ನಾನೇಕೆ ಬರೆಯುವುದಿಲ್ಲ?: ಎಂ. ಎಸ್. ನಾರಾಯಣ


‘ನಾನೇಕೆ ಬರೆಯುವುದಿಲ್ಲ’ ಎಂಬ ಪ್ರಶ್ನೆ ಈ ಹಿಂದೆಯೂ ಕೆಲವೊಮ್ಮೆ ನನ್ನನ್ನು ಕಾಡಿರುವುದು ನಿಜ. ಹೌದು, ಎಲ್ಲರೂ ಬರೆಯಲೇಬೇಕೆಂಬ ನಿಯಮವೇನೂ ಇಲ್ಲ. ಅಸಲು, ಕೆಲವರು ಬರೆಯದೇ ಇರುವುದೇ ಕ್ಷೇಮ. ಆದರೆ ಒಂದು ಮಟ್ಟಿಗೆ ಓದಿಕೊಂಡಿರುವ ನನ್ನಲ್ಲಿ ಬರೆಯಬೇಕೆಂಬ ಕಾಂಕ್ಷೆಗೇನೂ ಕೊರತೆಯಿಲ್ಲ. ಸಮಸ್ಯೆ ಏನೆಂದರೆ, ನನ್ನ ತಿಳುವಳಿಕೆಯಂತೆ ನನಗೆ ಸುಮಾರಾಗಿ ಬರುವ ಇಂಗ್ಲೀಷಿನಷ್ಟೂ ಚೆನ್ನಾಗಿ ಕನ್ನಡ ಬರುವುದಿಲ್ಲ. ಜೊತೆಗೆ ಗಣಕಯಂತ್ರದಲ್ಲಿ ಕನ್ನಡ ಬರೆಯುವ ಕೌಶಲ್ಯವೂ ಕಡಿಮೆಯೇ. ಇಷ್ಟೆಲ್ಲಾ ಇತಿಮಿತಿಗಳಿರುವಾಗ, ನಾನು ಬರೆದು ಏನಾಗಬೇಕು? ನಾನು ಬರೆಯದೇ ಇದ್ದಲ್ಲಿ ಸಮಸ್ತ ಕನ್ನಡ ಓದುಗರಿಗೆ ಯಾವನಷ್ಟವೂ ಇಲ್ಲವಲ್ಲ ಎಂದೆನಿಸಿ, ‘ಬರವಣಿಗೆ’ ಎಂಬ ಇಲ್ಲದ ಉಸಾಬರಿ ನನಗೇಕೆ ಎಂದುಕೊಂಡು ನನ್ನ ಪಾಡಿಗೆ ನಾನು ಗಂಭೀರವಾಗಿ ಸುಮ್ಮನಿದ್ದೆ. ಆದರೆ ಮೊನ್ನೆ  ಒಂದು ಅಚಾತುರ್ಯ ನಡೆದುಹೋಯಿತು. ಆದದ್ದು ಇಷ್ಟು, ಇತ್ತೀಚೆಗೆ ಅಂತರ್ಜಾಲದಲ್ಲಿ ಅನೇಕ ಉದಯೋನ್ಮುಖ ಲೇಖಕರ ಬರಹಗಳನ್ನು ನೋಡಿದ್ದ ನನ್ನಲ್ಲಿ ಸಣ್ಣದೊಂದು ಈರ್ಷ್ಯೆ ಹೊಗೆಯಾಡುತ್ತಿದ್ದುದು ಸುಳ್ಳಲ್ಲ. ಕೆಲದಿನಗಳ ಕೆಳಗಷ್ಟೇ ನನ್ನ ನೆಚ್ಚಿನ ಲೇಖಕ, ಸನ್ಮಾನ್ಯ ಶ್ರೀ ಭೈರಪ್ಪನವರ “ನಾನೇಕೆ ಬರೆಯುತ್ತೇನೆ?” ಎಂಬ ಪುಸ್ತಕವನ್ನು ಶ್ರದ್ಧೆಯಿಂದ ಓದಿದ್ದ ನನಗೆ, ಅದೇಕೋ, ಅಂತರ್ಜಾಲದಲ್ಲಿ ಎಲ್ಲರೂ ಬ್ಲಾಗು, ಇ-ಪತ್ರಿಕೆ, ಮತ್ತೊಂದು ಎಂದು ಇಷ್ಟೆಲ್ಲಾ ಬರೆಯುತ್ತಿರುವಾಗ, ನಾನು ಕನಿಷ್ಟ “ನಾನೇಕೆ ಬರೆಯುವುದಿಲ್ಲ?” ಎನ್ನುವುದನ್ನಾದರೂ ಬರೆಯಲೇ ಬೇಕು ಎಂಬ ತೀವ್ರವಾದ ತೆವಲುಂಟಾಗಿ, ಇದ್ದಕ್ಕಿದಂತೆ ಅದೇ ಹೆಸರಿನ ಶೀರ್ಷಿಕೆಯನ್ನಿಟ್ಟುಕೊಂಡು ಲೇಖನ ಬರೆಯುವ ಚೇಷ್ಟೆಯನ್ನು ಆರಂಭಿಸಿಯೇ ಬಿಟ್ಟೆ.

