ನಾನು ನೋಡಿದ ಚಿತ್ರ, ಚೌಕಟ್ಟು ಮೀರಿದ ಶ್ರಮ: ಅಮರ್ ದೀಪ್ ಪಿ.ಎಸ್.

ಕೆಲ ವರ್ಷಗಳ ಹಿಂದೆ ರಜನಿಕಾಂತ್ ಅವರ ಶಿವಾಜಿ ಸಿನಿಮಾ ಬಂದಿತ್ತು.  ಅದರಲ್ಲಿ ರಜನಿಕಾಂತ್ ಎಲ್ಲಾ ಆಸ್ತಿ ಕಳಕೊಂಡ ನಂತರ ವಿಲನ್ ಸುಮನ್ ರಜನಿಕಾಂತ್ ಅವರಿಗೆ ಒಂದು ರುಪಾಯಿ ಕಾಯಿನ್ ಎಸೆಯುತ್ತಾನೆ. ಆ ಒಂದು ರುಪಾಯಿ ಕಾಯಿನ್ ಸಿನೆಮಾ ಅಂತ್ಯವಾಗುವವರೆಗೂ ಪದೇ ಪದೇ ಪರದೆ ಮೇಲೆ ಕಾಣಿಸಿ ಕೊಳ್ಳುತ್ತಲೇ ಇರುತ್ತದೆ.  ಅದೂ ರಜನಿ ಸ್ಟೈಲಿಶ್ ನಟನೆಯೊಂದಿಗೆ.   ನನಗೆ ಪದೇ ಪದೇ ಆ ಒಂದು ರೂಪಾಯಿಯೇ  ನೆನಪಾಗುತ್ತದೆ.   ಬಿಡಿ, ಸಿನೆಮಾ ಬೇರೆ.  ಜೀವನ ಬೇರೆ. ಒಮ್ಮೊಮ್ಮೆ  ಒಬ್ಬನ ಜೀವನಕ್ಕೆ ಒಂದು ಸಿನೆಮಾದ ಕಥೆ ಎಷ್ಟರಮಟ್ಟಿಗೆ ಹೋಲುತ್ತದೆ ಅಲ್ಲವಾ?  ಯಶಸ್ಸಿನದು ಆಗಿರಬಹುದು, ಶ್ರಮದ್ದೇ ಆಗಿರಬಹುದು.  ನಾನು ಈಗ ಹೇಳುತ್ತಿರುವ ವ್ಯಕ್ತಿಯು ಕೋಟಿ ಕೋಟಿ ಗಳಿಸಿ ಇಟ್ಟಿದ್ದನ್ನು ಕಳೆದುಕೊಂಡು ಮತ್ತೆ ಅದನ್ನು ಸಂಪಾದಿಸಿದ ಉದಾಹರಣೆಯನ್ನಲ್ಲ.   ಆದರೆ, ಕೈಯಲ್ಲಿ ರುಪಾಯಿಯೂ ಇಲ್ಲದೇ ಅಫ್ ಕೋರ್ಸ್ ಕೋಟಿಯನ್ನಂತೂ ಅಲ್ಲ, ಕೆಲವು ಲಕ್ಷಗಳ ಮಟ್ಟಿಗೆ ಕಷ್ಟಪಟ್ಟು ದುಡಿದು, ದುಡಿಯುವುದನ್ನು ಇನ್ನೊಬ್ಬರಿಗೆ ಕಲಿಸಿ, ತಾನೂ  ಸಂಪಾದಿಸಿದ ಒಬ್ಬ ಸೀನನ ಬಗ್ಗೆ. 
 
