ಆಹಾ….! ನಾನೂ ಸಾಮಾನ್ಯ ಗೃಹಿಣಿಯರಂತೆ ಸುಮ್ನೆ ಮನೆ ನಿಭಾಯಿಸಿಕೊಂಡು, ಮನೇಲಿ ಹಾಯಾಗಿ ಇರಬಹುದಿತ್ತು, ಅಂತ ಎಷ್ಟೋಸಲ ಅನಿಸಿದ್ದುಂಟು. ಕೆಲಸ ಬೇಡ ಅಂತ ಬಿಡುವಂತಿಲ್ಲ…! ಸರಕಾರಿ ಕೆಲಸ…! ಮೇಲಾಗಿ ಶಿಕ್ಷಕ ವೃತ್ತಿ…. ಎಷ್ಟೊಂದು ಸುರಕ್ಷಿತ, ನೆಮ್ಮದಿ. ಆದರೆ ಕೆಲವೊಮ್ಮೆ ಮನೆ, ಶಾಲೆ ಎರಡನ್ನೂ ನಿಭಾಯಿಸುವಾಗ ಉಶ್ಯಪ್ಪ ಅಂತ ಬಸವಳಿದು, ಕಾಲಿಗೆ ಗಾಲಿ ಕಟ್ಟಿ ಇಪ್ಪತ್ತು ವರ್ಷಗಳಿಂದಲೂ ಬಸ್ಸಿನ ಹಿಂದೆ ಓಡುವಾಗ, ಏನೋ ಟೆನ್ ಶನ್ ನಲ್ಲಿ ಮನೆಯವರ ಹತ್ರ ಬಯ್ಸಿಕೊಡಾಗ, ಮಕ್ಕಳ ಓದಿನ ಬಗ್ಗೆ-ಊಟದ ಬಗ್ಗೆ-ಆರೋಗ್ಯದ ಬಗ್ಗೆ ಸಮಸ್ಯೆ ಆದಾಗ, ಗೃಹಿಣಿಯರು ಎಷ್ಟು ಸುಖಿಗಳು…..! ನಾನು ಓದಿ,ನೌಕರಿ ಹಿಡಿದು ನನ್ನ ಕಾಲ ಮೇಲೆ ನಾನೇ ಕಲ್ಲು ಹಾಕಿಕೊಂಡನೇ ಎಂದು ಹತಾಶಳಾಗಿ ಅಂದಿದ್ದುಂಟು… ಗಂಡನನ್ನು, ಮಕ್ಕಳನ್ನು ಶಾಲೆಗೆ ಕಳಿಸಿ, ಮನೆ ಕೆಲಸ ಮುಗಿಸಿ ಹಾಯಾಗಿ ಒಬ್ಬಳೇ ಸಾಯಂಕಾಲದ ಒರೆಗೂ ಹಾಸಿಗೆ ಮೇಲೆ ಕಾದಂಬರಿ ಓದುತ್ತ ಹೊರಳಾಡ ಬಹುದಿತ್ತು…..! ಮನೆಯಲ್ಲಿ ಒಂಟಿಯಾಗಿರುವಾಗ ನಾನೇ ರಾಜಾ, ನಾನೇ ರಾಣಿ…..! ಗಂಡನಿಗೆ ಮಕ್ಕಳಿಗೆ ಬೇಕಾದ ಹಾಗೆ ಬಿಸಿ ಬಿಸಿ ಅಡುಗೆ, ಹೊಸ ರುಚಿಗಳನ್ನು ಮಾಡಿ ಸೈ ಅನಿಸಿಕೊಂಡು, ಗಂಡನ ಪಗಾರ ನಾನೇ ನಿಭಾಯಿಸಬಹುದಿತ್ತು. ಮನೆಯ ನಿಜವಾದ ಯಜಮಾನಿ ನಾನೇ ಆಗಬಹುದಿತ್ತು ಎಂದು ಕೊಳ್ಳುತ್ತಿದ್ದೆ. ಗೃಹಿಣಿಯಾಗಿ ನನ್ನನ್ನು ನಾ ಕಣ್ಣು ತುಂಬಿಕೊಳ್ಳುತ್ತಿರುವಾಗ, ನನ್ನೊಳಗಿನ ವಿಚಾರವಾದಿ “ನಾ” ಚಂಗನೇ ಜಿಗಿದು ಹೊರ ಬರಬೇಕೇ…?
