಯಲ್ಲಿ ಯೋಚನೆಗಳು ಮುತ್ತಿಕೊಂಡಿದ್ದವು. ತಾನು ಈ ಕಂಪನಿ ಸೇರಿ ಅವತ್ತಿಗೆ ಎಂಟು ವರುಷಗಳಾಗಿತ್ತು. ಎಷ್ಟೇ ಹಾರ್ಡ್ ವರ್ಕ್ ಮಾಡಿದರೂ ತನ್ನ ಪ್ರತಿಭೆಗೆ ತಕ್ಕ ಸ್ಥಾನ ಸಿಕ್ಕಿಲ್ಲಾ ಅನ್ನುವ ಕೊರಗು ಇವನನ್ನು ಕಾಡುತ್ತಿತ್ತು. ಮ್ಯಾನೇಜರ್ ನ ಬಾಲ ಬಡಿಯುತ್ತಿದ್ದವರಿಗೆ ತನಗಿಂತ ಮೇಲಿನ ದರ್ಜೆ ಸಿಕ್ಕಿದ್ದು ಗಾಯದ ಮೇಲಿನ ಬರೆಯಂತಾಗಿತ್ತು. ಕೆಲಸವಾಗಬೇಕಾದಾಗ ತನ್ನ ಕಾಲು ಹಿಡಿದು ಗೋಗರೆದು ಕೆಲಸ ಮಾಡಿಸಿಕೊಳ್ಳುತ್ತಿದ್ದವನು ಅಪ್ರೈಸಲ್ ಇದ್ದಾಗ ಮಾತ್ರ ಇವನ ಸಣ್ಣ ಸಣ್ಣ ತಪ್ಪುಗಳನ್ನು ಎತ್ತಿ ಹಿಡಿಯುತ್ತಿದ್ದ. ಅವನು ಹೇಳಿದ ಕೆಲಸಗಳನ್ನೆಲ್ಲಾ ತಕರಾರಿಲ್ಲದೇ ಮಾಡುತ್ತಿರುವುದೇ ತನ್ನ ತಪ್ಪಿರಬಹುದು ಅಂತವನಿಗೆಷ್ಟೋ ಸಲ ಅನಿಸಿದ್ದಿದೆ. ಯಾಂತ್ರಿಕವಾಗಿ ಊಟದ ಆಟ ಮುಗಿದಿತ್ತು. ರಾತ್ರಿಯವರೆಗೆ ಕೆಲಸಗಳು ತುಂಬಿದ್ದವು. ಇವತ್ತು ರಾತ್ರಿ ಮನೆಗೆ ಹೋಗುವಂತಾದರೆ ಸಾಕು ಅನಿಸಿತ್ತವನಿಗೆ.
*
ಗೇಟಿನ ಬಳಿ ಯಾರೋ ಬಿಕ್ಷುಕ ಬಂದಿರುವುದು ಅಧೇಗೋ ನಿದ್ದೆಯಲ್ಲಿದ್ದ ರಾಜಾನನ್ನು ಬಡಿದೆಬ್ಬಿಸಿತು. ಕೂಡಲೇ ಕಾರ್ಯ ತತ್ಪರನಾಗಿ ಬೌ ಎನ್ನುವ ತನ್ನ ವಿಶಿಷ್ಠ ಸ್ವರದಲ್ಲಿ ಅರಚತೊಡಗಿ, ಬಿಕ್ಷುಕ ಅಲ್ಲಿಂದ ಕಾಲು ಕಿತ್ತಾಗಲೇ ನೆಮ್ಮದಿಯ ನಿಟ್ಟುಸಿರು ಬಿಟ್ಟು, ಯಜಮಾನ ಅದನ್ನು ಗಮನಿಸಿರಬಹುದೇ ಎಂದು ತಲಬಾಗಿಲ ಕಡೆಗೆ ಒಮ್ಮೆ ನೋಡಿತು. ಯಾರೂ ಇಲ್ಲದ್ದರಿಂದ ನಿರಾಶೆಯಿಂದ ಗೋಣು ಚೆಲ್ಲಿ ಮಲಗಿ ಮತ್ತೆ ಯೋಚನೆಗೆ ತೊಡಗಿತು. ತಾನಿಲ್ಲದಿದ್ದರೆ ಈ ಮನೆಯ ಗತಿಯೇನು? ಹಗಲು ರಾತ್ರಿಯೆನ್ನದೆ ತಾನು ಕಾಯುತ್ತಿರುವುದಕ್ಕೇ ಅಲ್ಲವೇ ಇವರಿಷ್ಟು ನಿಶ್ಚಿಂತರಾಗಿ ಮಲಗುವುದು? ತಾನು ಇಲ್ಲದಾಗಲೇ ಈ ಯಜಮಾನನಿಗೆ ಬುದ್ಧಿ ಬರುವುದೇನೊ. ಇವನಿಗಿಂತ ಒಳ್ಳೆಯವನು ತನಗೆ ಸಿಕ್ಕೇ ಸಿಗುತ್ತಾನೆ. ಇವನಿಗೆ ಬುದ್ಧಿ ಕಲಿಸಲೇಬೇಕು ಅನ್ನುವ ಹಟ್ಟಕ್ಕೆ ಬಿದ್ದಾಗಿತ್ತು.
*
ರಾತ್ರಿ ಅಂತೂ ಅನಂತ ಮನೆ ತಲುಪಿದಾಗ, ಬೆಳಗಾಗಲು ಇನ್ನು ಬರೀ ಮೂರೆ ಗಂಟೆಗಳು ಬಾಕಿ ಅನ್ನುವ ಯೋಚನೆಗೇ ಅವನಿಗೆ ನಿದ್ದೆ ಬರುವ ಲಕ್ಷಣಗಳಿರಲಿಲ್ಲ. ಈ ಕಂಪನಿಯೂ ಬೇಡ, ಇವರು ಕೊಡುವ ಪುಡಿ ಕಾಸೂ ಬೇಡ, ಬೇರೆಲ್ಲಾದರೂ ನೋಡಬೇಕು ಅನ್ನುತ್ತ ನಿದ್ದೆ ಹೋದವನಿಗೆ, ಬೆಳಗಿನ ಅಲಾರ್ಮ್ ತರಹ ಬಡಿದೆಬ್ಬಿಸಿದ್ದು ಅವನ ಮ್ಯನೇಜರ್ ನ ಫೋನು. ಈ ಮುಂಡೆ ಮಗ ರಾತ್ರಿಯೆಲ್ಲಾ ಸುಖವಾಗಿ ನಿದ್ದೆ ಮಾಡಿರುತ್ತಾನೆ. ಹಗಲು ನಮ್ಮನ್ನು ಕಾಡುತ್ತಾನೆ ಎನ್ನುತ್ತ ಫೋನು ರಿಸೀವ್ ಮಾಡಿದವನಿಗೆ ಆಫಿಸಿಗೆ ಇನ್ನೂ ಬಂದಿಲ್ಲ ಅಂತ ಕೂಗಾಡಿ ಅವನ ನೆಮ್ಮದಿಯನ್ನೇ ಹಾಳು ಮಾಡಿದ. ತನ್ನನ್ನೊಂದು ಪ್ರಾಣಿ ಅಥವಾ ಗುಲಾಮನಂತೆ ನಡೆಸಿಕೊಳ್ಳುತ್ತಿರುವ ಬಾಸ್ ಬಗ್ಗೆ ಅಸಮಾಧಾನವಾಗಿತ್ತು. ಇವನು ಕರೆದಾಗ ಬರಲು ತಾನೇನು ಸೂಳೆಯೆ? ತನಗೆ ಬರುವ ಕೋಪಕ್ಕೆ ಸಿಕ್ಕದ್ದನ್ನೆಲ್ಲಾ ಎತ್ತಿ ಕುಕ್ಕುವ ಮನಸ್ಸಾದರೂ, ಬಡವನ ಸಿಟ್ಟು ದವಡೆಗೆ ಮೂಲ ಅಂದ್ಕೊಂಡು ಸುಮ್ಮನಾದ.
ಅವತ್ತು ಎಂದಿನಂತೆ ಬೆಳಗಾಗಿತ್ತಾದರೂ ರಾಜಾನಿಗೆ ಉತ್ಸಾಹವಿರಲಿಲ್ಲ. ಅದಕ್ಕೆ ರಾತ್ರಿಯೆಲ್ಲ ಇಲ್ಲಿಂದ ಹೇಗೆ ತಪ್ಪಿಸಿಕೊಂಡು ಓಡಿ ಹೋಗಲಿ ಅನ್ನುವ ಚಿಂತೆಯಲ್ಲಿ ನಿದ್ದೇನೆ ಬಂದಿರಲಿಲ್ಲ. ಬೆಳಗ್ಗೆ ಪೇಪರ್ ತರಲು ಅಂತ ಹೊರಗೆ ಬಂದ ಸಿದ್ದಣ್ಣ. ಅವನು ಹಾಗೆ ಹೊರ ಬಂದಾಗಗಲೆಲ್ಲಾ ರಾಜಾನನ್ನೂ ಗೇಟಿನ ಹೊರಗೆ ಬಿಡುತ್ತಿದ್ದ. ರಾಜಾನಿಗೆ ಅದೊಂದು ತರಹದ ಅರ್ಧ ಗಂಟೆಯ ಸ್ವಾತಂತ್ರ! ಅಲ್ಲೆಲ್ಲಾ ಸುತ್ತ ಮುತ್ತಲಿನ ಪರಿಸರವನ್ನೆಲ್ಲಾ ಜಾಲಾಡಿ, ಯಜಮಾನ ಹೊರಗೆ ನಿಲ್ಲಿಸಿದ್ದ ಅವನ ಕಾರಿನ ಚಕ್ರವೊಂದಕ್ಕೆ ಅವನ ಕಣ್ಣು ತಪ್ಪಿಸಿ ಉಚ್ಚೆ ಹೊಯ್ದರೆ ಅದೇ ದೊಡ್ಡ ಸಾಧನೆ! ಇವತ್ತೂ ಕೂಡ ರಾಜಾನನ್ನು ಅಡ್ಡಾಡಿ ಬರಲಿ ಅಂತ ಗೇಟಿನ ಹೊರಗೆ ಬಿಟ್ಟಿದ್ದೆ ಚಾನ್ಸು ಅಂತ ಅದು ಓಡಿ ಹೋಗಿ ಬಿಡೋದೆ!
ಬಾಸ್ ನ ಹಾಳು ಪೋನ್ ಕರೆಗೆ ನಿದ್ದೆಯಂತೂ ಹಾಳಾಗಿತ್ತು. ಬೆಳಗಿನ ಟೀ ಮಾಡಿಕೊಂಡು ಹಾಗೇ ಕಪ್ಪು ಕೈಯಲ್ಲಿ ಹಿಡ್ಕೊಂಡು ವರಾಂಡದಲ್ಲಿ ಬಂದು ನಿಂತು ಗೇಟಿನ ಹೊರಗೆ ಕಣ್ಣು ಹಾಯಿಸಿದವನಿಗೆ ಕಂಡದ್ದು ಕಂಗಾಲಾಗಿ ತನ್ನ ನೀಳ ನಾಲಿಗೆಯ ಹೊರ ಚಾಚಿ ನಿಂತಿದ್ದ ನಾಯಿ, ರಾಜಾ! ಅನಂತನಿಗೆ ಮೊದಲಿನಿಂದಲೂ ನಾಯಿಗಳ ಕಂಡರೆ ಪ್ರೀತಿ. ಮೊದಲು ತನ್ನ ಮನೆಯಲ್ಲೊಂದು ನಾಯಿಯನ್ನೂ ಸಾಕಿದ್ದ. ಅದಕ್ಕೆಲ್ಲ ತಕ್ಕುದಾದ ವ್ಯವಸ್ಥೆಯೂ ಮನೆಯಲ್ಲಿತ್ತು. ಆದರೆ ಅದು ಸತ್ತ ಮೇಲೆ ಬೇರೆ ನಾಯಿ ಸಾಕಿರಲಿಲ್ಲ. ರಾಜಾನನ್ನು ನೋಡಿ ಅದು ಒಳ್ಳೆಯ ಜಾತಿಯ ನಾಯಿಯೇ ಅಂತ ಅವನಿಗೆ ಅಂದಾಜಾಗಿ ಹೋಯಿತು. ಕೂಡಲೇ ಒಳಗೆ ಹೋಗಿ ಒಂದಿಷ್ಟು ಬ್ರೆಡ್ಡು , ತಾನು ತಿಂದು ಉಳಿದಿದ್ದ ಪಿಡ್ಜ಼ಾವನ್ನು ಆಫರ್ ಮಾಡಿದಾಗ, ಓಡೋಡಿ ಬಂದು ಹಸಿದು ಕಂಗಾಲಾಗಿದ್ದ ರಾಜಾ ಒಂಚೂರು ಉಳಿಸದಂತೆ ತಿಂದು ಚೊಕ್ಕ ಮಾಡಿತ್ತು. ಸಿದ್ದಣ್ಣನ ಅನ್ನ ತಿಂದು ಜಿಡ್ಡು ಗಟ್ಟಿದ್ದ ನಾಲಿಗೆಯ ಎಲ್ಲ ಕಡೆಯಿಂದ ಜೀರ್ಣ ರಸಗಳು ಪ್ರವಾಹದೋಪಾದಿಯಲ್ಲಿ ಚಿಮ್ಮಿ ಹರಿಯುತ್ತಿದ್ದುದು ಅದರ ಗಮನಕ್ಕೆ ಬಂತು. ಅನ್ನದ ಋಣಕ್ಕೆ ಬಿದ್ದಾಗಿತ್ತು. ತಿಂದಾದ ಮೇಲೆ ಬಾಲ ಇನ್ನೂ ಜೋರಾಗಿ ಬಡೆದುಕೊಳ್ಳುತ್ತಿತ್ತು. ಹೊಸ ಯಜಮಾನನನ್ನು ಒಪ್ಪಿಕೊಂಡಾಗಿತ್ತು. ಅನಂತ ತನ್ನ ಕೊರಳ ಮೇಲೆ ಕೈ ಆಡಿಸಿದ್ದು ಇನ್ನೂ ಹಿತವೆನಿಸಿತ್ತು.