ಪ್ರಾರಂಭದಲ್ಲೇ, ಇದೊಂದು ಎಡಬಿಡಂಗೀ ಶೀರ್ಷಿಕೆ ಎಂದು ಅರ್ಥವಾಗಿಹೋಯಿತು. ಮೌನದ ಮಾತಿನಂತೆ, ನಿಶ್ಯಬ್ದದ ಸದ್ದಿನಂತೆ, ಮೂಲಭೂತವಾಗಿ, ‘ನಾನೇಕೆ ಬರೆಯುವುದಿಲ್ಲ?’ ಎಂಬ ವಿಷಯವಾಗಿ ಲೇಖನ ಬರೆಯುವುದು ಎಂಬುದೇ ಒಂದು ವಿಚಿತ್ರರೀತಿಯ ವಿರೋಧಾಭಾಸವಲ್ಲವೇ? ಎಂದೆನಿಸಿತು. ಅದರಲ್ಲೂ ನನ್ನಂಥಾ ಅನನುಭವೀ ಲೇಖಕನಿಗೆ ಇಂಥಾ ವಿರೋಧಾಭಾಸದ ವಿಷಯವನ್ನು ನಿಭಾಯಿಸುವುದು ಖಂಡಿತಾ ಸುಲಭದ ಕೆಲಸವಲ್ಲ ಎಂಬ ಅರಿವೂ ಮೂಡಿತು.  ಅನುಭವವೇ ಇಲ್ಲದೇ ಇಂಥಾ ಸವಾಲನ್ನು ಎದುರಿಸುವಾಗ, ‘ಪ್ರಥಮ ಚುಂಬನಂ ದಂತಭಗ್ನಂ’ ಎಂದಾಗಬಹುದಾದ ಅಪಾಯವೂ ಇಲ್ಲದೇ ಇಲ್ಲ ಎಂದು ಭಯವಾಗತೊಡಗಿತು. ಬರೆಯುವ ಪ್ರಯತ್ನವನ್ನು ಅಲ್ಲಿಗೇ ಮೊಟಕುಗೊಳಿಸುವುದೇ ಸೂಕ್ತವೆಂದು ನನ್ನ ‘ಬುದ್ಧಿ’ ಆಗ್ರಹಿಸತೊಡಗಿತು . ಆದರೆ ಹಠಮಾರಿಯಾದ ‘ಮನಸ್ಸು’ ಒಪ್ಪುವಂತೆ ಕಾಣಲಿಲ್ಲ. ಸೆಣಸಾಟಕ್ಕೆ ಸಿದ್ಧವಾದ ‘ಬುದ್ಧಿ’ಯೂ ಸೋಲೊಪ್ಪುವ ಹಾಗೆ ಕಾಣಲಿಲ್ಲ. ನಿಧಾನವಾಗಿ, ಈ ವಿಚಾರ ಏಕೋ ನನ್ನೊಳಗಿನ ‘ಬುದ್ಧಿಮನಸ್ಸುಗಳ’ ನಡುವಿನ ತೀವ್ರ ಹಣಾಹಣೀ ಪಂದ್ಯವಾಗಿ ರೂಪುಗೊಳ್ಳತೊಡಗಿತ್ತು. ‘ಬುದ್ಧಿ’ಯು, ಉಪಾಯದಿಂದ ಹೇಗಾದರೆ ಹಾಗೆ ಲೇಖನವನ್ನು ಮುಗಿಸಿ ಕೈತೊಳೆದುಕೊಳ್ಳುವ ಉದ್ದೇಶದಿಂದ, ಹಾವೂ ಸತ್ತು ಕೋಲೂ ಮುರಿಯದಂಥ ತಂತ್ರವೊಂದನ್ನು ಹೂಡಿತು. ಪರಿಸರಕ್ಕಾಗಿ ಸೃಜನಶೀಲತೆಯನ್ನು ನಿರಾಕರಿಸಿಕೊಂಡು, ಅದ್ಭುತವಾಗಿ ಬರೆಯುವ ಸಾಮರ್ಥ್ಯವಿದ್ದರೂ, ಏನನ್ನೂ ಬರೆಯದೇ ತನ್ನಲ್ಲಿನ  ಪರಿಸರಪ್ರೇಮಿಗಾಗಿ ಹುತಾತ್ಮನಾದ ಲೇಖಕ ಎನ್ನಿಸಿಕೊಳ್ಳಬಹುದು  ಎಂಬ ಐಡಿಯಾ ಕೊಟ್ಟಿತು. ಕಾಗದವನ್ನು ಉಳಿಸುವ ಮೂಲಕ ಪರಿಸರ ಉಳಿಸಲು  ನನ್ನ ಕೊಡುಗೆ ನೀಡಲೆಂದು ಬರೆಯುವುದಿಲ್ಲ ಎಂದರೆ ಸಾರ್ವಜನಿಕರ ಅನುಕಂಪವನ್ನೂ ಗಿಟ್ಟಿಸಿಕೊಳ್ಳಬಹುದು ಎಂದು ವಿವರಿಸಿತು. ಜನಮಾನಸದಲ್ಲಿ ಪರಿಸರ ಪ್ರಙ್ಞೆಯನ್ನು ಮೂಡಿಸಿ ಹೆಚ್ಚು ಹೆಚ್ಚು ಜನರನ್ನು ಬರೆಯದಿರಲು ಪ್ರೇರೇಪಿಸಿ ತನ್ಮೂಲಕ ಕಾಗದದ ಉಳಿತಾಯದಿಂದ ಪರಿಸರ ಉಳಿಸುವ ಏಕೈಕ ಸದುದ್ದೇಶದಿಂದ ಜೀವನದಲ್ಲಿ ಬರೆದ ಏಕಮಾತ್ರ ಲೇಖನವನ್ನೂ ಚುಟುಕಾಗಿ ಇಲ್ಲಿಗೇ ಕೊನೆಗೊಳಿಸಲಾಗುತ್ತಿದೆ ಎಂಬ ಮಾತುಗಳೊಂದಿಗೆ ಬರವಣಿಗೆಯಿಂದ ಶಾಶ್ವತವಾದ ಮುಕ್ತಿ ಪಡೆಯಬಹುದೆಂಬ ಆಮಿಷವನ್ನೊಡ್ಡಿತು. ಆದರೆ ‘ಮನಸ್ಸು’, ಈ ವಾದಸರಣಿಯನ್ನು ಬಾಲಿಶವೆಂದು ತಳ್ಳಿಹಾಕಿ, ಆತ್ಮಸಾಕ್ಷಿ ಒಪ್ಪದ ಯಾವುದೇ ಕೆಲಸವೂ ಶ್ರೇಯಸ್ಕರವಲ್ಲಎಂದು ವಾದಿಸಿತು. ಈ ಆಧುನಿಕ ತಂತ್ರಙ್ಞಾನದಯುಗದಲ್ಲಿ ಇಂಥಾ ಪಲಾಯನವಾದೀ ಕುಂಟುನೆಪಗಳನ್ನು ಯಾರೂ ಒಪ್ಪುವುದಿಲ್ಲ ಎಂಬುದಾಗಿಯೂ ಪ್ರತಿಪಾದಿಸಿತು. ಅದಕ್ಕೆ ಪ್ರತಿಯಾಗಿ ‘ಬುದ್ಧಿ’ಯು, ಸ್ವಲ್ಪ ರಿಯಾಯತಿ ತೋರಿಸುತ್ತಾ, ಭಾವೀ ಬರಹಗಾರನೊಬ್ಬನ ಚೊಚ್ಚಲ ಲೇಖನಕ್ಕೆ ಇಂಥಾ ವಿಷಯದ ಆಯ್ಕೆಯೇ ವಿವೇಚನಾರಹಿತ ಆಯ್ಕೆಯೆಂಬ ನಿಲುವು ತೆಗೆದುಕೊಂಡು, ಬೇರೆ ಯಾವುದಾದರೂ ಸರಳವಾದ ವಿಷಯವನ್ನು ಆಯ್ದುಕೊಳ್ಳುವ ಪರ್ಯಾಯವನ್ನು ಸೂಚಿಸಿತು. ಅದಕ್ಕೆ ‘ಮನಸ್ಸು’ ತುಸು ಹೆಚ್ಚೇ ಭಾವುಕವಾಗಿ, ವಿವೇಕದಿಂದ ಕೂಡಿದ ಪ್ರತಿರೋಧರಹಿತ, ಸುಲಭ ಸುರಕ್ಷಿತ ಆಯ್ಕೆಗಳಲ್ಲಿ ಸವಾಲುಗಳಿರುವುದಿಲ್ಲ. ಜೀವದಹಂಗು ತೊರೆದು ಅಪಾಯಕಾರೀ ಸಾಹಸಗಳಲ್ಲಿ ತೊಡಗುವ ಸಾಹಸಿಗಳು ಕೆಲವರ ದೃಷ್ಟಿಯಲ್ಲಿ ಅವಿವೇಕಿಗಳಂತೆ ಕಾಣುವುದು ಸ್ವಾಭಾವಿಕ. ಹಾಗಂತ ಕೊರೆಯುವ ಚಳಿಯಲ್ಲಿ ಹಿಮಾಲಯವನ್ನೇರಲು ಹೊರಟ ಹುಚ್ಚು ಹುಡುಗನಿಗೆ ಬೆಚ್ಚಗೆ ಮಲಗುವುದೇ ಹೆಚ್ಚಿನ ವಿವೇಕ ಎಂದರೆ, ಅದು ಕೆಚ್ಚೆದೆಯ ಸಾಹಸಿಯು ಮೆಚ್ಚುವ ಮಾತೇ? ಎಂದೇನೇನೋ ಭಾಷಣ ಬಿಗಿಯತೊಡಗಿತು. ಈ ಹಂತದಲ್ಲಿ ಅನಂತವಾಗಿ ಸಾಗಿದ್ದ ಈ ಚರ್ಚಾಸ್ಪರ್ಧೆಗೆ ಅಂತ್ಯಹಾಡುವ ಇಂಗಿತದಿಂದ ನಾನು ಅನಿವಾರ್ಯವಾಗಿ ಮಧ್ಯಪ್ರವೇಶ ಮಾಡಬೇಕಾಯಿತು. ಇಂಥ ಸನ್ನಿವೇಷದಲ್ಲಿ ಸಾಮಾನ್ಯವಾಗಿ ಎಲ್ಲ ಸಜ್ಜನರೂ ಮಾಡುವಂತೆ, ನಾನೂ ಸಹ ಮನಸ್ಸಿನ ಪರವಾದ ತೀರ್ಪನ್ನೇ ನೀಡಿದೆ. ಅಲ್ಲದೆ, ಈ ಭಿನ್ನಾಭಿಪ್ರಾಯಕ್ಕೆ ಉಭಯ ಪಕ್ಷಗಳೂ ಇಲ್ಲಿಯೇ ಅಂತ್ಯ ಹಾಡಬೇಕೆಂದೂ, ಸ್ವೀಕರಿಸಿರುವ ಕಷ್ಟಕರ ಸವಾಲನ್ನು ಯಶಸ್ವಿಯಾಗಿ ಎದುರಿಸಲು ಸರ್ವಾಂಗೀಣ ಸಮನ್ವಯತೆ, ಪರಸ್ಪರ ಸಹಕಾರ, ಟೀಂ ವರ್ಕ್, ಇತ್ಯಾದಿಗಳು ಅತ್ಯಗತ್ಯವೆಂದೂ ತಿಳಿಸಿ, ಶುಭಹಾರೈಕೆಯೊಂದಿಗೆ ಪ್ರಕರಣಕ್ಕೆ ತೆರೆ ಎಳೆಯುವುದರಲ್ಲಿ ನನಗೆ ನಿಜಕ್ಕೂ ಸಾಕುಸಾಕಾಗಿಹೋಯಿತು. ಗೊಂದಲ ಪರಿಹಾರದ ಬಳಿಕ ವಾತಾವರಣ ಸ್ವಲ್ಪ ತಿಳಿಯಾದಂತೆ ಅನಿಸಿತು. ಕಟ್ಟಾ ಬ್ರಹ್ಮಚಾರಿಯಾದ ವಾತ್ಸಾಯನನು ರತಿಕ್ರೀಡೆಯ ಅನುಭವವೇ ಇಲ್ಲದೆ ಕಾಮಸೂತ್ರವನ್ನು ಬರೆಯುವಲ್ಲಿ ಯಶಸ್ವಿಯಾಗಿರುವುದಾದರೆ, ನನ್ನ ಅನುಭವದ ಕೊರತೆ ಈ ಲೇಖನ ಬರೆಯಲು ಅಷ್ಟೇನೂ ತೊಡಕನ್ನು ಉಂಟುಮಾಡಲಾರದೆಂಬ ಯೋಚನೆ ಬಂದು ಧೈರ್ಯ ಉಂಟಾಯಿತು. ಚಿಂತನಾಕ್ರಮದಲ್ಲಿ ಒಂದು ಮಟ್ಟಕ್ಕೆ ವ್ಯವಸ್ಥೆ ಸ್ಥಾಪಿತವಾದಂತಾದ ಭಾವನೆ ಮೂಡಿ, ಈ ಪ್ರಯತ್ನ ಒಂದು ವ್ಯರ್ಥ ಕಾಡುಹರಟೆಯಾಗಿ ಕೊನೆಗೊಂಡರೂ, ಅದನ್ನು ಕೂಡ ಒಂದು ಸಾರ್ಥಕ ಸಾಧನೆ ಎಂದೇ ಪರಿಗಣಿಸಬಹುದು ಎಂಬ ಸಮಾಧಾನವಾಯಿತು. ಈ ಮನಸ್ಥಿತಿಯಲ್ಲಿ, ಬರವಣಿಗೆಯನ್ನು ಮುಂದುವರಿಸುವ ಮೊದಲು ಈಗ ತೆಗೆದುಕೊಂಡಿರುವ ವಿಷಯವನ್ನು ತುಸು ಗಂಭೀರವಾಗಿ ಗಮನಿಸೋಣ.

