ಮಕ್ಕಳಿಗೆ ಯಾವಾಗಲೂ ಮನುಷ್ಯರಿಗಿಂತ ಪ್ರಾಣಿಗಳೇ ಇಷ್ಟವಾಗುವುದು. ಇನ್ನೂ ನಡೆಯಲು ಬಾರದ ಪುಟ್ಟು ಮಕ್ಕಳನ್ನು ಕೇಳಿ ನೋಡಿ. ’ಮನೆಯಲ್ಲಿ ಆಡಲಿಕ್ಕೆ ಆಟದ ಸಾಮಾನು ಕೊಡ್ತೀನಿ, ತಿನ್ನೋದಿಕ್ಕೆ ತಿಂಡಿ ಕೊಡ್ತೀನಿ’ ಎಂದೆಲ್ಲಾ ಗೋಗರೆದರೂ ಬಾರದಿರುವ ಮಕ್ಕಳು ’ಮನೆಯಲ್ಲಿ ನಾಯಿ ಮರಿ ಇದೆ, ಬೆಕ್ಕಿನ ಮರಿ ಇದೆ, ಪುಟಾಣಿ ಉಂಬೆ ಕರು ಇದೆ ಬರ್ತೀಯಾ’ ಅಂದ ಕೂಡಲೇ ಅಮ್ಮನ ತೆಕ್ಕೆ ಬಿಡಿಸಿಕೊಂಡು ಚಾಚಿರುವ ನಮ್ಮ ಕೈಗೆ ಹಾರುತ್ತವೆ. ಬೇರೆಯವರ ಮನೆಯಲ್ಲಿ ಸಾಕಿದ ಪ್ರಾಣಿಗಳನ್ನು ನೋಡಿ ಸಂತಸ ಪಡುವುದೇನೋ ಸರಿ. ಆದರೆ ನಮ್ಮಲ್ಲೂ ಅದು ಬೇಕು ಅಂತ ಹಠ ಹಿಡಿದು ನಮ್ಮನ್ನೂ ಗೋಳುಗುಟ್ಟಿಸುತ್ತವೆ, ಕೆಲವೊಮ್ಮೆ ನಮ್ಮ ಮಕ್ಕಳ ಹಠಕ್ಕೆ ತಲೆ ಬಾಗಿಸಲೇ ಬೇಕಾಗುತ್ತದೆ. ಮತ್ತಿನ ಅವಾಂತರಗಳಿಗೆ ತಲೆ ಒಡ್ಡಲೇ ಬೇಕಾಗುತ್ತದೆ.
ಮೊನ್ನೆ ಬೆಳ್ಳಂಬೆಳಗ್ಗೆ ನಮ್ಮಲ್ಲಿಗೆ ಪಕ್ಕದ ಮನೆಯ ಕೇಶಣ್ಣ ಬಂದ. ಡ್ರೆಸ್ಸ್ ನೋಡಿದರೆ ಎಲ್ಲೋ ಹೊರಗೆ ಹೊರಟಂತೆ ಇತ್ತು. ನಾನಿನ್ನೂ ದೋಸೆಯ ಕಾವಲಿಯನ್ನು ಒಲೆಯ ಮೇಲೆ ಇಡುವ ಹೊತ್ತೂ ಆಗಿರಲಿಲ್ಲ.
’ನಿನ್ನ ಗಂಡ ತೋಟದಿಂದ ಬರ್ಲಿಲ್ವಾ’ ಅಂದ.
’ಇಲ್ಲಣ್ಣ.. ಈಗ ಹೋಗಿದ್ದಷ್ಟೇ.. ಸ್ಪಿಂಕ್ಲರ್ ಎಲ್ಲಾ ಬದಲಿಸಿ ಬರಲು ಕಡಿಮೆ ಅಂದ್ರೆ ಇನ್ನೊಂದರ್ಧ ಗಂಟೆ ಬೇಕು.. ನೀನು ಕೂತ್ಕೋ. ದೋಸೆ ಮಾಡ್ತೇನೆ’ ಎಂದೆ.
