ಕಾಮನ ಬಿಲ್ಲು

ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು: ಪದ್ಮಾ ಭಟ್, ಇಡಗುಂದಿ

                   
ನಾನು ಬಡವಿ ಆತ ಬಡವ 
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು..

ದ.ರಾ ಬೇಂದ್ರೆಯವರ ಈ ಹಾಡಿನ ಸಾಲು ಪದೇ ಪದೇ ನೆನಪಾಗತೊಡಗಿತ್ತು.. ಗೆಳೆಯಾ ಬಹುಶಃ ಪ್ರೀತಿ ಎಂಬ ಪದಕ್ಕೆ ಎಷ್ಟು ಆಪ್ತವಾದ ಸಾಲುಗಳು ಇವು ಅಲ್ವಾ? ಬದುಕಿನಲ್ಲಿ ಎಲ್ಲವೂ ಇದ್ದು ಪ್ರೀತಿಯೇ ಇಲ್ಲದಿದ್ದರೆ ಏನು ಚಂದ ಹೇಳು, ಆದರೆ ಬಡತನದಲ್ಲಿಯೂ ಪ್ರೀತಿಯಿದ್ದರೆ, ಅದನ್ನೇ ಎಲ್ಲಾದಕ್ಕೂ ಬಳಸಿಕೊಳ್ಳಬಹುದು..ಪ್ರೀತಿಯಿಂದ ಹೊಟ್ಟೆ ತುಂಬುತ್ತದೆಯೋ ಇಲ್ಲವೋ, ಆದರೆ ಮನಸ್ಸು ಹೃದಯವಂತೂ ತುಂಬಿಬಿಡುತ್ತೆ.. ಹಾಂ.. ಪ್ರೀತಿ ಎಂಬುದಕ್ಕೆ ಇನ್ನೂ ಯಾರೂ ಪರಿಪೂರ್ಣವಾದ ಅರ್ಥವನ್ನು ಕೊಡು ಸಾಧ್ಯವೇ ಆಗಿಲ್ಲ.. ಒಬ್ಬೊಬ್ಬರ ದೃಷ್ಟಿಯಲ್ಲಿ ಈ ಪ್ರೀತಿ ಒಂದೊಂದು ತರಹ.. ಒಬ್ಬನಿಗೆ ಅವನ ಪ್ರೇಯಸಿಯ ಮಾತೇ ಪ್ರೀತಿಯಾದರೆ, ಅವಳಿಗೆ ಅವನ ಸಣ್ಣ ಮುನಿಸೇ ಪ್ರೀತಿ ಕಣ್ಣಿನಲ್ಲಿ ಅರಳುವ ಭಾವಗಳೇ ಪ್ರೀತಿ.. ಮೊಗದಲ್ಲಿ ಮೂಡುವ ನಾಚಿಕೆಯಲ್ಲಿಯೂ ಪ್ರೀತಿಯ ಒಸರುವಿಕೆಸಾ॒ಕು ಹೋಗು ನನ್ ಹತ್ರ ಮಾತಾಡಬೇಡ ಎಂದು ಮುನಿಸಿಕೊಂಡ ಹೋದ ಗೆಳತಿಯ ಪ್ರೀತಿ..ನೀ ಹೆಂಗಿದ್ದರೂ ಚಂದ ಕಣೇ ಹೇಳೋ ಗೆಳೆಯನ ಪ್ರೀತಿ..ಹತ್ತಾರು ಮುಖಗಳು ಈ ಪ್ರೀತಿಗೆ.. 

ಪ್ರತೀಯೊಂದು ಸಂಬಂಧದಲ್ಲಿಯೂ ಪ್ರೀತಿ ಎನ್ನುವುದು ಇದ್ದೇ ಇರುತ್ತದೆ..ಅದರಲ್ಲಿಯೂ ನಾ ನಿನ್ನ ಮೇಲೆ ಪ್ರತೀ ಸಲ ಕೋಪಿಸಿಕೊಂಡಾಗಲೂ ನಿನ್ನ ಬಗೆಗಿರುವ ಗೌರವ ನನಗಿನ್ನೂ ಹೆಚ್ಚಾಗುತ್ತದೆ.. ನನ್ನಂತಹ ಸಿಟ್ಟುಬುರುಕಿಯನ್ನೂ ಸಹಿಸಿಕೊಂಡಿದ್ದೀಯಲ್ವ ನೀನು ಅಂತ. ಬಹುಶಃ ಪ್ರೀತಿಗಿರುವ ಶಕ್ತಿ ಅಂದರೆ ಅದು.. ಚಿಕ್ಕ ಪುಟ್ಟ ಕಾರಣಗಳ್ಯಾವುದೂ ಇದರ ಮುಂದೆ ನಿಲ್ಲುವುದಿಲ್ಲ.. ಅದೆಲ್ಲ ನಶ್ವರದಂತೆ ಅನ್ನಿಸಿಬಿಡುತ್ತದೆ..ಮತ್ತಷ್ಟೂ ಮೊಗೆದಷ್ಟೂ ವಿಶಾಲವಾದ ಒಲವಿನ ಲೋಕದಲ್ಲಿ ನಮಗೆ ಗೊತ್ತಿಲ್ಲದಂತೆಯೇ ಕೊಡೊಯ್ಯುತ್ತದೆ.. ಬದುಕು ಎಂತಹ ವಿಚಿತ್ರ ನೋಡು.. ನನಗಾಗಿ ಅಂತಾ ನಿನ್ನನ್ನು ಕೊಟ್ಟುಬಿಟ್ಟಿದೆ.. ನಾ ಭೂಮಿಗೆ ಬರುವ ಮೊದಲೇ, ನೀ ಮೊದಲು ಭೂಮಿಗೆ ಬಂದು ನನಗಾಗಿ ಕಾಯುವಂತೆ ಮಾಡಿದೆ ಈ ಪ್ರೀತಿ.. 

ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದೋ..? ಗೊತ್ತಿಲ್ಲ..ಆದರೆ ಬದುಕನ್ನಾದರೂ ಗೆಲ್ಲಬಹುದಲ್ಲವೇ.. ಜಗತ್ತನ್ನೇ ಬೆಳಗುವ ಸೂರ್ಯನು ಆಗಲು ಸಾಧ್ಯವಿಲ್ಲದಿದ್ದರೂ, ನಮ್ಮ ಮನೆಯನ್ನೇ ಬೆಳಗುವ ಪುಟ್ಟ ಹಣತೆಯಾದರೂ ಸಾಕು..ಆ ಹಣತೆಯಲ್ಲಿ ನಾ ಎಂದಿಗೂ ತೈಲವಾಗಿರುವೆ.. ನಿನ್ನ ಬದುಕಿನಲ್ಲಿ ಬೆಳಗೋ ಪುಟ್ಟ ಬೆಳಕಾಗಿ.. ಮಂದ ಬೆಳಕಾದರೂ ಸಾಕು ನನಗೆ ನಿನ್ನ ಕಣ್ಣಿನಲ್ಲಿ ನನ್ನ ಪ್ರತಿಬಿಂಬವನ್ನು ಕಣಲು.. ನನ್ನೆಲ್ಲಾ ಭಾವಗಳನು, ನಿನ್ನೊಡಲಿನಲ್ಲಿ ಬಚ್ಚಿಡಲುಮ॒ತ್ತೆ ಮತ್ತೆ ಎದೆಯಾಳದಲ್ಲಿ ಕನಸುಗಳನ್ನು ಸೃಷ್ಟಿಸಲು.. ಜೀವನದ ಬಹುಪಾಲು ಖುಷಿಯಲ್ಲಿ ನೀನಿರಲೇಬೇಕೆಂಬ ಪುಟ್ಟ ಕನಸು ಕಣೋ ನಂದು.. ನೆರವೇರಿಸಬಹುದಾ? ಎಂದು ಕೇಳಲಾರೆ.. ಹಕ್ಕಿನಿಂದ ಕೇಳುತ್ತೇನೆ.. ನೀ ಎಂದಿಗೂ ಜೊತೆಯಾಗಿ ಇರುತ್ತೀಯ ಎಂಬ ನಂಬಿಕೆ ಇರುವುದಕ್ಕೆ..

