ಕಥಾಲೋಕ

ನಾನು ಅವನಲ್ಲ!: ಜೆ.ವಿ.ಕಾರ್ಲೊ


ಹಿಂದಿ ಮೂಲ: ಮುನ್ಶಿ ಪ್ರೇಮಚಂದ್
ಇಂಗ್ಲಿಶಿನಿಂದ: ಜೆ.ವಿ.ಕಾರ್ಲೊ
ಇದು, ಹಿಂದಿನ ದಿನ ನಾನು ಕುದುರೆ ಗಾಡಿಯಲ್ಲಿ ಪೇಟೆಗೆ ಹೋಗುತ್ತಿದ್ದಾಗ ನಡೆದ ಘಟನೆ. ಗಾಡಿ ಸ್ವಲ್ಪ ಮುಂದೆ ಹೋಗಿತ್ತಷ್ಟೇ. ಯಾರೋ ಕೈ ಅಡ್ಡ ಹಾಕಿ ಗಾಡಿಯನ್ನು ಹತ್ತಿಕೊಂಡ. ಅವನನ್ನು ಹತ್ತಿಸಿಕೊಳ್ಳಲು ಗಾಡಿಯವನಿಗೆ ಸ್ವಲ್ಪವೂ ಇಷ್ಟವಿರಲಿಲ್ಲವಾದರೂ ಬೇರೆ ದಾರಿ ಇರಲಿಲ್ಲ. ಹತ್ತಿದವನು ಒಬ್ಬ ಪೊಲೀಸ್ ಆಫೀಸರನಾಗಿದ್ದ.

ಕೆಲವು ಖಾಸಗಿ ಕಾರಣಗಳಿಂದಾಗಿ ಖಾಕಿ ಧರಿಸಿದವರೆಂದರೆ ನನಗೆ ಮೊದಲಿನಿಂದಲೂ ಅಷ್ಟಕಷ್ಟೇ. ಅವರ ನೆರಳು ಕಂಡರೂ ದೂರ ಓಡಿಹೋಗುತ್ತೇನೆ! ಗಾಡಿಯ ಒಂದು ತುದಿಗೆ ಕುಳಿತು ಅವನ ದೃಷ್ಟಿ ತಪ್ಪಿಸಿ ನಾನು ಹೊರಗೆ ನೋಡತೊಡಗಿದೆ, ಅವನೇ ಮಾತನಾಡತೊಡಗಿದ.
“ನಾವು ಪೋಲಿಸರು ಲಂಚ ತಿಂತೀವಿ ಅಂತ ಜನ ಆಡಿಕೊಳ್ಳುತ್ತಾರೆ. ಆದರೆ ಲಂಚ ತೆಗೆದುಕೊಳ್ಳುವಂತೆ ನಮ್ಮ ಮೇಲೆ ಇರುವ ಒತ್ತಡ ಎಷ್ಟು ಜನರಿಗೆ ಗೊತ್ತು? ನಾವೇನಾದರೂ ಲಂಚ ತೆಗೆದುಕೊಳ್ಳುವುದು ನಿಲ್ಲಿಸಿ ಬಿಟ್ಟರೆ ಎಷ್ಟೊಂದು ಪ್ರತಿಷ್ಠಿತ ಜನರು ಕಂಬಿ ಎಣಿಸಬೇಕಾಗುತ್ತದೋ! ನೀವು ನಂಬುತ್ತಿರೋ ಇಲ್ವೋ, ನಮಗೆ ಬಲವಂತವಾಗಿ ಲಂಚ ತೆಗೆದುಕೊಳ್ಳುವಂತೆ ನಾಲ್ಕೂ ದಿಕ್ಕಿನಿಂದ ಒತ್ತಡ ಹೇರುತ್ತಾರೆ. ವಿಧಿಯಿಲ್ಲದೆ ನಾವು ತೆಗೆದುಕೊಳ್ಳಲೇ ಬೇಕಾಗುತ್ತದೆ.”
“ಅದೇ ಕೆಲಸ ಲಂಚ ತೆಗೆದುಕೊಳ್ಳದೆಯೇ ಮಾಡಬಹುದಲ್ವಾ?” ನನಗೆ ಮಾತನಾಡಲೇ ಬೇಕಾಯಿತು.

ಅವನು ಶುಷ್ಕ ನಗೆ ನಗುತ್ತಾ, “ಪೋಲಿಸರೂ ಎಲ್ಲರಂತೆ ಮನುಷ್ಯರೇ ಅಲ್ವ? ಸಂತರಲ್ವಲ್ಲ?” ಅಂದ.
ನಾನು ಏನನ್ನೋ ಹೇಳಲು ಬಾಯ್ದೆರೆಯುವಷ್ಟರಲ್ಲಿ ರಸ್ತೆ ಬದಿಯಲ್ಲಿ ಟೊಪ್ಪಿ ಧರಿಸಿದ್ದ ಗಡ್ಡದ ಸಾಬಿಯೊಬ್ಬ ನಡೆದು ಹೋಗುತ್ತಿರುವುದನ್ನು ಅವನು ನೋಡಿದ. ಅವನು ಚೌಕಳಿಯ ಲುಂಗಿಯ ಮೇಲೆ ಬಿಳಿ ಕುರ್ತಾ ತೊಟ್ಟಿದ್ದ. ಅವನು ಹತ್ತಿರವಾಗುತ್ತಿದ್ದಂತೆ ಪೊಲಿಸ್ ಆಫಿಸರ್ ಅವನನ್ನು ಉದ್ದೇಶಿಸಿ ಏನೋ ಹೇಳಿದ. ಅದೇನೆಂದು ನನಗೆ ಅರ್ಥವಾಗಲಿಲ್ಲ. ಈ ಪೊಲಿಸ್ ಆಫಿಸರನನ್ನು ನೋಡುತ್ತಿದ್ದಂತೆ ಸಾಬಿ ಕೆರಳಿ ಹುಚ್ಚನಂತಾದ. ಬೈಯುತ್ತಾ ರಸ್ತೆ ಬದಿಯ ಕಲ್ಲುಗಳನ್ನು ಹೆಕ್ಕಿ ಇವನ ಕಡೆಗೆ ಬೀಸತೊಡಗಿದ. ಒಂದು ಕಲ್ಲಂತೂ ನನ್ನ ಮೇಲೆ ಬೀಳುವುದು ಸ್ವಲ್ಪದರಲ್ಲೇ ತಪ್ಪಿ ಹಿಂದೆ ಕುಳಿತ್ತಿದ್ದ ಪೊಲಿಸ್ ಆಫಿಸರನ ಮಂಡಿಯ ಮೇಲೆ ಬಿದ್ದಿತು. ಗಾಡಿ ವೇಗವಾಗಿ ಓಡುತ್ತಿದ್ದರಿಂದ ಸಾಬಿ ಹಿಂದೆ ಬಿದ್ದು ಮರೆಯಾದ. ಅವನ್ಯಾರು ಹುಚ್ಚ ಎಂದು ನಾನು ಕೇಳಿದೆ.

