ಪಂಚ್ ಕಜ್ಜಾಯ

ನಾನು ಬಡವ?:ಗುರುಪ್ರಸಾದ್ ಕುರ್ತಕೋಟಿ


ಮೂರ್ತಿ ಯಾವುದೋ ಒಂದು ಪುಸ್ತಕದಲ್ಲಿ ಗಹನವಾಗಿ ಮುಳುಗಿದ್ದವರು ನಿಟ್ಟುಸಿರು ಬಿಟ್ಟು ಹೀಗೆ ಅರುಹಿದರು…

ಮೂರ್ತಿ: "ಗುರು, ಹಿಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಎಂಥಾ ಸುಭಿಕ್ಷೆ ಇತ್ತಂತೆರೀ… ನಿಮಗೊತ್ತಾ? ಆಗ ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು, ರತ್ನ, ಬಂಗಾರಗಳನ್ನ ತರಕಾರಿಗಳ ತರ ಸಂತೆಲಿ ಮಾರುತ್ತಿದ್ದರಂತೆ!"

ಗುರು: "ಹೌದು, ಆದ್ರೆ ಆಗಿನ ಕಾಲಕ್ಕೆ ಈಗಿನ ಕಾಲಕ್ಕೆ ಅಷ್ಟೆಲ್ಲಾ ಡಿಫರನ್ಸು ಇಲ್ಲಾ ಬಿಡ್ರೀ."

ಮೂ: "ಅಧೆಂಗ್ರೀಪಾ?"

ಗು: "ಈಗ ತರಕಾರಿಗಳನ್ನ ಮುತ್ತು, ರತ್ನ, ಬಂಗಾರಗಳ ರೇಟಿನಲ್ಲಿ ಮಾರ್ತಾರೆ ಅಷ್ಟೆ!!"

ಮೂ: "ಹ್ಹ ಹ್ಹ ಹ್ಹ! ಹೌದು ಬಿಡ್ರೀ. ಈರುಳ್ಳಿ ರೇಟು 100 ರುಪಾಯಿ ಕೇಜಿ ಅಂತ್ರೀಪಾ."

ಗು: "ಹೌದ್ರೀ, ತುಂಬಾ ದಿನಾ ಆಯ್ತು ಮನೇಲಿ ಈರುಳ್ಳಿ ಭಜಿ ತಿಂದು…" 

ನಾನು ಕನಸು ಕಾಣತೊಡಗಿ ಒಂದು ದೊಡ್ಡ ನಿಟ್ಟುಸಿರು ಬಿಟ್ಟೆ.

 

ಗು: "ಅಲ್ರೀ ಮೂರ್ತಿ ನಮ್ಮ ಪರಿಸ್ಥಿತಿನೇ ಹೀಂಗಾದ್ರೆ, ಪಾಪಾ ಬಡವರ ಗತಿ ಏನು?"

ನಾನು ಮಹಾ ಶ್ರಿಮಂತನೆನ್ನುವ ಮುಖಮುದ್ರೆಯೊಂದಿಗೆ ಈ ಡೈಲಾಗು ಹೊಡೆದು ಮೂರ್ತಿಯವರನ್ನು ನೋಡಿದೆ. ಅವರು ಗಹನ ಯೋಚನೆಯಲ್ಲಿ ಮುಳುಗಿದ್ದರಾ ಇಲ್ಲಾ ಹಾಗೆ ನಟಿಸುತ್ತಿದ್ದರಾ ಗೊತ್ತಿಲ್ಲ! ಕೆಲವು ಕ್ಷಣಗಳ ಬಳಿಕ ನನ್ನ ಮೇಲೊಂದು ಪ್ರಶ್ನೆಯ ಬಾಣವೊಂದನ್ನು ಎಸೆದು ಕಂಗಾಲುಗೊಳಿಸಿದರು!

ಮೂ: "ಬಡವರು ಅಂದ್ರೆ ಯಾರು? ಹೇಳಿ ನೋಡೋಣಾ!"

ಇದೆಂತಹ ಪ್ರಶ್ನೆ?! ನಾನು ಗೊಂದಲಕ್ಕೆ ಬಿದ್ದೆ. ಆದರೂ ಗೊತ್ತಿಲ್ಲವೆಂದು ಹೇಳೋಕಾಗುತ್ತೆಯೆ?