‘ನಾನೇಕೆ ಬರೆಯುವುದಿಲ್ಲ?’ ಎಂಬುದು ಮೂಲತಃ ಒಂದು ಸ್ವಗತದ ಪ್ರಶ್ನೆಯಲ್ಲವೇ? ಆದರಿಲ್ಲಿ ‘ಸ್ವಗತ’ ಸ್ವಗತವಾಗಿ ಉಳಿಯದೇ ‘ನಾನು ಬರೆಯುವ ಔಚಿತ್ಯ’ದ ಜಿಙ್ಞಾಸೆಯಾಗಿ ಬಹಿರಂಗವಾಗಿ ಅನಾವರಣಗೊಂಡಿದೆ. ಹಾಗಾಗಿ ಈ ಲೇಖನವನ್ನು ಒಂದುರೀತಿಯ ಸಾರ್ವಜನಿಕ ಆತ್ಮಾವಲೋಕನ ಎನ್ನಬಹುದು. ಅಥವಾ ಇದನ್ನು ಬರವಣಿಗೆಯ ಬಗ್ಗೆ,  ಭಾವೀ ಬರಹಗಾರನೊಬ್ಬನ ಆಸೆ, ಆಕಾಂಕ್ಷೆ, ಭಯ, ಆತಂಕ, ಚಿತ್ತಸ್ಥಿರತೆ ಹಾಗೂ ಚಾಂಚಲ್ಯ ಮುಂತಾದ ಆಂತರಿಕ ತುಮುಲಗಳ ಒಕ್ಕಣಿಕೆ ಎಂದರೂ ತಪ್ಪಾಗಲಾರದು. ‘ನಾನೇಕೆ ಬರೆಯುವುದಿಲ್ಲ?’ ಎಂಬ ಶೀರ್ಷಿಕೆಯನ್ನು ನೋಡಿ, ಆಶಾವಾದೀ ಓದುಗ ಮಹಾಶಯರು, ನಾನು ಈ ಲೇಖನದಲ್ಲಿ, ನಾನೇಕೆ ಬರೆಯುವುದಿಲ್ಲ ಎನ್ನುವುದನ್ನು ಬಲವಾಗಿ ಸಮರ್ಥಿಸಿಕೊಂಡು ಇನ್ನೆಂದೆಂದಿಗೂ ಬರೆಯುವುದೇ ಇಲ್ಲವೆಂದು ದಯಮಾಡಿ ಅರ್ಥೈಸಿಕೊಳ್ಳಬಾರದು. ಬದಲಾಗಿ, ಈ ಲೇಖನವನ್ನು, ಬರಹಗಾರನು ಇಷ್ಟು ಕಾಲ ಏನನ್ನೂ ಬರೆಯದಿರಲು ಇದ್ದಿರಬಹುದಾದ  ಕಾರಣಗಳ ವಿಶ್ಲೇಷಣೆಯ  ಪ್ರಾಮಾಣಿಕ ಪ್ರಯತ್ನವೆಂದು ಮಾತ್ರ ಪರಿಗಣಿಸಬೇಕು.