“ಏನಮ್ಮಾ, ಗೃಹಿಣಿಯಾಗ್ತೀಯಾ…? ಅದೇನು ನೀ ಟೀಚರ್ ಆದಷ್ಟು ಸುಲಭಾ ಅಂದುಕೊಂಡಿದಿಯಾ? ಇಲ್ಲಿ ನಿನಗೆ ಸರಕಾರ ಮೊದಲು ಸಿಲೇಬಸ್ ಕೊಟ್ಟು, ಓದಲಿಕ್ಕೆ ಟೈಮ್ ಕೊಟ್ಟು, ನಂತರ ಪರೀಕ್ಷೆ ಇಡ್ತದೆ. ಸಾಕಷ್ಟು ತಯಾರಿ ಮಾಡಿ ಓದಿ ಪಾಸಾಗಿ ನೌಕರಿ ತಗೋತಿಯಾ.ಇಲ್ಲಿ ಮೊದಲು ಪಾಠ ನಂತರ ಪರೀಕ್ಷೆ. ಅಲ್ಲಿ ಹಾಗಲ್ಲ. ಯಾವ ಸಿಲೇಬಸ್ ನೂ ಇಲ್ಲ. ಟೈಮ್ ನೂ ಇಲ್ಲ. ಯಾವ ತರಬೇತಿನೂ ಇಲ್ಲ. ಮೊದಲು ಪರಿಕ್ಷೆ, ನಂತರ ಪಾಠ.” ಹೀಗೆ ಅಳ್ಳು ಹುರಿದಂತ ಅವಳ ಮಾತುಗಳು ನನ್ನ ಜಂಗಾಬಲ ಉಡುಗಿಸ ತೊಡಗಿದವು. ಇನ್ನೂ ಮುಂದುವರಿದು, “ ನೀ ಟೀಚರ್ ಅಂದ್ರೆ ಶಿಕ್ಷಕಿ ಮಾತ್ರ. ಗೃಹಿಣಿ ಅಂದ್ರೆ ಅವಳಲ್ಲಿ ಇಡೀ ವಿಶ್ವವೇ ಅಡಗಿರುತ್ತೆ. ಮನೆಯ ಕಸ, ಮುಸುರೆ, ಬಟ್ಟೆ, ಅಡುಗೆ, ಮಕ್ಕಳ ಓದು, ಆರೋಗ್ಯ, ಸಂತೆ-ಪೇಟೆ, ಹಿರಿಯರ-ಕಿರಿಯರ ಸೇವೆ, ಪೂಜೆ, ಸಂಪ್ರದಾಯ ನಿರ್ವಹಣೆ….ಒಂದೇ, ಎರಡೇ….? ಗೃಹಿಣಿಯರೆಲ್ಲ ಕಾದಂಬರಿ ಓದುವಂತಿದ್ದರೆ, ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳೆಯರದೇ ಸಿಂಹಪಾಲಾಗುತ್ತಿತ್ತು…..” ಎಂದಾಗ ನಾ ಕನಸಿನಿಂದ ಹೊರಬಂದೆ. ಆದರೂ ಮನೆಯಲ್ಲಿ ಎಲ್ಲರನ್ನೂ ಹೊರಗೆ ಕಳಿಸಿ, ಸ್ವಚ್ಛ- ಸುಂದರ ಮನೆಯಲ್ಲಿ ಏಕಾಂಗಿಯಾಗಿ ಕೆಲವು ಗಂಟೆಗಳನ್ನು ನನಗೆ ಇಷ್ಟ ಬಂದಂತೆ ನನಗಾಗಿ ಕಳೆಯಬೇಕು ಎಂಬುದು ನನ್ನ ಬಹುದಿನದ ಆಸೆ. ಅದಕ್ಕಾಗಿ ಕೆಲವೊಮ್ಮೆ ಸುಮ್ನೆ ಸಣ್ಣ ಮಕ್ಕಳಂತೆ ನೆವ ಮಾಡಿ ರಜೆ ಹಾಕಿ ಮನೆಯಲ್ಲಿ ಇದ್ದದ್ದುಂಟು. ಅದಕ್ಕೇ ಜೀವನದಲ್ಲಿ ಒಂಟಿಯಾಗಿರಲು ಎಂದಿಗೂ ಬೇಸರ ಪಡಬಾರದು. ಒಂಟಿತನದ ಪರಮಾನಂದ ಸವಿಯಲೇ ಸಿದ್ದಾರ್ಥ ಅರ್ಧ ರಾತ್ರಿಯಲ್ಲಿ ಮನೆಬಿಟ್ಟು ಹೋದದು….! ಎಲ್ಲರೂ ಸಿದ್ದಾರ್ಥ ರಾಗಲು ಆಗಲ್ಲ ನೋಡಿ, ಅದಕ್ಕೇ ಗಂಡಸರಿಗೇ ಹೆಂಡತಿ ತವರಿಗೆ ಹೊರಟರೆ… ಸ್ವರ್ಗ ಮೂರೇ ಮೂರು ಗೇಣು.
ಇನ್ನೇನು ಎಲ್ಲರನ್ನು ಶಾಲೆಗೆ ಕಳಿಸಿದ್ದಾಯ್ತು, ಕೆಲಸ ಮುಗಿದ್ದಾತು, ಒಂದೆರಡು ಗಂಟೆ ಮಲಗಿ ಏಳಬೇಕೆಂದು ನನ್ನ ಪ್ರೀತಿಯ ಮಧ್ಯಾನ್ಹದ ನಿದ್ದಿಯನ್ನು ಅಪ್ಪಿ ಮಲಗಿದಾಗ, ಪಕ್ಕದ ಮನೆಯ ಗಿರಿಜಮ್ಮ ಕದ ಬಾರಿಸಿ ಕೂಗಬೇಕೇ….? “ ಯಾಕ್ರೀ ಟೀಚರ್ ಶಾಲೀಗೆ ಹೋಗಿಲ್ಲಲ್ಲಾ… ಮಕ್ಕೊಂಡೀರೆನ?” ಎಂದಾಗ ಅವಳ ಖಟ್ನ ದನಿಯಿಂದ ನನ್ನ ಎದಿಯಲ್ಲಿ ಚೂರಿಹಾಕಿದಂತಾಗಿ ಪಕ್ಕನೇ ಎದ್ದೆ. “ ಓ! ಇದಾ ಗಿರಿಜಮ್ಮ… ಪೀಡೆ… ನಿದ್ದೆ ಕೆಡಿಸೋಕೆ ಬಂದೇ ಬಿಟ್ಲಾ…? ಅನಕೊಂಡು ಕೂಗಿ ಕೂಗಿ ಹೋಗ್ತಾಳೆ ಬಿಡು ಅಂತ ಸುಮ್ನೆ ಮಲಗಿದೆ. “ಏನ್ರಿ ಟೀಚರ್ ನಿದ್ದಿ ಜೋರ್ ಹತ್ತೇತೇನ್ರಿ…?” ಅಂತಾ ರೂಮಿನ ಕಿಟಕಿಯ ಪಕ್ಕನೇ ಬಂದು ಕೂಗಬೇಕಾ? ಅಂದ್ರೆ ಇವಳು ನನ್ನನ್ನು ಎಬ್ಬಿಸಿ ನಿದ್ದಿ ಹತ್ತಿದೆಯೋ ಇಲ್ಲವೋ ಎಂದು ವಿಚಾರಿಸುವವಳು. ಇವಳ ಈ ಸಿಐಡಿ ಕೆಲಸದಿಂದಲೇ ಓಣಿಯಲ್ಲಿ ಅದೆಷ್ಟೋ ಸಾವಿನ ಸತ್ಯಗಳು ಹೊರಬಂದಿದ್ದವು. ಕಿವಿಯಲ್ಲೇ ಬಂದು