ನಾನ್ಯಾವ ಜಾತಿ?: ಹೃದಯಶಿವ


ಅದೇಕೋ ನೆನಪಾಗುತ್ತಿದೆ. ಐದಾರು ವರ್ಷಗಳ ಹಿಂದೆ ನಾನು ಕಂಡ ಆ ನಾಲ್ವರು ಯುವಕರ ತಂಡ. ನನ್ನನ್ನು ಭೇಟಿ ಮಾಡಲು ಬಂದಿದ್ದರು. ಎಲ್ಲರೂ ಹೆಚ್ಚು ಕಮ್ಮಿ ಇಪ್ಪತ್ತು-ಇಪ್ಪತ್ತೆರಡರ ವಯೋಮಾನದವರು. ಅವರಿವರ ಕೈ ಕಾಲು ಹಿಡಿದು ನಾಲ್ಕು ಕಾಸು ಎತ್ತಿ ಬೆಂಗಳೂರಿನಲ್ಲಿ ತಮ್ಮ ಜಾತಿ ಹೆಸರಿನಲ್ಲಿ ಪುಟ್ಟದೊಂದು ಕಚೇರಿ ಆರಂಭಿಸಿದ್ದವರು. ಚಿಗುರುಮೀಸೆ, ಪ್ರಶಾಂತ ಕಣ್ಣು, ಚೇತೋಹಾರಿ ಮುಖದ ಉತ್ಸಾಹಿ ಹುಡುಗರು. ಕನಕಪುರ, ಮಳವಳ್ಳಿ, ಬನ್ನೂರು ಕಡೆ ಇಂಥವರು ಸಿಗುತ್ತಾರೆ. ಯಾರಿಗೂ ಪುಸ್ತಕಗಳ ನಂಟು ಇದ್ದಂತ್ತಿಲ್ಲ. ನನ್ನನ್ನು ಕಾಣಲೆಂದು ಬಂದರು.

"ಈ ಸಾರಿ ಕನಕಜಯಂತಿಗೆ ನಿಮ್ಮನ್ನು ಸನ್ಮಾನಿಸಬೆಕಿತ್ತು, ಬಂದೆವು. ಎಷ್ಟೇ ಆಗಲಿ ನೀವು ನಮ್ಮೋರು. ಕಾರ್ಯಕ್ರಮಕ್ಕೆ ಬರ್ತೀರಾ ಅಲ್ವಾ ಸಾರ್?" ಅಂದ ಅವರಲ್ಲೊಬ್ಬ. 

"ಹೌದಾ… ಕೂತ್ಕೊಳ್ಳಿ" ಅಂದೆ.

ನೀರವತೆ.

ಸಹಜವಾಗಿ ನನ್ನ ಮನಸು ತೀರಾ ಗಂಭೀರವಾಯಿತು. ಚಿಕ್ಕ ಹುಡುಗರು. ಚೌಕಟ್ಟು ದಾಟದವರು. ಆದ್ಧರಿಂದ ಅವರನ್ನು ಕೇಳಿದೆ, "ನೀವೇನು ಮಾಡಿಕೊಂಡಿದ್ದೀರಿ?"

ಇಬ್ಬರು ಆಟೋ ಓಡಿಸಿದರೆ, ಒಬ್ಬ ಕಾರು ಓಡಿಸುತ್ತಾನೆ; ಸ್ವಜಾತಿಯ ಶಾಸಕನದ್ದು. ಉಳಿದಿಬ್ಬರ ಪೈಕಿ ಒಬ್ಬನದು ಫೈನಾನ್ಸ್ ವ್ಯವಹಾರ. ಮತ್ತೊಬ್ಬನಿಗೆ ಇದೇ ಉದ್ಯೋಗ. 

ಹುಡುಗರು ಮೆಲ್ಲಮೆಲ್ಲ ತಮ್ಮ ವಿಚಾರ ಬಿಚ್ಚಿಡತೊಡಗಿದರು. ಎಲ್ಲರೂ ಬೇರೆ ಬೇರೆ ಊರಿನವರು. ಜಾತಿಯ ಕಾರಣಕ್ಕೆ ಆಕಸ್ಮಿಕವಾಗಿ ಒಂದಾದ ಮನಸುಗಳು. ಒಂದೇ ವಯೋಮಾನದ ಹೆಚ್ಚು ಕಡಿಮೆ ಒಂದೇ ಆಶಯ ಹೊತ್ತ ಮನಸ್ಸಿನವರು. ತಮ್ಮ ಜಾತಿಯ ಜನಕ್ಕಾಗಿ ಏನಾದರು ಮಾಡಲೇಬೇಕು ಎಂದು ನಿರ್ಧರಿಸಿದವರು.

ನನ್ನನ್ನು ಸನ್ಮಾನಕ್ಕೆ ಕರೆಯಲು ಬಂದಿರುವ ನವತರುಣರು.

"ನನಗೇಕೆ ಈ ಸನ್ಮಾನ, ಬೇರೆ ಯಾರನ್ನಾದರೂ ಕರೆದು ಸನ್ಮಾನಿಸಬಹುದಲ್ಲವಾ?" ಎಂದು ಧೃಢವಾಗಿ ಹೇಳಿದೆ. ನನ್ನ ಮಾತಿನಲ್ಲಿ ನನಗೆ ಖಚಿತತೆ ಇತ್ತು. ಅವರಿಗೆ ಹೇಳಬೇಕಾದ್ದು ಬಹಳಷಿದ್ದರೂ, ಆ ಗೋಜಿಗೆ ಹೋಗದೆ ಒಂದೆರಡು ಮಾತಿನಲ್ಲೇ ಮುಗಿಸುವ ಹೆಡ್ಡುತನ ನನ್ನದಾಗಿತ್ತು. ಆದರೂ ಒಂದಿಷ್ಟು ಮಾತುಗಳನ್ನು ಅವರಿಗೆ ಸ್ಪಷ್ಟವಾಗಿ ಹೇಳಬೇಕು ಅನ್ನಿಸಿದ್ದು ಸುಳ್ಳಲ್ಲ.