2003,  ನಾನು ಏಕಾಂಗಿತನದ ಸ್ವಾತಂತ್ರ್ಯ ಕಳೆದುಕೊಂಡ  ವರ್ಷವದು.  ಅಂದರೆ ನನ್ನ ಮದುವೆಯಾದ ವರ್ಷ.  ಮದುವೆಗೆ ಅರ್ಜೆಂಟಾಗಿ ಒಬ್ಬ ಫೋಟೋಗ್ರಾಫರ್ ಹುಡುಕುವ ಜರೂರತ್ತು ಬಿತ್ತು. ಬಳ್ಳಾರಿಯ ಕಾಳಮ್ಮ ಬೀದಿಯಲ್ಲಿದ್ದ "ರಿಯಲ್ ಇಮೇಜೆಸ್" ಎನ್ನುವ ಆಕರ್ಷಕ ಹೆಸರಿನ ಫೋಟೋ ಲ್ಯಾಮಿನಶನ್ ಅಂಗಡಿ ಒಳಕ್ಕೆ ಕಾಲಿಟ್ಟೆ.   ಆ ದಿನಕ್ಕೂ ಮುಂಚೆ ಸಾಕಷ್ಟು ಬಾರಿ ಮದುವೆಗೆ, ಮತ್ತೊಂದು ಕಾರ್ಯಕ್ರಮಕ್ಕೆ ಬೇಕಾಗುವ ಉಡುಗೊರೆ ಖರೀದಿಸಲು ಹೋಗಿದ್ದೆ.. ಈ ಬಾರಿ ನನ್ನ ಮದುವೆಯ ಆರತಕ್ಷತೆಗೆ ಫೋಟೋ ತೆಗೆಯಲು ಅಂಗಡಿಯ ಮಾಲೀಕನನ್ನು ಕೇಳಲು ಹೋಗಿದ್ದೆ.  ಹಾಗೆ ಹೋಗಿ ಹೀಗೆ ಬಂದು ಬಿಡುವ ಅಂಗಡಿ ವಾತಾವರಣ ಅಲ್ಲಿಲ್ಲ.. ಅಲ್ಲೊಂದು ಗೆಳೆತನ ಬೆಳೆಯುತ್ತೆ.  ಗೆಳೆಯರು ಸಿಗುತ್ತಾರೆ. ನನಗೂ ಹಾಗೆ ಆಯಿತು.
 
ಆ ಅಂಗಡಿ ಮಾಲಿಕನ ಹೆಸರು ಸೀನ(ಜೆ.  ಶ್ರೀನಿವಾಸ), ಅವನ ತಮ್ಮ ಮೋನ (ಮೋಹನ ). ನಾನು ಕರೆಯುವುದು ಹಾಗೆ. ಸೀನ ಓದಿದ್ದು ಬಿಎಸ್ಸಿ ಅದೂ ಬ್ರಾಕೆಟ್.  ಅವರ ತಮ್ಮ ಬೀಕಾಂ ಅವನೂ ಬ್ರಾಕೆಟ್.   ಸೀನ ಫೋಟೋ ಲ್ಯಾಮಿನಶನ್ ಕೆಲಸದ ಜೊತೆ ಕಾರ್ಯಕ್ರಮಗಳ ಫೋಟೋಗ್ರಫಿ ಕೂಡ ಮಾಡುತ್ತಿದ್ದ. ಅವನ ಆತ್ಮೀಯತೆ ಶೈಲಿಯೇ ವಿಭಿನ್ನ.  ಕಾಟಾಚಾರದ, ಶಿಷ್ಟಾಚಾರದ ಮಾತುಗಳು ಅವನಲ್ಲಿಲ್ಲ. ಇದ್ದದ್ದು ಇದ್ದ ಹಾಗೆ.  ವ್ಯವಹಾರಕ್ಕೆ ವ್ಯವಹಾರ. ಸ್ನೇಹಕ್ಕೆ ಸ್ನೇಹ.  ಊಟದಲ್ಲಿ ಸಿವಿಲ್ಲು, ದ್ರವ ಪದಾರ್ಥದಲ್ಲಿ ಕ್ರಿಮಿನಲ್ಲು. 


 
ಹಾಗೆ ಈ ಗೆಳೆಯನ ಫ್ಲಾಶ್ ಬ್ಯಾಕ್ ಒಂಚೂರು ಕೆದಕಿದೆ. ಇಂಟೆರೆಸ್ಟಿಂಗ್ ಅನ್ನಿಸಿತು.  
 