ನಿನ್ನಿಂದ ನಿರೀಕ್ಷಿಸುವುದು ಹೆಚ್ಚೇನೂ ಇಲ್ಲ..ಪ್ರೀತಿಯ ಕನಸುಗಳಿಗೆ ತಂಪನ್ನೆರೆಸುವ ಅಮೃತ ಸಿಂಚನವಾಗು ನೀ.. ಬದುಕಿನ ಪಯಣದಲ್ಲಿ ಕೈ ಹಿಡಿದು ಸಾಗಲೇಬೇಕು.. ಸುಖವೋ ದುಃಖವೋ ಎಲ್ಲದರಲ್ಲಿಯೂ ನನ್ನವನಾಗಿ, ನನ್ನ ಜೀವದ ಗೆಳೆಯನಾಗಿ ಇದ್ದುಬಿಡುವೆಯಲ್ಲವೇ ಗೆಳೆಯ..ಒಂದು ತಕ್ಕಡಿಯಲ್ಲಿ ನಿನ್ನ ಪ್ರೀತಿಯನ್ನು ಹಾಕಿ ತೂಗುವಾಗ ತಕ್ಕಡಿಯೇ ಮುರಿದು ಹೋಗುವಷ್ಟು ಪ್ರೀತಿಯಿರುತ್ತದೆಯೆಂಬ ನಂಬಿಕೆಯಿದೆ ನನಗೆ ಇದೆ.. ಮುಸ್ಸಂಜೆಯ ಸೂರ್‍ಯನ ಕೆಂಪಾದ ಮುಖಕ್ಕಿಂತಲೂ, ಸುಂದರವಾಗಿರಬೇಕು ನಮ್ಮ ಪ್ರೀತಿಯ ಬದುಕು..ಬೆಳಗಿನ ಸೂರ್ಯೋದಯದ ಶಾಂತಿಗಿಂತಲೂ, ಚಂದವಾಗಿದ್ದರೆ ನನ್ನಷ್ಟು ಅದೃಷ್ಟವಂತರು ಜಗದಲ್ಲಿ ಯಾರೂ ಇಲ್ಲ..

ಬಡವನಾದರೆ ಏನು ಪ್ರಿಯೆ..
ಕೈತುತ್ತು ತಿನ್ನಿಸುವೆ.
ಎದೆಯ ತುಂಬಾ ಒತ್ತಿಕೊಂಡು
ಮುತ್ತುಮಳೆಯಾ ಸುರಿಸುವೆ॒

ಹಾಡಿನಲ್ಲಿ ಎಷ್ಟು ಅರ್ಥವಿದೆಯಲ್ವಾ? ಪ್ರೀತಿಯೆಂದರೆ, ಹಣ, ಘನತೆ, ಯಾವುದೂ ಲೆಕ್ಕಾಚಾರಕ್ಕೆ ಬರುವುದಿಲ್ಲ.. ಅಲ್ಲಿ ನನಗೆ ನೀನು ನಿನಗೆ ನಾನು ಎನ್ನುವುದನ್ನು ಬಿಟ್ಟರೆ, ಮತ್ತಿನ್ನೇನೂ ಇಲ್ಲ.. ಈ ಜಗತ್ತಿನಲ್ಲಿ ನನಗೆ ಸರ್ವಸ್ವವೂ ನೀನೆಂಬ ಮನಸ್ಸಿದೆ..ಪ್ರೀತಿಯ ಹೃದಯದಲ್ಲಿ ಯಾವಾಗಲೂ ನಿನಗಾಗಿ ತುಡಿಯುತ್ತಿರುವ ಹೃದಯ ಬಡಿತವಿದೆ..
ಇವಿಷ್ಟನ್ನು ಬಿಟ್ಟು ಇನ್ನೇನನ್ನೂ ಹೇಳಲು ಸಾಧ್ಯವಿಲ್ಲ ಗೆಳೇಯಾ॒

ಬರಹ: ಪದ್ಮಾ ಭಟ್, ಇಡಗುಂದಿ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು: ಪದ್ಮಾ ಭಟ್, ಇಡಗುಂದಿ

  1. ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದೋ..? ಗೊತ್ತಿಲ್ಲ..ಆದರೆ ಬದುಕನ್ನಾದರೂ ಗೆಲ್ಲಬಹುದಲ್ಲವೇ.. ಜಗತ್ತನ್ನೇ ಬೆಳಗುವ ಸೂರ್ಯನು ಆಗಲು ಸಾಧ್ಯವಿಲ್ಲದಿದ್ದರೂ, ನಮ್ಮ ಮನೆಯನ್ನೇ ಬೆಳಗುವ ಪುಟ್ಟ ಹಣತೆಯಾದರೂ ಸಾಕು… ಪ್ರೀತಿಯ ನೈಜ ಉದ್ಧೇಶವೆ ಇದು ಅಂದ್ಕೋತೀನಿ ಅಕ್ಕಾ!! ಮನಸಿನಾಳದ ನಿಜವಾದ ಪ್ರೀತಿಯಾದಲ್ಲಿ..ಬದುಕು ಬೆಳಗುವುದು ಖಂಡಿತ.. ತುಂಬಾ ಚೆಂದದ ಬರವಣಿಗೆ..

Leave a Reply

Your email address will not be published. Required fields are marked *