ನಾನು ಚಿಕ್ಕಂದಿನಲ್ಲೇ ಇಂಥ ಜಾತಿ ವ್ಯಾಮೋಹವನ್ನು ಕಳೆದುಕೊಂಡವನು. ಹೀಗೆ ಜಾತಿಯಾಚೆ ಉಳಿದಾಗಲೆಲ್ಲ ನನಗೆ ಏನೋ ಒಂದು ಸಮಾಧಾನ ದೊರಕಿದಂತಾಗಿದೆ. ಜಗತ್ತು ವಿಶಾಲವಾಗಿ ಕಂಡಿದೆ. ಹಾಗೆಯೇ ಜಾತಿಯ ಹಂಗನ್ನು ಬಿಡುವುದರ ಸಲುವಾಗಿ ಅದೆಷ್ಟೋ ಸಾರಿ ಏನೇನೋ ಅನುಭವಿಸಬೇಕಾಗಿದೆ. ಒಂದು ಘಟನೆ ಹೇಳುತ್ತೇನೆ. ಇದು ಹದಿನೈದು ವರ್ಷದ ಹಿಂದೆ ನಡೆದಿದ್ದು. ನಾನಿನ್ನೂ ಐದನೇ ತರಗತಿಯಲ್ಲಿ ಓದುತ್ತಿದ್ದ ಚೆಡ್ಡಿಹುಡುಗ. ಒಂದು ದಿನ ನನ್ನ ವಿದ್ಯಾರ್ಥಿ ಮಿತ್ರ ಮಲ್ಲೇಶನಾಯ್ಕನ ಗುಡಿಸಲಿಗೆ ಹೋಗಿ ಟೀ ಕುಡಿದಿದ್ದೆ. ಲಂಬಾಣಿಗರ ಮನೆಯಲ್ಲಿ ಟೀ ಕುಡಿದೆನೆಂಬ ಒಂದೇ ಕಾರಣಕ್ಕೆ ನನ್ನ ತಾತ ಕಾಲುಗಳಿಗೆ ಹಗ್ಗ ಕಟ್ಟಿ ತೊಲೆಗೆ ಉಲ್ಟಾ ನೇತು ಹಾಕಿ ನನಗೆ ಮೆಣಸಿನಕಾಯಿ ಹೊಗೆ ಹಾಕಿದ. ಮೈಯೆಲ್ಲಾ ಬಾಸುಂಡೆ ಬರುವ ಹಾಗೆ ಉಳುವಕೋಲಿನಿಂದ ಬಾರಿಸಿದ. ನನ್ನ ಸ್ಥಿತಿ ನೋಡಿ ನನ್ನನ್ನು ಒಂಭತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಅಡಗಿಸಿಕೊಂಡಿದ್ದ ನನ್ನವ್ವನಿಗೆ ಏನಾಗಿರಬೇಡ? ತಾತನೊಂದಿಗೆ ಜಗಳವಾಡಿ ಅತ್ತು, ಕರೆದಿದ್ದಳು. ನಾನೊಬ್ಬ ತಮ್ಮಡಿ ಎಂಬುದಾಗಿಯೂ, ಇಂತಿಂಥ ಜಾತಿಯವರ ಮನೆಗಳಲ್ಲಿ ಉಣ್ಣಬಾರದಾಗಿಯೂ, ಕುಡಿಯಬಾರದಾಗಿಯೂ ತಾತನ ತಾಕೀತು ಇತ್ತು: ಅದನ್ನು ಮೀರಿ ಲಂಬಾಣಿಗರ ಗುಡಿಸಲಿನಲ್ಲಿ ಟೀ ಕುಡಿದಿದ್ದೆ. 

ಈ ಘಟನೆಯಿಂದ ನಾನು ಮತ್ತಷ್ಟು ಗಟ್ಟಿಗನಾದೆ. ಇನ್ನಷ್ಟು ಮೊಂಡನಾದೆ. ಆ ಮೊಂಡುತನ ಯಾವ ಮಟ್ಟದ್ದೆಂದರೆ, ನಮ್ಮೂರ ದಂಡಿನ ಚೆನ್ನಮ್ಮ ಜಾತ್ರೆಯಲ್ಲಿ ಮತ್ತೆ ಮಲ್ಲೇಶನಾಯ್ಕನ ಜೊತೆ ಊಟದ ಪಂಕ್ತಿಯಲ್ಲಿ ಒಟ್ಟಿಗೇ ಕೂರುವಷ್ಟು, ದೊಡ್ಡಪ್ಪ ಮಂಚೇಗೌಡನ ಕೆಂಗಣ್ಣಿಗೆ ಗುರಿಯಾಗುವಷ್ಟು. ಮುಂದೆ ಹೊಸದುರ್ಗದಲ್ಲಿ ಮಿಡಲ್ ಸ್ಕೂಲು ಹೋದಲು ಸೇರಿಕೊಂಡಾಗ ಮಾದಿಗ ಸ್ನೇಹಿತರ ಮನೆಗಳಲ್ಲಿ ಊಟ ಮಾಡುವಷ್ಟು, ಹೊಲೆಗೇರಿ ಮಿತ್ರರ ಮನೆಗಳಲ್ಲಿ ಟೀ ಕುಡಿಯುವಷ್ಟು, ಬೋವಿ ಜಾತಿಗೆ ಸೇರಿದ ವೆಂಕಟೇಶನನ್ನು ಅಚ್ಚಿಕೊಂಡು ಒಟ್ಟಿಗೇ ಉಣ್ಣುವಷ್ಟು, ಹೈಸ್ಕೂಲಿಗೆ ಬರುವ ಕಾಲಕ್ಕೆ ದಲಿತ ಗೆಳೆಯರ ಹೋರಾಟಕ್ಕೆ ಕ್ರಾಂತಿಗೀತೆಗಳನ್ನು ಬರೆದುಕೊಡುವಷ್ಟು. ಹೊಲೆಯರೊಂದಿಗೆ ಹೊಲೆಯನಾಗಿ, ಮಾದಿಗರೊಂದಿಗೆ ಮಾದಿಗನಾಗಿ ನನ್ನ ಮನೆಯವರಿಂದ ಹೊಡೆಸಿಕೊಳ್ಳುವಷ್ಟು, ಗುರುಗಳ ಹತ್ತಿರ ಎಳೆದೊಯ್ದು ನನ್ನ ಹಣೆಗೆ ವಿಭೂತಿ ಹಚ್ಚಿಸುವಷ್ಟು, ಜಾತಿಯ ಸಮಾಧಿ ಮೇಲೆ ಮಾನವತ್ವದ ದೀಪ ಹಚ್ಚಬೇಕೆಂಬ ಹುಂಬತನ ಬೆಳೆಸಿಕೊಳ್ಳುವಷ್ಟು. 

