ನಾನು ನೋಡಿದ ನಾಟಕ- ಸೋರೆಬುರುಡೆ (ನೃತ್ಯನಾಟಕ): ಹನಿಯೂರು ಚಂದ್ರೇಗೌಡ

"ಮಾನವನ ಸ್ವಾರ್ಥಪರ ನಡವಳಿಕೆ-ಆಲೋಚನೆ ತೆರೆದಿಡುವ ಜಾನಪದೀಯ ಕಥಾನಕ"

ಪ್ರಪಂಚದ ಮರುಹುಟ್ಟು ಕುರಿತ ಇರುಳಿಗರ ಸೃಷ್ಟಿಪುರಾಣದ ಕಥೆಯನ್ನು ಆಧಾರವಾಗಿಟ್ಟುಕೊಂಡು ರಚಿಸಲ್ಪಟ್ಟ "ಸೋರೆಬುರುಡೆ" ಜಾನಪದೀಯ ನೃತ್ಯನಾಟಕವು ಬೆಂಗಳೂರು ವಿವಿ ಆವರಣದಲ್ಲಿರುವ ಕಲಾಗ್ರಾಮದ ರಂಗಮಂದಿರದಲ್ಲಿ ಪ್ರದರ್ಶನಗೊಂಡು ಕಿಕ್ಕಿರಿದ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ಬೆಂಗಳೂರಿನ ಕೆ.ಎಸ್.ಎಂ.ಟ್ರಸ್ಟ್ ಕಲಾವಿದರು ಪ್ರಸ್ತುತಪಡಿಸಿದ ಈ ನಾಟಕವು, ಮನುಷ್ಯ ತನ್ನ ಅಸ್ತಿತ್ವದ ಉಳಿವಿಗಾಗಿ ಏನೂ ಬೇಕಾದರೂ ಮಾಡಲು ಹಿಂಜರಿಯಲಾರ ಎಂಬ ಸಂದೇಶವನ್ನು ನೀಡಿತು. ಅಲ್ಲದೆ, ಮಾನವನದು ಸದಾ ಸ್ವಾರ್ಥಪರ-ಅನುಕೂಲಸಿಂಧುವೂ ಆದ ವರ್ತನೆ ಮತ್ತು ನಡವಳಿಕೆಯಾಗಿದೆ ಎನ್ನುವುದನ್ನು ನಾಟಕದಲ್ಲಿ ಮನೋಜ್ಞವಾಗಿ ನಾಟಕಕಾರರು ಅಭಿವ್ಯಕ್ತಿಗೊಳಿಸಿದ್ದಾರೆ. 

ಜಾನಪದೀಯ ನಂಬಿಕೆ ಮತ್ತು ಸಂಸ್ಕೃತಿಯ ಆಧಾರದ ಎಳೆ ಹೊಂದಿರುವ ಈ ನಾಟಕದ ಕಥಾವಸ್ತು ನಾಟಕಕಾರರು, ತಮ್ಮ ಪಿಎಚ್.ಡಿ. ಅಧ್ಯಯನಕ್ಕೆ ಕ್ಷೇತ್ರಕಾರ್ಯದಲ್ಲಿ ತೊಡಗಿದ್ದಾಗ ಇರುಳಿಗರ ಹಿರಿಯರೊಬ್ಬರು ಹೇಳಿದ ಸೃಷ್ಟಿಪುರಾಣದ ಐತಿಹ್ಯವಾಗಿದೆ. ಇದು ನಾಟಕವು ಕುತೂಹಲಕಾರಿಯೂ ಆಸಕ್ತಿಕರವೂ ಆಗಲು ಕಾರಣವೂ ಸಹ ಆಗಿದೆ. ಒಟ್ಟಿನಲ್ಲಿ ಈ ನಾಟಕದ ಮೂಲ ಆಕರ ಜಾನಪದ ಎಂಬುದೂ ಗಮನಾರ್ಹ ಅಂಶವಾಗಿದೆ. ಸದಾ ಸ್ವಾರ್ಥಪರನೂ, ಸಿಕ್ಕಿದ್ದನ್ನು ಅನುಭವಿಸಿಯೇ ತೀರಬೇಕೆನ್ನುವವನೂ, ತಾನು ಮಾತ್ರ ಬದುಕಿದರೆ ಸಾಕೆನ್ನುವ ಮನೋಭಾವದವನೂ, ತನ್ನ ಉನ್ನತಿ-ಅವನತಿ, ಸುಖ-ದುಃಖಕ್ಕೆ, ಕಾರ್ಯಸಾಧನೆಗೆ ಐತಿಹ್ಯದ-ದೈವದ ಕತೆಗಳ ಬೆಂಬಲ ಪಡೆಯುವಲ್ಲಿ ಮನುಷ್ಯ ನಿಸ್ಸೀಮ ಎಂಬುದನ್ನು ಈ ನಾಟಕ ಅರ್ಥಮಾಡಿಸುವಲ್ಲಿ ಸಮರ್ಥವಾಗಿದೆ.