1993 ಆಗಿನ್ನೂ ಬಿಎಸ್ಸಿ ಓದುತ್ತಿದ್ದ ದಿನಗಳು.  ಕೈಯಲ್ಲೊಂದು ಸೈಕಲ್ಲಿತ್ತು. ಅಪ್ಪ ಕೆ ಇ ಬಿ ಯಲ್ಲಿ ಸ್ಟೇಷನ್ ಅಸಿಸ್ಟೆಂಟ್ ಆಗಿದ್ದರು.  ಓದುವ ದಿನಗಳಲ್ಲಿ ಸೀನ, ನಾವು ಸೀದಾ ಹೇಗೆ ಸರಾಗವಾಗಿ ಬರೆಯುತ್ತೇವೋ ಹಾಗೆ ಅಕ್ಷರಗಳನ್ನು ಉಲ್ಟಾ ಅದೇ ಸ್ಪೀಡಲ್ಲಿ ಬರೆಯುತ್ತಿದ್ದ.   ಓದು ಹೇಗೋ ಸಾಗಿತ್ತು.  ಒಂದಿನ ಒಬ್ಬ ಗೆಳೆಯ ಫೋಟೋಗ್ರಾಫರ್  ಒಂದು ಕಾರ್ಯಕ್ರಮಕ್ಕೆ ಕರೆದ. ಅವನು ಕರೆದದ್ದು ಯಾತಕ್ಕೆ ಗೊತ್ತಾ? ಅವನು ವೀಡಿಯೊ ಕವರೇಜ್ ಮಾಡುವಾಗ ಅವನ ಹಿಂದೆ ಕೇಬಲ್ ಎಳೆದು ಹಿಡಿದು ನಿಲ್ಲಲು.  ತಮಾಷೆ ಗೊತ್ತಾ? ಸೀನ ಈಗಲೂ ಅದನ್ನು ಬಹಳ ಸೊಗಸಾಗಿ ವಿವರಿಸುತ್ತಾನೆ; "ನೋಡ್ ಸಾಮಿ, ಒಳ್ಳೆ ಊಟ ಉಂಬಾಕ ಸಿಗ್ತಿತ್ತು, ಖರ್ಚಿಗೆ ಒಂಚೂರು ರೊಕ್ಕ ಅಷ್ಟ್ ಸಾಕು, ಅನ್ನಿಸಿತ್ತು ಆಗ ".  
 
ಅದು ಪದೇ ಪದೇ ನಡೆದೇ ಇತ್ತು.  ಒಂದಿನ ಯಾವುದೋ ಒಂದು ಕಾರ್ಯಕ್ರಮದಲ್ಲಿ ಫೋಟೋಗ್ರಾಫರ್ ಬಾರದೇ ಸೀನನ ಕೊರಳಿಗೆ ಕ್ಯಾಮರಾ ನೇತುಹಾಕಿ ತೆಗಿ ಅಂದರು. ಅದನ್ನೂ ಮಾಡಿದ. ಆಗಿನಿಂದ ಕ್ಯಾಮೆರಾ ಕೊರಳಿಗೆ ಗಂಟು ಬಿತ್ತು.  ಬದುಕು ಒಂಟಿ ಕಣ್ಣಿನಿಂದ ದುಡಿಯುವುದನ್ನು ರೂಢಿಸಿಕೊಂಡಿತು. ಮತ್ತು ಸೀನನ  ದುಡಿಮೆ ನೂರರಿಂದ  ಸಾವಿರಗಳ ಲೆಕ್ಕಕ್ಕೆ  ಕೈ ಚಾಚಿಕೊಂಡಿತ್ತು.  ಮದುವೆ, ಸಮಾರಂಭ, ಕಾರ್ಯ ಕ್ರಮ ಅಂದಮೇಲೆ ಒಂಚೂರು ನಗೆ, ತಮಾಷೆ, ಗೇಲಿ, ಇದ್ದೇ ಇರುತ್ತೆ. ಅವೆಲ್ಲವನ್ನೂ ತನ್ನ ಕ್ಯಾಮೆರಾದಲ್ಲಿ ತುಂಬಿಕೊಳ್ಳಲು "ಸರ್, ಇಸ್ಮಾಯಿಲ್ ಪ್ಲೀಸ್" ಎಂದು ನಗಿಸಿ ಕ್ಲಿಕ್ಕಿಸುವುದು ಎಲ್ಲಾ ಮಾಮೂಲಾಗಿತ್ತು. ಅದೊಮ್ಮೆ ಆಂಧ್ರದ ಗುಂಟೂರಿನ  ರಮಣಕುಮಾರ  ಅನ್ನುವವರು ಯಾವುದೋ ಕಾರ್ಯಕ್ರಮದಲ್ಲಿ ಸೀನ ಫೋಟೋ ತೆಗೆಯುವಾಗ ನೋಡಿದ್ದಾರೆ. ಬಹಳ ಹೊತ್ತು ಅವನನ್ನು ಪರೀಕ್ಷಿಸಿದ್ದಾರೆ. ಕೊನೆಯಲ್ಲಿ ಅವನನ್ನು ಕರೆದು ಮಾತಾಡಿಸಿ; "ಈ ಫೋಟೋ ತೆಗೆಯುವುದರ ಜೊತೆ ಈ ಪ್ರೊಫೆಶನ್ ಗೆ ಪೂರಕವಾದ  ಫೋಟೋ ಲ್ಯಾಮಿನಶನ್ ವರ್ಕ್ ಕಲೀತಿಯಾ?" ಅಂದಿದ್ದಾರೆ.  ಅದಕ್ಕೆ ಸೀನ ಗುಂಟೂರ್ ಗೆ ಇನ್ನಿಬ್ಬರನ್ನು ಕಟ್ಟಿಕೊಂಡು ಹೋಗಿದ್ದಾನೆ.
  