*
ದಿನಗಳೆದಂತೆ ಇಬ್ಬರೂ ಒಬ್ಬರಿಗೊಬ್ಬರು ಹೊಂದಿಕೊಂಡರು. ಅವನು ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಸಂಜೆಯವರೆಗೆ ಆಗುವಷ್ಟು ಊಟವನ್ನಿಕ್ಕಿ ಹೋಗುತ್ತಿದ್ದುದರಿಂದ ರಾಜನಿಗೆ ಯಾವುದೇ ಕೊರತೆಯಿರಲಿಲ್ಲ. ಸಿದ್ದಣ್ಣನ ಕೊರಳು ಕೊರೆಯುವ ಕಬ್ಬಿಣದ ಸರಪಳಿಗಿಂತ ಅನಂತ ಹಾಕಿದ್ದ ಬಟ್ಟೆಯ ಸರಪಳಿ ಹಿತವಾಗಿತ್ತು. ಇಲ್ಲಿಯ ಗೂಡು ಅಲ್ಲಿಯದಕ್ಕಿಂತ ತಂಪಾಗಿತ್ತು, ಯಾಕೆಂದರೆ ಪಕ್ಕದಲ್ಲೇ ಮರವೊಂದಿತ್ತು. ಹತ್ತಿರದಲ್ಲಿ ಗಾರ್ಡನ್ ಇರಲಿಲ್ಲವಾದ್ದರಿಂದ ಸ್ವಲ್ಪ ದೂರದಲ್ಲಿರುವ ಗಾರ್ಡನ್ ಗೆ ಕಾರಿನಲ್ಲೇ ರಾಜಾನನ್ನು ಕರೆದುಕೊಂಡು ಹೋಗುತ್ತಿದ್ದದ್ದು ರಾಜನಿಗೆ ಹೆಚ್ಚಿನ ಮರ್ಯಾದೆಯನ್ನು ಕೊಟ್ಟಿತ್ತು.
ಆದರೆ, ಹೀಗೆ ಒಂದು ದಿನ, ಸಂಜೆ ಕಳೆದು ರಾತ್ರಿಯಾದರೂ ಹೊಸ ಯಜಮಾನ ಇನ್ನೂ ಮನೆಗೆ ಬರಲಿಲ್ಲವೆನ್ನುವದು ರಾಜನ ಆತಂಕಕ್ಕೆ ಕಾರಣವಾಗಿತ್ತು. ಬೆಳಿಗ್ಗೆ ಇಟ್ಟು ಹೋಗಿದ್ದ ಆಹಾರ ಖಾಲಿಯಾಗಿತ್ತು. ಹೊಟ್ಟೆ ಎಷ್ಟೋ ದಿನಗಳ ಬಳಿಕ ಮತ್ತೇ ಗುರುಗುಡತೊಡಗಿತ್ತು. ಕಾದು ಕಾದು ಸುಸ್ತಾಗಿ ನಿದ್ದೆಯೂ ಬರದೆ ಅತ್ತಿಂದಿತ್ತ ಹೊರಳಾಡಿಯೇ ರಾತ್ರಿ ಕಳೆದಿತ್ತು. ಅನಂತ ಮನೆಗೆ ಬಂದಿದ್ದು ಮರುದಿನ ಬೆಳಿಗ್ಗೆಯೇ. ರಾಜನಿಗೆ ಯಾಕೋ ತನ್ನ ಹಳೆಯ ಯಜಮಾನ ನೆನಪಾಗತೊಡಗಿದ. ಅವನು ತಡ ಮಾಡಿದರೂ ಊಟವಾದರೂ ಹಾಕುತ್ತಿದ್ದ, ಇಡೀ ರಾತ್ರಿ ಉಪವಾಸ ಕೆಡವಿದ್ದ ಹೊಸ ಯಜಮಾನನ ವರ್ತನೆ ತನಗೆ ಯಾಕೋ ಸರಿ ಕಾಣಲಿಲ್ಲ. ಎಲ್ಲಿ ಹೋದರೂ ತನ್ನ ಕಷ್ಟಗಳಿಗೆ ಕೊನೆಯೇ ಇಲ್ಲ ಅಂತ ರಾಜಾನಿಗೆ ಮನದಟ್ಟಾಗಿತ್ತು.