ನಾನೇಕೆ ಬರೆಯುವುದಿಲ್ಲ? ಎಂಬ ಪ್ರಶ್ನೆಗೆ ಮೇಲ್ನೋಟಕ್ಕೆ ನನಗೆ ಕಾಣುವ ಅತ್ಯಂತ ಪ್ರಮುಖ ಮತ್ತು ಪ್ರಾಮಾಣಿಕ ಕಾರಣಗಳೆಂದರೆ, ನನ್ನ ಅದ್ವಿತೀಯ ಸೋಮಾರಿತನ ಹಾಗೂ  ಬರವಣಿಗೆಗೆ ಅತ್ಯಂತ ಅಗತ್ಯವಾದ ಶಿಸ್ತಿನ ಕೊರತೆ. ಕೇವಲ ನಮ್ಮಲ್ಲಿನ ದೌರ್ಬಲ್ಯಗಳನ್ನು ಗುರುತಿಸಿ ಅದನ್ನು ಅಸಹಾಯಕರಾಗಿ ಒಪ್ಪಿಕೊಳ್ಳುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ ಎಂಬುದನ್ನು ನಾನು ಬಲ್ಲೆ. ಇಷ್ಟಕ್ಕೂ, ನನ್ನಲ್ಲಿ ಆಳವಾಗಿ ಬೇರೂರಿರುವ ಅಶಿಸ್ತನ್ನು ಆಮೂಲಾಗ್ರವಾಗಿ ತೊಡೆದುಹಾಕಲು ಬರವಣಿಗೆಯಂತಹ ಚೇತೋಹಾರಿಯಾದ ಹವ್ಯಾಸವೊಂದರಲ್ಲಿ ಭಾವೋದ್ದೀಪ್ತನಾಗಿ ಲೀನವಾಗುವುದೊಂದೇ ಮಾರ್ಗವೆಂದು ನನಗೆ ಅರಿವಾಗಿದೆ. ಆದರೆ ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ನನಗಿರುವ ಸಾಮರ್ಥ್ಯದ ಬಗ್ಗೆ ಅನುಮಾನಗಳಿಲ್ಲದಿಲ್ಲ. ಅದೇನೇ ಆದರೂ, ನಾನು ಈಗ ಈ ದೌರ್ಬಲ್ಯಗಳನ್ನು ಮೀರುವ ಧೃಢ ಸಂಕಲ್ಪದೊಂದಿಗೆ ಕಾರ್ಯಪ್ರವೃತ್ತನಾಗಲಿದ್ದೇನೆ. ಸದ್ಯದಲ್ಲೇ ಈ ಅಂಶವನ್ನು ನನ್ನ ಸರಣಿ ಲೇಖನಗಳಿಂದ ನಿರೂಪಿಸಲಿದ್ದೇನೆ ಎಂದು ಈಗಲೇ ಓದುಗರನ್ನು ಎಚ್ಚರಿಸುವುದು ಸೂಕ್ತವೆಂದು ಕೂಡಾ ಭಾವಿಸುತ್ತೇನೆ. ನಾನು ಬರೆಯದಿರಲು ಎರಡನೇ ಮುಖ್ಯ ಕಾರಣವೆಂದರೆ ನನ್ನಲ್ಲಿರುವ ಸ್ವಂತಿಕೆ ಹಾಗೂ ಸೃಜನಶೀಲತೆಯ ಅಭಾವ. ಈ ಕೊರತೆಯನ್ನು ನೀಗಿಸಿಕೊಳ್ಳಲು ನಾನು ನಮ್ರನಾಗಿ  ವಿವಿಧ ಕ್ಷೇತ್ರಗಳಲ್ಲಿ, ಕೇವಲ ಪ್ರೇರಣೆಯನ್ನು ಆಶ್ರಯಿಸಿ ಯಶಸ್ಸ್ವಿಯಾಗಿರುವ ಸೃಜನಶೀಲತಾ ರಹಿತ ಚತುರ ಕ್ರಿಯಾಶೀಲ ವ್ಯಕ್ತಿಗಳಿಂದ ಪ್ರೇರಣೆ ಪಡೆದಲ್ಲಿ ತಪ್ಪಿಲ್ಲವಷ್ಟೆ. ಈ ಸಂದರ್ಭದಲ್ಲಿ ಸ್ವಂತ ಐಡಿಯಾಗಳ ಕೊರತೆಯಿದ್ದಾಗ್ಯೂ ಜನಪದ, ಪುರಾಣ ಕಥೆಗಳಿಂದ ಪ್ರೇರಣೆ ಪಡೆದು ಕೃತಿಗಳನ್ನು ರಚಿಸಿ ತಮ್ಮ ವ್ಯವಹಾರ ಕೌಶಲ್ಯದಿಂದ ಸಾರಸ್ವತ ಲೋಕದಲ್ಲಿ ಅಗ್ರಗಣ್ಯರೊಂದಿಗೆ ಸ್ಥಾನಗಳಿಸಿರುವ ಸಾಹಿತಿಗಳ ನೆನಪು ನನ್ನ ವಿಶ್ವಾಸವನ್ನು ಹೆಚ್ಚಿಸಿರುವುದು ಸುಳ್ಳಲ್ಲ.