ಅಲ್ಲಿ ವಾರದ ಮಟ್ಟಿಗೆ ಊಟ ವಸತಿ ಜೊತೆಗೆ ಕಸುಬಿನ ತರಬೇತಿ ಎಲ್ಲವನ್ನು ನೀಡಿದ್ದಾರೆ.  ದುರಾದೃಷ್ಟ ನೋಡಿ? ಸೀನನ ಜೊತೆ  ಹೋಗಿದ್ದ ಇನ್ನಿಬ್ಬರು ಮಧ್ಯೆದಲ್ಲಿಯೇ ಕಾಲ್ಕಿತ್ತು ಬಳ್ಳಾರಿ ಸೇರಿದ್ದಾರೆ. ಆದರೆ ಇವನೊಬ್ಬನೇ ಇದ್ದು ಕೆಲಸ ಕಲಿತಿದ್ದಾನೆ.  ಗುಂಟೂರಿನ ರಮಣಕುಮಾರ  ಅವರಿಗೆ ಇವನ ಮೇಲೆ ಅದೇನೋ ನಂಬಿಕೆ, ವಿಶ್ವಾಸ; "ಈ ಹುಡುಗ, ಕಷ್ಟಪಟ್ಟು ದುಡಿಯುತ್ತಾನೆ, ಮುಂದೆ ಬರುತ್ತಾನೆ ಮತ್ತು ಇವನಂತೆ ಇನ್ನೊಬ್ಬರಿಗೂ ಕಸುಬು, ದುಡಿಮೆ ಕಲಿಸುವ ಲಕ್ಷಣವನ್ನು ಅದೇಗೆ ಗುರುತಿಸಿದರೋ ಗೊತ್ತಿಲ್ಲ.   ಆದರೆ, ನಂಬುತ್ತೀರೋ ಇಲ್ಲವೋ ಅದೇ ಮನುಷ್ಯ ಈ ಸೀನನಿಗೆ ಒಂದು ಸಣ್ಣ ಅಂಗಡಿ  ತೆರೆಯಲು ಹೇಳಿದ್ದಾರೆ. ಅದೇ ಸೈಕಲ್ಲಲ್ಲಿ ಕಾಳಮ್ಮ ಬೀದಿಯಲ್ಲಿನ ಒಂದು ಚಿಕ್ಕ ಮಳಿಗೆ ಒಂದೂವರೆ ಸಾವಿರ ಬಾಡಿಗೆ ಮಾತಿನ ಮೇಲೆ ಗೊತ್ತು ಮಾಡಿ ಗುಂಟೂರಿನ ರಮಣಕುಮಾರ  ಅವರಿಗೆ ವರದಿ ಒಪ್ಪಿಸಿದ್ದಾನೆ.  ಆ ನಂತರ ಅವರು ಗುಂಟೂರಿನಿಂದಲೇ  ಫೋಟೋ ಲ್ಯಾಮಿನಶನ್ ವರ್ಕ್ ಗೆ ಸಂಭಂಧಿಸಿದ ಸರಕುಗಳನ್ನು ನೀಡಿ ವೃತ್ತಿ ಆರಂಭಿಸಲು ಪ್ರೋತ್ಸಾಹಿಸಿದ್ದಾರೆ.  ಅಲ್ಲಿಂದ ಶುರುವಾಯಿತು ಸೀನನ ನಿಜವಾದ ದುಡಿಮೆ.  ಅಷ್ಟೊತ್ತಿ ಗಾಗಲೇ ಬಳ್ಳಾರಿಯಲ್ಲಿ ಲ್ಯಾಮಿನಶನ್ ವರ್ಕ್ ಮಾಡುತ್ತಿದ್ದ ವೃತ್ತಿಪರರು ಇದ್ದರು. ವ್ಯವಹಾರವು ಇತ್ತು.  ಸೀನ ಹೊಸದಾಗಿ ಕಲಿಯಬೇಕಾಗಿದ್ದೆಂದರೆ, ಗಿರಾಕಿಗಳ ಆಕರ್ಷಣೆ ಮತ್ತು ಕ್ವಾಲಿಟಿ ವರ್ಕ್ ಮತ್ತು ಉತ್ತಮ ಸಂಭಂಧ ನಿರ್ವಹಣೆ. 