“ಅವನು ಹುಚ್ಚನಲ್ಲ. ಸರಿಯಾಗಿಯೇ ಇದ್ದಾನೆ!” ಪೊಲಿಸ್ ಆಫಿಸರ್ ಮಂಡಿಯನ್ನು ಸವರುತ್ತಾ ಹೇಳಿದ, “ತುಂಬಾ ವರ್ಷಗಳ ಹಿಂದೆ ಒಂದು ವಿಚಿತ್ರ ಸನ್ನಿವೇಶದಲ್ಲಿ ನಾವಿಬ್ಬರೂ ಭೆಟ್ಟಿಯಾಗಿದ್ದೆವು. ಅದನ್ನವನು ಮರೆತಿರಬಹುದೆಂದು ಎಣಿಸಿದ್ದೆ. ಪಾಪ, ಇನ್ನೂ ಮರೆತಿಲ್ಲವೆಂದು ತೋರುತ್ತದೆ!”
“ಎಷ್ಟು ವರ್ಷ ಜೈಲಲ್ಲಿದ್ನೋ ಏನೋ ಪಾಪ! ಅದ್ಹೇಗೆ ಮರಿತಾನೆ?”
“ಒಹ್, ಇದು ಮಾಮೂಲು ಕಳ್ಳ-ಪೊಲಿಸ್ ಕತೆಯಲ್ಲ! ಅದೊಂದು ಒಂದು ವಿಚಿತ್ರ ಸನ್ನಿವೇಶದಲ್ಲಿ ಅವನು ನನ್ನ ಶತ್ರು ಆಗಿದ್ದು!”
“ಈಗ ನೀವು ನನ್ನ ಕುತೂಹಲವನ್ನು ಕೆರಳಿಸಿದಿರಿ. ಅದೇನೆಂದು ನೀವು ಈಗ ಹೇಳಲೇ ಬೇಕು.” ನಾನು ಅವನ ಹತ್ತಿರಕ್ಕೆ ಸರಿದೆ.

“ಬಹಳ ವರ್ಷಗಳ ಹಿಂದೆ ನನಗೆ ಇಲ್ಲಿಯ, ಅಂದರೆ ಸದರ್ ನಗರ ಪೊಲಿಸ್ ಠಾಣೆಗೆ ಹೊಸದಾಗಿ ನಿಯೋಜಿಸಲಾಗಿತ್ತು. ಹುಡುಗಾಟದ ವಯಸ್ಸು. ಹೀಗೇ ಒಬ್ಬಳು ಬೀದಿ ಹೆಂಗಸಿನ ಪರಿಚಯವಾಗಿ ಸಂಬಂಧ ಗಾಢವಾಯಿತು. ಅವಳ ಹೆಸರು ಲೈಲಾ. ಈಗಲೂ, ಆ ಹೆಂಗಸಿನ ಬಗ್ಗೆ ಯೋಚಿಸುವಾಗ ನನ್ನ ಕಣ್ಣುಗಳು ತೇವವಾಗುತ್ತವೆ. ಆ ವರ್ಗದ ಹೆಂಗಸಿನಲ್ಲಿ ಅಷ್ಟೊಂದು ಪ್ರೀತಿ, ನಿಷ್ಠೆ ನಾನು ಯಾವತ್ತೂ ನಿರೀಕ್ಷಿಸಿರಲಿಲ್ಲ. ಅವಳ ಸಂಗದಲ್ಲಿ ಎರಡು ವರ್ಷಗಳು ಹೇಗೆ ಕಳೆದುಹೋದವೆಂದೇ ಗೊತ್ತಾಗಲಿಲ್ಲ. ಎರಡು ವರ್ಷಗಳ ನಂತರ ನನಗೆ ವರ್ಗವಾದಾಗ ನನಗೆ ಬಹಳ ದುಃಖವಾಯಿತು. ನನಗೆ ಹೊಸ ಠಾಣೆಗೆ ರಿಪೋರ್ಟ್ ಮಾಡಿಕೊಳ್ಳಲು ಮೂರು ದಿನಗಳ ಕಾಲವಕಾಶ ಕೊಡಲಾಗಿತ್ತು. ಈ ಮೂರು ದಿನಗಳಲ್ಲಿ ನನ್ನ ಮನಸ್ಸಿನೊಳಗೆ ಏನೆಲ್ಲಾ ಯೋಚನೆಗಳು ಬಂದು ಹೋದವು. ಕೆಲಸಕ್ಕೆ ರಾಜಿನಮೆ ಕೊಟ್ಟು ಲೈಲಾಳೊಂದಿಗೆ ಕೊಲ್ಕತ್ತಗೆ ಓಡಿ ಹೋಗಿ ಏನಾದರೊಂದು ವ್ಯಾಪಾರ ಶುರು ಮಾಡುವುದು.

ಯಾವುದಾದರೂ ದೂರದ ಹಳ್ಳಿಗೆ ಹೋಗಿ ಜಮೀನು ಕೊಂಡು ಇಬ್ಬರೂ ವ್ಯವಸಾಯ ಮಾಡುವುದು.. ಇತ್ಯಾದಿ..ಇತ್ಯಾದಿ. ಆದರೆ ಇದು ಯಾವುದೂ ಘಟಿಸಲಿಲ್ಲ. ಸಾಮಾನ್ಯವಾಗಿ ಹೆಂಗಸರಿಗೆ ವ್ಯವಹಾರ ಜ್ಞಾನವೇ ಇಲ್ಲವೆಂದು ನಾವು ಗಂಡಸರು ತಿಳಿದುಕೊಂಡಿರುತ್ತೀವಿ. ಆದರೆ ಅವಳಿಗಿದ್ದ ಬುದ್ಧಿವಂತಿಕೆಯ ಅರ್ಧದಷ್ಟೂ ನನಗಿರಲಿಲ್ಲ. ನನ್ನ ಯೋಜನೆಗಳನ್ನೆಲ್ಲಾ ಅವಳು ಮುಲಾಜಿಲ್ಲದೆ ತಳ್ಳಿ ಹಾಕಿದಳು. ನೀನು ಮೊದಲು ಡ್ಯೂಟಿಗೆ ರಿಪೋರ್ಟು ಮಾಡಿಕೊಂಡು ಒಂದು ಮನೆ ಮಾಡಿ ನನ್ನನ್ನು ಕರೆಸಿಕೊ, ನಾನು ಬರುತ್ತೀನಿ ಎಂದು ಹೇಳಿ ನನ್ನನ್ನು ಬೀಳ್ಕೊಟ್ಟಳು. ಅವಳನ್ನು ಬಿಟ್ಟು ಹೋಗುವುದು ಬಹಳ ಕಷ್ಟವಾದರೂ, ಕೆಲವೇ ದಿನಗಳಲ್ಲಿ ನಿನ್ನನ್ನು ಕರೆಸಿಕೊಳ್ಳುತ್ತೀನೆಂದು ಹೇಳಿ ಭಾರವಾದ ಹೃದಯದಿಂದ ಅವಳಿಗೆ ವಿದಾಯ ಹೇಳಿದೆ.