ಗಂಟಿ ಬಾರಿಸಿದಂತೆ ಕರೆದರೂ ಏಳದಿದ್ದರೆ “ ಟೀಚರ್ ಯಾಕ ಏಳವಲ್ರು. ಅದಾರೋ ಸತ್ತಾರೋ ನೋಡ ಬರ್ರಿ…..” ಅಂತ ಓಣಿ ಮಂದಿಯನ್ನೆಲ್ಲ ಸೇರಿಸಿ ಬಿಡುವ ಪೈಕಿ ಅವಳು… ಅದಕ್ಕಾಗಿ ಉಪಾಯವಿಲ್ಲದೇ “ ಹಾ! ಬರ್ರಿ ಗಿರಿಜಮ್ಮ. ಏನು” ಅಂದೆ. “ ಏನೂ ಇಲ್ಲ. ಮಲಗೀರೇನೋ? ನಿದ್ದಿ ಹತ್ತೆತೇನೋ… ನೋಡಾಕ ಬಂದೆ.” ಅನಬೇಕೇ…! ಅಂದಿನ ನನ್ನ ಸಿ,ಲ್ ವೇಸ್ಟ. ಇರುವ ಹದಿನೈದು ಸಿ.ಲ್ ಗಳನ್ನು ತುಪ್ಪ ಬಳಸಿದಂತೆ ಬಳಸುವ ನಾವು ಹೀಗೆ ಸುಖಾ ಸುಮ್ನೇ ಸಿ.ಲ್ ಹಾಳಾದ್ರೆ ಮನಸಿಗೆ ಎಷ್ಟು ಘಾಸಿಯಾಗ ಬಹುದು…?
ನಾ ತವರಿನಲ್ಲಿದ್ದಾಗ ರಜೆ ಇದ್ರೆ, ತಾಯಿ ಮಕ್ಕಳು ಕೆಲಸ ಮುಗಸಿ ಮದ್ಯಾನ್ಹ ನಿದ್ದೆಗೆ ಜಾರುತಿದ್ದೆವು. ಆಶ್ಚರ್ಯ ಅಂದ್ರೆ ನಮ್ಮ ಓಣಿಯಲಿ ನಮ್ಮ ನಿದ್ದೆ ಎಷ್ಟು ಪ್ರಸಿದ್ದ ಅಂದ್ರೆ, ನಮ್ಮ ಮನೆಗೆ ಯಾರಾದ್ರು ಬಂದ್ರೆ ಹೊರಗೆ ಹರಟೆಹೊಡಿಯುತ್ತ ಕುಳಿತ ಪಕ್ಕದ ಮನೆಯವರೇ “ ಅವರು ಈಗ ಮಲಗಿರ್ತಾರಾ. ಸಂಜೆ ಬರ್ರಿ” ಅಂತ ಕಳಿಸಿ ನಮ್ಮ ಶಯನ ಗೃಹಕ್ಕೆ ದ್ವಾರಪಾಲಕರಂತೆ ಕಾಯುತ್ತಿದ್ದರು. ಏನೋ! ಮಧ್ಯಾನ್ಹದ ಆ ನಿದ್ದಿ ನನ್ನ ಆಯಾಸವನ್ನೆಲ್ಲ ಕಳೆದು ಹೊಸಚೈತನ್ಯ ತರುತ್ತಿತ್ತು. ನಿದ್ದೆಯ ನಂತರ ನನ್ನ ಪ್ರೀತಿಯ ಕನ್ನಡ ಸಾಹಿತ್ಯ ಪುಸ್ತಕಗಳ ಓದು,ಬರವಣಿಗೆ, ಟಿ-ವಿ, ಸಂಜೆ ಹರಟೆ, ಕೆಲವುಸಲ ಪೇಟೆ… ಹೀಗೆ ನಾನು ನನಗಾಗಿ ಅಮೂಲ್ಯ ಸಮಯ ಕಳೆಯುತ್ತಿದ್ದೆ. ಆದರೆ ಈಗ ಸಂಸಾರ ಸಾಗರದಲ್ಲಿ ನನಗಾಗಿ ನಾನು ಕೆಲವು ಸಮಯ ಕಾಳಜಿ ಪೂರಕವಾಗಿ ತೆಗೆದಿರಿಸಿದರೂ,ಕೆಲವು ಸಲ ಗಿರಿಜಮ್ಮ, ಮತ್ತೆ ಕೆಲವೊಮ್ಮೆ ಸೇಲ್ಸಮನ್ ಗಳು ನನ್ನ ತಲೆ ತಿನ್ನುತ್ತಾರೆ. ವರ್ಷ ಪೂರ್ತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ರಿಸಲ್ಟ ತಲೆ ಕೆಡಿಸಿದ್ದರೆ, ಮನೆಯಲ್ಲಿ ಇಬ್ಬರು ಮಕ್ಕಳ ಜಗಳ ತೀರಿಸೋದು ಮತ್ತೊಂದು ತಲೆನೋವಾಗಿತ್ತು. ಇಷ್ಟಾದ ಮೇಲೆ ರಾತ್ರಿ ಹತ್ತಕ್ಕೆ ಓದೋದು-ಬರಿಯೋದಕ್ಕೆ ದೇಹ ಮನಸ್ಸು ಒಪ್ಪೀತೆ? ಕಣ್ಣುಗಳು ಬಿಸಿಲಿಗೆ – ಗಾಳಿಗೆ ಬಳಲಿ ಎಷ್ಟೇ ಜಾಗೃತಿ ಯಿಂದ ಕನ್ನಡಕ ಧರಿಸಿದರೂ ರಾತ್ರಿ ತಲೆನೋವು ತಲೆ ಏರಿ ರುದ್ರ ತಾಂಡವ ಆಡುತಿತ್ತು. ಅದಕ್ಕಾಗಿ ನಾನು ಈ ಬಾರಿ ಎಪ್ರೀಲ್ ತಿಂಗಳ ರಜೆಯಲ್ಲಿ ಕೆಲವು ಸಮಯವಾದರೂ ನಾ ನನಗಾಗಿ ಬದುಕಲೇ ಬೇಕು ಎಂದು ಧೃಢ ನಿಶ್ಚಯ ಮಾಡಿ ಆಗಿತ್ತು. ಎಪ್ರೀಲ್ ಬರುವುದೇ ತಡ ಎಲ್ಲಿ ಮಕ್ಕಳಿಗೆ ಒಳ್ಳೆಯ ಬೇಸಿಗೆ ಶಿಬಿರಗಳಿವೆ ಎಂದು ಜಾಹೀರಾತು ಹುಡುಕ ತೊಡಗಿದೆ. ಅಂತೂ ಒಂದುಕಡೆ ಅವರನ್ನು ಬೆಳಿಗ್ಗೆ 9 ರಿಂದ 2 ರ ವರೆಗೆ ಹದಿನೈದು ದಿನಗಳ ಕಾಲ ಬೇಸಿಗೆ ಶಿಬಿರಕ್ಕೆ ಸೇರಿಸಿ, ಸಮುದ್ರಕ್ಕೆ ಸೇರಿ ವ್ಯರ್ಥ ವಾಗುವ ನದಿಯನ್ನು ತಡೆದು ಆಣೆಕಟ್ಟು ಕಟ್ಟುವಂತೆ, ಮಕ್ಕಳ ಅಗಾಧ ಶಕ್ತಿಗೆ ಸಂಸ್ಕಾರ ಒದಗಿಸಲು ಪ್ರಯತ್ನಿಸಿದೆ. ಆ ಮೂಲಕ ನನಗಾಗಿ ನಾ ಕೆಲವು ಸಮಯ ಅಪ್ಪಿ ಕೊಳ್ಳಲು ನಿರ್ಧರಿಸಿದೆ.