ನಿರ್ದಿಷ್ಟವಾದ ಪದಗಳು ನಿಖರವಾಗಿ ನೆನಪಿಲ್ಲ. ಆದರೂ ಸ್ಥೂಲವಾಗಿ ಹೇಳುವುದಾದರೆ, ‘ಲೇಖಕನು ಬರೆಯುತ್ತಾ ಹೋದಂತೆಲ್ಲಾ, ಸಾರ್ವಜನಿಕವಾಗಿ ಬೆತ್ತಲಾಗುತ್ತಾ ಹೋಗುತ್ತಾನೆ’, ಎಂಬರ್ಥಕೊಡುವ ಈ ಮಾತನ್ನು ಕನ್ನಡದ ಯಶಸ್ವೀ ಲೇಖಕರಾದ ರವಿ ಬೆಳಗೆರೆಯವರು ಬರೆದಿರುವುದನ್ನು ಎಲ್ಲೋ ಓದಿರುವ ನೆನಪು. ಅಕ್ಷರಾರ್ಥವಾಗಿಯೂ, ಆಲಂಕಾರಿಕಾರ್ಥವಾಗಿಯೂ ಈ ‘ಬೆತ್ತಲಾಗುವ ಪ್ರಕ್ರಿಯೆ’ ವೈಯುಕ್ತಿಕವಾಗಿ ನನಗೆ ತುಂಬಾ ಮುಜುಗರ ಉಂಟುಮಾಡುವ ವಿಚಾರ. ಬರೆಯುವ ಬಗ್ಗೆ ನನಗಿರುವ ಹಿಂಜರಿಕೆಗೆ ಇದೂ ಒಂದು ಕಾರಣವಾಗಿರಬಹುದು. ಹೆಚ್ಚು ಸೃಜನಶೀಲತೆಯನ್ನು ಬೇಡುವ ಕಥೆ, ಕಾವ್ಯ, ನಾಟಕ, ಕಾದಂಬರಿ ಮುಂತಾದ ಪ್ರಕಾರಗಳಲ್ಲಿ ಈ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ. ಆದರೆ ಹೆಚ್ಚಿನ ವೈಯುಕ್ತಿಕ ವಿವರಗಳನ್ನೂ, ನಿಲುವುಗಳನ್ನೂ ವ್ಯಕ್ತಪಡಿಸಬೇಕಾಗುವ ಪ್ರಬಂಧ ಲೇಖನದಲ್ಲಿ ನಿಜಕ್ಕೂ ಇದೊಂದು ದೊಡ್ಡ ಸಮಸ್ಯೆಯೆಂದು ನನ್ನ ಗ್ರಹಿಕೆ. ಈ ಸಂದರ್ಭದಲ್ಲಿ, ನಾನು ಹಿಂದೆಲ್ಲೋ ಓದಿದ್ದ ‘ಫ಼್ಯಾಷನ್’ ಬಗೆಗಿರುವ ರೋಚಕವಾದ ವಿವರಣೆಯೊಂದು ಇದ್ದಕ್ಕಿದ್ದಂತೆ ನೆನಪಿಗೆಬಂತು. ಅದೇನೆಂದು ಕೇಳಿ, ಚೆನ್ನಾಗಿದೆ. ‘ಎಲ್ಲಾ ಫ಼್ಯಾಷನ್ನುಗಳೂ, ಒಪ್ಪಿಕೊಂಡ ಬಟ್ಟೆ ಧರಿಸುವ ಆಸೆಯ ಹಾಗೂ ಒಪ್ಪಿಕೊಳ್ಳದ ಬಟ್ಟೆ ಬಿಚ್ಚುವ ಆಸೆಯ ನಡುವಿನ ರಾಜಿಯೇ ಆಗಿದೆ’. (ಇಂಗ್ಲಿಷ್ ಮೂಲ:  ಆಲ್ ಫ಼್ಯಾಷನ್ ಈಸ್ ಎ ಕಾಂಪ್ರೊಮೈಜ಼್ ಬಿಟ್ವೀನ್ ಬಿಟ್ವೀನ್ ದಿ ಅಡ್ಮಿಟ್ಟೆಡ್ ಡಿಜ಼ೈರ್ ಟು ಡ್ರೆಸ್ಸ್ ಅಂಡ್ ದಿ ಅನಡ್ಮಿಟ್ಟೆಡ್ ಡಿಜ಼ೈರ್ ಟು ಅಂಡ್ರೆಸ್ಸ್). ಈ ಉಕ್ತಿಯನ್ನು ಪ್ರಸಕ್ತ ಹಿನ್ನಲೆಯಲ್ಲಿ ಗಮನಿಸಿದಾಗ ನನ್ನ ಮಂದಮತಿಗೆ ಹೊಸ ಹೊಳಹೊಂದು ದೊರೆತು, ಬರೆಯುವುದರ ಬಗ್ಗೆ ನನಗಿರುವ ಹಿಂಜರಿಕೆಯನ್ನು ಕೊಂಚ ಕಡಿಮೆ ಮಾಡಿರುವುದು ಸಂತಸದ ವಿಷಯ. ಏಕೆಂದರೆ, ನಾನು ಗಮನಿಸಿದಂತೆ, ಹೆಸರಾಂತ ಲೇಖಕರೆಲ್ಲರೂ ಅಕ್ಷರಾರ್ಥವಾಗಿಯೂ ಅಲಂಕಾರಿಕಾರ್ಥವಾಗಿಯೂ ತಕ್ಕಮಟ್ಟಿಗೆ ಬಟ್ಟೆ ತೊಟ್ಟ ಸಭ್ಯರೇ ಆಗಿದ್ದಾರೆ. ಅಂದರೆ ಇವರೆಲ್ಲರೂ ಬೆತ್ತಲಾಗುವ ವಿಚಾರದಲ್ಲಿ ತಮ್ಮ ಕೌಶಲ್ಯವನ್ನು ಬಳಸಿ ಒಂದು ಆರೋಗ್ಯಕರ ಸಮತೋಲನವನ್ನು ಕಂಡುಕೊಂಡಿರುವುದರಿಂದಲೇ ಇದು ಸಾಧ್ಯವಾಗಿದೆ ಎಂದು ತಾನೆ ಅರ್ಥ. ನಾನು ಕೂಡಾ ಹೆಚ್ಚಿನ ಪರಿಶ್ರಮದಿಂದ ಈ ಕಲೆಗಾರಿಕೆಯನ್ನು ಕರಗತ ಮಾಡಿಕೊಂಡಲ್ಲಿ ನನ್ನಿಂದಲೂ ಬಟ್ಟೆ ತೊಟ್ಟ ಬರವಣಿಗೆ  ಸಾಧ್ಯವಾಗಬಹುದು ಎಂದನಿಸುತ್ತಿದೆ. ಇದೇ ಅಂಶದ ಇನ್ನೊಂದು ಮಗ್ಗುಲು ನಮ್ಮ ಆಪ್ತೇಷ್ಟರನ್ನು ಸಂಬಂಧಿಸಿದ್ದಾಗಿದೆ. ಯಾವುದೇ ದುರುದ್ದೇಶವಿಲ್ಲದೆಯೂ, ಏನೋ ಬರೆಯುವ ಭರದಲ್ಲಿ ನಮ್ಮ ಪರಿಚಿತರ, ಆಪ್ತರ ವೈಯುಕ್ತಿಕ ವಿವರಗಳು ಲೇಖನದೊಳಗೆ ತೂರಿಬಂದು ಅವರ ಭಾವನೆಗಳನ್ನು ನೋಯಿಸಿ, ಸಂಬಂಧಗಳು ಹಾಳಾಗುವ ಸಾಧ್ಯತೆಗಳೂ ಇಲ್ಲದಿಲ್ಲ. ಹಾಗಾಗಿ ಈ ವಿಷಯವೂ ಬರೆಯುವ ಬಗ್ಗೆ ನನ್ನ ಹಿಂಜರಿಕೆಗಿರುವ ಕಾರಣಗಳಲ್ಲೊಂದು. ಬಹುಶಃ  ಒಬ್ಬ ಬರಹಗಾರ ಈ ಸೂಕ್ಷ್ಮತೆಯನ್ನು ಅರ್ಥಮಾಡಿಕೊಂಡು ವಿಶೇಷವಾದ ಜವಾಬ್ದಾರಿಯಿಂದ ಕೆಲಸನಿರ್ವಹಿಸ ಬೇಕಾಗುವುದೆಂದು ಭಾವಿಸುತ್ತೇನೆ.

