ನಾನೋದಿದ ಹೊತ್ತುಗೆ ಪೆರುವಿನ ಪವಿತ್ರ ಕಣಿವೆಯಲ್ಲಿ: ಪ್ರಶಸ್ತಿ

ಬೇಸಿಗೆರಜೆ ಮತ್ತು ಚಳಿಗಾಲದ ರಜೆ ಬಂತು ಅಂದ್ರೆ ಎಲ್ಲಿಲ್ಲದ ಖುಷಿ ನಂಗೆ. ಅಜ್ಜಿ ಮನೆ, ದೊಡ್ಡಪ್ಪನ ಮನೆ ಅಂತ ಒಂದು ಕಡೆ ಇಂದ ಹೊರಟ್ರೆ ಅಲ್ಲಿಂದ ಹತ್ತಿರ ಇರ್ತಿದ್ದ ಮತ್ತೊಂದು ಮಾವನ ಮನೆ, ಅಲ್ಲಿಂದ ಮತ್ತೊಂದು ಚಿಕ್ಕಪ್ಪನ ಮನೆ ಅಂತ ಸುಮಾರಷ್ಟು ಕಡೆ ತಿರುಗಿ ರಜಾ ಮುಗಿಯೋ ಹೊತ್ತಿಗೆ ಮನೆ ತಲುಪುತ್ತಿದ್ದೆ. ದಿನಾ ಮನೆಗೆ ಫೋನ್ ಮಾಡಿ ಎಲ್ಲಿದ್ದೀನಿ ಅಂತ ಹೇಳ್ಬೋಕು ಅನ್ನೋದನ್ನ ಬಿಟ್ರೆ ಬೇರ್ಯಾವ ನಿರ್ಬಂಧಗಳೂ ಇಲ್ಲದ ಸ್ವಚ್ಛಂದ ಹಕ್ಕಿಯ ಭಾವವಿರುತ್ತಿದ್ದ ದಿನಗಳವು. ಮನೆ ಬಿಟ್ಟು ವಾರಗಟ್ಟಲೇ ಆದಾಗ ವಾಪಾಸ್ ಬರೋಕೆ ದುಡ್ಡಿದೆಯೇನೋ  ಅಂತ ಮನೆಯಿಂದ ಛೇಡಿಸುತ್ತಿದ್ದ ಸಮಯವೂ ಇತ್ತು ಕೆಲ ರಜೆಗಳಲ್ಲಿ. ತೀರಾ ದೂರದೂರ ತಿರುಗುತ್ತಿದ್ದೆ ಅಂತಲ್ಲ. ಒಂದೆಡೆಯಿಂದ ಮತ್ತೊಂದೆಡೆ ಯಾವ್ದೋ ಸಣ್ಣ ಬಸ್ಸೋ, ದೋಣಿ ದಾಟಿಯೋ, ಐದಾರು ಕಿ.ಮಿ ನಡೆದೋ ಹೋಗಬೇಕಿದ್ದಷ್ಟೇ ದೂರವಿರುತ್ತಿದ್ದ ಸ್ಥಳಗಳವು. ಆದ್ರೆ ನಡೆಯಬೇಕಲ್ಲಾ ? ಯಾರು ಹೋಗ್ತಾರೆ ಅಂತ ಸೋಂಬೇರಿತನ ಮಾಡ್ಕೊಂಡ್ರೆ ಆಗಲ್ಲ. ಬಂದಾಗ ಎಲ್ಲಾ ನೋಡ್ಕೊಂಡೇ ಬರೋದು ಅಂದ್ಕಂಡ್ರೆ ಆಗತ್ತೆ ಅಂತ ಹೊರಟುಬಿಡೋ ಸ್ವಭಾವದಿಂದ್ಲೇ ಸುತ್ತಮುತ್ತಲ ಎಷ್ಟೋ ಸ್ಥಳಗಳನ್ನು ನೋಡೋಕಾಗಿದ್ದಲ್ವಾ ಇಲ್ಲಾಂದ್ರೆ ಎಷ್ಟೊಂದು ಮಿಸ್ ಮಾಡ್ಕೋತಿದ್ದೆ ನಾನು ಅಂತ ಈಗ್ಲೂ ಅಂದ್ಕೋತಿರ್ತೀನಿ. ಆ ದಿನಗಳಲ್ಲಿ ಸಾಮಾನ್ಯವಾಗಿ ಎಂಥಾ ಹಳ್ಳಿಮೂಲೆಯಾದ್ರೂ ಊರಲ್ಲೊಬ್ಬರ ಮನೆಯಲ್ಲಾದ್ರೂ ಯಾವದಾದ್ರೂ ವಾರಪತ್ರಿಕೆ ತರಿಸುತ್ತಿದ್ದರು. ನಮ್ಮನೇಲಿ ಇಂಥಾ ಪತ್ರಿಕೆ ತರಿಸುತ್ತೇವೆ. ಓದ್ಕೊಂಡು ಹೋಗ್ಬೋದು ಬಾರೋ ಮಾಣಿ ಅಂತ್ಲೇ ನಂಗೆ ನಮ್ಮ ನೆಂಟರ ಪಕ್ಕದ ಮನೆಯವರು ಕರೆಯುತ್ತಿದ್ರು ಎಷ್ಟೋ ಸಲ. ಅದು, ಇದು ಅಂತಿಲ್ಲದೆ ಏನು ಸಿಕ್ಕಿದ್ರೂ ಓದೋ ಹುಚ್ಚು. ಆ ಸಮಯದಲ್ಲೇ ಗಮನ ಸೆಳೆದದ್ದು ಸುಧಾ ಪತ್ರಿಕೆಯಲ್ಲಿ ಬರುತ್ತಿದ್ದ ಒಂದು ಪ್ರವಾಸ ಕಥನದ.ಅಮೇಜಾನ್ ಕಾಡಿನ ಬಗ್ಗೆ,ಪೆರುವಿನ ಪರಿಸರದ ಬಗೆಗೊಂದಿಷ್ಟು ವಿಚಿತ್ರ ಕುತೂಹಲವನ್ನು ಹುಟ್ಟಿಸಿದ, ಹೀಗೂ ಇರುತ್ತಾ ಜಗತ್ತು ಎಂಬಂತಹ ಅಚ್ಚರಿ ಹುಟ್ಟಿಸಿದ ಆ ಸರಣಿಯ ಪುಸ್ತಕವೇ ಶ್ರೀಮತಿ ನೇಮಿಚಂದ್ರ ಅವರ "ಪೆರುವಿನ ಪವಿತ್ರ ಕಣಿವೆಯಲ್ಲಿ" . 

ಹೈಸ್ಕೂಲ್ ದಿನಗಳಲ್ಲಿ ಆ ಪುಸ್ತಕವನ್ನು ಓದಬೇಕೆಂದು ಲೈಬ್ರರಿಯಲ್ಲಿ ಹುಡುಕಿದರೆ ಸಿಕ್ಕಿರಲಿಲ್ಲ. ನಂತರ ಕಾಲೇಜಾಯಿತು, ಪದವಿಯಾಯಿತು. ಆ ಪುಸ್ತಕವನ್ನು ಕೊಂಡೇ ಓದಬೇಕೆಂಬ ಆಸೆ ಮನದ ಮೂಲೆಯಲ್ಲೆಲ್ಲೋ ಕುಳಿತು ಕಳೆವ ಕಾಲದೊಂದಿಗೆ ಕಾಡುತ್ತಾ ಕುಳಿತಿತ್ತು. ಅಂತೂ ಅದಕ್ಕೆ ಮುಹೂರ್ತ ಸಿಕ್ಕಿದ್ದು ಇತ್ತೀಚೆಗೆ. ಸ್ವತಃ ಹೆಚ್ಚೆಚ್ಚು ತಿರುಗಹತ್ತಿದ್ದರಿಂದ ಈ ಪುಸ್ತಕ ಅಗತ್ಯಕ್ಕಿಂತ ಹೆಚ್ಚು ಆಪ್ತವಾಯಿತಾ ಅನ್ನೋ ಸಂದೇಹದ ಜೊತೆಗೆ  ಈಗಾಗಲೇ ನಿಮ್ಮಲ್ಲಿ ಬಹುತೇಕರು ಆ ಪುಸ್ತಕವನ್ನು ಓದಿರಬಹುದೆಂಬ ನಿರೀಕ್ಷೆ ಕೂಡ. ಹಾಗಾಗಿ ಇದರ ಬಗ್ಗೆ ಬರೆಯೋದು ಸಮಂಜಸವೋ ಅಲ್ಲವೋ ಎಂಬ ಗೊಂದಲವಿದ್ದರೂ ನನಗನಿಸಿದ ಕೆಲ ಭಾವಗಳ ಹಂಚಿಕೊಳ್ಳುವಿಕೆಯಿಂದ ನಿಮ್ಮ ಓದಿನ ನೆನಪು ಮತ್ತೆ ಹಸಿರಾಗಬಹುದೆಂಬ ನಿರೀಕ್ಷೆಯಲ್ಲಿ ಬರೆಯತೊಡಗಿದ್ದೇನೆ. 

