“ಥೂ.. ಯಾಕಪ್ಪಾ ನನ್ ಜೀವನ ಹಿಂಗೇ??? ಓ ಮೈ ಗ್ವಾಡ್ ಯಾಕೆ ನೀ ನನ್ನ ಹಿಂಗೆ ಮಾಡಿದೆ? ತಲೆಯಲ್ಲಿ ಯಾಕೆ ಯಾವಾಗ್ಲೂ ಪ್ರಶ್ನೆಗಳು ಏಳ್ತಾ ಇರ್ತವೆ? ಉತ್ತರ ಮಾತ್ರ ಯಾಕೆ ಸಿಗುತಿಲ್ಲ?? ಎಕೆ ಎಲ್ಲವೂ ಹೀಗೆ ಅಯೋಮಯ?” ಅಂತ ತಲೆಯಲ್ಲಿ ಒಂದೇ ಸಮನೆ ಪ್ರಶ್ನೆಗಳೆಲ್ಲ ಗಿರಕಿ ಹೊಡೆಯುತ್ತಾ ಕುಂತಿದ್ದವು.ಏನಾದರಾಗಲಿ ದೇವರನ್ನೇ ಕೇಳೋಣ ಅಂದುಕೊಂಡೆ!! ಆದರೆ ಕೇಳೋದು ಹೆಂಗೆ? ವೈಫೈ, ಬ್ಲೂಟೂಥ್ ಯೂಸ್ ಮಾಡೋದು ನಮ್ ಗಾಡ್‍ಗೆ ಗೊತ್ತಿಲ್ಲ. ಆದರೂ ಕನೆಕ್ಟಿವಿಟಿ ಮಾಡಿ ನನ್ನ ಪ್ರಶ್ನೆಗೆ ಉತ್ತರ ಪಡೆಯಲೇ ಬೇಕು ಅಂತ ಡಿಸೈಡ್ ಮಾಡಿಯೇ ಬಿಟ್ಟೆ.. ಗೂಗಲ್ ಅಲ್ಲಿ ಸರ್ಚ್ ಮಾಡಿ, ಬಹಳಷ್ಟು ಗಡ್ಡಬಿಟ್ಟಿರೋರನ್ನ ಕೇಳಿ (ಗಡ್ಡಬಿಟ್ಟಿರೋರೆಲ್ಲ ಬುದ್ಧಿಜೀವಿಗಳು ಅನ್ನೋ ಬಲವಾದ ನಂಬಿಕೆ ನನ್ನದು), ಕೊನೆಗೂ ಸೊಲ್ಯೂಶನ್ ಕಂಡು ಹಿಡಿದೇ ಬಿಟ್ಟೆ.. ಅದೇ ಘನಘೋರ ತಪಸ್ಸು..!!