"ನಿಮ್ಮನ್ನು ನೋಯಿಸುವ ಉದ್ದೇಶ ನನಗಿಲ್ಲ" ಎಂದು ಎದುರು ಕೂತಿದ್ದ ನಾಲ್ವರಿಗೂ ಹೇಳಿದೆ. "ಬದುಕು ನೀವು ಅಂದುಕೊಂಡಷ್ಟು ಕಿರಿದಲ್ಲ, ಜಾತಿಯ ಚೌಕಟ್ಟಿನೊಳಗೇ ಅದೆಷ್ಟೋ ಜನ ಉಳಿದು ಅಳಿದುಹೋಗುತ್ತಾರೆ. ಸೀಮಿತ ಮನೋದೃಷ್ಟಿಯವರಾಗುತ್ತಾರೆ. ಅಷ್ಟು ಮಾತ್ರವಲ್ಲ. ಎಷ್ಟೋ ಜನ ತನ್ನ ಜಾತಿ, ತನ್ನ ಕುಲ, ತನ್ನ ದೇವರು ಎಂಬಿತ್ಯಾದಿ ವ್ಯಾಧಿಗಳಿಂದ ತತ್ತರಿಸಿ ಮಣ್ಣು ಸೇರುತ್ತಾರೆ. ಬೇಲಿ ಹಾರದ ಮನಸ್ಥಿತಿಯಿಂದ ತಾವೇ ರೂಪಿಸಿಕೊಂಡ ಸಂಕೊಲೆಗಳ ನಡುವೆ ಜರ್ಜರಿತರಾಗುತ್ತಾರೆ. ಇಂಥವರ ಬಗ್ಗೆ ಯೋಚಿಸುತ್ತಾ ಲೆಕ್ಕ ಹಾಕಿದರೆ ನೆಮ್ಮದಿಯಿಂದಿರುವವರು ತೀರಾ ಕಮ್ಮಿ. ಒಂದು ಬಗೆಯ ಒಳಸಂಚು, ಇನ್ನೊಂದು ಬಗೆಯ ಸ್ವಜನ ಪಕ್ಷಪಾತ, ಮತ್ತೊಂದು ಬಗೆಯ ಆಕ್ರೋಶ, ಅಸಮಾಧಾನ, ಪರಜಾತಿಯವರೆಡೆಗಿನ ದ್ವೇಷ ಇವೆಲ್ಲವೂ ಇವೆ. ಇವುಗಳಿಂದ ನೀವೂ ಹೊರತಲ್ಲ. ಜ್ಜಾತೀಯತೆಯ ಎಲ್ಲ ವಾಸ್ತವಕ್ಕೆ ನೀವೂ ಹತ್ತಿರದವರೇ. ಜಾತೀಯತೆ ವೃತ್ತವೇ ತೀರಾ ಕಿರಿದು ಎಂಬುದನ್ನು ಮೊದಲು ಅರಿತುಕೊಳ್ಳಿ. ಅದೇ ರೀತಿ ಹುಟ್ಟಿನಿಂದ ಮನುಷ್ಯನಿಗೆ ಯಾವ ಜಾತಿಯೂ ಇಲ್ಲ ಎಂಬುದನ್ನೂ ಅರ್ಥಮಾಡಿಕೊಳ್ಳಿ.  ಎಲ್ಲರಂತೆ ಹುಟ್ಟುವ, ಬೆಳೆಯುವ, ಉಣ್ಣುವ, ವಿಸರ್ಜಿಸುವ, ಮಲಗುವ, ಏಳುವ, ಮದುವೆಯಾಗುವ, ಸಂಭೋಗಿಸುವ, ಹುಟ್ಟಿಸುವ, ಸಾಯುವ ಇತ್ಯಾದಿಗಳನ್ನು ನಿರ್ವಹಿಸುವ ಮಾನವ ಅದೇಕೋ ತಾನೇ ತೋಡಿಕೊಂಡ ಈ ಜಾತಿಯೆಂಬ ಹಾಳುಬಾವಿಗೆ ಬೀಳುವ ಪ್ರಯತ್ನವನ್ನು ಆಗಾಗ ಮಾಡುತ್ತಿರುತ್ತಾನೆ- ಇಲ್ಲಿ ಬೇಲಿ ಮುರಿಯುವ, ಗೋಡೆ ಉರುಳಿಸುವ ಹೃದಯ ವೈಶಾಲ್ಯತೆ, ಕಟ್ಟುಪಾಡು, ಕಟ್ಟಳೆಗಳನ್ನು ಧಿಕ್ಕರಿಸಿ ನಿಲ್ಲುವ ಎದೆಗಾರಿಕೆ ಇಲ್ಲದಿದ್ದರೆ ಮನುಷ್ಯ ಮನುಷ್ಯನೆನಿಸಿಕೊಳ್ಳಲು ಕಷ್ಟವಾಗುತ್ತದೆ. ಇಷ್ಟಕ್ಕೂ ನಾವೆಲ್ಲಾ ಮನುಷ್ಯರಾಗಬೇಕಿರುವ ಹಂತದಲ್ಲಿವೆಯೇ ಹೊರತು, ಇನ್ನೂ ಪರಿಪೂರ್ಣ ಮನುಷ್ಯರಾಗಿಲ್ಲ. ಬುದ್ಧನದು, ವಚನಕಾರರದು ಪ್ರಶಂಸಾರ್ಹ ಪ್ರಯತ್ನವಷ್ಟೇ… 

ನನ್ನ ಎದುರು ಕೂತಿದ್ದ ನಾಲ್ವರು ಕಣ್ಣು ಮಿಟುಕಿಸದೆ ನನ್ನ ಮಾತುಗಳನ್ನು ಆಲಿಸುತ್ತಿದ್ದರು.