ನೇಮಿಚಂದ್ರ ಅವರು ಮತ್ತು ಅವರ ಗೆಳತಿ ಮಾಲತಿ ಅವರು ಪೆರುವನ್ನು ನೋಡೋಕೆ, ಸುತ್ತಣ ಅಮೇಜಾನ್ ಕಾಡಲ್ಲಿ ಅಲೆಯೋಕಂತ ಹೊರಡುತ್ತಾರೆ. ಹೋಗೋಕೆ ನೇರ ಫ್ಲೈಟುಗಳೆಂದರೆ, ಲಕ್ಷುರಿ ಪಯಣವೆಂದರೆ ಬೇಡವೆನ್ನುವ ಅವರ ನಿರ್ಧಾರದ ಹಿಂದೆ ಅಡಗಿರೋ ಎರಡು ಅಂಶಗಳು ಇಷ್ಟವಾಗುತ್ತವೆ. ಒಂದು ವಿಪರೀತ ದುಡ್ಡು ಎನ್ನೋದು, ಎರಡನೆಯದು ಜನಜೀವನದಲ್ಲಿ ಭಾಗಿಯಾಗೋಕೆ ಆಗದೇ ಅಲ್ಲಿನ ನೈಜ ಅನುಭವ ದಕ್ಕೋಲ್ಲ ಎಂಬುದು . ಪೆರುವಿನ ಪಯಣದಲ್ಲಿ ಬರುವ ಹಲವು ಸ್ಥಳಗಳು ನೆನಪಿನಲ್ಲುಳಿಯದೇ ಇದ್ದರೂ ಅದರ ಮಧ್ಯೆ ಇನ್ಕಾ ಜನಾಂಗ, ನಾಸ್ಕಾ ಗೆರೆಗಳು, ಅಧ್ಯಕ್ಷೀಯ ಚುನಾವಣೆಯ ಬಿಸಿ, ಶೈನಿಂಗ್ ಪಾತ್ ನ ಹೋರಾಟ, ಅವರನ್ನು ಧಮನಿಸಲು ನಡೆಸಿದ ಸರ್ಕಾರದ ಆಟಾಟೋಪಗಳು, ಮಹಿಳಾ ಹೋರಾಟ, ನಾಸ್ಕಾ ಗೆರೆಗಳು, ಅವುಗಳ ಉಳಿವಿಗಾಗಿ ನಲ್ವತ್ತು ವರ್ಷಗಳ ಕಾಲ ಪ್ರಯತ್ನಿಸಿದ ಜರ್ಮನಿಯಿಂದ ಬಂದ ಡಾ: ರೇಕಿ , ಮಾಚುಪಿಚು, ಓಲಂತಾಯ್ ತೋಂಬದ ಸೂರ್ಯದೇವಾಲಯ, ಪೆರುವಿಗೆ ಅಂತ ಬಂದು ಪಕ್ಕದಲ್ಲಿನ ಅಮೇಜಾನ್ ಕಾಡು ನೊಡುವ ಸಲುವಾಗಿ ಬ್ರೆಜಿಲ್ಲಿಗೂ, ಪಕ್ಕದ ಬೀದಿಯೆಂಬಂತೆ ದಾಟಿದ ಕೊಲಂಬಿಯಾಕ್ಕೂ ಹೋಗಿ ಬಂದ ಪಯಣದ ಕಥಾನಕ ಪ್ರತೀ ಪುಟದಲ್ಲೂ ಕುತೂಹಲ ಕೆರಳಿಸುತ್ತಾ ನಾವೇ ಲೇಖಕಿಯ ಜಾಗದಲ್ಲಿ ಪಯಣಿಸುತ್ತಿದ್ದೇವೇನೋ ಎಂಬ ಭಾವ ಕೊಡುತ್ತೆ. 