ಆ ವಾರವೆಲ್ಲಾ ನನ್ನ ಮೇಲಾಧಿಕಾರಿಗಳನ್ನು ಭೇಟಿ ಮಾಡುವುದರಲ್ಲಿ ಮತ್ತು ಹೊಸ ಊರನ್ನು ಪರಿಚಯಮಾಡಿಕೊಳ್ಳುವುದರಲ್ಲೇ ಕಳೆದು ಹೋಯಿತು. ಅದರ ಮುಂದಿನ ವಾರದಲ್ಲಿ ಊರಿಂದ ನನ್ನ ತಂದೆಯ ಪತ್ರ ಬಂದಿತು. ನಿನಗೆ ಹುಡುಗಿ ನೋಡಿದ್ದೀವಿ. ಪತ್ರ ಸೇರಿದ ಕೂಡಲೆ ಮುಂದಿನ ಮಾತುಕತೆಗೆ ಊರಿಗೆ ಹೊರಟು ಬಾ ಎಂದು ಬರೆದಿದ್ದರು. ಮದುವೆಯ ವಿಚಾರ ನನಗೆ ಖುಷಿಯೇ ಕೊಟ್ಟಿತು. ಹೊಸ ಹೊಸ ಕನಸುಗಳು ಕಾಣತೊಡಗಿದೆ. ನನ್ನ ಹಳೆ ಪ್ರೇಮಿಯನ್ನು ಮರೆತೇ ಬಿಟ್ಟೆ. ಒಂದು ದಿನ, ಮನೆ ಮಾಡಿದೆಯಾ? ಯಾವಾಗ ಕರೆಸಿಕೊಳ್ಳುತ್ತಿ ಅಂತ ಅವಳ ಪತ್ರವೇನೋ ಬಂದಿತು. ಆದರೆ ನಾನು ಉತ್ತರಿಸುವ ಗೋಜಿಗೇ ಹೋಗಲಿಲ್ಲ. ಅವಳೆಲ್ಲಿ ಗಂಟು ಮೂಟೆ ಕಟ್ಟಿಕೊಂಡು ಸ್ಟೇಶನಿಗೇ ಬಂದು ವಕ್ಕರಿಸುತ್ತಾಳೋ ಎಂದು ಹೆದರಿಕೊಂಡಿದ್ದೆ. ಪುಣ್ಯಕ್ಕೆ ಅವಳು ಹಾಗೇನೂ ಮಾಡಲಿಲ್ಲ.

ಒಂದು ವರ್ಷ ಕಳೆಯಿತು. ನನಗೆ ಯಾವುದೋ ಕೆಲಸದ ನಿಮಿತ್ತ ಮೊದಲಿದ್ದ ಸದರ್ ಸ್ಟೇಶನಿಗೆ ಹೋಗಬೇಕಾಗಿ ಬಂದಿತು. ಹೇಗೂ ಬಂದಾಗಿದೆ. ನನ್ನ ಹಳೆ ಪ್ರೇಮಿಯನ್ನು ಭೇಟಿ ಮಾಡಿದರೆ ಹೇಗೆ ಎಂಬ ಆಲೋಚನೆ ಮೊಳೆಯಿತು. ಹೊರಟೇ ಬಿಟ್ಟೆ. ಅವಳಿದ್ದ ಮನೆ ದುರುಸ್ತಿ ಆಗಿ ಈಗ ಮಜಬೂತಾಗಿ ಕಾಣಿಸುತ್ತಿತ್ತು. ನಾನು ಅವಳ ಬಗ್ಗೆ ವೃಥಾ ಚಿಂತೆ ಮಾಡುತ್ತಿದ್ದೆ ಅನಿಸಿತು. ಈ ಪ್ರಪಂಚದಲ್ಲಿ ನನ್ನಂತ ಗಂಡಸರು ಎಷ್ಟಿಲ್ಲ?
ನಾನು ಅವಳ ಹೆಸರಿಡಿದು ಕೂಗಿದೆ. ಉತ್ತರ ಬರಲಿಲ್ಲ. ಬಾಗಿಲಿಗೆ ಒಳಗಿನಿಂದ ಅಗುಳಿ ಹಾಕಿತ್ತು. ಬಹಶಃ ನಾನು ಎಂದು ಗೊತ್ತಾಗಿ ಅವಳು ಬಾಗಿಲು ತೆರೆಯುತ್ತಿಲ್ಲ. ನನ್ನ ಮೇಲಿನ ಸಿಟ್ಟು ತಣ್ಣಗಾಗಿಲ್ಲವೆಂದು ತೋರುತ್ತದೆ! ಬಾಗಿಲನ್ನು ಜೋರಾಗಿ ಬಡಿಯತೊಡಗಿದೆ. ನಾನು ಈ ಮೊದಲು ಏಕೆ ಬರಲಿಲ್ಲವೆಂದು ಹೊರಗಿನಿಂದಲೇ ಸಮಜಾಯಿಷಿ ಕೊಡಲಾರಂಭಿಸಿದೆ. ಗಂಭೀರ ಕಾಯಿಲೆಯಿಂದ ಎದ್ದು ಬಂದಿದ್ದೆ ದೊಡ್ಡ ಪುಣ್ಯವೆಂದು ಸುಳ್ಳು ಹೇಳತೊಡಗಿದೆ.

ಸುಮಾರು ಹದಿನೈದು ನಿಮಿಷಗಳ ನಂತರ ಬಾಗಿಲನ್ನು ತೆರೆದು ಲೈಲಾ ನನ್ನನ್ನು ಒಳಗೆ ಸೇರಿಸಿಕೊಂಡು ಮತ್ತೆ ಅಗುಳಿ ಹಾಕಿದಳು.
“ಚಿನ್ನಾ! ಇಂದು ನಿನ್ನ ಕ್ಷಮಾಪಣೆ ಕೇಳಲೆಂದೇ ಬಂದಿದ್ದೇನೆ. ಇಲ್ಲಿಂದ ಹೋದ ನಂತರ ನನ್ನ ಅದೃಷ್ಟನೇ ಸರಿಯಿಲ್ಲವೆಂದು ತೋರುತ್ತದೆ. ಸಾಲದ್ದಕ್ಕೆ ಈ ಕಾಯಿಲೆ ಬೇರೆ. ಏನಾದರೂ ಬದುಕಿ ಬಂದಿದ್ದೇನೆಂದರೆ ಅದು ನಿನ್ನ ಹಾರೈಕೆಗಳಿಂದಲೇ ಹೊರತು…”
ಅವಳ ತುಟಿಗಳು ವ್ಯಂಗ್ಯವಾಗಿ ಬಿರಿದವು.
“ನೀನೇನೂ ಕ್ಷಮಾಪಣೆ ಕೇಳಬೇಕಿಲ್ಲ. ನಾನೇನು ನಿನ್ನನ್ನು ಕಟ್ಟಿಕೊಂಡವಳಲ್ಲ. ಏನೋ ಆಗಿದ್ದು ಆಗಿ ಹೋಯಿತು. ತಲೆ ಕೆಡಿಸಿಕೊಳ್ಳಬೇಡ. ಬೇರೆ ಯಾವ ಗಂಡಸೂ ಮಾಡದಿದ್ದದ್ದನ್ನು ನೀನು ಮಾಡಿಲ್ಲ ಬಿಡು. ಕೆಲವು ಕ್ಷಣಗಳ ಸಂತೋಷಕ್ಕಾಗಿ ಅದೆಷ್ಟೋ ಗಂಡಸರು ನನ್ನ ಬಳಿಗೆ ಬರುತ್ತಾರೆ. ಸಂಬಂಧ ಬೆಳೆಸಬೇಕು ಅಂತ ಯಾರೂ ಬರೊಲ್ಲ. ಈಗ ನೀನು ಮತ್ತೆ ನನ್ನನ್ನು ಹುಡುಕಿಕೊಂಡು ಬಂದಿದ್ದೀಯ! ಅಷ್ಟೇ ಸಾಕು.”
ನಾನು ಅವಳಿಗೆ ನನ್ನ ಕಾಯಿಲೆಯ ವಿವರ ಕೊಟ್ಟೆ.

“ನಿನ್ನದೊಂದು ವಿಶೇಷ ಕಾಯಿಲೆ ಇರಬೇಕು! ದೀರ್ಘಕಾಲ ಕಾಯಿಲೆ ಬಿದ್ದವರು ನಿತ್ರಾಣರಾಗಿರುತ್ತಾರೆಂದು ಕೇಳಿದ್ದೆ. ನಿನ್ನನ್ನು ನೋಡಿದರೆ ಮೊದಲಿಗಿಂತಲೂ ಚೆನ್ನಾಗಿ ಆರೋಗ್ಯವಾಗಿರುವಂತೆ ಕಾಣಿಸುತ್ತಿದ್ದೀಯ.” ಅಂದಳು ನಗುತ್ತಾ.
ಕಾಯಿಲೆಯಿಂದಾಗಿಯೇ ನಾನು ದಪ್ಪಗಾಗಿದ್ದೇನೆಂದು ನನ್ನ ವಾದ ಮಂಡಿಸಿ, “ನೀನೇ ನನ್ನನ್ನು ಮರೆತೇ ಬಿಟ್ಟು ಇಲ್ಲಿ ಮಜ ಮಾಡುತ್ತಿದ್ದೀಯ!” ಎಂದು ಅವಳನ್ನೇ ದೂರಿದೆ.
ಅವಳು ಆಗಂತೂ ಕೆರಳಿ ಕನಲಿದಳು. “ಏನೂ? ನಾನು ಮರೆತು ಬಿಟ್ಟಿದ್ದೀನಾ? ನಿಜ ಹೇಳಬೇಕೂಂದ್ರೆ ನಿನ್ನಂತ ಕೃತಘ್ನ ಗಂಡಸನ್ನ ನಾನು ನನ್ನ ಜೀವಮಾನದಲ್ಲಿ ನೋಡಿಯೇ ಇಲ್ಲ! ನನ್ನ ಪತ್ರಕ್ಕೆ ಉತ್ತರ ಬರೆಯುವ ಸೌಜನ್ಯವೂ ನಿನಗಿರಲಿಲ್ಲ. ನೀನು ಮದುವೆಯಾದೆ. ನನಗೊಂದು ಆಮಂತ್ರಣಕೊಡಬೇಕೆಂದೂ ನಿನಗನಿಸಲಿಲ್ಲ. ನಿನ್ನ ಮುಖ ನೋಡುವುದಕ್ಕೂ ನನಗೆ ಹೇಸಿಗೆಯಾಗುತ್ತದೆ.” ಎಂದಳು ಬೇಸರದಿಂದ.

ಅವಳೆದುರು ತುಂಬಾ ಸಣ್ಣವನಾದಂತೆ ಅನಿಸಿತು.
“ನನ್ನ ಮದುವೆ ವಿಚಾರ ನಿನಗೆ ಹೇಗೆ ಗೊತ್ತಾಯಿತು?” ವಿಷಯಾಂತರಿಸಲು ನಾನು ಕೇಳಿದೆ.
“ಹಾಗಾದರೆ ನಾನು ಹೇಳಿದ್ದು ನಿಜ ತಾನೆ? ನಿನ್ನ ಸ್ವರ ಕೇಳುತ್ತಿದ್ದಂತೆಯೇ ನಿನ್ನನ್ನು ನನ್ನ ಮನೆಯೊಳಗೆ ಸೇರಿಸಬಾರದೆಂದು ಕೊಂಡಿದ್ದೆ.”
“ದಯವಿಟ್ಟು ನನಗೆ ಕ್ಷಮಿಸಿಬಿಡು ಲೈಲಾ.” ಎನ್ನುತ್ತಾ ನಾನು ನನ್ನ ಕೋಟು ಬೂಟುಗಳನ್ನು ಬಿಚ್ಚಿಟ್ಟು ಮಂಚದ ಮೇಲೆ ಆರಾಮಾವಾಗಿ ಕುಳಿತುಕೊಂಡೆ. “ಒಂದೇ ಒಂದು ಭಾರಿ ನನ್ನನ್ನು ಕ್ಷಮಿಸಿದ್ದೇನೆಂದು ಹೇಳಿ ನಿನ್ನ ಆ ಸುಕೋಮಲ ಬೆರಳುಗಳಿಂದ ನನಗೊಂದು ಪಾನನ್ನು ತಯಾರಿಸಿ ಕೊಡು.” ನಾನು ಗೋಗರೆದೆ.

