ನನ್ನ ನಾದಿನಿ ರುಕ್ಕುನ ಮಗನ್ನ ಹುಟ್ಟಿದ ಹಬ್ಬದ ಪಾರ್ಟಿಗೆ ಹೋಗಿದ್ದೆ. ಮನಿ ಟೆರೇಸ್ ಮ್ಯಾಲೆನ ಎಲ್ಲಾ ಅರೇಂಜ್ಮೆಂಟ್ ಮಾಡಿದ್ಲು. ಎಲ್ಲಾ ಕಡೆ ಲೈಟಿನ ಸರಾ ಹಾಕಿದ್ರು. ಅದ್ರ ಟೆರೇಸ್ ತುಂಬ ಅಲ್ಲಲ್ಲೇ ಅಲಂಕಾರಕ್ಕಂತ ಪ್ರಾಣಿಗೋಳ ಗೊಂಬಿ ನಿಲ್ಲಿಸಿದ್ರು. ನೋಡಿದ್ರ ಯಾವದೋ ಝೂ ಒಳಗ ಬಂಧಂಗ ಅನಿಸ್ತಿತ್ತು. ಯಾಕೊ ವಿಚಿತ್ರ ಅನಿಸಿದ್ರು, ಸಣ್ಣ ಹುಡುಗರಿಗೆ ಪ್ರಾಣಿ ಅಂದ್ರ ಭಾಳ ಸೇರತಾವ ಅದಕ್ಕ ಇರಬಹುದು ಅಂತ ಅನ್ಕೊಂಡೆ. ಯಾಕಂದ್ರ ನನ್ನ ಮಗಾನೂ ಪ್ರಾಣಿ ಪ್ರಿಯನ ಇದ್ದಾನ. ಸಣ್ಣಾಂವ ಇದ್ದಾಗ ನಮ್ಮತ್ತಿಯವರು ಕೂಸು ತಿನ್ಲಿ ಅಂತ ಬೇಸನ್ ಉಂಡಿ ಕೊಟ್ರ ಅದನ್ನ ಒಯ್ದು ಓಣ್ಯಾಗ ಅಡ್ಯಾಡೊ ಹಂದಿ ಬಾಯಾಗ ಇಟ್ಟ ತಿನಿಸಿ ಬಂದ ಶೂರಾ ನನ್ನ ಮಗಾ. ದೊಡ್ಡಾಂವ ಆದಿಂದ ಏನಾಗತಿ ಅಂತ ಕೇಳಿದ್ದಕ್ಕ “ಹಂಬಾ ಡಾಕ್ಟರ್” (ದನದ್ದ ಡಾಕ್ಟರ್) ಆಗತೇನಿ ಅಂತಿದ್ದಾ. ಅದಕ್ಕ ಆವತ್ತಿನ ಬರ್ಥಡೇ ಅರೇಂಜಮೆಂಟ್ಸ್ ಎಲ್ಲಾ ನೋಡಿ ಹಿಂಗಾ ಏನರೆ ಇರಬಹುದು ಅನಕೊಂಡೆ. ಮುಂದ ಸ್ವಲ್ಪ ಹೊತ್ತಿನ್ಯಾಗ ಎಲ್ಲಾರೂ ಬಂದಮ್ಯಾಲೆ ಫಂಕ್ಶ್ಯನ್ ಶುರು ಆತು. ಕೇಕ್ ತಂದು ನಡು ಟೇಬಲ್ ಮ್ಯಾಲಿಟ್ಟು ಮ್ಯಾಲಿನ ಮುಚ್ಚಳಾ ತಗದ್ರ ಅಲ್ಲೆ ದೊಡ್ದದೊಂದ “ಡೈನಾಸರಸ್ ” ದು ಕೇಕ್ ಇತ್ತು. ಅದರ ಸುತ್ತಲೂ ಬ್ಯಾರೆ ಬ್ಯಾರೆ ಪ್ರಾಣಿಗೋಳ ಕೇಕ್ ಇದ್ವು. ಇದ್ಯಾಕೊ ಅತೀ ಅನಿಸಿ ಅಲ್ಲೆ ನಿಂತಿದ್ದ ನಾದಿನಿ ಗಂಡಾ ಪಾಂಡುನ್ನ ಹಿಂಗ್ಯಾಕ ಅಂತ ಕೇಳಿದ್ದಕ್ಕ ಆಂವಾ ದೈನಾಸಪಟಗೊಂಡ. “ಅಕ್ಕಾ, ಏನ ಹೇಳ್ಳಿರಿ ಈ ಅವ್ವಾ-ಮಗನ್ನ ಪ್ರಾಣಿ ಪ್ರೇಮದ ನಡುವ ಹಿಂಡಿ ಹಿಪ್ಪಿ ಆಗಿ ಮನಶ್ಯಾ ಇದ್ದಾಂವ ಹೋಗಿ ಹುಚ್ಚ ಮಂಗ್ಯಾ ಆಗೇನಿ” ಅಂದಾ. ಅದೂ ಖರೆ ಬಿಡ್ರಿ ನಮ್ಮ ನಾದಿನಿ ರುಕ್ಕು ಸ್ವಲ್ಪ ಜೋರನ ಇದ್ದಾಳ. ಇಕಿ ಗಂಡನ್ನ ಜಬರಿಸಿ ಜಬರಿಸಿ “ಅಂಡು-ಪಂಡು” ಮಾಡಿ ಕೂಡಿಸಿಬಿಟ್ಟಾಳ.
ಆವತ್ತ ಯಾರರ ಕೇಳಿದ್ರ ಸಾಕ ಅಂತ ಕಾಯಲಿಕತ್ತ ಪಾಂಡುಗ ನಾ ಕೇಳಿದ್ದ ತಡಾ ಹೇಳ್ಳಿಕ್ಕೆ ಶುರು ಮಾಡಿದಾ. ” ರುಕ್ಕುಗ ಮದಲಿಂದನು ಈ ಪ್ರಾಣಿಗೊಳನ ಸಾಕೊ ಹುಚ್ಚು, ಮನ್ಯಾಗಿನ ಮಂದಿಗೆ ಲಗೂ ಮಾಡಿ ಹೊಟ್ಟಿಗೆ ಹಾಕಲಿಲ್ಲಂದ್ರು, ಸಾಕಿದ್ದ ಪ್ರಾಣಿಗೊಳ ಅಷ್ಟ ಅಲ್ಲಾ, ಓಣ್ಯಾಗಿನ ಉಂಡಾಡಿ ಅಲೆಯೊ ಪ್ರಾಣಿಗೊಳಿಗೂ ಬಾ ಬಾ ಅಂತ ಕರದು ತಿನ್ಲಿಕ್ಕೆ ಹಾಕತಾಳ. ನಾಲ್ಕ ತಿಂಗಳ ಹಿಂದ ಎಂಟು ಸಾವಿರ ರೂಪಾಯಿ ಕೊಟ್ಟು ಛೊಲೊ ಜಾತಿ ನಾಯಿ ತಂದಿದ್ಲು. ಅದಕ್ಕ ರಾಜೋಪಚಾರ ನಡಿತಿತ್ತು. ಒಂದೊಂದ ಸಲಾ ಆ ನಾಯಿ ದೌಲತ್ತ ನೋಡಿ, ಮನಿ ಯಜಮಾನಾ ಪಾಂಡುನೊ ಅಥವಾ ಅದೊ ಅಂತ ಸಂಶಯ ಆಗತಿತ್ತು. ಆ ಮಟ್ಟಕ್ಕ ಮೇರಿತಿತ್ತು. ಹಿಂಗಾ ಒಂದ ದಿನಾ ಅದಕ್ಕ ಏನೊ ಆರಾಮ ಇಲ್ಲಧಂಗ ಆಗಿ ಡಾಕ್ಟರ ಕಡೆ ದಿನಾ ಆಟೋದಾಗನ ಕರಕೊಂಡ ಹೋಗಿ ಬರತಿದ್ಲು. ಒಂದ ದಿನಾ ಗೇಟ್ ಬಾಗಲಾ ತಗದಾಗ ಮನಿಮುಂದ ಇದ್ದ ಯಾವದೊ ಆಟೊದಾಗ ಹತ್ತಿ ಓಡಿಹೋಗಿಬಿಟ್ಟಿತ್ತ. ಎಲ್ಲೆ ಹುಡಕಿದ್ರು ಸಿಗಲಿಲ್ಲಾ. ಈ ಸುದ್ದಿ ಕೇಳಿ ಅವರ ಮನಿ ಬಾಜುಕಿನ ಡಿಸೋಜಾ ಅಂಕಲ್ “ಅಲ್ರಿ ಪಾಂಡು ನಿಮ್ಮನ್ಯಾಗ ಅನ್ನಾ ತುಪ್ಪಾ ಮೇಂತ್ಯದ ಹಿಟ್ಟು , ಮಸರು ಅನ್ನಾ ತಿನ್ನಕೋತ ಇದ್ರು ಸತ್ಥಂಗ ಅಂತ ಆ ನಾಯಿ ಓಡಿ ಹೋಗಿ ಸೂಸೈಡ್ ಮಾಡಕೊಂಡಿರ್ಬೇಕಸ್ತೈತಿ. ಇಂಥಾ ಜಾತಿ ನಾಯಿ ತಂದ್ರ ಆವನ್ನ ಭಾಳ ಖಯಾಲಿಯಿಂದ ನೋಡ್ಕೊಬೇಕರಿ. ವಾರಕ್ಕ ಮೂರ ಸಲಾ ನಾನ್-ವೆಜ್ ತಿನಸಬೇಕು. ಅದು ಬಿಟ್ಟು ಖಾಲಿ ಮಮ್ಮು ತಿನಿಸಿ ಚಂದಪ್ಪನ್ನ ತೋರಿಸಿದ್ರ ಹೆಂಗ ರಿ” ಅಂದಾ. ಅದೇನರ ಇರಲಿ ಪಾಂಡುಗಂತು ಮನ್ಯಾಗ ತನ್ನ ಕಾಂಪಿಟೇಟರ್ ಇಲ್ಲ ಅಂತ ಒಂಥರಾ ಸಮಾಧಾನ ಆತು. ಆದ್ರ ಎಂಟ ಸಾವಿರದ್ದ ನಾಯಿ ಹಿಂಬಾಲೆ ಹತ್ತಸಾವಿರ ಖರ್ಚ ಆಗಿದ್ವು. ಅದನ್ನ ನೋಡಿ ರುಕ್ಕು ಈ ಪ್ರಾಣಿ ಸಾಕೊ ಗೋಜಿಗೆ ಹೋಗಲಾರದ ಓಣ್ಯಾಗಿ ಉಂಡಾಡಿ ಪ್ರಾಣಿಗೋಳ ಮ್ಯಾಲೆನ ತನ್ನ ಪ್ರೀತಿ ತೋರಿಸ್ಕೊಂಡ ಸುಮ್ನಾಗತಿದ್ಲು. ಹಿಂಗಾಗಿ ಆಕಳಾ, ನಾಯಿ, ಬೆಕ್ಕು ಯಾವಾಗಲೂ ನಮ್ಮ ಮನಿ ಮುಂದನ ಠಳಾಯಿಸ್ತಿದ್ವು. ರುಕ್ಕು ಎಲ್ಲಾ ಪ್ರಾಣಿಗೋಳಿಗು ಒಂದೊಂದ ಹೆಸರಿಟ್ಟಿದ್ಲು. ನಾಯಿಗೆ ರಾಕ್ಯಾ, ಬೆಕ್ಕಿಗೆ ಪಿಂಟ್ಯಾ, ಆಕಳಿಗೆ ತುಂಗಾ ಅಂತ. ಪುಣ್ಯಾಕ್ಕ ನಾಯಿ, ಬೆಕ್ಕು ಗಂಡ ಜಾತಿವು ಇದ್ವು ಇಲ್ಲಾಂದ್ರ ಇವು ಮನಿ ಕಂಪೌಂಡಿನ್ಯಾಗ ಏನರೆ ಪುತು ಪುತು ಹಡಿಲಿಕತ್ತಿದ್ವು ಅಂದ್ರ ಅವುತರ ಬಾಣಂತನದ್ದ ಖರ್ಚನು ಪಾಂಡುನ ಸೋಸಬೇಕತಿತ್ತು. ಇಲ್ಲಾ ಅವೆಲ್ಲಾ ಮರಿ ಹಾಕಲಾರಧಂಗ ಆಪರೇಶನ್ ಮಾಡಿಸ್ಕೊಂಡ ಬರಬೇಕಾಗತಿತ್ತು. ಹಿಂದಿನ ಜನ್ಮದ್ದ ಪುಣ್ಯಾದ ಫಲಾ, ಪಾಂಡು ಇದೊಂದರಿಂದ ಬಚಾವ ಆಗಿದ್ದಾ. ಈ ಪ್ರಾಣಿಗೋಳ ಟೋಳಿ ರುಕ್ಕು ಕರದ ಕೂಡಲೆ ಎಲ್ಲಿದ್ರು ಓಡಿಬರತಿದ್ವು. ಅವು ಬರಲಿಲ್ಲಂದ್ರ “ಯಾಕೊ ರಾಕ್ಯಾ ಬಂದೇ ಇಲ್ಲಾ. ಉಪ್ಪಿಟ್ಟ ಅಂದ್ರ ಆಂವಗ ಭಾಳ ಸೇರತದ. ಅದಕ್ಕಂತ ಬ್ಯಾರೆ ತಗದ ಇಟ್ಟಿದ್ದೆ ಅಂತ ಚಡಪಡಿಸತಿದ್ಲು. ಆವಾಗೆಲ್ಲಾ ಪಾಂಡು ಮುಂದ ಅನಲಾರದಕ್ಕ ಮನಸ್ನ್ಯಾಗನ” ತಿನ್ನಸ ತಿನ್ನಸ, ನಿಮ್ಮಪ್ಪ ಮನಿ ಗಂಟೆನ ಹೋಗತದ” ಅಂತ ಅನ್ಕೊಂಡ ಸುಮ್ನಾಗತಿದ್ದಾ. “ಪಿಂಟ್ಯಾ ಕಾಣಸವಲ್ಲಾ, ಯಾವದರ ಪಿಂಕಿ ಹಿಂದ ಹೋಗಿರಬೇಕಂತ” ಅಂದು ಅವುಗೊಳನೆಲ್ಲಾ ಮಿಸ್ ಮಾಡ್ಕೋತಿದ್ಲು. ಇಕಿ ಜೋಡಿ ಕೂಡಿ ಮಗಾನು ಈ ಪ್ರಾಣಿಗೋಳ ಜೋಡಿ ವಿಶೇಷ ಸಂಬಂಧ ಬೀಳಿಸ್ಕೊಂಡಿದ್ದಾ. ರುಕ್ಕು ಸೇರ ಅಂದ್ರ ಇಂವಾ ಸವ್ವಾಸೇರ ಇದ್ದಾ. ಆಕಳಕ್ಕ ತುಂಗಾ ಅಕ್ಕ ಅಂತಿದ್ದಾ, ಬೆಕ್ಕಿಗೆ ಪಿಂಟ್ಯಾ ಅಣ್ಣಾ ಅಂತಿದ್ದಾ. ಆದರ ನಾಯಿಗೆ ಮಾತ್ರ ರಾಕ್ಯಾ ಕಾಕಾ ಅಂತಿದ್ದಾ. ಹಂಗಂದಾಗ ಮಾತ್ರ ರುಕ್ಕು ಕಿಸಿಕಿಸಿ ನಕ್ಕಂಘ ಅನಿಸಿ ಪಾಂಡುಗ ಭಾಳ ಕಸಿವಿಸಿ ಆಗತಿತ್ತು. ಮಾಮಾ ಅಂದಿದ್ರ ಏನ ಇವರಜ್ಜನ ಮನಿ ಗಂಟ ಹೋಗತಿತ್ತೇನು ಅಂತ ಸಿಡಿಮಿಡಿ ಮಾಡತಿದ್ದಾ. ಹಿಂಗ ಈ ಪ್ರಾಣಿಗೊಳೆಲ್ಲಾ ವಾರಾನ್ನದ ಮನಿ ಹಿಡಕೊಂಡವರಂಘ ಪಾಂಡ್ಯಾನ ಮನ್ಯಾಗಿನ ಅಡಗಿ ಎಲ್ಲಾ ತಿಂದ ತೇಗತಿದ್ವು. ರುಕ್ಕು ಎಲ್ಲೆರ ಹೋಂಟ್ಲಂದ್ರ ಸಾಕು ನಾಯಿ ಬೆಕ್ಕು ಎರಡು ಆಕಿ ಹಿಂದ ಬಾಡಿಗಾರ್ಡನಂಘ ಫಾಲೋ ಮಾಡತಿದ್ವು.