"ನೀವು ನಿಮ್ಮ ಜಾತಿಯನ್ನು ಮರೆತುಬಿಡಿ ಎನ್ನಲೇ?" ಎಂದು ಪ್ರಶ್ನಿಸಿದೆ. ಅವರು ಪರಸ್ಪರ ಮುಖ ನೋಡಿಕೊಂಡರು. ನಾನೂ ಮುಗುಳ್ನಕ್ಕು ಹೇಳಿದೆ, "ನಮ್ಮ ಹಿರಿಯರು ತಾವು ನಂಬಿಕೊಂಡ ಒಂದಿಷ್ಟು ನಂಬಿಕೆಗಳನ್ನು ನಮ್ಮ ಮೇಲೆ ಹೇರುತ್ತಾರೆ. ಅಂತಹ ನಂಬಿಕೆಗಳಲ್ಲಿ ಈ ಜಾತಿಯೂ ಒಂದು. ಮಕ್ಕಳಲ್ಲಿ ಅನುಭವಕ್ಕೆ ದಕ್ಕದ ಈ ಜಾತಿವಿಚಾರ ಬೆಳೆಬೆಳೆಯುತ್ತಾ ಹೋದಂತೆ ನಿಧಾನವಾಗಿ ವಿಷಬಳ್ಳಿಯಂತೆ ನಮ್ಮನ್ನು ಸುತ್ತಿಕೊಳ್ಳುತ್ತಾ ಹೋಗುತ್ತದೆ. ಅದರ ಬಂಧನದಿಂದ ಬಿಡಿಸಿಕೊಳ್ಳಲು ಸಾವೇ ಬರಬೇಕಾಗುತ್ತದೆ- ಬದುಕು ಕೆಲವೇ ದಶಕಗಳ ಪುಟ್ಟ ಅವಧಿಯಾದ್ದರಿಂದ ಇಲ್ಲಿ ಇಬ್ಬನಿಯ ಕ್ಷಣಿಕತೆ ಮತ್ತು ಹೂವಿನ ಸಾರ್ಥಕತೆಯನ್ನು ಅರಿಯದಿದ್ದರೆ ದರ್ಶನ ದೊರಕುವುದಿಲ್ಲ."