ಮಾಮುಲಿಯಾಗಿ ಟೀ ಕಪ್ಪು ಹೀಡಿದು ಹೊರಗೆ ಬಂದ ಯಜಮಾನ ಫೋನಿನಲ್ಲಿ ಯರೊಟ್ಟಿಗೋ ಮಾತಾಡುತ್ತಿದ್ದ. ತಾನು ಇಡೀ ರಾತ್ರಿ ಉಪವಾಸವಿದ್ದ ಬಗ್ಗೆ ಇವನಿಗೆ ಎಳ್ಳಷ್ಟು ಕಾಳಾಜಿಯೇ ಇಲ್ಲವೆ? ರಾಜಾ ಅವನ ದುರುಗುಟ್ಟಿ ನೋಡುತ್ತಿದ್ದ. ಆಗಾಗ ಕುಂಯ್ ಗುಟ್ಟಿ ಅವನ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದ.
ಅನಂತ ಮಾತ್ರ ತನ್ನದೇ ಲೋಕದಲ್ಲಿ ಮುಳುಗಿದ್ದ. ಫೋನಿನಲ್ಲಿ ತನ್ನ ಯಾರೋ ಮಿತ್ರನಿಗೆ ತನಗೆ ಹೊಸ ಕಂಪನಿಯಲಿ ಕೆಲಸ ಸಿಕ್ಕ ಬಗ್ಗೆ ಹೇಳಿಕೊಳ್ಳುತ್ತಿದ್ದ. ಅಲ್ಲಿ ಇಲ್ಲಿಗಿಂತ ಚೆನ್ನಾಗಿರುವುದೆಂತಲೂ, ಸಂಬಳವೂ ಸಿಕ್ಕಾಪಟ್ಟೆ ಜಾಸ್ತಿಯೆಂತಲೂ ಹೇಳುತ್ತಿದ್ದ. ತನ್ನ ಕಷ್ಟಗಳಿಗಿನ್ನು ಮುಕ್ತಿ. ತಾನು ಆರಾಮವಾಗಿರಬಹುದೆಂದು ಖುಷಿ ಹಂಚಿಕೊಳ್ಳುತ್ತಿದ್ದ. ಮನುಷ್ಯರ ಒಡನಾಟದಿಂದಲೋ ಏನೊ ರಾಜಾನಿಗೆ ಅವರ ಮಾತು ತಿಳಿಯದಿದ್ದರೂ ಭಾವನೆಗಳು ಅರ್ಥವಾಗುತ್ತಿದ್ದವು. ಅದರ ಕಿವಿ ನಿಮಿರಿದವು. ಅವನು ಫೋನಲ್ಲಿ ಹೇಳುತ್ತಿದ್ದುದನ್ನು ಲಕ್ಶ್ಯಗೊಟ್ಟು ಕೇಳುತ್ತಿತ್ತು. …. ಅನಂತ ಹಾಗೆ ಮಾತನಾಡುತ್ತಾ ಅಕಸ್ಮಾತಾಗಿ ತನ್ನನ್ನೇ ದಿಟ್ಟಿಸಿ ನೋಡುತ್ತಿದ್ದ ರಾಜಾನ ಮುಖ ಕಂಡು, ಕೂಲಂಕುಷವಾಗಿ ಗಮನಿಸಿದ. ಬೆರಗುಗಣ್ಣಿನಿಂದ ಮತ್ತೆ ಮತ್ತೆ ಅದರ ಮುಖವನ್ನೇ ನೋಡಿದ, ರಾಜಾ ನಗುತ್ತಿರುವಂತೆ ಅವನಿಗೆ ಭಾಸವಾಗಿ ಬೆಚ್ಚಿಬಿದ್ದ!
******
Gud1 Guruprasad 🙂
ರೂಪಾ, ಕತೆಯನ್ನು ಓದಿ ಮೆಚ್ಚಿದ್ದಕ್ಕೆ ಖುಷಿಯಾಯ್ತು!
Tumba chennagide.
ದೀಪಾ, ಕತೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು!
Tumba chennagide sir… hidisthu
ರುಕ್ಮಿಣಿ, ನಿಮಗೆ ಕತೆ ಇಷ್ಟವಾಗಿದ್ದು ಕೇಳಿ ಖುಷಿಯಾಯ್ತು!
Bhala cholo ada Guru:) The analogy is remarkable.
ಅಂಬಿಕಾ, ಕತೆಯನ್ನು ಹಾಗೂ ಪಾತ್ರಗಳ ಸಾಮ್ಯತೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು!
ಚೆನ್ನಾಗಿದೆ.ನಾಯಿ ನಕ್ಕಿರಬಹುದು.