ರಬ್ಬರ್ರಿಗೆ ಅಂತ ಬಂದವರು, ಚಿನ್ನದಾಸೆಗೆ ಬಂದ ಸ್ಪಾನಿಷ್ಯರು, ಮಿಷನರಿಗಳು ಜನರನ್ನು ನಾಗರೀಕರನ್ನಾಗಿಸೋ ನೆಪದಲ್ಲಿ ಧರ್ಮಾಂತರಿಸುವುದು, ಬೆಳೆಗಳನ್ನ ಕೊಳ್ಳೋ ನೆಪದಲ್ಲಿ ರೈತರನ್ನು ಗುಲಾಮರನ್ನಾಗಿಸೋದು, ಶಾಮಾ ಎಂಬ ಹಳ್ಳಿ ವೈದ್ಯರ ಜ್ಞಾನವನ್ನು, ಇಲ್ಲಿನ ಗಿಡಮೂಲಿಕೆಗಳನ್ನು ಕೊಳ್ಳೆಹೊಡೆವ ಔಷಧಿಯ ಕಂಪೆನಿಗಳು .. ಇತ್ತೀಚೆಗೆ ಗಣಿ, ದುಡ್ಡು ಹೀಗೆ ಎಲ್ಲವನ್ನೂ ಕೊಳ್ಳೆಹೊಡೆವ ರಾಜಕಾರಣಿಗಳು.. ಹೀಗೆ ಇಲ್ಲಿನ ಮೂಲನಿವಾಸಿಗಳ ಬವಣೆಗಳನ್ನು ಲೇಖಕಿ ಅಲ್ಲಲ್ಲಿ ವಿವರಿಸುತ್ತಾ ಸಾಗುವಾಗ ಕಣ್ಣಂಚಿನಲ್ಲಿ ನೀರೂರುವುದು ಸುಳ್ಳಲ್ಲ. ಜಗತ್ತಿನಲ್ಲಿ ಹದಿನೈದರಷ್ಟು ಜನಕ್ಕೆ ಮಾತ್ರ ಇಂಗ್ಲೀಷ್ ಬರೋದು ಅಂತ ನಮ್ಮ ಆಂಗ್ಲಭಾಷೆ ವಿಶ್ವಭಾಷೆಯೆಂಬ ಭ್ರಮೆಯನ್ನು ಲೇಖಕಿ ತೊಡೆಯುತ್ತಾ ಸಾಗೋ ಪರಿಯೂ ಅನನ್ಯ. ಹೋದಲ್ಲೆಲ್ಲಾ ಅವರಿಗೆ ಇಂಗ್ಲ್ಶೀಷ್ ಆರ್ಥವಾಗದವರೇ ಸಿಗೋದ್ರಿಂದ ಎಷ್ಟಯ್ಯಾ ಸೋಲೆ ಅಂತ ಕನ್ನಡದಲ್ಲೇ ವ್ಯವಹರಿಸೋ ಪರಿ, ಮೂಕಿ ಸಂಜ್ಞೆಗಳಲ್ಲಿ ವಿವರಿಸೋಕೆ ಪಡೋ ಕಷ್ಟಗಳೆಲ್ಲಾ ಕೆಲವಡೆ ಲಘು ಹಾಸ್ಯವನ್ನೂ, ಭಾಷೆಯರಿಯದ ನಾಡಿನಲ್ಲೂ ಜಯಿಸಿ ಬಂದರಲ್ಲಾ ಪರ್ವಾಗಿಲ್ವೇ ಅನ್ನೋ ಅಚ್ಚರಿಯನ್ನೂ ಮೂಡಿಸುತ್ತಾ ಸಾಗುತ್ತೆ. ಒಂದು ಸೋಲೆ ಕೊಟ್ಟರೆ ಒಂದು ಕಡೆ ೨೫ ಬಾಳೆಹಣ್ಣು ಕೊಟ್ಟುಬಿಡುತ್ತಾರೆ. ಎಲ್ಲದನ್ನೂ ಹಂಚಿತಿನ್ನೋ ಭಾವ, ಸೂರ್ಯಾರಾಧನೆ, ಕಬ್ಬಿನ ಹಾಲು, ಅನ್ನ ರಾಜ್ಮದಂತಹ ಪ್ರಸಂಗಗಳಲ್ಲಿ ಎಷ್ಟೋ ಬಾರಿ  ವಸುದೈವ ಕುಟುಂಬಕಂ ಎಂಬ ಭಾರತದ ನೆನಪಾಗುತ್ತದೆ. ಅಲ್ಲಿನ ಜನರ ಆತ್ಮೀಯತೆ, ಎಲ್ಲಿ ಹೋದರೂ ಇಂಡಿಯಾ, ಗಾಂಢಿ ಅಂತ ಬಂದು ಖುಷಿಪಡೋ, ಮುತ್ತಿಡೋ ಜನರ ಬಗ್ಗೆ ಓದುವಾಗ ನಮ್ಮ ಭಾರತದ, ಭಾರತೀಯರ ಬಗ್ಗೆ ವಿಶ್ವದ ಮೂಲೆಮೂಲೆಗಳಲ್ಲೂ ಈ ಪಾಟಿಯ ಪ್ರೀತಿಯಿದೆಯಾ ಅಂತ ಸಿಕ್ಕಾಪಟ್ಟೆ ಖುಷಿಯೂ ಆಗುತ್ತೆ. 