ಆ ನಾಲ್ಕೂ ಹುಡುಗರು ಅಮಾಯಕರಂತೆ ಕಾಣುತ್ತಿದ್ದರು. ದೋಸೆ ತಿಂದರು. ಟೀ ಕುಡಿದರು. ಅದೂ ಇದೂ ಪ್ರಶ್ನಿಸಿದರು. ಒಂದಿಷ್ಟು ವಾದಿಸಿದರು. ಆ ಮಧ್ಯೆಯೇ ಒಂದಿಷ್ಟು ತಾಣಗಳನ್ನು ಸುತ್ತಲು, ಆ ಜಾಗಗಳ ಮಹತ್ವವನ್ನು ಅರಿಯಲು ಅವರಿಗೆ ಹೇಳಿದೆ. ನಾನು ಹತ್ತನೇ ಸಲ ನೋಡಿದ ಸಿನಿಮಾದ ಬಗ್ಗೆ ಹೇಳಿದೆ. ತಾತನ ಕನ್ನಡಕ, ಅಜ್ಜಿಯ ತಾಮ್ರದ ಬಿಂದಿಗೆ ಬಗ್ಗೆ ಮಾತಾಡಿದೆ. ನನ್ನ ಆಸಕ್ತಿಗಳ ಬಗ್ಗೆ ಅವರಿಗೆ ಅಚ್ಚರಿಯೋ, ಗಾಬರಿಯೋ ಉಂಟಾಗುವುದರೊಳಗೆ ಮಾನವನ ಅಂತಃ ಶಕ್ತಿ, ಒಳಗಿನ ರಮ್ಯಲೋಕದ ಕುರಿತು ಮಾತಿಗಿಳಿದೆ. ಇದು ಯಾವಾಗಲೂ ನನ್ನು ಕೆಣಕುವ ಸಂಗತಿ. ಮೂಲಭೂತವಾಗಿ ಮನುಷ್ಯನಿಗೆ ಕೆಲವು ಭ್ರಮೆಗಳಿರುತ್ತವೆ. ಎಷ್ಟೋ ಜನಕ್ಕೆ ಕಣ್ಣಿಗೆ ಕಾಣುವ, ಸಿನಿಮಾಗಳಲ್ಲಿ ತೋರುವ, ಪತ್ರಿಕೆ, ಪುಸ್ತಕ, ಗ್ರಂಥಗಳಲ್ಲಿ ಅಚ್ಚಾಗಿರುವ, ಭೂಪಟದಲ್ಲಿ ಕಾಣುವುದಷ್ಟೇ ಪ್ರಪಂಚವೆಂಬ ನಂಬಿಕೆ ಇರುತ್ತದೆ. ಆಗ ಒಳಗಿನ ಜಗತ್ತಿಗೆ ಪೊರೆ ಕವಿದುತ್ತದೆ. ನನಗೆ ನೆನಪಿರುವಂತೆ ಒಬ್ಬ ಶಾಲಾಶಿಕ್ಷಕನಿದ್ದ; ಈತನ ಬಳಿ ಪಾಠ ಕೇಳಿದ್ದರಿಂದ ನನಗೆ ಇವನು ಗೊತ್ತು. ಜಾತಿಯಲ್ಲಿ ಈ ಶಿಕ್ಷಕ ಬ್ರಾಹ್ಮಣನಾದರೂ ಮಡಿವಂತಿಕೆ ಇರಲಿಲ್ಲ; ಜನಿವಾರ ಧರಿಸಿರಲಿಲ್ಲ, ಸಂಧ್ಯಾವಂದನೆ ಮಾಡುವುದಿರಲಿ ದೇವರ ಅಸ್ತಿತ್ವವನ್ನೇ ಪ್ರಶ್ನಿಸುತ್ತಿದ್ದ. ಆದರೆ ಈ ಶಿಕ್ಷಕ ಮಾತಿಗಿಳಿದರೆ, ಪರಸಂಗ ಹೇಳಲು ಶುರು ಮಾಡಿದರೆ, ಒಂದೆರಡು ನಿಮಿಷ ಈತನ ಪಕ್ಕದಲ್ಲಿ ಕೂತು ಕಿವಿಗೊಟ್ಟರೆ ಈತ ಎಂಥವರಿಗೂ ಇಷ್ಟವಾಗುತ್ತಿದ್ದ. ನಾನೇ ನೋಡಿದಂತೆ ಈ ಅವಿವಾಹಿತ ಐವತ್ತರ ಶಿಕ್ಷಕ ಒಂಟಿಯಾಗಿ ಊರಿನ ಪಡಸಾಲೆಯೊಂದರ ಪುಟ್ಟ ರೂಮಿನಲ್ಲಿ ವಾಸಿಸುತ್ತಿದ್ದಾಗ ಎಲ್ಲಾ ಜಾತಿಯವರ ಮನೆಯಲ್ಲಿ ಬೇಯಿಸಿದ್ದನ್ನು ತಿನ್ನುತ್ತಿದ್ದ; ಸಂಜೆಯಾದರೆ ಅವನ ಪರಸಂಗಗಳಿಗಾಗಿಯೇ ಜನ ಹಾತೊರೆಯುತ್ತಿದ್ದರು. ಈ ಮನುಷ್ಯ ಹೇಳುತ್ತಿದ್ದ ಆಂತರಿಕ ಜಗತ್ತಿನ ಅರ್ಥಾತ್ ಒಳಮನಸ್ಸಿನ ವಿಚಿತ್ರ ಕಥೆಗಳು ಎಲ್ಲರ ಮೆಚ್ಚಿಗೆಗೆ ಪಾತ್ರವಾಗುತ್ತಿದ್ದವು. ಅಂದರೆ, ಈ ಮನುಷ್ಯನ ಲೋಕ ಬರೀ ಹೊರಗಿನದ್ದಾಗಿರಲಿಲ್ಲ. ಅನೇಕರ ಪಾಲಿನ 'ಇದೇ ಪ್ರಪಂಚ' ಅನ್ನುವುದಿದೆಯಲ್ಲಾ… ಅದಾಗಿರಲಿಲ್ಲ. ಈತನ ಪಯಣ ಯಾರೋ ತುಳಿದ ಸವೆದ ಹಾದಿಯಲ್ಲಿ ಸಾಗುವುದಾಗಿರಲಿಲ್ಲ. ಬದಲಿಗೆ ಸ್ವ-ಪ್ರಭೆಯಲ್ಲಿ ಮಿಂದೇಳುವ,ಪ್ರಜ್ವಲಿಸುವ ಹಪಹಪಿ ಇವನಿಗಿತ್ತು.

ಇವೆಲ್ಲ ನಾನು ನಿಮ್ಮೆದುರು ಹೇಳಲೇಬೇಕಿದ್ದ ಮಾತುಗಳು. ಮನುಷ್ಯ ಎಷ್ಟು ಸೋಮಾರಿಯೆಂದರೆ ಬದುಕಿನ ರಹಸ್ಯಗಳನ್ನು ಬೇಧಿಸುವ ಪ್ರಯತ್ನಕ್ಕೆ ಕೈ ಹಾಕುವ ಗೋಜಿಗೆ ಹೋಗದೆಯೇ ಸಿದ್ಧಜಗತ್ತಿನಲ್ಲಿಯೇ ನಿರ್ನಾಮವಾಗಿಬಿಡುತ್ತಾನೆ. ಯಾರೂ ರೋಪಿಸಿದ ಪಥದಲ್ಲೇ ನಡೆಯುವ ಮೂಲಕ ತನ್ನವೇ ಹೆಜ್ಜೆಗುರುತುಗಳನ್ನು ಮೂಡಿಸುವಲ್ಲಿ ವಿಫಲನಾಗುತ್ತಾನೆ. ಕಟ್ಟುಪಾಡು, ಸಂಪ್ರದಾಯದ ಹೆಸರಿನಲ್ಲಿ ಪದೇ ಪದೇ ಭೂತಕಾಲಕ್ಕೆ ಮುಖ ಮಾಡುತ್ತಾ, ಸುಂದರ ನಾಳೆಗಳನ್ನು ನೆನ್ನೆಯ ನೆರಳುಗಳಲ್ಲಿ ಮುಚ್ಚಿಬಿಡುತ್ತಾನೆ. ಇದೆಲ್ಲ ಹೇಳಬೇಕಿಸಿತು ಹೇಳಿದೆನಷ್ಟೇ. ಆದರೆ, ನಿಮ್ಮ ಕೈಕುಲುಕಿ ಕಳಿಸಿಕೊಡುವ ಈ  ಸಂದರ್ಭದಲ್ಲಿ ಒಂದೆರಡು ಮಾತು ಹೇಳಲಿಚ್ಛಿಸುತ್ತೇನೆ. ಜಾತಿವ್ಯವಸ್ಥೆ ನೀವಂದುಕೊಂಡಂತೆ ರಕ್ತದಿಂದ ಬಂದುದ್ದಲ್ಲ; ವೃತ್ತಿಯಿಂದ ಬಂದಿದ್ದು. ನಿಮಗೀಗ ಅನ್ನ, ಬಟ್ಟೆ ಕೊಡುತ್ತಿರುವ ವೃತ್ತಿಗೂ ನೀವೀಗ ನಿಮ್ಮದೆಂದು ನಂಬಿಕೊಂಡಿರುವ ಜಾತಿಗೂ ಯಾವುದೇ ಸಂಬಂಧವಿಲ್ಲವೆಂದು ಭಾವಿಸುತ್ತೇನೆ. ನಾನೂ ಅಷ್ಟೇ, ನೀವಂದುಕೊಂಡ ಜಾತಿಯವನಲ್ಲ. ನೀವಿನ್ನು ಹೊರಡಬಹುದು.