ಅಂತೂ ಬೆಳಿಗ್ಗೆ 9 ರವರೆಗೆ ಮನೆಯಲ್ಲಿ ಅದೆಷ್ಟೋ ಏಕ್ ಮಿನಿಟ್ ಶೋಗಳನ್ನು ಆಡಿ ಅವರನ್ನು ಕಳಿಸಿದರೆ, ಎರಡು ಗಂಟೆವರೆಗೆ “ನನಗಾಗಿ ನಾನು”. ನನ್ನ ಪತಿಯನ್ನಂತೂ ನಾ ಕೈ ಬಿಟ್ಟರೆ ತುಂಬಾ ಖುಶಿ. ನನ್ನ ಮನದ ಇಂಗಿತ ಅರಿತ ಅವರೂ ಬೆಳಗಿನ ಉಪಹಾರ ಮುಗಿಸಿ, “ಅಪನೇ ಜಿಂದಗಿ ಜೀ ಲೇ ಬೇಟಿ” ಅಂದು ಹೊರಗೆ ಹೋಗಿ ಬಿಡುತ್ತಿದ್ದರು. ನಾ ಯಾವುದೇ ಕಾರಣಕ್ಕೂ ಈ ಸಮಯ ಮತ್ತೊಬ್ಬರಿಗೆ ಬಿಟ್ಟುಕೊಡಲು ತಯಾರಿರಲಿಲ್ಲ. ಮುಂಜಾಗೃತೆಯಾಗಿ ಗಿರಿಜಮ್ಮ ನಂತವರಿಗೆ ಕಾಣದಂತೆ,ಹೊರಗೆ ಹೋಗಿ ಮುಂದಿನ ಬಾಗಿಲ ಚಿಲಕ ಹಾಕಿ, ಹಿಂದಿನ ಬಾಗಿಲದಿಂದ ರೂಮು ಸೇರಿ, ಹಾಸಿಗೆ ಮೇಲೆ ಪುಸ್ತಕ ಹಿಡಿದು ನನಗಿಷ್ಟಬಂದಷ್ಟು ಓದಿ, ನಿದ್ದೆ ಬಂದಾಗ ಗಡದ್ದು ನಿದ್ದೆಗೆ ಜಾರಿ,ಬರಿಯ ಬೇಕೆನಿಸಿದಾಗ ಬಾವನೆಗಳನ್ನೆಲ್ಲ ಕಾಗದದ ಮೇಲಿಳಿಸಿ, ಎರಡು ಗಂಟೆಗೆ ಚಿಲಿಪಿಲಿ ಸದ್ದಾಗುತ್ತಲೇ ಓಡಿ ಹೋಗಿ ಮಕ್ಕಳನ್ನು ಬಾಚಿ ತಬ್ಬುತ್ತಿದ್ದೆ. ಬಿಸಿಲಿನ ಬೇಗೆಗೆ ಹಣ್ಣು-ಹಂಪಲ,ತಂಪು ಪಾನೀಯ ಗಳೆನ್ನೆರೆದು, ಬಿಸಿ ಬಿಸಿ ರೊಟ್ಟಿ, ನುಚ್ಚು-ಮಜ್ಜಿಗೆ ತಾಟಿಗೆ ಹಾಕಿ ಊಟಮಾಡಿಸುವಾಗ ಮೊದಲೆಂದೂ ಇಲ್ಲದ ಹುಮ್ಮಸ್ಸು ನನ್ನದಾಗಿರುತ್ತಿತ್ತು. ನನಗಾಗಿ ಕಳೆದ ಈ ಕ್ಷಣಗಳು ಮತ್ತೆ ಮುಂದಿನ ಬೇಸಿಗೆ ರಜೆಯವರೆಗೂ ನಾ ಚಟುವಟಿಕೆಯಿಂದ ಶಾಲೆ,ಮನೆ,ಮಕ್ಕಳ ಜವಾಬ್ದಾರಿ ನಿಭಾಯಿಸಲು ನನ್ನನ್ನು ಸಂಪೂರ್ಣ ಸಜ್ಜುಗೊಳಿಸಿದ್ದವು.
-ಶೀಲಾ. ಗೌಡರ
ನೀವು ನೀವಾದ ಲೇಖನ ತುಂಬ ಅದ್ಬುತವಾಗಿದೆ.ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ತಮ್ಮ ಸಾಹಿತ್ಯದ ಪಯಣ ಹೀಗೆಯೇ ಮುಂದುವರಿದಯಲಿ.