ಪಾಪ ಈ ಪ್ರಾಣಿಗೋಳಿಗೆ ಎಲ್ಲಾರು ಬರೇ ತಂಗಳದ್ದ ಮತ್ತ ಹಳಸಿದ್ದ ಹಾಕತಾರ. ಪಾಪ ಅವುಕು ಜೀವ ಅಲ್ಲೇನು, ಬಿಸಿ ಬಿಸಿ ರುಚಿ ರುಚಿ ಆವು ಯಾವಾಗ ಕಾಣಬೇಕಂತ ಮರಾ ಮರಾ ಮರುಗಿ ಮನ್ಯಾಗ ಮಾಡಿದ್ದ ಬಿಸಿ ಬಿಸಿ ಅಡಗಿನ ಅವುಕ್ಕು ಹಾಕತಿದ್ಲು. ಒಂದಿನಾ ಮಗಾ ಟಿವ್ಹಿ ನೋಡಬೇಕಾದ್ರ ಮ್ಯಾಗ್ಗಿ ನ್ಯೂಡಲ್ ದು ಅಡ್ವರಟೈಸಮೆಂಟ್ ಬರಲಿಕತ್ತಿತ್ತು. ಅದಾ ಟೈಮಿಗೆ ಬರೊಬ್ಬರಿ ಆಕಳಾ ಅವರ ಮನಿ ಮುಂದ ಬಂತು. ಆವಾಗ ರುಕ್ಕುನ ’ರಣಧೀರ ಕಂಠೀರವ ಮಗಾ’ ಅಮ್ಮಾ ತುಂಗಾ ಅಕ್ಕಾ ನ್ಯೂಡಲ್ ತಿನ್ನಂಗಿಲ್ಲೆನು ಅಂತ ಕೇಳಿದ್ದಕ್ಕ, ರುಕ್ಕು ಹೌದಲ್ಲಾ ಪಾಪ ಅವಕ್ಕ್ಯಾರ ಇಂಥಾವೆಲ್ಲಾ ಮಾಡಿ ಹಾಕಬೇಕ, ಇವ್ಯಾವಾಗ ಕಾಣಬೇಕಂತ ಪಟ್ಟನ ಎದ್ದಾಕಿನ “ಬಸ್ ದೋ ಮಿನಟ್ ಮೇ” ಅಂತ ಆಕಳಿಗೆ ಹೇಳಿ ಒಳಗ ಬಂದು ಒಂದ ಫ್ಯಾಮೀಲಿ ಪ್ಯಾಕಿನ ಮ್ಯಾಗ್ಗಿ ಕುದಿಸಿ ತಂದ ಆಕಳದ ಮುಂದ ಸುರುವಿದಳು. ಅದರ ಮ್ಯಾಲೆ ಒಂದಿಷ್ಟ ಟೋಮ್ಯಾಟೊ ಸಾಸ್ ತಂದ ಹಾಕಿದ್ಲು. ಪಾಪ ಆಕಳಿಗೆ ಅದನ್ನ ಹೇಂಗ ತಿನಬೇಕಂತ ಗೊತ್ತಾಗಲಾರದ. ರುಕ್ಕುನ ಮಾರಿ ಒಂದಸಲಾ, ಮ್ಯಾಗ್ಗಿ ಕಡೆ ಒಂದಸಲಾನೋಡ್ಲಿಕತ್ತು. ಅದನ್ನ ನೋಡಿ ಸಿಟ್ಟಿಗೆದ್ದ ಪಾಂಡು ಅದಕ್ಕ ಒಂದ ಪೂರ್ಕರ ತಂದು ಕೋಡು ತಿನಲಿಕ್ಕೆ ಅಂತ್ ಹಂಗಿಸಿ ತನ್ನ ಹೊಟ್ಟ್ಯಾಗಿನ ಸಂಕಟಾ ಕಡಮಿ ಮಾಡಕೊಂಡಾ. ಆ ತುಂಗವ್ವಾ ತಡಕಾಡಿ ಹೆಣಿಗ್ಯಾಡಿ ಕಡೀಕು ತಿಂದ ಮುಗಸ್ತು. ಒಂದ ಮಜಾ ಅಂದ್ರ ಮುಂದ ಆ ಆಕಳಾ ಅವರ ಮನಿ ಕಡೆ ಬರೋದ ಕಡಿಮಿ ಮಾಡ್ತು. ಹಿಂಗ ಈಕಿ ಪ್ರಾಣಿ ಪ್ರೇಮಾ ಪಾಂಡುನ್ನ ಕುತ್ತಗಿಗೆ ಉರಲಾಗಿ ಕಾಡಲಿಕತ್ತಿತ್ತು. ಇವೆಲ್ಲಾ ರುಕ್ಕುನ ಪ್ರಾಣಿ ಬಳಗಾ ಒಂದೊಂದ ಸಲಾ ಈಕಿ ಇರಲಾರದಾಗ ಮನಿ ಮುಂದ ಬಂದಾಗ, ಮನಿ ಓನರ್ ಒಣಗಸಲಿಕ್ಕೆ ಇಟ್ಟ ಅವಲಕ್ಕಿ, ಬ್ಯಾಳಿ, ಕಾಳು ಎಲ್ಲಾ ತಿಂದ ತಿಂದ ಹೋಗಲಿಕತ್ತುವು. ಮನಿ ಓನರ್ ಪಾಂಡುಗ ಮನಿ ಬಿಡ್ರಿ ಅಂತ ಡೈರೆಕ್ಟ ಹೇಳಾಲಾರದ ಯದ್ವಾ ತದ್ವಾ ಮನಿ ಬಾಡಗಿ ಜಾಸ್ತಿ ಮಾಡಿ “ಕೊಡು ಇಲ್ಲಾಂದ್ರ ಬಿಡು” ಅಂತ ಗಂಟ ಬಿದ್ನಂತ. ಪಾಂಡುಗ ಚಿಂತಿ ಹತ್ತಿ ಗೇಳೆಯಾನ ಕೇಳಿದ್ರ ಆಂವಾ “ಪಾಂಡ್ಯಾ ನೆಲದ ಮ್ಯಾಲಿನ ಮನಿ ನೋಡಬ್ಯಾಡಾ ಈ ಸಲಾ” ಅಂದ್ನಂತ. ಅದಕ್ಕ ಪಾಂಡು “ಹಂಗಂದ್ರ ಏನ ಚಂದಪ್ಪನ ಮ್ಯಾಲೆ ಮನಿ ಮಾಡಲೇನ” ಅಂತ ಕೇಳಿದ್ನಂತ. ಅಲ್ಲೆ ಮಾಡಿದ್ರು ತನ್ನ ಹೇಂಡ್ತಿ ಚಂದಪ್ಪನ ಕರದ “ಚಂದಪ್ಪ ಚಂದಪ್ಪ ಚಾರಿಕಾಯಿ, ಬಟ್ಟಲ ತುಂಬ ಬಾರಿ ಕಾಯಿ ” ಅಂತ ಹಾಡ ಹೇಳಿ ಮೊಸರು ಅನ್ನಾ ಉಣಸಾಕಿನ ಅಂತ ಗೊತ್ತಿತ್ತ ಆಂವಗ. ಕಡೀಕೆ ಗೆಳೆಯಾ ಒಂದ ಐಡಿಯಾ ಕೊಟ್ಟಾ ಅದೇನಂದ್ರ “ಅಪಾರ್ಟಮೇಂಟಿನ್ಯಾಗ ಲಾಸ್ಟ ಅಂತಸ್ತಿನ್ಯಾಗ ಮನಿ ಹಿಡಿ ಅಂದ್ರ ಈ ಪ್ರಾಣಿಗೋಳ ಕಾಟಾ ಇರುದಿಲ್ಲಾ” ಅಂದಾ. ಪಾಂಡುಗ ಈ ಮಾತು ಅಗದಿ ಬರೊಬ್ಬರಿ ಅನ್ನಿಸಿ ಲಗೇಚ ಒಂದ ಅಪಾರ್ಟಮೇಂಟಿನ್ಯಾಗ ಮನಿ ನೋಡಿ ಶಿಫ್ಟ ಆದಾ. ಒಂದ ಸ್ವಲ್ಪ ದಿನಾ ರುಕ್ಕು ಹಲಬಿದ್ಲು, ಮ್ಯಾಲೆ ಯಾರು ಬರಂಗಿಲ್ಲಾ. ಇಲ್ಲೆ ಟೈಮ್ ಪಾಸ್ ಆಗಂಗಿಲ್ಲಾ ಅಂತ ಆದರ ಪಾಂಡುಗ ಮಾತ್ರ ಒಳಗಿಂದೊಳಗ ಭಾಳ ಖುಷಿ ಆಗಿತ್ತು. ನಿಶ್ಚಿಂತಿಯಿಂದ ಇದ್ದಾ. ಆದ್ರ ಅದೇನ ಭಾಳದಿನಾ ಇದ್ದಿಲ್ಲಾ. ಒಂದ ದಿನಾ ಮುಂಝಾನೆ ರುಕ್ಕು ಟೆರೆಸ್ಸ್ ಮ್ಯಾಲಿಂದ ಕೈಯ್ಯಾಗ ಪ್ಲೇಟ ಹಿಡಕೊಂಡ ಇಳದು ಬರಲಿಕತ್ತಿದ್ಲು. ಪಾಂಡು ನೋಡಿ ಅದೇನ ಅಂತ ಕೇಳಿದ್ದಕ್ಕ “ನಿನ್ನೆ ಏಕಾದಶಿ ಸಾಬುದಾನಿ ಖಿಚಡಿ ಮಾಡಿದ್ದು ಉಳದಿತ್ತು. ಅದಕ್ಕ ಟೆರೇಸ್ಸಿನ ಕುಂಬಿ ಮ್ಯಾಲೆ ಹಾಕಿ ಬಂದೆ, ಪಾಪ ಪಕ್ಷಿಗೊಳ ತಿಂತಾವ ಅಂದ್ಲು. ಅದನ್ನ ಕೇಳಿ ಪಾಂಡುನ್ನ ಹೊಟ್ಟಿ ರುಮ್ಮ್ ಅಂತು. ಇಷ್ಟ ದಿನಾ ಪ್ರಾಣಿ ಪ್ರಾಣಿ ಅಂತ ಝೂ ಸಾಕಿದ್ದಾತು, ಇನ್ನ ಪಕ್ಷಿಧಾಮಾ ಒಂದ ಬಾಕಿ ಅದ ಅಂತ ಹ್ಯಾಪ್ ಮಾರಿ ಮಾಡ್ಕೊಂಡ ಒಳಗ ಹೋದಾ.” ಇಷ್ಟೆಲ್ಲಾ ಪಾಂಡುನ ಗೊಳ ಕೇಳಿ “ಪಾಪಾ ಪಾಂಡು” ಅನಿಸ್ತು.
ಅಷ್ಟೊತ್ತಿಗೆ ಆಗಲೇ ಕೇಕ್ ಕಟ ಮಾಡಿದ್ರು. ರುಕ್ಕು ನಮಗೂ ’ಡೈನಾಸರಸ್’ ದು ಬಾಲಾ ಕಟ್ಟ ಮಾಡಿ ಕೊಟ್ಲು. ಎಲ್ಲಾರು “ಜ್ಯೂರಾಸಿಕ್ ಪಾರ್ಕ್” ನ್ಯಾಗ ಕೂತು “ಡೈನಾಸರ್” ನ ಹರಕೊಂಡ ತಿನಲಿಕತ್ತೇವೆನೊ ಅನಿಸ್ಲಿಕತ್ತಿತ್ತು. ಹೆಂಡ್ತಿ ಅನ್ನೊ ಪ್ರಾಣಿ ಕೈಯ್ಯಾಗ ಏಗಲಿಕ್ಕೆ ಪಾಂಡುಗ ಶಕ್ತಿ ಕೊಡಪ್ಪಾ ದೇವರ ಅಂತ ಬೇಡಕೊಂಡ. ಅಂತೂ ಇಂತೂ ರುಕ್ಕುನ ಮನ್ಯಾಗಿನ “ನಾನ್-ವೆಜ್ ಬರ್ಥಡೇ ಪಾರ್ಟಿ” ಮುಗಿಸಿಕೊಂಡ ಮನಿಗೆ ಬಂದ್ವಿ…
nam uttar karnatakada basheli tumba chenag baridiri..tq