ಪ್ರಕೃತಿಗೆ ತಾನು ಕೊಡುವುದಕ್ಕಿಂತಲೂ ಪಡೆಯುವುದರಲ್ಲಿಯೇ ಬದುಕಿನ ಸಾರ್ಥಕತೆ ಗಳಿಸಿಕೊಳ್ಳುವ ಮನುಷ್ಯ, ಅವನ ಉಳಿವು-ಅಸ್ತಿತ್ವಕ್ಕಾಗಿ ಇಡೀ ಪ್ರಪಂಚವನ್ನು ಬಲಿತೆಗೆದುಕೊಳ್ಳ ಬಲ್ಲ ವಿಧ್ವಂಸಕಾರಿ ಜೀವಿ. ಅಷ್ಟೇ ಅಲ್ಲ, ಇಡೀ ಪ್ರಕೃತಿಯನ್ನೇ ತನ್ನ ಅಣತಿಗೆ ತಕ್ಕಂತೆ ಬದಲಾಯಿಸಿಕೊಂಡು ಅದರ ಮೇಲೆ ನಿಯಂತ್ರಣ ಸಾಧಿಸಬಲ್ಲ ಚಾಣಾಕ್ಷ ಎನ್ನುವುದಕ್ಕೆ ಈ ನಾಟಕದಲ್ಲಿ ಮೇಳೈಸಿರುವ ಅನೇಕ ಪ್ರಸಂಗಗಳು ಕನ್ನಡಿ ಹಿಡಿಯುತ್ತವೆ. ತನ್ನ ಹಸಿವನ್ನು ನಿವಾರಿಸಿಕೊಳ್ಳಲು ಪ್ರಕೃತಿಯನ್ನು ಹಾಗೂ ಜೀವಸಂಕುಲವನ್ನೇ ಆಶ್ರಯಿಸಿ ಬದುಕುವ ಮನುಷ್ಯ, ಹೇಳಿಕೇಳಿ ಪರಾವಲಂಬಿ ಜೀವಿ.  ಅಂತಲೇ ಒಮ್ಮೆ ಬೇಟೆಗಾಗಿ ಕಾಡಿಗೆ ತೆರಳುವ ಬೇಟೆಗಾರನಿಗೆ ಅನಿರೀಕ್ಷಿತ ಪ್ರಸಂಗ ಕಾಣಸಿಗುತ್ತದೆ. ಅದು, ಪ್ರಕೃತಿಯು ತನ್ನ ಸಮತೋಲನಕ್ಕಾಗಿ ತಾನೇ ತೆಗೆದುಕೊಳ್ಳುವ ನಿರ್ಧಾರವನ್ನು ಅರಿತ ತಾಯಿಹಂದಿಯು, ತನ್ನ ಮರಿಗಳಿಗೆ ಹೇಳಿ, ದುಃಖಿಸುವುದನ್ನು ಈ ಬೇಟೆಗಾರ ಕೇಳಿಸಿಕೊಂಡು, ಸಾವಿನಮನೆಯಿಂದ ಪಾರಾಗುವ ಬಗೆಯನ್ನರಿತು ಅಲ್ಲಿಂದ ಮರಳಿ ಮನೆಗೆ ಬರುತ್ತಾನೆ. ಪ್ರಳಯದ ಕಾರಣದಿಂದ ಇಡೀ ಪ್ರಪಂಚವೇ ಲಯವಾಗುವುದನ್ನು ಮತ್ತು ಅದರಿಂದ ಪಾರಾಗುವುದನ್ನು ತನ್ನ ಮಗಳಿಗೆ ತಿಳಿಸಿ, ತನ್ನೂರಿನ ಗ್ರಾಮದ ಮುಖಂಡನ ಬಳಿ ದೊಡ್ಡದಾದ ಸೋರೆಬುರುಡೆಯನ್ನು ತರಲು ಕಳುಹಿಸುತ್ತಾನೆ.  ಆದರೆ, ಈ ವಿಚಾರವನ್ನು ತನ್ನ ನೆರೆಹೊರೆ, ಗ್ರಾಮದ ಯಾರಿಗೂ ತಿಳಿಸದೆ ತಾನು, ತನ್ನ ಮಗಳಿಬ್ಬರೇ ಪಾರಾಗುತ್ತಾರೆ. ಇಲ್ಲಿಯೂ ಮನುಷ್ಯನ ಸ್ವಾರ್ಥಬುದ್ಧಿ ಜೊತೆಗೆ ತನಗೆದುರಾದ ಕಷ್ಟ-ನಷ್ಟ, ಉದ್ಧಾರ-ಅವನತಿಯ ಸಮಯದಲ್ಲಿ ಪರರ ಬಗ್ಗೆ ಚಿಂತಿಸದೆ ತನ್ನೊಳಿತಿಗೇ ಚಿಂತಿಸುತ್ತಾನೆ ಎಂಬ ಕಟುಸತ್ಯದ ಅನಾವರಣ ಪ್ರೇಕ್ಷಕರಿಗಾಗುತ್ತದೆ.    
   
ಮಾನವನ ಇಂತಹ ಸ್ವಾರ್ಥಪರ ಆಲೋಚನೆಗಳು ಹೇಗೆ ಅವನಲ್ಲಿ ಬೇರೂರಿವೆ? ಅವು ಹೇಗೆ ಮನುಷ್ಯನ ಉಳಿವಿನ ಮುಂದೆ ಮಿಕ್ಕೆಲ್ಲವೂ ಗೌಣವಾಗುತ್ತವೆ ಎಂಬುದರ ಕುರಿತು, ಸೋರೆಬುರುಡೆ ನಾಟಕ ನೋಡುವವರಲ್ಲಿ ಚಿಂತನೆಗೆ ಹಚ್ಚುತ್ತದೆ. ಅಲ್ಲದೆ, ಜಾತಿ-ಜಾತಿ ಎನ್ನುತ್ತಾ ಸಂಘರ್ಷ ಮಾಡಿಕೊಳ್ಳುವುದು; ಜಾತಿ-ಜಾತಿ ನಡುವೆ ವಿಷಬೀಜ ಬಿತ್ತುವುದು ತರವಲ್ಲ ಎಂಬುದನ್ನು ಈ ನಾಟಕದ ಪ್ರಮುಖ ಅಂಶವಾಗಿದೆ. ಪ್ರಪಂಚದ ವಿವಿಧ ಕಾಲಘಟ್ಟದಲ್ಲಾದ ಬದಲಾವಣೆಗಳ ಹೊಡೆತಕ್ಕೆ  ಸಿಲುಕಿ, ಬದುಕುಳಿದ ಜೀವಿ ಎಂದರೆ, ಮನುಷ್ಯ ಮಾತ್ರ. ಅಂತೆಯೇ ಎಂಥ ಕಾಲದಲ್ಲೂ ತನ್ನ ಅಸ್ತಿತ್ವ ಉಳಿಸಿಕೊಂಡ ಏಕೈಕ ಜೀವಿಯೂ ಅವನೆ. ಕಾಲಾನಂತರ ವೃತ್ತಿಯಾಧಾರದಲ್ಲಿ ಜಾತಿಗಳ ಉಗಮಕ್ಕೆ ನಾಂದಿಯಾಯಿತು ಎಂಬುದನ್ನು ಈ ನೃತ್ಯರೂಪಕ ಮನದಟ್ಟು ಮಾಡಿಸುತ್ತದೆ.