ಗು: "ಬಡವರೆಂದರೆ ಬಡತನದ ರೇಖೆಗಿಂತ ಕೆಳಗಿರುವವರು."

ಅಂತ ಹೇಳಿ, ಇದೇನ್ಮಹಾ ಪ್ರಶ್ನೆ ಅನ್ನುವ ವದನದೊಂದಿಗೆ ಇರುವಾಗಲೇ…

ಮೂ: "ತಪ್ಪು" ಅಂದರು!

ನನಗೆ ಕನ್ನಡದ ಕೋಟ್ಯಾಧಿಪತಿಯಲ್ಲಿ ತಪ್ಪು ಉತ್ತರ ಹೇಳಿ ಪುನೀತನ ಎದುರು ಪೆಚ್ಚು ಮೋರೆ ಹಾಕಿ ಕುಂತಗಾಯ್ತು!

 

ಗು: "…. ?"

ಮೂ: "ತನ್ನಲ್ಲಿ ಏನೋ ಒಂದು ಕೊರತೆ ಇದೆ ಅಂದುಕೊಂಡು, ಆ ಕೊರತೆಯ ಕೊರಗನ್ನು ಅನುಭವಿಸುವವನೇ ಬಡವ"

ಗು: "ಅಂದ್ರೆ, ಈರುಳ್ಳಿಯ ಕೊರತೆಯನ್ನು ಅನುಭವಿಸುತ್ತಿರುವ ನಾನೂ ಬಡವನೇ??" ಸ್ವಲ್ಪ ಸಿಟ್ಟಿನಿಂದಲೇ ಕೇಳಿದೆ.

ಅವರು ನಸು ನಕ್ಕು ಹೇಳಿದರು.

ಮೂ: "ಹಾಗಂತ ಅಲ್ಲಾ ಗುರು. ಯಾವನು ಎಲ್ಲಿಯವರೆಗೆ ತನಗೆ ಅದು ಬೇಕು ಇದು ಬೇಕು ಅಂತ ಹಪಹಪಿಸಿ ಕೊರತೆ ಅನುಭವಿಸುವನೋ, ಅಲ್ಲಿಯವರೆಗೆ ಅವನು ಬಡವನೇ. ಅದು ನಾನೂ ಆಗಿರಬಹುದು, ನೀವು ಅಥವ ಅಂಬಾನಿಯೂ ಆಗಿರಬಹುದು! ನಿಮ್ಮ ಹತ್ತಿರ ಒಂದು ಕಾರು ಇದೆ, ಆದರೂ ನೀವು ಇದಕ್ಕಿಂತ ದೊಡ್ಡ ಕಾರು ನಿಮ್ಮ ಬಳಿ ಇರಬೇಕಿತ್ತು ಅಂತ ಆಸೆ ಪಟ್ಟು, ಆ ಕೊರತೆ ಅನುಭವಿಸಿದರೆ ನೀವೂ ಬಡವರೆ!"

ಹೌದಲ್ಲವೇ! ಮೂರ್ತಿಗಳು ಒಂದು ಯಾಂಗಲ್‍ನಲ್ಲಿ ಕ್ಲೀನ್ ಆಗಿ ಶೇವ್ ಮಾಡಿದ ಯವುದೋ ಒಬ್ಬ ತತ್ವ ಜ್ಞಾನಿಗಳಂತೆ ಕಾಣತೊಡಗಿದರು! ಅವರು ಹೇಳಿದ್ದು ಸತ್ಯವೆನಿಸಿತು ಕೂಡ. ನಾನೂ ಯೋಚನೆಗೆ ತೊಡಗಿದೆ. ನನ್ನ ಆಸೆಗಳ ಯಾದಿ ದೊಡ್ಡದೇ ಇದೆ. ನಾನೂ ಒಬ್ಬ ಬಡವನೇ!

ಗು: "ಸರಿಯಾಗಿ ಹೇಳಿದ್ರಿ ಮೂರ್ತಿ. ನಿಮ್ಮ ಮಾತು ಒಪ್ಪಬೇಕಾದದ್ದೆ."  