ಮಾನವ ವಿಕಸನದ ಬಗ್ಗೆ ಶ್ರೇಷ್ಠ ಲೇಖಕನಾದ ಫ಼್ರಾನ್ಸಿಸ್ ಬೇಕನ್ನನ ಪ್ರಸಿದ್ಧ ಹೇಳಿಕೆಯೊಂದು ಹೀಗಿದೆ, ‘ಓದು ಮನುಷ್ಯನನ್ನು ಪೂರ್ಣನನ್ನಾಗಿಯೂ, ಸಮ್ಮೇಳನಗಳು ಸಿದ್ಧ ಮನುಷ್ಯನನ್ನಾಗಿಯೂ, ಬರವಣಿಗೆ ನಿಖರ ಮನುಷ್ಯನನ್ನಾಗಿಯೂ ಮಾಡುತ್ತದೆ’ (ಇಂಗ್ಲಿಷ್ ಮೂಲ: ರೀಡಿಂಗ್ ಮೇಕೆತ್ ಎ ಫ಼ುಲ್ ಮ್ಯಾನ್, ಕಾನ್ಫ಼ರೆನ್ಸಸ್ ಎ ರೆಡಿ ಮ್ಯಾನ್ ಅಂಡ್ ರೈಟಿಂಗ್ ಎನ್ ಎಕ್ಸಾಕ್ಟ್ ಮ್ಯಾನ್). ನಿಜ, ಈ ಹೇಳಿಕೆಯು, ವ್ಯಕ್ತಿತ್ವ ವಿಕಸನದ ಪಥದಲ್ಲಿ ಬರವಣಿಗೆಯ ಮಹತ್ವವನ್ನು ತಿಳಿಸುತ್ತದೆ. ಆದರೆ ಬರವಣಿಗೆ ಸಾರ್ವಜನಿಕವಾದಾಗ ಕೆಲವೊಂದು ಸಮಸ್ಯೆಗಳನ್ನೂ ತಂದೊಡ್ಡುತ್ತದೆ. ಲೇಖಕನೊಬ್ಬನ ನಿಲುವು, ಗ್ರಹಿಕೆ, ಅಭಿಪ್ರಾಯಗಳು ಒಂದು ಕಾಲಮಾನದ ಅವಧಿಯಲ್ಲಿ ಸಾರ್ವಜನಿಕ ವಲಯದಲ್ಲಿ ದಾಖಲಾಗುವುದು ಸರಿಯಷ್ಟೆ. ಕಾಲಾಂತರದಲ್ಲಿ ಆ ಲೇಖಕನ ನಿಲುವು, ಗ್ರಹಿಕೆ ಹಾಗೂ ಅಭಿಪ್ರಾಯಗಳೇನಾದರೂ ಬದಲಾದಲ್ಲಿ, ಸಮಾಜದ ಒಂದು ವರ್ಗವಾದರೂ ಅಂತಹ ಬದಲಾವಣೆಗಳ ಬಗ್ಗೆ ಪ್ರಶ್ನೆಮಾಡುತ್ತದೆ. ಸಾಮಾನ್ಯವಾಗಿ ಸಮಾಜ, ಲೇಖಕರ ನಿಲುವುಗಳಲ್ಲಿ ಏಕರೂಪದ ಸ್ಥಿರತೆಯನ್ನು ನಿರೀಕ್ಷಿಸುತ್ತದೆ. ಇಲ್ಲವಾದಲ್ಲಿ ಸಮಾಧಾನಕರ ವಿವರಣೆಯನ್ನು ಬಯಸುತ್ತದೆ. ‘ಹಿಂದೊಮ್ಮೆ ನೀವು ಆ ಲೇಖನದಲ್ಲಿ ಹಾಗೆ ಬರೆದಿದ್ದಿರಲ್ಲ, ಮತ್ತೀಗ ಈ ಲೇಖನದಲ್ಲಿ ಹೀಗೇಕೆ ಬರೆದಿದ್ದೀರಿ? ಎರಡರಲ್ಲಿ ಯಾವುದು ಸರಿ? ಆಗ ಹಾಗನಿಸಿದ್ದ ನಿಮಗೆ ಈಗ ಹೀಗನಿಸಿದ್ದೇಕೆ?’ ಎಂದೆಲ್ಲಾ ಕೇಳಿ ಪೇಚಿಗೆ ಸಿಲುಕಿಸದೇ ಬಿಡುವುದಿಲ್ಲ. ಇವುಗಳಿಂದ ಪಾರಾಗಲು ಒಬ್ಬ ಲೇಖಕನು ಸದಾ ಜಾಗೃತನಾಗಿರಲು ಸಾಧ್ಯವಿಲ್ಲ. ಒಂದುವೇಳೆ ಹಾಗೆ ಸದಾ ಜಾಗೃತನಾಗಿದ್ದಲ್ಲಿ, ಅವನು ಸಹಜವಾಗಿರಲು ಸಾಧ್ಯವಿಲ್ಲ. ಇವೆಲ್ಲಾ ಕೆಲವೊಮ್ಮೆ ರೇಜಿಗೆ ಹುಟ್ಟಿಸುವುದು ಸುಳ್ಳಲ್ಲ. ಆದರೆ ಲೇಖಕರಲ್ಲದವರಿಗೆ ಬಹುತೇಕ ಈ ಸಮಸ್ಯೆಗಳಿರುವುದಿಲ್ಲ. ಅವರ ನಿಲುವುಗಳು ಬದಲಾದರೂ, ಸಾಮಾನ್ಯವಾಗಿ ಅವಕ್ಕೆ ದಾಖಲೆಗಳಿರುವುದಿಲ್ಲವಾದ್ದರಿಂದ ಅವರು ಸುರಕ್ಷಿತರು. ಬಹುಶಃ, ಲೇಖಕರು ಈ ಸಮಸ್ಯೆಯನ್ನು ಕೆಲವೊಮ್ಮೆ ಜಾಣತನದಿಂದ ನಿಭಾಯಿಸಿದರೆ ಕೆಲವೊಮ್ಮೆ ವೃತ್ತಿಸಂಬಂಧೀ ಗಂಡಾಂತರಗಳೆಂದು ಒಪ್ಪಿಕೊಂಡು ಸಹಿಸಿಕೊಳ್ಳಬೇಕಾದೀತೇನೋ? ಆದರೂ ಇದು ತೀರಾ ಬರವಣಿಗೆಯನ್ನೇ ಬಹಿಷ್ಕರಿಸುವಂಥಾ ಪ್ರಬಲ ಕಾರಣವಾಗಲಾರದು ಎಂದು ಒಪ್ಪುತ್ತೇನೆ.