ಅತ್ಯಂತ ಮಡಿವಂತಿಕೆ ಸಂಸ್ಕೃತಿಯ ಸಮಾಜವೆನಿಸಿದ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅಪ್ಪ-ಮಗಳ ನಡುವಿನ ಸಂಬಂಧ ಗುರುತರವಾದುದು ಆಗಿದೆ. ಆದರೆ, ಇದನ್ನು ಕದಡುವಂತೆ, ಈ ನಾಟಕದಲ್ಲಿ "ಅಪ್ಪ-ಮಗಳು" ಮಿಲನಗೊಂಡು ಸೃಷ್ಟಿ ಕ್ರಿಯೆಗೆ ಮುಂದಾಗುವ ಅದರಲ್ಲಿ ಯಶ ಕಾಣುವ ಸನ್ನಿವೇಶವನ್ನು ನಮ್ಮ ಸಮಾಜ ಅರಗಿಸಿಕೊಳ್ಳುವಲ್ಲಿ ಅಸಾಧ್ಯವೆನ್ನುವಂತಿದೆ. ಇದು ಬಹುತೇಕ ನೋಡುಗರು ಮತ್ತು ಸಂಸ್ಕೃತಿ ಚಿಂತಕರನ್ನು ಕಸಿವಿಸಿಯ ಜೊತೆಗೆ ಚಿಂತೆಗೀಡು ಮಾಡುವಂತಿದೆ. ಆದರೆ, ಇರುಳಿಗರ ಈ ಜಾನಪದೀಯ ಕಥೆಯಲ್ಲಿ ಏನೂ ಸಹ ಘಟಿಸಬಹುದು ಎಂಬುದು ಈ ನಾಟಕದಲ್ಲಿ ಸಾಧಿತವಾಗಿದೆ.  ಒಟ್ಟಿನಲ್ಲಿ, ಅದು ಅಪ್ಪ-ಮಗಳಿರಲಿ, ಅವ್ವ-ಮಗನಿರಲಿ, ಅಣ್ಣ-ತಂಗಿಯಿರಲಿ, ತಂಗಿ-ಅಣ್ಣನಿರಲಿ ಅಲ್ಲೊಂದು ಹೆಣ್ಣು-ಗಂಡಿದ್ದರೆ ಸೃಷ್ಟಿಕ್ರಿಯೆ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಈ ರೀತಿಯ ಪ್ರಸಂಗಗಳು ಈಡಿಪ್ಲಸ್ ಕಾಂಪ್ಲೆಕ್ಸ್‌ನಂತೆ ಸಹ್ಯವೂ ಆಗುತ್ತವೆ;ಆಗಿವೆ. 