ಅಷ್ಟರಲ್ಲೇ ಮನೆಯ ಹೊರಗೆ "ನೂರು ರುಪಾಯಿಗೆ ಎರಡು ಕೇಜಿ ಈರುಳ್ಳೀ…" ಅಂತಾ ಕೂಗಿದಂತಾಯ್ತು. ನನ್ನ ಕಿವಿಗಳು ನಿಮಿರಿದವು. ಕೈಗೆ ಸಿಕ್ಕ ಚೀಲ ಹಿಡಿದು ಹೆಂಡತಿಯ ಅಪ್ಪಣೆಗೂ ಕಾಯದೇ ಹೊರಗೆ ಓಡಿದೆ. ತಳ್ಳುವ ಗಾಡಿಯಲ್ಲಿ ಈರುಳ್ಳಿಗಳು. ಅವುಗಳ ಗಾತ್ರ ಮಾತ್ರ ಬೆಳ್ಳುಳ್ಳಿಗಿಂತ ಸ್ವಲ್ಪ ದೊಡ್ಡ ಅಷ್ಟೆ! ನಮಗೇನಾಗಬೇಕು, ಒಟ್ಟಿನಲ್ಲಿ ಈರುಳ್ಳಿ ಭಜಿ ತಿನ್ನಬೇಕು ಅಷ್ಟೆ! ಇದ್ದುದರಲೇ ಸ್ವಲ್ಪ ದೊಡ್ಡದನ್ನು ಆರಿಸೋಣವೆಂದರೆ, ತಳ್ಳುವ ಗಾಡಿಯವನು ಅದಕ್ಕೂ ಅವಕಾಶ ಕೊಡಲಿಲ್ಲ. ಒಟ್ಟಿನಲ್ಲಿ ಎರಡು ಕೇಜಿ ಈರುಳ್ಳಿಗಳನ್ನು ಪೇರಿಸಿಕೊಂಡು ಮನೆಗೆ ತಂದೆ. ಈರುಳ್ಳಿ ಭಜಿ ಮಾಡಿಸಿಕೊಂಡು ತಿಂದು ಕೊರತೆ ನೀಗಿಸಿಕೊಂಡೆವು. ಆದರೂ ಬಡತನದ ಹೊಸ ವ್ಯಖ್ಯಾನ ತಲೆ ಕೊರೆಯುತ್ತಿತ್ತು…

-ಗುರುಪ್ರಸಾದ ಕುರ್ತಕೋಟಿ


ಕನ್ನಡದ ಬರಹಗಳನ್ನು ಹಂಚಿ ಹರಡಿ

20 thoughts on “ನಾನು ಬಡವ?:ಗುರುಪ್ರಸಾದ್ ಕುರ್ತಕೋಟಿ

 1. ನಿಮ್ಮ ಬರವಣಿಗೆಯಲ್ಲಿನ "Wit" ಗೆ ನಮೋನ್ನಮಃ. ಈ ಹ್ಯೂಮರಿಗೂ ವಿಟ್ ಗೂ ಬಹಳ ವ್ಯತ್ಯಾಸವಿದೆ. 'Humor' ಜೊತೆ ಸರಿಯಾದ 'Intellect' ಸೇರಿದಾಗ ಅದು 'Wit' ಆಗುತ್ತೆ. ಅದು ನಿಮಗೆ ಒಲಿದಿದೆ. ಲೇಖನದಲ್ಲಿ ಖುಷಿಯಾಗುವುದು ಅದೇ. ಈರುಳ್ಳಿಯಲ್ಲೂ ತತ್ವಜ್ನಾನ ಹೇಳಲು ಹೊರಟಿದ್ದು ಹಾಗೂ ಅದನ್ನು ಹೇಳಲು ಸಂಭಾಷಣೆಯನ್ನು 'ಪ್ರಕಾರ'ವಾಗಿ ಬಳಸಿಕೊಂಡಿದ್ದು ವಿಶೇಷ ಹಾಗೂ ಪೂರಕ. ಇಲ್ಲದಿದ್ದರೆ ನಿಮ್ಮ ಆ ಬಡತನದ Philosophy ಯಾರೂ ಓದಲಾಗದ ಲೇಖನವಾಗಿ ಉಳಿದುಬಿಡುವ ಸಾಧ್ಯತೆ ಇತ್ತು. ಇದನ್ನರಿತ ಒಳ್ಳೆಯ ಲೇಖಕರಾಗಿರುವಿರಿ ನೀವು.
  ಈರುಳ್ಳಿಗಳ ಗಾತ್ರ ಮಾತ್ರ ಬೆಳ್ಳುಳ್ಳಿಗಿಂತ ಸ್ವಲ್ಪ ದೊಡ್ಡ ಅಷ್ಟೆ", "ಕ್ಲೀನ್ ಆಗಿ ಶೇವ್ ಮಾಡಿದ ಯವುದೋ ಒಬ್ಬ ತತ್ವ ಜ್ಞಾನಿ" ಇತ್ಯಾದಿ ಸಾಲುಗಳು ಸಕತ್ ಕಿಕ್ ಕೊಡುತ್ತೆ.
  ಅಂದಹಾಗೆ ನಿಮ್ಮ ಲೇಖನದಲ್ಲಿ ಬರುವ 'ಮೂ' ಯಾರೆಂದು ತಿಳಿಯಲಿಲ್ಲ. ಆತ ಪಾರ್ಟ್ ಟೈಮ್ ಈರುಳ್ಳಿ ಮಾರಾಟಗಾರ ಅಲ್ಲ ತಾನೆ? 