ಅದನ್ನೂ ಸರಾಗವಾಗಿ ನಿಭಾಯಿಸುತ್ತಾ, ತಮ್ಮ (ಮೋಹನ) ಮೋನಾನಿಗೆ, ಸಂಭಂಧಿಗಳಿಗೆ  ಸಹ ಕಲಿಸಿ ದುಡಿಮೆಗೆ ದಬ್ಬಿದ್ದಾನೆ. ಮೋನಾನನ್ನು ದುಖಾನಿನಲ್ಲಿ ಬಿಟ್ಟು ಸೀಜನ್ನು ಇದ್ದಾಗ ಕೊರಳಿಗೆ ಕ್ಯಾಮೆರಾ ನೇತಾಕಿಕೊಂಡು ಫೋಟೋ ತೆಗೆಯಲು ತಿರುಗುತ್ತಿದ್ದ.  ಮತ್ತೆ ಬಂದು ಫೋಟೋಗಳ ಆಲ್ಬಮ್ ಮತ್ತು ಲ್ಯಾಮಿನಶನ್ ವರ್ಕ್ ಕಡೆ ಹೀಗೆ ಕಷ್ಟಪಡುತ್ತಲೇ ದುಡಿದ.  ಆ ನಂತರ ಕೇವಲ ತಾನು ಮತ್ತವನ ತಮ್ಮ ಮೊನಾನಿಗೆ  ಈ ಕೆಲಸಗಳನ್ನು ಇಬ್ಬರೇ ನಿರ್ವಹಿಸಲು ಕಷ್ಟವಾದಾಗ ಮತ್ತಿಬ್ಬರು ಹುಡುಗರನ್ನು ಕೆಲಸಕ್ಕೆ ಇಟ್ಟುಕೊಂಡರು. ಅದಲ್ಲದೇ ಬೆಳಿಗ್ಗೆ ಒಂಬತ್ತುವರೆಯಿಂದ ರಾತ್ರಿ ಎಂಟೂವರೆತನಕ ಅಂಗಡಿಯಲ್ಲಿ ತಾವು ದುಡಿಯುವುದೂ ಅಲ್ಲದೇ ಮನೆಯಲ್ಲಿ ಇದ್ದ  ತನ್ನ ಮತ್ತು ತನ್ನ ತಮ್ಮನ ಹೆಂಡತಿಯರೂ ಕೈ ಜೋಡಿಸಿ ಸಾಕಷ್ಟು ಪರಿಶ್ರಮದ ದುಡಿಮೆಗೆ ಸಹಕರಿಸಿದ್ದಾರೆ, ಸಹಕರಿಸುತ್ತಲೂ ಇದ್ದಾರೆ. 
 
ಇದಾಗಿ ಮಾರುಕಟ್ಟೆಯ ಬದಲಾವಣೆಗೆ ತಕ್ಕಂತೆ ತನ್ನ ಕಸುಬಿನ ರೂಪರೇಷೆಗಳನ್ನೂ ಸಹ ಬದಲಾಯಿ ಸುತ್ತಾ, ತಾನು, ತನ್ನೊಂದಿಗೆ ದುಡಿವವರನ್ನೂ ಅಪ್ಗ್ರೇಡ್ ಮಾಡುತ್ತಲೇ ಇದ್ದ.  ಬಳ್ಳಾರಿ ಮಾರುಕಟ್ಟೆಗೆ ಸಿಂಥೆಟಿಕ್ ಫ್ರೇಮ್ ಪರಿಚಯಿಸಿದ ನಂತರ , ಆಯಿಲ್ ಪೇಂಟೆಡ್ ಆರ್ಟ್ ಮಾರ್ಕೆಟಿಂಗ್ ಶುರು ಮಾಡುವ ಹುಕಿಯಲ್ಲಿದ್ದ.   ಈ ಮಧ್ಯೆ "ರಿಯಲ್ ಇಮೇಜಸ್" ವರ್ಕ್ ಜಾಸ್ತಿ ಆಗಿದ್ದಕ್ಕೆ ಕೊರಳಲ್ಲಿದ್ದ ಕ್ಯಾಮೆರಾ ಕೆಳಗಿಟ್ಟು ಬಿಟ್ಟ.  ಅಲ್ಲಿಗೆ ಒಬ್ಬ ಒಳ್ಳೆಯ ಒಂಟಿ ಕಣ್ಣಿನ ನೋಟ ನಮ್ಮ ಗೆಳೆಯರಲ್ಲಿ ಕಮ್ಮಿಯಾಯಿತು. ಇಷ್ಟೆಲ್ಲಾ ಬೆಳ ವಣಿಗೆ ಆಗಲಿಕ್ಕೆ ಸೀನ, ಅವನಿಗೆ ಕಸುಬು ಕಲಿಸಿದ ರಮಣಕುಮಾರ  ಅವರನ್ನೇ ನೆನೆಸುತ್ತಾನೆ.  ಒಂದು ಕಾಲದಲ್ಲಿ ರಮಣಕುಮಾರ  ಅವರೇ ಸೈಕಲ್ಲಲ್ಲಿ ನ್ಯೂಸ್ ಪೇಪರ್ ಹಾಕುತ್ತಾ ಜೀವನ ದೇಕುತ್ತಾ ಬದುಕಿದ ಉದಾಹರಣೆ ನೀಡುತ್ತಾನೆ.   ಜನರಲ್ ಬೋಗಿಯಲ್ಲಿ ಜರ್ನಿ ಮಾಡುತ್ತಿದ್ದ ಸೀನನನ್ನು ರಮಣಕುಮಾರ ಇವರು ಸೀದಾ ವಿಮಾನದಲ್ಲೂ ಕರೆದುಕೊಂಡು ಹೋಗಿ, ಹೋಗುವ ಮಾರ್ಗದ ಮಧ್ಯೆದಲ್ಲೇ ದುಡಿಮೆಯ, ಸಮಯದ ಉಪಯೋಗ ಮಾಡಿ ಕೊಳ್ಳುವ ಬಗ್ಗೆ ಆಗಾಗ ಮೊಟಕಿದ್ದನ್ನು ಮುಟ್ಟಿ ನೋಡಿಕೊಳ್ಳುತ್ತಾನೆ.ಈಗ  ರಮಣ ಕುಮಾರ ಅವರ ವಾರ್ಷಿಕ ವ್ಯವಹಾರದ ಒಟ್ಟು ಮೊತ್ತ ಐದು ಕೋಟಿಗೂ ಹೆಚ್ಚು..  
  