’ಎಂತಾ ದೋಸೆ?
’ಇನ್ನೆಂತ ದೋಸೆ.. ನಮ್ಮ ಮನೆ ದೇವರು ನೀರು ದೋಸೆ. ನಿಂಗೂ ಇಷ್ಟ ಅಲ್ವಾ’ಅಂದೆ.
’ಅದಾದ್ರೆ ಸರಿ. ಮೆತ್ತಗಿರುತ್ತೆ.. ತಿನ್ಬೋದು. ಮನೆಯಲ್ಲಿ ಇವತ್ತು ಗೋಧಿ ತರಿ ರೊಟ್ಟಿ. ಒಂದು ತುಂಡೂ ತಿನ್ನಲಾಗಿಲ್ಲ ನಂಗೆ. ಈಗ ಅರ್ಜೆಂಟೇನಿಲ್ಲ .. ಅವ್ನೂ ತೋಟದಿಂದ ಬರ್ಲಿ.. ಒಟ್ಟಿಗೆ ತಿಂದ್ರಾಯ್ತು..’ ಎಂದ.
ನಾನು ಆಗಲೇ ಅವನನ್ನು ಸೂಕ್ಷ್ಮವಾಗಿ ಗಮನಿಸಿದ್ದು. ಒಂದು ಕೈಯಲ್ಲಿ ಹಿಡಿದ ಬಿಳಿ ಬಣ್ಣದ ಕರ್ಚೀಫೊಂದು ಅವನ ಬಾಯಿಯನ್ನು ಕಾಣದಂತೆ ಅಡ್ಡಲಾಗಿ ಮುಚ್ಚಿತ್ತು. ಆಗೀಗ ಇನ್ನೊಂದು ಕೈ ದವಡೆಯನ್ನು ಸವರಿಕೊಳ್ಳುತ್ತಿತ್ತು.
’ಎಂತಾಯ್ತೋ ಮಾರಾಯಾ… ಹಲ್ಲು ನೋವಾ..’ .. ಎಂದು ಕಾಳಜಿಯಿಂದ ಕೇಳಿದೆ.
’ಹಲ್ಲಿದ್ದರಲ್ವಾ ನೋವಾಗಲಿಕ್ಕೆ’ ಎಂದು ಕೊಂಚ ಬೇಸರದಿಂದಲೂ ಕೊಂಚ ಕೋಪದಿಂದಲೂ ಹೇಳಿ ಅಡ್ಡ ಹಿಡಿದಿದ್ದ ಕರ್ಚೀಫಿನ ಕೈಯನ್ನು ಸರಿಸಿದ.
ಯಾರೂ ಆಸೂಯೆ ಪಡಬಹುದಾದಂತಹ ಮುತ್ತು ಪೋಣಿಸಿದಂತೆ ಕಾಣುತ್ತಿದ್ದ ದಂತಪಂಕ್ತಿ ಅವನದ್ದು.
ಈಗ ನೋಡಿದರೆ ಒಂದೇ ಒಂದು ಹಲ್ಲಿಲ್ಲದೆ ಬಾಯಿ ಬೊಕ್ಕು ಬಾಯಿಯಾಗಿತ್ತು.
’ಅರ್ರೇ.. ಇದೇನಾಯ್ತೋ.. ಮೊನ್ನೆ ಮೊನ್ನೆಯಷ್ಟೇ ಮೇಲಿನ ಮನೆ ಶಂಕರಣ್ಣನ ಮನೆ ಒಕ್ಕಲಿನ ದಿನ ಅಲ್ವಾ ನಿನ್ನನ್ನು ನೋಡಿದ್ದು. ಆಗ ಇದ್ದ ಎಲ್ಲಾ ಹಲ್ಲುಗಳು ಈಗೆಲ್ಲಿ ಹೋಯ್ತೋ’ ಎಂದೆ.