ಲೈಲಾ ತಣ್ಣಗಾದಳು. ವೀಳ್ಯೆಯ ಡಬ್ಬಿಯನ್ನು ತೆರೆದು ಒಂದು ಎಲೆಗೆ ಸುಣ್ಣ ಸವರತೊಡಗಿದಳು. ಅಷ್ಟೊತ್ತಿಗೆ ಯಾರೋ ಜೋರಾಗಿ ಬಾಗಿಲು ಬಡಿಯತೊಡಗಿದರು.
“ಯಾರಪ್ಪ ಈ ಹೊತ್ತಿನಲ್ಲಿ?” ಎಂದು ನಾನು ಅಸಹನೆಯಿಂದ ಗೊಣಗಿದೆ.
ಲೈಲಾ ತುಟಿಗಳ ಮೇಲೆ ಬೆರಳನ್ನಿಟ್ಟು, “ಸ್ವಲ್ಪ ಸುಮ್ಮನಿರು. ನನ್ನ ಗಂಡ ಬಂದಿರುವಂತೆ ಕಾಣಿಸುತ್ತದೆ. ನೀನು ವಾಪಸ್ಸು ಬರುವುದಿಲ್ಲವೆಂಬುದು ಖಾತ್ರಿಯಾದ ಮೇಲೆ ನಾನು ಮದುವೆಯಾದೆ.” ಎಂದಳು.
ನನಗೆ ಕಸಿವಿಸಿಯಾಯ್ತು. “ನೀನು ಮೊದಲೇ ಏಕೆ ಹೇಳಲಿಲ್ಲ? ನಾನು ಆವಾಗಲೇ ಹೊರಟುಹೋಗುತ್ತಿದ್ದೆನಲ್ಲ?”
“ನನಗೇನು ಗೊತ್ತು ಅವರು ಇಷ್ಟು ಬೇಗ ಮನೆಗೆ ಬರುತ್ತಾರಂತ? ಅವರು ಯಾವತ್ತೂ ಮಧ್ಯರಾತ್ರಿಯ ನಂತರವೇ ಮನೆಗೆ ಬರುವುದು.” ಅವಳೂ ಗಾಬರಿಯಾದಂತೆ ಕಾಣಿಸುತ್ತಿದ್ದಳು.

ಮತ್ತೊಮ್ಮೆ ಜೋರಾಗಿ ಬಾಗಿಲು ಬಡಿದ ಶಬ್ಧ ಕೇಳಿಸಿತು. ಲೈಲಾ ನಡುಗತೊಡಗಿದಳು. ನನಗೆ ಏನು ಮಾಡುವುದೆಂದೇ ತೋಚಲಿಲ್ಲ. “ದೇವರೇ, ಏನು ಮಾಡುವುದು ಈಗ?”
“ಲೇ, ಹಲ್ಕಾ ಮುಂಡೆ. ಇಷ್ಟೊತ್ತಿಗೇ ಮಲಿಕಂಡಿದ್ದಿಯೇನೆ?” ಲೈಲಾಳ ಗಂಡ ಹೊರಗಿನಿಂದ ಗರ್ಜಿಸುತ್ತಿದ್ದ.
ನನ್ನ ಪೊಲಿಸ್ ತಲೆ ಚುರುಕಾಯಿತು. ಹೊರಗೆ ಹೋಗಲು ಹಿಂಬಾಗಿಲು ಏನಾದರೂ ಇದೆಯಾ ಎಂದು ಲೈಲಾಳನ್ನು ಕೇಳಿದೆ. ‘ಇಲ್ಲ’ವೆಂಬಂತೆ ಅವಳು ತಲೆಯಲ್ಲಾಡಿಸಿದಳು. ನನ್ನ ರಕ್ತ ಹೆಪ್ಪುಗಟ್ಟಿದಂತಾಯಿತು. ಹಿಂಭಾಗದಲ್ಲಿ ಒಂದು ಪ್ರತ್ಯೇಕ ಕೋಣೆಯಂತೆ ಇರುವುದು ಏನೋ ಕಾಣಿಸಿತು. ಅಲ್ಲಿ ಬಚ್ಚಿಟ್ಟುಕೊಳ್ಳಲು ಸಾಧ್ಯವೇ ಎಂದು ಅವಳನ್ನು ಕೇಳಿದೆ. ಅವಳು ಗಲಿಬಿಲಿಗೊಂಡಂತೆ ಕಾಣಿಸಿದಳು. ತನ್ನ ಗಂಡ ಅಲ್ಲೂ ಹುಡುಕುತ್ತಾನೆಂದಳು. ಆದರೆ ಬೇರೆ ದಾರಿಯೇ ಇರಲಿಲ್ಲ. ಲೈಲಾಳಿಗೆ ಅದನ್ನು ತೆರೆಯಲು ಹೇಳಿ ಅವಸರವಸರದಲ್ಲಿ ಒಳಗೆ ನುಗ್ಗಿದೆ.

“ಬಂದೆ ಕಣ್ರಿ…” ಅನ್ನುತ್ತಾ ಲೈಲಾ ಮುಂಬಾಗಿಲ ಕಡೆಗೆ ನಡೆದಳು. “ನೀವು ಬಾಗಿಲು ಮುರಿದು ಹಾಕುವ ಅಗತ್ಯವಿಲ್ಲ.”
ಅವಳು ಬಾಗಿಲು ತೆರೆಯುತ್ತಿದ್ದಂತೆ ಅವಳ ಗಂಡ ಭುಸುಗುಡುತ್ತಾ ಒಳಗೆ ನುಗ್ಗಿದ. “ಏನೇ, ಇಷ್ಟು ಬೇಗ ಮಲಿಕಂಡಿದ್ದ್ಯಾ?” ಅವನು ಆರ್ಭಟಿಸಿದ.
“ಹೀಗೆ ಅಡ್ಡಾಗಿದ್ದೆ. ಅಲ್ಲೇ ನಿದ್ದೆ ಬಂದು ಬಿಡ್ತು.” ಲೈಲಾ ಉತ್ತರಿಸಿದಳು.
ನಾನು ಬಾಗಿಲ ಸಂದಿನಿಂದ ಹೊರಗೆ ನೋಡುತ್ತಿದ್ದೆ. ಲೈಲಾಳ ಗಂಡ ಅನಾಮತ್ತಾಗಿ ನನ್ನಂತವರಿಬ್ಬರನ್ನು ಎತ್ತಿ ನೆಲಕ್ಕೆ ಬಡಿಯುವಷ್ಟು ಅಜಾನುಬಾಹು ಅಸಾಮಿಯಾಗಿದ್ದ. ನನ್ನೊಳಗಿದ್ದ ಅಲ್ಪ ಸ್ವಲ್ಪ ಪೊಲಿಸ್ ಧೈರ್ಯವೂ ಹೇಳಹೆಸರಿಲ್ಲದಂತೆ ಉಡುಗಿ ಹೋಯಿತು.