ಈ ಮಧ್ಯೆ ಬಳ್ಳಾರಿಯಲ್ಲೇ ಇಪ್ಪತ್ನಾಲ್ಕು ಲಕ್ಷ ಕೊಟ್ಟು ಮನೆ ಖರೀದಿ ಮಾಡಲು ಮುಂದಾದಾಗ ಸೀನನ ಹತ್ತಿರ ಎಷ್ಟು ದುಡ್ಡು ಜೋಡಿಸಿಟ್ಟುಕೊಂಡಿದ್ದನೋ ಏನೋ?  ಆದರೆ ಅವನಿಗೆ ತುರ್ತಾಗಿ ಒಂದಷ್ಟು ಲಕ್ಷ ಸಾಲ ಬೇಕೆಂದಾಗ ಬ್ಯಾಂಕಿನವರು ಸಾಲ ನೀಡಲು ಸಮ್ಮತಿಸಿದ್ದಾರೆ.. ಅದಕ್ಕೆ ಜಾಮೀನಾಗಲೂ (ಸಂಭಂಧಿಗಳಲ್ಲ ) (ಅಷ್ಟಕ್ಕೂ ಸೀನ ಬಂಧುಗಳನ್ನು ಕೇಳಿದ್ದೇ  ಇಲ್ಲ ಆ ಮಾತು ಬೇರೆ )ಹಿತೈಷಿಗಳ ಬಳಗ ಮುಂದೆ ಬಂದಿದ್ದಾರೆ. ಮಾಡಿದ ಅಷ್ಟೂ ಸಾಲ ತೀರಿಸಿ ಇದ್ದ ತಟುಗು ದುಖಾನು ಖಾಲಿ ಮಾಡೆಂದ ಮಾಲಿಕನ ಮಳಿಗೆಯ ಎದುರಿಗೇ ದೊಡ್ಡದೊಂದು ಮಳಿಗೆ ಬಾಡಿಗೆ ಹಿಡಿದು ವ್ಯವಹಾರ ವಿಸ್ತರಿಸಿದ್ದಾನೆ.  ಎಷ್ಟರ ಮಟ್ಟಿಗೆಂದರೆ, ಆ ದೊಡ್ಡ ಮಳಿಗೆಯು ಸಾಲದಾಗಿ ಪಕ್ಕದಲ್ಲಿದ್ದ ಮತ್ತೊಂದನ್ನು ಪಡೆದು, ಅದಲ್ಲದೇ  ದಾಸ್ತಾನು ಮಳಿಗೆ  (ಗೋಡೌನ್ ) ಬಾಡಿಗೆ ಹಿಡಿದಿದ್ದಾನೆ. 
 