ಇನ್ನು ಟೈಂ ವೇಸ್ಟ್ ಮಾಡೋದು ಬ್ಯಾಡ ಅಂತ ಅಂದುಕೊಂಡು ಸೀದಾ ನಮ್ ಒನರ್ ಮನೆ ಟೆರೇಸ್‍ಗೆ ಹೋಗಿ ಅಲ್ಲಿ ವಾಟರ್ ಟ್ಯಾಂಕ್ ಪಕ್ಕ ಜಾಗ ನೋಡಿ ಕುಂತೇ ಬಿಟ್ಟೆ.! ಎಷ್ಟೊತ್ತಾಗಿತ್ತೋ ಏನೋ… … ಯಾರೋ ಕರೆದಂತಾಗಿ ಕಣ್ಬಿಟ್ಟು ನೋಡಿದ್ರೆ ಎದುರಿಗೆ ಇದ್ದದ್ದು ಸಾಕ್ಷಾತ್ ಪರಮಾತ್ಮ ಭಗವಂತ..!!!“ಭಕ್ತಾ ನಿನ್ನ ಭಕ್ತಿಗೆ ಮೆಚ್ಚಿದ್ದೇನೆ.. ಸುಮ್ಮನೆ ಅರೆಕ್ಷಣವೂ ಕೂರಲಾರದ ನೀನು, ಇಂದು ಬರೋಬ್ಬರಿ ಇಪ್ಪತ್ತೆರಡು ನಿಮಿಷಗಳ ಕಾಲ ತಪಸ್ಸು ಮಾಡಿದ್ರಿಂದ ನಾನೇ ಸ್ವಯಂ ಪ್ರತ್ಯಕ್ಷನಾಗಿದ್ದೇನೆ. ನನ್ನ ಕರೆದ ಕಾರಣ ತಿಳಿಸುವವನಾಗು..” ಎನ್ನಲು,
ನಾನೆಂದೆ “ಓ ಮೈ ಡಿಯರ್ ಗಾಡ್ ಹೆಂಗಿದಿಯಾ?? ಮನೆಕಡೆ ಎಲ್ಲಾ ಅರಾಮಾ??….” ಅನ್ನುವಷ್ಟರಲ್ಲಿ ಗಾಡ್ ಹೇಳಿದ “ಮಗಾ..! ಡೈರೆಕ್ಟ್ ಆಗಿ ಮ್ಯಾಟರ್‍ಗೆ ಬಾ… ಜಾಸ್ತಿ ಕೊರಿಬೇಡ” ಅಂದ.“ವಾಕೆ. ನನ್ನ ಕೆಲವು ಸಂದೇಹಗಳಿಗೆ ನಿವಾರಣೆ ಉಪಾಯ ತಿಳಿಸು” ಎಂದು ಶುರು ಹಚ್ಗಂಡೆ… “ಗ್ವಾಡ್ ನಾವೆಲ್ಲಾ ಈ ಪ್ರಪಂಚದಲ್ಲಿ ಯಾಕಿದೀವಿ? ಇಲ್ಲಿ ಇರ್ಲಿಲ್ಲಾ ಅಂತಂದ್ರೆ ಎಲ್ಲಿ, ಏನಾಗಿ ನೇತಾಡ್ತಾ ಇದ್ವೀ??” ಅಂತಾ ಇದ್ದಂಗೆ ಗಾಡು “ಇವೆಲ್ಲ ನಮ್ಮ ರಹಸ್ಯ..! ಇಂಥಾ ಪ್ರಶ್ನೆನೆಲ್ಲಾ ಕೇಳಿ ನನ್ನತ್ರ ಶಾಪಗ್ರಸ್ತ ಆಗಬ್ಯಾಡ.. ಬೇರೇ ಏನಾರ ಇದ್ರೆ ಕೇಳು” ಅಂದ. ಯಾಕೋ ಗ್ವಾಡು ಸೀರಿಯಸ್ ಆಗವ್ನೆ ಅಂತಂದುಕೊಂಡು “ಸರಿ ಬಿಡು, ಅದು ಬ್ಯಾಡ.. ನಂಗೆ ಅಂಗನವಾಡಿ ಇದ್ದಾಗಿಂದನೂ ಒಂದು ಡವಟು.. ನಮ್ ಬಾಯಮ್ಮ ಕರಿ ಹಲಗೆಯ ಮೇಲೆ ಬರೆದ ಅಕ್ಷರಗಳನ್ನೆಲ್ಲಾ ನಾನು ಅವರಿಗೆ ಗೊತ್ತಿಲ್ಲದ ಹಾಗೆ ವರೆಸಿ ಬಿಡ್ತಾ ಇದ್ದೆ..! ಆ ಅಕ್ಷರಗಳೆಲ್ಲಾ ಎಲ್ಲಿ ಹೋಗ್ತಾ ಇದ್ವು ಅಂತ ನಿಂಗೇನಾರೂ ಗೊತ್ತಾ??” ಅಂದೆ.