“ನೀನು ಯಾರ ಜೊತೆಗೋ ಮಾತನಾಡುತ್ತಿರುವಂತೆ ಕೇಳಿಸುತ್ತಿತ್ತು ಕಣೆ ಚಿನಾಲಿ.” ಅವನು ಆರೋಪ ಹೊರಿಸಿದ.
“ನಿಮ್ಮದು ಪ್ರತಿಭಾರಿನೂ ಇದೇ ಕತೆಯಾಯ್ತು.” ಲೈಲಾ ಪ್ರತಿಭಟಿಸಿದಳು.
“ಇದು ಕತೆಯಲ್ಲ ಕಣೇ. ನಾನು ಕೇಳಿಸಿಕೊಂಡಿದ್ದೀನಿ..”
“ನಿಮ್ದು ಇದೇ ನಂಗೆ ಇಷ್ಟವಾಗೊಲ್ಲಪ್ಪ ಅನ್ನೋದು. ಅಷ್ಟೊಂದು ಅನುಮಾನ ಇದ್ದರೆ ಒಳಗೆ ಹುಡುಕಿ.”
“ಹುಡ್ಕೇ ಹುಡುಕ್ತಿನಿ ಕಣೆ ಲೌಡಿ. ಅದರ ಮೊದಲು ನೀನೇ ಹೇಳಿದ್ರೆ ಒಳ್ಳೇದು.”
ಲೈಲಾ ಅವನ ಕಡೆಗೆ ಕೀ ಗೊಂಚಲನ್ನು ಎಸೆದು, “ತಗೊಳ್ಳಿ, ಹುಡುಕಿ.” ಎಂದು ಕೊಟ್ಟಳು.
ಲೈಲಾಳ ಮಾತಿನಿಂದ ಅವನು ಕಿಂಚಿತ್ತೂ ವಿಚಲಿತಗೊಂಡಂತೆ ಕಾಣಿಸಲಿಲ್ಲ. ಈ ಮೊದಲೂ ಇಂತ ಬಹಳಷ್ಟು ಸಂದರ್ಭಗಳು ಬಂದು ಹೋಗಿರಬೇಕು.

ಕೀ ಗೊಂಚಲನ್ನು ಕೈಯಲ್ಲಿಡಿದು ಆ ರಾಕ್ಷಸ ನಾನು ಅವಿತುಕೊಂಡಿದ್ದ ಕೊಠಡಿ ಬಳಿಗೇ ಬರಬೇಕೆ! ಲೈಲಾ ಅವನನ್ನು ಅಣಕಿಸುವಂತೆ, “ಸೌದೆ ಒಟ್ಟುವ ಇಷ್ಟು ಸಣ್ಣ ರೂಮಿನಲ್ಲಿ ಯಾರಾದರೂ ಅವಿತುಕೊಂಡಿರಲು ಸಾಧ್ಯವೇ?” ಎಂದಳು.
ಅವನು ಅವಳ ಮಾತುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಕೀ ಗೊಂಚಲಿನ ಎಲ್ಲಾ ಕೀಗಳನ್ನು ಬಳಸಿದರೂ ಅವನಿಗೆ ನಾನು ಅವಿತಿದ್ದ ರೂಮಿನ ಬೀಗ ತೆರೆಯಲು ಸಾಧ್ಯವಾಗಲಿಲ್ಲ.
“ಈ ರೂಮಿನ ಕೀ ಕೊಡೇ..” ಅವನು ಅರಚಿದ.

“ಕೆಲವೊಮ್ಮೆ ನೀವು ಸಣ್ಣ ಮಗುವಿನ ಹಾಗೆ ಹಟ ಮಾಡುವುದನ್ನು ನೋಡಿದರೆ ನನಗೆ ಎಲ್ಲಿಲ್ಲದ ಸಿಟ್ಟು ಬರುತ್ತೆ ಕಣ್ರಿ.. ಎಷ್ಟೋ ಸಮಯದಿಂದ ಬೀಗ ಹಾಕಿದ್ದ ಆ ರೂಮಿನೊಳಗೆ ಹುಡುಕುತ್ತೀನಿ ಅಂತೀರಲ್ಲ. ಆ ಕತ್ತಲ ಗೂಡಲ್ಲಿ ಯಾವುದೋ ಹಾವು ಇಲ್ಲ ಚೇಳು ಇದ್ದರೆ ಏನು ಗತಿ?”
“ಮೊದಲು ಈ ರೂಮಿನ ಕೀ ತಗಂಡು ಬಾರೆ. ಪುರಾಣ ಹೊಡೀಬೇಡ.” ಅವನು ಮತ್ತೊಮ್ಮೆ ಅರಚಿದ.
ಲೈಲಾ ಕೀ ಹುಡುಕಿದಂತೆ ನಟಿಸಿ, “ಅದೆಲ್ಲೋ ಕಳೆದು ಹೋಗಿದೆ. ಸಿಗುತ್ತಿಲ್ಲ.” ಎಂದಳು.
“ಈ ಕೋಣೆಗೆ ಬೀಗ ಹಾಕಿದ್ದನ್ನು ನಾನು ಈವರೆಗೆ ನೋಡೇ ಇರಲಿಲ್ಲ.” ಅವನು ಹೇಳಿದ.