ನಂಬಿ, ಯಕಶ್ಚಿತ್ ಸೈಕಲ್ಲಲ್ಲಿ ತಿರುಗಿ ಫೋಟೋ ತೆಗೆದು ದುಡಿಮೆಗೆ ಬಿದ್ದ  ಒಬ್ಬ ಹುಡುಗ, ನೂರರಿಂದ ಸಾವಿರ, ಸಾವಿರದಿಂದ ಲಕ್ಷ ಹೀಗೆ ವಾರ್ಷಿಕ ಹತ್ತು ಲಕ್ಷಕ್ಕೂ ಹೆಚ್ಚು ಟರ್ನ್ ಓವರ್ ವ್ಯವಹಾರ ಮಾಡುವ ಮಟ್ಟಿಗೆ ಬೆಳೆದಿರುವ ಸೀನ, ತನಗೂ  ಜೊತೆಗಿರುವ ತಮ್ಮನಿಗೂ ಉಳಿತಾಯಕ್ಕೊಂದಿಷ್ಟು ಎತ್ತಿಟ್ಟು ಕೆಲಸ ಗಾರರಿಗೆ, ಬಾಡಿಗೆಗೆ, ಮನೆ ಖರ್ಚು, ದುಖಾನಿಗೆ ಬಂದ  ಆಪ್ತರಿಗೆ, ಗ್ರಾಹಕರಿಗೆ ಉಪಚರಿಕೆಗೆ ಎಲ್ಲಾ ಎಂದರೂ ತಿಂಗಳಿಗೆ ಎಪ್ಪತ್ತು ಸಾವಿರ ಪಾವತಿಸುವ ಸೀನ ಈಗ ಬರೀ ಸೀನ ಅಲ್ಲ.. ಅವನೊಬ್ಬ ಯಶಸ್ವಿ ವ್ಯವಹಾರಸ್ಥ.    ಇತ್ತೀಚಿಗೆ ತಿಳಿದ ವಿಷಯವೆಂದರೆ ಅವರ ಕಸುಬಿನ ಗುರು ತನ್ನ ವ್ಯವಹಾರದ ಹಂಚಿಕೆಯನ್ನು ಕರ್ನಾಟಕ ರಾಜ್ಯಕ್ಕೂ ವಿಸ್ತರಿಸುವವರಿದ್ದು ಅದಕ್ಕೆ ಸೀನನಿಗೆ ಉಸ್ತುವಾರಿ ನೀಡಲು ಯೋಚಿಸಿದ್ದಾರೆ.  ಸೀನ ಹ್ಞೂ ಅನ್ನುತ್ತಾನಾ?  ನೋಡಬೇಕು… 
 
ಸೀನ ಒಮ್ಮೆ ಪದೇ ಪದೇ ಹೋಗುತ್ತಿದ್ದ ಅಮ್ಮನ ತವರಾದ ಚಿತ್ರದುರ್ಗದ ಜಿಲ್ಲೆಯ ಮೊಳಕಾಲ್ಮೂರಿಗೆ  ಕರೆದುಕೊಂಡು ಹೋಗಿ  ಎಂಟು ವರ್ಷದ ಒಬ್ಬೇ  ಮಗನ ಸೊಂಟಕ್ಕೆ ಹಗ್ಗ ಕಟ್ಟಿ ಆಳವಿದ್ದ ಬಾವಿಗೆ ತಳ್ಳಿ ದಂಡೆಯಲ್ಲಿ ಕುಳಿತು "ಹ್ಞೂ  ಈಜು" ಅಂದಿದ್ದ.  ಈಗೀಗ ನಾವು ಕೆರೆ, ಹಳ್ಳ ಕಾಣದೇ, ಒಂದು ವೇಳೆ ಇದ್ದರೂ ಮಕ್ಕಳನ್ನು ಸ್ವಿಮ್ಮಿಂಗ್ ಕೋಚ್ ಗೆ ಕಳಿಸಿ ಈಜು ಕಲಿಸುವ ನಾವು ಸೀನನಿಗೆ ಹೋಲಿಸಿದರೆ ನಾಜುಕೆಂದೇ ಹೇಳಬೇಕು.  ಮಗನಿಗೆ ಚಿಕ್ಕವನಿದ್ದಾಗಲೇ ನೀರಿದ್ದ ಆಳದಲ್ಲಿ ಈಜುವುದನ್ನು ಹೇಳುವ ಸೀನ ನೀರೇ ಇಲ್ಲದ ಜಾಗದಲ್ಲಿ, ಗೊತ್ತಿಲ್ಲದೇ ಇರುವ ವಿದ್ಯೆಯನ್ನು ಕಲಿತು ಮುಂದೆ  ಪಳಗುವ ಸೂಕ್ಷ್ಮವನ್ನು ಕಲಿಸುತ್ತಿದ್ದಾನೆಂದೇ ನನ್ನ ಅಂದಾಜು. 
 
ಒಮ್ಮೆ ನನಗೆ "I.A.S. ಮಾಡಿ ಸಾಮಿ ನೀವು, ಖರ್ಚು ನಾನ್ ಕೊಡ್ತೀನಿ"ಅಂದಿದ್ದ.   "ಸೀನ ನಾನು ನಿನ್ನಂಗೆ ಡಿಗ್ರಿ ಬ್ರಾಕೆಟ್ಟು" ಅಂದು ತಮಾಷೆ ಮಾಡಿದ್ದೆ.. ಆದರೆ, ಯಾರಾದರೂ ಬಡ ಮತ್ತು ಆಸಕ್ತ ವಿಧ್ಯಾರ್ಥಿ ದೃಢ ನಿರ್ಧಾರ ಮಾಡಿ I.A.S. ಮಾಡುತ್ತೇನೆಂದರೆ ಅಂಥ ವಿಧ್ಯಾರ್ಥಿಗೆ ನಾನು ಹಣಕಾಸಿನ ಸಹಾಯ ಮಾಡು ತ್ತೇನೆಂದಿದ್ದು ನನಗಿನ್ನೂ ನೆನಪಿದೆ. 
 
ಮೊನ್ನೆ, ಸೀನ ಅವನ ಮೊಬೈಲ್ ಸಂಖ್ಯೆ ಹೇಳುತ್ತಿದ್ದ ಶೈಲಿ "ಒಂಬತ್ ನಾಕ್ನಾಕ್ ಎಂಟ್ ಆರ್ ಮೂರ್ ಎಲ್ದೆಲ್ದ್ ಒಂದ್ ನಾಕ್" ನೆನಪಾಯ್ತು.   ಒತ್ತಿ ಮಾತಾಡಿದೆ; ಅದೇ " ನಮಸ್ಕಾರ ಸಾಮಿ" ಅಂದ.  "ಯಾವತ್ತಿದ್ರೂ ಇವ್ನು ನಂ( ಕಾಗೆ) ಬಳಗಾನೇ" ಅಂದುಕೊಂಡು ಸುಮ್ಮನಾದೆ.  ಸೀನನ ವೃತ್ತಿ ಬಗ್ಗೆ ಯಾಕಿಷ್ಟು  ಗೌರವವೆಂದರೆ,   ಒಂದು ಕಾಲದಲ್ಲಿ ನನ್ನ ತಂದೆಯೂ ಫೋಟೋ ಫ್ರೇಮ್ ವರ್ಕ್ ಮಾಡುತ್ತಿದ್ದ, ಆದರೆ ದುರಾದೃಷವಶಾತ್ ಆ ವೃತ್ತಿಯಲ್ಲಿ ಯಶಸ್ವಿ  ಕಾಣಲಿಲ್ಲ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

11 Comments
Oldest
Newest Most Voted
Inline Feedbacks
View all comments
Santhoshkumar Lm
Santhoshkumar Lm
10 years ago

Success story! Nice.

suvarna latha J
suvarna latha J
10 years ago

channagide.

Utham Danihalli
10 years ago

Jeevana preethiya kathe estavaythu

ganesh
ganesh
10 years ago

chennagithu sir. 

thotadaravi
10 years ago

Nice sir.

Kotraswamy M
Kotraswamy M
10 years ago

Obba yashaswi udyamiya katheyoo nimma lekhanadalli yashaswiyaagi moodi bandide Amar! Just a precautionary advice to you is that, whenever you write on such persons don't disclose their financial figures/transactions like how much he paid for buying a house or what is his turn over etc. unless the figures are from his official Balance Sheet. You may refer to those details in a vague way rather than mentioning exact/approximate  numbers. This may lead to trouble for the person about whom you are writing from those working in Income Tax, State VAT, Service Tax etc. Departments and are reading your article. After all, they will be doing their duty even while reading your article…. ha ha ha… isn't it Amar!?

prashasti.p
10 years ago

Sooper

rajshekhar
rajshekhar
10 years ago

ಸೂಪರ್ ಕಣೋ ಅಮರ್ ನಾನು ಈ ವ್ಯಕ್ತಿಯನ್ನು ಮೀಟ್ ಮಾಡ್ಬೇಕಲ್ಲಾ

Gaviswamy
10 years ago

good one sir..inspirational life story

Guruprasad Kurtkoti
10 years ago

ಲೇಖನ ತುಂಬಾ ಚೆನ್ನಾಗಿದೆ! ಬರವಣಿಗೆ ಶೈಲಿ ತುಂಬಾ ಇಷ್ಟವಾಯ್ತು.

Santhosh S V
10 years ago

ಸೂಪರ್ ಸರ್.

11
0
Would love your thoughts, please comment.x
()
x