ಗ್ವಾಡ್ ಸಿಟ್ಟಿನಿಂದ “ಮಗಾ ಚೈಲ್ಡು ಪ್ರಶ್ನೆ ಎಲ್ಲಾ ಬ್ಯಾಡ” ಅಂದ.ನಾನು “ಓಕೆ ನೀನು ಬೇಡಾ ಅಂದ್ರೆ ಆ ಪ್ರಶ್ನೆ ಕೇಳಲ್ಲ ಬಿಡು… ಗಾಡೂ ಈಗ ನಾವ್ ಹಾಕ್ಕೊಳ್ಳೋ ಪ್ಯಾಂಟೂ-ಶರ್ಟೂ ಹುಡುಗಿಯರು ಹಾಕ್ಕಂಡ್ರೆ ಚೆಂದ ಕಾಣಿಸ್ತಾರೆ. ಆದರೆ ಅವರು ಹಾಕಿಕೊಳ್ಳೋ ಚೂಡಿ, ಸ್ಯಾರಿ, ನೈಟಿನೆಲ್ಲಾ ಹುಡುಗರು ಹಾಕಿಕೊಂಡರೆ ಯಾಕೆ ಚೆಂದ ಕಾಣಿಸೊಲ್ಲ??” ಅಂತ ಅಂತಿದ್ದಾಗೆ ಗಾಡು ತನ್ನ ತಲೇ ಮೇಲಿದ್ದ ಕಿರೀಟಾನ ಕೈಲಿ ಹಿಡ್ಕಂಡು ತಲೆ ಕೆರಕೊಂಡ ಹಾಗೆ ಅನ್ನಿಸ್ತು..! ಇನ್ನೇನು ಗ್ವಾಡು ಮತ್ತೆ ಬೈದು ಬಿಡ್ತಾನೇನೋ ಅಂತ ತಿಳಿದು ಅದಕ್ಕೆ ಆಸ್ಪದ ಕೊಡದಂತೆ “ ದೇವ್ರೇ ನಮ್ಮಲ್ಲಿ ಕೊಲ್ಡ್ ಕಾಫೀ ಸಿಗತ್ತೆ ಆದ್ರೆ ಬಿಸಿಬಿಸಿ ಐಸ್ ಕ್ರೀಂ ಯಾಕೆ ಸಿಗಲ್ಲ?? ಯಾವಾಗಲೂ ಲೈಕ್ ಪೋಲ್‍ಗಳು ಯಾಕೆ ಅಟ್ರ್ಯಾಕ್ಟ್ ಆಗೊಲ್ಲ?? ಕರೆಂಟು ಯಾಕೆ ಕಣ್ಣಿಗೆ ಕಾಣಲ್ಲ?? ನಮ್ಮ ರಾಜಕಾರಣಿಗಳು ದುಡ್ಡು ತಿನ್ನೋವಾಗ ಯಾಕೆ ಕಣೀ ಕೇಳಲ್ಲ?? ಸಾಯೋರಿಗ್ಯಾಕೆ ಲೈಸನ್ಸ್ ಕೊಡಲ್ಲ??….” ಹೀಗೆ ಕೇಳ್ತಾ ಹೋದೆ.ಗಾಡ್ ಯಾಕೋ ಗುರಾಯಿಸ್ತಾ ಇದ್ದ ಒಂದೇ ಸಮನೆ. ಯಾಕೋ ಕೆಲಸ ಕೆಡತ್ತೆ ಅಂತ ಅನ್ನಿಸ್ತು, ಅದ್ಕೆ ಟಕ್ಕಂತ “ಗ್ವಾಡ್ ಈ ಜನ ಷೆರಿ ಇಲ್ವಾ ಅಥವಾ ನಾನೇ ಶೆರಿ ಇಲ್ವಾ?? ಇದೊಂದಕ್ಕಾದರೂ ಉತ್ತರ ಕೊಡಪ್ಪಾ..!” ಅಂದೆ ದೈನ್ಯದಿಂದ.