ಕುಸುಮಬಾಲೆ, ಕತೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು!
ಕಥೆ ತುಂಬಾ ಚನ್ನಾಗಿದೆ. ಎರಡು ಎಳೆಗಳನ್ನು ವಿಂಗಡಿಸಿರುವ ರೀತಿ, ನಿರೂಪಣೆ ಸೊಗಸಾಗಿ ಮೂಡಿಬಂದಿದೆ.
ವಾಸುಕಿ, ಕತೆ ಹಾಗೂ ನಿರೂಪಣಾ ಶೈಲಿ ನಿಮಗೆ ಇಷ್ಟವಾಗಿದ್ದು ಓದಿ ಖುಷಿಯಾಯ್ತು!
ಚೆನ್ನಾಗಿದೆ ಗುರುಪ್ರಸಾದ್ ಜೀ…ನಿಮ್ಮ ಕಥೆ…. ತುಂಬಾ ನಾಜೂಕಾಗಿ ಪಾತ್ರಗಳನ್ನು ಹೋಲಿಕೆ ಮಾಡಿದ್ದೀರಾ ಮತ್ತು ಪರಿಸ್ಥಿತಿಯ ವ್ಯಂಗವನ್ನೂ ಸಹ…
ಅಮರ್ ದೀಪ್, ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು!
ಹೊಸ ಮಾಲೀಕನಾದ ಅನಂತ ನಿಗೂ ನನಗೂ ಎನೂ ಭೇಧ ಇಲ್ಲಾ ಎಂದು ತಿಳಿದಾ ರಾಜಾ ನಗುವಂತೆ ಕಂಡಿದ್ದು ,ಈ ಕಥೆಯಲ್ಲಿನ ಮನೋಜ್ಞ ವಿಶಯ. ಕಥೆಯ ಹೆಣೆದ ರೀತಿ ನಾಯಿಯ ಅನುಭಾವ ಅನುಭವಿಸಿ ಕವಿ ಬರೆದಂತೆ ಇದೆ . ಆದುದರಿಂದ ಕವಿ ಬಗ್ಗೆ ಅಭಿಮಾನ ಮೂಡುತ್ತದೆ . ರಾಜಾ ನಾಯಿ ಪಾತ್ರಕ್ಕೆ ಮೂಲತಃ ನಾಯಿ ಸ್ವರೂಪದ ಭಾವನೆಗಳಿಗೂ ಧಕ್ಕೆ ಆದಾಗ್ಯೂ ಮನುಷ್ಯ ಬುದ್ದಿಯ-ಸಂಕುಚಿತ ರಾಜಾ ಪಾತ್ರದ ನಾಯಿಗೆ ನ್ಯಾಯ ದೊರಕಿದೆ .
ಶ್ರೀಧರ್ ಗುರುಗಳೆ, ನಿಮ್ಮ ವಿಮರ್ಷೆ ಎಂದಿನಂತೆ ಸೂಪರ್! ಕವಿಯಂತೆ ಬರೆದಿದ್ದೇನೆ ಎಂದಿದ್ದು ಓದಿ ಇನ್ನೂ ಖುಷಿಯಾಯ್ತು. ನಿಮ್ಮ ಪ್ರೋತ್ಸಾಹಕ್ಕೆ ಋಣಿ!
ಚೆನ್ನಾಗಿದೆ. ಪರಿಕಲ್ಪನೆ ಹಾಗೂ ನಿರೂಪಣಾ ಶೈಲಿ ಇಷ್ಟ ಆಯ್ತು.
KLK, ಕತೆಯನ್ನು ಹಾಗೂ ನಿರೂಪಣಾ ಶೈಲಿಯನ್ನೂ ಮೆಚ್ಚಿದ್ದಕ್ಕೆ ಧನ್ಯವಾದಗಳು!
Last part was too good !
Enjoyed a lot. Thank you
ವೆಂಕಟೇಶ, ನೀವು ಕತೆಯನ್ನು ಮೆಚ್ಚಿ ಅನಂದಿಸಿದ್ದು ಓದಿ ಖುಷಿಯಾಯ್ತು!
ತಲೆಬರಹ ನೋಡಿ ವಿಚಿತ್ರ ಅನಿಸಿದ್ದು ಖರೆ
ಆದರ ಕತಿ ಬೇಷ್ ಅದರಿಪಾ..ಅಭಿನಂದನೆಗಳು…
ದೇಸಾಯ್ರ, ವಿಚಿತ್ರ ತಲೆಬರಹ ಓದುಗರನ್ನು ಓದಲು ಪ್ರೇರೇಪಿಸಲಿ ಅಂತ ಈ ಟೈಟಲ್ ಇಟ್ಟೆ. ನಿಮ್ಮ ಪ್ರೊತ್ಸಾಹಕ್ಕೆ ನಾನು ಋಣಿ!