ಕಳೆದುಹೋದ ನಗರಿ, ಮ್ಯೂಸಿಯಂ, ತಾರಾಲಯಗಳ ಕತೆ ಓದುವಾಗ ನಮ್ಮ ನೆಹರೂ ತಾರಾಲಯ, ಇಲ್ಲಿನ ಮ್ಯೂಸಿಯಂಗಳ ಚಿತ್ರ ಕಣ್ಣೆದುರು ಮೂಡಿ ಬಂದರೆ ಅಚ್ಚರಿಯಿಲ್ಲ. ಅಮೇಜಾನಿನ ಎಲೆಗಳ ಮೇಲೆ ಮಗು ಮಲಗಿಸುವ ಅಮ್ಮಂದಿರ ಪ್ರಸಂಗದ ಬಗ್ಗೆ ಹೇಳುವಾಗ ಆಲದೆಲೆಯ ಮೇಲೆ ಮಲಗಿದ ಕೃಷ್ಣನ ಕತೆಯನ್ನು ಪ್ರಸ್ತಾಪಿಸುವುದು, ಸ್ಲಾತ್, ಆನಕೊಂಡ, ಕಬ್ಬಿನ ಹಾಲನ್ನು ಮಾಡೋ ಪ್ರಸಂಗ.. ಹೀಗೆ ಅನೇಕ ಕಡೆಗಳಲ್ಲಿ ಆ ಸಂಸ್ಕೃತಿಗೂ ನಮಗೂ ಅನೇಕ ಹೋಲಿಕೆಗಳನ್ನು ಕಟ್ಟಿಕೊಡೋ ಪರಿಯೂ ಬರಹವನ್ನು ಇನ್ನಷ್ಟು ಆಪ್ತವಾಗಿಸುತ್ತಾ ಸಾಗುತ್ತದೆ.. ರಾತ್ರೆಯಲ್ಲಿ ಚೆಸ್ ಆಡುತ್ತಾ ಕೂರುವ ಜನರ ಜೀವನದಲ್ಲಿ ಕಾಲವೇ ಕಾಲು ಮುರಿದುಕೊಂಡು ಬಿದ್ದಿದೆಯೇನೋ ಎಂಬ ರೂಪಕಗಳು ಹಿಡಿಸುತ್ತಾ ಸಾಗುತ್ತೆ. ಬರೆಯಹೊರಟರೆ ಇನ್ನೂ ಸಾಕಷ್ಟು ಬರೆಯಬಹುದು ಇದರ ಬಗ್ಗೆ. ವಿಮಾನಯಾನದ ಕತೆಯ ಬಗ್ಗೆ, ವಿಮಾನದಲ್ಲಿ ಸಿಕ್ಕ ಲಾಹೋರಿನವನ ಬಗ್ಗೆ,ಗೈಡಾದ ಹುಡುಗಿಯರ ಬಗ್ಗೆ, ದಾರಿಯಲ್ಲಿ ಸಿಕ್ಕ ಪೆರು ಮೂಲದ ಅಮೀರಿಕನ್ನರ ಬಗ್ಗೆ, ಅಮೇಜಾನಿನ ತಟದಲ್ಲಿ ಪಿರಾನಾ ಮೀನುಗಳ ಹಿಡಿದ ಬಗ್ಗೆ, ಭಾಷೆ ಬರದ ನಾಡಿನಲ್ಲಿ ಬೆಳಗ್ಗೆ ನಾಲ್ಕು ಘಂಟೆಗೆ ಎಬ್ಬಿಸು ಅಂತ ಹೇಳೋಕೆ ಪ್ರಯತ್ನಿಸಿದ್ದರ ಬಗ್ಗೆ, ಟ್ಯಾಕ್ಸಿಯಲ್ಲಿ ಚೌಕಾಸಿ ಮಾಡಬೇಕಾದ ಬಗ್ಗೆ. ಆದರೆ ಅವನ್ನೆಲ್ಲಾ ಹೇಳೋ ಬದಲು ಪುಸ್ತಕವನ್ನು ಓದಿ ಆನಂದಿಸೋದೇ ಮೇಲು ಅನ್ನಿಸುತ್ತೆ. ಇನ್ನೂ ಓದಿಲ್ಲವೆಂದರೆ ಒಮ್ಮೆ ಓದಲೇಬೇಕಾದ ಪುಸ್ತಕ.. ಪೆರುವಿನ ಪವಿತ್ರ ಕಣಿವೆಯಲ್ಲಿ.

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x