ಆಗ ಗಾಡ್‍ಗೆ ಏನನ್ನಿಸಿತೋ ಏನೋ? ಪ್ರಸನ್ನವದನದಿಂದ ಹೇಳಿದ “ಮಗಾ ಇಂಥಾ ಸಿಲ್ಲಿ ಕ್ವಶ್ಚನ್‍ಗಳಿಗಾಗಿ ನನ್ನ ಅಷ್ಟು ದೂರದಿಂದ ಕರೆದೆಯಾ? ಆದರೂ ನಾನು ದೇವ್ರು..! ನೀನು ಹುಲುಮಾನವ..! ಆದ್ದರಿಂದ ನಿನ್ನ ಕ್ಷಮಿಸಿದ್ದೀನಿ. ನಿನಗೆ ಒಳ್ಳೆಯದಾಗಲಿ. ನನಗೆ ಕ್ಯಾಮೆ ಇದೆ ಬರ್ಲಾ” ಅಂತಂದು ಹೊರಡಲು ಅನುವಾದ.“ಮತ್ತೆ ನನ್ನ ಪ್ರಶ್ನೆಗಳಿಗೆ ಉತ್ತರ??” ಅಂದಾಗ “ನಿನ್ನ ಪ್ರಶ್ನೆಗಳಿಗೆ ಉತ್ತರ ತಿಳಿಯುವ ಕಾಲ ಇನ್ನೂ ಬಂದಿಲ್ಲ.” ಅಂದ.
“ಹಾಗಾದ್ರೆ ನಂಗೆ ಮಾತ್ರ ಯಾಕೆ ಇಂತಹ ಸಾವಿರಾರು ಡವಟುಗಳು ಬುಲ್ಡೆ ಒಳಗಿಂದ ಮಂಡಿ ಚಿಪ್ಪಿನವರೆಗೂ ಕೊರಿತವೆ??” ಎನ್ನಲು “ನೀನು ”god’s special edition’ ಹೋಗಿ ಬಾ ಒಳ್ಳೆಯದಾಗಲಿ” ಅನ್ನುತ್ತಾ ಇರುವಾಗಲೇ, ನಾನು “ಗ್ವಾಡ್ ಗ್ವಾಡ್ ಲಾಸ್ ಒನ್ ಮಿನಿಟ್ ಪ್ಲೀಜ್..” ಅನ್ನುವಷ್ಟರಲ್ಲಿ ನಮ್ಮಕ್ಕ “ಏಯ್ಯ್ ಮಲಗಿದ್ದು ಸಾಕು.. ಏಳೋ ಬೇಗ.. ಆಫೀಸ್‍ಗೆ ಹೋಗಲ್ವಾ??” ಅಂತ ಕೇಳಿದಾಗಲೇ ನನಗೆ ನಿಜಸ್ಥಿತಿ ಅರಿವಾಗಿ “ಯಪ್ಪಾ ಇವತ್ತು ಮೀಟಿಂಗ್ ಬೇರೆ ಇದೆ ಆಫೀಸಲ್ಲಿ.!” ಅಂದುಕೊಳ್ಳುತ್ತಾ ಬಾತ್ ರೂಮ್ ಒಳಗೆ ಹೋದೆ.
*****
ಹೆ ಹೆ. ಮಜವಾಗಿದೆ ಡೌಟುಗಳು 🙂 ಅದರಲ್ಲಿ ಒಂದು ಡೌಟನ್ನ.. ಅದೇ ನೈಟಿ, ಚೂಡಿಧಾರನ್ನ ಹುಡುಗೀರಿಗೇ ಕೇಳಿದ್ರೆ ಹೇಳಿ ಬಿಡ್ತಿದ್ರೇನೋ..
ಯಾಕೋ ನೀಮಗೆ ನನ್ನ ಮೇಲೆ ಯಾವುದೋ ಹಳೇ ಸಿಟ್ಟಿದ್ದಂತೆ ನನಗೆ ಅನಿಸುತಿದೆ..~!!