ಕತೆ ಇಷ್ಟವಾಯ್ತು ಗುರುಪ್ರಸಾದ್ರೆ.. ಸಿನಿಮಾದಲ್ಲೊಬ್ರು ಗುರುಪ್ರಸಾದ್.. ಎದ್ದೇಳು ಮಂಜುನಾಥ, ಮಠದಂತಹ ವಿಭಿನ್ನ ಚಿತ್ರಗಳನ್ನು ನಿರ್ಮಿಸಿದರೆ ನೀವು ಗುರುಪ್ರಸಾದ್ ಕುರ್ತಕೋಟಿ.. ಐಟಿಕೂಲಿ ಅನಂತನ ದಿನಬೆಳಗಾಗೋ ಅದೇ ಅವಾಂತರಗಳನ್ನ, ಸಿದ್ದಣ್ಣನ ಸಾಧಾರಣ ಬಾಳನ್ನ ನಾಯಿಯ ಬಾಯಲ್ಲಿ ಹೋಲಿಸಿದ ಪರಿ ಇಷ್ಟವಾಯ್ತು.. ಸಖತ್ತಾಗಿದೆ ಕತೆ 🙂
ಪ್ರಶಸ್ತಿ, ಆ ಗುರುಪ್ರಸಾದರು ದೊಡ್ಡವ್ರು ಬಿಡ್ರೀ! 🙂 … ಕತೆಯನ್ನು ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು!
ಗುರು ಭಾಯ್ ಕಥಿ ನಿರುಪಿಸಿದ್ದ ರೀತಿ ಛೋಲೊ ಅದ. ನಾಯಿ ಮತ್ತು ಮನುಶ್ಯರ ನಡವಳಿಕೆ ಬಗ್ಗೆ ಬರದ್ದ ಛೋಲೊ ಅನಸ್ತು.
ಅನಂತ, ಕತೆಯ ನಿರೂಪಣೆ ಮೆಚ್ಚಿದ್ದಕ್ಕೆ ಖುಷಿಯಾಯ್ತು!
ತಡ ರಾತ್ರಿ ಮನೆಗೆ ಬಂದು ನಿಮ್ಮೀ ಕತೆ ಓದಿ ಇನ್ನೇನು ಆಫೀಸ್ ನ ಲ್ಯಾಪಟಾಪ್ ಎತ್ತ್ಕೊಳ್ಳಬೇಕು (ಮಿಕ್ಕಿರುವ ಕೆಲಸ ಮುಗಿಸಲು) ಅಂದುಕೊಳ್ಳುತ್ತಿದ್ದೆ. ಕತೆ ಓದಿ ಮುಗೀತಿದ್ದಂತೆ ನನ್ನ ಕಂಪ್ಯೂಟರ್ ನನ್ನ ನೋಡಿ ನಕ್ಕಂತಾಯ್ತು.
ಅದು ಭ್ರಮೆ ಅಂದ್ಕೋತಿನಿ 🙂
ಕತೆ ಸೊಗಸಾಗಿ ಹೆಣೆದಿದ್ದೀರ.
ಸಂತೋಷ, ಹ್ಹ ಹ್ಹ ನಿಮ್ಮ ಕಮೆಂಟು ಸೊಗಸಾಗಿದೆ! ಲ್ಯಾಪ್ ಟಾಪ್ ನಕ್ಕಿದ್ದು ಭ್ರಮೆ ಇರಲಿಕ್ಕಿಲ್ಲ ಬಿಡಿ, ಅದು ತುಂಬಾ ಸಲ ನನಗೂ ಅನುಭವವಾಗಿದೆ :). ಮೆಚ್ಚಿದ್ದಕ್ಕೆ ಧನ್ಯವಾದಗಳು!
Nice Post…. Loved it 🙂
ಸಾಮ್ಜಿ, ಕತೆ ಮೆಚ್ಚಿದ್ದಕ್ಕೆ ಧನ್ಯವಾದಗಳು!
Very nice ! Super parallels !
Guess its dedicated to corporates 😀
Keep it up .. Hope to read more such stuff …
ರಾಘು, ಕತೆ ಮೆಚ್ಚಿದ್ದಕ್ಕೆ ಧನ್ಯವಾದಗಳು! ಹೌದು ಇದನ್ನು ಕಾರ್ಪೋರೇಟ್ ಮಿತ್ರರಿಗೆ ಅರ್ಪಣೆ ಮಾಡಬಹುದು 🙂
Namaskarri Guru…
Masta baradeeri… story flow is excellent
hidden comparision …. namma kelasakka naayi paadigu enu difference illa..
excellent story flow 🙂
ಮಹೇಶ, ನಿಮ್ಮ ಮೆಚ್ಚುಗೆಯ ಪ್ರೋತ್ಸಾಹದಾಯಕ ಅನಿಸಿಕೆಗಳನ್ನು ಓದಿ ಖುಷಿಯಾಯ್ತು!
lekhana thumba chennagide 🙂
ವಿದ್ಯಾ, ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು!