“ನೀವು ನೋಡಿಲ್ಲ ಅಷ್ಟೆ. ಅದಕ್ಕೆ ಯಾವಾಗಲೂ ಬೀಗ ಹಾಕಿಯೇ ಇರುತ್ತದೆ.”
“ಹಾಗಾದರೆ ನೀನು ನನಗೆ ಕೀ ಕೊಡುವುದಿಲ್ಲ ಅನ್ನು?”
“ನಾನು ಹೇಳಿದ್ನಲ್ಲ. ಕೀ ಸಿಗ್ತಾ ಇಲ್ಲ.”
ಆ ಸಣ್ಣ ಗೂಡೊಳಗೆ ನಾನು ಹೇಗೆ ನಿಂತಿದ್ನೋ ನನಗೆ ಗೊತ್ತಿಲ್ಲ! ಬಾಯೆಲ್ಲಾ ಒಣಗಿ ಎದೆ ಡವಗುಟ್ಟುತ್ತಿತ್ತು. ಅಲ್ಲಿಂದ ಹೇಗೆ ಪಾರಾಗುವುದೆಂದು ಯೋಚಿಸಿ, ಯೋಚಿಸಿ ನನ್ನ ತಲೆ ಬಿಸಿಯಾಗಿತ್ತು. ಅಷ್ಟರಲ್ಲಿ ಹೊರಗಿನಿಂದ ಬಾಗಿಲು ಚಚ್ಚುವ ಸದ್ದು ಕೇಳತೊಡಗಿತು. ಈ ಸಂಕಟದಿಂದ ಹೇಗೆ ಪಾರಾಗುವುದೆಂದು ತಿಳಿಯದೆ ಆತಂಕಗೊಂಡೆ. ಕೈಕಾಲು ಥರ ಥರ ಕಂಪಿಸತೊಡಗಿದವು. ರಾಕ್ಷಸನ ಏಟಿಗೆ ಬಾಗಿಲು ಸೀಳಲಾರಂಭಿಸಿತು. ಸೀಳಿನಿಂದ ಬೆಳಕು ಒಳಗೆ ನುಗ್ಗಿತು. ಆ ಬೆಳಕಿನಲ್ಲಿ ನಾನು ನಿಂತಿದ್ದ ಕೊಠಡಿಗೊಂದು ಪುಟ್ಟ ಅಟ್ಟ ಇರುವುದು ಕಾಣಿಸಿತು. ನೀರಿನಲ್ಲಿ ಮುಳುಗುತ್ತಿದ್ದವನಿಗೆ ಹುಲ್ಲಿನ ಆಸರೆ ಸಿಕ್ಕಿದಷ್ಟು ಸಮಧಾನವಾಯಿತು. ನಾನು ಸೌದೆಗಳ ಮೇಲಿಂದ ಅಟ್ಟಕ್ಕೆ ಏರಲು ನೋಡಿದೆ. ಸಾಧ್ಯವಾಗಲಿಲ್ಲ. ಅಟ್ಟದ ಮೇಲೆ ಇನ್ನೊಬ್ಬನ್ಯಾರೋ ಮೊದಲೇ ಕುಳಿತುಕೊಂಡು ಆತಂಕದಿಂದ ಕಣ್ಣುಗಳನ್ನು ಪಿಳಿ ಪಿಳಿ ಬಿಡುತ್ತಿದ್ದುದ್ದನ್ನು ಕಂಡು ಹೌಹಾರಿದೆ. ನನಗೆ ಗೊತ್ತಿಲ್ಲದೆಯೇ ನನ್ನ ಬಾಯಿಂದ ಒಂದು ಚೀತ್ಕಾರ ಹೊರಟಿತು. ಲೈಲಾ ನನಗೆ ಬಾಗಿಲು ತೆರೆಯಲು ಯಾಕೆ ಇಷ್ಟು ತಡ ಮಾಡಿದಳು ಎಂದು ಈಗ ಗೊತ್ತಾಯಿತು. ನಾನು ಚೀತ್ಕರಿಸಿದ್ದು ಕೇಳಿ ಬಾಗಿಲು ಒಡೆಯುವ ಸದ್ದು ಮತ್ತೂ ಜೋರಾಯಿತು. ಕೊನೆಗೂ ಬಾಗಿಲು ತೆರದುಕೊಂಡಿತು. ಕೈಯಲ್ಲಿ ದೀಪವನ್ನು ಹಿಡಿದುಕೊಂಡು ಲೈಲಾಳ ದೈತ್ಯ ಗಂಡ ಒಳನುಗ್ಗಿದ. ನನ್ನನ್ನು ಕಂಡ ಕೂಡಲೇ ದೀಪವನ್ನು ಕೆಳಗಿಟ್ಟು ಅವನು ನನ್ನ ಕಾಲರನ್ನು ಹಿಡಿದು ಅನಾಮತ್ತಾಗಿ ಎತ್ತಿ ಹೊರಗೆ ಎಳೆದು ತಂದ.

“ಕೀ ಕಳೆದುಹೋಗಿರುವುದರಲ್ಲಿ ಏನೂ ಸಂಶಯವಿಲ್ಲ ಕಣೆ ಕಳ್ಳ್ ಮುಂಡೆ.” ಅವನು ಪೂತ್ಕರಿಸಿ, “ನೀನು ನನ್ನ ಅತಿಥಿ ಕಣಪ್ಪ. ಯಾಕೆ ಅವಿತುಕೊಂಡಿದ್ದೀಯ? ನಿನಗೆ ಸತ್ಕಾರ ಮಾಡದೆ ಹೇಗೆ ಕಳಿಸಲಿ ಹೇಳು?” ಎಂದ ವ್ಯಂಗ್ಯವಾಗಿ. ಅವನ ಕಣ್ಣುಗಳು ಬೆಂಕಿಯುಂಡೆಗಳಂತೆ ಕೆಂಪಗಾಗಿದ್ದವು.
ಅವನು ಎಡಗೈಯಿಂದ ನನ್ನ ಕಾಲರನ್ನು ಬಿಗಿಯಾಗಿ ಹಿಡಿದು ಬಲಗೈಯಿಂದ ಹೊಳೆಯುತ್ತಿದ್ದ ಚೂರಿಯನ್ನು ಹೊರತೆಗೆದ. ಎಷ್ಟೆಂದರೂ ನಾನು ಪೊಲಿಸ್ ಆಫಿಸರ್ ಅಲ್ಲವೆ? ನನ್ನ ತಲೆ ಚುರುಕಾಗಿ ಓಡತೊಡಗಿತು.