  1. ನಿಮ್ಮ ಅದ್ಭುತವಾದ ಪ್ರತಿಕ್ರಿಯೆಗೆ ಧನ್ಯವಾದಗಳು! ತುಂಬಾ ಖುಷಿಯಾಯ್ತು :). ಅಂದ ಹಾಗೆ "ಮೂ" ಅಂದ್ರೆ ಕೃಷ್ಣ ಮೂರ್ತಿ ಅಂತ. ಅವರು ನನ್ನ ಒಳ್ಳೆಯ ಮಿತ್ರರು, ಚಿಂತಕರು, ವಿಚಾರವಾದಿಗಳು ಹಾಗೂ ಅದ್ಭುತ ಸಾಹಿತಿಗಳು! ಅವರ ಕೆಲವು ವಿಚಾರಧಾರೆಗಳನ್ನು ಹೀಗೆ ನಾನು ಬಳಸಿಕೊಳ್ಳುತ್ತಿರುವುದ ನೋಡಿ ಅವರು ನನ್ನ ಜೊತೆ ಮಾತಾಡುವುದು ಬಿಡದಿದ್ದರೆ ಅಷ್ಟೆ ಸಾಕು 🙂
   ಅವರು ಪಾರ್ಟ್ ಟೈಮ್ ಈರುಳ್ಳಿ ಮಾರುವುದಿಲ್ಲ, ಬೇರೆ ಏನೋ ಸ್ಕೆಚ್ ಹಾಕುತ್ತಿದ್ದಾರೆ, ಅದರ ಬಗ್ಗೆ ಇನ್ನೊಮ್ಮೆ ಬರೆದೇನು!! 🙂

 2. ಛ್ಹೊಲೊ ಅನ್ಸ್ತುಬರೆ ಹಾಸ್ಯಾದ ಯಾಂಗಲ್‍ನ್ಯಾಗ!
  "ಈರುಳ್ಳಿಯ ಕೊರತೆಯನ್ನು ಅನುಭವಿಸುತ್ತಿರುವ ನಾನೂ ಬಡವನೇ??" 
  " ಈರುಳ್ಳಿಗಳ ಗಾತ್ರ ಮಾತ್ರ ಬೆಳ್ಳುಳ್ಳಿಗಿಂತ ಸ್ವಲ್ಪ ದೊಡ್ಡ ಅಷ್ಟೆ", "ಕ್ಲೀನ್ ಆಗಿ ಶೇವ್ ಮಾಡಿದ ಯವುದೋ ಒಬ್ಬ ತತ್ವ ಜ್ಞಾನಿ" ಭಾಳ ಛೊಲೊ ಪಂಚ ಲೈನವ…
  ಮ್ದನಷ್ಯಾಗ ದುರಾಸೆ ಇದ್ರ ಮನಸ್ಸಿಂದಾ ಬಡವನ…
  ಮ್ದನಷ್ಯಾಗ ಎರಡ ಹೊತ್ತಿನ ಹೊಟ್ಟಿತುಂಬಾ ಊಟಾ ಮಲಗಲಿಕ್ಕೆ ಮನಿ ಇದ್ರ ಬಡವಾ ಅಲ್ಲ. ಇದು ನನ್ನ ವಿಚಾರಾ….
   