Good story.congratulations
ಗವಿಸ್ವಾಮಿ, ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು!
Super ree….nimma ee neerupana shaili ge nanna salaam:-)!!!!
ವಿರೂಪಾಕ್ಷ, ಕತೆಯ ನಿರೂಪಣೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು!
Super!! Nayipadige Kannadi hididantide. 🙂
ರಮೇಶ, ಕತೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು!
channagide..gamanisabeku namma naayiyu nagutto anta..:)
ಮಮತಾ, ಕತೆ ಮೆಚ್ಚಿದ್ದಕ್ಕೆ ಧನ್ಯವಾದಗಳು!
Super sir 🙂
ಸಂತೋಷ್, ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು!
Well narrated ಗುರುಗಳೇ.
ನಾರಾಯಣ, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು!
Awesome Narration Guru sir 🙂
ಪ್ರದೀಪ, ನಿರೂಪಣೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು!
ಈ ಬರಹ ಓದಬೇಕು ಅಂತ ಅನಿಸಿದ್ದು ಇದರ ತಲೆ ಬರಹ ಓದಿದಾಗಲೇ.. ನಾಯಿ ನಗುವುದುಂಟೇ ಅಂತ ವಿಚಿತ್ರವೆನಿಸಿದರೂ ಅದ್ಭುತ ಗೂಢಾರ್ಥವಿರುವ ಬರಹ. ಎರಡು ಕವಲು ದಾರಿಗಳು ಮುಂದೆ ಕೂಡಿಕೊಂಡ ಅನುಭವ. ಸಹಜವಾಗಿ ಬದಲಾಗುವ ಮಾನವನ ಗುಣವನ್ನ ಚೆನ್ನಾಗಿ ಬಿಂಬಿಸಿದ್ದೀರಿ.
ಉತ್ತಮ ಬರಹ.
ಶುಭವಾಗಲಿ.
ಗಣೇಶ ಖರೆ (ವನಸುಮ), ಕತೆಯನ್ನು ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಖುಷಿಯಾಯ್ತು! ತುಂಬಾ ಸಲ ತಲೆಬರಹ ಓದಲು ಪ್ರೇರೇಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಆ ಪ್ರೇರೇಪಣೆಯಿಂದ ಮೊದಲಿನ ಸಾಲು ಓದಲು ತೊಡಗಿದ ಓದುಗನ ಕುತೂಹಲವನ್ನು ಕತೆಯ ಕೊನೆಯವರೆಗೂ ಮುಂದುವರಿಯುವಂತೆ ಮಾಡಿ ಕೊನೆಗೆ ತಣಿಸುವುದು ತುಂಬಾ ಕಷ್ಟದ ಕೆಲಸ. ಆ ಒಂದು ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ. ಧನ್ಯವಾದಗಳು!
Thumbaa chennagide. Real time experience. 🙂
ಪ್ರಕಾಶ, ಕತೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು!
ಒಳ್ಳೆ ನಾಯಿ ಪಾಡಾಯ್ತು ಅಂತ ಎಸ್ಟೋ IT ಸ್ನೇಹಿತರು ಹೇಳಿದ್ದನ್ನ ಕೇಳ್ತಾ ಇದ್ವಿ, ಪರಿಸ್ತಿತಿಯನ್ನು ತುಂಬಾನೇ ಚೆನ್ನಾಗಿ ಹೊಲಿಸಿದ್ದೀರ!
ನಿರ್ಮಲಾ, ಕತೆ ಮೆಚ್ಚಿದ್ದಕ್ಕೆ ಧನ್ಯವಾದಗಳು! ಈ ಪಾಡು ಬರೀ IT ಯವರದಷ್ಟೇ ಅಲ್ಲ ಬಿಡಿ. 🙂
ಕತೆಯ ಮುಕ್ತಾಯ ತುಂಬಾ ಹಿಡಿಸಿತು. Good one sir
ಸುಹಾಸಿನಿ, ಕಥೆ ನಿಮಗೆ ಇಷ್ಟವಾಗಿದ್ದು ಕೇಳಿ ಖುಷಿಯಾಯ್ತು! ಧನ್ಯವಾದಗಳು!