“ನೋಡಿ ಸ್ವಾಮಿ, ನೀವು ಸುಮ್ಮನೆ ಈ ಬಡಪಾಯಿಯನ್ನು ಹಿಡಿದಿದ್ದೀರಿ. ನಾನು ಮೀರ್ ಸಾಹೇಬರ ಸೇವಕ. ಅವರ ಜತೆ ಬಂದಿದ್ದೆ ಅಷ್ಟೇ.” ಎಂದೆ ಕೈ ಮುಗಿಯುತ್ತಾ.
“ಯಾರವನು ಮೀರ್ ಸಾಹೇಬ?” ಅವನು ನನ್ನನ್ನು ಅಲ್ಲಾಡಿಸುತ್ತಾ ಗರ್ಜಿಸಿದ.
“ಅವರು ನನ್ನ ಯಜಮಾನರು. ಅಲ್ಲೇ ಅಟ್ಟದ ಮೇಲೆ ವಿಶ್ರಮಿಸಿಕೊಳ್ಳುತ್ತಿದ್ದಾರೆ.” ಎಂದೆ.
ಅವನು ನನ್ನನ್ನು ಅಲ್ಲೇ ಬಿಟ್ಟು ಮತ್ತೆ ಸೌದೆ ರೂಮಿಗೆ ನುಗ್ಗಿದ. ಅಟ್ಚದ ಮೇಲೆ ಅಡಗಿ ಕುಳಿತಿದ್ದ ಮೀರ್ ಸಾಬರನ್ನು ಕೆಳಗಿಳಿಸಿ ಹೊರಗೆ ಎಳೆದು ತಂದ. ಮೀರ್ ಸಾಬರ ಬಟ್ಟೆಬರೆಯನ್ನು ನೋಡಿ ಲೈಲಾನ ಗಂಡನಿಗೆ ನಾನು ಸೇವಕನೇ ಎಂದೆನಿಸಿರಬೇಕು. ಮೀರ್ ಸಾಹೇಬ ಶುಭ್ರ ಬಿಳಿ ಕುರ್ತಾ ಮತ್ತು ಪೈಜಾಮ ಧರಿಸಿದ್ದ. ಸುಗಂಧ ದ್ರವ್ಯವನ್ನು ಪೂಸಿಕೊಂಡು ಕಣ್ಣಿಗೆ ಕಾಡಿಗೆ ಬೇರೆ ಸವರಿಕೊಂಡಿದ್ದ. ಹೊರಗೆ ದೌಲತ್ತು, ಗತ್ತಿನಿಂದ ತಿರುಗುತ್ತಿದ್ದ ಮೀರ್ ಸಾಹೇಬರು ಲೈಲಾಳ ಗಂಡನ ಕೈಯಲ್ಲಿ ಬೆಕ್ಕಿಗೆ ಸಿಕ್ಕಿದ ಗುಬ್ಬಚ್ಚಿಯಂತಾಗಿದ್ದರು.

“ಯಾರಯ್ಯ ನೀನು?” ದೈತ್ಯ ಗರ್ಜಿಸಿದ.
ಮೀರ್ ಸಾಹೇಬರ ಬಾಯಿಂದ ಮಾತುಗಳೇ ಹೊರಡಲಿಲ್ಲ. ಕೊನೆಗೂ ತೊದಲುತ್ತಾ, “ಇವನು ನನ್ನ ಸೇವಕನೇ ಅಲ್ಲ! ಸುಳ್ಳು ಹೇಳುತ್ತಿದ್ದಾನೆ.” ಎಂದರು ನನ್ನನ್ನು ಅಸಹ್ಯವಾಗಿ ನೋಡುತ್ತಾ.
“ಅವನದು ಹಾಗಿರಲಿ. ನೀನು ನನ್ನ ಮನೆಯಲ್ಲಿ ಏನು ಮಾಡುತ್ತಿದ್ದೆ ಅದನ್ನು ಮೊದಲು ಹೇಳು.” ಎಂದ.
ಮೀರ್ ಸಾಹೇಬ ನಾನು ಅವನನ್ನು ಪುಸಲಾಯಿಸಿ ಇಲ್ಲಿಗೆ ಕರೆದು ತಂದಿದ್ದೇನೆ ಎಂದು ಹೇಳಲು ಪ್ರಯತ್ನ ಪಡುತ್ತಿದ್ದ. ಆದರೆ ಲೈಲಾಳ ಗಂಡ ಅವನನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಅವನನ್ನು ಬಲವಾಗಿ ಹಿಡಿದು ಲೈಲಾಳ ಗಂಡ ಅವನ ಮೂಗನ್ನು ತನ್ನ ಹರಿತವಾದ ಚೂರಿಯಿಂದ ಕಚಕ್ಕನೇ ಕತ್ತರಿಸಿದ. ಆಗ ಅಲ್ಲಿ ಉಂಟಾದ ಗೊಂದಲದಲ್ಲಿ ನಾನು ಎಲ್ಲರ ಕಣ್ಣುತಪ್ಪಿಸಿ ಸರಕ್ಕನೇ ಹೊರಬಿದ್ದೆ. ಮೀರ್ ಸಾಹೇಬರ ಅಕ್ರಂದನ ಬಹಳ ದೂರದ ವರೆಗೂ ಕೇಳಿಸುತ್ತಿತ್ತು.

“ಇದಾದ ಮೇಲೆ ನಾನು ಸದರಿಗೆ ಬಹಳಷ್ಟು ಸಲ ಹೋಗಿ ಬಂದಿದ್ದೀನಾದರೂ ಅಪ್ಪಿ ತಪ್ಪಿಯೂ ಲೈಲಾಳ ಮನೆಯ ಕಡೆಗೆ ಸುಳಿದಿಲ್ಲ! ಈಗ ನನಗೆ ಕಲ್ಲು ಹೊಡೆದಿದ್ದನಲ್ಲ ಸಾಬಿ, ಅವನೇ ಮೀರ್ ಸಾಹೇಬ!! ಬಹಶಃ ನೀವು ಅವನ ಮೂಗನ್ನು ಗಮನಿಸಿಲ್ಲವೆಂದು ಕಾಣಿಸುತ್ತದೆ.” ಅವನು ನಗೆಯಾಡಿದ.
ಪೊಲಿಸ್ ಆಫಿಸರ್, ಅವನ ಬುದ್ಧಿವಂತಿಕೆಗೆ ನನ್ನಿಂದ ಶಹಭಾಸ್‍ಗಿರಿ ಅಪೇಕ್ಷಿಸಿದ್ದನೆಂದು ಕಾಣಿಸುತ್ತದೆ.
“ಪಾಪ. ಮೀರ್ ಸಾಹೇಬನನ್ನು ನೀವು ಆ ರೀತಿ ಸಿಗಿಸಿಹಾಕಬಾರದಿತ್ತು.” ನಾನೆಂದೆ. ಕನಿಕರದಿಂದ.

“ನನಗೆ ಬೇರೆ ದಾರಿಯೇ ಇರಲಿಲ್ಲ, ಇವರೇ. ಅವನನ್ನು ಉಳಿಸಲು ಹೋಗಿದ್ದರೆ ನನ್ನ ಮೂಗು ಕಳೆದುಕೊಳ್ಳುವುದಷ್ಟೇ ಅಲ್ಲದೆ ಕೆಲಸವನ್ನೂ ಕಳೆದುಕೊಳ್ಳಬೇಕಿತ್ತು!”
ಅಷ್ಟರಲ್ಲಿ ನಾವು ಇಳಿಯಬೇಕಿದ್ದ ಜಾಗಕ್ಕೆ ತಲುಪಿದೆವು. ನಾನು ನನ್ನ ದಾರಿ ಹಿಡಿದೆ. ಪೊಲಿಸ್ ಆಫಿಸರ್ ಅವನ ದಾರಿ ಹಿಡಿದ.

-ಜೆ.ವಿ.ಕಾರ್ಲೊ


ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ನಾನು ಅವನಲ್ಲ!: ಜೆ.ವಿ.ಕಾರ್ಲೊ

Leave a Reply

Your email address will not be published. Required fields are marked *