ಅಕ್ಷರದಿಂದ ಅನ್ನ, ಬಟ್ಟೆ ಪಡೆಯುವ ನನ್ನದು ಬರಹಗಾರರ ಜಾತಿ.

-ಹೃದಯಶಿವ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

30 Comments
Oldest
Newest Most Voted
Inline Feedbacks
View all comments
Gopaal Wajapeyi
Gopaal Wajapeyi
9 years ago

ಲೇಖನ ಇಷ್ಟವಾಯಿತು ಶಿವಾ… ಕೊನೆಯ ಸಾಲಂತೂ ನನ್ನೆದೆಗೂಡಿನ ಗೋಡೆಯ ಮೇಲೆ ಮೂಡಿಬಿತ್ತಿತು… 

kailash malavalli
kailash malavalli
9 years ago

Adbutavaasda lekhana. Hrudayashiva nijakku hrudayavanta, buddhivanta, guNavanta.

hridaya shiva
hridaya shiva
9 years ago

ಧನ್ಯವಾದಗಳು ಸಾರ್ 

hridaya shiva
hridaya shiva
9 years ago

ಸಮಯ ಕೊಟ್ಟು ಓದಿದ್ದಕ್ಕೆ, ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ…

Veeresh
Veeresh
9 years ago

ಮನುಷ್ಯ ಎಷ್ಟು ಸೋಮಾರಿಯೆಂದರೆ ಬದುಕಿನ ರಹಸ್ಯಗಳನ್ನು ಬೇಧಿಸುವ ಪ್ರಯತ್ನಕ್ಕೆ ಕೈ ಹಾಕುವ ಗೋಜಿಗೆ ಹೋಗದೆಯೇ ಸಿದ್ಧಜಗತ್ತಿನಲ್ಲಿಯೇ ನಿರ್ನಾಮವಾಗಿಬಿಡುತ್ತಾನೆ…..
ಕಟ್ಟುಪಾಡು, ಸಂಪ್ರದಾಯದ ಹೆಸರಿನಲ್ಲಿ ಪದೇ ಪದೇ ಭೂತಕಾಲಕ್ಕೆ ಮುಖ ಮಾಡುತ್ತಾ, ಸುಂದರ ನಾಳೆಗಳನ್ನು ನೆನ್ನೆಯ ನೆರಳುಗಳಲ್ಲಿ ಮುಚ್ಚಿಬಿಡುತ್ತಾನೆ…
ಶಿವಾ ಅವರೇ ಇವು ತುಂಬಾ ಸತ್ಯವಾದ ಮಾತುಗಳು.ಮನುಜ ಜಾತಿಯನ್ನ ತನ್ನ ಪೂರ್ವಜರಿಂದ ಎರವಲು ಪಡೆಯುತ್ತಾನೆ.ಪ್ರತ್ಯೇಕವಾಗಿ ಬೆಳೆಯಲು ತೊಡಗುತ್ತಾನೆ.ಮೂಲಭೂತವನ್ನ ತಡಕಾಡದೇ ಇದ್ದರೆ ಪ್ರತ್ಯೇಕತಾವಾದಿಯಾಗಿಬಿಡುತ್ತಾನೆ.
 

hridaya shiva
hridaya shiva
9 years ago
Reply to  Veeresh

ಧನ್ಯವಾದಗಳು ಬ್ರದರ್ 

Guruprasad Kurtkoti
9 years ago

ಹೃದಯಕ್ಕೆ ತಟ್ಟುವ ಬರಹ! ತುಂಬಾ ಚೆನ್ನಾಗಿದೆ!

hridaya shiva
hridaya shiva
9 years ago

ಓದಿಗೆ ಥ್ಯಾಂಕ್ಸ್ ಸಾರ್ 

ಋತಊಷ್ಮ
ಋತಊಷ್ಮ
9 years ago

ನನ್ನ ತಮ್ಮ ವೀರೇಶ ಕಾಮೆಂಟಿನಲ್ಲಿ ಉಲ್ಲೇಖಿಸಿದಂತೆ ಪ್ರತ್ಯೇಕತಾವಾದಿಯಾಗಿಬಿಡುವುದು ಮಾನವತಾವಾದದ ದೌರ್ಭಾಗ್ಯ. ಜಾತಿ ಪಂಗಡಗಳು ನಿರ್ನಾಮವಾಗಬೇಕಾದರೆ ಸಂಪ್ರದಾಯವಾದಿಗಳ ಅಡಿಪಾಯವನ್ನು ಅಲುಗಾಡಿಸುವ ಅವಶ್ಯಕತೆ ಇದೆ.
ನಿಮ್ಮ ಲೇಖನ ಕೆಲವಾದರೂ ಮೊಂಡುವಾದಿಗಳನ್ನ ಬದಲಿಸಲಿ.

'ಅಕ್ಷರದಿಂದ ಅನ್ನ, ಬಟ್ಟೆ ಪಡೆಯುವ ನನ್ನದು ಬರಹಗಾರರ ಜಾತಿ' – ಭೂತದಲ್ಲಿ ಜಾತಿಗಳು ಹುಟ್ಟಿದ್ದು ವೃತ್ತಿಯಿಂದಲೇ ಅಲ್ಲವೆ ? 

ಇವೆಲ್ಲ ನಾನು ನಿಮ್ಮೆದುರು ಹೇಳಲೇಬೇಕಿದ್ದ ಮಾತುಗಳು. ಮನುಷ್ಯ ಎಷ್ಟು ಸೋಮಾರಿಯೆಂದರೆ ಬದುಕಿನ ರಹಸ್ಯಗಳನ್ನು ಬೇಧಿಸುವ ಪ್ರಯತ್ನಕ್ಕೆ ಕೈ ಹಾಕುವ ಗೋಜಿಗೆ ಹೋಗದೆಯೇ ಸಿದ್ಧಜಗತ್ತಿನಲ್ಲಿಯೇ ನಿರ್ನಾಮವಾಗಿಬಿಡುತ್ತಾನೆ. ಯಾರೂ ರೋಪಿಸಿದ ಪಥದಲ್ಲೇ ನಡೆಯುವ ಮೂಲಕ ತನ್ನವೇ ಹೆಜ್ಜೆಗುರುತುಗಳನ್ನು ಮೂಡಿಸುವಲ್ಲಿ ವಿಫಲನಾಗುತ್ತಾನೆ. ಕಟ್ಟುಪಾಡು, ಸಂಪ್ರದಾಯದ ಹೆಸರಿನಲ್ಲಿ ಪದೇ ಪದೇ ಭೂತಕಾಲಕ್ಕೆ ಮುಖ ಮಾಡುತ್ತಾ, ಸುಂದರ ನಾಳೆಗಳನ್ನು ನೆನ್ನೆಯ ನೆರಳುಗಳಲ್ಲಿ ಮುಚ್ಚಿಬಿಡುತ್ತಾನೆ. ಇದೆಲ್ಲ ಹೇಳಬೇಕಿಸಿತು ಹೇಳಿದೆನಷ್ಟೇ. ಆದರೆ, ನಿಮ್ಮ ಕೈಕುಲುಕಿ ಕಳಿಸಿಕೊಡುವ ಈ  ಸಂದರ್ಭದಲ್ಲಿ ಒಂದೆರಡು ಮಾತು ಹೇಳಲಿಚ್ಛಿಸುತ್ತೇನೆ. ಜಾತಿವ್ಯವಸ್ಥೆ ನೀವಂದುಕೊಂಡಂತೆ ರಕ್ತದಿಂದ ಬಂದುದ್ದಲ್ಲ; ವೃತ್ತಿಯಿಂದ ಬಂದಿದ್ದು. ನಿಮಗೀಗ ಅನ್ನ, ಬಟ್ಟೆ ಕೊಡುತ್ತಿರುವ ವೃತ್ತಿಗೂ ನೀವೀಗ ನಿಮ್ಮದೆಂದು ನಂಬಿಕೊಂಡಿರುವ ಜಾತಿಗೂ ಯಾವುದೇ ಸಂಬಂಧವಿಲ್ಲವೆಂದು ಭಾವಿಸುತ್ತೇನೆ. ನಾನೂ ಅಷ್ಟೇ, ನೀವಂದುಕೊಂಡ ಜಾತಿಯವನಲ್ಲ. ನೀವಿನ್ನು ಹೊರಡಬಹುದು.

ನಿಮ್ಮ ಈ ಪ್ಯಾರಾ ಇಷ್ಟವಾಯಿತು. 

hridaya shiva
hridaya shiva
9 years ago

ಪ್ರೀತಿಯ ಮಾತಿಗೆ ಶರಣು..

ವಿನೋದ್ ಕುಮಾರ್ ವಿ.ಕೆ.

ನಿಮ್ಮ ಹಾಡುಗಳಷ್ಟೇ..ಲೇಖನವೂ ತುಂಬಾ ಚೆನ್ನಾಗಿದೆ.. ಕೊನೆಯ ಸಾಲುಗಳು ಅತ್ಯಂತ ಇಷ್ಟವಾಯಿತು..ನಿಮ್ಮ ಸಾಹಿತ್ಯ ಕೃಷಿ ಇನ್ನೂ ಬೆಳೆಯಲಿ..ನನ್ನ ಹಾರೈಕೆ

ವಿನೋದ್ ಕುಮಾರ್ ವಿ.ಕೆ.

hridaya shiva
hridaya shiva
9 years ago

ಥ್ಯಾಂಕ್ಯೂ………

Rukmini Nagannavar
Rukmini Nagannavar
9 years ago

ನವ ಯುವಕರಿಗೆ ಅರಿವು ಮೂಡಿಸುವ ಪರಿ ತುಂಬಾ ಇಷ್ಟವಾಯ್ತು.
ಬುದ್ಧಿವಾದ ಹೇಳಿ ಸನ್ಮಾನ ನಿರಾಕರಿಸಿದಿರಲ್ಲ. ಅದು ನಿಮ್ಮ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತದೆ ಹಾಗೂ ನಾಲ್ವರ ಮೇಲೂ ಖಂಡಿತವಾಗಿಯೂ ಪರಿಣಾಮಕಾರಿಯಾದ ಪ್ರಭಾವ ಬೀರಿರುತ್ತದೆ.
ಚಂದದ ಲೇಖನ.

ರುಕ್ಮಿಣಿ ಎನ್.