’ಹುಂ.. ಅದೊಂದು ದೊಡ್ಡ ಕಥೆ.. ಎಲ್ಲಿ ಆ ಎಲೆ ಅಡಿಕೆ ತಟ್ಟೆ ಇತ್ಲಾಗಿ ಕೊಡು. ಹಾಗೇ ಆ ಅಡಿಕೆ ಗುದ್ದುವ ಕಲ್ಲೂ ಕೊಡು.. ನಿನ್ನ ಗಂಡ ಬರೋವರೆಗೆ ಒಂದು ಕವಳ ಹಾಕ್ತೀನಿ..’ ಎಂದ.
ಬಾಯಿ ತುಂಬಾ ಕವಳ ತುಂಬಿಕೊಂಡು ಮಾತು ಶುರು ಮಾಡಿದ.
’ನಮ್ಮನೆಯಲ್ಲಿದ್ದ ನಾಯಿ ಜಾಕ್ ಲಾರಿ ಗುದ್ದಿ ಸತ್ತು ಹೋದ ಮೇಲೆ ನಾಯಿ ಮರಿಗಳ ಸಹವಾಸವೇ ಬೇಡ ಅಂತ ಸುಮ್ಮನಿದ್ದುಬಿಟ್ಟಿದ್ದೆ. ಸ್ವಲ್ಪ ದಿನ ಮೊದಲು ನನ್ನ ಪುಳ್ಳಿ ’ಭಾಷ್ಯಾ’ ಅವಳ ಮಾವನ ಮನೆಯಿಂದ ಹಠ ಮಾಡಿ ನಾಯಿ ಮರಿ ಒಂದನ್ನು ಹೊತ್ತುಕೊಂಡು ಬಂದಿದ್ದಳು. ನಂಗೇನೋ ನಾಯಿ ಬೇಡ ಅಂತ ಇತ್ತು. ಆದ್ರೆ ನಾನೇನು ಅದನ್ನು ಸಾಕುವ ಕೆಲ್ಸ ವಹಿಸಿಕೊಳ್ಳೋದಿಲ್ಲ ಅಲ್ವಾ ಹಾಗಾಗಿ ಇರ್ಲಿ ಅಂತ ಸುಮ್ಮನಾಗಿದ್ದೆ. ಅದರ ಹೆಸರು ಪೊರ್ಕಿ ಅಂತೆ.. ಎಂತಾ ಹೆಸ್ರು ಪುಳ್ಳಿ ಇದು ಅಂದ್ರೆ ಅದು ಲೇಟೆಸ್ಟು ಹೆಸರಜ್ಜಾ.. ಅಂದಿದ್ದಳಪ್ಪ.
ಎಂತಾ ಮುದ್ದಾದ ಮರಿ ಗೊತ್ತಾ.. ಪುಳ್ಳಿಯಂತೂ ಇಡೀ ದಿನ ಅದರ ಜೊತೆಯೇ ಆಟ ಆಡೋದು. ಜೊತೆಗೊಂದು ಹಟ್ಟಿಯಲ್ಲಿರುವ ಪುಟ್ಟ ಕರು ಬೇರೆ.. ಅದಕ್ಕಿನ್ನು ಗೊರ್ಕಿ, ಚುರ್ಕಿ ಅಂತೆಲ್ಲಾ ನಾಮಕರಣ ಮಾಡುವ ಮೊದಲೇ ನಾನು ’ರನ್ನ’ ಅಂತ ಕನ್ನಡದ ಹೆಸರಿಟ್ಟುಬಿಟ್ಟಿದ್ದೆ.