ಅದೇನೇ ಇದ್ದರೂ ಪ್ರಾಣಿ-ಪಕ್ಷಿಲೋಕಕೆ ಅಳಿವಿದ್ದರೂ ನರಲೋಕಕೆ ಎಂದೂ ಅಳಿವಿಲ್ಲ; ಅದಿದ್ದರೂ ಮನುಷ್ಯ ಅದನ್ನು ತನ್ನ ಚತುರತನದಿಂದ ಬಚಾವಾಗಬಲ್ಲ ಎಂಬ ಮಾತು ಈ ನಟಕದ ಪ್ರಧಾನ ಆಶಯವಾಗಿ ಕಾಣುತ್ತದೆ. ಪ್ರಳಯದ ಕಾರಣದಿಂದ ವಿನಾಶವಾದ ಪ್ರಪಂಚದ ಮರುಹುಟ್ಟಿನ ಕುರಿತ ಸೃಷ್ಟಿಪುರಾಣ ಕತೆಯನ್ನು ಆಧಾರವಾಗಿ ಹೊಂದಿರುವ ಈ ನೃತ್ಯರೂಪಕವು ಜಾತಿ ವಿನಾಶ ಮತ್ತು ಮನುಷ್ಯನ ಅನಾಗರಿಕ ವರ್ತನೆ, ಸ್ವಾರ್ಥಪರ ಆಲೋಚನೆಗಳಿಂದಾಗುವ ಅಪಾಯ ಇತ್ಯಾದಿ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಅವನು ಸಾಗಬೇಕಾದ ದಾರಿಯನ್ನು ನಿರ್ಧರಿಸುವಂತಿದೆ. 
        
ಇನ್ನು ನಾಟಕಕಾರ ಬೈರೇಗೌಡ, ನಟಿಸುವುದರ ಜೊತೆಗೆ ಗೀತೆಗಳಿಗೆ ದನಿಯಾಗಿ ಗಮನ ಸೆಳೆಯುತ್ತಾರೆ.  ನಾಟಕದಲ್ಲಿ ಬಳಸಲಾಗಿರುವ ಗೀತೆಗಳು ನಾಟಕದ ಚೇತೋಹಾರಿ ಮುಂದೋಟಕ್ಕೆ ಸಹಕಾರಿಯಾಗಿವೆ. ನಾಟಕದ ಉತ್ತಮ ನಿರೂಪಣೆ ಹಾಗೂ ಪ್ರದರ್ಶನಕ್ಕೆ ಎಲ್ಲಾ ನಟರ ಕೊಡುಗೆ ಸಮನಾಗಿದ್ದು, ಅದರಲ್ಲಿ ತಂದೆ ಮತ್ತು ಮಗಳ ಪಾತ್ರಧಾರಿಗಳ ನಟನೆ ನೋಡುಗರ ಮನಸೆಳೆಯುವಂತಿತ್ತು. ಒಟ್ಟಿನಲ್ಲಿ ನಾಟಕವು ತನ್ನ ಅಚ್ಚುಕಟ್ಟುತನದಿಂದಾಗಿ ಮತ್ತೊಮ್ಮೆ ನೋಡುವ ಆಸಕ್ತಿಯನ್ನು ಪ್ರೇಕ್ಷಕರ ಮನದಲ್ಲಿ ಮೂಡಿಸಿದ್ದು ಮಾತ್ರ ಸುಳ್ಳಲ್ಲ. ನಾಟಕದ ರಚನಾಕಾರ ಎಂ.ಬೈರೇಗೌಡ, ನಿರ್ದೇಶನ ಮಾಡಿದ ಜೋಸೆಫ್ ಜಾನ್ ತಮ್ಮ ಕೌಶಲದಿಂದ ಎಲ್ಲಾ ನಟರ ಪ್ರತಿಭೆಯನ್ನು ಸೂಕ್ತವಾಗಿ ಬಳಸಿಕೊಂಡಿದ್ದಾರೆ. ಬೆಳಕು, ವಿನ್ಯಾಸ, ರಂಗಪರಿಕರ, ಪ್ರಸಾದನ, ವಸ್ತ್ರವಿನ್ಯಾಸ, ನೃತ್ಯ ಸಂಯೋಜನೆ ಉತ್ತಮವಾಗಿದ್ದರಿಂದ ಸೋರೆಬುರುಡೆ ನಾಟಕ ನೆರೆದಿದ್ದ ಪ್ರೇಕ್ಷಕರ ಮನಸೆಳೆಯಿತು. ಇದಕ್ಕಾಗಿ ಇಡೀ ತಂಡಕ್ಕೆ ಅಭಿನಂದನೆಗಳು ಸಲ್ಲುತ್ತವೆ.

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x