hridaya shiva
hridaya shiva
9 years ago

ನಿಮ್ಮ ಓದಿಗೆ ಕೃತಜ್ಞ…

ಮಂಜುನಾಥ ರೆಡ್ಡಿ

ನಮಸ್ತೆ ತುಂಬಾ ದಿನಗಳ ನಂತರ ನಿಮ್ಮ ದೀರ್ಘ ಬರಹವನ್ನು ಓದಿದೆ, ತುಂಬಾ ಖುಷಿಯಾಯಿತು, ಬರಹಗಾರರಾಗಿ ಗುರುತಿಸಿಕೊಳ್ಳಲು ಜಾತಿಯನ್ನು ಬಳಸಿಕೊಳ್ಳುವರ ಮದ್ಯೆ ನೀವು ವಿಭಿನ್ನ, ಮಾತ್ರವಲ್ಲ ಒಂದು ಮಾದರಿಯಾಗಿ ನಿಂತಿದ್ದೀರಿ, ಮತ್ತೊಂದು ಮಾತು ನಿಮ್ಮ ಬರವಣಿಗೆಯ ಶೈಲಿ ತುಂಬಾ ಚೆನ್ನಾಗಿದೆ, ಧನ್ಯವಾದಗಳು

hridaya shiva
hridaya shiva
9 years ago

🙂

arathi ghatikar
9 years ago

ಜಾತಿಯ ದೀಪದ ಮೇಲೆ ಮಾನವತ್ವದ ದೀಪ ಬೆಳಗಿಸುವ  ಉನ್ನತ ಆಶಯ ಹೊತ್ತ ನಿಮ್ಮ ವಿಚಾರಧಾರೆ ಬಹಳ ಆಪ್ತವೆನಿಸಿತು . ಜಾತಿ ಧರ್ಮಗಳನ್ನೇ ಮುಂದು ಮಾಡಿ ಸಂಕೋಲೆಗಳನ್ನು ಬೇಲಿಗಳನ್ನು ಕಟ್ಟಿಕೊಳ್ಳುತ್ತಿರುವ ಹಾಗು ಬಲವಂತವಾಗಿ  ಬಿರುಕು ಮೂದಿಸುವ ಕಾರ್ಯಗಳು ನಿರಂತರವಾಗಿ  ನಡೆಯುತ್ತಿರುವ ಈ ಸಮಾಜದಲ್ಲಿ ಈ  ಲೇಖನ  ಎದ್ದು ನಿಲ್ಲುತ್ತದೆ . 

hridaya shiva
hridaya shiva
9 years ago

ಧನ್ಯವಾದಗಳು ಓದಿ ಪ್ರತಿಕ್ರಿಯಿಸಿದ್ದಕ್ಕೆ…

arathi ghatikar
9 years ago

ಜಾತಿಯ ಸಮಾಧಿಯ  ಮೇಲೆ ಮಾನವತ್ವದ ದೀಪ ಬೆಳಗಿಸುವ  ಉನ್ನತ ಆಶಯ ಹೊತ್ತ ನಿಮ್ಮ ವಿಚಾರಧಾರೆ ಬಹಳ ಆಪ್ತವೆನಿಸಿತು . ಜಾತಿ ಧರ್ಮಗಳನ್ನೇ ಮುಂದು ಮಾಡಿ ಸಂಕೋಲೆಗಳನ್ನು ಬೇಲಿಗಳನ್ನು ಕಟ್ಟಿಕೊಳ್ಳುತ್ತಿರುವ ಹಾಗು ಬಲವಂತವಾಗಿ  ಬಿರುಕು ಮೂದಿಸುವ ಕಾರ್ಯಗಳು ನಿರಂತರವಾಗಿ  ನಡೆಯುತ್ತಿರುವ ಈ ಸಮಾಜದಲ್ಲಿ ಈ  ಲೇಖನ  ಎದ್ದು ನಿಲ್ಲುತ್ತದೆ . 

amardeep.p.s.
amardeep.p.s.
9 years ago

ಜಾತಿಯಿಂದ ಆಗುವ ಕಲಹ, ಮಿತಿ ಮೀರದ ಚೌಕಟ್ಟು, ಲಾಭ, ದುರ್ಲಾಭ, ಗುಂಪುಗಾರಿಕೆ, ಪಕ್ಷಪಾತ, ಎಲ್ಲವನ್ನೂ ದಾಟಬೇಕಾದರೆ ಇಂತಹ ನಿಲುವು ಅಗತ್ಯ ಕವಿಗಳೇ… ಎಂದಿನಂತೆ ನಿಮ್ಮ ಬರಹ ಇಷ್ಟವಾಯಿತು…..

hridaya shiva
hridaya shiva
9 years ago
Reply to  amardeep.p.s.

thank you

Rajendra B. Shetty
9 years ago

ಈ ಲೇಖನ ತುಂಬಾ ಇಷ್ಟವಾಯಿತು. ಕೆಲವು ಸಾಲುಗಳನ್ನು ಪುನಃ ಪುನಃ ಓದುವಂತೆ ಮಾಡಿದವು.

Chennabasavaraj
Chennabasavaraj
9 years ago

ಪ್ರತಿ ಸಾಲುಗಳು ಇಷ್ಟವಾಗುತ್ತೆ, ಜಾತಿ ಎಂಬ ಪೆಡಂಬೂತ ಈ ದೇಶದಲ್ಲಿ ಇಲ್ಲದಿದ್ದರೆ ಎಲ್ಲರೂ ಸುಖವಾಗಿರುತ್ತಿದ್ದರೋ ಏನೋ…!

hridaya shiva
hridaya shiva
9 years ago

ಇನ್ನಾದರೂ ಹಾಗಾಗಲಿ ಅಲ್ಲವೇ?

Rajendra B. Shetty
9 years ago

ತಿದ್ದುಪಡಿ:
ಈ ಲೇಖನ ತುಂಬಾ ಇಷ್ಟವಾಯಿತು. ಕೆಲವು ಸಾಲುಗಳು ಪುನಃ ಪುನಃ ಓದುವಂತೆ ಮಾಡಿದವು.

hridaya shiva
hridaya shiva
9 years ago

ಧನ್ಯವಾದಗಳು 

Prabhu Gudimni
Prabhu Gudimni
9 years ago

Worth reading sir …… 

a very good teaching to youths. loved it… 

hridaya shiva
hridaya shiva
9 years ago
Reply to  Prabhu Gudimni

thank you 

srinidhi
srinidhi
9 years ago

ತು೦ಬಾ ಚನ್ನಾಗಿದೆ. ಎರಡೆರೆಡು ಸಲ ಓದಬೇಕ್ಕೆನಿಸುವ ವಿಚಾರ.

subramanya
subramanya
9 years ago

ಲೇಖನ ‌ಇಷ್ಟವಾಯಿತು.

30
0
Would love your thoughts, please comment.x
()
x