ಅವ್ಳೀಗ ಎಲ್ ಕೆ ಜಿ ಅಲ್ವಾ.. ಶಾಲೆಯಲ್ಲಿ ಅವಳಿಗೆ ಹೇಳಿಕೊಟ್ಟ ಇಂಗ್ಲೀಷು ನಾಯಿಗೂ ಕಲಿಸಿ ಕೊಟ್ಟಿದ್ದಾಳೆ. ನಿಜ ಹೇಳಿದ್ರೆ ನಂಬ್ತೀಯೋ ಇಲ್ವೋ ॒ಅದು ಈಗ ಬಾ ಅಂದ್ರೆ ಬರೋದೇ ಇಲ್ಲ.. ’ ಕಮ್ ಹಿಯರ್’ ಅಂದ್ರೆ ಬಾಲ ಅಲ್ಲಾಡಿಸಿಕೊಂಡು ಬರುತ್ತೆ. ಗೋ, ಈಟ್, ಸಿಟ್, ಸ್ಟಾಂಡ್,ಪಿಕ್, ಡ್ರಿಂಕ್, .. ಹೀಗೆ ಇವೆಲ್ಲಾ ಅರ್ಥ ಆಗಿ ಹೇಳಿದ ಹಾಗೆ ಮಾಡಲೂ ಮಾಡುತ್ತೆ..’ ಎಂದು ತಮ್ಮ ನಾಯಿ ಮರಿಯ ಗುಣಗಳನ್ನು ಹೊಗಳಲು ಶುರು ಮಾಡಿದರು.
’ಅದೆಲ್ಲಾ ಸರಿ ಅಣ್ಣಾ.. ಆದ್ರೆ ನಿನ್ನ ಹಲ್ಲಿಗೂ ನಾಯಿ ಮರಿಗೂ ಏನು ಸಂಬಂಧ’ ಅಂದೆ.
’ನಿಲ್ಲಮ್ಮಾ.. ಅದೇ ವಿಷಯಕ್ಕೆ ಬರ್ತಾ ಇದ್ದೀನಿ.. ಮೊನ್ನೆ ಮನೆಯಲ್ಲಿ ಎಲ್ಲರೂ ನಮ್ಮ ಭೀಮಣ್ಣನ ಮೂರನೇ ಮಗನ ಮದುವೆ ಹೋಗಿದ್ರಲ್ವಾ… ಹೊರಡೋ ಗಡಿಬಿಡಿಯಲ್ಲಿ ಮನೆ ಹೆಂಗಸರು ಹಟ್ಟಿ ಬಾಗಿಲನ್ನೇ ಸರಿಯಾಗಿ ಹಾಕಿರಲಿಲ್ಲ ಅನ್ಸುತ್ತೆ. ನಾನು ಸ್ನಾನ ಮಾಡಿ ಪೂಜೆ ಮುಗಿಸಿ ಹೊರ ಬರೋ ಅಷ್ಟರಲ್ಲಿ ನಮ್ಮ ರನ್ನ ಹಟ್ಟಿಯಿಂದ ಹೊರ ಬಂದು ಅಂಗಳದ ತುದಿಯಲ್ಲಿದ್ದ ಹರಿವೆ ಸಾಲನ್ನೆಲ್ಲಾ ಮೆಟ್ಟಿ ಹಾಕಿ ಮುಂದೆ ಹೋಗಿ ಅದೇನೋ ಹೂವಿನ ಗಿಡದ ಚಿಗುರನ್ನು ತಿಂತಾ ಇತ್ತು. ನಂಗೆ ಸಿಟ್ಟು ಬಂದು ಒಂದು ಪೆಟ್ಟು ಕೊಟ್ಟೆ. ಅದು ಹಟ್ಟಿಯ ಒಳಗೆ ಹೋಗುವ ಬದಲು ಗದ್ದೆ ಬದುವಿನ ಕಡೆಗೆ ಓಡಿತು. ರನ್ನಾ.. ಅಂತ ಕರೆದೆ.. ಎಲ್ಲಿತ್ತೋ ಏನೋ ನಮ್ಮ ಪೊರ್ಕಿ.. ಅದು ಕರುವಿನ ಹಿಂದೆ ಓಡತೊಡಗಿತು. ಕರು ಇನ್ನಷ್ಟು ಜೋರಾಗಿ ಓಡಿತು. ನಾನು ಅವೆರಡನ್ನು ಹಿಡಿದು ತರಲು ಅವುಗಳ ಹಿಂದೆ ರಭಸದಲ್ಲಿ ಓಡತೊಡಗಿದೆ.
ಓಡುವಾಗ ಕಾಲಿಗೇನೋ ತಗಲಿ ಗದ್ದೆ ಬದುವಿನಲ್ಲಿ ಕಾಲು ಜಾರಿ ಬಡಾಲ್ ಅಂತ ಮಗುಚಿ ಬಿದ್ದೆ. ಬಿದ್ದ ರಭಸಕ್ಕೆ ನನ್ನ ಬಾಯೊಳಗಿದ್ದ ಹಲ್ಲು ಸೆಟ್ಟು ಜಾರಿ ದೂರಕ್ಕೆ ಬಿದ್ದಿತು. ನಾನು ಬಿದ್ದ ಶಬ್ಧಕ್ಕೆ ತಿರುಗಿದ ನಾಯಿ ಮತ್ತು ಕರು ನನ್ನ ಹತ್ತಿರ ಬಂದವು. ನಾಯಿ ಮರಿ ನನ್ನ ಹಲ್ಲು ಸೆಟ್ಟಿನ ಕಡೆಗೆ ಕಾಲು ಹಾಕುವುದನ್ನು ನೋಡಿ ಥಕ್.. ಎಂದು ಬಯ್ದೆ. ಅದು ಪಕ್ಕನೆ ನನ್ನ ಹಲ್ಲು ಸೆಟ್ಟನ್ನು ಕಚ್ಚಿಕೊಂಡು ಮನೆಯ ಕಡೆ ಓಡಿತು. ಹೇಗೂ ಮನೆಯ ಕಡೆಗೆ ತಿರುಗಿದ್ದ ಕರುವಿನ ಬೆನ್ನಿಗೊಂದು ಕೊಟ್ಟೆ. ಅದು ನಾಯಿ ಮರಿಯ ಹಿಂದಿನಿಂದ ಮನೆಯ ಕಡೆಗೆ ಓಡತೊಡಗಿತು. ನಾನು ಹೇಗೋ ಎದ್ದು ನಿಧಾನಕ್ಕೆ ಮನೆ ಕಡೆ ನಡೆಯುವಾಗ ದಾರಿಯಲ್ಲಿ ಕಂಡ ಅವರಿವರಿಗೆಲ್ಲಾ ನನ್ನ ಬೊಕ್ಕು ಬಾಯಿ ಕಂಡಿತು. ಎಲ್ಲರೂ ವಿಚಾರಿಸುವವರೇ.. ಇಷ್ಟರವರೆಗೆ ನನಗಿರುವುದು ನನ್ನದೇ ಹಲ್ಲಲ್ಲ ಎಂಬುದು ನನ್ನ ಹೆಂಡತಿಗೆ ಮಾತ್ರ ಗೊತ್ತಿದ್ದ ರಹಸ್ಯ ಈ ನಾಯಿ ಮರಿಯಿಂದಾಗಿ ಲೋಕಕ್ಕೆ ತಿಳಿಯಿತು. ಮನೆಯ ಸದಸ್ಯರು ಬಂದ ಮೇಲೆ ಎಲ್ಲರಿಗೂ ಸರಿಯಾಗಿ ಬಯ್ದೆ. ಆದರೆ ನನ್ನ ಮೊಮ್ಮಕ್ಕಳು ಅದು ’ನಿಮ್ಮದೇ ಫಾಲ್ಟ್ ಅಜ್ಜ.. ಡೊಂಟ್ ಬ್ಲೇಮ್ ಅಸ್..’ ಅಂತ ನಂಗೇ ಪಾಠ ಮಾಡಿದ್ರು. ನಾನು ರನ್ನಾ.. ಅಂತ ಕಿರುಚಿದ್ದನ್ನು ನಾಯಿಮರಿ ರನ್ ಅಂದರೆ ಓಡು ಅಂತ ತಿಳಿದುಕೊಂಡು ಓಡಿದ್ದಂತೆ. ಮತ್ತೆ ನಾನು ಬಿದ್ದಿದ್ದಾಗ ಥಕ್ ಅಂದಿದ್ದು ನನ್ನ ಹಲ್ಲಿಲ್ಲದ ಬಾಯಲ್ಲಿ ಪಿಕ್ ಅಂತ ಕೇಳಿಸಿ ಅದು ಹಲ್ಲು ಸೆಟ್ಟನ್ನು ಎತ್ತಿಕೊಂಡು ಬಂದದ್ದಂತೆ.. ಒಟ್ಟಾರೆ ನನ್ನ ಗ್ರಹಚಾರ ಸರಿ ಇಲ್ಲ.. ಇವತ್ತು ನಿನ್ನ ಗಂಡ ಹೇಗೂ ಪೇಟೆಯ ಕಡೆಗೆ ಕಾರಲ್ಲಿ ಹೋಗಲಿಕ್ಕಿದೆ ಅಂತ ಗೊತ್ತಾಗಿ ಬಂದೆ. ನನಗೂ ಪೇಟೆಯಲ್ಲಿ ಹಲ್ಲಿನ ಡಾಕ್ಟ್ರ ಹತ್ರ ಹೋಗ್ಲಿಕ್ಕಿದೆ. ನೋಡು ಅಲ್ಲಿ ನಿನ್ನ ಗಂಡ ಬರ್ತಾ ಇದ್ದಾನೆ. ಬೇಗ ಬೇಗ ದೋಸೆ ಮಾಡು.. ಸ್ವಲ್ಪ ಮೊಸರು, ಉಪ್ಪಿನಕಾಯಿಯೂ ಇರಲಿ ಚಟ್ನಿಯ ಜೊತೆ.. ಕರ್ಮ .. ಕರ್ಮ.. ಆಗಿನಿಂದ ಜಗೀತಾ ಇದ್ದೀನಿ ಈ ಕವಳ.. ಇನ್ನೂ ಒಂದು ಚೂರು ಕೂಡಾ ಸಣ್ಣ ಆಗಿಲ್ಲ..’ ಎಂದು ಅಂಗಳದ ಬದಿಗೆ ಹೋಗಿ ಪಿಚಕ್ಕೆಂದು ಉಗುಳಿ ಬಂದ.
ನಾನು ನನ್ನ ಕಾಯಕಕ್ಕೆ ಮರಳಿದೆ.
-ಅನಿತಾ ನರೇಶ್ ಮಂಚಿ.
*****
ಮಸ್ತ್ ಇದೆ ಮೇಡಂ, ಹಲ್ಸೆಟ್ ಸಿಕ್ರೇಟ್ ಮತ್ತು ಇಂಗ್ಲೀಷ್ ಮಾತು ಕೇಳುವ ನಾಯಿ ಕತೆ..
ರನ್ನಾ-ರನ್ : ಥಕ್-ಪಿಕ್. ಮಸ್ತ್ ಇದೆ ಪೊರ್ಕಿಯ ಇಂಗ್ಲೀಷ್ ಜ್ನಾನ.
🙂
ಕೇಶಣ್ಣನ ಹಲ್ಲು ನಾಯಿಯ ಆಂಗ್ಲ ಜ್ಞಾನವೂ ಚೆನ್ನಾಗಿದೆ.
ಲೇಖನ ಚೆಂದಿದೆ. ನಿರೂಪಣೆ ಬಹಳ ಇಷ್ಟ ಆಯಿತು ಅನಿತಕ್ಕಾವ್ರೆ:-)