ಉಪಸಂಹಾರಕ್ಕೆ ಮುನ್ನ ಇನ್ನೊಂದು ಕಾರಣದ ಪ್ರಸ್ತಾಪ ಮಾಡಿಬಿಡುತ್ತೇನೆ. ಲೇಖಕರು, ತಮ್ಮ ಸೃಷ್ಠಿಯ ಅಸಮಂಜಸ ಹಾಗೂ ಅನಾವಶ್ಯಕ ಎನಿಸಿದ ಭಾಗಗಳನ್ನು ನಿರ್ದಾಕ್ಷಿಣ್ಯವಾಗಿ  ನಿರ್ಲಿಪ್ತತೆಯಿಂದ ಕಸದಬುಟ್ಟಿಗೆ ಎಸೆಯುವ ಕ್ಷಮತೆಯನ್ನು ಹೊಂದಿರಬೇಕೆಂದು ತಿಳಿದವರು ಹೇಳುತ್ತಾರೆ. ಲೇಖಕರು, ತಮ್ಮ ಸೃಷ್ಠಿಯ ಸಮಂಜಸ ಹಾಗೂ ಅವಶ್ಯಕ ಎನಿಸಿದ ಭಾಗಗಳನ್ನು ಸಂಪಾದಕರು ನಿರ್ದಾಕ್ಷಿಣ್ಯವಾಗಿ ಕಸದಬುಟ್ಟಿಗೆ ಎಸೆಯುವುದನ್ನು ನಿರ್ಲಿಪ್ತತೆಯಿಂದ ನೋಡುವ ಕ್ಷಮತೆಯನ್ನೂ ಹೊಂದಿರಬೇಕೆಂದು ಹೇಳುವುದನ್ನೂ ನಾನು ಕೇಳಿದ್ದೇನೆ. ನನ್ನಲ್ಲಿ ಇಂಥಾ ಕ್ಷಮತೆಗಳ ತೀವ್ರ ಕೊರತೆಯಿರುವುದು ನಾನು ಬರೆಯದಿರಲು ಇದ್ದ ಕೊನೆಯ ಕಾರಣ. ಆದರೀಗ ನೀರಿಗಿಳಿದಾಗಿದೆ. ‘ಈಸಬೇಕು, ಈಸಿ ಜಯಿಸಬೇಕು.’  ಕಷ್ಟಪಟ್ಟು ಯೋಗ, ಧ್ಯಾನ ಮುಂತಾದುವುಗಳ ಸಹಾಯದಿಂದಾದರೂ ಆ ಕ್ಷಮತೆಯನ್ನೂ ಬೆಳೆಸಿಕೊಳ್ಳಲೇ ಬೇಕಾಗಿದೆ. ಬೇರೆ ಗತ್ಯಂತರವಿಲ್ಲ, ಬೆಳೆಸಿಕೊಳ್ಳುತ್ತೇನೆ.