  ವಿಠಲ ರಾ ಕುಲಕರ್ಣಿ 

 3. ಸೂಪರ್ ಗುರೂ.
  ಬಡತನಕ್ಕೆ ಕೊಟ್ಟ ವ್ಯಾಖ್ಯಾನ ಅದ್ಭುತ!!.. ಬರೆಯುತ್ತಿರಿ… ಶುಭವಾಗಲಿ

 4. ಈರುಳ್ಳಿ ಬೆಲೆ ಏರಿದಂತೆ ದೈಹಿಕ ಬಡತನ ಕಾಡುತ್ತದೆ . ಆದ್ರೆ ಮೂ ರವರ ಬಡತನದ ಮೂದಲಿಕೆ ಈರುಳ್ಳಿ ಬೆಲೆ ಕಡಿಮೆ ಆದ ಕುಷಿಯಲ್ಲಿ ನಿಮಗೆ ಜರ್ರನೆ ಇಳಿಕೆಯಾಗಿ ಹಾಸ್ಯ ಮೂಡಿದ್ದು ಹಾಸ್ಯಾನೇ ಅಲ್ಲವೆ… ಈರುಳ್ಳಿ ಬಜ್ಜಿ ತಿಂದಮೇಲೆ ಇದರ ಅರಿವಾಗಿ ದೈಹಿಕ ಸಿರಿತನದ ಸೀಮಂತಕ್ಕೆ ತಾವು ಕಾರಣ ರಾದರೆ ಅಂದೇ ಈ ಬಡತನ ನಮ್ಮ ದೇಶದಿಂದ ಹೋದೀತು?

 5. ಈರುಳ್ಳಿ ಅಥವಾ ಉಳ್ಳಾಗಡ್ಡಿ ಬಂಗಾರದ ಬೆಲಿ ಆಗೇದ..
  ಆದ್ರ ಮಾಧ್ವ ಕಮ್ಯುನಿಟಿಯವ್ರು ಮೊನ್ನೆ ತಮ್ಮ ಶ್ರೀ ಶ್ರೀ ಶ್ರೀ….ಮುಂದ
  ಇನ್ನ ಮುಂದ ಕದ್ದಮುಚ್ಚಿನೂ ಉಳ್ಳಾಗಡ್ಡಿಹಾಕಿದ ಭಜಿ ತಿನ್ನೂದಿಲ್ಲ ಅಂತ ಪ್ರಮಾಣಸಮೇತ
  ಮುದ್ರಿ ಹಾಕಿಸಿಕೊಂಡಾರ ಅಂತ ಶ್ರೀ…ಮೂಲಗಳು ಹೇಳ್ಯಾವ..
   
  ನಿಮ್ಮ ಲೇಖನ ಪಸಂದ ಅನಿಸ್ತು..

 6. ವಿಡ೦ಬನೆ ಚೆನ್ನಾಗಿದೆ..ಬದತನ  ನಮ್ಮ ಮನಸ್ಸಲ್ಲಿ  ಅರ್ಧ  ಇರೋದು..

 7. ಚೆನ್ನಾಗಿದೆ 🙂 ಬಡತನದ ಬಗೆಗಿನ ವ್ಯಾಖ್ಯಾನ ನಾನು ಹಿಂದೊಮ್ಮೆ ಓದಿದ ಫಾರ್ವರ್ಡ್ ಮೆಸೇಜ್ ನೆನಪ ತಂತು..
  You will be richest person in the world not when you have everything you want but it is when you want no more- Swami Vivekananda..

 8. ತಿಳಿ ಹಾಸ್ಯದ ಜೊತೆಗೆ ಒಳ್ಳೆಯ ಸಂದೇಶ ಕೊಡುವ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.

  1. ರತ್ನಾ, ಲೇಖನವನ್ನು ಮೆಚ್ಚಿದ್ದಕ್ಕೆ ತುಂಬಾ ಸಂತೋಷ! ನನ್ನ ಪ್ರವಾಸ ಕಥನದ ಮೂರನೇ ಭಾಗ ಈ ವಾರದ ಪಂಜು ನಲ್ಲಿ ಬಂದಿದೆ. ಅದರಲ್ಲೂ ತಿಳಿ ಹಾಸ್ಯವಿದೆ. ನಿಮಗೆ ಇಷ್ಟವಾಗಬಹುದು. ದಯವಿಟ್ಟು ಓದಿ! 🙂

 9. ಖಂಡಿತಾ ಓದುವೆ ಗುರುಪ್ರಸಾದ, ನೀವು ಕೂಡ ನನ್ನ ಕಾದಂಬರಿಯನ್ನು ಓದಿ

Leave a Reply

Your email address will not be published. Required fields are marked *