ಬರವಣಿಗೆಯ ಬಗ್ಗೆ ಸಾಕಷ್ಟು ಕೂಲಂಕುಶವಾದ ಚಿಂತನೆ ಹಾಗೂ ವಿಷ್ಲೇಷಣೆಯನ್ನು ನಡೆಸಿದಮೇಲೆ, ನನಗೆ ಬರವಣಿಗೆಯಿಂದ ಒಬ್ಬ ಲೇಖಕನು ವೈಯುಕ್ತಿಕವಾಗಿ ಕಳೆದುಕೊಳ್ಳುವುದಕ್ಕಿಂತ ಗಳಿಸಿ, ಉಳಿಸಿ ಕೊಳ್ಳುವುದೇ ಹೆಚ್ಚೆನಿಸುತ್ತಿದೆ. ಆದರೆ, ಆ ಲೇಖನಗಳ ಓದುಗರ ಗಳಿಕೆ ಉಳಿತಾಯಗಳನ್ನೂ ಪರಿಗಣಿಸಿದಲ್ಲಿ, ಬಹುಶಃ ಚಿತ್ರಣ ಬೇರೆಯದೇ ಆಯಾಮವನ್ನು ಪಡೆದುಕೊಳ್ಳಬಹುದು. ವಿಷಯಾಂತರವಾಗಿ ಸ್ವಲ್ಪ ಗೊಂದಲವಾಯಿತೇನೋ? ಇರಲಿ, ಈಗ ಹೇಗೂ  ಬರೆಯುವುದಾಗಿ ನಿರ್ಧರಿಸುವುದರಿಂದ ಸಾಧ್ಯವಾದರೆ ಮುಂದೆ ಅದನ್ನೇ  ಒಂದು ಲೇಖನದ ವಸ್ತುವಾಗಿಸಿಕೊಳ್ಳುತ್ತೇನೆ. ಇನ್ನು ಹೆಚ್ಚು ತಡಮಾಡದೇ ನನ್ನಲ್ಲಿನ ಕೊರತೆಗಳನ್ನು ನೀಗಿಸಿಕೊಂಡು ಶಿಸ್ತು ಶ್ರದ್ಧೆಗಳಿಂದ ಓತಪ್ರೋತವಾಗಿ ಬರೆಯಲು ತೊಡಗುತ್ತೇನೆ. ಪ್ರಿಯ ಓದುಗರು ಸಹಿಸಿ ಹರಸಬೇಕು. ವಿಶ್ ಮಿ ಗುಡ್ ಲಕ್.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
kumara
kumara
10 years ago

ಬಹಳ ಚೆನ್ನಾಗಿ ಇದೆ ನಾಣಾ

narayana
narayana
10 years ago
Reply to  kumara

ಥ್ಯಾಂಕ್ಸ್ ಕುಮಾರ

subhas
subhas
10 years ago

good going naani

Techa
Techa
10 years ago

Naana, bahala chennagi bardiddeeya. Congratulations !!!

narayana
narayana
10 years ago

thanks subby

Ramesh N Chandra
Ramesh N Chandra
10 years ago

after a long time read a long article in Kannada!!
keep writing, ‘idhe nepadhalli’ I will convert my ” NANEKE ODHUVUDHILLA”..!!

Upendra
Upendra
10 years ago

ನಿಮ್ಮ ಭಾಷೆಯ ಮೇಲಿನ ಹಿಡಿತ ತುಂಬಾ ಇಷ್ಟ ಆಯ್ತು. ಇಂಗ್ಲೀಷ್ ಎಷ್ಟು ಚೆನ್ನಾಗಿ ಬರುತ್ತೆ ಅಂತ ಗೊತ್ತಿಲ್ಲ. ಕನ್ನಡ ತುಂಬಾ ಚೆನ್ನಾಗಿದೆ. ಇನ್ನೂ ಬರೆಯಿರಿ …

7
0
Would love your thoughts, please comment.x
()
x